| ಶ್ವೇತಾ ನಾಯ್ಕ್
‘ಕ್ರಿಕೆಟ್ ಅನ್ನೋದು ಮಹಿಳೆಯರಿಗೆ ಅಲ್ಲವೇ ಅಲ್ಲ, ಅದು ಪುರುಷರ ಆಟ. ನೀನು ಅಲ್ಲಿ ಹೋಗಿ ಸಾಧಿಸುವಂಥದ್ದು ಏನೂ ಇಲ್ಲ. ಸುಮ್ಮನೆ ಭರತನಾಟ್ಯ ಕಲಿತು ಒಳ್ಳೆಯ ಡಾನ್ಸರ್ ಆಗು...’ ಹಿಂದೊಮ್ಮೆ ಅಜ್ಜಿ ಹೇಳಿದ ಈ ಮಾತನ್ನು ಮಿಥಾಲಿ ಗಂಭೀರವಾಗಿ ಪರಿಗಣಿಸಿದ್ದರೆ ಇಂದು ಭಾರತ ಒಬ್ಬ ಶ್ರೇಷ್ಠ ಕ್ರಿಕೆಟ್ ಆಟಗಾರ್ತಿಯನ್ನು ಕಾಣುವುದು ಸಾಧ್ಯವೇ ಆಗುತ್ತಿರಲಿಲ್ಲ. ಏಕದಿನ ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಮಿಥಾಲಿ ಪಾತ್ರವಾಗುತ್ತಿರಲಿಲ್ಲ. ಅಜ್ಜಿಯ ಮಾತಿಗೆ ಆ ಸಂದರ್ಭದಲ್ಲಿ ತಲೆದೂಗಿದ್ದ ಮಿಥಾಲಿ ಭರತನಾಟ್ಯವನ್ನು 8 ವರ್ಷ ಅಭ್ಯಾಸ ಮಾಡಿದರು. ಆದರೆ ಅವರ ಮನಸ್ಸು ನೆಟ್ಟಿದ್ದು ಕ್ರಿಕೆಟ್ನಲ್ಲೇ. ‘ಸಾಧನೆಯನ್ನು ಬಹಳಷ್ಟು ಜನ ಮಾಡುತ್ತಾರೆ, ಆದರೆ ಜನ ಗುರುತಿಸುವಂತೆ ಬೆಳೆಯುವುದು ಎಲ್ಲರಿಗೂ ಸಾಧ್ಯವಿಲ್ಲ’ ಅನ್ನುವ ಮಿಥಾಲಿ ಅದನ್ನು ಸಾಬೀತು ಮಾಡಲು ಹಗಲಿರುಳು ಶ್ರಮಿಸಿದ್ದಾರೆ.
ಅಷ್ಟಕ್ಕೂ ಮಿಥಾಲಿಗೆ ಕ್ರಿಕೆಟ್ ಹುಚ್ಚು ಆರಂಭವಾಗಿದ್ದು ಅವರ ಅಣ್ಣನಿಂದ. ಮಿಥಾಲಿ ಅಣ್ಣ ಕ್ರಿಕೆಟ್ ಆಡುತ್ತಿದ್ದರು. ಆಗಲೇ ಮಿಥಾಲಿಗೂ ಅದರ ಗೀಳು ಹತ್ತಿದ್ದು. ಬೆಳಗ್ಗೆ ಬೇಗ ಎದ್ದು ಅಣ್ಣನೊಡನೆ ಫೀಲ್ಡ್ಗೆ ಹೋಗಿ, ಆತ ಆಡುವುದನ್ನು ನೋಡುತ್ತ ಕುಳಿತುಕೊಳ್ಳುತ್ತಿದ್ದಳು ಮಿಥಾಲಿ. ಆ ಹತ್ತು ವರ್ಷದ ಹುಡುಗಿಗೆ ನಿದ್ದೆ ಅಂದ್ರೆ ಪಂಚಪ್ರಾಣವಾಗಿದ್ದರೂ ಆಟಕ್ಕಾಗಿ ನಿದ್ದೆಗೆ ಗುಡ್ಬೈ ಹೇಳುತ್ತಿದ್ದಳು. ಬೆಳಗ್ಗೆ 6 ಗಂಟೆಗೆ ಏಳುವುದನ್ನು ಕಷ್ಟಪಟ್ಟು ಅಭ್ಯಾಸ ಮಾಡಿಕೊಂಡಳು. ಬರಬರುತ್ತಾ ಅಣ್ಣನೊಂದಿಗೆ ತಾನೂ ಕ್ರಿಕೆಟ್ ಆಡಲು ಪ್ರಾರಂಭಿಸಿದಳು.
ಪ್ರತಿದಿನ ಅಣ್ಣನೊಂದಿಗೆ ಫೀಲ್ಡ್ಗೆ ಹೋಗುತ್ತಿದ್ದ ಮಿಥಾಲಿಯನ್ನು ಆಕೆಯ ಅಣ್ಣನ ಕೋಚ್ ಜ್ಯೋತಿಪ್ರಸಾದ್ ಗಮನಿಸಿದರು. ಆಕೆಯ ತಂದೆಯ ಬಳಿ ಹೋಗಿ ‘‘ನಿಮ್ಮ ಮಗನಿಗೆ ಕ್ರಿಕೆಟ್ ಅಭ್ಯಾಸ ಮಾಡಿಸುವ ಬದಲು ನಿಮ್ಮ ಮಗಳಿಗೆ ಮಾಡಿಸಿದರೆ ಉತ್ತಮ’’ ಎಂದು ಹೇಳಿದರು. ಅಲ್ಲದೆ ಸಂಪತ್ ಕುಮಾರ್ ಎನ್ನುವ ತರಬೇತಿದಾರರನ್ನು ಪರಿಚಯಿಸಿದರು. ಅಲ್ಲಿಂದ ಮಿಥಾಲಿ ಕ್ರಿಕೆಟ್ ಪ್ರಯಾಣ ಶುರುವಾಯಿತು. ಮನೆಯ ಪ್ರತಿ ಸದಸ್ಯರೂ ಮಿಥಾಲಿಯ ಬೆನ್ನಿಗೆ ನಿಂತರು. ಮಗಳ ಅಭ್ಯಾಸಕ್ಕೆ ತೊಂದರೆಯಾಗದಿರಲಿ ಎಂದು ಮಿಥಾಲಿಯ ತಾಯಿ ಕೆಲಸವನ್ನೇ ಬಿಟ್ಟು ಮಗಳಿಗೆ ಪೂರ್ಣ ಸಮಯ ಮೀಸಲಿಟ್ಟರು.
