ಅಂಕಣ

ಅಧ್ಯಾತ್ಮದ ಗಣಿ ಯೋಗಿನಿ ಕಾಳೀಜಿ; ಭಾರತೀಯ ಸಂಸ್ಕೃತಿಗೆ ಮಾರುಹೋದ ಅಮೆರಿಕದ ಮಹಿಳೆ

ಜೂನ್ 21 ವಿಶ್ವ ಯೋಗ ದಿನ. ಈ ಬಾರಿ ಮೈಸೂರಿನ ಯೋಗ ದಿನ ಕಾರ್ಯಕ್ರಮಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಮಿಸುತ್ತಿರುವ ಕಾರಣ ಸಾಂಸ್ಕೃತಿಕ ನಗರಿ ಕಳೆಗಟ್ಟುತ್ತಿದೆ. ಅದಕ್ಕಾಗಿ ಸರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಮಧ್ಯೆ, ರಾಷ್ಟ್ರ - ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಯೋಗಸಾಧಕರು ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಯೋಗಿನಿ ಕಾಳೀಜಿ.ತಮ್ಮ ಯೋಗಸಾಧನೆಯ ಕುರಿತು ಅವರು ವಿಜಯವಾಣಿ ಜತೆ ಮಾತನಾಡಿದ್ದಾರೆ.

| ಎಚ್.ಪಿ. ನವೀನ್​ಕುಮಾರ್ ಮೈಸೂರು

‘ಶ್ರೀಮಂತ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳನ್ನು ಹೊಂದಿರುವ ಭಾರತ ದೇಶ ಮುಂದೊಂದು ದಿನ ವಿಶ್ವಗುರುವಾಗಲಿದೆ. ಜಗತ್ತಿಗೆ ಯೋಗ, ಧ್ಯಾನ, ಸತ್ಸಂಗ ಪರಿಚಯ ಮಾಡಿಕೊಟ್ಟ ಈ ದೇಶ ಹಿರಿಯಣ್ಣನ ಸ್ಥಾನದಲ್ಲಿ ನಿಂತು ಎಲ್ಲ ದೇಶಗಳಿಗೂ ಜೀವನ ಮಾರ್ಗವನ್ನು ಬೋಧಿಸಲಿದೆ. ಈ ದೇಶದ ಮಣ್ಣಿನಲ್ಲಿ ಅಂತಹುದೊಂದು ಶಕ್ತಿ ಅಡಗಿದೆ...’

ಹೀಗೆ ಹೇಳಿದವರು ಒಬ್ಬ ವಿದೇಶಿ ಮಹಿಳೆ. ಹೌದು... ಭಾರತೀಯರಾದ ನಾವು ವಿದೇಶಿ ಸಂಸ್ಕೃತಿ ಅನುಕರಣೆ ಮಾಡಲು ಮುಂದಾಗಿರುವ ಈ ಕಾಲಘಟ್ಟದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ‘ಯೋಗಿನಿ ಕಾಳೀಜಿ’ ಎಂಬುವರು ಭಾರತೀಯ ಸನಾತನ ಧರ್ಮ ಹಾಗೂ ಸಂಸ್ಕೃತಿಗೆ ಮಾರುಹೋಗಿದ್ದಾರೆ. ಕಳೆದ 40 ವರ್ಷಗಳಿಂದ ದೇಶ, ವಿದೇಶಗಳನ್ನು ಸುತ್ತಾಡಿ ಯೋಗ, ಅಧ್ಯಾತ್ಮ, ಧ್ಯಾನ, ಮುದ್ರೆ, ಸಸ್ಯಾಹಾರದ ಮಹತ್ವ, ಸಾತ್ವಿಕ ಆಹಾರ ಕ್ರಮ, ಧಾರ್ವಿುಕ ನಂಬಿಕೆ, ಭಾರತೀಯ ಸಂಸ್ಕೃತಿ ಸೇರಿದಂತೆ ಹತ್ತು ಹಲವು ವಿಷಯಗಳನ್ನು ಪ್ರಚಾರ ಮಾಡುತ್ತ ವಿದೇಶಿಗರನ್ನು ಭಾರತದತ್ತ ಸೆಳೆಯುತ್ತಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಯೋಗ ರಾಜಧಾನಿ ಮೈಸೂರಿನಲ್ಲಿ ನಾಲ್ಕು ದಿನಗಳ ಪ್ರವಾಸ ಹಮ್ಮಿಕೊಂಡಿರುವ ಕಾಳೀಜಿ ‘ವಿಜಯವಾಣಿ’ ಜತೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಬಾಲ್ಯ, ಅಧ್ಯಾತ್ಮ ಪಯಣ, ಜೀವನದ ಗುರಿ ಸೇರಿದಂತೆ ಹಲವು ವಿಷಯಗಳ ಕುರಿತು ರ್ಚಚಿಸಿದ್ದಾರೆ.

ಅಧ್ಯಾತ್ಮದತ್ತ ತುಡಿಯುತ್ತಿದ್ದ ಮನಸ್ಸು: ‘‘ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ ನನಗೆ ಬಾಲ್ಯದಿಂದಲೇ ‘ನಾನು ಯಾರು’ ಎಂಬ ಪ್ರಶ್ನೆ ಕಾಡತೊಡಗಿತು. ಎಲ್ಲ ಮಕ್ಕಳು ಆಟ, ಪಾಠದಲ್ಲಿ ತೊಡಗಿದ್ದರೆ ನನ್ನ ಮನಸ್ಸು ಅಧ್ಯಾತ್ಮದತ್ತ ತುಡಿಯುತ್ತಿತ್ತು. ಕ್ರಮೇಣ ಅದು ಧ್ಯಾನಕ್ಕೆ ತಿರುಗಿತು. ಬೆಟ್ಟ, ಗುಹೆಗಳಲ್ಲಿ ನಾನು ಧ್ಯಾನ ಮಾಡುತ್ತಿದ್ದೆ. ಅಧ್ಯಾತ್ಮ ಪಯಣದ ಮೊದಲ ಘಟ್ಟವಿದು. ಈ ಮಾರ್ಗದ ಪ್ರಯಾಣ ನನ್ನನ್ನು ಭಾರತಕ್ಕೆ ಸೆಳೆಯಿತು. ಬಹುಶಃ ಪೂರ್ವಜನ್ಮದಲ್ಲಿ ನಾನು ಭಾರತೀಯಳಾಗಿರಬೇಕು. ಅದಕ್ಕಾಗಿಯೇ ಇಲ್ಲಿಗೆ ಬಂದೆ ಎನಿಸುತ್ತದೆ. ಧ್ಯಾನಸ್ಥಳಾಗಿದ್ದಾಗ ತಾನಾಗೇ ಬಂದ ಯೋಗ ಮುದ್ರೆಗಳನ್ನು ಒಂದಷ್ಟು ಮಾರ್ಪಾಡು ಮಾಡಿದ್ದೇನೆ. ಈಗ 1200ಕ್ಕೂ ಹೆಚ್ಚು ಮುದ್ರೆಗಳನ್ನು ಹೇಳಿಕೊಡಬಲ್ಲೆ’’ ಎನ್ನುತ್ತಾರೆ ಯೋಗಿನಿ ಕಾಳೀಜಿ.

ಯೋಗ, ಅಧ್ಯಾತ್ಮವೇ ಜೀವನದ ಗುರಿ: ನನ್ನ ಗುರುಗಳು ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಮಾತಾ ಜಯಲಕ್ಷ್ಮೀ. ‘ಕಾಲಿ ರೇ’ ಎಂದು ಇದ್ದ ನನ್ನ ಹೆಸರನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ‘ಕಾಳೀಜಿ’ ಎಂದು ಬದಲಿಸಿದರು. 1980ರಲ್ಲಿ ವಿಶೇಷವಾಗಿ ನನಗೆ ಕುಂಡಲಿನಿ ಜಾಗೃತವಾಯಿತು. ಆ ಬಳಿಕ ಯೋಗ, ಅಧ್ಯಾತ್ಮವೇ ನನ್ನ ಜೀವನದ ಗುರಿಯಾಯಿತು ಎನ್ನುತ್ತಾರೆ.

