ಅಂಕಣ

ಪಾರದರ್ಶಕ ಆಡಳಿತಕ್ಕೆ ಆರ್​ಟಿಐ ಅಸ್ತ್ರ

ಬಾಬುಪ್ರಸಾದ್​ ಮೋಡಿಸ್​

| ರವಿ ನಾಯಕ್ ಬೆಂಗಳೂರು

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಹಳ ಮಹತ್ವ ಪಡೆಯುತ್ತಿದೆ. ಸಾಮಾನ್ಯ ವ್ಯಕ್ತಿ ಕೂಡ ಸರ್ಕಾರದ ಮಟ್ಟದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ತಿಳಿಯಲು, ಅಧಿಕಾರಿಗಳ ಕಾರ್ಯವೈಖರಿಯನ್ನು ಒರೆಗೆ ಹಚ್ಚಲು, ಪಾರದರ್ಶಕ ಆಡಳಿತಕ್ಕೆ ಇಂಬು ನೀಡಲು ಈ ಕಾಯ್ದೆಯಿಂದ ಅನುವಾಗುತ್ತಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಮಾಹಿತಿ ಹಕ್ಕು ಕಾಯ್ದೆ-2005’ರ ದಿನಾಚರಣೆಯನ್ನು ಪ್ರತ್ಯೇಕವಾಗಿ ಆಚರಿಸಲಾಗುವುದಿಲ್ಲ. ಈ ಕಾಯ್ದೆ ಜಾರಿಗೆ ಬಂದ ದಿನಾಂಕವನ್ನೇ ದಿನಾಚರಣೆನ್ನಾಗಿಸಿ, ಮಾಹಿತಿ ಹಕ್ಕು ಪಡೆಯುವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸಲಾಗುತ್ತಿದೆ. ಈ ಕಾಯ್ದೆಯಡಿ ಪಡೆದ ಮಾಹಿತಿಯನ್ನು ಸಾಮಾಜಿಕ ಕುಂದುಕೊರತೆ ಹೋಗಲಾಡಿಸುವ ದಿಸೆಯಲ್ಲಿ ಪ್ರಬಲ ಹಾಗೂ ಪರಿಣಾಮಕಾರಿಯಾದ ಅಸ್ತ್ರವಾಗಿ ಉಪಯೋಗಿಸಬಹುದಾಗಿದೆ.

ದುರ್ಬಳಕೆಗೆ ಕಡಿವಾಣ: ದೇಶದಲ್ಲಿ ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತು ಹಾಕುವ ಶಕ್ತಿಯನ್ನು ಮಾಹಿತಿ ಹಕ್ಕು ಕಾಯ್ದೆ ಹೊಂದಿದೆ. ಆದರೆ, ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಹೊಣೆಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ರಾಜ್ಯವೂ ಸೇರಿದಂತೆ ಕೆಲವು ಕಡೆ ಮಾಹಿತಿ ಹಕ್ಕು ಕಾಯ್ದೆ ಜನಸಾಮಾನ್ಯರಿಗೆ ಉಪಯುಕ್ತವಾಗಿದೆ. ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರ ಸಂಖ್ಯೆ ಕೂಡ ಇತ್ತೀಚೆಗೆ ಹೆಚ್ಚಾಗುತ್ತಿದೆ. ನಾಗರಿಕರ ಸಬಲೀಕರಣ ಉದ್ದೇಶವನ್ನು ಇಟ್ಟುಕೊಂಡು ಜಾರಿ ಮಾಡಲಾಗಿರುವ ಈ ಕಾಯ್ದೆಯ ಅನುಷ್ಠಾನ ಬಹಳ ಮಹತ್ವದ್ದಾಗಿದೆ. ಈ ಕಾಯ್ದೆಯ ಜಾರಿಗೂ ಮುನ್ನ ಎಲ್ಲರಿಗೂ ಎಲ್ಲ ಮಾಹಿತಿಯೂ ದೊರೆಯುತ್ತಿರಲಿಲ್ಲ. ಸರ್ಕಾರದ ಮಟ್ಟದಲ್ಲಿ ಏನು ನಡೆಯುತ್ತಿದೆ, ಏನಾಗುತ್ತಿದೆ, ಜನರ ತೆರಿಗೆ ಹಣ ಎಲ್ಲಿ ಹೋಗುತ್ತಿದೆ? ಯಾವುದಕ್ಕೆ ಎಷ್ಟು ಹಣ ಬಳಕೆ ಮಾಡಲಾಗುತ್ತಿದೆ ಎಂಬುದು ಸಾಮಾನ್ಯ ಜನರಿಗೆ ತಿಳಿಯುತ್ತಲೇ ಇರಲಿಲ್ಲ. ಆದರೆ, ಈಗ ಸರ್ಕಾರ ಜಾರಿಗೆ ತುರುತ್ತಿರುವ ಯೋಜನೆ, ಅನುದಾನ ಸೇರಿದಂತೆ ಎಲ್ಲದರ ಮಾಹಿತಿಯೂ ಶ್ರೀಸಾಮಾನ್ಯನಿಗೆ ಅಂಗೈಯಲ್ಲಿಯೇ ದೊರೆಯುತ್ತಿದೆ.

