ಸಾಂದರ್ಭಿಕ ಚಿತ್ರ  
ಸವ್ಯಸಾಚಿ – ರಾಘವೇಂದ್ರ ಗಣಪತಿ

ದಾಸಾನುದಾಸ ಕುಲಶೇಖರರ ನುಡಿಮಾಲೆಗೆ ಒಲಿದ ಮುಕುಂದ

(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ದಾಸ ದಾಸರ ಮನೆಯ ದಾಸಾನುದಾಸ ನಾನು

 |ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ |

ಭಕ್ತಶಿರೋಮಣಿ ಕನಕದಾಸರು ಶ್ರೀಕೃಷ್ಣನನ್ನು ಭಜಿಸುವ ಸಂದರ್ಭದಲ್ಲಿ ನಿನ್ನ ದಾಸನಿಗೆ ದಾಸನಾಗಿರುವವರ ಮನೆಯಲ್ಲಿನ ದಾಸರ ದಾಸ ನಾನು, ಲಕ್ಷ್ಮೀರಮಣ ಶ್ರೀರಂಗ ದೇವರ ಮನೆಯ ದಾಸ ಎಂದು ದಾಸ್ಯಭಕ್ತಿಯನ್ನು ಅನನ್ಯವಾಗಿ ಪ್ರದರ್ಶಿಸಿದ್ದಾರೆ. ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಗಿಂತ ಉತ್ತಮ ಮಾಗೋಪಾಯವಿಲ್ಲ.

ಏಕೆಂದರೆ, ಭಕ್ತಿ ಪ್ರತಿಯೊಬ್ಬರಿಗೂ ಸುಲಭವಾಗಿ ಎಟುಕುವಂಥದ್ದು, ಸರಳವಾಗಿ ಆಚರಿಸಲು ಸಾಧ್ಯವಿರುವಂಥದ್ದು. ಭಕ್ತಿಯಲ್ಲೂ ನವ ವಿಧಗಳಿದ್ದು, ಜನರು ತಮ್ಮ ಇಷ್ಟಾನುಸಾರ, ಶಕ್ತಿ ಅನುಸಾರ ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನವೆಂಬ ಒಂಬತ್ತು ರೀತಿಯಲ್ಲಿ ಭಗವಂತನನ್ನು ಆರಾಧಿಸಬಹುದು, ಒಲಿಸಿಕೊಳ್ಳಬಹುದು. ಈ ನವವಿಧ ಭಕ್ತಿಗಳಲ್ಲಿ ದಾಸ್ಯಭಕ್ತಿ ಒಂದು ವಿಶೇಷ ಮಾರ್ಗ. ಏಕೆಂದರೆ, ‘ದಾಸೋಹಂ ಕೋಸಲೇಂದ್ರಸ್ಯ’ ಎಂದು ಹೆಮ್ಮೆಯಿಂದ ಹೇಳಿಕೊಂಡ ಹನುಮಂತ ಶ್ರೀರಾಮದೇವರ ಆರಾಧನೆಗೆ ಅನುಸರಿಸಿದ್ದು ದಾಸ್ಯ ಭಕ್ತಿಯನ್ನು. 

ನಾನು ನನ್ನದು ಎಂಬ ಅಹಂಕಾರವನ್ನು ತೊರೆದು, ಭಗವಂತನ ಚರಣಗಳಿಗೆ ಸಮರ್ಪಿಸಿಕೊಂಡು, ‘ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು, ಗಟ್ಯಾಗೆ ರಕ್ಷಿಪನು ಇದಕೆ ಸಂಶಯವಿಲ್ಲ, ತಲ್ಲಣಿಸದಿರು ಕಂಡ್ಯ ತಾಳು ಮನವೆ’ ಎಂಬಂತೆ ಒಳಿತು-ಕೆಡುಕುಗಳೆಲ್ಲವನ್ನೂ ದೇವರೇ ನೋಡಿಕೊಳ್ಳುವನು ಎಂಬ ಶರಣಾಗತ ಭಾವನೆಯಿಂದ ನಿಶ್ಚಿಂತೆಯಿಂದ ಇರುವುದೇ ದಾಸ್ಯ ಭಕ್ತಿ. ನಮ್ಮ ಹರಿದಾಸ ಪರಂಪರೆಯಲ್ಲಿ ಎಲ್ಲ ದಾಸರು ಸಹ ‘ದಾಸನಾಗು ಭವ ಪಾಶನೀಗು’, ‘ದಾಸನ ಮಾಡಿಕೊ ಎನ್ನ ಸ್ವಾಮಿ ಸಾಸಿರ ನಾಮದ ವೆಂಕಟರಮಣ’ ಎಂಬಂತೆ ದಾಸ್ಯ ಭಕ್ತಿಯ ಮಾರ್ಗದಲ್ಲೇ ಭಗವಂತನ ಸಾಕ್ಷಾತ್ಕಾರದ ದಾರಿ ತೋರಿಸಿದರು.

