WEB
ಸವ್ಯಸಾಚಿ – ರಾಘವೇಂದ್ರ ಗಣಪತಿ

ಪ್ರೀತಿ, ಮದುವೆ, ತ್ಯಾಗ... ಬದುಕಿನ ವಾಸ್ತವ

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಹುಡುಗಿ ಕುಟುಂಬದವರ ವಿರೋಧದಿಂದಾಗಿ ಬಾವಿಗೆ ಜಿಗಿದು ಪ್ರಾಣ ಕಳೆದುಕೊಂಡಿರುತ್ತಾಳೆ. ಯಾರಿಗೂ ಕೆಟ್ಟದ್ದು ಬಯಸದ ಸೀದಾಸಾದಾ ಯುವಕ ಮರುತ್ತು (ಮರುಥನಾಯಗಮ್, ‘ಪ್ರೀತಿ ಕಳೆದುಕೊಂಡ ಮೇಲೆ’ ಮತ್ತೆಂಥ ಜೀವನ ಎಂದು ಮದುವೆ, ಸಂಬಂಧಗಳ ಬಗ್ಗೆಯೇ ಆಸಕ್ತಿ ಕಳೆದುಕೊಂಡಿರುತ್ತಾನೆ.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಹುಡುಗಿ ಕುಟುಂಬದವರ ವಿರೋಧದಿಂದಾಗಿ ಬಾವಿಗೆ ಜಿಗಿದು ಪ್ರಾಣ ಕಳೆದುಕೊಂಡಿರುತ್ತಾಳೆ. ಯಾರಿಗೂ ಕೆಟ್ಟದ್ದು ಬಯಸದ ಸೀದಾಸಾದಾ ಯುವಕ ಮರುತ್ತು (ಮರುಥನಾಯಗಮ್, ‘ಪ್ರೀತಿ ಕಳೆದುಕೊಂಡ ಮೇಲೆ’ ಮತ್ತೆಂಥ ಜೀವನ ಎಂದು ಮದುವೆ, ಸಂಬಂಧಗಳ ಬಗ್ಗೆಯೇ ಆಸಕ್ತಿ ಕಳೆದುಕೊಂಡಿರುತ್ತಾನೆ. ಕೈ ಮೇಲೆ ಹಾಕಿಸಿಕೊಂಡಿದ್ದ ಮನದನ್ನೆಯ ಹಚ್ಚೆಯನ್ನೇ ನೋಡಿಕೊಂಡು, ದೂರದ ದುಬೈನಲ್ಲಿ ಒಬ್ಬಂಟಿಯಾಗಿ ಬದುಕುತ್ತಿರುತ್ತಾನೆ. ಇತ್ತ ಮಗ ಕಳಿಸುವ ಹಣದಿಂದಲೇ ಊರಿನಲ್ಲಿ ಸೌಖ್ಯದ ಬದುಕು ಸಾಗಿಸುವ ಕುಟುಂಬದವರು, ಮಗನನ್ನು ವೈರಾಗ್ಯದ ಸಿಕ್ಕಿನಿಂದ ಬಿಡಿಸಿ ‘ಹೇಗಾದರೂ ಒಂದು ಮದುವೆ ಮಾಡಿಬಿಡಬೇಕೆಂದು’ ಇನ್ನಿಲ್ಲದ ಉಪಾಯ ಮಾಡುತ್ತಿರುತ್ತಾರೆ. ತಂಗಿಯ ಮಗನ ಕಿವಿ ಚುಚ್ಚುವ ಶಾಸ್ತ್ರಕ್ಕೆಂದು ದುಬೈನಿಂದ ಮರಳುವ ಮಗನಿಗೆ ಊರಿಗೆ ಬಂದ ಮೇಲೆ, ಇದು ಯಾವುದೋ ಶಾಸ್ತ್ರವಲ್ಲ, ತನ್ನದೇ ಮದುವೆ ಎಂಬ ವಿಚಾರ ಗೊತ್ತಾಗುತ್ತದೆ. ಸ್ವಲ್ಪ ಸೆಂಟಿಮೆಂಟು, ಅಳು, ಕಣ್ಣೀರು, ಭಾವನಾತ್ಮಕ ಬ್ಲಾ್ಯಕ್​ವೆುೕಲ್ ಬಳಿಕ ಮದುವೆಗೆ ಒಪ್ಪಿಕೊಳ್ಳುತ್ತಾನೆ..

