ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್ ವಿಧಿವಶ
ಬೆಂಗಳೂರು: ವಿಜ್ಞಾನ, ಶಿಕ್ಷಣ, ಪರಿಸರ ಕ್ಷೇತ್ರದ ಪರಿಣಿತ, ಇಸ್ರೋ ಮಾಜಿ ಅಧ್ಯಕ್ಷ ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ (84) ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಅವರು ಪುತ್ರರಾದ ರಾಜೇಶ್, ಸಂಜಯ್ರನ್ನು ಅಗಲಿದ್ದಾರೆ. ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಭಾನುವಾರ (ಏ. 27) ಬೆಳಗ್ಗೆ 10ರಿಂದ ಮಧ್ಯಾಹ್ನದವರೆಗೆ ಸಾರ್ವಜನಿಕರಿಗಾಗಿ ಮೃತರ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆ ನಡೆಸುವ ಸಮಯವನ್ನು ಶನಿವಾರ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಜ್ಞಾನಿ, ವಿಜ್ಞಾನಿ, ಬಾಹ್ಯಾಕಾಶ ಪರಿಣತ, ಶಿಕ್ಷಣ ತಜ್ಞ, ಪರಿಸರ ತಜ್ಞ... ಹೀಗೆ ಒಂದಲ್ಲ, ಎರಡಲ್ಲ, ಹಲವು ವಿಶೇಷಣಗಳಿಂದ ಡಾ. ಕೆ. ಕಸ್ತೂರಿರಂಗನ್ ಅವರನ್ನು ವರ್ಣಿಸಬಹುದು. ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಕಸ್ತೂರಿರಂಗನ್ ಅವರು ಕೈಯಾಡಿಸದ ಕ್ಷೇತ್ರಗಳಿಲ್ಲ ಎನ್ನಬಹುದು. ದೇಶಾದ್ಯಂತ, ಅಷ್ಟೇ ಏಕೆ, ಜಗತ್ತಿನಾದ್ಯಂತ ಕರ್ನಾಟಕದ ಜ್ಞಾನಪತಾಕೆ ಹಾರಿಸಿದ ಕನ್ನಡಿಗನ ಯಶೋಗಾಥೆಯತ್ತ ಒಂದು ಸ್ಥೂಲನೋಟ ಇಲ್ಲಿದೆ.
ತುಂಬಿದ ಕೊಡ ತುಳುಕುವುದಿಲ್ಲ ಎಂಬ ಪ್ರಸಿದ್ಧ ಮಾತಿಗೆ ಅನ್ವರ್ಥವಾಗಿ ಬದುಕಿದವರು ವಿಜ್ಞಾನಿ ಡಾ. ಕೆ. ಕಸ್ತೂರಿರಂಗನ್. ಸರಳತೆ, ಸಜ್ಜನಿಕೆಗೆ ಹೆಸರಾಗಿದ್ದ ಅವರು ಅಪಾರ ಜ್ಞಾನ ಸಂಪತ್ತನ್ನು ಹೊಂದಿದ್ದರು. ವಿಜ್ಞಾನದ ಬಗ್ಗೆ ಆಳ ಅಧ್ಯಯನ, ಬಾಹ್ಯಾಕಾಶ ಕ್ಷೇತ್ರದ ಕುರಿತ ಜ್ಞಾನ ಸಂಪಾದನೆಯಿಂದಾಗಿಯೇ ಅವರು ಇಸ್ರೋ ಸಂಸ್ಥೆಯಲ್ಲಿ ವಿವಿಧ ಸ್ಥಾನಗಳನ್ನು ಅಲಂಕರಿಸಿ, 9 ವರ್ಷಗಳಷ್ಟು ದೀರ್ಘ ಅವಧಿಗೆ ಅದರ ಅಧ್ಯಕ್ಷರಾಗಿದ್ದರು. ಭಾರತೀಯ ಉಪಗ್ರಹ ಉಡಾವಣೆ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರಕ್ಕೆ ಯುವಜನರನ್ನು ಸೆಳೆಯುವಲ್ಲಿ ಅವರ ಕೊಡುಗೆ ಅನನ್ಯವಾದದ್ದು.
