ಅಂಕಣ

ಪಿಇಎಸ್​ನ ಸೆಟಲೈಟ್ ಸಾಧನೆ; ವಿವಿ ಪರಿಶ್ರಮದ ಫಲವಾಗಿ ಉಪಗ್ರಹ ನಿರ್ಮಾಣ

Webdesk - Ravikanth

ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ತಂಡದ ಪರಿಶ್ರಮದ ಫಲವಾಗಿ ಉಪಗ್ರಹ ನಿರ್ಮಾಣವಾಗಿದೆ. ಮೊದಲ ಉಪಗ್ರಹ ನಿರ್ವಿುಸಿ ಯಶಸ್ವಿಯಾದ ಪಿಇಎಸ್ ವಿಶ್ವವಿದ್ಯಾಲಯ ಇದೀಗ 2ನೇ ಉಪಗ್ರಹವನ್ನು ರೂಪಿಸಿ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.

| ದೇವರಾಜ್ ಕನಕಪುರ

ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್ ವಿಶ್ವವಿದ್ಯಾಲಯ ಯಾವಾಗಲೂ ಆವಿಷ್ಕಾರದಲ್ಲಿ ಮುಂದೆ. 2016ರಲ್ಲಿ ಪೈ-ಸ್ಯಾಟ್ ಎಂಬ ಉಪಗ್ರಹ ನಿರ್ಮಾಣ ಮಾಡಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಡಿಆರ್​ಡಿಒ ಅನುದಾನ ನೀಡಿ ತಮಗೊಂದು ಉಪಗ್ರಹ ನಿರ್ವಿುಸುವಂತೆ ಮನವಿ ಮಾಡಿತ್ತು. 2 ವರ್ಷಗಳ ಪರಿಶ್ರಮದಿಂದ ಪಿಇಎಸ್ ವಿವಿಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ತಂಡ ‘ಆರ್-ಸ್ಯಾಟ್’ (ಸಿಂಧುನೇತ್ರ) ಉಪಗ್ರಹ ನಿರ್ವಿುಸಿದೆ. ಇದನ್ನು ಫೆ. 28ರಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿದ್ದು ಯಶಸ್ವಿಯಾಗಿ ಕಕ್ಷೆ ತಲುಪಿದೆ. ಇದು ಪಿಇಎಸ್ ವಿವಿ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು.

ಇಸ್ರೋ 53ನೇ ಉಪಗ್ರಹ ಉಡಾವಣಾ ವಾಹನ ಪಿಎಸ್​ಎಲ್​ವಿ-ಸಿ51 ಬ್ರೇಸಿಲ್​ನ ಪ್ರಾಥಮಿಕ ಉಪಗ್ರಹ ಅಮೆಜೋನಿಯಾ-1 ಮತ್ತು ಪಿಇಎಸ್​ನ ಆರ್-ಸ್ಯಾಟ್ ಸೇರಿ ಇತರ 18 ಸಣ್ಣ ಉಪಗ್ರಹ ಗಳನ್ನು ಹೊತ್ತು ಭಾನುವಾರ ಬೆಳಗ್ಗೆ 10.24ಕ್ಕೆ ನಭಕ್ಕೆ ಹಾರಿದೆ.

ಸಿಂಧುನೇತ್ರ ಉಡಾವಣೆ: ಪಿಇಎಸ್ ವಿವಿಯ ಅಧ್ಯಾಪಕರ ತಂಡ, ಡಿಆರ್​ಡಿಒ ಸಹಯೋಗದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ಆರ್-ಸ್ಯಾಟ್​ಗೆ ಅಧಿಕೃತವಾಗಿ ‘ಸಿಂಧುನೇತ್ರ’ ಎಂದು ಹೆಸರಿಡಲಾಗಿದೆ. ಅದು ಉಡಾವಣೆಗೊಂಡ ಬಳಿಕ 11.15ಕ್ಕೆ ಕಕ್ಷೆ ಸೇರಿದ್ದು, ಮಧ್ಯಾಹ್ನ 1.15ಕ್ಕೆ ಇದರ ಸಿಗ್ನಲ್ ದೊರಕಿದೆ ಎನ್ನುತ್ತಾರೆ ತಂಡದ ಮಾರ್ಗದರ್ಶಕರಾದ ಪಿಇಎಸ್​ನ ಕ್ರೂಸಿಬಲ್ ಆಫ್ ರಿಸರ್ಚ್ ಅಂಡ್ ಇನೋವೇಷನ್ ಕೇಂದ್ರದ (ಕೋರಿ) ನಿರ್ದೇಶಕ ಪ್ರೊ. ಸಾಂಬಶಿವರಾವ್.