***

ಪ್ರಾಣಕ್ಕಿಂತ ಹೆಚ್ಚಾಗಿ ಹಚ್ಚಿಕೊಂಡಿದ್ದ ಮಗಳು ಮುತ್ತುಸೆಲ್ವಿ, ‘ಅವನಂದ್ರೆ ನನಗೆ ಪಂಚಪ್ರಾಣ, ಮದುವೆ ಆದರೆ ಅವನ ಜತೆಗೇ. ಬೇರೆ ಹುಡುಗರೆಲ್ಲರೂ ನನಗೆ ‘ಬ್ರೋ ಸಮಾನ’ ಎಂದು ಲವ್ ಮ್ಯಾಟರ್ ಬಹಿರಂಗ ಪಡಿಸಿದಾಗ, ಕುಟುಂಬದ ಮರ್ಯಾದೆ, ಸಮಾಜದಲ್ಲಿ ಅಪನಿಂಧೆ, ಜತೆಗೆ ನಂಬಿಕೆ ಇಟ್ಟಿದ್ದ ನೆಚ್ಚಿನ ಮಗಳು ಹೀಗೆ ಯಾರನ್ನೋ ಪ್ರೀತಿಸಿಬಿಟ್ಟಳಲ್ಲ ಎಂಬ ಆಘಾತದಿಂದ ತಂದೆ ಹೃದಯಾಘಾತವಾಗಿ ಎದೆಯೊಡೆದು ಸಾಯುತ್ತಾನೆ. ಸುಮ್ಮನೆ ಬಿಟ್ಟರೆ ಮಗಳು ‘ಯಾವನೋ, ಪ್ರೀತಿಸಿದವನ’ ಜತೆ ಓಡಿ ಹೋಗಿ ಮರ್ಯಾದೆ ತೆಗೆಯುತ್ತಾಳೆಂಬ ಕಾರಣಕ್ಕೆ ಅಮ್ಮ ತರಾತುರಿಯಲ್ಲಿ ಬೇರೆ ಹುಡುಗನ ಜತೆ ಮದುವೆ ಫಿಕ್ಸ್ ಮಾಡುತ್ತಾಳೆ. ‘ಆ ಮದುವೆ ಬೇಡಮ್ಮ, ಪ್ರೀತಿಸಿದವನನ್ನು ಬಿಟ್ಟು ಇರಲಾರೆ’ ಎಂದು ಮಗಳು ಗೋಗರೆದರೂ ಪ್ರಯೋಜನವಾಗುವುದಿಲ್ಲ. ವರ ಯಾರೆಂದು ಗೊತ್ತಿಲ್ಲ, ಮುಖವನ್ನೂ ನೋಡಿಲ್ಲ, ಪ್ರೀತಿಸಿದವನನ್ನು ಬಿಟ್ಟು, ಅನಾಮಿಕ ಕಟ್ಟುವ ತಾಳಿಗೆ ಕೊರಳೊಡ್ಡುವುದಕ್ಕಿಂತ ಲಗ್ನ ಮಂಟಪದಿಂದ ಓಡಿಹೋಗುವುದೇ ಮೇಲು ಎಂದು ಮದುಮಗಳು ಮುತ್ತು ಪ್ಲಾ್ಯನ್ ಮಾಡಿಕೊಳ್ಳುತ್ತಾಳೆ.

