ಅಂಕಣ

ಆಷಾಢದ ಗುಳ್ಳವ್ವ ಹೆಂಗಳೆಯರ ಜೀವ

Webdesk - Ravikanth
ಆಷಾಢ ಮಾಸದ ಮಂಗಳವಾರ ಎಂದರೆ ಉತ್ತರ ಕರ್ನಾಟಕದ ಹಳ್ಳಿಯ ಹೆಂಗಳೆಯರಿಗೆ ಎಲ್ಲಿಲ್ಲದ ಸಡಗರ. ಈ ದಿನಗಳಲ್ಲಿ ಮನೆ ಮನೆಗಳಲ್ಲಿ ಗುಳ್ಳವ್ವನ ಪೂಜೆ ಹಮ್ಮಿಕೊಳ್ಳಲಾಗುತ್ತದೆ. ಮೊಬೈಲ್ ಯುಗದಲ್ಲಿ ಈ ಆಚರಣೆ ಸೊರಗಿದ್ದರೂ ಬಾಗಲಕೋಟೆ, ವಿಜಯಪುರ, ಧಾರವಾಡ ಮತ್ತಿತರ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಇಂದಿಗೂ ಅಲ್ಲಲ್ಲಿ ನಡೆಯುತ್ತಿದೆ.

| ಸಚಿನ್ ಕೆ. ದೇಸಾಯಿ ವಿಜಯಪುರ

ಒಂದು ಹಂಚಿನ ಕಪ್ಪ

ನಾ ಮಾಡಿದೆ ತಪ್ಪ

ಭೀಮರತಿ ಹೊಳಿಯ

ಹೊಳಿ ತಕಾ ಸೆಳಿಯ

ಗುಳ್ಳವ್ವ ನನ್ನ ಸೆಳಿಯ

ಬಾಗಲಾ ತಗಿಯ ತಗಿಯ...

ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಆಷಾಢ ಮಾಸದಲ್ಲಿ ಇಂಥ ಜನಪದ ಹಾಡುಗಳು ಕೇಳಿಬರುತ್ತವೆ. ಇದು ಗುಳ್ಳವ್ವನ ಹಾಡು. ಗ್ರಾಮೀಣ ಆಚರಣೆಯ ಶ್ರೀಮಂತಿಕೆ ಸಾರುವ ಗುಳ್ಳವ್ವ ಕೂಡ ಮೃತ್ತಿಕೆ ಪೂಜೆಯ ಒಂದು ಭಾಗ. ಆಷಾಢ ಮಾಸದ ಪ್ರತಿ ಮಂಗಳವಾರ ಮಣ್ಣಿನ ಗುಳ್ಳವ್ವಗಳನ್ನು ತಯಾರಿಸಿ ಪೂಜಿಸುವುದು ಹಳ್ಳಿಯ ಹೆಂಗಳೆಯರ ಸಂಪ್ರದಾಯ.

ಮಳೆಗಾಲ ಆರಂಭವಾಗುತ್ತಿದ್ದಂತೆ ಮಣ್ಣಿನ ಕಣ ಕಣದಲ್ಲೂ ಜೀವಕಳೆ ತುಂಬುತ್ತದೆ. ಮಣ್ಣೆಂದರೆ ಕೇವಲ ಮಣ್ಣಲ್ಲ. ಜೀವಿಗಳನ್ನು ಸಲಹುವ ಮೃತ್ತಿಕೆ. ಈ ಮೃತ್ತಿಕೆಯನ್ನು ಬಸವಣ್ಣ, ನಾಗಪ್ಪ, ಗೋಪಾಲಕೃಷ್ಣ, ಗೌರಿ, ಗಣಪತಿ ಹೀಗೆ ಹಲವು ರೂಪಗಳಲ್ಲಿ ಪೂಜಿಸಲಾಗುತ್ತದೆ. ಅವುಗಳಲ್ಲಿ ಗುಳ್ಳವ್ವನೂ ಒಂದು.

ಆಷಾಢದ ನಾಲ್ಕು ಮಂಗಳವಾರ (ಕೆಲವೊಮ್ಮೆ ಐದೂ ಆಗಬಹುದು) ಗುಳ್ಳವ್ವನ ಪೂಜೆ ನಡೆಯುತ್ತದೆ. ಮೊದಲೆಲ್ಲ ಯುವತಿಯರು ನದಿ ದಡಕ್ಕೆ ಹೋಗಿ ಮಣ್ಣು ತಂದು ಅದನ್ನು ಸ್ವಚ್ಛಗೊಳಿಸಿ ಸೋಮವಾರದಿನವೇ ಗುಳ್ಳವ್ವನನ್ನು ತಯಾರಿಸುತ್ತಿದ್ದರು. ನಂತರ ಕುಂಬಾರರು ತಯಾರಿಸಿ ಮಣೆ ಮೇಲೆ ಮಣ್ಣಿನ ಗುಳ್ಳವ್ವಗಳನ್ನು ಸಾಲಾಗಿ ಜೋಡಿಸಿಕೊಂಡು ತಲೆ ಮೇಲೆ ಹೊತ್ತು ಮನೆ ಬಾಗಿಲಿಗೆ ತಂದು ಮಾರುವ ರೂಢಿ ಬೆಳೆದು ಬಂತು. ಹೀಗೆ ಖರೀದಿಸಿದ ಗುಳ್ಳವ್ವನನ್ನು ಗುಲಗಂಜಿ, ಜೋಳ, ಅಗಸಿ, ಗೋಧಿ ಮತ್ತಿತರ ಧಾನ್ಯಗಳಿಂದ ಯುವತಿಯರು ಸಿಂಗರಿಸುತ್ತಾರೆ. ಜಾಲಿಗಿಡದ ಹಸಿರು ಮೊಗ್ಗು, ಹಳದಿ ಹೂವುಗಳಿಂದಲೂ ಅಲಂಕರಿಸುತ್ತಾರೆ.

