ವರ್ಕ್ ಫ್ರಂ ಹೋಂ ಇರುವ ಕಾರಣ, ಅಮ್ಮನಾಗಲು ಇದೇ ಬೆಸ್ಟ್ ಅವಧಿ ಎಂದುಕೊಂಡವರೀಗ ಕರೊನಾ 2ನೇ ಅಲೆಗೆ ತತ್ತರಿಸಿಹೋಗಿದ್ದಾರೆ. ಕ್ಷಣಕ್ಷಣಕ್ಕೂ ಕಾಡುವ ಆತಂಕದ ನಡುವೆ ತನಗೇನಾಗುವುದೋ ತನ್ನ ಹಸುಗೂಸಿಗೆ ಏನಾಗುವುದೋ ಎನ್ನುತ್ತಲೇ ಖಿನ್ನತೆಗೆ ಜಾರುತ್ತಿದ್ದಾರೆ. ಆತಂಕ, ಖಿನ್ನತೆ ಎಂಬುದು ಕರೊನಾಕ್ಕಿಂತ ಭೀಕರವಾದ ಸಮಸ್ಯೆ. ಆದರೆ ಅದರಿಂದ ದೂರವಿರುವುದು ಕಷ್ಟವೇನಲ್ಲ.
| ಸುಚೇತನಾ ನಾಯ್ಕ
‘ಲೇ ವೀಣಾ... ನಾನು ಪ್ರೆಗ್ನೆಂಟ್ ಕಣೆ... ನನ್ನ ಮಗುವಿನ ನಾಮಕರಣವನ್ನು ನೀನೇ ಮುಂದೆ ನಿಂತು ಮಾಡಬೇಕು ಆಯ್ತಾ? ಅದೂ ಇದೂ ನೆಪ ಹೇಳಿ ತಪ್ಪಿಸಬೇಡ.’ ಎಂದಿದ್ದ ಗೀತಾ...
‘ಇದು ನನಗೆ ಹುಟ್ತಾ ಇರೋ ಫಸ್ಟ್ ಪಾಪು ಅಲ್ವಾ. ತೊಟ್ಟಿಲಲ್ಲಿ ಮಲಗಿಸೋದಿಲ್ಲಪ್ಪ. ರಾತ್ರಿ ಅದಕ್ಕೇನಾದ್ರೂ ಸಮಸ್ಯೆಯಾದರೆ ಗೊತ್ತಾಗಲ್ಲ. ನನ್ನ ಪಕ್ಕನೇ ಇಟ್ಟುಕೊಂಡು ಮಲಗುವೆ’ ಎಂದಿದ್ದ ಸ್ನೇಹಾ.
‘ನನ್ನ ಮೊಮ್ಮಗುವಿಗೆ ಕಾಲಕಾಲಕ್ಕೆ ಸರಿಯಾಗಿ ಇಂಜೆಕ್ಷನ್ ಕೊಡಿಸು, ಪ್ರತಿ ವಾರ ಚೆಕಪ್ಗೆ ಕರೆದು ಕೊಂಡು ಹೋಗು... ತಪ್ಪಿಸಬೇಡ ನೋಡು ಮತ್ತೆ’ ಎಂದು ಸೊಸೆಗೆ ಪದೇ ಪದೇ ಹೇಳುತ್ತಿದ್ದ ಲಕ್ಷ್ಮ್ಮು.
ತನ್ನ ಮಗುವಿನ ನಾಮಕರಣ ಕಾರ್ಯಕ್ರಮ ಧಾಂ ಧೂಂ ಮಾಡಬೇಕು ಎಂದು ಕನಸು ಕಂಡಿದ್ದ ಸ್ಪೂರ್ತಿ.
