ಅಂಕಣ

ಸಂಸ್ಕೃತಿಕೋಶ: ಕಾಳಾಮುಖ ಪಂಥ

ಕಾಳಾಮುಖ ಲಾಕುಳ ಶೈವಪಂಥದ ಒಂದು ಶಾಖೆ; ಮಧ್ಯಕಾಲೀನ ಆಂಧ್ರ-ಕರ್ಣಾಟಕಗಳಲ್ಲಿ ನೆಲಸಿದ್ದ ಅಲ್ಪಸಂಖ್ಯಾತ ಮತಗಳಲ್ಲಿ ಪ್ರಮುಖವಾದದ್ದು. ಈ ಪಂಥದ ಅನುಯಾಯಿಗಳಾದ ಕೆಲವರು ಕಾಳಾಮುಖ / ಅಸಿತವಕ್ತ್ರ ದೀಕ್ಷೆಯನ್ನು ಪಡೆಯುತ್ತಿದ್ದರು. ಮುಖದ ಮೇಲೆ ಕಪ್ಪುಬಣ್ಣದ ಗುರುತುಗಳನ್ನು ಮಾಡಿಕೊಳ್ಳುತ್ತಿದ್ದುದರಿಂದ ಇವರಿಗೆ ಕಾಳಾಮುಖರೆಂದು ಹೆಸರಾಯಿತು. ಕ್ರಿಸ್ತಶಕದ ಆರಂಭದಲ್ಲಿ ಕಾಶ್ಮೀರದ ದೇವವ್ರತಮುನಿಸಂತತಿಗೆ ಸೇರಿದವರೊಡನೆ ಇವರ ಸಂಬಂಧವಿತ್ತೆಂದು ಶಿಕಾರಿಪುರದ 99ನೆಯ ಶಾಸನ ಸೂಚಿಸುತ್ತದೆ. ಏಳನೆಯ ಶತಮಾನದಿಂದ ಐನೂರು ವರ್ಷಗಳ ಕಾಲ ಇದು ಕರ್ಣಾಟಕದಲ್ಲಿ ಪ್ರಬಲವಾಗಿತ್ತು. ಆಂಧ್ರ, ತಮಿಳುನಾಡಿನ ಹಲವು ಭಾಗಗಳಲ್ಲೂ ಇದರ ಪ್ರಾಬಲ್ಯ ಕಾಣಬರುತ್ತದೆ. ಬಳ್ಳಿಗಾವೆಯ ಕೇದಾರೇಶ್ವರ ಮಂದಿರ, ಆಂಧ್ರದ ಶ್ರೀಶೈಲ ಈ ಪಂಥದವರ ಪ್ರಮುಖ ಸ್ಥಾನಗಳಾಗಿದ್ದುವು. ಇವರಿಗೆ ರಾಜಾಶ್ರಯ ದೊರೆತಿತ್ತು. ಈ ಪಂಥದ ಗುರುಗಳಲ್ಲಿ ಸಾಮಾನ್ಯವಾಗಿ ರಾಶಿ, ಶಕ್ತಿ ಎಂಬ ಎರಡು ಪಂಗಡಗಳಿದ್ದುವು. ಇವರ ಕೆಲವು ಗುರುಗಳ ಉಲ್ಲೇಖವಿದೆ. ಕಲಾಶಕ್ತಿ (ಸು. 640) ನೇತ್ರಶಿವಾಚಾರ್ಯ (ಸು. 900), ಈಶ್ವರದೇವ ರುದ್ರಗಣ (ಸು. 1030), ಸರ್ವೆಶ್ವರಶಕ್ತಿ (ಸು. 1070) ಮತ್ತು ನಾಗಶಿವಪಂಡಿತ (ಸು. 1183) ಗಮನಾರ್ಹರು.

(ಆಕರ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ)