ಅಂಕಣ

ಅತೃಪ್ತಿಯೇ ಬಡತನ, ತೃಪ್ತಿಯೇ ಸಿರಿತನ; ಬದುಕು ಹಸನಾಗುವುದಕ್ಕೆ ಇದೇ ಸೂತ್ರ

ಸಂಸ್ಕೃತ ಭಾಷೆಯಲ್ಲಿ ಹೀಗೊಂದು ಸುಭಾಷಿತವಿದೆ ‘ಅತೃಪ್ತಿರೇವ ದಾರಿದ್ರ್ಯಂ: ತೃಪ್ತಿರೇವ ಧನಂ ಮಹತ್’ ಅರ್ಥಾತ್ ಆಧಾರದಲ್ಲಿ ಯಾರಲ್ಲಿ ಅಸಂತೃಪ್ತಿ ಇದೆಯೋ ಆತನೇ ಬಡವ ಯಾರಲ್ಲಿ ಸಂತೃಪ್ತಿ ಇದೆಯೋ ಆತ ಧನವಿಲ್ಲದಿದ್ದರೂ ಸಿರಿವಂತ.

ಈ ಮಾತನ್ನು ಪುಷ್ಟೀಕರಿಸುವ ಪುಟ್ಟ ಕತೆಯೊಂದು ಹೀಗಿದೆ. ಒಂದು ಊರಿನ ಧನಿಕರೆಲ್ಲಾ ಸೇರಿ ಒಂದು ದೇವಸ್ಥಾನವನ್ನು ನಿರ್ವಿುಸುತ್ತಿದ್ದರು. ಅದೇ ಊರಿನಲ್ಲಿ ಬಡ ಅಜ್ಜಿಯೊಬ್ಬಳು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಳು. ಈಕೆ ದಿನನಿತ್ಯ ಸೂರ್ಯೋದಯಕ್ಕೆ ಮುನ್ನವೇ ತಪ್ಪದೇ ದೇವಸ್ಥಾನದ ಸುತ್ತಮುತ್ತಲ ಭಾಗವನ್ನು ಸ್ವಚ್ಛ ಮಾಡುತ್ತಿದ್ದಳು. ಇದನ್ನು ಗಮನಿಸಿದ ಭಗವಂತ ದರ್ಶನ ನೀಡಿ, ‘ಅಜ್ಜಿ ಏಕೆ ನೀನು ಈ ಕೆಲಸವನ್ನು ಯಾರಿಗೂ ಗೊತ್ತಾಗದ ಹಾಗೆ ಮಾಡಿ ಹೋಗುತ್ತಿರುವೆಯಲ್ಲ? ಎಲ್ಲರೂ ಇರುವಾಗ ಏಕೆ ಮಾಡುತ್ತಿಲ್ಲ?’ ಎಂದು ಕೇಳುತ್ತಾನೆ. ಅದಕ್ಕೆ ಅಜ್ಜಿ ‘ನಾನು ಯಾರನ್ನೂ ಮೆಚ್ಚಿಸಲು ಈ ಕೆಲಸ ಮಾಡುತ್ತಿಲ್ಲ, ನಮ್ಮನ್ನು ಸದಾ ಕಾಯುತ್ತಿರುವ ನಿನ್ನನ್ನು ಹಾಗೂ ನಿನ್ನ ಅಂಶವೇ ಆದ ನನ್ನ ಅಂತರಾತ್ಮವನ್ನು ಮೆಚ್ಚಿಸಲು ಮಾಡುತ್ತಿರುವೆ. ಇದರಿಂದ ನನಗೆ ಪ್ರಾಪ್ತವಾಗುವ ಆತ್ಮಾನಂದ ಸಂತೃಪ್ತಿಯ ಎದುರು ಯಾವ ಸಂಪತ್ತೂ ಇಲ್ಲ!’

ಅಜ್ಜಿಯ ಮಾತಿನಿಂದ ಸುಪ್ರಸನ್ನನಾದ ಭಗವಂತ ಹೇಳುತ್ತಾನೆ, ‘ಅಜ್ಜಿ ನಿನ್ನ ಈ ಪ್ರತಿಫಲಾಪೇಕ್ಷೆ ಇಲ್ಲದ, ಪ್ರಚಾರವಿಲ್ಲದ ನಿಷ್ಕಾಮ ಸೇವೆಯಿಂದ ನಾನು ಪ್ರಸನ್ನನಾಗಿದ್ದೇನೆ. ಈಗ ನಿನಗೆ ಬೇಕಾದುದನ್ನು ಕೇಳಿಕೋ ದಯಪಾಲಿಸುತ್ತೇನೆ’. ಅಜ್ಜಿ ಹೇಳಿದಳು, ‘ದೇವ ನೀನು ಏನೆಲ್ಲಾ ಕೊಟ್ಟಿರುವೆ, ಕಣ್ಣು,ಕಿವಿ, ನಾಲಿಗೆ, ಜತೆಗೆ, ದುಡಿದು ತಿನ್ನಲು ಕೈಕಾಲು... ಎಲ್ಲವನ್ನೂ ಕೊಟ್ಟಿದ್ದೀಯಾ. ಇಷ್ಟೆಲ್ಲಾ ಇದ್ದಮೇಲೆ, ಕಾಯಕ ಮಾಡಿ ಬದುಕಿಕೊಂಡಿರಲು ಇನ್ನೇನು ಬೇಕು ನನಗೆ? ಇಷ್ಟಕ್ಕೂ ನಿನಗೆ ಏನಾದರೂ ಕೊಡಬೇಕೆಂದಿದ್ದರೆ ದುಡಿದು ತಿನ್ನುವ ಮನಸ್ಸನ್ನು ಹಾಗೂ ಕೊನೆಯುಸಿರು ಇರುವ ತನಕ ದುಡಿಯಲು ಬೇಕಾದ ಶಕ್ತಿ ಸಾಮರ್ಥ್ಯವನ್ನು ಕೊಡು ಅಷ್ಟೇ ಸಾಕು’. ಅಜ್ಜಿಯ ಮಾತುಗಳನ್ನು ಕೇಳಿ, ಮತ್ತೆ ಸುಪ್ರೀತನಾದ ಭಗವಂತ ‘ತಥಾಸ್ತು’ ಎಂದು ಹೇಳುತ್ತಾ ಅದೃಶ್ಯನಾದ.

ಈ ಪುಟ್ಟ ಕತೆಯಲ್ಲಿ ಹಲವಾರು ನೀತಿಗಳು ಅನಾವರಣಗೊಂಡಿವೆ. ಮುಪ್ಪಾಗೋದು ಬರೇ ವಯಸ್ಸಿನಿಂದ ಮಾತ್ರವಲ್ಲ; ದುಡಿದು ತಿನ್ನಲು ಬೇಕಾದ ಉತ್ಸಾಹದ ಲವಲವಿಕೆಯ ಚಿಲುಮೆ ಬತ್ತಿದಾಗ ಕೂಡ. ದುಡಿಯದೇ ಉಣ್ಣುವ ಅನ್ನ ಕದ್ದ ಅನ್ನವನ್ನು ತಿಂದಂತೆ ಎಂಬ ಮಾತಿದೆ. ಈ ಸತ್ಯವನ್ನರಿತ ಅಜ್ಜಿ ದುಡಿದು ಗಳಿಸಿದ ಹಣದಿಂದಲೇ, ತನ್ನ ಜೀವನವನ್ನು ಸಾಗಿಸುತ್ತಿದ್ದ ಸ್ವಾಭಿಮಾನಿ ಮಹಿಳೆಯಾಗಿದ್ದಳು. ಅವಳದು ಪ್ರದರ್ಶನದ ಬದುಕಾಗಿರಲಿಲ್ಲ, ನಿದರ್ಶನದ ಬದುಕಾಗಿತ್ತು. ಯಾರಾದರೂ ನೋಡಲೆಂದು ನೋಡಿ ಮೆಚ್ಚಿ ಹೊಗಳಲೆಂದು ಆಕೆ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿರಲಿಲ್ಲ.

ಅಡವಿಯಲ್ಲಿ ಅರಳುವ ಹೂವಿನ ಸೌಂದರ್ಯವನ್ನು ಪ್ರಶಂಸಿಸಲು ಯಾರು ಇಲ್ಲವೆಂದ ಮಾತ್ರಕ್ಕೆ ಹೂಗಳು ಅರಳೋದನ್ನು ನಿಲ್ಲಿಸೋದಿಲ್ಲ. ಅಂತೆಯೇ ಗುರುತಿಸಿ ಹೊಗಳುವವರು ಇಲ್ಲವೆಂದ ಮಾತ್ರಕ್ಕೆ ಕರ್ಮ ಯೋಗಿಗಳು ತಮ್ಮ ಕರ್ವನುಷ್ಠಾನಗಳನ್ನು ನಿಲ್ಲಿಸಲಾರರು. ಈ ಸತ್ಯವನ್ನರಿತೇ ಡಿ.ವಿ.ಜಿಯವರು ‘ಇಳೆಯಿಂದ ಮೊಳಕೆಯಾಗೆವಂದು ತಮಟೆಗಳಿಲ್ಲ; ಫಲಮಾಗುವಂದು ತುತ್ತೂರಿ ದನಿಯಲ್ಲ; ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲಲ; ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ’ ಎಂಬುದಾಗಿ ಬರೆದಿಲ್ಲವೇ?

