‘ಹಾಂ, ಒಂದು ಸೆಲ್ಪೀ ತೆಗೆದುಕೊಳ್ಳೋಣವೇ...?’ ಸಾಧಾರಣವಾಗಿ ಎಲ್ಲ ವಯೋಮಾನದವರಿಂದಲೂ ಕೇಳಿಬರುವಂತಹ ಮಾತಿದು. ಮೀಟಿಂಗ್ ಇರಲಿ, ಮದುವೆ ಸಮಾರಂಭಗಳಿರಲಿ, ಹಬ್ಬಗಳ ಸಂದರ್ಭಗಳಲ್ಲಿ ನೆಂಟರಿಷ್ಟರು ಅಥವಾ ಸ್ನೇಹಿತರು ಜೊತೆಯಾಗುವ ಸಂದರ್ಭಗಳಿರಲಿ, ಎಲ್ಲ ಕಡೆಗಳಲ್ಲೂ ಸೆಲ್ಪೀಗೆ ಡಿಮಾಂಡ್ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ತಮ್ಮ ಅಮೂಲ್ಯ ಕ್ಷಣಗಳನ್ನು ಸೆರೆಹಿಡಿಯಲು ಉತ್ಸುಕರಾಗಿರುತ್ತಾರೆ. ಈ ಕಾತರ ಸಹಜವೇ! ಮೊಬೈಲ್ ಫೋನ್ಗಳಲ್ಲಿ ಬೇಕಾದಷ್ಟು ಫೋಟೋಗಳನ್ನು ಸೆರೆಹಿಡಿಯಬಹುದು, ಬೇಡವಾದದ್ದನ್ನು ಡಿಲೀಟ್ ಮಾಡಿಬಿಡಬಹುದು. ಈ ಅನುಕೂಲ ಇರುವುದರಿಂದಲೇ ಅಗತ್ಯ ಇರಲಿ ಇಲ್ಲದಿರಲಿ, ಸಾಕಷ್ಟು ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಇದರ ಹಿಂದೆ ಕೇವಲ ನೆನಪುಗಳನ್ನು ಸೆರೆಹಿಡಿಯುವ ಉದ್ದೇಶವಷ್ಟೇ ಅಲ್ಲ, ಅವುಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವ ಇಚ್ಛೆ ಇರುತ್ತದೆ. ನಮ್ಮ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಕು ಎಂಬ ಹಂಬಲ ಎಲ್ಲಿಂದ ಶುರುವಾಯ್ತು ಮತ್ತು ಅದು ಈಗ ಹೇಗೆ ಒಂದು ಪಿಡುಗಾಗಿ ಪರಿಣಮಿಸಿದೆ ಎಂಬುದನ್ನು ಅರ್ಥೈಸಿಕೊಳ್ಳೋಣ.
ಸೆಲ್ಪೀ ತೆಗೆದುಕೊಳ್ಳುವಾಗ, ರೀಲ್ಸ್ ಮಾಡುವಾಗ ದುರ್ಘಟನೆ ಸಂಭವಿಸಿ, ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅಪಾಯ ಲೆಕ್ಕಿಸದೇ ಸಾವನ್ನು ಆಹ್ವಾನಿಸಿಕೊಳ್ಳುತ್ತಿರುವವರಲ್ಲಿ ಯುವಕ- ಯುವತಿಯರೇ ಜಾಸ್ತಿ ಇರುವುದು ನಿಜಕ್ಕೂ ದುರಂತ. ಬದುಕಿನ ಕ್ಷಣಗಳನ್ನು ಸುಮ್ಮನೆ ಆನಂದಿಸುವುದನ್ನು ಬಿಟ್ಟು, ಅದನ್ನು ಮೊಬೈಲ್ ಫೋನಿನ ಕ್ಯಾಮರಾದಲ್ಲಿ ಸೆರೆಹಿಡಿಯಲು ಹಾತೊರೆಯುವವರು ಬದುಕನ್ನೇ ಮರೆಯುತ್ತಿದ್ದಾರೆಯೇ? ಏನಾಗ್ತಿದೆ ನಮ್ಮ ಯುವ ಮನಸ್ಸುಗಳಿಗೆ?
