ಅಂಕಣ

ಎಳ್ಳು ಎಲ್ಲರೂ ಬಳಸಬಹುದಾದ ಆರೋಗ್ಯವರ್ಧಕ

ಸಂಕ್ರಾಂತಿಯ ದಿನ ಎಳ್ಳು ಬೆಲ್ಲವನ್ನು ಹಂಚಿ, ಒಳ್ಳೊಳ್ಳೆಯ ಮಾತನಾಡಿದ್ದೀರಿ. ಇಂದು ಎಳ್ಳು ಮತ್ತು ಬೆಲ್ಲಗಳು ನಮ್ಮ ಆರೋಗ್ಯವನ್ನು ಹೆಚ್ಚಿಸಬಲ್ಲವೇ ಎಂಬುದರ ಬಗ್ಗೆ ಸ್ವಲ್ಪ ಯೋಚಿಸೋಣ. ಎಳ್ಳು ಜಿಡ್ಡಿನ ಅಂಶವನ್ನು ಮತ್ತು ಉಷ್ಣಗುಣವನ್ನು ಹೊಂದಿರುವ ಕಾರಣದಿಂದ ಅತ್ಯಂತ ಶ್ರೇಷ್ಠವಾದ ತೈಲವನ್ನು ನಮಗೆ ಕೊಡುತ್ತದೆ. ಹಾಗಾಗಿಯೇ ಆಯುರ್ವೆದದಲ್ಲಿ ‘ತೈಲಾನಾಂ ತಿಲತೈಲಂ’ ಎಂದು ಹೇಳಿದ್ದಾರೆ. ಅಂದರೆ ಎಣ್ಣೆಗಳಲ್ಲಿ ಎಳ್ಳೆಣ್ಣೆಯು ಅತ್ಯಂತ ಶ್ರೇಷ್ಠವಾದದ್ದು ಎಂದರ್ಥ. ಎಳ್ಳೆಣ್ಣೆ ಬಳಸಿ ಅಡುಗೆಯನ್ನು ತಯಾರಿಸಿದಾಗ ರುಚಿ ಕಡಿಮೆಯಾದರೂ ಆರೋಗ್ಯವನ್ನು ಮಾತ್ರ ಖಂಡಿತ ಹೆಚ್ಚು ಮಾಡುತ್ತದೆ. ಎಳ್ಳನ್ನು ಇನ್ನೂ ಹಲವು ವಿಧಗಳಲ್ಲಿ ಬಳಸಬಹುದು. ಎಳ್ಳುಂಡೆಯ ಮೂಲಕ, ಚಟ್ನಿಯಲ್ಲಿ, ಚಟ್ನಿಪುಡಿಯಲ್ಲಿ, ಫೂ›ಟ್ ಸಲಾಡ್​ಗಳ ಮೇಲೆ ಹೀಗೆ ಹಲವು ವಿಧಗಳಲ್ಲಿ ಇದನ್ನು ನಾವು ಸೇವಿಸಬಹುದು. ಎಳ್ಳನ್ನು ನಿತ್ಯವೂ ಸೇವಿಸಬಹುದು ಎಂದು ಆಯುರ್ವೆದ ಹೇಳುತ್ತದೆ. ಇದರಿಂದ ಕೂದಲಿನ ಆರೋಗ್ಯ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಏಕೆಂದರೆ ಇದು ಮೂಳೆಯನ್ನು ಪೋಷಿಸುತ್ತದೆ. ಹಾಗಾಗಿ ನಮ್ಮ ಸಂಧಿಗಳ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಕ್ಕೆ ದಂತ್ಯ ಎಂದು ಕೂಡ ಕರೆದಿದ್ದಾರೆ. ಅಂದರೆ ಆರೋಗ್ಯಯುತ ಹಲ್ಲು ತಯಾರಾಗಲು ಇದು ಸಹಾಯಕ ಎಂದರ್ಥ. ಹಾಗಾಗಿ ಚಿಕ್ಕ ಮಕ್ಕಳಿಗೆ ಹಲ್ಲು ಬೆಳೆಯುವ ಸಮಯದಲ್ಲಿ ಎಳ್ಳುಂಡೆ ಮಾಡಿ ತಿನ್ನಲು ಕೊಡಬಹುದು. ಅಷ್ಟೇ ಅಲ್ಲದೇ ಇದು ಮಿದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಆಬಾಲವೃದ್ಧರಾದಿಯಾಗಿ ಎಲ್ಲರೂ ಮಾನಸಿಕ ಆರೋಗ್ಯವನ್ನು, ನೆನಪಿನ ಶಕ್ತಿಯನ್ನು, ಒಟ್ಟಾರೆ ಮನೋಬಲವನ್ನು ಹೆಚ್ಚಿಸಿಕೊಳ್ಳಲು ನಿತ್ಯವೂ ಎಳ್ಳನ್ನು ಸೇವಿಸಬೇಕು.