ನಾವು ಗೈದ ಕೆಲಸಗಳಿಂದ ಜನರಿಗೆ ಮೆಚ್ಚುಗೆ ಸಿಕ್ಕಿದರೆ, ಅದು ಮಾನ್ಯತೆ, ಆದರೆ, ನಾವು ಗೈದ ಕೆಲಸಗಳಿಂದ ನಮಗೇ ಆತ್ಮಾನಂದವಾದರೆ; ಅದು ಧನ್ಯತೆ. ಇದೇ ಅರ್ಥವನ್ನು ರಾಷ್ಟ್ರಕವಿ ಕುವೆಂಪುರವರು ಕೈ ಚಪ್ಪಾಳೆಗಳಿಗೆ, ಅಗ್ಗದ ಸ್ತುತಿಗಳಿಗೆ ಬಿರುದು ಬಾವಲಿಗಳಿಗೆ ಮಾರು ಹೋಗದೆ, ತಾನು ಹಿಡಿದ ಕೆಲಸವನ್ನು ಪಟ್ಟು ಹಿಡಿದು ನಿಯತ್ತಾಗಿ ನಿಶ್ಶಬ್ದವಾಗಿ ಮಾಡುವಾತನೇ ನಿಜವಾದ ಕರ್ಮಯೋಗಿ ಎಂಬ ಮಾತುಗಳಲ್ಲಿ ತಿಳಿಸಿದರು.

ಡಿ.ವಿ.ಜಿಯವರು ತಮ್ಮ ಕಗ್ಗದಲ್ಲಿ ‘ತರಚು ಗಾಯವ ಕೆರೆದು, ಹುಣ್ಣನಾಗಿಪ ಕಪಿಯಂತೆ, ಕೊರತೆಯೊಂದನು ನೀನು ನೆನೆನೆನೆದು, ಕೆರಳಿ, ಕೊರಗಿ ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ, ನರಳುವುದು ಬದುಕೇನೋ ಮಂಕುತಿಮ್ಮ?’ ಎಂಬುದಾಗಿ ತಿಳಿಸಿದ್ದಾರೆ. ಅಂದರೆ, ಸಂತೃಪ್ತ ಮನಸ್ಸಿಗಿಂತ ದೊಡ್ಡ ಸಂಪತ್ತು ಜೀವನದಲ್ಲಿ ಬೇರೊಂದಿಲ್ಲ. ನಮ್ಮಲ್ಲಿ ಸ್ವಲ್ಪವೇ ಇದ್ದಾಗ, ಇನ್ನೂ ಸ್ವಲ್ಪ ಇದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸುತ್ತದೆ. ಮುಂದೆ ಅದೂ ಸಿಕ್ಕಾಗ ಇನ್ನಷ್ಟರ ಆಸೆ ಚಿಗುರುತ್ತದೆ. ಆದರೆ ಎಲ್ಲವನ್ನು ಕಳೆದುಕೊಂಡಾಗ, ಮೊದಲಿದ್ದ ಸ್ವಲ್ಪವೇ ಸಾಕಿತ್ತು ಎಂದೆನಿಸುತ್ತದೆ. ಜೀವನದಲ್ಲಿ ಏನನ್ನು ಪಡೆದುಕೊಂಡಿದ್ದೇವೆಯೋ ಅಷ್ಟರಲ್ಲಿ ತೃಪ್ತಿಪಟ್ಟುಕೊಂಡರೆ, ಅತ್ಯಲ್ಪವೂ, ಅತುಲೈಶ್ವರ್ಯವೇ ಸರಿ. ಜೀವನದಲ್ಲಿ ಆಸೆಗಳೇ ದುಃಖಕ್ಕೆ ಮೂಲ ಕಾರಣವೆಂದು ಭಗವಾನ್ ಬುದ್ಧ ಹೇಳಿದ.