ದಾಸ್ಯಭಕ್ತಿಯ ಪರಾಕಾಷ್ಠೆಗೆ ಈ ಯುಗದ ಶ್ರೇಷ್ಠ ಉದಾಹರಣೆಯೆಂದರೆ ಕುಲಶೇಖರ ಆಳ್ವಾರರ ಜೀವನಗಾಥೆ. ಕೇರಳವನ್ನಾಳಿದ ಚೇರ ಸಾಮ್ರಾಜ್ಯದ ಪ್ರಮುಖ ದೊರೆಯಾಗಿದ್ದ ಕುಲಶೇಖರ ವರ್ಮ ವಿಷ್ಣುಭಕ್ತಿಗೆ ತಮ್ಮನ್ನು ಸಮರ್ಪಿಸಿಕೊಂಡು ಶ್ರೀವೈಷ್ಣವ ಪರಂಪರೆಯ 12 ಪ್ರಸಿದ್ಧ ಆಳ್ವಾರರಲ್ಲಿ ಒಬ್ಬರೆನಿಸಿದರು. ರಾಮ-ಕೃಷ್ಣ- ವೆಂಕಟೇಶ್ವರ ಹೀಗೆ ಮಹಾವಿಷ್ಣುವಿನ ಸ್ವರೂಪಚಿಂತನೆಯಲ್ಲೇ ಸದಾ ತಲ್ಲೀನರಾಗಿರುತ್ತಿದ್ದ ಕುಲಶೇಖರರು ಮಹಾಪರಾಕ್ರಮಿಯಾಗಿದ್ದರು, ಕೆಣಕಿ ಆಕ್ರಮಣಕ್ಕೆ ಬಂದ ಪಾಂಡ್ಯರು ಹಾಗೂ ಚೋಳರ ಸದ್ದಡಗಿಸಿ ಚೇರ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದರು. ಹಾಗಿದ್ದಾಗಲೂ ‘ತಿರುವನಂತಪುರದ ಅನಂತ ಪದ್ಮನಾಭಸ್ವಾಮಿಯೇ ತನ್ನ ಸಾಮ್ರಾಜ್ಯದ ಮಹಾರಾಜ. ತಾನೇನಿದ್ದರೂ, ಭಗವಂತನ ಪ್ರತಿನಿಧಿಯಾಗಿ ಆಡಳಿತ ನೋಡಿಕೊಳ್ಳುವ ಸೇವಕ’ ಎಂದು ಭಾವಿಸಿದ್ದರು. 

ಪ್ರತಿನಿತ್ಯ ಎರಡು ಬಾರಿ ಅನಂತಪದ್ಮನಾಭನ ಸನ್ನಿಧಿಗೆ ಆಗಮಿಸಿ ದೈನಂದಿನ ರಾಜ್ಯಾಡಳಿತದ ವಿಚಾರಗಳನ್ನು ದೇವರಿಗೆ ನಿವೇದಿಸಿಕೊಳ್ಳುತ್ತಿದ್ದರು. ಪ್ರತಿನಿತ್ಯ ಅವರ ಆಸ್ಥಾನದಲ್ಲಿ ಪುರಾಣ ಪ್ರವಚನಗಳು ನಡೆಯುತ್ತಿದ್ದವು. ಹಾಗೊಂದು ದಿನ ರಾಮಾಯಣ ಪ್ರವಚನ ನಡೆಯುತ್ತಿದ್ದ ಸಂದರ್ಭದಲ್ಲಿ ವೈಷ್ಣವ ಪಂಡಿತರು ದಂಡಕಾರಣ್ಯದ ಪಂಚವಟಿಯಲ್ಲಿ ಸೀತಾರಾಮಲಕ್ಷ್ಮಣರ ವನವಾಸದ ಪ್ರಸಂಗವನ್ನು ವಿವರಿಸುತ್ತಿದ್ದರು. ಮಾಯಾರೂಪದಿಂದ ಬಂದ ಶೂರ್ಪನಖಿಯ ಕಿವಿ-ಮೂಗನ್ನು ಲಕ್ಷ್ಮಣನು ಕತ್ತರಿಸಿದ ಬೆನ್ನಲ್ಲೇ, ಜನಸ್ಥಾನದಲ್ಲಿದ್ದ ಖರ-ದೂಷಣರು ತಂಗಿಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ರಾಕ್ಷಸರ ಸೈನ್ಯದೊಂದಿಗೆ ಯುದ್ಧಕ್ಕೆ ಆಗಮಿಸುತ್ತಾರೆ.