ಮೊದಲು ಸ್ವಂತ ಫೋಟೋಗಳು ಬೇಕಾದವರು ಕ್ಯಾಮೆರಾಗಳನ್ನು ಉಲ್ಟಾ ಹಿಡಿದು ಛಾಯಾಚಿತ್ರಗಳನ್ನು ತೆಗೆದುಕೊಳ್ಳುವಂತಹ ಸಮಯವೊಂದಿತ್ತು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅಂತಹ ಪ್ರಯತ್ನಗಳು ನಿಶ್ಚಿತ ಯಶಸ್ಸನ್ನು ಪಡೆಯುತ್ತಿರಲಿಲ್ಲ. 2009ರ ಸುಮಾರಿಗೆ ಒಂದಷ್ಟು ಬೆಳವಣಿಗೆಗಳು ಕಂಡುಬಂದವು.
1. ಸ್ಮಾರ್ಟ್ಫೋನ್ ಹೆಚ್ಚು ಪ್ರಚಲಿತವಾಗತೊಡಗಿದವು. ಅವುಗಳಲ್ಲಿ ಸೆಲ್ಪೀ ಕ್ಯಾಮೆರಾಗಳು ಬರತೊಡಗಿದುವು.
2. ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂ, ಸ್ನಾಪ್ಚಾಟ್ ಹೀಗೆ ಸಾಲು ಸಾಲಾಗಿ ವಿವಿಧ ರೀತಿಯ ಸಾಮಾಜಿಕ ಜಾಲತಾಣಗಳು ಆರಂಭವಾದುವು. ಇವೆಲ್ಲವುಗಳಲ್ಲೂ ಪ್ರಮುಖವಾಗಿ ಫೋಟೋಗಳೇ ಮೂಲ ಸಂವಹನದ ಮಾಧ್ಯಮಗಳಾಗಿದ್ದುವು.
3. ಈ ಎಲ್ಲ ಸಾಮಾಜಿಕ ಜಾಲತಾಣಗಳನ್ನು ಆರಂಭದಲ್ಲಿ ಚಿತ್ರತಾರೆಯರು ಮತ್ತು ಇತರ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳ ಜೊತೆಗೆ ಸಂವಹನ ನಡೆಸಲು ಬಳಸಿಕೊಂಡರು. ಮಾತ್ರವಲ್ಲ, ತಮ್ಮ ಜೀವನವನ್ನು ಅಭಿಮಾನಿಗಳಿಗೆ ಪರಿಚಯಿಸಲು ಅನೇಕ ಫೋಟೋಗಳನ್ನು ಕ್ಲಿಕ್ಕಿಸಿ ಹಂಚಿಕೊಳ್ಳತೊಡಗಿದರು.
4. ಈ ಆಧುನಿಕತೆಯ ಬೆಳವಣಿಗೆಗಳು ಜನರ ಸಾಮಾಜಿಕ ಮತ್ತು ಮಾನಸಿಕ ಜೀವನದ ಮೇಲೆ ಬಹುದೊಡ್ಡ ಪರಿಣಾಮ ಬೀರಿದವು.