ಯಾರಿಗೆ ಯಾವುದಕ್ಕೆ ಆಸೆಗಳಿಲ್ಲ? ಹೂವಿನ ಮೊಗ್ಗಿಗೂ ಅರಳುವ ಆಸೆ; ಅರಳಿದ ಹೂವಿಗೆ ಪರಿಮಳವ ಬೀರುವ ಆಸೆ; ಬೀರಿದ ಪರಿಮಳಕೆ ಎಲ್ಲರ ಮೂಗಿನೊಳಗೆ ತೂರುವ ಆಸೆ; ತೂರಿ ಒಳಗೆ ಹೋದ ಪರಿಮಳಕೆ ಮನವನ್ನು ಏರುವ ಆಸೆ; ಏರಿದ ಪರಿಮಳಕ್ಕೆ ಮೊಗದಲ್ಲಿ ತೋರಿಸಿಕೊಳ್ಳುವ ಆಸೆ! ಹೀಗೆ ಜೀವನದಲ್ಲಿ ಆಸೆಗಳು, ತಲೆಕೂದಲು/ ಉಗುರುಗಳಿದ್ದಂತೆ, ಕತ್ತರಿಸಿದಷ್ಟು ಬೆಳೆಯುತ್ತಿರುತ್ತವೆ. ಆದರೆ ಆಸೆಗೆಳು ಅತಿ ಆಸೆ, ದುರಾಸೆಗಳಾಗಬಾರದು. ಕಾರಣ ದುರಾಸೆಗಳಿದ್ದಲ್ಲಿ ತೃಪ್ತಿ ಇಲ್ಲ; ತೃಪ್ತಿ ಇಲ್ಲದಿದ್ದಲ್ಲಿ ಸಂತಸವಿಲ್ಲ.

ಆಸೆ ಎಂಬ ಬೀಜಕ್ಕೆ ಬೇಗನೇ ಬೆಳೆದು ಮರವಾಗುವ ಅವಸರ. ಇದುವೇ ದುರಾಸೆ. ಹೀಗಾಗದಂತೆ ಎಚ್ಚರ ವಹಿಸಿಕೊಳ್ಳಬೇಕು. ದುರಾಸೆಗಾಳಾದವನು ಲೋಕಕ್ಕೆ ಆಳು; ದುರಾಸೆಯ್ನನಾಳುವವನಿಗೆ ಲೋಕವೇ ಆಳು ಎಂಬ ಇನ್ನೊಂದು ನುಡಿಯಿದೆ. ಒಟ್ಟಿನಲ್ಲಿ ಏನೂ ಇಲ್ಲದವ ಬಡವನಲ್ಲ; ಇನ್ನೂ ಬೇಕೆನ್ನುವವನೇ ನಿಜವಾದ ಬಡವ. ನಮ್ಮ ಬೇಡಿಕೆಗಳು ಹೆಚ್ಚಾದಂತೆ ನಾವು ಬಡವರಾಗುತ್ತಾ ಹೋಗುತ್ತೇವೆ. ಶ್ರೀಮಂತರಾಗುವ ಸುಲಭ ಉಪಾಯವೆಂದರೆ ನಮ್ಮ ಬೇಕುಗಳಿಗೆ ಬ್ರೇಕ್ ಹಾಕೋದು. ಅಜ್ಜಿ ಈ ಮಾತನ್ನೇ ಸಾಬೀತು ಪಡಿಸಿದಳು. ಅಜ್ಜಿಯ ಕತೆಯಿಂದ ಪಡೆಯಬೇಕಾದ ಸಂದೇಶವಿಷ್ಟೆ... ಒಮ್ಮೆ ಅರಳಿದ ಹೂ ಮತ್ತೆ ಅರಳದು; ಒಮ್ಮೆ ಉರುಳಿದ ಮರ ಮತ್ತೆ ಏಳದು; ಅಂತೆಯೇ ಒಮ್ಮೆ ತೆರಳಿದ ಜೀವ ಮರಳಿಬಾರದು ಎಂಬ ಮಾತು ದಿಟವಾಗಿರುವಾಗ ಜೀವನವನ್ನು ಸಾರ್ಥಕಗೊಳಿಸೋದೇ ಬದುಕುವ ಕಲೆ. ನಮ್ಮ ಜೀವನ ಸಾರ್ಥಕವಾಗೋದು ಸಾಯೋದಕ್ಕೆ ಮುನ್ನ ನಾನು ಕೂಡ ಈ ಪ್ರಪಂಚಕ್ಕೆ ಏನನ್ನಾದರೂ ಒಳ್ಳೇದನ್ನ ಕೊಟ್ಟು ಹೋಗಬೇಕು; ಮಾಡಿ ಹೋಗಬೇಕು ಎಂಬ ಆಲೋಚನೆ ಬಂದು, ನಾವು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದಾಗ ಮಾತ್ರ!