ಎಲ್ಲರ ಕನಸುಗಳು ಈಗ ಉಲ್ಟಾ ಆಗಿವೆ. ಸ್ನೇಹಿತೆ ಎಲ್ಲಿ ಬಂದುಬಿಡುತ್ತಾಳೋ, ಮಗುವಿಗೆ ವೈರಸ್ ಹರಡಿಸಿಬಿಡುತ್ತಾಳೋ ಎನ್ನುವ ಚಿಂತೆ ಗೀತಾಳದ್ದಾದರೆ, ಸದ್ದಿಲ್ಲದೇ ದೇಹವನ್ನು ಸೇರುವ ವೈರಸ್ ಎಲ್ಲಿ ತನ್ನ ಕಂದಮ್ಮನಿಗೂ ಹರಡಿಬಿಡು ವುದೋ ಎಂಬ ಆತಂಕದಲ್ಲಿದ್ದಾಳೆ ಸ್ನೇಹಾ. ಮಗುವಿನ ನಾಮಕರಣವೂ ಬೇಡ, ಮನೆಗೆ ಜನರು ಬರುವುದೂ ಬೇಡ ಎಂದು ಅಂದುಕೊಳ್ಳುತ್ತಿದ್ದಾಳೆ ಸ್ಪೂರ್ತಿ. ‘ಆಸ್ಪತ್ರೆ ಗೀಸ್ಪತ್ರೆ ಏನೂ ಬೇಡ, ಮನೆಯಲ್ಲಿಯೇ ಇರಿ ಎಲ್ಲರೂ’ ಎನ್ನುತ್ತಿದ್ದಾರೆ ಲಕ್ಷ್ಮ್ಮು!
ಕಳೆದ ವರ್ಷ ಕರೊನಾದ ಮೊದಲ ಅಲೆಯಲ್ಲಿ ಬಹುತೇಕ ಕಂಪನಿಗಳು ವರ್ಷದವರೆಗೆ ವರ್ಕ್ ಫ್ರಂ ಹೋಂ ಘೋಷಿಸಿದ್ದವು. ಕಚೇರಿಗೆ ಅಲೆದಾಟ, ಟ್ರಾಫಿಕ್ ಕಿರಿಕಿರಿ, ಒಂದೊಂದು ವಾರ ಒಂದೊಂದು ಶಿಫ್ ್ಟಳಲ್ಲಿ ಕಚೇರಿಯಲ್ಲಿ ಸಮಯ ಕಳೆಯಬೇಕಾದ ಅನಿವಾರ್ಯತೆ... ಹೀಗೆ ಯಾವುದರ ಟೆನ್ಷನ್ನೂ ಇಲ್ಲದ ಕಾರಣ ಬಹುತೇಕ ದಂಪತಿ ಮಗುವಿನ ಬಗ್ಗೆ ಯೋಚನೆ ಮಾಡಿದ್ದರು. ಗರ್ಭಿಣಿಯಾದಾಗ ಮನೆಯಲ್ಲಿಯೇ ರೆಸ್ಟ್ ಮಾಡಬಹುದು, ಹಸುಗೂಸನ್ನು ಅವರಿವರ ಬಳಿ ಬಿಟ್ಟು ಕಚೇರಿಗೆ ಹೋಗುವ ಬದಲು ಮನೆಯಲ್ಲಿದ್ದುಕೊಂಡೇ ನೋಡಿಕೊಳ್ಳಬಹುದು... ಹೀಗೆಲ್ಲಾ ಯೋಜನೆ ರೂಪಿಸಿದರು. ಇದರ ಫಲವಾಗಿ ದಾಖಲೆ ಪ್ರಮಾಣದ ಮಕ್ಕಳು ಈ ಒಂದು ವರ್ಷದಲ್ಲಿ ಹುಟ್ಟಿವೆ. ವಿಶ್ವಸಂಸ್ಥೆಯ ಭಾಗವಾಗಿರುವ ಮಕ್ಕಳ ನಿಧಿ (ಯುನಿಸೆಫ್) ಇತ್ತೀಚೆಗೆ ನೀಡಿರುವ ಮಾಹಿತಿಯ ಪ್ರಕಾರ, 20 ದಶಲಕ್ಷ ಮಹಿಳೆಯರು ಈ ಅವಧಿಯಲ್ಲಿ ಭಾರತದಲ್ಲಿ ಗರ್ಭಿಣಿಯಾಗಿದ್ದಾರೆ.
ಕನಸುಗಳು ನುಚ್ಚುನೂರು: ಆದರೆ ಅದರ ನಡುವೆಯೇ ಕರೊನಾ 2ನೇ ಅಲೆ ಅಪ್ಪಳಿಸಿದೆ. ಒಂದನೇ ಅಲೆಯ ಸಮಯದಲ್ಲಿ ಹೊಟ್ಟೆಯಲ್ಲಿ ಮಗುವಿದ್ದಾಗ ಭಾವಿ ಅಮ್ಮಂದಿರು ಕಂಡಿದ್ದ ಕನಸೆಲ್ಲವನ್ನೂ ಕರೊನಾ ಎರಡನೇ ಅಲೆ ನುಚ್ಚುನೂರು ಮಾಡಿದೆ. ಕ್ಷಣಕ್ಷಣಕ್ಕೂ ಸಾವಿನ ಸುದ್ದಿ ಕೇಳುವ ಬಾಣಂತಿಯರ ಎಳೆಯ ದೇಹ ಅದೇ ವೇಗದಲ್ಲಿ ಖಿನ್ನತೆಗೆ ಜಾರುತ್ತಿದೆ; ನನಗೇನಾ ಗುವುದೋ, ಮಗುವಿಗೆ ಏನಾಗುವುದೋ, ಯಾರಾದರೂ ಬಂದು ಮಗುವನ್ನು ಎತ್ತಿಕೊಳ್ಳಲು ಬಂದರೆ ಏನು ಮಾಡುವುದು... ಹೀಗೆಲ್ಲಾ ಬಾಣಂತಿ ಭ್ರಮಣೆಯಲ್ಲಿ (ಸನ್ನಿ) ಹಲವು ಮಹಿಳೆಯರು ಸಿಲುಕಿದ್ದಾರೆ.
ಇದು ಒಂದೆಡೆಯಾದರೆ, ಸೋಂಕಿಗೆ ಒಳಗಾಗುವ ಗರ್ಭಿಣಿಯರು ಮತ್ತು ಮಗುವನ್ನು ಉಳಿಸಲು ವೈದ್ಯರು ಅವಧಿಪೂರ್ವ ಹೆರಿಗೆ ಮಾಡಿಸುವ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಇದರಿಂದಲೂ ಗರ್ಭಿಣಿಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
*ಸೂರ್ಯನೇ ವರದಾನ*
ಆ ಮೂಲಕ ಶ್ವಾಸಕೋಶವನ್ನು ಮೊದಲು ಭದ್ರಪಡಿಸಿಕೊಳ್ಳಿ. ಇದು ಗರ್ಭಿಣಿಯರು, ಬಾಣಂತಿಯರಿಗೆ ಮಾತ್ರವಲ್ಲದೇ ಎಲ್ಲರಿಗೂ ಒಳ್ಳೆಯದು. ಬಾಣಂತಿಯರು ಮಗುವಿಗೆ ಹಾಲುಣಿಸುವಾಗ ಉತ್ತಮ ಸಂಗೀತ ಕೇಳುತ್ತಿರಿ. ಇಲ್ಲವೇ ಪಾಸಿಟಿವ್ ಸ್ಟೋರಿಗಳನ್ನು ಓದುತ್ತಿರಿ. ಕರೊನಾದಿಂದಾಗಿರುವ ಸಾವುನೋವಿನ ಬಗ್ಗೆ ಕೇಳುತ್ತಿದ್ದರೆ ಅದು ಮಗುವಿನ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚುಹೆಚ್ಚು ಮೊಳಕೆ ಕಾಳು, ಹಣ್ಣು ತಿನ್ನಿ. ಹಬೆಯಲ್ಲಿ ಬೇಯಿಸಿದ ತರಕಾರಿ ತಿನ್ನಿ ಎನ್ನುತ್ತಾರೆ ಮನೋವೈದ್ಯೆ, ಆಪ್ತ ಸಮಾಲೋಚಕಿ ಡಾ. ಅನುರಾಧಾ ಶ್ರೀಧರ್
*ಪ್ರಸವಾನಂತರದ ಖಿನ್ನತೆ ಬಾಣಂತಿಯರಲ್ಲಿ ಹೊಸತೇನಲ್ಲ*
