ಅಂಕಣ

ತಂದೆಯ ಆಸ್ತಿಯಲ್ಲಿ ಪಾಲು ಬೇಡ ಎಂದವರು ಹಲವಾರು ವರ್ಷ ಬಿಟ್ಟು ಕೇಳಬಹುದೆ?

ನಮ್ಮ ಕುಟುಂಬದಲ್ಲಿ ನಾವು ನಾಲ್ಕು ಜನ ಅಣ್ಣ ತಮ್ಮಂದಿರು ಇದ್ದೇವೆ. ಅವರಲ್ಲಿ, ನಾನು ಹಿರಿಯ ಅಣ್ಣ. ನಾನು ದುಡಿದ ಹಣ ಮತ್ತು ನನ್ನ ಹೆಂಡತಿಯ ಬಂಗಾರ ಮಾಡಿ ಬಂದ ಹಣದಿಂದ, ಮತ್ತು ನನ್ನ ಹೆಂಡತಿಯ ತವರಿನ ಕಡೆಯಿಂದ ಸಹಾಯ ಪಡೆದು ಆರು ಎಕರೆ ಜಮೀನು 1988 ರಲ್ಲಿ ಖರೀದಿ ಮಾಡಿರುತ್ತೇನೆ.

ಆಗ ನನ್ನ ತಮ್ಮಂದಿರು 6,7,8 ವರ್ಷ ವಯಸ್ಸು ಆಗಿರುತ್ತದೆ ಅಷ್ಟೇ. 30 ವರ್ಷಗಳಿಂದ ನನ್ನ ತಮ್ಮಂದಿರು ಯಾವುದೇ ತಕರಾರು ಮಾಡಿಲ್ಲ. ಈಗ ಅದರಲ್ಲೂ ಭಾಗ ಕೇಳುತ್ತಿದ್ದಾರೆ . ನನಗೆ ಯಾವ ಪಿತ್ರಾರ್ಜಿತ ಆಸ್ತಿಯೂ ಇರುವುದಿಲ್ಲ. ನಮ್ಮ ತಂದೆ ಖರೀದಿ ಮಾಡಿದ ಆಸ್ತಿಯಲ್ಲಿ ಅವರಿಗೆ ಭಾಗವಿದೆಯೇ?

ಉತ್ತರ: ನಿಮ್ಮ ತಂದೆ ಖರೀದಿ ಮಾಡಿದ ಆಸ್ತಿಯಲ್ಲಿ , ನಿಮ್ಮ ತಂದೆ ತೀರಿಕೊಂಡಿದ್ದರೆ, ನಿಮ್ಮ ತಂದೆಯ ಎಲ್ಲ ಮಕ್ಕಳಿಗೂ, ಮತ್ತು ನಿಮ್ಮ ತಾಯಿಗೂ ಸಮಭಾಗ ಇರುತ್ತದೆ. ಒಂದು ವೇಳೆ ನಿಮ್ಮ ತಂದೆ ಬದುಕಿದ್ದರೆ, ಅವರು ಖರೀದಿ ಮಾಡಿದ ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು.

ನೀವು ಖರೀದಿ ಮಾಡಿದ ಆಸ್ತಿ ನಿಮ್ಮ ಸ್ವಂತ ಸ್ವಯಾರ್ಜಿತ ಆಸ್ತಿಯಾಗಿರುವುದರಿಂದ ಅದರಲ್ಲಿ ನಿಮ್ಮ ತಮ್ಮಂದಿರಿಗೆ ಭಾಗ ಕೊಡಬೇಕಿಲ್ಲ. ಒಟ್ಟು ಕುಟುಂಬದ ಮೂಲ ಧನವನ್ನುಉಪಯೋಗಿಸದೇ ನಿಮ್ಮದೇ ಸ್ವಂತ ಹಣದಿಂದ ಖರೀದಿ ಮಾಡಿದ ಸ್ವತ್ತಿನಲ್ಲಿ ನಿಮ್ಮ ತಮ್ಮಂದಿರಿಗೆ ಭಾಗ ಕೊಡಬೇಕಿಲ್ಲ. ಆದರೆ, ಒಂದು ವೇಳೆ ನಿಮ್ಮ ತಮ್ಮಂದಿರು ನ್ಯಾಯಾಲಯದ ಮೆಟ್ಟಿಲು ಹತ್ತಿದರೆ, ನೀವು ಖರೀದಿ ಮಾಡಿದ ಸ್ವತ್ತು ನಿಮ್ಮ ಸ್ವಂತ , ಪ್ರತ್ಯೇಕ ಸ್ವಯಾರ್ಜಿತ ಸ್ವತ್ತು ಎನ್ನುವುದನ್ನು ನೀವೇ ಸಾಬೀತು ಮಾಡಬೇಕಾಗುತ್ತದೆ.

ಹಾಗೂ ನೀವು ಅದನ್ನು ಎಂದಿಗೂ ಒಟ್ಟು ಕುಟುಂಬದ ಸ್ವತ್ತು ಎನ್ನುವಂತೆ ಉಪಯೋಗಿಸದೇ ನಿಮ್ಮ ವಯಕ್ತಿಕ ಸ್ವತ್ತು ಎನ್ನುವಂತೆ ಉಪಯೋಗಿಸಿದ್ದಿರಿ ಎನ್ನುವುದನ್ನೂ ಸಾಬೀತು ಪಡಿಸಬೇಕಾಗುತ್ತದೆ.