1990ರ ದಶಕದಲ್ಲಿ ಚಿಷ್ಟಿ ಕುಟುಂಬದ ಮೂವರು ಸದಸ್ಯರು ಪ್ರಮುಖ ರಾಜಕೀಯ ಪಕ್ಷದಲ್ಲಿ ಗುರುತರ ಸ್ಥಾನಗಳನ್ನು ಗಳಿಸಿದ್ದರು. ಫಾರೂಕ್ ಚಿಷ್ಟಿ ಅಜ್ಮೇರ್ ಜಿಲ್ಲಾ ಯುವ ಅಧ್ಯಕ್ಷನಾಗಿದ್ದ. ನಫೀಸ್ ಚಿಷ್ಟಿ ಅಜ್ಮೇರ್ ಪಕ್ಷದ ಅಧ್ಯಕ್ಷನಾಗಿದ್ದರೆ, ಅನ್ವರ್ ಚಿಷ್ಟಿ ಅದೇ ಪಕ್ಷದ ಕಾರ್ಯದರ್ಶಿಯಾಗಿದ್ದ. ಈ ಮೂವರಲ್ಲಿ ನಫೀಸ್ ಮತ್ತು ಫಾರೂಕ್ ಅಜ್ಮೇರ್ ನಗರದಲ್ಲಿ ಮಿಂಚುತ್ತಿದ್ದ ಜೋಡಿಯಾಗಿದ್ದರು. ಅವರಿಬ್ಬರೂ ಉದ್ದಕೂದಲನ್ನು ಬಿಟ್ಟು, ಫ್ಯಾಷನಬಲ್ ವೇಷಭೂಷಣಗಳು, ಗಾಗಲ್ಸ್ಗಳನ್ನು ಧರಿಸಿ ಒಮ್ಮೆ ತೆರೆದ ಜೀಪಿನಲ್ಲಿ, ಇನ್ನೊಮ್ಮೆ ಹೊಳೆಯುವ ಬೈಕುಗಳಲ್ಲಿ ಊರತುಂಬ ಸುತ್ತುತ್ತಿದ್ದರು. ಹಿಂದಿ ಸಿನಿಮಾ ತಾರೆಯರನ್ನು ಅನುಕರಣೆ ಮಾಡುತ್ತಿದ್ದ ಅವರಿಬ್ಬರೂ ಸಾಮಾನ್ಯವಾಗಿ ಯುವಕ-ಯುವತಿಯರು ಸೇರುತ್ತಿದ್ದ ರೆಸ್ಟೊರೆಂಟುಗಳ ಬಳಿಯೇ ಇರುತ್ತಿದ್ದರು. ತಮ್ಮ ಸಿರಿವಂತಿಕೆ ಹಾಗೂ ಅಧಿಕಾರದ ಕಾರಣ ಅವರಿಗೆ ಲೆಕ್ಕವಿಲ್ಲದಷ್ಟು ಯುವ ಬೆಂಬಲಿಗರಿದ್ದರು.