ಅಷ್ಟಕ್ಕೂ ಬಾಣಂತಿಯರಲ್ಲಿ ಸನ್ನಿ ಹಾಗೂ ಖಿನ್ನತೆ (ಪೋಸ್ಟ್ಪಾರ್ಟಮ್ ಸೈಕೋಸಿಸ್) ಹೊಸ ವಿಷಯ ವೇನಲ್ಲ. ಆದರೆ ಕೋವಿಡ್ನ ಈ ಸಮಯದಲ್ಲಿ ಬಾಣಂತಿಯರಲ್ಲಿ ಇದರ ಪ್ರಮಾಣ ದುಪ್ಪಟ್ಟು ಆಗಿರುವುದನ್ನು ವರದಿಗಳು ದೃಢಪಡಿಸಿವೆ. ಸಾಮಾನ್ಯ ದಿನಗಳಲ್ಲಿ ಶೇ.15ರಷ್ಟು ಬಾಣಂತಿಯರಲ್ಲಿ ವಿವಿಧ ರೀತಿಯ ಖಿನ್ನತೆ ಕಾಡುತ್ತಿದ್ದವು, ಆದರೆ ಇದರ ಪ್ರಮಾಣ ಶೇ. 43ಕ್ಕೆ ಏರಿದೆ ಎಂದು ಯೂನಿವರ್ಸಿಟಿ ಆಫ್ ಆಲ್ಬರ್ಟಾ ಹೇಳಿದೆ. ಕೋವಿಡ್ನ ಈ ದಿನಗಳಲ್ಲಿ ಐವರಲ್ಲಿ ಒಬ್ಬರು ಬಾಣಂತಿ ಖಿನ್ನತೆಗೆ ಜಾರುತ್ತಿದ್ದಾರೆ ಎಂದು ಅಧ್ಯಯನದ ಮುಖ್ಯಸ್ಥ ರಾಗಿರುವ ಆ ವಿವಿಯ ಔಷಧ ಮತ್ತು ಮನೋವೈದ್ಯವಿಜ್ಞಾನ ವಿಭಾಗದ ಮುಖ್ಯಸ್ಥ ಸಿಂಡಿ ಲ್ಯೂ ಹೇಳಿದ್ದಾರೆ. ಸುಮ್ಮಸುಮ್ಮನೇ ರೇಗುವುದು, ಚಡಪಡಿಸುವುದು, ಹಸಿವು, ನಿದ್ರೆಯ ಕೊರತೆ ಇವೆಲ್ಲವೂ ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು ಎಂದಿದ್ದಾರೆ.
ಆತಂಕಕ್ಕಿಂತ ದೊಡ್ಡ ವೈರಸ್ ಮತ್ತೊಂದಿಲ್ಲ. ಅದು ನಿಮ್ಮನ್ನು ಆವರಿಸಿಕೊಳ್ಳಲು ಬಿಡಬೇಡಿ. ಕರೊನಾ ಎಂಬ ಸೋಂಕನ್ನು ಹೇಗೋ ಹೊಡೆದೋಡಿಸಬಹುದು, ಆದರೆ ಆತಂಕವೆಂಬ ವೈರಸ್ ದೇಹ ಹೊಕ್ಕಿಬಿಟ್ಟರೆ ಅದು ಖಿನ್ನತೆಯ ಸ್ವರೂಪ ತಳೆದು ನಂತರ ಬೃಹದಾಕಾರವಾಗಿ ಬೆಳೆದು ತಾಯಿ-ಮಗುವಿನ ಜತೆ ಇಡೀ ಕುಟುಂಬವನ್ನೇ ಆವರಿಸಿಕೊಂಡು ಬಿಡುತ್ತದೆ. ಆದ್ದರಿಂದ ಶಾಂತಚಿತ್ತರಾಗಿ ಪರಿಸ್ಥಿತಿಯನ್ನು ನಿಭಾಯಿಸಿ. ಖಿನ್ನತೆ ಕಾಡಿದಾಗ ಕೂಡಲೇ ಮನೋವೈದ್ಯರನ್ನು ಕಾಣುವುದು ಅಗತ್ಯ. ಮನೋವೈದ್ಯರ ಬಳಿ ಹೋಗಲು ಹಿಂಜರಿಕೆ ಬೇಡ. ಅವರಲ್ಲಿಗೆ ಹೋಗುವವರು ಹುಚ್ಚರು ಎಂಬ ತಪು್ಪಕಲ್ಪನೆ ಬೇಡ. ಸೂಕ್ತ ಸಮಯಕ್ಕೆ ಮನಸ್ಸಿಗೆ ಚಿಕಿತ್ಸೆ ಸಿಗದೇ ಹೋದರೆ ಹುಚ್ಚರೇ ಆಗಿಬಿಡಬಹುದು. ಆತ್ಮಹತ್ಯೆಯ ಹಂತವನ್ನೂ ಮುಟ್ಟಬಹುದು ಎನ್ನುತ್ತಾರೆ ಮಾನಸಿಕ ತಜ್ಞ ಡಾ. ಡ್ಯಾನಿಯಲ್ ಪೈನೆ.