ಮಾಯಾವಿಗಳಾದ 14 ಸಾವಿರ ರಾಕ್ಷಸರ ವಿರುದ್ಧ ರಥ-ಕುದುರೆಗಳಿಲ್ಲದ, ನಾರುಮಡಿಯುಟ್ಟ ಶ್ರೀರಾಮಚಂದ್ರ ಏಕಾಂಗಿಯಾಗಿ ನೆಲದ ಮೇಲೆ ನಿಂತು ಯುದ್ಧ ಮಾಡುತ್ತಿದ್ದಾನೆ ಎಂದು ಪಂಡಿತರು ಹೇಳುತ್ತಿದ್ದಂತೆಯೇ, ಕುಲಶೇಖರರು ಭಾವಪರವಶರಾಗಿ ಸಿಂಹಾಸನದಿಂದ ಎದ್ದೇ ಬಿಟ್ಟರು. ‘ಪ್ರಭು ಶ್ರೀರಾಮಚಂದ್ರನು ಒಬ್ಬನೇ ಸಂಕಷ್ಟದಲ್ಲಿದ್ದಾನೆ. ನಾವೀಗ ರಾಮನ ನೆರವಿಗೆ ಧಾವಿಸಬೇಕಿದೆ. ಎಲ್ಲಿ, ಸೇನಾಧಿಪತಿಗಳೇ, ಸೈನ್ಯವನ್ನು ಸಜ್ಜುಗೊಳಿಸಿ, ರಾಮನ ಪರವಾಗಿ ಯುದ್ಧಕ್ಕೆ ಕೂಡಲೇ ಹೊರಡಿ’ ಎಂದು ಖಡ್ಗವನ್ನು ಝುಳಪಿಸಿ ಆಜ್ಞಾಪಿಸಿಯೇ ಬಿಟ್ಟರು. ರಾಮ ಖರದೂಷಣರನ್ನು ಕೊಂದಿದ್ದು ತ್ರೇತಾಯುಗದಲ್ಲಿ. 

ನಾವೀಗ ರಾಮಕಥೆ ಕೇಳುತ್ತಿರುವುದು ಕಲಿಯುಗದಲ್ಲಿ. ಆ ಯುಗದ ರಾಮನ ಜತೆಯಾಗಿ ಈಗ ಯುದ್ಧ ಮಾಡುವುದು ಹೇಗೆಂದು ಮಂತ್ರಿ-ಸೇನಾಧಿಪತಿಗಳು ತಬ್ಬಿಬ್ಬಾಗಿರುವಾಗ, ಪಂಡಿತರು, ಮಹಾಪ್ರಭುಗಳೇ, ಶ್ರೀರಾಮನು ಏಕಾಂಗಿಯಾಗಿ ಒಂದೂವರೆ ಮುಹೂರ್ತದಲ್ಲಿ (ಸುಮಾರು 72 ನಿಮಿಷಗಳ ಅವಧಿ) ಅಷ್ಟೂ 14 ಸಾವಿರ ರಾಕ್ಷಸರನ್ನು ಕೊಂದು ವಿಜಯಶಾಲಿಯಾದನು ಎಂದು ಪ್ರವಚನವನ್ನು ಸಮಾಪ್ತಿಗೊಳಿಸಿದಾಗ ಕುಲಶೇಖರರಿಗೆ ಸಮಾಧಾನ. ಆಗ ಅವರು ವಾಸ್ತವ ಪ್ರಪಂಚಕ್ಕೆ ಮರಳುತ್ತಾರೆ. ಇದರ ಒಟ್ಟು ತಾತ್ಪರ್ಯವೇನೆಂದರೆ, ರಾಮಕಥೆಯನ್ನು ಶ್ರವಣ ಮಾಡುವಾಗ ಕುಲಶೇಖರರು ಭೌತಿಕ ಅರಿವನ್ನು ಮರೆತುಬಿಡುತ್ತಿದ್ದರು. ರಾಮಭಕ್ತಿಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡುಬಿಡುತ್ತಿದ್ದರು.