ವಿನಾಯಿತಿ ನೀಡಿರುವ ಕ್ಷೇತ್ರ, ಸಂಸ್ಥೆಗಳು

ಗುಪ್ತಚರ ಬ್ಯೂರೋ, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ, ವಾಯುಯಾನ ಸಂಶೋಧನಾ ಕೇಂದ್ರ, ಕಂದಾಯ ಗುಪ್ತಚರ ನಿರ್ದೇಶನಾಲಯ, ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ, ಜಾರಿ ನಿರ್ದೇಶನಾಲಯ, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ, ವಿಶೇಷ ಗಡಿನಾಡು ಪಡೆ, ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ, ಅಸ್ಸಾಂ ರೈಫಲ್ಸ್, ಸಶಸ್ತ್ರ ಸೀಮಾ ಬಲ, ಆದಾಯ ತೆರಿಗೆ ಮಹಾ ನಿರ್ದೇಶನಾಲಯ (ತನಿಖೆ), ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ, ಹಣಕಾಸು ಗುಪ್ತಚರ ಘಟಕ, ಭಾರತ ವಿಶೇಷ ರಕ್ಷಣಾ ಗುಂಪು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಗಡಿ ರಸ್ತೆಗಳ ಸಂಸ್ಥೆ ರಾಷ್ಟ್ರೀಯ ಭದ್ರತಾ ಮಂಡಳಿಯ ಮಾಹಿತಿ ಪಡೆಯಲು ವಿನಾಯಿತಿ ನೀಡಲಾಗಿದೆ.

ಪುಟ್ಟ ಹಳ್ಳಿಯಲ್ಲಿ ಹೋರಾಟ ಆರಂಭ...

ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣ, ನಮ್ಮನ್ನು ಆಳುವ ಸರ್ಕಾರ ಹಾಗೂ ನಾಯಕರ ಕೆಲಸ ಕಾರ್ಯಗಳ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಬೇಕಾಗಿರುವ ನಿಟ್ಟಿನಲ್ಲಿ ಮೊಟ್ಟ ಮೊದಲ ಬಾರಿಗೆ ರಾಜಸ್ಥಾನದ ದೇವದುಂಗ್ರಿ ಎಂಬ ಗ್ರಾಮದಲ್ಲಿ ಮಾಹಿತಿ ಹಕ್ಕುಗಳ ಹೋರಾಟ ಆರಂಭವಾಯಿತು. ನಿವೃತ್ತ ಐಎಎಸ್ ಅಧಿಕಾರಿ ಅರುಣ್ ರಾಯ್ ಎಂಬುವರು ಪ್ರಥಮ ಬಾರಿಗೆ ಈ ಕಾಯ್ದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಧ್ವನಿ ಎತ್ತಿದ್ದರು. ನಂತರ ಅನೇಕ ರೈತ ಸಂಘಟನೆಗಳು, ಹೋರಾಟಗಾರರು ಬೀದಿಗಿಳಿದು ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಆರಂಭಿಸಿದರು. ಎರಡು ದಶಕದ ನಿರಂತರ ಹೋರಾಟದ ಫಲವಾಗಿ 2005ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಜಾರಿಗೆ ತಂದಿತು.

ಯಾರೆಲ್ಲಾ ಅಧಿನಿಯಮದಡಿ ಬರುತ್ತ್ತಾರೆ?

ಕೇಂದ್ರ ಮಾಹಿತಿ ಹಕ್ಕು ಅಧಿನಿಯಮವು ಜಮ್ಮು- ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿ ಇಡೀ ಭಾರತಕ್ಕೆ ಅನ್ವಯಿಸುತ್ತದೆ. ಭಾರತದ ಸಂವಿಧಾನದಡಿ ಅಥವಾ ಯಾವುದೇ ಕಾನೂನಿನಡಿ ಅಥವಾ ಯಾವುದೇ ಸರ್ಕಾರಿ ