| ಗೋಪಾಲಕೃಷ್ಣ ಪಾದೂರು ಉಡುಪಿ
ವಾದಿರಾಜ ತೀರ್ಥರು 105 ಕ್ಷೇತ್ರಗಳನ್ನು ಸಂದರ್ಶಿಸಿರುವ ಬಗ್ಗೆ ಉಡುಪಿ ಜಿಲ್ಲೆಯ ಕೋಟೇಶ್ವರ ದೇವಸ್ಥಾನ ಹಾಗೂ ಪಾಜಕ ಕ್ಷೇತ್ರದಲ್ಲಿ ಶಿಲಾಫಲಕ ಅನಾವರಣ ಮಾಡಲಾಗಿದೆ. ಶ್ರೀಗಳು ಭೇಟಿ ನೀಡಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಶಿಲಾಫಲಕ ಅಳವಡಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.
ಕರ್ನಾಟಕದಲ್ಲಿ ಕನ್ನಡ ಹಾಗೂ ಇತರ ರಾಜ್ಯಗಳಲ್ಲಿ ದೇವನಾಗರಿ ಲಿಪಿಯಲ್ಲಿ ಶಿಲಾಲೇಖ ಇರಲಿದೆ. ಪುಣ್ಯನದಿಗಳ ಸ್ನಾನಘಟ್ಟ, ದೇವಸ್ಥಾನಗಳನ್ನು ಹೊಂದಿರುವ ಬೆಟ್ಟಗಳಲ್ಲಿ ಸಾಧ್ಯವಿರುವಷ್ಟು ಪುಣ್ಯಕ್ಷೇತ್ರಗಳಲ್ಲಿ ಒಂದು ವರ್ಷದೊಳಗೆ ಶಿಲಾಫಲಕ ಸ್ಥಾಪನೆ ಗುರಿ ಹೊಂದಲಾಗಿದೆ.
ಭಾರತ ಮಾಲಾ ಯಾತ್ರೆ: ವಾದಿರಾಜರು ಭಾರತವನ್ನು ಮಾಲೆಯ ಆಕಾರದಲ್ಲಿ ಪ್ರದಕ್ಷಿಣೆ ಮಾಡಿದ್ದರು. ಪರಶುರಾಮ ಕ್ಷೇತ್ರ ಉಡುಪಿಯಿಂದ ಶ್ರೀಗಳ ತೀರ್ಥಯಾತ್ರೆ ಪ್ರಾರಂಭವಾಗಿತ್ತು. ಮೊದಲಿಗೆ ಕೃಷ್ಣಮಠ, ಅನಂತೇಶ್ವರ, ಪಾಜಕ, ಕುಂಜಾರುಗಿರಿ ಮೊದಲಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರಗಳು, ಕೊಲ್ಹಾಪುರ, ಪ್ರಭಾಸ ಕ್ಷೇತ್ರ, ದ್ವಾರಕಾ, ಪುಷ್ಕರ, ಸಹ್ಯಾದ್ರಿ ಘಟ್ಟದ ವರ್ಣನೆ ಇದೆ. ಉತ್ತರ ಪ್ರಬಂಧ ಮಹಾರಾಷ್ಟ್ರದ ಪಂಡರಾಪುರದಿಂದ ಆರಂಭಗೊಂಡಿದ್ದು, ಉತ್ತರಪ್ರದೇಶದ ಪ್ರಯಾಗ, ಕಾಶಿಕ್ಷೇತ್ರ, ಮಥುರಾ, ವೃಂದಾವನ, ಅಯೋಧ್ಯೆ, ಕುರುಕ್ಷೇತ್ರ, ಬದರೀ ಕ್ಷೇತ್ರದಲ್ಲಿ ಕೊನೆಗೊಳ್ಳುತ್ತದೆ.
ಪೂರ್ವಪ್ರಬಂಧ ಪಶ್ಚಿಮ ಬಂಗಾಳದ ಗಂಗಾಸಾಗರ ಸಂಗಮದಿಂದ ಶುರುವಾಗಿ ಜಗನ್ನಾಥ ಪುರಿ, ಶ್ರೀಶೈಲ ಮಲ್ಲಿಕಾರ್ಜುನ, ತುಂಗಾಭದ್ರಾ ನದಿ, ಹಂಪೆ, ಆನೆಗೊಂದಿ, ಮಳಖೇಡ, ತಿರುಪತಿ, ಕಂಚೀ, ತಿರುವಣ್ಣಾಮಲೈ, ಕುಂಭಕೋಣದಲ್ಲಿ ಪ್ರವಾಸ ಮುಗಿಯುತ್ತದೆ. ದಕ್ಷಿಣ ಪ್ರಬಂಧದಲ್ಲಿ ಶ್ರೀರಂಗ ಕ್ಷೇತ್ರ, ಕಾವೇರಿ ನದಿ, ವೃಷಭಾಚಲ, ಶ್ರೀರಾಮಸೇತು, ಧನುಷ್ಕೋಟಿ, ದರ್ಭಾಶಯನ ಕ್ಷೇತ್ರ, ಕನ್ಯಾಕುಮಾರಿ, ತಿರುವನಂತಪುರ ಅನಂತಶಯನ ದೇವರ ಮಹಿಮೆಗಳನ್ನು ವಾದಿರಾಜರು ಬಣ್ಣಿಸಿದ್ದಾರೆ.