ಡಾ. ಕೆ. ಕಸ್ತೂರಿರಂಗನ್ 1940ರ ಅ. 24ರಂದು ಕೇರಳದ ಎರ್ನಾಕುಲಂನಲ್ಲಿ ಜನಿಸಿದರು. ಬಾಲಕನಾಗಿದ್ದಾಗಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರು ಬಾಂಬೆ ವಿಶ್ವವಿದ್ಯಾಲಯದಿಂದ ಭೌತವಿಜ್ಞಾನ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ, ಗುಜರಾತ್ ವಿವಿಯಲ್ಲಿ ಖಗೋಳ ವಿಜ್ಞಾನದಲ್ಲಿ ಪಿಎಚ್.ಡಿ ಮಾಡಿದ್ದರು. 1971ರಲ್ಲಿ ಬೆಂಗಳೂರಿನ ಇಸ್ರೋ ಉಪಗ್ರಹ ಕೇಂದ್ರದಲ್ಲಿ ಭೌತಶಾಸ್ತ್ರಜ್ಞನಾಗಿ ಸೇವೆ ಆರಂಭಿಸಿದ್ದರು. ಭಾರತ ಹಾರಿಬಿಟ್ಟ ಪ್ರಥಮ ಉಪಗ್ರಹ ಆರ್ಯಭಟ ಯೋಜನೆಯ ಆಡಳಿತ ಮಂಡಳಿಯ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರದು.
ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಕರುನಾಡು ಮುಂಚೂಣಿಯಲ್ಲಿದ್ದು, ಹೊಸ ಶಾಖೆಗಳ ಮೂಲಕ ವಿಜ್ಞಾನ ವಿಸ್ತರಣೆಗೆ ರಾಜ್ಯ ಸರ್ಕಾರ 2008ರಲ್ಲಿ ಕರ್ನಾಟಕ ಜ್ಞಾನ ಆಯೋಗವನ್ನು ಸ್ಥಾಪಿಸಿತು. ಡಾ. ಕಸ್ತೂರಿರಂನಗ್ ಅವರ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರವು ಇವರನ್ನು ಆಯೋಗದ ಸ್ಥಾಪಕ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. 2008-12 ಹಾಗೂ 2013-2019 ಎರಡು ಅವಧಿಯಲ್ಲಿ ಅವರು ನೀಡಿದ ಹಲವು ಶಿಫಾರಸುಗಳನ್ನು ಜಾರಿಗೆ ತರಲಾಗಿದೆ. ವಿಜ್ಞಾನ ಕ್ಷೇತ್ರವನ್ನು ಸದೃಢಗೊಳಿಸಲು ವಿದ್ಯಾರ್ಥಿ ಕೇಂದ್ರೀತ ತರಬೇತಿಗೆ ವಿಶೇಷ ಒತ್ತು ನೀಡಿದ್ದರು.
ಇಸ್ರೋ ಸಂಸ್ಥೆಯಿಂದ ನಿವೃತ್ತರಾದ ಡಾ. ಕಸ್ತೂರಿರಂಗನ್ ಅವರ ವೈಜ್ಞಾನಿಕ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ (2003-09) ಮಾಡಿತು. ಈ ಅವಧಿಯಲ್ಲಿ ವಿಜ್ಞಾನ ಕ್ಷೇತ್ರ ಹಾಗೂ ಇಸ್ರೋ ಸಂಸ್ಥೆ ಮೂಲಕ ಭಾರತವು ಇನ್ನಷ್ಟು ಪ್ರಗತಿ ಹೊಂದಲು ಸಂಸತ್ತಿನ ವಿವಿಧ ಸಮಿತಿಗಳ ಮೂಲಕ ಪ್ರಮುಖ ಶಿಫಾರಸುಗಳನ್ನು ಮಾಡಿ ಅವುಗಳ ಜಾರಿಗೆ ಕಾರಣರಾದರು.
ರಾಜ್ಯಸಭಾ ಸದಸ್ಯ ಅವಧಿ ಮುಗಿದ ಬಳಿಕ ಡಾ. ಕಸ್ತೂರಿರಂಗನ್ ಅವರು ತಮ್ಮ ನೆಚ್ಚಿನ ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. 2004-09ರ ವರೆಗೆ ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ್ಡ ಸ್ಟಡೀಸ್ (ನಿಯಾಸ್) ಸಂಸ್ಥೆಯನ್ನು ಮುನ್ನಡೆಸಿದರು. ಕೇಂದ್ರ ಯೋಜನಾ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. 2012-17ರವರೆಗೆ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಹಾಗೂ ರಾಜಸ್ತಾನ ಕೇಂದ್ರೀಯ ವಿವಿಯ ಕುಲಪತಿ ಆಗಿದ್ದರು. ಈ ರೀತಿ ದೇಶದ ಹಲವು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಆ ಎಲ್ಲ ಹುದ್ದೆಗಳಿಗೂ ಗೌರವ ತಂದುಕೊಟ್ಟ ಜ್ಞಾನಸಂತ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು.
ದೇಶದ ಶಿಕ್ಷಣ ವ್ಯವಸ್ಥೆಯನ್ನು ಪುನರ್ರೂಪಿಸಲು ಕೇಂದ್ರ ಸರ್ಕಾರ ಡಾ. ಕಸ್ತೂರಿರಂಗನ್ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಿತ್ತು. ಇದರ ನೇತೃತ್ವವನ್ನು ವಹಿಸಿದ್ದ ಅವರು ದೇಶದ ಉದ್ದಗಲಕ್ಕೂ ಸಂಚರಿಸಿ ಶಿಕ್ಷಣ ತಜ್ಞರು ಆದಿಯಾಗಿ ಶೈಕ್ಷಣಿಕ ಪಾಲುದಾರರೊಂದಿಗೆ ಚರ್ಚೆ, ಸಂವಾದ ನಡೆಸಿ ಕರಡು ವರದಿ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಎನ್ಇಪಿ-2020 ಜಾರಿಗೆ ಬಂದಿದ್ದು, ಹೊಸ ಪಠ್ಯಗಳಲ್ಲಿ ಹೊಸತನ ತರಲು ಸಾಧ್ಯವಾಗಿದೆ.
ಡಾ. ಕಸ್ತೂರಿರಂಗನ್ ಅವರು ಇಸ್ರೋದ ವಿವಿಧ ಹುದ್ದೆಗಳಲ್ಲಿ ಎರಡು ದಶಕಗಳ ಕಾಲ ಅವಿರತವಾಗಿ ದುಡಿದಿದ್ದಾರೆ. 1994ರಿಂದ 2003ರವರೆಗೆ ಇಸ್ರೋ ಅಧ್ಯಕ್ಷರಾಗಿ ಸಂಸ್ಥೆಯನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಶ್ರಮ ವಹಿಸಿದ್ದರು. ಅಧ್ಯಕ್ಷ ಹುದ್ದೆಗೂ ಮುನ್ನ ಭಾಸ್ಕರ -1, 2 ಉಪಗ್ರಹ ಯೋಜನಾ ನಿರ್ದೇಶಕರಾಗಿ, ಸಂಸ್ಥೆಯ ಉಪನಿರ್ದೇಶಕ, ನಿರ್ದೇಶಕ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದರು. ಇಸ್ರೋದಿಂದ ನಿವೃತ್ತರಾದ ಬಳಿಕ ದೇಶದ ವಿವಿಧ ವಿಜ್ಞಾನ ಸಂಸ್ಥೆಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿ ವಿಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರದ ಪ್ರಗತಿಗೆ ಶ್ರಮಿಸಿದರು. ಡಾ. ಕಸ್ತೂರಿರಂಗನ್ ನಿಧನಕ್ಕೆ ಪ್ರಧಾನಿ ಆದಿಯಾಗಿ ಕೇಂದ್ರ ಸಚಿವರು, ಮುಖ್ಯಮಂತ್ರಿ, ಇಸ್ರೋ ಸಹಿತ ಹಲವು ವಿಜ್ಞಾನ ಸಂಸ್ಥೆಗಳು ಕಂಬನಿ ಮಿಡಿದಿವೆ.
