ಅಂಕಣ

ಸಂಬಂಧಗಳನ್ನು ಪ್ರಜ್ಞಾಪೂರ್ವಕವಾಗಿ ಆರಿಸಿಕೊಳ್ಳಿ..

Webdesk - Ravikanth
ಸಮಾಜದಲ್ಲಿ ಉತ್ತಮವಾದ ಯಾವುದೇ ವ್ಯವಸ್ಥೆ ಇಲ್ಲ, ಏಕೆಂದರೆ ಪ್ರತಿಯೊಂದು ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಬಹುದು ಮತ್ತು ತಪ್ಪಾಗಿ ಬಳಸಬಹುದು. ಅದೇ ಸಮಯದಲ್ಲಿ, ಪ್ರತಿ ವ್ಯವಸ್ಥೆಯನ್ನು ಅತ್ಯದ್ಭುತವಾಗಿ ಬದುಕಲೂ ಬಳಸಬಹುದು. ಈ ವಾಸ್ತವವನ್ನು ಅರ್ಥಮಾಡಿಕೊಂಡು ವ್ಯವಸ್ಥೆಯ ರಚನಾತ್ಮಕ ಬಳಕೆ ಅಗತ್ಯ.

ಸಮಾಜದಲ್ಲಿ ‘ಮದುವೆ’ ಎಂಬ ಸಂಬಂಧ ಏಕೆ ಹುಟ್ಟಿಕೊಂಡಿತು? ಅದಕ್ಕೂ ಮಿಗಿಲಾಗಿ, ನೀವು ವಿರುದ್ಧಲಿಂಗಿಯೊಂದಿಗೆ ಇರಲು ಏಕೆ ಬಯಸುತ್ತೀರಿ? ಸಂತಾನೋತ್ಪತ್ತಿ ಮಾಡಬಹುದು ಎಂಬ ಕಾರಣಕ್ಕಾಗಿ ಇದು ಪ್ರಕೃತಿಯೇ ಹೆಣೆದಂತಹ ಒಂದು ತಂತ್ರವಷ್ಟೆ. ನೀವು ಸಂತಾನೋತ್ಪತ್ತಿ ಮಾಡಬೇಕೆಂದು ಪ್ರಕೃತಿ ಬಯಸುತ್ತದೆ, ಆದ್ದರಿಂದ ನೀವು ವಿರುದ್ಧಲಿಂಗಿಯೆಡೆಗೆ ಆಕರ್ಷಿತರಾಗಲು, ಅದು ನಿಮ್ಮೊಂದಿಗೆ ಒಂದು ರಾಸಾಯನಿಕ ಆಟವನ್ನು ಆಡುತ್ತಿದೆ.

ಒಬ್ಬ ಪುರುಷ ಶಾರೀರಿಕವಾಗಿ ಮಾತ್ರ ಒಬ್ಬ ಮಹಿಳೆಗೆ ಭಿನ್ನವಾಗಿರುತ್ತಾನೆ. ಬೇರೆ ಯಾವುದೇ ರೀತಿಯಲ್ಲಿ ಅವರು ವಿರುದ್ಧವಾಗಿಲ್ಲ. ಆದರೆ ನಾವು ಮಾತ್ರ ಅದರ ಬಗ್ಗೆ ಬಹು ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿಬಿಟ್ಟಿದ್ದೇವೆ. ಇದು ಮಾನವ ಜನಾಂಗದ ಶಾಶ್ವತತೆಗಾಗಿ ಪ್ರಕೃತಿಯೇ ಮಾಡಿರುವ ಸರಳ ವ್ಯತ್ಯಾಸವಾಗಿದೆ. ಆದರೆ ಶಾರೀರಿಕ ಅಗತ್ಯಗಳು ನಿಮ್ಮೊಳಗೆ ಇರುವುದರಿಂದ ಮತ್ತು ಪ್ರಾಣಿಗಳಿಗೆ ಹೋಲಿಸಿದರೆ ನಿಮ್ಮಲ್ಲಿ ಇನ್ನೂ ಹೆಚ್ಚಿನ ಸಂವೇದನೆಗಳು ಮತ್ತು ಪ್ರಬಲವಾದ ಭಾವನೆಗಳು ಇರುವುದರಿಂದ, ಲೈಂಗಿಕತೆಯನ್ನು ಒಂದು ಸಂಪ್ರದಾಯದ ಚೌಕಟ್ಟಿನೊಳಗಿಟ್ಟಿದ್ದೇವೆ. ಮದುವೆ ಎಂದರೆ ಇದೇ. ಅಲ್ಲದೆ ನಾವು ನಮ್ಮ ಮಕ್ಕಳನ್ನು ಪೋಷಿಸಬೇಕು ಮತ್ತು ಅವರನ್ನು ಬೆಳೆಸಬೇಕು, ಮತ್ತು ಒಂದು ಬದ್ಧವಾದ ವಾತಾವರಣವಿಲ್ಲದಿದ್ದರೆ, ಈ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು ಈ ವಿವಾಹ ಸಂಪ್ರದಾಯವನ್ನು ರಚಿಸಿದ್ದೇವೆ. ಇದರಿಂದ ಲೈಂಗಿಕತೆ ಮತ್ತು ಸಂತಾನ ಎರಡನ್ನೂ ನಿರ್ವಹಿಸುವುದು ಸಾಧ್ಯವಾಗುತ್ತದೆ ಮತ್ತು ಮಕ್ಕಳು ಹೆಚ್ಚು ಸ್ಥಿರವಾದ ವಾತಾವರಣದಲ್ಲಿ ಬೆಳೆಯುತ್ತಾರೆ.