ಆ ಸಮಯದಲ್ಲಿ ಅಜ್ಮೇರ್ದಲ್ಲಿ ಎರಡು ಪ್ರತಿಷ್ಠಿತ ಹೆಣ್ಣುಮಕ್ಕಳ ಶಾಲೆಗಳಿದ್ದವು- ಸಾವಿತ್ರಿ ಶಾಲೆ ಮತ್ತು ಸೋಫಿಯಾ ಶಾಲೆ. ಈ ಶಾಲೆಯ ವಿದ್ಯಾರ್ಥಿನಿಯರು ತಮ್ಮ ಶಾಲೆಯ ಬಳಿಯಲ್ಲಿರುವ ಎರಡು ಜನಪ್ರಿಯ ಐಸ್ಕ್ರೀಂ ಮತ್ತು ಚಾಟ್ ಅಂಗಡಿಗಳಿಗೆ ಹೋಗಿ ಬರುತ್ತಿದ್ದ ಕಾರಣ ಚಿಸ್ಟಿ ಜೋಡಿ ಹೆಚ್ಚು ಸಮಯ ಅಲ್ಲಿಯೇ ಕಂಡುಬರುತ್ತಿತ್ತು. 1990ರಲ್ಲಿ ಅಜ್ಮೇರದ ಸಾವಿತ್ರಿ ಶಾಲೆಯಲ್ಲಿ್ಲ ಗೀತಾ (ಹೆಸರು ಬದಲಾಯಿಸಿದೆ) ಎನ್ನುವ ವಿದ್ಯಾರ್ಥಿನಿ 12ನೆಯ ತರಗತಿಯಲ್ಲಿ ಕಲಿಯುತ್ತಿದ್ದಳು. ಮಧ್ಯಮವರ್ಗದ ಕುಟುಂಬದಿಂದ ಬಂದಿದ್ದ ಆಕೆಗೆ ಪ್ರಮುಖ ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳಬೇಕೆಂಬ ಬಯಕೆ ತೀವ್ರವಾಗಿತ್ತು. ಅದೇ ವರ್ಷದ ಮಾರ್ಚ್ ತಿಂಗಳಲ್ಲಿ ಆಕೆ ತನಗೆ ಪರಿಚಯವಿರುವ ಅಜಯ್ ಎಂಬಾತನಿಗೆ ಸಹಾಯ ಮಾಡಲು ಕೋರಿದಳು. ಪಕ್ಷದ ನಾಯಕರಾದ ಚಿಷ್ಟಿ ಕುಟುಂಬದ ನಫೀಜ್ ಮತ್ತು ಫಾರೂಕ್ ತನಗೆ ಪರಿಚಿತರಿದ್ದಾರೆಂದು ಹೇಳಿದ ಅಜಯ್, ಅವರೊಡನೆ ಮಾತನಾಡುವೆನೆಂದು ಗೀತಾಳಿಗೆ ತಿಳಿಸಿದ.
ಕೆಲ ದಿನಗಳ ನಂತರ ಆತ ಗೀತಾಳನ್ನು ಚಿಷ್ಟಿ ಕುಟುಂಬದ ಇನ್ನೊಬ್ಬ ಸದಸ್ಯ ಸೈಯದ್ ಚಿಷ್ಟಿ ಬಳಿಗೆ ಕರೆದೊಯ್ದ. ಆತ ಅವಳಿಗೆ ಒಂದು ಅರ್ಜಿ ಫಾರಂ ಕೊಟ್ಟು ಅದನ್ನು ತುಂಬಿ ತನ್ನ ಪಾಸ್ಪೋರ್ಟ್ ಸೈಜಿನ ಫೋಟೋ ಲಗತ್ತಿಸಿ ತನಗೆ ಮರಳಿಸಲು ಸೂಚಿಸಿದ. ಅವನು ಹೇಳಿದಂತೆ ಗೀತಾ ಮಾಡಿದಳು. ಕೆಲ ದಿನಗಳ ನಂತರ ಸೈಯದ್ ಅವಳಿಗೆ ಫಾರೂಕ್ನನ್ನು ಪರಿಚಯಿಸಿ, ‘ನಿನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವವನು ಈತನೇ’ ಎಂದ. ‘ನಿನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವೆ’ ಎಂದು ಫಾರೂಕ್ ತಿಳಿಸಿದ. ಮಾರನೆಯ ದಿನದಿಂದಲೇ ಶಾಲೆಬಿಟ್ಟನಂತರ ಗೀತಾಳನ್ನು ಫಾರೂಕ್ ಭೇಟಿ ಮಾಡಲಾರಂಭಿಸಿದ. ಪ್ರತಿದಿನವೂ ಅವಳನ್ನು ಐಸ್ಕ್ರೀಂ ಪಾರ್ಲರ್ಗೆ ಕರೆದೊಯ್ದು ಅವಳ ಜತೆ ಕಾಲ ಕಳೆಯಲಾರಂಭಿಸಿದ. ಒಂದು ಸಂಜೆ ಗೀತಾ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಜೀಪಿನಲ್ಲಿ ಹೋಗುತ್ತಿದ್ದ ಫಾರೂಕ್ ಅವಳನ್ನು ನೋಡಿ ವಾಹನವನ್ನು ನಿಲ್ಲಿಸಿ ಅವಳನ್ನು ಮನೆಗೆ ಬಿಡುವುದಾಗಿ ಹೇಳಿದ. ಒಪ್ಪಿದ ಗೀತಾ ಜೀಪ್ ಹತ್ತಿದಳು. ಜೀಪಿನಲ್ಲಿ ನಫೀಸ್ ಸಹಾ ಕುಳಿತಿದ್ದ. ಸ್ವಲ್ಪ ಸಮಯದ ನಂತರ ಆ ಜೀಪು ಅವಳ ಮನೆಯತ್ತ ಹೋಗದೆ ಬೇರೆ ಕಡೆ ಹೊರಟಾಗ ಗಾಬರಿಯಾದ ಗೀತಾ, ‘ನಮ್ಮ ಮನೆ ಈ ದಾರಿಯಲ್ಲಿಲ್ಲ’ ಎಂದಳು. ‘ಭಯಪಡಬೇಡ, ಪಕ್ಷದ ಹಿರಿಯ ಮುಖಂಡರೊಬ್ಬರು ಜೈಪುರದಿಂದ ಇಲ್ಲಿಗೆ ಬಂದಿದ್ದಾರೆ, ನಾವು ನಿನ್ನನ್ನು ಅವರಿಗೆ ಭೇಟಿ ಮಾಡಿಸುತ್ತೇವೆ’ ಎಂದ ಫಾರೂಕ್, ಅವಳನ್ನು ಅಜ್ಮೇರ್ ನಗರದ ಹೊರವಲಯದಲ್ಲಿರುವ ತನ್ನ ತೋಟದ ಮನೆಗೆ ಕರೆದುಕೊಂಡು ಹೋದ. ತೋಟದ ಮನೆಯಲ್ಲಿ ಅವಳನ್ನು ಬಲವಂತದಿಂದ ವಿವಸ್ತ್ರಳನ್ನಾಗಿ ಮಾಡಿದ ಫಾರೂಕ್ ಮತ್ತು ನಫೀಸ್ ಒಬ್ಬರ ನಂತರ ಒಬ್ಬರಾಗಿ ಅವಳ ಮೇಲೆ ಅತ್ಯಾಚಾರ ಮಾಡಿದರು. ಅತ್ಯಾಚಾರದ ಫೋಟೋಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು. ‘ನೀನೇನಾದರೂ ಈ ವಿಷಯವನ್ನು ಬಾಯಿ ಬಿಟ್ಟರೆ ನಿನ್ನನ್ನು ಕೊಲೆ ಮಾಡುತ್ತೇವೆ’ ಎಂದು ಹೆದರಿಸಿ ಅವಳನ್ನು ಮನೆಗೆ ಕಳಿಸಿದರು. ಗೀತಾ ಈ ವಿಷಯವನ್ನು ಯಾರಿಗೂ ತಿಳಿಸಲಿಲ್ಲ.
ಮುಂದಿನ ವಾರವೂ ಫಾರೂಕ್ ಅವಳನ್ನು ಅದೇ ಫಾರಂ ಹೌಸ್ಗೆ ಕರೆದುಕೊಂಡು ಹೋದ. ಗೀತಾಳ ನಗ್ನದೇಹದ ಮತ್ತವಳ ಮೇಲೆ ತಾನು ಅತ್ಯಾಚಾರವೆಸಗುತ್ತಿರುವ ಫೋಟೋಗಳನ್ನು ಅವಳಿಗೆ ತೋರಿಸಿ ಅವನ್ನು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸುವುದಾಗಿ ಬೆದರಿಸಿ ಮತ್ತೆ ಅತ್ಯಾಚಾರ ಮಾಡಿದ. ಗೀತಾಳನ್ನು ನಾಲ್ಕೆ ೖದು ಬಾರಿ ಅತ್ಯಾಚಾರ ಮಾಡಿದ ನಂತರ ಫಾರೂಕ್ ಮತ್ತು ನಫೀಸ್ ‘ಏನಾದರೊಂದು ಸಬೂಬನ್ನು ಹೇಳಿ ನೀನು ನಿನ್ನ ಸ್ನೇಹಿತೆಯರನ್ನು ಇಲ್ಲಿಗೆ ಕರೆದುಕೊಂಡು ಬರಬೇಕು. ಇಲ್ಲದಿದ್ದರೆ ನಿನ್ನ ಫೋಟೋಗಳು ಬೆಳಕಿಗೆ ಬರುತ್ತವೆ’ ಎಂದರು. ಹೆದರಿದ ಗೀತಾ ಮುಂದಿನ ವಾರ ತನ್ನ ಸ್ನೇಹಿತೆಯೊಬ್ಬಳನ್ನು ಪುಸಲಾಯಿಸಿ ಅವಳನ್ನು ಫಾರಂಹೌಸ್ಗೆ ಕರೆದುಕೊಂಡು ಬಂದಳು. ಅವಳನ್ನೂ ಅತ್ಯಾಚಾರಕ್ಕೊಳಪಡಿಸಿದ ಆರೋಪಿಗಳು ಅವಳ ನಗ್ನ ಫೋಟೋಗಳನ್ನು ತೆಗೆದುಕೊಂಡರು.