ವಿದೇಶಿ ಶಿಷ್ಯಂದಿರಿಗೆ ಭಾರತೀಯರ ಹೆಸರು: ‘‘1986ರಲ್ಲಿ ಅಮೆರಿಕದಲ್ಲಿ ದೇವಿಪೀಠಂ ಎಂಬ ಆಶ್ರಮ ಸ್ಥಾಪನೆ ಮಾಡಲಾಯಿತು. ಬಳಿಕ ವಿಶಿಷ್ಟ ಶೈಲಿಯ ‘ತ್ರೖೆಯೋಗ’ ಹೇಳಿಕೊಡಲಾಗುತ್ತಿದೆ. ಭಾರತ ಸೇರಿ ಜಗತ್ತಿನ 40 ದೇಶದಲ್ಲಿ 53 ತ್ರೖೆಯೋಗ ಕೇಂದ್ರಗಳಿವೆ. ಜ್ಞಾನಯೋಗ, ಕರ್ಮಯೋಗ ಮತ್ತು ಭಕ್ತಿಯೋಗ ಗುಣಗಳು ತ್ರೖೆಯೋಗದಲ್ಲಿವೆ. ನಾನಾ ದೇಶದ ಸಾವಿರಾರು ಶಿಷ್ಯಂದಿರಿಗೆ ಭಾರತೀಯರ ಹಾಗೂ ಇಲ್ಲಿನ ದೇವರುಗಳ ಹೆಸರಿಟ್ಟಿದ್ದೇವೆ’’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.

ಗೋವಿಗೆ ಮಾತೃ ಸ್ಥಾನ ನೀಡಿ: ‘‘ಶ್ರೀ ಕೃಷ್ಣ ಹುಟ್ಟಿದ ಈ ಮಣ್ಣಿನಲ್ಲಿ ಗೋವುಗಳಿಗೆ ಪೂಜನೀಯ ಸ್ಥಾನವಿದೆ. ಗೋವಿನಲ್ಲಿ ದೇವತೆಗಳು ವಾಸ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಆದರೆ ಗೋ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡುವುದರದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಇದು ಅತ್ಯಂತ ವಿಷಾದದ ಸಂಗತಿ. ಜಗತ್ತಿನಲ್ಲಿ ಗೋವಿಗೆ ಮಾತೃ ಸ್ಥಾನ ನೀಡಬೇಕು. ವಿಶ್ವದಾದ್ಯಂತ ಹಾಲಿನ ಡೇರಿ ಎಂಬುದು ಉದ್ಯಮವಾಗಿ ಬೆಳೆದಿದೆ. ಕ್ಷೀರ ಪೂರೈಸುವ ಸಲುವಾಗಿ ಹಸುಗಳಿಗೆ ಹಾಮೋನ್ ಚುಚ್ಚುಮದ್ದು ನೀಡಲಾಗುತ್ತಿದೆ. ಇದರಿಂದ ವಾಸಿಯಾಗದ ಕಾಯಿಲೆಗಳಾಗುತ್ತಿವೆ. ಅಮೆರಿಕದಲ್ಲಿ ಹುಟ್ಟಿದ ಕರುವು ಗಂಡಾದರೆ ಕೇವಲ 12 ಗಂಟೆಯಲ್ಲಿ ಅದನ್ನು ತಾಯಿಯಿಂದ ಬೇರ್ಪಡಿಸಿ ಅದರ ಚರ್ಮ ಸುಲಿದು ಚಮೋತ್ಪನ್ನ ಗಳಿಗೆ ಬಳಸಿಕೊಳ್ಳು ತ್ತಾರೆ. ಹೆಣ್ಣು ಕರುಗಳಿಗೆ ಇಂಜೆಕ್ಷನ್ ನೀಡಿ ಬೇಗನೆ ಬೆಳೆದು ಕರು ಹಾಕುವಂತೆ ಮಾಡಲಾಗುತ್ತದೆ’’ ಎಂದು ಯೋಗಿನಿ ಕಾಳೀಜಿ ಬೇಸರ ವ್ಯಕ್ತಪಡಿಸಿದರು.

ಸಾಧನೆಗೆ ಸಸ್ಯಾಹಾರ ಮುಖ್ಯ: ‘‘ಯೋಗ ಎಂದರೆ ಚಿತ್ತವೃತ್ತಿ ನಿರೋಧ. ಚಿತ್ತ ಹಾಗೂ ಶರೀರ ಹತೋಟಿಯಲ್ಲಿಟ್ಟುಕೊಳ್ಳುವಲ್ಲಿ ಸಸ್ಯಾಹಾರ ಸೇವನೆ ಅಗತ್ಯ. ಮಾಂಸಾಹಾರ ದಿಂದ ಮನಸ್ಸು ಪ್ರಚೋದನೆಗೊಳ್ಳುತ್ತದೆ. ಇದರಿಂದ ಅಧ್ಯಾತ್ಮ ಸಾಧನೆಗೆ ಅಡ್ಡಿಯಾಗುತ್ತದೆ. ಆ ಕಾರಣದಿಂದ ನಾನು ಸಂಪೂರ್ಣ ಸಸ್ಯಾಹಾರ ಸೇವನೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ. ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನೂ ಸೇವಿಸುವುದಿಲ್ಲ’’ ಎನ್ನುತ್ತಾರೆ ಯೋಗಿನಿ ಕಾಳೀಜಿ.