ಸಾಮಾನ್ಯ ಜನರಿಗೆ ಅಂತರ್ಜಾಲದ ಲಭ್ಯತೆ ಜಾಸ್ತಿ ಆದ ಹಾಗೆಯೇ, ಸಾಮಾಜಿಕ ಜಾಲತಾಣಗಳಲ್ಲಿನ ಚಟುವಟಿಕೆಗಳೂ ಜಾಸ್ತಿ ಆದವು. ಮಾತ್ರವಲ್ಲ, ತಮ್ಮನ್ನೂ ಸೆಲೆಬ್ರಿಟಿಗಳ ಜೊತೆ ಸಮೀಕರಿಸಿಕೊಳ್ಳಲು ಆರಂಭಿಸಿದರು. ಅವರ ಜೀವನಶೈಲಿಯನ್ನು ಅನುಕರಿಸಲು ಶುರು ಮಾಡಿದರು. ಇದನ್ನು ಸಂಸ್ಕೃತೀಕರಣ, ಆಧುನೀಕರಣದ ಹಾಗೆ ಸೆಲೆಬ್ರಿಟೀಕರಣ ಅಂತ ಕರೆಯಬಹುದೋ ಏನೋ! ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಆರಂಭದಲ್ಲೇ ತೊಡಗಿಸಿಕೊಂಡು ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡ ಒಂದಷ್ಟು ಜನ, ಸಮಾಜದಲ್ಲಿ ಪರಿಚಿತ ವ್ಯಕ್ತಿಗಳಾದರು. ನಿಧಾನವಾಗಿ ಅವರನ್ನೂ ಜನರು ಬಾಹ್ಯ ಪ್ರಪಂಚದಲ್ಲಿ ಭೇಟಿ ಮಾಡಿದಾಗ ಸೆಲೆಬ್ರಿಟಿಗಳಂತೆಯೇ ನೋಡುವುದಕ್ಕೆ ಆರಂಭಿಸಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಆವಾಗಲೇ ಕೈಯಾಡಿಸಿದ್ದ ಯುವ ಮನಸ್ಸುಗಳಿಗೆ ಒಂದು ಉತ್ತಮ ಅವಕಾಶವಾಗಿ ಕಾಣಿಸತೊಡಗಿತು. ಆಮೇಲೆ ಶುರುವಾಯ್ತು ಸೆಲ್ಪೀ ಹುಚ್ಚು!
ಮನಃಶ್ಶಾಸ್ತ್ರಜ್ಞನಾಗಿ ಹುಚ್ಚು ಅನ್ನುವ ಪದವನ್ನು ಬಳಸುವಾಗ ಹೆಚ್ಚು ಜಾಗ್ರತೆ ಇರಬೇಕಾಗುತ್ತದೆ. ಇಲ್ಲಿ ಹುಚ್ಚು ಅನ್ನುವ ಶಬ್ದ ಹುಚ್ಚುತನ ಅಥವಾ ಉನ್ಮಾದತೆಯ ಪರಿಭಾಷೆಗಷ್ಟೇ ಸೀಮಿತ. ಮುಂಚೆ ಗೌಪ್ಯವಾಗಿರುತ್ತಿದ್ದ ಅಥವಾ ತಮ್ಮ ಅತ್ಯಂತ ಆತ್ಮೀಯರಿಗಷ್ಟೇ ಗೊತ್ತಿರುತ್ತಿದ್ದ ವಿಚಾರಗಳನ್ನು ಬಹಿರಂಗವಾಗಿ ಪ್ರಚುರಪಡಿಸುವ ಅಭ್ಯಾಸ ಅನೇಕರಲ್ಲಿ ಕಾಣಿಸಿಕೊಂಡಿತು. ಜೀವನದಲ್ಲಿ ತೋರ್ಪಡಿಕೆಯ ಆಸಕ್ತಿ ಹೆಚ್ಚತೊಡಗಿತು. ಜನರು ಹೆಚ್ಚಿನ ಸಮಯವನ್ನು ವರ್ಚುವಲ್ ಪ್ರಪಂಚದಲ್ಲೇ ಕಳೆಯತೊಡಗಿದರು. ಪಕ್ಕದಲ್ಲಿರುವ ಮನೆ ಮಂದಿಯ ಜತೆ ತಮ್ಮ ಭಾವನೆಗಳನ್ನಾಗಲೀ ಅಥವಾ ಸುಖದುಃಖಗಳನ್ನಾಗಲೀ ಹಂಚಿಕೊಳ್ಳುವ ಬದಲು, ಮೊಬೈಲ್ ಫೋನಿನ ಜಗತ್ತಿನಲ್ಲಿ ಕಳೆದು ಹೋಗತೊಡಗಿದರು. ಜೊತೆಗೆ, ಅಂತರ್ಯದ ಪ್ರಪಂಚದಿಂದ ವಿಮುಖರಾಗಿ ಬಾಹ್ಯಪ್ರಪಂಚದ ಪ್ರಾಪಂಚಿಕ ಸುಖ, ಮನ್ನಣೆ ಮುಂತಾದ ಕಡೆಗಳಿಗೇ ಜನ ವಾಲತೊಡಗಿದರು. ಹಾಗಾಗಿಯೇ ನಾವು ಯಾವುದೋ ಒಂದು ಹೊಸ ಜಾಗಕ್ಕೆ ಹೋದಾಗ ಅಲ್ಲಿ ಏನಿದೆ ಮತ್ತು ಅಲ್ಲಿನ ಅನುಭವವೇನು ಎಂಬುದನ್ನು ಅನುಭವಿಸುವ ಬದಲು, ಕ್ಯಾಮೆರಾದಲ್ಲಿ ಏನೇನೆಲ್ಲಾ ಸೆರೆಹಿಡಿಯಬಹುದು ಎಂಬುದನ್ನೇ ಗಮನಿಸುತ್ತಿರುತ್ತೇವೆ.