ವಾದಿರಾಜಗುರುಗಳು ಭವ್ಯ ಭಾರತದ ಮಹತ್ವವನ್ನು ತೀರ್ಥಪ್ರಬಂಧದ ಮೂಲಕ ಸ್ಥಾಯಿಯಾಗುವಂತೆ ದಾಖಲಿಸಿದವರು. ತೀರ್ಥಪ್ರಬಂಧ ಕೃತಿ ಇಲ್ಲದಿದ್ದರೆ ಪುಣ್ಯ ಕ್ಷೇತ್ರಗಳ ನೈಜ ಇತಿಹಾಸ ನಮಗೆ ಸ್ಪಷ್ಟವಾಗಿ ತಿಳಿಯುತ್ತಿರಲಿಲ್ಲ. ಈ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ತೀರ್ಥಪ್ರಬಂಧ ಶ್ಲೋಕಗಳನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಶಿಲಾಫಲಕ ಅನಾವರಣ ಮಾಡಲಾಗುತ್ತಿದೆ. ತೀರ್ಥಪ್ರಬಂಧದಲ್ಲಿ ಪರ್ವತಗಳು, ಬೆಟ್ಟಗಳು ಹಾಗೂ ನದಿಗಳನ್ನು ವರ್ಣಿಸಿದ್ದಾರೆ. ಪುಣ್ಯನದಿಗಳ ಸ್ನಾನಘಟ್ಟ, ದೇವಸ್ಥಾನಗಳನ್ನು ಹೊಂದಿರುವ ಬೆಟ್ಟಗಳಲ್ಲಿ ಎಲ್ಲೆಲ್ಲಿ ಸಾಧ್ಯವಿದೆಯೋ ಆ ಪ್ರದೇಶಗಳಲ್ಲಿ ಶಿಲಾಫಲಕ ಸ್ಥಾಪಿಸಲಾಗುತ್ತದೆ. | ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಸೋದೆ ಮಠ, ಉಡುಪಿ
ವಾದಿರಾಜ ತೀರ್ಥರು ತಮ್ಮ ಸಂಚಾರ ಕಾಲದಲ್ಲಿ ಸಂದರ್ಶಿಸಿದ ಭಾರತದ ತೀರ್ಥಕ್ಷೇತ್ರಗಳ ಪರಿಚಯಾತ್ಮಕ ಕೃತಿಯೇ ತೀರ್ಥಪ್ರಬಂಧ. ಇದರಲ್ಲಿ ದೇಶದ ಪ್ರಮುಖ ತೀರ್ಥಕ್ಷೇತ್ರಗಳು, ನದಿಗಳು, ಪರ್ವಗಳ ಐತಿಹಾಸಿಕ, ಪೌರಾಣಿಕ ಮಹತ್ವಗಳನ್ನು ಕೆಲವು ಶ್ಲೋಕಗಳಲ್ಲಿ ವರ್ಣಿಸಲಾಗಿದೆ. ಈ ಕೃತಿ ಪಶ್ಚಿಮ, ಉತ್ತರ, ಪೂರ್ವ ಹಾಗೂ ದಕ್ಷಿಣ ಪ್ರಬಂಧವೆಂಬ 4 ವಿಭಾಗಗಳನ್ನು ಒಳಗೊಂಡಿದೆ. ಪಶ್ಚಿಮ ಪ್ರಬಂಧದಲ್ಲಿ 99, ಉತ್ತರದಲ್ಲಿ 46 ಶ್ಲೋಕ, ಪೂರ್ವದಲ್ಲಿ 43 ಮತ್ತು ದಕ್ಷಿಣ ಪ್ರಬಂಧದಲ್ಲಿ 47 ಶ್ಲೋಕಗಳಿವೆ. ಈ ಕೃತಿಯಲ್ಲಿರುವ ಒಟ್ಟು ಶ್ಲೋಕಗಳ ಸಂಖ್ಯೆ 234.