ಕರ್ನಾಟಕವೂ ಸೇರಿ 6 ರಾಜ್ಯಗಳಲ್ಲಿ ಹರಿಡಿಕೊಂಡಿರುವ ಪಶ್ಚಿಮ ಘಟ್ಟ ಸಂರಕ್ಷಣೆಗೆ ಕೇಂದ್ರ ಸರ್ಕಾರ ಪರಿಸರ ತಜ್ಞ ಮಾಧವ ಗಾಡ್ಗಿಳ್ ನೇತೃತ್ವದಲ್ಲಿ ಸಮಿತಿ ನೇಮಿಸಿತ್ತು. 2011ರಲ್ಲಿ ಸಮಿತಿ ನೀಡಿದ್ದ ವರದಿಗೆ ಆರೂ ರಾಜ್ಯಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಕೆಲವೊಂದು ಅಂಶಗಳನ್ನು ಮರು ಪರಿಶೀಲಿಸಲು ಡಾ. ಕಸ್ತೂರಿರಂಗನ್ ನೇತೃತ್ವದಲ್ಲಿ ಸಮಿತಿ ಅಸ್ತಿತ್ವಕ್ಕೆ ಬಂದಿತು. ಇವರು ಕೂಡ ಜೀವ ವೈವಿಧ್ಯ ತಾಣವಾಗಿರುವ ಪಶ್ಚಿಮ ಘಟ್ಟದಲ್ಲಿ ಕ್ವಾರಿ ಸಹಿತ ಎಲ್ಲ ಬಗೆಯ ಗಣಿಗಾರಿಕೆ ಹಾಗೂ ಪರಸರಕ್ಕೆ ಹಾನಿ ಮಾಡುವ ಚಟುವಟಿಕೆಗೆ ಕಡಿವಾಣ ಹಾಕಬೇಕೆಂದು ವರದಿ ಸಲ್ಲಿಸಿದರು. ಇದಕ್ಕೂ ಆ ಭಾಗದ ಜನರ ವಿರೋಧ ವ್ಯಕ್ತವಾಗಿದೆ.
ಡಾ. ಕಸ್ತೂರಿರಂಗನ್ ಅವರನ್ನು ಹತ್ತುಹಲವು ಪ್ರಶಸ್ತಿ, ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. ಅಸಂಖ್ಯ ಎನಿಸುವಷ್ಟು ರಾಷ್ಟ್ರೀಯ, ಜಾಗತಿಕ ಮಟ್ಟದ ಪ್ರಶಸ್ತಿಗಳಿಗೆ ಅವರು ಕೊರಳೊಡ್ಡಿದ್ದಾರೆ. 1982ರಲ್ಲಿ ಪದ್ಮಶ್ರೀ, 1992ರಲ್ಲಿ ಪದ್ಮಭೂಷಣ, 2000ರಲ್ಲಿ ಪದ್ಮವಿಭೂಷಣ ಹಾಗೂ 2014ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇದಲ್ಲದೆ ಹಲವು ಸಂಸ್ಥೆಗಳು ಪ್ರಶಸ್ತಿ, ಗೌರವ ಪದವಿಯನ್ನು ನೀಡಿ ಸನ್ಮಾನಿಸಿವೆ.