‘ನನಗೆ ರಾಜಭೋಗ ಬೇಡ, ಸ್ವರ್ಗದ ಸುಖ ಬೇಡ, ತಿರುಮಲೆ ಬೆಟ್ಟದ ಮೇಲೆ ಹರಿಯುವ ತೊರೆಯಾಗಿಯೋ, ಅಲ್ಲಿ ಅರಳುವ ಹೂವಾಗಿಯೋ, ಭಕ್ತರ ಪಾದಸ್ಪರ್ಶವಾಗುವಂತೆ ವೆಂಕಟೇಶ್ವರ ದೇವರ ಸನ್ನಿಧಾನದ ಮೆಟ್ಟಿಲಾಗಿಯೋ ಜನಿಸಿದರೆ ಸಾಕು’ ಎಂದು ಕುಲಶೇಖರರು ಬೇಡಿಕೊಳ್ಳುತ್ತಿದ್ದರು. ಅದರಂತೆ ತಿರುಪತಿ ವೆಂಕಟೇಶ್ವರನ ಸನ್ನಿಧಾನದಲ್ಲಿ ಗರ್ಭಗುಡಿಯ ಹೊಸ್ತಿಲನ್ನು ‘ಕುಲಶೇಖರ ಪಡಿ’ ಎಂದೇ ಪೂಜಿಸಲಾಗುತ್ತದೆ. ಶ್ರೀವೈಷ್ಣವ ಪರಂಪರೆಯಲ್ಲಿ ಮಹಾವಿಷ್ಣುವಿನ ಕೌಸ್ತುಭಮಣಿಯ ಅವತಾರವೆಂದು ಪರಿಗಣಿಸಲ್ಪಟ್ಟಿರುವ ಕುಲಶೇಖರರು ಕಾಲಕ್ರಮೇಣ ತಮ್ಮ ರಾಜ್ಯಾಧಿಕಾರವನ್ನು ಮಗನಿಗೆ ವಹಿಸಿ ಶ್ರೀರಂಗಂ, ತಿರುಪತಿ ಸನ್ನಿಧಾನದಲ್ಲಿ ಸಂತಕವಿಯಾಗಿ ಜೀವನದ ಉತ್ತರಭಾಗವನ್ನು ಕಳೆದರು. 

ಏಕಕಾಲದಲ್ಲಿ ಸಂಸ್ಕೃತ ಹಾಗೂ ತಮಿಳು ಸಾಹಿತ್ಯ ಪರಂಪರೆಗಳಲ್ಲಿ ಮೇರುಕೃತಿಗಳನ್ನು ರಚಿಸಿದ ಮಹಾನುಭಾವ ಅವರು. ಭಕ್ತಿ, ವೈರಾಗ್ಯ, ಶರಣಾಗತಿಯ ಭಾವಲಹರಿಯಲ್ಲಿ ಕೃಷ್ಣಭಕ್ತಿಗೆ ತಮ್ಮನ್ನು ಸಮರ್ಪಿಸಿಕೊಂಡು ಕುಲಶೇಖರರು ರಚಿಸಿರುವ ಮೇರು ಕೃತಿಯೇ ಮುಕುಂದಮಾಲಾ.