***

‘ನೀನಂದ್ರೆ ನನಗೆ ಪ್ರಾಣ; ಜಗತ್ತಿನಲ್ಲಿ ನನ್ನಷ್ಟು ನಿನ್ನನ್ನು ಯಾರೂ ಪ್ರೀತಿಸುವುದು ಸಾಧ್ಯವಿಲ್ಲ’ ಎಂದು ಮಾತೆತ್ತಿದರೆ ಡೈಲಾಗ್ ಹೊಡೆಯುವ ನಿರುದ್ಯೋಗಿ ನಿತೀಶ್, ಕಾಣುವ ಕನಸಿಗೂ, ಬದುಕುವ ಬದುಕಿಗೂ ಅಜಗಜಾಂತರ. ‘ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗಲಾರೆ. ಬೆಳಗಿನ ಜಾವ ಕಲ್ಯಾಣ ಮಂಟಪದ ಪಕ್ಕದ ರಸ್ತೆಗೆ ಬಂದುಬಿಡು, ನಾನೂ ಬರುತ್ತೇನೆ. ಇಬ್ಬರೂ ಓಡಿ ಹೋಗಿ ಮದುವೆಯಾಗೋಣ, ನಮ್ಮದೇ ಪ್ರಪಂಚದಲ್ಲಿ ಬದುಕೋಣ’ ಎಂಬ ಮುತ್ತುಸೆಲ್ವಿಯ ‘ಪಕ್ಕಾ ಪ್ಲಾ್ಯನ್’ಗೆ ಆತ ಗೋಣು ಆಡಿಸಿರುತ್ತಾನೆ. ಆದರೆ, ರಾತ್ರಿ ಮಲಗುವಾಗ 5 ಎಎಂ ಬದಲು 5 ಪಿಎಂಗೆ ಅಲಾರಂ ಸೆಟ್ ಮಾಡಿರುತ್ತಾನೆ! ಬೆಳಗ್ಗೆ ಎಚ್ಚರವಾದಾಗ ಗಂಟೆ ಒಂಬತ್ತೋ, ಹತ್ತೋ ಆಗಿರುತ್ತದೆ. ತಡಬಡಾಯಿಸಿ ಎದ್ದು, ಬೇಗ ಎಬ್ಬಿಸಲಿಲ್ಲ ಯಾಕೆ ಎಂದು ಅಮ್ಮನಿಗೆ ಬಯ್ಯುತ್ತಾನೆ. ಅಷ್ಟರಲ್ಲಿ ಹುಡುಗಿ ಕಲ್ಯಾಣಮಂಟಪದಿಂದ ನೂರು ಬಾರಿ ಕರೆ ಮಾಡಿರುತ್ತಾಳೆ. ‘ತಾಳಿ ಕಟ್ಟಿಸಿಕೊಂಡ ಮಾತ್ರಕ್ಕೆ ನೀನು ಬೇರೆಯವನ ಹೆಂಡತಿ ಆಗಿ ಬಿಡುವುದಿಲ್ಲ. ಜಗತ್ತಿನಲ್ಲಿ ನಿನ್ನನ್ನು ನನ್ನಷ್ಟು ಬೇರೆ ಯಾರೂ ಪ್ರೀತಿಸುವುದು ಸಾಧ್ಯವಿಲ್ಲ... ರಾತ್ರಿ 12 ಗಂಟೆಗೆ ಊರ ಹೊರಗಿನ ಪಾಳು ದೇಗುಲದ ಬಳಿ ಬಾ, ಓಡಿಹೋಗೋಣ’ ಎಂದು ಅವಳನ್ನು ಒಪ್ಪಿಸುತ್ತಾನೆ.