17ನೇ ವಯಸ್ಸಿಗೆ ಏಕದಿನ ತಂಡಕ್ಕೆ ಆಯ್ಕೆಯಾದ ಮಿಥಾಲಿ 1998ರಲ್ಲಿ ಐರ್ಲೆಂಡ್ ವಿರುದ್ಧ ಆಡುವ ಮೂಲಕ ತಮ್ಮ ಮೊದಲ ಹೆಜ್ಜೆಯನ್ನು ಕ್ರಿಕೆಟ್ನಲ್ಲಿರಿಸಿದರು. ಆದರೆ ಮುಂದಿನ ಹೆಜ್ಜೆ ಅಷ್ಟು ಸುಲಭವಾಗಿರಲಿಲ್ಲ. ಸತತ ಪ್ರಯತ್ನ, ಕಠಿಣ ಪರಿಶ್ರಮ, ಸ್ಥಿರತೆಯಿಂದ ಇಂದು ತಂಡದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ಇತರ ಆಟಗಾರ್ತಿಯರಿಗೆ ಸ್ಪೂರ್ತಿಯಾಗಿದ್ದಾರೆ.
ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾ ಬಾಲಿವುಡ್ನಲ್ಲಿ ನಿರ್ವಣವಾಗುತ್ತಿದ್ದು, ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿ ಕುತೂಹಲ ಮೂಡಿಸಿದೆ. ಹಿಂದೊಮ್ಮೆ ‘ನಿಮ್ಮ ಬಯೋಪಿಕ್ ಮಾಡಿದರೆ ನಿಮ್ಮನ್ನು ಯಾವ ನಟಿಯಲ್ಲಿ ನೋಡಲು ಇಷ್ಟಪಡುತ್ತೀರಿ’ ಎಂಬ ಪ್ರಶ್ನೆಗೆ ‘ನನ್ನ ಜೀವನ ಆಧಾರಿತ ಸಿನಿಮಾಗೆ ಪ್ರಿಯಾಂಕಾ ಛೋಪ್ರಾ ಸೂಕ್ತ ನಟಿ’ ಎಂದಿದ್ದರು ಮಿಥಾಲಿ. ಆದರೆ ಅವರ ಪಾತ್ರವನ್ನು ತಾಪ್ಸಿ ಪನ್ನು ಮಾಡುತ್ತಿದ್ದಾರೆ. ರಾಹುಲ್ ಡೋಲಾಕಿಯಾ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
ಮಹಿಳಾ ತಂಡದ ತೆಂಡುಲ್ಕರ್: ಮಿಥಾಲಿ ಆಟವನ್ನು ಗುರುತಿಸಿದ ಪ್ರತಿಯೊಬ್ಬರೂ ಆಕೆಯನ್ನು ‘ವುಮೆನ್ಸ್ ಟೀಮ್ ತೆಂಡುಲ್ಕರ್’ ಎಂದೇ ಹೊಗಳುತ್ತಾರೆ. ಸ್ವತಃ ಸಚಿನ್ ತೆಂಡುಲ್ಕರ್ ಸಹ ಮಿಥಾಲಿ ಆಟವನ್ನು ಹಾಡಿ ಹೊಗಳಿದ್ದಾರೆ. ಒಂದು ಕಾರನ್ನೂ ಉಡುಗೊರೆಯಾಗಿ ನೀಡಿದ್ದಾರೆ.
ಸಾಧನೆಗೆ ಸಾಟಿ ಇಲ್ಲ: ದಕ್ಷಿಣ ಆಫ್ರಿಕಾ ವನಿತೆಯರ ತಂಡದ ವಿರುದ್ಧ ಇತ್ತೀಚೆಗೆ ನಡೆದ ಏಕದಿನ ಕ್ರಿಕೆಟ್ ಸರಣಿಯ 4ನೇ ಪಂದ್ಯದಲ್ಲಿ ಮಿಥಾಲಿ ಈ ಸಾಧನೆ ಮಾಡಿದ್ದಾರೆ. ಮಹಿಳಾ ಟೆಸ್ಟ್ ಕ್ರಿಕೆಟ್, ಏಕದಿನ ಮತ್ತು ಟಿ20 ಈ ಮೂರು ಮಾದರಿಯ ಕ್ರಿಕೆಟ್ನಲ್ಲಿ ಒಟ್ಟು ಸೇರಿ ಅವರು 10 ಸಾವಿರ ರನ್ ಕಲೆಹಾಕಿದ ವಿಶ್ವದ 2ನೇ ಆಟಗಾರ್ತಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 10, ಟಿ20 ಕ್ರಿಕೆಟ್ನಲ್ಲಿ 89 ಮತ್ತು ಏಕದಿನ ಕ್ರಿಕೆಟ್ನಲ್ಲಿ 213 ಪಂದ್ಯಗಳನ್ನಾಡಿದ್ದಾರೆ.