ಕೆಲವೆಡೆ ಗುಳ್ಳವ್ವನ ಮುಂದೆ ಹಾಗೂ ಹಿಂದೆ ಚೌಕಾಕಾರದಲ್ಲಿ ಕಂಬವಿರಿಸಿ ಆಚರಣೆಯ ಅಂದ ಹೆಚ್ಚಿಸುತ್ತಾರೆ. ಮೊದಲ ವಾರ ಒಂದು ಬಾಗಿಲ ಮಹಡಿ, ಎರಡನೇ ವಾರ ಎರಡು ಬಾಗಿಲ ಮಹಡಿಯಲ್ಲಿ ಪೂಜೆ ಎಂಬ ಆಚರಣೆಯೂ ಕೆಲವೆಡೆ ಕಂಡುಬರುತ್ತದೆ. ಇನ್ನು ಕೆಲವೆಡೆ ಗುಳ್ಳವ್ವನ ಮುಂಭಾಗದಲ್ಲಿ ಒಂದು ಚೌಕಾಕಾರದ ರಂಧ್ರವನ್ನು ಕೊರೆದು ಅದರಲ್ಲಿ ಒಂದು ಪುಟ್ಟ ಮಣ್ಣಿನ ಹಕ್ಕಿಯನ್ನು ಇಡುವ ಆಚರಣೆಯೂ ನಡೆಯುತ್ತದೆ.

ಸಂಜೆ ಮಹಿಳೆಯರೆಲ್ಲ ಸೇರಿ ಮನೆ ಮನೆಗೆ ಹೋಗಿ ಗುಳ್ಳವ್ವನಿಗೆ ಆರತಿ ಬೆಳಗಿ ಸಾಮೂಹಿಕವಾಗಿ ಪೂಜಿಸುತ್ತಾರೆ. ಮಳೆ ತರುವ ದೇವತೆ ಎಂದು ನಂಬಲಾಗುವ ಗುಳ್ಳವ್ವನಿಗೆ ಸಾಮಾನ್ಯವಾಗಿ ಜೋಳದಿಂದ ತಯಾರಿಸಿದ ಅರಳು ಹಾಗೂ ಉಸುಳಿ (ಮೊಳಕೆ ಬರಿಸಿದ ಕಾಳುಗಳು) ನೈವೇದ್ಯ ಸಮರ್ಪಿಸಿ ಸಾಮೂಹಿಕ ಭೋಜನದ ಮೂಲಕ ಆಚರಣೆಗೆ ತೆರೆ ಎಳೆಯಲಾಗುತ್ತದೆ.

ಆಷಾಢ ಮಾಸದ ಕೊನೆಯ ಮಂಗಳವಾರ ದಿನ ಸಂಜೆ ಮಕ್ಕಳು, ಮಹಿಳೆಯರು ಸೇರಿ ವಿಶೇಷ ಖಾದ್ಯ ತಯಾರಿಸಿಕೊಂಡು ಗುಳ್ಳವ್ವನೊಂದಿಗೆ ಸಮೀಪದ ಉದ್ಯಾನಗಳಿಗೆ ತೆರಳುತ್ತಾರೆ. ಅಲ್ಲಿ ಸಾಮೂಹಿಕ ಪೂಜೆಯ ನಂತರ ಸಂಭ್ರಮದ ಊಟವೂ ನಡೆಯುತ್ತದೆ. ಕಾಶಿಗೆ ಹೋಗಿ ಕುಸುಬೆ ತರತೀನಿ ಎಂದ ಬರ್ತಿ ಗುಳ್ಳವ್ವ ಎಂಬ ಹಾಡು ಕೂಡ ಗುಳ್ಳವ್ವನ ಪೂಜೆ ಉತ್ಸುಕತೆಯನ್ನು ಸಾರುತ್ತದೆ.