***

ಒಂದು ಚಲನಚಿತ್ರ ಹೇಗಿರಬೇಕು ಎಂಬ ಪ್ರಶ್ನೆಗೆ, ಮತ್ತೆ ಮತ್ತೆ ನೋಡುವಂತಿರಬೇಕು ಎನ್ನುವುದೇ ಸಮರ್ಪಕ ಉತ್ತರ. ಒಂದು ಒಳ್ಳೆಯ ಚಿತ್ರವೆಂದರೆ, ನೋಡಿದ ಮೇಲೆ ಒಂದೆರಡು ದಿನವಾದರೂ, ಅದರ ಪಾತ್ರಗಳು, ಸನ್ನಿವೇಶಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಿರಬೇಕು. ಚಿತ್ರರಂಗದಲ್ಲಿ ಕಥೆಯೇ ನಿಜವಾದ ಹೀರೋ ಎಂಬ ಮಾತೊಂದಿದೆ. ಅದು ನಿಜವೂ ಹೌದು. ದುಡ್ಡಿದ್ದವರು ನೂರು ಕೋಟಿ, ಸಾವಿರ ಕೋಟಿ, ಐದು ಸಾವಿರ ಕೋಟಿ ಖರ್ಚು ಮಾಡಿ ಚಿತ್ರ ನಿರ್ವಿುಸಬಹುದು. ಆದರೆ, ಜನ ಯಾವತ್ತೂ ಸಾವಿರ ಕೋಟಿ ಬಂಡವಾಳ ಹಾಕಿದರೆ ಮಾತ್ರ ನಿಮ್ಮ ಚಿತ್ರ ನೋಡುತ್ತೇವೆ ಎಂದು ಕಂಡೀಷನ್ ಹಾಕಿರುವುದಿಲ್ಲ. ಜನರ ಷರತ್ತು ಒಂದೇ. ‘ಚೆನ್ನಾಗಿದ್ದರೆ ಖಂಡಿತ ನೋಡುತ್ತೇವೆ..’

ಸೆಟ್ಟೇರಿದ ದಿನದಿಂದ ಬಿಡುಗಡೆಯವರೆಗೆ ಸೂಪರ್​ಸ್ಟಾರ್ ಹೀರೋಗಳು, ಶತಕೋಟಿ ಚೆಲ್ಲುವ ನಿರ್ವಪಕರು, ಟ್ರೇಲರ್, ಟೀಸರ್ ಅದು, ಇದು ಎಂದು ಆರ್ಭಟಿಸಿಕೊಂಡು, ಅಬ್ಬರಿಸಿಕೊಂಡು ಬಂದು ಕೊನೆಗೆ ಸದ್ದಿಲ್ಲದೆ ಮಾಯವಾಗುವ ಚಿತ್ರಗಳ ನಡುವೆ, ಯಾವ ಸದ್ದುಗದ್ದಲವಿಲ್ಲದೆ ಒಳ್ಳೆಯ ಕಥೆ, ಒಳ್ಳೆಯ ಮನರಂಜನೆ ಕಾರಣಕ್ಕೆ ಜನರ ಮನ ಗೆದ್ದು ಯಶಸ್ವಿಯಾಗುವ ಚಿತ್ರಗಳು ಎಲ್ಲ ಕಾಲದಲ್ಲೂ ಇರುತ್ತವೆ. ‘ಕಾಂತಾರ’ ಚಿತ್ರ ಯಶಸ್ವಿಯಾಗಿದ್ದು ಇದೇ ರೀತಿ. ಕನ್ನಡದಲ್ಲಿ ಬಹಳ ಹಿಂದೆ ‘ಉಲ್ಟಾಪಲ್ಟಾ’ ಎಂಬ ಚಿತ್ರ ಬಂದಿತ್ತು. ರಮೇಶ್ ಅರವಿಂದ್ ದ್ವಿಪಾತ್ರದಲ್ಲಿದ್ದ, ಈ ಚಿತ್ರ ನಗೆಹಬ್ಬವಾಗಿತ್ತು. ಇತ್ತೀಚಿನ ‘ಸು ಫ್ರಂ ಸೋ’ ಚಿತ್ರವೂ ಅಷ್ಟೇ. ಕಥೆ ಸರಳವಾಗಿದ್ದರೂ, ನಿರೂಪಣೆಯಲ್ಲಿ ಹೊಸತನ, ಹಾಸ್ಯವೇ ಪ್ರಧಾನವಾಗಿದ್ದ ಚಿತ್ರವನ್ನು ನೋಡಿದವರು ನಕ್ಕುನಕ್ಕು ಗೆಲ್ಲಿಸಿದರು. ಹೀಗೆ ಕಥೆಯೇ ಪ್ರಧಾನವಾದ ಚಿತ್ರಗಳು ಕಡಿಮೆ ಖರ್ಚಿನಲ್ಲಿ ಹೆಚ್ಚು ಜನರನ್ನು ರಂಜಿಸಿರುವ ಉದಾಹರಣೆಗಳು ನೂರೆಂಟಿವೆ.