ಮುಂದೆ ಇದೇ ತಂತ್ರವನ್ನು ಉಪಯೋಗಿಸಿ ಒಬ್ಬ ಸಂತ್ರಸ್ತೆಯ ಮೂಲಕ ಇನ್ನೊಬ್ಬ ಯುವತಿಯನ್ನು ಕರೆಸಿಕೊಂಡು ಅವಳ ಮೇಲೆಯೂ ಬಲಾತ್ಕಾರ ಮಾಡಿದರು. ಆರಂಭದಲ್ಲಿ ಫಾರೂಕ್ ಮತ್ತು ನಫೀಜ್ ಇವರಿಬ್ಬರೇ ಅತ್ಯಾಚಾರವನ್ನು ಮಾಡುತ್ತಿದ್ದರೂ ಕಾಲಕ್ರಮೇಣ ಅವರು ತಮ್ಮ ಸ್ನೇಹಿತರನ್ನೂ ಈ ಸೆಕ್ಸ್ ಪಾರ್ಟಿಗೆ ಕರೆಯತೊಡಗಿದರು. ಹೀಗಾಗಿ ಸುಮಾರು 20 ಜನರು ಇದೇ ಫಾರಂಹೌಸ್ನಲ್ಲಿ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡಿದರು. ಫಾರೂಕ್ ಮತ್ತು ನಫೀಸ್ ಇವರಿಬ್ಬರೂ ಪ್ರಬಲ ಹಾಗೂ ಪ್ರಭಾವಿ ಚಿಷ್ಟಿ ಕುಟುಂಬದವರಾಗಿದ್ದರಿಂದ ಎಲ್ಲ ಸಂತ್ರಸ್ತೆಯರು ಅವರ ವಿರುದ್ಧ ದೂರಲು ಹೆದರಿದ್ದರು. ಹೀಗಾಗಿ ತಿಂಗಳುಗಳು ಕಳೆದರೂ ಈ ಪ್ರಕರಣ ಬೆಳಕಿಗೇ ಬರಲಿಲ್ಲ.