ಈ ಭೌತಿಕ ಅಗತ್ಯಗಳನ್ನು ಮಾತ್ರ ಸರಿಯಾಗಿ ಗಮನಿಸಿದರೆ, ಅವು ನಿಮ್ಮಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅರ್ಥವಾಗುತ್ತದೆ. ಜೀವನದ ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಅವು ಪ್ರಬಲವಾಗಿರುತ್ತವೆ. ಅದರ ನಂತರ ಅವು ಬತ್ತಿಹೋಗುತ್ತವೆ. ಆದರೆ ಜೀವನದಲ್ಲಿ ಭಾವೋದ್ವೇಗದ ಒಂದು ಸಂಬಂಧವಿಲ್ಲದೇ ಹೋದರೆ ಜೀವನವೇ ಶೂನ್ಯ ಎಂದು ಇತ್ತೀಚೆಗೆ ಹೇಳಲಾಗುತ್ತಿದೆ. ಈ ಕಾರಣದಿಂದಾಗಿ, ನೀವೇನೇ ಮಾಡಿದರೂ, ಜೀವನದಲ್ಲಿ ಎಲ್ಲವೂ ಸುಂದರವಾಗಿ ನಡೆಯುತ್ತಿದ್ದರೂ, ಈ ರೀತಿಯ ಕೆಲವು ಸಂಬಂಧಗಳನ್ನು ಹೊಂದದಿದ್ದರೆ, ಏನನ್ನೋ ಕಳೆದುಕೊಂಡಂತೆ ನಿಮಗನಿಸುತ್ತದೆ. ಅದು ಹಾಗೇನಲ್ಲ, ಆದರೆ ಇಂದಿನ ಸಮಾಜವು ಜನರನ್ನು ಈ ರೀತಿಯಾಗಿ ತಯಾರು ಮಾಡುತ್ತಿದೆ.