ಇತ್ತೀಚೆಗೆ ತೆರೆಕಂಡು ನಗೆಯ ಅಲೆಗಳನ್ನು ಎಬ್ಬಿಸಿರುವ, ತಮಿಳು ಚಿತ್ರ ‘ಮೊಧ ರಾತಿರಿ’ (ಮೊದಲ ರಾತ್ರಿ ಅಥವಾ ಮದುವೆಯ ರಾತ್ರಿ ಎಂದು ಕರೆಯೋಣ) ಈ ಸಾಲಿಗೆ ಸೇರುತ್ತದೆ. ಯುವ ನಿರ್ದೇಶಕ ರಾಜಾ ಕರುಪ್ಪಸಾಮಿ ಚೊಚ್ಚಲ ಪ್ರಯತ್ನದಲ್ಲೇ ಒಳ್ಳೆಯ ಚಿತ್ರವೊಂದನ್ನು ಕಟ್ಟಿಕೊಟ್ಟಿದ್ದಾರೆ. ಆರಂಭದಲ್ಲಿ ಪ್ರಸ್ತಾಪಿಸಿರುವ ಪ್ರಸಂಗಗಳು ಇದೇ ಚಿತ್ರದ ಕಥಾ ಎಳೆಗಳು.

ಹಾಗೆ ನೋಡಿದರೆ, ಹುಡುಗ ಒಲ್ಲದ ಮದುವೆ ಆಗುವುದು, ಹುಡುಗಿ ಮದುವೆಯ ಮೊದಲ ರಾತ್ರಿಯೇ ಹಳೆ ಪ್ರೀತಿಯ ವಿಚಾರವನ್ನು ಹೇಳಿಕೊಳ್ಳುವುದು, ಗಂಡ ತನ್ನ ಸಂತೋಷವನ್ನು ತ್ಯಾಗ ಮಾಡಿ ಹೆಂಡತಿಯನ್ನು ಪ್ರೀತಿಸಿದವನ ಜತೆ ಸೇರಿಸಲು ಮುಂದಾಗುವುದು.. ಇದೆಲ್ಲ ಚಿತ್ರರಂಗದಲ್ಲಿ ಹೊಸ ಕಥೆಗಳೇನೂ ಅಲ್ಲ. 1989ರಲ್ಲೇ ಬಿಡುಗಡೆಗೊಂಡಿದ್ದ ಕಾಶಿನಾಥ್​ರ ‘ಲವ್ ಮಾಡಿ ನೋಡು’ (ಈ ಚಿತ್ರ ಕೂಡ ಕೆ. ಭಾಗ್ಯರಾಜ್ ನಿರ್ದೇಶನದ ತಮಿಳುಚಿತ್ರದ ರಿಮೇಕ್) ಚಿತ್ರ ನಮ್ಮಲ್ಲಿ ಅನೇಕರಿಗೆ ನೆನಪಿದೆ. ಹಾಮೋನಿಯಂ ವಾದಕ ಮಂಗಳೂರು ಮಂಜುನಾಥನನ್ನು ಪ್ರೀತಿಸುವ ಸಂಧ್ಯಾಳ ಮದುವೆ ಅಜ್ಜನ ಬಲವಂತದಿಂದ ವಿಧುರ ಡಾ. ಆನಂದ್ ಜತೆ ನಡೆಯುತ್ತದೆ. ಮದುವೆಯ ಮೊದಲ ರಾತ್ರಿ ಸಂಧ್ಯಾ ಆತ್ಮಹತ್ಯೆಗೆ ಯತ್ನಿಸುತ್ತಾಳೆ. ಆಗ ಸಂಧ್ಯಾಳ ಪ್ರೀತಿಯ ವಿಚಾರ ತಿಳಿದ ಡಾ. ಆನಂದ್, ಪತ್ನಿಯನ್ನು ಪ್ರೇಮಿಯ ಜತೆ ಸೇರಿಸಲು ಪ್ರಯತ್ನಿಸುತ್ತಾನೆ. ‘ಮೊಧ ರಾತಿರಿ’ ಚಿತ್ರದಲ್ಲೂ ಅಷ್ಟೇ. ಪ್ರಸ್ತದ ಕೋಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಪತ್ನಿಯ ನಡವಳಿಕೆಯಿಂದ ಆಘಾತಗೊಳ್ಳುವ ಕಥಾ ನಾಯಕ ಮರುತ್ತು, ‘ನಾನು ಮನಸ್ಸು ಬದಲಾಯಿಸುವ ಮೊದಲೇ ಇಲ್ಲಿಂದ ಹೊರಟುಹೋಗು’ ಎಂದು ಪತ್ನಿ ಮುತ್ತುಳಿಗೆ ಹೇಳುತ್ತಾನೆ. ಆದರೆ, ಪ್ರೇಮಿಗಾಗಿ ತನ್ನನ್ನು ತ್ಯಾಗ ಮಾಡಲು ಮುಂದಾದವಳನ್ನು ಕಗ್ಗತ್ತಲ ರಾತ್ರಿಯಲ್ಲಿ ಒಬ್ಬಳನ್ನೇ ಮನೆಯಿಂದ ಹೊರಹಾಕಲು ಮನಸ್ಸು ಒಪ್ಪದೇ, ಜತೆಯಲ್ಲಿ ತಾನೂ ಹೋಗುತ್ತಾನೆ. ಊರಾಚೆಯ ಪಾಳು ಬಿದ್ದ ದೇಗುಲದಲ್ಲಿ ಗಂಡನ ಸಮ್ಮುಖದಲ್ಲಿ ಪ್ರೇಮಿಗಳು ಸಂಧಿಸುತ್ತಾರೆ. ‘ಎಲ್ಲಾದರೂ ದೂರ ಸುಖವಾಗಿ ಬಾಳಿ’ ಎಂದು ಗಂಡ ಹಾರೈಸುತ್ತಾನೆ. ‘ಇಲ್ಲಿಂದ ದೂರ ಹೊರಟುಹೋಗೋಣ, ತಕ್ಷಣ ಮನೆ ಮಾಡಬೇಕು, ನಿನಗೊಂದು, ನನಗೊಂದು ಕೆಲಸ ಹುಡುಕಬೇಕು, ಉಟ್ಟ ಬಟ್ಟೆಯಲ್ಲಿ ಓಡಿಬಂದಿದ್ದೇನೆ. ಬಟ್ಟೆ ಖರೀದಿಸಬೇಕು. ಇದಕ್ಕೆಲ್ಲ ಖರ್ಚಾಗುತ್ತದೆ. ಹಣದ ವ್ಯವಸ್ಥೆ ಮಾಡಿಕೊಂಡಿದ್ದೀಯಾ’ ಎಂದು ಮುತ್ತು, ಪ್ರಿಯಕರ ನಿತೀಶ್ ಬಳಿ ಕೇಳುತ್ತಾಳೆ. ಆದರೆ, ಪ್ರಿಯಕರ ಹರಿದ ಅಂಗಿ ಜೇಬು ತೋರಿಸುತ್ತಾನೆ. ಸ್ನೇಹಿತರ ಬಳಿ 50 ಸಾವಿರ ರೂ. ಸಾಲ ಕೇಳಿದರೆ, 500 ರೂ. ಕೊಟ್ಟಿರುತ್ತಾರೆ. ‘ನೀನು ಲವ್ ಮಾಡಿ ಮದುವೆ ಆಗುವುದಕ್ಕೆ ನಾವ್ಯಾಕೆ ಹಣ ಕೊಡಬೇಕು? ಸ್ವಂತ ಸಂಪಾದಿಸುವ ಯೋಗ್ಯತೆ ಇಲ್ಲದ ಮೇಲೆ ನಿನಗ್ಯಾಕೆ ಪ್ರೀತಿ, ಮದುವೆ’ ಎಂದು ಸ್ನೇಹಿತರೇ ದುಷ್ಮನ್​ಗಳಂತೆ ಅಪಹಾಸ್ಯ ಮಾಡಿರುತ್ತಾರೆ. ಅಕೌಂಟ್​ನಲ್ಲಿದ್ದ 3000 ರೂ. ಪೆಟ್ರೋಲಿಗೆ, ದಾರಿಯಲ್ಲಿ ಬೈಕ್ ಪಂಚರ್ ಆದಾಗ ಟೈರ್ ಬದಲಾಯಿಸುವುದಕ್ಕೆ ಖರ್ಚಾಗಿರುತ್ತದೆ. ‘ನನ್ನ ಬಳಿ 10 ರೂ. ಕೂಡ ಇಲ್ಲ. ನಾನು ನಿನ್ನನ್ನು