ನಿರ್ಮಾಣ ಹೇಗೆ?: 15 ವಿದ್ಯಾರ್ಥಿಗಳ ತಂಡ 2 ವರ್ಷ ಶ್ರಮಿಸಿ ಈ ಉಪಗ್ರಹ ರೂಪಿಸಿದೆ. ವಿನ್ಯಾಸ ಮತ್ತು ಉಪಕರಣಗಳ ಅವಳಡಿಕೆಗೆ ಡಿಆರ್​ಡಿಒ ಒಪ್ಪಿಗೆ ಪಡೆದು ನಿರ್ಮಾಣ ಮಾಡಿದೆ. ಈಗಾಗಲೇ ಹಲವಾರು ಬಾರಿ ಪರೀಕ್ಷಾರ್ಥ ಉಡಾವಣೆಗೆ ಒಳಪಡಿಸಿ ಅಂತಿಮ ಉಡಾವಣೆಗೆ ಡಿಆರ್​ಡಿಒಗೆ ಹಸ್ತಾಂತರ ಮಾಡಿತ್ತು.

ಸಿಂಧುನೇತ್ರ ವಿಶೇಷ: ಬಂದರುಗಳಲ್ಲಿ ಬರುವ ಹಡಗುಗಳ ಮೇಲೆ ನಿಗಾ ವಹಿಸುವುದು ಆರ್-ಸ್ಯಾಟ್ ಪ್ರಮುಖ ಕಾರ್ಯ. ಸಾಮಾನ್ಯವಾಗಿ ವಿಮಾನಗಳ ಮಾಹಿತಿ ನೀಡಲು ಇರುವ ರಡಾರ್ ರೀತಿಯಲ್ಲೇ ಇದು ಸಹ ಕಾರ್ಯನಿರ್ವಹಿಸಲಿದ್ದು, 500 ಕಿ.ಮೀ. ದೂರದಲ್ಲಿ ಬರುವಂತಹ ಹಡಗುಗಳ ಮಾಹಿತಿಯನ್ನು ತಕ್ಷಣ ಡಿಆರ್​ಡಿಒಗೆ ಒದಗಿಸುತ್ತದೆ. ಇದರ ತೂಕ 15 ಕಿಲೋ. ಸುತ್ತಳತೆ 300 ಮಿಮೀ.; ಮೂರು ಸೋಲಾರ್ ಪ್ಯಾನೆಲ್​ಗಳನ್ನು ಹೊಂದಿದೆ. ಬ್ಯಾಟರಿ, ಆಂಟೆನಾ ಸೇರಿದಂತೆ ಹಲವು ಉಪಕರಣಗಳನ್ನು ಹೊಂದಿದೆ. ಎಸ್-ಬ್ಯಾಂಡ್ ಆಂಟೇನಾ ಬಳಕೆ ಮಾಡಿದ್ದು, ಇದು ಟ್ರ್ಯಾಕಿಂಗ್, ಟೆಲಿಮೀಟರಿಂಗ್, ಕಮಾಂಡಿಂಗ್​ಗೆ ಸಹಾಯ ಮಾಡುತ್ತದೆ. ಉಡಾವಣೆಯಾದ ಒಂದೂವರೆ ಗಂಟೆಗೆ ಕಕ್ಷೆಯನ್ನು ಸೇರಿರುವ ಉಪಗ್ರಹದ ಕಾರ್ಯಾಚರಣೆ ಒಂದು ದಿನದ ನಂತರ ಆರಂಭ. ಇದರ ಜೀವಿತಾವಧಿ 2 ವರ್ಷ.