8 ಜಾಗತಿಕ ಮಟ್ಟದ ಪ್ರಶಸ್ತಿ
56 ರಾಷ್ಟ್ರ ಮಟ್ಟದ ಪ್ರಶಸ್ತಿ
29 ವಿವಿಧ ವಿಶ್ವವಿದ್ಯಾಲಯಗಳಿಂದ ಪಡೆದ ಗೌರವ ಪದವಿ
120 ಘಟಿಕೋತ್ಸವ ಸಹಿತ ಇತರ ಸಮಾರಂಭಗಳಲ್ಲಿ ಭಾಷಣ
257 ರಾಷ್ಟ್ರೀಯ/ಜಾಗತಿಕ ನಿಯತಕಾಲಿಕೆಗಳಲ್ಲಿ ಪ್ರಬಂಧ
350 ಉಪನ್ಯಾಸ, ವೈಜ್ಞಾನಿಕ ವಿಷಯಗಳಲ್ಲಿ ಭಾಷಣ
16 ಫೆಲೋಶಿಪ್ (ರಾಷ್ಟ್ರ ಮಟ್ಟದಲ್ಲಿ)
6 ಫೆಲೋಶಿಪ್ (ಜಾಗತಿಕ ಮಟ್ಟದಲ್ಲಿ)
ಡಾ. ಕಸ್ತೂರಿರಂಗನ್ ವೈಜ್ಞಾನಿಕ ಕ್ಷೇತ್ರದಲ್ಲಿ ವೈಶ್ವಿಕ ಸ್ತರದ ದಿಗ್ಗಜರಾಗಿದ್ದರು. ವಿಜ್ಞಾನಿ, ನೀತಿನಿರ್ವತೃ, ಶಿಕ್ಷಣತಜ್ಞ, ಪರಿಸರತಜ್ಞ, ಉದಾತ್ತ ಮಾನವತಾವಾದಿ ಮತ್ತು ಸಂವೇದನಾಶೀಲ ವ್ಯಕ್ತಿಯಾಗಿದ್ದರು. | ಡಾ. ಮೋಹನ್ ಭಾಗವತ್, ಆರ್ಎಸ್ಎಸ್ ಸರಸಂಘಚಾಲಕ ಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ, ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್ ಅವರ ನಿಧನದಿಂದ ದುಃಖವಾಗಿದೆ. ಭಾರತದ ವೈಜ್ಞಾನಿಕ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ. | ಎಚ್.ಡಿ. ದೇವೇಗೌಡ ಮಾಜಿ ಪ್ರಧಾನಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೀರ್ತಿಪತಾಕೆಯನ್ನು ಆಗಸದೆತ್ತರಕ್ಕೆ ಹಾರಿಸಿದ್ದ ಡಾ. ಕಸ್ತೂರಿರಂಗನ್ರ ನಿಧನದಿಂದ ಆಘಾತವಾಗಿದೆ. ಕರ್ನಾಟಕ ಮೂಲದ ಡಾ. ಕಸ್ತೂರಿರಂಗನ್ ಅವರಿಗೆ ನಮ್ಮ ರಾಜ್ಯದ ಬಗ್ಗೆ ಅಪಾರವಾದ ಪ್ರೀತಿ ಮತ್ತು ಕಾಳಜಿ ಇತ್ತು. | ಸಿದ್ದರಾಮಯ್ಯ ಸಿಎಂ ಇಸ್ರೋ ಸಂಸ್ಥೆಯನ್ನು 9 ವರ್ಷ ಮುನ್ನಡೆಸಿದ್ದ ಕಸ್ತೂರಿ ರಂಗನ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಅನೇಕ ದಿಗ್ವಿಜಯಗಳ ಹಿಂದಿನ ಶಕ್ತಿ. ರಾಜ್ಯದ ಅಭಿವೃದ್ಧಿಗಾಗಿ ಅವರು ನೀಡಿದ ಮಾರ್ಗದರ್ಶನ, ಸಲಹೆ, ಸಹಕಾರವನ್ನು ನಾನೆಂದಿಗೂ ಮರೆಯಲಾರೆ. | ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ ವಿಶ್ವ ವಿಜ್ಞಾನದ ಮೇರು ಶಿಖರ, ಭಾರತದ ಹೆಮ್ಮೆಯ ಸುಪುತ್ರ, ಕಸ್ತೂರಿರಂಗನ್ ನಿಧನ ದೇಶಕ್ಕೆ ಭರಿಸಲಾರದ ನಷ್ಟ ಉಂಟುಮಾಡಿದೆ. ದೇಶಕ್ಕೆ ಹಾಗೂ ನಾಡಿಗೆ ಅವರು ನೀಡಿದ ಕೊಡುಗೆ ಅನನ್ಯವಾದುದು. | ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಕಸ್ತೂರಿರಂಗನ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಭಾರತೀಯ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಅವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. | ಆರ್. ಅಶೋಕ ವಿಧಾನಸಭೆ ವಿಪಕ್ಷ ನಾಯಕ