ಪ್ರಧಾನಿ ಮೋದಿ ವಿಸ್ಮಯ ಶಕ್ತಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವಿಶೇಷ ಅಭಿಮಾನ ಹೊಂದಿರುವ ಕಾಳೀಜಿ, ‘‘ಮೋದಿ ಎಂದರೆ ವಿಸ್ಮಯ ಶಕ್ತಿ’’ ಎಂದು ಬಣ್ಣಿಸಿದರು. ‘‘ಯೋಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲಬೇಕು. ಅಯೋಧ್ಯೆಯ ರಾಮಮಂದಿರ ನಿರ್ಮಾಣ ಸೇರಿದಂತೆ ಸನಾತನ ಧರ್ಮದ ಪುನರುತ್ಥಾನ ಅವರಿಂದ ಆಗುತ್ತಿದೆ. 8ನೇ ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಜೂ. 21ರಂದು ಮೈಸೂರಿನಲ್ಲಿ ನಡೆಯುತ್ತಿರುವ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಮೋದಿ ಪಾಲ್ಗೊಳ್ಳುತ್ತಿರುವುದು ತುಂಬಾ ಸಂತೋಷದ ವಿಷಯ’’ ಎನ್ನುತ್ತಾರೆ ಕಾಳೀಜಿ.

ಮನಸ್ಸಿಗೆ ಸಂಬಂಧಿಸಿದ್ದು ತ್ರೖೆಯೋಗ: ತ್ರೖೆಯೋಗ ಎಂಬುದು ಆಸನ, ಭಂಗಿ, ಮುದ್ರೆ, ಉಸಿರಾಟ ಮೂಲಕ ಏಕಾಗ್ರತೆ ಸಾಧಿಸುವ, ದೇಹದಲ್ಲಿ ಸಾಮರಸ್ಯ ಮತ್ತು ಸಮತೋಲನ ಉತ್ತೇಜಿಸುವ ಅಂಶ ಒಳಗೊಂಡಿರುತ್ತದೆ. ಅದು ಭೌತಿಕತೆಗಿಂತ ಮನಸ್ಸಿಗೆ ಸಂಬಂಧಿಸಿದ್ದು. ಅದನ್ನು ಅಭ್ಯಸಿಸುವವರು ಭಾವನಾತ್ಮಕವಾಗಿ ಉತ್ತಮ ಭಾವನೆ ಮತ್ತು ಮಾನಸಿಕ ಸ್ಪಷ್ಟ ಸ್ಥಿತಿಯನ್ನು ಅನುಭವಿಸುತ್ತಾರೆ. ಸ್ಥಿರವಾದ ಧ್ಯಾನ ಅಂತರ್ದೃಷ್ಟಿಯನ್ನು ರ್ಸ³ಸಿ ಅರಿವನ್ನು ಸುಧಾರಿಸಲು ಸಹಾಯವಾಗುತ್ತದೆ. ಬದುಕು ಉತ್ತಮವಾಗುತ್ತದೆ. ತ್ರೖೆಯೋಗವನ್ನು ಸತತ ಅಭ್ಯಾಸ ಮಾಡುವ ವ್ಯಕ್ತಿಗಳು ಯಾವಾಗಲೂ ಸಂತೋಷದಿಂದ ಇರುತ್ತಾರೆ. ರೋಗಗಳು ಅವರನ್ನು ಬಾಧಿಸದು. ತ್ರೖೆಯೋಗ ತರಗತಿಗಳು ಕ್ರಿಯಾತ್ಮಕ ಚಲನೆ, ಯೋಗ, ಉಸಿರಾಟ ನಿಯಂತ್ರಣ ಮತ್ತು ಮುದ್ರೆಗಳನ್ನು ಒಳಗೊಂಡಿರುತ್ತವೆ.

06