ಮದುವೆಗೆ ಪ್ರತಿಯಾಗಿ ಲಿವ್-ಇನ್ ಸಂಬಂಧ?: ಕೆಲವರು ಮದುವೆಯನ್ನು ದುರುಪಯೋಗಪಡಿಸಿಕೊಂಡಿರುವ ಕಾರಣದಿಂದಾಗಿ ನಮ್ಮ ದೇಶದಲ್ಲಿನ ಒಂದಷ್ಟು ಜನ ವಿವಾಹದ ಚೌಕಟ್ಟನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ. ಬಂಡಾಯ ವ್ಯಕ್ತಿತ್ವದವರು ಎಂದೆನಿಸಿಕೊಳ್ಳುವವರು ಮದುವೆಯನ್ನು ಒಂದು ಬಂಧನವಾಗಿ ಭಾವಿಸುತ್ತಾರೆ, ಆದ್ದರಿಂದ ಅವರಿಗೆ ಮದುವೆ ಬೇಕಿಲ್ಲ. ಅವರಿಗೆ ಅಂಕೆಯಿಲ್ಲದ ಸಂಬಂಧಗಳು ಅಥವಾ ಸಹವಾಸ ಅಥವಾ ಮತ್ತಿನ್ನೇನೋ ಬೇಕು. ಯಾವುದೇ ಉದ್ದೇಶವಿಲ್ಲದೆ ಬಂಡಾಯ ಏಳುವುದಕ್ಕೆ ಏನೂ ಅರ್ಥವಿಲ್ಲ. ಇದು ಕೇವಲ ಅವರ ಅಹಂ. ಅಹಂ ಯಾವಾಗಲೂ ಎಲ್ಲವನ್ನೂ ಒಡೆಯಲು ಮತ್ತು ಹೊಸದನ್ನು ಮಾಡಲು ಬಯಸುತ್ತದೆ. ಆದರೆ ಯಾವುದೇ ಹೊಸ ವಿಷಯವಾಗಲಿ, ನೀವದನ್ನು 10 ವರ್ಷಗಳ ಕಾಲ ಮುಂದುವರಿಸಿದರೆ, ಅದೂ ಹಳೆಯದಾಗಿ ಶೋಚನೀಯವಾಗುತ್ತದೆ. ಲಿವ್-ಇನ್ ಸಂಬಂಧದಲ್ಲಿರುವ ದಂಪತಿ ಸಹ ಪರಸ್ಪರ ಜಗಳವಾಡುತ್ತಾರೆ. ಆದ್ದರಿಂದ, ಈ ಸಮಸ್ಯೆಗಳು ಮದುವೆಯ ಕಾರಣದಿಂದ ಆಗಿಲ್ಲ; ಬದಲಿಗೆ ಜನರ ಅಪೂರ್ಣತೆ ಮತ್ತು ಅಪಕ್ವತೆಯ ಕಾರಣದಿಂದಾಗಿವೆ ಎನ್ನಬಹುದು.

ಮದುವೆಯ ಆಚಾರಕ್ರಮವನ್ನು ನಾಶಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಮೂರ್ಖತನದ ಕೆಲಸ ಎಂದು ನಾನು ಹೇಳುತ್ತೇನೆ. ಏಕೆಂದರೆ ಅದಕ್ಕಿಂತ ಉತ್ತಮವಾದ ಬದಲಿ ವ್ಯವಸ್ಥೆಯನ್ನು ಸಮಾಜ ಇನ್ನೂ ಕಂಡುಕೊಂಡಿಲ್ಲ. ಮದುವೆಯೆನ್ನುವುದು ನಮ್ಮ ಅನುಕೂಲಕ್ಕಾಗಿ ನಾವು ರಚಿಸಿಕೊಂಡಂತಹ ಸಂಗತಿಯಾಗಿದೆ, ಆದರೆ ಅದಕ್ಕಿಂತ ಇನ್ನೂ ಉತ್ತಮವಾದ ಪರ್ಯಾಯವನ್ನು ಇನ್ನೂ ಹೊಂದಿಲ್ಲ. ಈ ನಿಟ್ಟಿನಲ್ಲಿ ಕೆಲವು ಪರ್ಯಾಯಗಳನ್ನೇನೋ ತರಲಾಗಿದೆ. ಆದರೆ ಅಲ್ಲಿಯೂ ತುಂಬಾ ಹೆಣಗಾಟಗಳಿವೆ. ಜನರು ತಾವು ಯಾರೊಂದಿಗಾದರೂ ಇದ್ದುಬಿಡಬಹುದು ಎಂದು ಭಾವಿಸಿಕೊಂಡರು; ಆದರೆ ಅಲ್ಲೂ ಅವರು ಹೆಣಗಾಡುತ್ತಾರೆ, ಹೊಡೆದಾಡುತ್ತಾರೆ, ಅಸೂಯೆ ಪಡುತ್ತಾರೆ ಮತ್ತು ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಪ್ರಪಂಚದ ವಾಸ್ತವ ಇದೇ ಅಲ್ಲವೇ? ಇದೆಲ್ಲವನ್ನೂ ಗಣನೆಗೆ ತೆಗೆದುಕೊಂಡೇ ಮದುವೆ ಎಂಬ ಸಂಪ್ರದಾಯವನ್ನು ರೂಢಿಸಲಾಯಿತು.

