ಅಂಕಣ

ಹೆಣ್ಣುಮಕ್ಕಳೇ ವಿಚ್ಛೇದನ ಕೇಳಿದರೆ ತೊಂದರೆ ಆಗುತ್ತದೆಯೇ?

suchetana
ಪ್ರಶ್ನೆ: ನಮ್ಮ ಅಕ್ಕನ ಮಗಳ ಮದುವೆಯಾಗಿ ಎಂಟು ವರ್ಷ ಆಗಿದೆ, ಎರಡು ಮಕ್ಕಳು. ಒಬ್ಬ ಮಗುವಿಗೆ ಆರು ವರ್ಷ ಮತ್ತೊಂದಕ್ಕೆ ನಾಲ್ಕು ವರ್ಷ. ಈಗ ನಮ್ಮ ಅಕ್ಕನ ವಿಚ್ಛೇದನ ಪಡೆಯಬೇಕೆಂದಿದ್ದಾಳೆ. ಅವಳಿಗೆ ಗಂಡನಿಂದ ತುಂಬಾ ತೊಂದರೆ ಆಗಿದೆ. ನಮ್ಮ ಅಕ್ಕನ ಮಗಳೇ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಏನಾದರೂ ತೊಂದರೆ ಆಗುತ್ತದೆಯೇ? ನೋಟೀಸು ಹೋದರೆ , ಅವಳ ಗಂಡನೂ ವಕೀಲರನ್ನು ನೇಮಿಸಬಹುದೇ? ಗಂಡನ ಜೊತೆಗೆ ಇರದೇ ಹೋದರೂ ಜೀವನಾಂಶ ಕೇಳಬಹುದೇ? ಮಕ್ಕಳು ತನಗೆ ಬೇಕು ಎಂದು ಅವನು ತಕರಾರು ಮಾಡಬಹುದೇ? ದಯಮಾಡಿ ಉತ್ತರಿಸಿ.

ಉತ್ತರ: ವಿಚ್ಛೇದನ ಯಾರಿಗೆ ಬೇಕೋ ಅವರು ಪ್ರಕರಣ ದಾಖಲಿಸಬಹುದು. ನಿಮ್ಮ ಅಕ್ಕನ ಮಗಳು ಕ್ರೂರತೆಯ ಆಧಾರದ ಮೇಲೆ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿದರೆ ಅವಳಿಗೆ ತೊಂದರೆ ಆಗುವುದಿಲ್ಲ. ಕಾನೂನಿನಲ್ಲಿ ಪ್ರಕರಣ ದಾಖಲು ಮಾಡುವ ಹಕ್ಕು ಆಕೆಗೆ ಇರುತ್ತದೆ.

ಆಕೆ ಪ್ರಕರಣ ದಾಖಲಿಸಿದಾಗ ನೋಟೀಸು ಹೋದ ಮೇಲೆ , ಆಕೆಯ ಗಂಡ ವಕೀಲರನ್ನು ನೇಮಿಸಿಕೊಳ್ಳಬಹುದು.

ವಿಚ್ಛೇದನದ ಪ್ರಕರಣ ನಡೆಯುವಾಗಲೂ, ಮತ್ತು ಪೂರ್ತಿ ಆದಮೇಲೂ ನಿಮ್ಮ ಅಕ್ಕನ ಮಗಳು ತನಗೆ ಮತ್ತು ಮಕ್ಕಳಿಗೆ ಜೀವನಾಂಶ ಕೊಡಬೇಕೆಂದು ಗಂಡನ ವಿರುದ್ಧ. ವಿಚ್ಛೇದನದ ಪ್ರಕರಣದಲ್ಲಿಯೇ ಅರ್ಜಿ ಹಾಕಬಹುದು. ಅಥವಾ ಪ್ರತ್ಯೇಕ ಪ್ರಕರಣವನ್ನೂ ದಾಖಲಿಸಿಬಹುದು.

ಮಕ್ಕಳು ತನಗೆ ಬೇಕೆಂದು ನಿಮ್ಮ ಅಕ್ಕನ ಮಗಳ ಗಂಡ ಕೋರ್ಟಿನಲ್ಲಿ ಪ್ರಕರಣ ಹಾಕಬಹುದು. ಆದರೆ , ಸಾಮಾನ್ಯವಾಗಿ ಮಕ್ಕಳ ಸುಪರ್ದನ್ನು ತಾಯಿಯಿಂದ ಏಕಾಏಕಿ ನ್ಯಾಯಾಲಯ ಬಲವಾದ ಸಕಾರಣಗಳು ಇಲ್ಲದಿದ್ದರೆ ಬದಲಿಸುವುದಿಲ್ಲ.ಆದರೆ ತನ್ನ ಮಕ್ಕಳನ್ನು ಆಗಾಗ ತಂದೆ ಭೇಟಿ ಮಾಡುವ ಅವಕಾಶ ಕೊಡುವ ಆದೇಶವನ್ನು ಮಾಡಬಹುದು.

(ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)