ಶ್ರೀ ವಲ್ಲಭೇತಿ ವರದೇತಿ ದಯಾಪರೇತಿ

ಭಕ್ತಪ್ರಿಯೇತಿ ಭವಲುಂಠನಕೋವಿದೇತಿ

ನಾಥೇತಿ ನಾಗಶಯನೇತಿ ಜಗನ್ನಿವಾಸೇ-

ತ್ಯಾಲಾಪನಂ ಪ್ರತಿಪದಂ ಕುರು ಮೇ ಮುಕುಂದ ||

ಎಲ್ಲ ರೀತಿಯ ಸುಖ-ಸೌಭಾಗ್ಯ, ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿ. ಆಕೆಯನ್ನು ವರಿಸಿರುವ ಶ್ರೀವಲ್ಲಭ ಮಹಾವಿಷ್ಣು. ಧ್ರುವ, ಪ್ರಹ್ಲಾದರಂಥ ಭಕ್ತರಿಗೆ ಬೇಡಿದ ವರ ದಯಪಾಲಿಸುವವನು. ಕಷ್ಟದಲ್ಲಿರುವ ಗಜೇಂದ್ರನ ನೆರವಿಗೆ ಧಾವಿಸುವ ದಯಾಪರನು, ಭಕ್ತರಿಗೆ ಪ್ರಿಯನಾದವನು, ಜಗತ್ತಿನ ದುಃಖ, ಕೋಟಲೆಗಳನ್ನು ನಾಶ ಮಾಡುವುದರಲ್ಲಿ ಚತುರನು, ದುಷ್ಟ ದುಶ್ಶಾಸನನು ಸೀರೆಯನ್ನೆಳೆಯುವಾಗ ಕೃಷ್ಣಾ ಎಂದು ಆರ್ತನಾದಗೈದ ದ್ರೌಪದಿಗೆ ಅಕ್ಷಯಾಂಬರವನ್ನಿತ್ತು ಕಾಪಾಡಿದ ನಾಥನು, ಆದಿಶೇಷನನ್ನೇ ಹಾಸಿಗೆಯನ್ನಾಗಿಸಿಕೊಂಡು ಪವಡಿಸಿರುವವನು, ಪ್ರಹ್ಲಾದನ ಕೋರಿಕೆಗೆ ಕಂಬದಲ್ಲೂ ಪ್ರತ್ಯಕ್ಷನಾದಂತೆ ಜಗತ್ತಿನ ಕಣಕಣದಲ್ಲೂ ವಾಸವಿರುವ, ಮುಕ್ತಿಯನ್ನು ಕರುಣಿಸುವ ಮುಕುಂದನೇ, ಜೀವನದ ಪ್ರತೀ ಹೆಜ್ಜೆಯಲ್ಲೂ ನಿನ್ನನ್ನು ಸ್ಮರಿಸುವ, ಭಜಿಸುವ ಭಕ್ತಿಯನ್ನು ಕೊಡು ಎಂದು ಕುಲಶೇಖರರು ನಿವೇದಿಸಿಕೊಳ್ಳುತ್ತಾರೆ.

ಕೃಷ್ಣ ತ್ವದೀಯ ಪದಪಂಕಜ ಪಂಜರಾಂತಂ

ಅದ್ಯೈಮೇ ವಿಶತು ಮಾನಸ ರಾಜಹಂಸಃ

ಪ್ರಾಣಪ್ರಯಾಣಸಮಯೇ ಕಫವಾತಪಿತಃ

ಕಂಠಾವರೋಧನವಿಧೌ ಸ್ಮರಣಂ ಕುತಸ್ತೇ

ಮರಣವು ಎಂದಾದರೊಂದು ದಿನ ನಿಶ್ಚಿತ. ಕಫ-ವಾತ-ಪಿತ್ತಗಳಿಂದ ಗಂಟಲು ಕಟ್ಟಿ, ಪ್ರಾಣ ಬಿಡುವ ಸನ್ನಿವೇಶ ಹತ್ತಿರವಾದಾಗ ನಿನ್ನ ನಾಮಸ್ಮರಣೆ ಕಷ್ಟವಾಗಿಬಿಡಬಹುದು. ಹಾಗಾಗಿ ಇಂದ್ರಿಯ ಮನಸ್ಸುಗಳು ಗಟ್ಟಿಯಾಗಿರುವಾಗಲೇ, ನನ್ನ ಮನಸ್ಸೆಂಬ ರಾಜಹಂಸವು ನಿನ್ನ ಪಾದಕಮಲಗಳೆಂಬ ಪಂಜರವನ್ನು ಪ್ರವೇಶಿಸಲು ಸಾಧ್ಯವಾಗುವಂತೆ ಅನುಗ್ರಹಿಸು ಎಂದು ಕೃಷ್ಣನಿಗೆ ಮೊರೆಯಿಡುತ್ತಾರೆ.