ಆದರೆ ಒಂದು ದಿನ ಧೈರ್ಯ ತಂದುಕೊಂಡ ಗೀತಾ ತನ್ನ ಗೆಳತಿ ಕೃಷ್ಣಾ (ನಿಜ ಹೆಸರಲ್ಲ) ಜತೆಗೆ ತನಗೆ ಪರಿಚಯವಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬನನ್ನು ಭೇಟಿ ಮಾಡಿ ನಡೆದ ವಿಷಯವನ್ನು ತಿಳಿಸಿದಳು. ಆತ ಅವಳನ್ನು ಸಿ.ಐ.ಡಿಯ ಎ.ಎಸ್.ಐ ಒಬ್ಬನ ಬಳಿ ಕರೆದೊಯ್ದ. ಆ ಅಧಿಕಾರಿ ಆರೋಪಿಗಳು ಸೆರೆಹಿಡಿದಿದ್ದ ಫೋಟೋಗಳನ್ನು ಹಾಗೂ ಹೀಗೂ ಮಾಡಿ ಅವರಿಗೆ ತಂದುಕೊಡುವುದಾಗಿ ತಿಳಿಸಿದ. ಮಾರನೆಯ ದಿನವೇ ಆರೋಪಿಗಳಲ್ಲೊಬ್ಬನಾದ ಮೊಯಿನುಲ್ಲ ಇಬ್ಬರೂ ಗೆಳತಿಯರನ್ನು ಭೇಟಿ ಮಾಡಿ, ‘ಪೊಲೀಸರಿಗೆ ತಿಳಿಸುವಷ್ಟು ಧೈರ್ಯ ನಿಮಗೆ ಬಂದಿತೇ? ನಿಮ್ಮಿಬ್ಬರನ್ನೂ ಕೊಂದುಬಿಡುತ್ತೇವೆ, ಹುಷಾರ್’ ಎಂದು ಬೆದರಿಸಿದ. ಆಗ ಪೊಲೀಸರೂ ಆರೋಪಿಗಳೊಡನೆ ಶಾಮೀಲಾಗಿದ್ದಾರೆಂದು ಗೀತಾಗೆ ಖಾತ್ರಿಯಾಯಿತು. ಅವಳು ತನ್ನ ಬಾಯಿಗೆ ಬೀಗ ಹಾಕಿಕೊಂಡಳು. ಫಾರೂಕ್ ಚಿಷ್ಟಿ ಮತ್ತವನ ಗೆಳೆಯರು ಇತರ ಯುವತಿಯರ ಮೇಲೆ ಅತ್ಯಾಚಾರಗಳನ್ನು ನಿರ್ಭೀತಿಯಿಂದ ಮುಂದುವರಿಸಿದರು.
ಹಲಸಿನ ಹಣ್ಣು ಮಾಗಿದಾಗ ಬಚ್ಚಿಡಲು ಹೇಗೆಬರುವುದಿಲ್ಲವೋ ಸತ್ಯವೂ ಅಂತೆಯೇ. ಯಾವ ಫೋಟೋ ಲ್ಯಾಬ್ನಲ್ಲಿ ಅತ್ಯಾಚಾರದ ಚಿತ್ರಗಳ ನೆಗೆಟಿವ್ಗಳನ್ನು ಆರೋಪಿಗಳು ಡೆವಲೆಪ್ ಮಾಡಿಸುತ್ತಿದ್ದರೋ, ಆ ಲ್ಯಾಬ್ನ ಕಾರ್ವಿುಕನೊಬ್ಬ 1991ರ ಅಂತ್ಯದಲ್ಲಿ ಒಂದು ಫೋಟೋವನ್ನು ಅಪಹರಿಸಿ ಅದನ್ನು ತನ್ನ ಮಿತ್ರನೊಬ್ಬನಿಗೆ ಕೊಟ್ಟ. ಆ ವ್ಯಕ್ತಿ ಅದನ್ನು ಸ್ಥಳೀಯ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನೊಬ್ಬನಿಗೂ ಮತ್ತು ತನಗೆ ಪರಿಚಯವಿದ್ದ ‘ದೈನಿಕ ನವಜ್ಯೋತಿ’ ಪತ್ರಿಕೆಯ ವರದಿಗಾರನಿಗೂ ಕೊಟ್ಟ. ವಿ.ಎಚ್.ಪಿ ಕಾರ್ಯಕರ್ತರು ಈ ಮಾಹಿತಿಯನ್ನು ಸ್ಥಳೀಯ ಪೊಲೀಸರಿಗೆ ಕೊಟ್ಟರು. ಆದರೆ ಆರೋಪಿಗಳ ವಿರುದ್ಧ ಯಾವ ಕ್ರಮವೂ ಜರುಗಲಿಲ್ಲ. ಆದರೆ ಅಜ್ಮೇರನಲ್ಲಿ ಈ ಬಗ್ಗೆ ಗುಸುಗುಸು ಆರಂಭವಾಯಿತು.