ಮದುವೆಯಲ್ಲಿ, ಸ್ವಲ್ಪ ಮಟ್ಟಿಗಿನ ಬದ್ಧತೆಯ ಪ್ರಜ್ಞೆ ಇರುತ್ತದೆ. ನೀವು ದಾರಿ ತಪ್ಪಿದರೆ, ಆ ಬದ್ಧತೆಯು ನಿಮ್ಮನ್ನು ಹಿಂದಕ್ಕೆ ಎಳೆದು, ಮತ್ತೆ ದಾರಿಗೆ ತರಲು ಸಹಾಯ ಮಾಡುತ್ತದೆ. ಬದ್ಧತೆಯಿರದ ಸಂಬಂಧಗಳು ಜನರಲ್ಲಿ ತೀವ್ರ ಅಭದ್ರತಾಭಾವನೆಗೆ ಕಾರಣವಾಗಬಹುದು. ಪಾಶ್ಚಿಮಾತ್ಯ ದೇಶಗಳಲ್ಲಿ ಸಂಭವಿಸಿರುವುದು ಇದೇ. ಸಂಬಂಧಗಳು ತುಂಬಾ ಅನಿಶ್ಚಿತವಾಗಿರುವುದರಿಂದ ಅವುಗಳು ತುಂಬಾ ನೋವಿನಿಂದ ಕೂಡಿವೆ. ಜನ ಏನು ಬೇಕಾದರೂ ಮಾಡಬಹುದು ಎನ್ನುವುದು ಸದ್ಯಕ್ಕೆ ಫ್ಯಾಷನ್ ಆಗಿ ತೋರಬಹುದು; ಆದರೆ ಹೆಚ್ಚಿನ ಜನರಿಗೆ ಅಂತಹ ಅನಿಶ್ಚಿತತೆಯನ್ನು ನಿಭಾಯಿಸುವ ಮನಸ್ಸಿನ ಸ್ಥಿರತೆ ಇಲ್ಲ. ಎಲ್ಲಾ ಸಮಯದಲ್ಲೂ ಯಾರಿ ಗಾದರೂ ಅಂಟಿಕೊಂಡಿರಲು ಹತಾಶಭಾವದಿಂದ ಪ್ರಯತ್ನಿಸುವುದು ಮನುಷ್ಯನನ್ನು ಹಲವು ವಿಧಗಳಲ್ಲಿ ನಾಶಪಡಿಸುತ್ತದೆ. ನಿರಂತರವಾಗಿ ಅವನು ಅನಿಶ್ಚಿತನಾಗಿರುವಾಗ, ಮನುಷ್ಯನ ಬದುಕುವ ಸಾಮರ್ಥ್ಯವು ನಿರೀಕ್ಷೆಗೂ ಮೀರಿ ಕಡಿಮೆಯಾಗುತ್ತದೆ.

ಮನುಷ್ಯರು ಹಲವು ಸಂಕೀರ್ಣವಾದ ಭಾವನೆಗಳನ್ನು ಹೊಂದಿದ್ದಾರೆ. ಆ ಭಾವನೆಗಳನ್ನು ಸುಮ್ಮನೆ ದಾಂಧಲೆ ಮಾಡಲು ಬಿಟ್ಟರೆ, ಹೆಚ್ಚಿನ ಜನ ಹುಚ್ಚರಾಗಿಬಿಡಬಹುದು. ಇದರಿಂದ ಮುಕ್ತರಾದ ಕೆಲವರು ಇದ್ದಾರೆ. ಆದರೆ 99% ಜನ, ತಮ್ಮ ಭಾವನೆಗಳನ್ನು ಹೇಗಾದರೂ ವ್ಯವಸ್ಥಿತಗೊಳಿಸಿ ಒಂದೆಡೆಗೆ ಹರಿಸದಿದ್ದರೆ ಮಾನಸಿಕ ಸಮತೋಲನ ಕಳೆದುಕೊಳ್ಳುವ ಅಪಾಯವಿದೆ. ಹಾಗಾಗಿ ಇವೆಲ್ಲವನ್ನೂ ಚೆನ್ನಾಗಿ ನಿಭಾಯಿಸಲು ‘ಮದುವೆ’ ಎಂಬ ವ್ಯವಸ್ಥೆಯನ್ನು ರಚಿಸಲಾಯಿತು. ದುರದೃಷ್ಟವಶಾತ್, ಅನೇಕ ವಿಷಯಗಳಂತೆ, ಇದನ್ನೂ ದುರುಪಯೋಗಪಡಿಸಿಕೊಳ್ಳಲಾಗಿದೆ. ನಾನು ಇಲ್ಲಿ ದುರುಪಯೋಗ ಎನ್ನುವಾಗ, ಕೇವಲ ಮಹಿಳೆಯರು ಅನುಭವಿಸುವ ಯಾತನೆಯ ಬಗ್ಗೆ ಮಾತನಾಡುತ್ತಿಲ್ಲ. ಪುರುಷ ಸಹ ಯಾತನೆ ಅನುಭವಿಸುತ್ತಾನೆ. ಆದರೆ ಮಹಿಳೆಯರು ತಮ್ಮ ಸಂಕಟಗಳ ಬಗ್ಗೆ ಸ್ವಲ್ಪ ಹೆಚ್ಚು ಮುಕ್ತವಾಗಿ ಮಾತನಾಡುತ್ತಾರೆ ಅಷ್ಟೆ.