ಜಿಹ್ವೇ ಕೀರ್ತಯ ಕೇಶವಂ ಮುರರಿಪುಂ ಚೇತೋ ಭಜ ಶ್ರೀಧರಂ

ಪಾಣಿದ್ವಂದ್ವ ಸಮರ್ಚಯಾಚ್ಯುತ ಕಥಾಃ ಶ್ರೋತ್ರದ್ವಯ ತ್ವಂ ಶ್ರುಣು

ಕೃಷ್ಣಂ ಲೋಕಯ ಲೋಚನದ್ವಯ ಹರೇರ್ಗಚ್ಛಾಂಘ್ರಿಯುಗ್ಮಾಲಯಂ

ಜಿಘ್ರ ಘ್ರಾಣ ಮುಕುಂದಪಾದತುಲಸೀಂ ಮೂರ್ಧನ್ನಮಾಧೋಕ್ಷಜಂ

ನನ್ನ ನಾಲಿಗೆಯು ಕೇಶವನನ್ನು ಸ್ತುತಿಸಲಿ, ಮನಸ್ಸು ರಾಕ್ಷಸರ ವೈರಿಯಾದ ಮುರಾರಿಯನ್ನು ಧ್ಯಾನಿಸಲಿ, ಕೈಗಳು ಶ್ರೀಧರನನ್ನು ಪೂಜಿಸಲಿ, ಕಿವಿಗಳು ಅಚ್ಯುತನ ಕಥೆಯನ್ನು ನಿರಂತರ ಶ್ರವಣಮಾಡಲಿ, ಕಣ್ಣುಗಳು ಕೃಷ್ಣನ ದಿವ್ಯರೂಪವನ್ನು ಸದಾ ದರ್ಶಿಸಲಿ, ಕಾಲುಗಳು ಹರಿಯ ದೇಗುಲಕ್ಕೆ ಸದಾ ಕರೆದೊಯ್ಯಲಿ, ಮುಕುಂದನ ಪಾದಕ್ಕೆ ಸಮರ್ಪಿಸಿದ ತುಳಸಿಯ ಸುಗಂಧವನ್ನು ನಾಸಿಕವು ಆಘ್ರಾಣಿಸಲಿ. ಶಿರವು ಸದಾ ಅಧೋಕ್ಷಜನಿಗೆ ನಮಸ್ಕರಿಸಲಿ.. ವ್ಯರ್ಥ ವಿಚಾರಗಳಲ್ಲಿ ತೊಡಗದೆ ದೇಹದ ಪ್ರತಿಯೊಂದು ಇಂದ್ರಿಯವೂ ಸದಾಕಾಲ ಭಗವಂತನ ಸೇವೆಯಲ್ಲಿ ತನ್ಮಯವಾಗಲಿ ಎಂದು ಕುಲಶೇಖರರು ಪ್ರಾರ್ಥಿಸುತ್ತಾರೆ.

ಮಜ್ಜನ್ಮನಃ ಫಲಮಿದಂ ಮಧುಕೈಟಭಾರೇ

ಮತ್ಪ್ರಾರ್ಥನೀಯಮದನುಗ್ರಹ ಏಷ ಏವ

ತ್ವದ್ಭ ೃ್ಯಭೃತ್ಯಪರಿಚಾರಕ ಭೃತ್ಯಭೃತ್ಯ

ಭೃತ್ಯಸ್ಯ ಭೃತ್ಯ ಇತಿ ಮಾಂ ಸ್ಮರ ಲೋಕನಾಥ

ಮಧುಕೈಟಭರೆಂಬ ರಾಕ್ಷಸರನ್ನು ಸಂಹರಿಸಿದ ಶ್ರೀಮನ್ನಾರಾಯಣನೇ, ನಾನು ನಿನ್ನ ಸೇವಕನೆಂಬ ಅಹಂಕಾರ ನನ್ನಲ್ಲಿ ಸುಳಿಯದಿರಲಿ. ಬದಲಿಗೆ ನಿನ್ನ ಸೇವಕನ, ಸೇವಕನ, ಪರಿಚಾರಕನ, ಆತನ ಸೇವಕನ, ಸೇವಕನ.. ಆ ಸೇವಕನಿಗೆ ಕೊನೆಯ ಸೇವಕನೆಂದು ನನ್ನನು ನೆನಪಿಸಿಕೊಂಡು ಅನುಗ್ರಹಿಸು ಲೋಕನಾಥನೇ ಎಂದು ಪ್ರಾರ್ಥಿಸುತ್ತಾನೆ. ಜನ್ಮದಿಂದ ಚಕ್ರವರ್ತಿಯೇ ಆಗಿದ್ದರೂ, ನಿನ್ನ ಸೇವಕನಂತೆ ನನ್ನನ್ನು ಅನುಗ್ರಹಿಸು ಎಂಬ ಕುಲಶೇಖರರ ದಾಸ್ಯಭಕ್ಯಿಯನ್ನೇ ಪುರಂದರ ದಾಸರು, ಕನಕದಾಸರಾದಿಯಾಗಿ ಕನ್ನಡದ ಹರಿದಾಸರು ‘ನಾ ನಿನ್ನ ದಾಸನಯ್ಯ’ ಎಂಬಿತ್ಯಾದಿ ಕೀರ್ತನೆಗಳಲ್ಲಿ ಧ್ವನಿಸಿದ್ದಾರೆ.