ನಮ್ಮ ವಿವಿಯ ಪ್ರಾಧ್ಯಾಪಕರ ತಂಡ ಬಹಳ ವರ್ಷಗಳ ಕಾಲ ಸಂಶೋಧನೆ ಮಾಡಿ ಈ ಉಪಗ್ರಹ ನಿರ್ಮಾಣ ಮಾಡಿದ್ದಾರೆ. ಇದು ನಮ್ಮ ವಿವಿಯ ಎರಡನೇ ಉಪಗ್ರಹವಾಗಿದೆ. ಈ ತಂಡಕ್ಕೆ ನನ್ನ ಅಭಿನಂದನೆಗಳು. ರಾಷ್ಟ್ರೀಯ ವಿಜ್ಞಾನ ದಿನವೇ ಇಂತಹ ಯಶಸ್ಸು ಸಿಕ್ಕಿರುವುದು ನೆನಪಿನಲ್ಲಿ ಚಿರವಾಗಿ ಉಳಿಯಲಿದೆ.| ಪ್ರೊ. ಎಂ.ಆರ್. ದೊರೆಸ್ವಾಮಿ ಕುಲಾಧಿಪತಿ, ಪಿಇಎಸ್ ವಿಶ್ವವಿದ್ಯಾಲಯನಾವು ಹಾಕಿದ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಇದೊಂದು ಟೀಂ ವರ್ಕ್. ಎಲ್ಲರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಇದರಿಂದ ನಾವು ಮತ್ತಷ್ಟು ಉಪಗ್ರಹ ನಿರ್ಮಾಣ ಮಾಡಿಕೊಡಲು ಹುಮ್ಮಸ್ಸು ಬಂದಿದೆ.| ಡಾ. ಸಾಂಬಶಿವರಾವ್ ನಿರ್ದೇಶಕ, ಕ್ರೂಸಿಬಲ್ ಆಫ್ ರಿಸರ್ಚ್ ಅಂಡ್ ಇನೋವೇಷನ್ (ಕೋರಿ)

ಪೈಸ್ಯಾಟ್ ವಿಶೇಷ

ಸತತ 4 ವರ್ಷದಿಂದ ಪಿಇಎಸ್ ವಿವಿಯ ಸುಮಾರು 250 ವಿದ್ಯಾರ್ಥಿಗಳು ಪೈಸ್ಯಾಟ್ ನಿರ್ವಣದಲ್ಲಿ ಕೈ ಜೋಡಿಸಿದ್ದರು. ಕೋರಿ ವಿಭಾಗದ ನಿರ್ದೇಶಕರಾಗಿದ್ದ ಡಾ. ವಿ.ಕೆ. ಅಗರವಾಲ್ ನೇತೃತ್ವದಲ್ಲಿ ನಿರ್ಮಾಣ ಮಾಡಲಾಗಿತ್ತು. ಇದಕ್ಕಾದ ವೆಚ್ಚ 1.25 ಕೋಟಿ ರೂ.; ಈ ಪೈಕಿ 1 ಕೋಟಿ ರೂ. ನಿಯಂತ್ರಣ ಕೇಂದ್ರಕ್ಕೆ ವ್ಯಯಿಸಿದ್ದು, ಇದರ ಸಂಪೂರ್ಣ ಹಣವನ್ನು ಪಿಇಎಸ್ ವಿವಿಯೇ ನೀಡಿದೆ. ಉಳಿದ 25 ಲಕ್ಷ ರೂ. ಅನ್ನು ವಿವಿಧ ವಿವಿಗಳು ಹಾಗೂ ಕಂಪನಿಗಳಿಂದ ಪಡೆದುಕೊಂಡಿತ್ತು. ಇಸ್ರೋ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಇದರ ವಿನ್ಯಾಸ ರೂಪಿಸಿತ್ತು. ವಿಪತ್ತಿನ ಸೂಚನೆ, ಕಾಡ್ಗಿಚ್ಚು ಮಾಹಿತಿ, ಭೂಸರ್ವೆಕ್ಷಣೆಯ ಚಿತ್ರಗಳ ರವಾನೆ ಈ ಉಪಗ್ರಹದ ಉದ್ದೇಶ. 2016ರಲ್ಲಿ ಇದನ್ನು ಉಡಾವಣೆ ಮಾಡಲಾಗಿತ್ತು.