ಇತ್ತೀಚೆಗೆ ಮುಂಬೈ ಮೂಲದ ಒಬ್ಬ ಉದ್ಯಮಿಯನ್ನು ಭೇಟಿ ಮಾಡಿದಾಗ, ಅವರು ‘ನಾನು ಯಾವುದೇ ಫೋಟೋಕ್ಕೆ ನಿಲ್ಲುವುದಿಲ್ಲ’ ಎಂದರು. ಕಾರಣವೇನೆಂದು ಕೇಳಿದಾಗ ಅವರ ಉತ್ತರ ಮಾರ್ವಿುಕವಾಗಿತ್ತು. ‘ನನ್ನ ಜೀವನ ಮುಗಿದ ಮೇಲೆ ಯಾರೂ ನನ್ನ ಫೋಟೋ ಇಟ್ಟು ದಾಖಲಿಸಿಡುವ ಅಗತ್ಯವಿಲ್ಲ. ನಾನು ಜೀವಂತವಾಗಿರುವಾಗಲೇ ಎಷ್ಟು ಅನುಭವ ಪಡೆಯಬಹುದೋ ಮತ್ತು ಸಂಪೂರ್ಣ ರೀತಿಯಲ್ಲಿ ಅನುಭವಿಸಬಹುದೋ ಅಷ್ಟನ್ನು ಪರಿಪೂರ್ಣವಾಗಿ ಮಾಡುತ್ತೇನೆ. ಅವುಗಳ ಫೋಟೋ ತೆಗೆದು ಏನು ಮಾಡಲಿ? ಎಷ್ಟೋ ಬಾರಿ ಹಾಗೆ ತೆಗೆದ ಫೋಟೋಗಳು ಫೋನಿನಲ್ಲೋ, ಲ್ಯಾಪ್ಟಾಪ್ನಲ್ಲೋ ರದ್ದಿ ಥರ ಬಿದ್ದಿರುತ್ತವೆ. ಅವುಗಳನ್ನು ಎಷ್ಟು ಬಾರಿ ಮತ್ತೆ ವೀಕ್ಷಿಸುತ್ತೀರಿ?’ ಅವರು ಹೇಳಿದ ಮಾತು ಸತ್ಯವೆನಿಸಿತು.