ವ್ಯಾಮೋಹಪ್ರಶಮೌಷಧಂ ಮುನಿಮನೋವೃತ್ತಿಪ್ರವೃತ್ತ್ಯೌಷಧಂ

ದೈತ್ಯೇಂದ್ರಾತಿರ್¤ಕರೌಷಧಂ ತ್ರಿಜಗತಾಂ ಸಂಜೀವನೈಕೌಷಧಂ

ಭಕ್ತಾತ್ಯಂತಹಿತೌಷಧಂ ಭವಭಯಪ್ರಧ್ವಂಸನೈಕೌಷಧಂ

ಶ್ರೇಯಃ ಪ್ರಾಪ್ತಿಕರೌಷಧಂ ಪಿಬ ಮನಶ್ರೀಕೃಷ್ಣದಿವ್ಯೌಷಧಂ

ಶ್ರೀಕೃಷ್ಣನೆಂದರೆ, ಅಜ್ಞಾನ, ವ್ಯಾಮೋಹಗಳನ್ನು ದೂರಮಾಡುವಂಥ, ಋಷಿ-ಮುನಿಗಳ ಮನಸ್ಸನ್ನು ಭಗವಂತನ ಧ್ಯಾನದಲ್ಲಿ ನೆಲೆಗೊಳಿಸುವಂಥ; ದುಷ್ಟ ದೈತ್ಯರಿಗೆ ಭಯ, ಸಂಕಟ ಉಂಟು ಮಾಡುವಂಥ, ಮೂರು ಲೋಕಗಳ ಸಕಲ ಜೀವರಾಶಿಗಳಿಗೆ ಸಂಜೀವಿನಿಯಂಥ; ಭಕ್ತರಿಗೆ ಸದಾ ಒಳಿತನ್ನುಂಟು ಮಾಡುವ; ಜನನ-ಮರಣಗಳೆಂಬ ಜೀವನಚಕ್ರದ ಭಯವನ್ನು ನಿವಾರಿಸುವಂಥ, ಲೌಕಿಕದ ಬದುಕಿನಲ್ಲಿ ಸಕಲ ಸನ್ಮಂಗಳವನ್ನೂ ಪಾರಮಾರ್ಥಿಕವಾಗಿ ಮೋಕ್ಷವನ್ನೂ ಕರುಣಿಸುವಂಥ ದಿವ್ಯವಾದ ಔಷಧ. ಅಂಥ ಶ್ರೀಕೃಷ್ಣನೆಂಬ ಪರಮ ದಿವ್ಯೌಷಧವನ್ನು ನನ್ನ ಮನಸ್ಸು ಸದಾಕಾಲ ಸೇವಿಸಲಿ ಎಂದು ಕುಲಶೇಖರರು ಹಂಬಲಿಸುತ್ತಾರೆ.