1992ರ ಏಪ್ರಿಲ್ 21ರಂದು ‘ದೈನಿಕ ನವಜ್ಯೋತಿ’ ಪತ್ರಿಕೆ ಈ ಬಗ್ಗೆ ವರದಿ ಪ್ರಕಟಿಸಿತು. ಆದರೆ ಆ ವರದಿ ಹೆಚ್ಚಿನ ಪರಿಣಾಮವನ್ನೇನೂ ಉಂಟುಮಾಡಲಿಲ್ಲ. ಮುಂದೆ ಮೇ 15 ರಂದು ಅದೇ ಪತ್ರಿಕೆ ಸಂತ್ರಸ್ತೆಯರ ಮಸುಕು ಮಾಡಿದ ಛಾಯಾಚಿತ್ರಗಳ ಸಮೇತ ಈ ಗ್ಯಾಂಗ್ರೇಪ್ಗಳ ಎರಡನೆಯ ವರದಿಯನ್ನು ಪ್ರಕಟಿಸಿತು. ಅದನ್ನು ಓದಿದ ಅಜ್ಮೇರ್ ನಾಗರಿಕರು ಗಾಬರಿಗೊಂಡರಲ್ಲದೆ ಕ್ರೋಧದಿಂದ ಕುದ್ದುಹೋದರು. ಮೇ 18ರಿಂದ ಮೂರು ದಿನಗಳ ಕಾಲ ಇಡೀ ಅಜ್ಮೇರ್ ನಗರದಲ್ಲಿ ಬಂದ್ ಆಚರಿಸಿದರು. ಸಂತ್ರಸ್ತೆಯರೆಲ್ಲರೂ ಹಿಂದೂಗಳಾಗಿದ್ದು ಬಹುತೇಕ ಆರೋಪಿತರು ಇಸ್ಲಾಂ ಧರ್ವಿುಯರಾಗಿದ್ದ ಕಾರಣ ರಾಜ್ಯದಲ್ಲಿ ಕೋಮು ಗಲಭೆಯಾಗಬಹುದೆಂದು ಆತಂಕಕ್ಕೀಡಾದ ರಾಜಸ್ಥಾನ ಸರ್ಕಾರವು ಕೂಡಲೇ ಪ್ರಕರಣದ ತನಿಖೆಗೆ ಆದೇಶಿಸಿತು.
ಈ ಆದೇಶದಂತೆ 1992ರ ಮೇ 30ರಂದು ಅಜ್ಮೇರದ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಮೊದಲ ಎಫ್ಐಆರ್ ದಾಖಲಾಯಿತು. ಆಶ್ಚರ್ಯವೆಂದರೆ ಇದರಲ್ಲಿ ಫಾರೂಕ್ ಮತ್ತು ನಫೀಸ್ ಇವರಿಬ್ಬರ ಹೆಸರುಗಳೇ ಇರಲಿಲ್ಲ. ಪ್ರಕರಣವನ್ನು ಮುಂದಿನ ತನಿಖೆಗೆ ರಾಜ್ಯ ಸಿಐಡಿಗೆ ವರ್ಗಾವಣೆ ಮಾಡಲಾಯಿತು. ಎನ್.ಕೆ. ಪತ್ನೆ ಎನ್ನುವ ಎಸ್.ಪಿ ದರ್ಜೆಯ ಅಧಿಕಾರಿ ತನಿಖೆಯ ನೇತೃತ್ವ ವಹಿಸಿಕೊಂಡು ಅಜ್ಮೇರಕ್ಕೆ ಬಂದರು. ಫೋಟೋ ಲ್ಯಾಬೊರೇಟರಿಗೆ ಹೋಗಿ 30 ಸಂತ್ರಸ್ತೆಯರ ಚಿತ್ರಗಳನ್ನು ಸಂಗ್ರಹಿಸಿದರು. ಅವರನ್ನೆಲ್ಲ ಗುರುತಿಸುವುದು ಕಷ್ಟಕರವಾದ ಕೆಲಸವಾಗಿದ್ದರೂ ಎಲ್ಲರ ಗುರುತುಗಳೂ ಪತ್ತೆಯಾದವು.
(ಮುಂದುವರಿಯುವುದು)
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)