ಈ ಗುಳ್ಳವ್ವನನ್ನು ತಯಾರಿಸುವುದೂ ಒಂದು ಅಪರೂಪದ ಕಲೆ. ಮೊದಲನೇ ವಾರ ಪೂಜಿಸುವ ಗುಳ್ಳವ್ವನ ಮೇಲ್ಮೈಯಲ್ಲಿ ಒಂದೇ ಒಂದು ಸುತ್ತು ಗೆರೆ ನಿರ್ವಿುಸಲಾಗಿರುತ್ತದೆ. ಮುಂದಿನ ವಾರ ಎರಡು, ನಂತರ ಮೂರು, ನಾಲ್ಕು ಹೀಗೆ ಮುಂದುವರಿಯುತ್ತದೆ. ಇದರಿಂದ ಗುಳ್ಳವ್ವನನ್ನು ನೋಡುತ್ತಿದ್ದಂತೆ ಇದು ಆಷಾಢ ಮಾಸದ ಎಷ್ಟನೇ ಮಂಗಳವಾರ ಪೂಜಿಸಿದ್ದು ಎಂಬುದನ್ನು ಹೇಳಬಹುದಂತೆ.

ಕಲ್ಲಂಗಡ್ಯಾಗ ಕಲ್ಲ ಪ್ಯಾಟ್ಯಾಗ

ರಾಜಗೇರ್ಯಾಗ, ರಾಜಪೇಟ್ಯಾಗ

ಕಂಡಿರ್ಯಾ ಗುಳ್ಳವ್ವನ ಐಸಿರಿಯ....

ಎನ್ನುವ ಪದ ಕೂಡ ಗುಳ್ಳವ್ವನ ಪೂಜೆಯ ಕಳೆ ಹೆಚ್ಚಿಸುತ್ತದೆ. ಇನ್ನು ಗುಳ್ಳವ್ವನ ಆಚರಣೆಗೆ ಅಡ್ಡಿಪಡಿಸುವವರನ್ನು ನಿಂದಿಸುವ ಕೆಲವು ಪದಗಳೂ ಕೇಳಿಬರುತ್ತವೆ. ಆಷಾಢ ಮಾಸದ ಕೊನೆಯ ಮಂಗಳವಾರ ಗುಳ್ಳವ್ವನ ಆಚರಣೆಗೆ ಪ್ರೋತ್ಸಾಹ ನೀಡಲು ಕೆಲವು ಗ್ರಾಮೀಣ ಶಾಲೆಗಳಲ್ಲಿ ಅರ್ಧ ದಿನ ರಜೆಯನ್ನೂ ನೀಡಲಾಗುತ್ತದೆ. ಸಾಮಾನ್ಯವಾಗಿ ಒಂದು ಅಡಿ ಎತ್ತರದ ಗುಳ್ಳವ್ವನನ್ನು ಮನೆಯಲ್ಲಿ ಪೂಜಿಸಿದರೆ, ಸಾಮೂಹಿಕವಾಗಿ ಶಾಲೆ, ಗಲ್ಲಿಗಳಲ್ಲಿ ಪೂಜಿಸುವ ಗುಳ್ಳವ್ವ ಎರಡು ಅಡಿ ಎತ್ತರದ್ದಾಗಿರುತ್ತದೆ.

ಈ ಆಚರಣೆ ಬಹುತೇಕ ಸೊರಗಿದ್ದರೂ ಬಾಗಲಕೋಟೆ ಜಿಲ್ಲೆಯ ಹುನಗುಂದ, ರಬಕವಿ ಬನಹಟ್ಟಿ ಭಾಗದಲ್ಲಿ ಇನ್ನೂ ಸಂಭ್ರಮದಿಂದ ನಡೆಯುತ್ತಿದೆ. ಸಾಂಪ್ರದಾಯಿಕ ತಿಗರಿಯಿಂದ ಪ್ರತಿ ವಾರ ಸಾವಿರಕ್ಕೂ ಹೆಚ್ಚು ಗುಳ್ಳವ್ವನನ್ನು ತಯಾರಿಸುತ್ತಿದ್ದ ಕುಂಬಾರರು ಸದ್ಯ ಅಂದಾಜು 200 ಗುಳ್ಳವ್ವಗಳನ್ನು ಮಾತ್ರ ತಯಾರಿಸುತ್ತಿದ್ದಾರೆ.

ಮೊದಲು ನಾಲ್ಕೂ ವಾರ ಮನೆ ಮನೆಗಳಲ್ಲಿ ಪೂಜಿಸಲಾಗುತ್ತಿತ್ತು. ಸದ್ಯ ಆಷಾಢ ಮಾಸದ ಮೊದಲ ಹಾಗೂ ಕೊನೆಯ ಮಂಗಳವಾರಕ್ಕೆ ಮಾತ್ರ ಗುಳ್ಳವ್ವನ ಪೂಜೆ ಸೀಮಿತವಾಗಿದೆ. ಮೊಬೈಲ್​ನಿಂದ ಮರೆಯಾಗುತ್ತಿರುವ ಬಹುತೇಕ ಆಚರಣೆಗಳ ಪೈಕಿ ಗುಳ್ಳವ್ವನ ಪೂಜೆಯೂ ಸೇರಿಕೊಂಡಿದೆ. ಗುಳ್ಳವ್ವನನ್ನೂ ಮೊಬೈಲ್​ನಲ್ಲಿ ನೋಡುವ ಕಾಲ ಬಂದಿದೆ ಎನ್ನುತ್ತಾರೆ ಬಾಗಲಕೋಟೆಯ ಸಿದ್ದಮ್ಮ ಕುಂಬಾರ.