ಜಗತ್ತಿನಲ್ಲಿ ಎಲ್ಲರಿಗಿಂತ ಹೆಚ್ಚು ಪ್ರೀತಿಸುತ್ತೇನೆ. ಆದರೆ, ನಿನ್ನನ್ನು ಸುಖವಾಗಿ ನೋಡಿಕೊಳ್ಳುವ ಶಕ್ತಿ, ಯೋಗ್ಯತೆ ನನಗಿಲ್ಲ. ಹಾಗಾಗಿ ನೀನು ಗಂಡನ ಜತೆಯೇ ಸುಖವಾಗಿರು, ನನ್ನನ್ನು ಕ್ಷಮಿಸು’ ಎಂದು ಆ ಅಪರಾತ್ರಿ, ತನ್ನನ್ನು ನಂಬಿ ಓಡಿಬಂದವಳಿಗೆ ಕೈಕೊಟ್ಟು ಪ್ರೇಮಿ ಓಡಿಹೋಗುತ್ತಾನೆ. ಮುಂದೇನಾಗುತ್ತದೆ? ಮುತ್ತುಸೆಲ್ವಿ ಗಂಡನ ಜತೆ ಮರಳುತ್ತಾಳಾ? ಪ್ರೇಮಿಗಳು ಒಂದಾಗುತ್ತಾರಾ? ಆ ರಾತ್ರಿ ಬೆಳಗಾಗುವಷ್ಟರಲ್ಲಿ ಮರುತ್ತು, ಮುತ್ತು, ನಿತೀಶ್ ಜೀವನದಲ್ಲಿ ಏನೆಲ್ಲ ಆಗುತ್ತದೆ?

ನವದಂಪತಿ ಮೊದಲ ರಾತ್ರಿಯೇ ಪಾಳು ದೇಗುಲದಲ್ಲಿ ಜೀವನದ ಕವಲುದಾರಿಯಲ್ಲಿರುವಾಗ ಅತ್ತ ಮನೆಯಲ್ಲಿ ಗಂಡಿನ ಕಡೆಯವರು, ಹೆಣ್ಣಿನ ಕಡೆಯವರು, ಬೀಗರ ನಡುವೆ ನಾಟಕೀಯ ಬೆಳವಣಿಗೆಗಳು ರಾತ್ರಿಪೂರ್ತಿ ನಡೆಯುತ್ತವೆ. ಬೆಳಗಾಗುವ ಹೊತ್ತಿಗೆ ಪತಿ-ಪತ್ನಿ-ಪ್ರೇಮಿಯ ಜೀವನದಲ್ಲಿ ಏನೇನೆಲ್ಲ ಆಗುತ್ತಿರುವಾಗ ಪ್ರೇಕ್ಷಕ ನಗೆಯ ಕಡಲಲ್ಲಿ ವಿಹರಿಸುತ್ತಿರುತ್ತಾನೆ. ಮೊದಲ ಬಾರಿ ನಾಯಕರಾಗಿ ನಟಿಸಿರುವ ರಿಷಿಕಾಂತ್, ಸಂಯಮ ಹಾಗೂ ಗಂಭೀರ ಭಾವಾಭಿನಯದಿಂದ ಪಾತ್ರಕ್ಕೆ, ಚಿತ್ರಕ್ಕೆ ತೂಕ ತಂದುಕೊಟ್ಟರೆ, ನಾಯಕಿಯಾಗಿ ಅನಿಷ್ಮಾ ಅನಿಲ್​ಕುಮಾರ್ ಪ್ರೀತಿ, ದುಃಖ, ಸಿಟ್ಟು, ಹತಾಶೆ, ಅಸಹಾಯಕತೆಗಳನ್ನು ಅನುಭವಿಸಿ ಅಭಿನಯಿಸಿದ್ದಾರೆ. ಬೇಜವಾಬ್ದಾರಿ ಪ್ರೇಮಿಯಾಗಿ ನಿರ್ದೇಶಕ ರಾಜಾ ಕರುಪ್ಪಸಾಮಿಯೇ ಕಾಣಿಸಿಕೊಂಡಿರುವುದು ವಿಶೇಷ. ಭಾನುಪ್ರಿಯ, ಭಗವತಿ ಪೆರುಮಾಳ್ ಮೊದಲಾದ ಪ್ರಮುಖರು ಪಾತ್ರಗಳಿಗೆ ಶಕ್ತಿ ತುಂಬಿದ್ದಾರೆ.

ನಿರ್ದೇಶಕ ರಾಜಾ ಕರುಪ್ಪಸಾಮಿ ದೃಶ್ಯದಿಂದ ದೃಶ್ಯಕ್ಕೆ ಹೊಸದೊಂದು ಟ್ವಿಸ್ಟ್, ಕಾಮಿಡಿ, ಸಸ್ಪೆನ್ಸ್​ನ ಟಚ್ ಕೊಡುವ ಮೂಲಕ ಕುತೂಹಲ ವಿಸ್ತರಿಸಿಕೊಂಡು ಹೋಗುತ್ತಾರೆ. ವಿಶೇಷವೆಂದರೆ, ಚಿತ್ರದಲ್ಲಿ ಯಾವ ಪಾತ್ರವೂ ಸುಮ್ಮನೆ ಹಾಗೆ ಬಂದು ಹೀಗೆ ಹೋಗುವುದಿಲ್ಲ. ಪ್ರತಿಯೊಂದು ಪಾತ್ರಕ್ಕೂ ಮಹತ್ವವಿದೆ. ಯಾವ ದೃಶ್ಯವೂ ಎಳೆದಂತೆ ಭಾಸವಾಗುವುದಿಲ್ಲ. ಪಾತ್ರಗಳು ಅಳುವಾಗ, ನಗುವಾಗ, ಕೂಗಾಡಿ, ಹೊಡೆದಾಡಿಕೊಳ್ಳುವಾಗ ಪ್ರೇಕ್ಷಕ ನಗೆಗಡಲಲ್ಲಿ ತೇಲಾಡುತ್ತಿರುತ್ತಾನೆ. ವಿಶೇಷವೆಂದರೆ, ಪ್ರೇಮಿ ನಿತೀಶ್​ನ ಇಬ್ಬರು ಸ್ನೇಹಿತರು ಕೂಡ ಒಮ್ಮೆ ಒಂದು ಹೋಗುವ ದೃಶ್ಯಕ್ಕೆ ಸೀಮಿತರಾಗದೆ, ಉದ್ದಕ್ಕೂ ಗೆಳೆಯನ ಆತ್ಮಸಾಕ್ಷಿಯ ರೂಪದಲ್ಲಿ ಪ್ರಾಕ್ಟಿಕಲ್ ಬದುಕಿನ ದರ್ಶನ ಮಾಡಿಸುವ ಪ್ರಯೋಗ ಗಮನ ಸೆಳೆಯುತ್ತದೆ. ಚಲನಚಿತ್ರಗಳಿಗೀಗ ಭಾಷೆಯ ಗಡಿಯಿಲ್ಲ. ಯಾವುದೇ ಭಾಷೆಯಲ್ಲಿ ನಿರ್ವಣಗೊಂಡರೂ, ಒಟಿಟಿಯಲ್ಲಿ ನಮ್ಮ ಆಯ್ಕೆಯ ಭಾಷೆಯಲ್ಲಿ ಡಬ್ಬಿಂಗ್ ಲಭ್ಯವಿರುವ ಈ ಕಾಲಘಟ್ಟದಲ್ಲಿ ‘ಮೊಧ ರಾತಿರಿ’ ಒಂದು ಒಳ್ಳೆಯ ಪ್ರಯತ್ನವಾಗಿ ಗಮನ ಸೆಳೆಯುತ್ತದೆ.

-(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)