*ಎದೆಹಾಲಿನಿಂದ ಕರೊನಾ ಹರಡುವುದಿಲ್ಲ*
ಇದರಿಂದ ಖಿನ್ನತೆ ಯಿಂದ ಹೊರಬರಲು ತುಂಬಾ ನೆರವಾಗುತ್ತದೆ. ಪೇಂಟಿಂಗ್, ಸಂಗೀತ, ಅಡುಗೆ, ಕಸೂತಿ... ಇಂಥವುಗಳಲ್ಲಿ ತೊಡಗಿಸಿಕೊಳ್ಳಿ. ಟಿವಿ, ವಾಟ್ಸ್ಆಪ್ಗಳಲ್ಲಿ ಬರುವ ಕರೊನಾ ಸುದ್ದಿಗಳಿಂದ ದೂರವಿರಿ. ಪ್ರೀತಿ ಪಾತ್ರರ ಜತೆ ವಿಡಿಯೋ ಕಾಲ್ನಲ್ಲಿ ಸಮಯ ಕಳೆಯಿರಿ ಎನ್ನುತ್ತಾರೆ ಮನೋವಿಜ್ಞಾನಿ ಡಾ. ರೋಹಿಣಿ ಶಿವಾನಂದ.
*ಗರ್ಭವತಿಯರ ಸಂಖ್ಯೆ: ಜಗತ್ತಿನಲ್ಲೇ ಭಾರತ ನಂಬರ್ ಒನ್*
ಲಾಕ್ಡೌನ್ ಶುರುವಾದ 2020ರ ಮಾರ್ಚ್ನಿಂದ ಡಿಸೆಂಬರ್ವರೆಗೆ 20 ದಶಲಕ್ಷ ಮಹಿಳೆಯರು ಭಾರತದಲ್ಲಿ ಗರ್ಭಿಣಿಯಾಗಿದ್ದಾರೆ. ಚೀನಾದಲ್ಲಿ 13.5 ದಶಲಕ್ಷ ಮಂದಿ ಗರ್ಭಿಣಿಯರಾಗಿದ್ದರೆ, ನೈಜೀರಿಯಾದಲ್ಲಿ 6.4, ಪಾಕಿಸ್ತಾನದಲ್ಲಿ 5, ಇಂಡೋನೇಷ್ಯಾದಲ್ಲಿ 4 ದಶಲಕ್ಷ ಮಂದಿ ಗರ್ಭಿಣಿಯರಾಗಿದ್ದಾರೆ. ಇವರ ಪೈಕಿ ಹಲವಾರು ಮಂದಿ ಈಗಾಗಲೇ ಅಮ್ಮಂದಿರಾಗಿದ್ದಾರೆ.
*ಗರ್ಭಿಣಿಯರಿಗೆ ಲಸಿಕೆ ಹಾಕಿಸುವುದು ಸೇಫಾ?*
ಗರ್ಭಿಣಿಯರು ಮತ್ತು ಎದೆಹಾಲು ಉಣಿಸುವ ತಾಯಂದಿರಿಗೆ ಕರೊನಾ ಲಸಿಕೆ ಸುರಕ್ಷಿತ ಹೌದೋ ಅಲ್ಲವೋ ಎಂಬ ಬಗ್ಗೆ ಇದುವರೆಗೆ ಭಾರತದಲ್ಲಿ ಯಾವುದೇ ರೀತಿಯ ಕ್ಲಿನಿಕಲ್ ಟ್ರಯಲ್ಗಳು ನಡೆದಿಲ್ಲ. ಆದ್ದರಿಂದ ಇಂಥ ಮಹಿಳೆಯರು ಲಸಿಕೆ ಪಡೆಯುವುದು ಸುರಕ್ಷಿತವಲ್ಲ ಎಂದಿದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ. ಹಾಗಾಗಿ ಸದ್ಯಕ್ಕೆ ಗರ್ಭಿಣಿಯರಿಗೆ ಭಾರತದಲ್ಲಿ ಲಸಿಕೆ ಹಾಕಲಾಗುತ್ತಿಲ್ಲ.