ಈ ರೀತಿಯ ಮನಸ್ಥಿತಿ ನಮ್ಮೆಲ್ಲರಲ್ಲೂ ಬರುವುದು ಕಷ್ಟವಾದರೂ, ಅವರ ಮಾತಿನ ಮರ್ಮ ಅರಿತು ನಾವು ತೆಗೆಯುವ ಚಿತ್ರಗಳ ಸಂಖ್ಯೆಯನ್ನು ಮತ್ತು ಅವುಗಳನ್ನು ತೆಗೆದುಕೊಳ್ಳುವ ವೇಳೆ ಉಂಟಾಗುವ ಅಪಾಯಗಳನ್ನು ಕಡಿಮೆ ಮಾಡಬಹುದು. ಅಲ್ಲವೇ? 2011ರಲ್ಲೇ ಅಮೆರಿಕದಲ್ಲಿ ಸೆಲ್ಪೀಗಳಿಂದಾದ ಅವಘಡಗಳ ದಾಖಲೆಗಳಿವೆ. ಮಾತ್ರವಲ್ಲ 2017ರಲ್ಲೇ ಅನೇಕ ಸಮಾಜಶಾಸ್ತ್ರೀಯ ಮತ್ತು ಮನಶ್ಶಾಸ್ತ್ರೀಯ ಸಂಶೋಧಕರು ಸೆಲ್ಪೀ ಬದಲಿಗೆ ಕಿಲ್ಪೀ ಅಂತ ಕರೆಯಲು ಆರಂಭಿಸಿದರು. ಅನೇಕ ಮಂದಿ ಸೆಲ್ಪೀ ತೆಗೆಯುವ ಹುಚ್ಚಿನಲ್ಲಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳಲು ಆರಂಭಿಸಿದರು. ಬಹುಶಃ 8 ವರ್ಷಗಳ ಹಿಂದೆ ಆರಂಭವಾದ ಚರ್ಚೆ ಈಗ ಹೆಚ್ಚು ಬೆಳಕಿಗೆ ಬರುತ್ತಿದೆ. ಮಾತ್ರವಲ್ಲ ಇತ್ತೀಚಿನ ಸಮೀಕ್ಷೆ ಪ್ರಕಾರ ಸೆಲ್ಪೀಗಳ ಕಾರಣದಿಂದ ಭಾರತದಲ್ಲೇ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿವೆ ಎಂಬುದೂ ಚಿಂತಾಜನಕ ಸ್ಥಿತಿಯನ್ನು ಉಂಟುಮಾಡಿದೆ.
ಸೆಲ್ಪೀ ತೆಗೆದುಕೊಳ್ಳುವುದೀಗ ಜೀವನದ ಅವಿಭಾಜ್ಯ ಅಂಗವಾಗಿದ್ದರೂ ಆ ಇಚ್ಛೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ತೆಗೆದುಕೊಳ್ಳುವುದಾದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಹೀಗೆ ಮಾಡಿದಾಗ, ನಾವು ರೀಲ್ಸ್, ಸೆಲ್ಪೀಯಿಂದ ಆಗುತ್ತಿರುವ ಸಮಸ್ಯೆಗಳನ್ನು ನಿಯಂತ್ರಣಕ್ಕೆ ತರಬಹುದು. ಸಾಮಾಜಿಕ ಸಂಬಂಧಗಳನ್ನು ಬಲಗೊಳಿಸಬಹುದು. ವರ್ಚುವಲ್ ಪ್ರಪಂಚದ ಜೊತೆಗೆ ನೈಜ ಪ್ರಪಂಚದಲ್ಲಿ ಹೆಚ್ಚಿನ ಸಮಯ ಕಳೆಯಬಹುದು. ಯುವಜನಾಂಗಕ್ಕೆ ಒಂದು ಹೊಸ ದಿಕ್ಕನ್ನು ಕೊಡಬಹುದು. ಸೆಲ್ಪೀ ಕಿಲ್ಪಿಯಾಗದೆ, ಬರ್ಫಿಯಾಗಲಿ. ಹೊಸ ಅನುಭವಗಳು ನಿಮ್ಮವಾಗಲಿ. ಕೇವಲ ಫೋಟೋ-ವಿಡಿಯೋಗಳಲ್ಲೇ ಉಳಿಯದಿರಲಿ. ಮಾತ್ರವಲ್ಲ, ಕೊನೆಯದಾಗಿ, ನಾವು ಫೋಟೋದಲ್ಲಷ್ಟೇ ಉಳಿದುಹೋಗದಿರಲಿ.
2. ಪ್ರವಾಸಿ ತಾಣಗಳಲ್ಲಿ ಕೆಲವು ಜಾಗಗಳು ಅಸುರಕ್ಷಿತ ಎಂಬುದು ಗೊತ್ತಿದ್ದೂ ಜನರು ಅಲ್ಲಿ ಹೋಗಿ ಸೆಲ್ಪೀ ತೆಗೆದುಕೊಳ್ಳುತ್ತಾರೆ.
3. ಸುರಕ್ಷತಾ ವ್ಯವಸ್ಥೆಯನ್ನು ಸರಿಯಾಗಿ ಪಾಲಿಸದೇ, ಕಂಡ ಕಂಡಲ್ಲಿ ಸೆಲ್ಪೀ ತೆಗೆಯುವ ಚಾಳಿ.