ಎಳ್ಳನ್ನು ನಿಯಮಿತವಾಗಿ ಸೇವಿಸುವುದರಿಂದ ಜಠರಾಗ್ನಿ ಕೂಡ ವರ್ಧಿಸುತ್ತದೆ. ಹಾಗಾಗಿ ಎಷ್ಟೋ ರೋಗಗಳನ್ನು ಬರದಂತೆ ತಡೆಯುವ ಶಕ್ತಿ ಇದಕ್ಕಿದೆ. ಗಾಯಗಳು ಬೇಗ ಗುಣವಾಗುವಂತೆ ಮಾಡುವ ಶಕ್ತಿ ಎಳ್ಳಿಗಿದೆ. ಬೇಕೆಂದರೆ ಇದು ಧಾತುಗಳ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ರಕ್ತ ಸಂಚಾರ ಸಲೀಸಾಗಿ ಆಗುವಂತೆ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಆಧುನಿಕ ವಿಜ್ಞಾನ ಕೂಡ ಸಂಶೋಧನೆಗಳ ಮೂಲಕ ಒಪ್ಪಿಕೊಂಡಿದೆ. ಅಷ್ಟೇ ಅಲ್ಲದೇ ದೇಹದ ಬಲವನ್ನು ಹೆಚ್ಚಿಸುವ, ಚರ್ಮದ ಆರೋಗ್ಯವನ್ನು ವರ್ಧಿಸುವ, ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಗುಣ ಕೂಡ ಎಳ್ಳಿಗೆ ಇದೆ ಎಂದು ಆಯುರ್ವೆದ ಹೇಳುತ್ತದೆ. ಎಳ್ಳುಗಳಲ್ಲಿ ಕರಿಎಳ್ಳು ಹೆಚ್ಚು ಶ್ರೇಷ್ಠವಾದದ್ದು. ಬಿಳಿ ಎಳ್ಳನ್ನೂ ಬಳಸಬಹುದು.

ಸಂಕ್ರಾಂತಿಯ ದಿನ ಎಳ್ಳಿನ ಜೊತೆಗೆ ಬೆಲ್ಲ ಕೂಡ ಬೇಕು. ಆದರೆ ಬೆಲ್ಲವೆಂದರೆ ಸಾವಯವ ಬೆಲ್ಲ ಮಾತ್ರ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುವ ಬಿಳಿ ಅಥವಾ ಹಳದಿ ಬಣ್ಣದ ಬೆಲ್ಲವು ಹಲವು ರೀತಿಯ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಅಂತಹ ಬೆಲ್ಲವನ್ನು ನಾವು ಸೇವಿಸಿದರೆ ಆರೋಗ್ಯದ ಬದಲಿಗೆ ರೋಗವೇ ಬರುತ್ತದೆ. ಈಗ ಉತ್ತಮ ಗುಣಮಟ್ಟದ ನಿಜವಾದ ಸಾವಯವ ಬೆಲ್ಲದ ಗುಣಗಳನ್ನು ತಿಳಿದುಕೊಳ್ಳೋಣ. ಬೆಲ್ಲಕ್ಕೆ ದೇಹದ ಸ್ನಿಗ್ಧತೆಯನ್ನು ಹೆಚ್ಚಿಸುವ, ವಾತ ದೋಷವನ್ನು ಕಡಿಮೆ ಮಾಡುವ, ಧಾತುಗಳ ಬಲವನ್ನು ಹೆಚ್ಚಿಸುವ ಗುಣವಿದೆ ಎಂದು ಹೇಳಲಾಗಿದೆ. ಆದರೆ ಕ್ರಿಮಿಗಳನ್ನು ಹೆಚ್ಚಿಸುವ ಕೆಟ್ಟ ಗುಣವೂ ಇದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಆಯುರ್ವೆದ ಗ್ರಂಥಗಳಲ್ಲಿ ಹಳೆಯ ಬೆಲ್ಲಕ್ಕೆ ಬಹಳ ಮಹತ್ವವನ್ನು ಕೊಟ್ಟಿದ್ದಾರೆ. ಈ ಹಳೆಯ ಬೆಲ್ಲವನ್ನು ಸೇವಿಸುವುದರಿಂದ ಅಗ್ನಿಬಲ ಹೆಚ್ಚಿ, ಸರಿಯಾಗಿ ಮಲವಿಸರ್ಜನೆಯಾಗಿ ಜೀರ್ಣಾಂಗ ವ್ಯೂಹ ಶುದ್ಧವಾಗುತ್ತದೆ ಎಂದು ಹೇಳುತ್ತಾರೆ. ಹೃದಯಕ್ಕೆ ಇದು ಬಲವನ್ನು ಕೊಡುತ್ತದೆ. ಮೂರು ದೋಷಗಳನ್ನು ನಿಯಂತ್ರಿಸುತ್ತದೆ.

ಬೆಲ್ಲದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಗ್ನಿಸಿಯಂ, ಪೊಟಾಶಿಯಂ, ಸೆಲಿನಿಯಂನಂತಹ ಪೋಷಕಾಂಶಗಳು ಹೇರಳವಾಗಿ ಸಿಗುತ್ತವೆ. ಈ ಎಲ್ಲ ಕಾರಣಗಳಿಂದ ನಾವು ಈ ಸಂಕ್ರಾಂತಿಯಿಂದ ಸಕ್ಕರೆಯ ಬದಲಿಗೆ ಸಾವಯವ ಬೆಲ್ಲವನ್ನು ಬಳಸೋಣ. ಎಳ್ಳು, ಬೆಲ್ಲ ಮತ್ತು ವಿವಿಧ ರೀತಿಯ ನಟ್ ಗಳನ್ನು ಬಳಸಿ ಎಳ್ಳುಂಡೆ ಮಾಡಿ ನಾವೆಲ್ಲಾ ಸದಾ ಸವಿಯೋಣ. ಮಧುಮೇಹಿಗಳು ಕೂಡ ತಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡು ಉಳಿದ ಕಾಬೋಹೈಡ್ರೇಟ್ ಆಹಾರಗಳನ್ನು ತ್ಯಜಿಸಿ ಈ ಎಳ್ಳುಂಡೆಯನ್ನು ಸವಿಯಬಹುದು.