ವಿವಾಹ ವ್ಯವಸ್ಥೆಯಲ್ಲಿ ಮಹಿಳೆಯರು ಮಾತ್ರವಲ್ಲ ಪುರುಷರೂ ಕಷ್ಟಗಳನ್ನು ಅನುಭವಿಸಿದ್ದಾರೆ. ಆದರೆ ಪುರುಷರು ತಮ್ಮ ಈ ಸಂಕಟವನ್ನು ಬಂಡವಾಳವನ್ನಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ. ‘ಹೆಂಡತಿ ನನ್ನನ್ನು ಬಾಧೆಗೊಳಪಡಿಸುತ್ತಿದ್ದಾಳೆ’ ಎಂದು ಹೇಳಿಕೊಳ್ಳಲು ಅವನು ನಾಚಿಕೆಪಡುತ್ತಾನೆ. ಹಾಗೆ ಹೇಳಿಕೊಂಡರೆ ತನ್ನ ಪೌರುಷತನಕ್ಕೆ ಧಕ್ಕೆ ಎಂದು ಅವನು ಭಾವಿಸುತ್ತಾನೆ. ಆದರೆ ಮಹಿಳೆಗೆ ಅದನ್ನು ಹೇಳಿಕೊಳ್ಳುವುದು ಸುಲಭ. ಆದ್ದರಿಂದ, ಮದುವೆ ವ್ಯವಸ್ಥೆಯಲ್ಲಿ ಇಬ್ಬರೂ ವಿಭಿನ್ನ ರೀತಿಯ ಕಷ್ಟಗಳನ್ನು ಅನುಭವಿಸಿದ್ದಾರೆ ಮತ್ತು ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

ವಿವಾಹ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡರೆ, ‘ನಾವು ಮದುವೆಯನ್ನು ಕೊನೆಗೊಳಿಸಬೇಕು, ಏಕೆಂದರೆ ಅದು ನಮಗೆ ದುಃಖ ಉಂಟುಮಾಡುತ್ತದೆ’ ಎಂದು ಕೆಲವರು ಹೇಳುತ್ತಾರೆ. ಆದರೆ, ನಾನು ಹೇಳುವುದೇನೆಂದರೆ, ನಿಮಗೆ ಉತ್ತಮ ಬದಲಿ ವ್ಯವಸ್ಥೆ ಇಲ್ಲದಿದ್ದರೆ ಯಾವುದೇ ಚೌಕಟ್ಟನ್ನು ನಾಶ ಮಾಡಲು ಮುಂದಾಗಬೇಡಿ. ನಿಮ್ಮಲ್ಲಿ ಯಾವುದೇ ಪಟ್ಟುಹಿಡಿಯುವಿಕೆಯ ಭಾವವಿಲ್ಲದೇ ಇದ್ದರೆ, ಯಾರೊಂದಿಗೂ ಸಂಬಂಧವನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲದೇ ಇರುವಂತಹ ಪ್ರಜ್ಞೆ ನಿಮ್ಮಲ್ಲಿ ಬೆಳೆದಿದ್ದರೆ, ನಿಮಗೆ ಆ ಮಟ್ಟದ ಪ್ರಜ್ಞೆ ಇದ್ದರೆ, ನೀವು ಸುಮ್ಮನೆ ನಿರಾತಂಕವಾಗಿ ಬದುಕುತ್ತೀರಿ. ಆದರೆ ಹೆಚ್ಚಿನ ಜನರಿಗೆ ಅದು ಸಾಧ್ಯವಿಲ್ಲ.

ಸಾರ್ವತ್ರಿಕ ಪರಿಹಾರಗಳಿಲ್ಲ: ಇದಕ್ಕಾಗಿಯೇ ಭಾರತೀಯ ಸಂಪ್ರದಾಯದಲ್ಲಿ, ನಾವು ಸಂಬಂಧಗಳಿಗೆ ಒಂದು ನಿಶ್ಚಿತತೆಯನ್ನು ಸೃಷ್ಟಿಸಿದ್ದೇವೆ. ಒಮ್ಮೆ ನೀವು ಮದುವೆಯಾದರೆ, ಅದು ಜೀವನದುದ್ದಕ್ಕೂ ಅನ್ವಯಿಸುತ್ತದೆ. ಅದು ಬಹಳ ಸುಂದರವಾದದ್ದು, ಆದರೆ ಅದೇ ಸಮಯದಲ್ಲಿ, ಅದು ಶೋಷಣೆಯ ಮೂಲವಾದರೆ, ಅದು ತುಂಬಾ ಅಸಹ್ಯಕ್ಕೂ ತಿರುಗಬಹುದು. ಹಾಗಾದರೆ ನಮಗೆ ಯಾವ ವ್ಯವಸ್ಥೆ ಉತ್ತಮ? ಸಮಾಜದಲ್ಲಿ ಉತ್ತಮವಾದ ಯಾವುದೇ ವ್ಯವಸ್ಥೆ ಇಲ್ಲ, ಏಕೆಂದರೆ ಪ್ರತಿಯೊಂದು ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಬಹುದು ಮತ್ತು ತಪ್ಪಾಗಿ ಬಳಸಬಹುದು. ಅದೇ ಸಮಯದಲ್ಲಿ, ಪ್ರತಿ ವ್ಯವಸ್ಥೆಯನ್ನು ಅತ್ಯದ್ಭುತವಾಗಿ ಬದುಕಲೂ ಬಳಸಬಹುದು. ಆದ್ದರಿಂದ ನಾವು ಏನು ಮಾಡುತ್ತೇವೆ, ಅದನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎಂಬುದೇ ಮುಖ್ಯವಾದ ವಿಷಯ.

ಆದ್ದರಿಂದ, ಯಾವ ಸಂಬಂಧ ಸೂಕ್ತವಾದುದು ಎಂಬುದು ವೈಯಕ್ತಿಕವಾದ ವಿಚಾರ. ಅದಕ್ಕೆ ಯಾವುದೇ ಸಾರ್ವತ್ರಿಕವಾದ ಶಾಸನಗಳಿಲ್ಲ. ಆದರೆ ನಾನು ನೋಡಿ ರುವ ಪ್ರಕಾರ, ನಿರಂತರವಾದ ಅನಿಶ್ಚಿತತೆಯನ್ನು ನಿಭಾಯಿಸಲು ಹೆಚ್ಚಿನ ಮನುಷ್ಯರು ಮಾನಸಿಕ ಸ್ಥಿರತೆ ಹೊಂದಿಲ್ಲ; ಅವರು ಹುಚ್ಚರಾಗಿಬಿಡುತ್ತಾರೆ, ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಹಾಗೆ ನಡೆಯುತ್ತಿದೆ. ಜೀವನದ ಅನಿಶ್ಚಿತತೆಯನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ಹಲವಾರು ಜನ ಮಾನಸಿಕವಾಗಿ ಬಳಲುತ್ತಿದ್ದಾರೆ. ನಿಮ್ಮ ಆರ್ಥಿಕ ಸನ್ನಿವೇಶಗಳು, ಸಾಮಾಜಿಕ ಸಂದರ್ಭಗಳು, ಭೌತಿಕ ಸಂದರ್ಭಗಳು ಸಹ ಅನಿಶ್ಚಿತವಾಗಿವೆ. ಆದರೆ ಕನಿಷ್ಠಪಕ್ಷ, ಭಾವನಾತ್ಮಕ ವಿಷಯಗಳಲ್ಲಿ ಸ್ವಲ್ಪ ಸ್ಥಿರತೆ ಇದ್ದರೆ, ಅದು ನಿಮ್ಮ ಜೀವನವನ್ನು ಹೆಚ್ಚು ಪರಿಣಾಮಕಾರಿಯಾಗಿ ಬದುಕಲು ಒಂದು ನೆಲೆಯನ್ನು ನೀಡುತ್ತದೆ. ನಿಮಗದು ಅಗತ್ಯವಿಲ್ಲದಿದ್ದರೆ, ಅದು ನಿಮಗೆ ಬಿಟ್ಟದ್ದು. ಇದು ವೈಯಕ್ತಿಕ ವಿಚಾರ. ಆದರೆ ಹೆಚ್ಚಿನ ಜನರಿಗೆ ಆ ಸ್ಥಿರತೆ ಅಗತ್ಯವಾಗಿರುತ್ತದೆ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)