ಕೃಷ್ಣೋ ರಕ್ಷತು ನೋ ಜಗತ್ರಯಗುರುಃ ಕೃಷ್ಣಂ ನಮಸ್ಯಾಮ್ಯಹಂ

ಕೃಷ್ಣೇನಾಮರಶತ್ರವೋ ವಿನಿಹತಾಃ ಕೃಷ್ಣಾಯ ತುಭ್ಯಂ ನಮಃ

ಕೃಷ್ಣಾದೇವ ಸಮುತ್ಥಿತಂ ಜಗದಿದಂ ಕೃಷ್ಣಸ್ಯ ದಾಸೋಸ್ಮ್ಯಂ

ಕೃಷ್ಣೇ ತಿಷ್ಠತಿ ಸರ್ವಮೇತದಖಿಲಂ ಹೇ ಕೃಷ್ಣ ರಕ್ಷಸ್ವ ಮಾಂ

ಹನುಮಂತನು ದಾಸೋಹಂ ಕೋಸಲೇಂದ್ರಸ್ಯ ಎಂದಂತೆ ಕುಲಶೇಖರರು ‘ಕೃಷ್ಣಸ್ಯ ದಾಸೋಸ್ಮ ್ಯಂ’ (ನಾನು ಕೃಷ್ಣನ ದಾಸ) ಎನ್ನುತ್ತಾರೆ, ಮೂರು ಲೋಕಗಳಿಗೆ ಪರಮಗುರುವಾದ (ಒಡೆಯನಾದ) ಶ್ರೀಕೃಷ್ಣನು ನಮ್ಮೆಲ್ಲರನ್ನೂ ರಕ್ಷಿಸಲಿ. ದೇವತೆಗಳ ಶತ್ರುಗಳಾದ ರಾಕ್ಷಸರನ್ನು ಸಂಹರಿಸಿದ ಕೃಷ್ಣನಿಗೆ ಸದಾ ನಮಸ್ಕರಿಸೋಣ. ಈ ಜಗತ್ತಿನ ಸೃಷ್ಟಿಕರ್ತನಾದ ಕೃಷ್ಣನ ದಾಸಾನುದಾಸ ನಾನು. ಸಮಸ್ತ ವಿಶ್ವಕ್ಕೆ ಆಶ್ರಯದಾತನಾದ ಕೃಷ್ಣನು ನಮ್ಮೆಲ್ಲರನ್ನೂ ರಕ್ಷಿಸಲಿ ಎಂಬ ಪ್ರಾರ್ಥನೆಯು ಕೃಷ್ಣನ ನಿತ್ಯಾರಾಧನೆಗೆ ಕುಲಶೇಖರರು ಜಗತ್ತಿಗೆ ನೀಡಿದ ಕೊಡುಗೆಯಾಗಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಭಗವಂತನ ಕೃಷ್ಣಾವತಾರವನ್ನು ಆರಾಧಿಸುವ ಪರ್ವದಿನ. ಕೃಷ್ಣನನ್ನು ಪೂಜಿಸುವುದು, ಪ್ರಾರ್ಥಿಸುವುದು, ಒಲಿಸಿಕೊಳ್ಳುವುದು ಸುಲಭ. ಏಕೆಂದರೆ ‘ಒಂದು ದಳ ಶ್ರೀತುಳಸಿ, ಬಿಂದು ಗಂಗೋದಕ’ ಅರ್ಪಿಸಿದರೂ ಒಲಿದುಬಿಡುವಂಥ ಕರುಣಾಮಯಿ ಅವನು. ದುಯೋಧನನ ಅರಮನೆಯ ಷಡ್ರಸ ಭೋಜನಕ್ಕಿಂತ, ವಿಧುರನ ಮನೆಯ ಗಂಜಿಗೆ, ಬಡಸುಧಾಮ ಉತ್ತರೀಯದಲ್ಲಿ ಕಟ್ಟಿತಂದ ಅವಲಕ್ಕಿಗೆ ತೃಪ್ತಿಪಡುವ ಮಹಾಮಹಿಮ ಆತ. ಕೃಷ್ಣಭಕ್ತಿ, ಶರಣಾಗತಿಯ ಮೂಲಕ ಅತ್ಮೋನ್ನತಿಗೆ ಕುಲಶೇಖರ ಆಳ್ವಾರರು ಪೋಣಿಸಿರುವ ನುಡಿಹಾರವೇ ಮುಕುಂದ ಮಾಲಾ. ಯೂಟ್ಯೂಬ್ನಲ್ಲಿ ಲಭ್ಯವಿರುವ ಪಿ.ಬಿ. ಶ್ರೀನಿವಾಸ್ ಕಂಠಸಿರಿಯ ‘ಮುಕುಂದ ಮಾಲಾ’ ಸ್ತೋತ್ರ ಆಲಿಸುವಾಗಲೂ ಕುಲಶೇಖರ ಆಳ್ವಾರರು ಸಾಕ್ಷಾತ್ಕರಿಸಿಕೊಂಡ ಕೃಷ್ಣಭಕ್ತಿಯ ದಿವ್ಯಾನುಭೂತಿ ಅನುಭವ ವೇದ್ಯವಾಗುತ್ತದೆ.

ಹೇ ಗೋಪಾಲಕ ಹೇ ಕೃಪಾಜಲನಿಧೇ ಹೇ ಸಿಂಧುಕನ್ಯಾಪತೇ

ಹೇ ಕಂಸಾಂತಕ ಹೇ ಗಜೇಂದ್ರ ಕರುಣಾಪಾರೀಣ ಹೇ ಮಾಧವ

ಹೇ ರಾಮಾನುಜ ಹೇ ಜಗತ್ರಯಗುರೋ ಹೇ ಪುಂಡರೀಕಾಕ್ಷ ಮಾಂ

ಹೇ ಗೋಪೀಜನನಾಥ ಪಾಲಯ ಪರಂ ಜಾನಾಮಿ ನ ತ್ವಾಂ ವಿನಾ

ಎಲ್ಲರಿಗೂ ಕೃಷ್ಣಾನುಗ್ರಹವಾಗಲಿ.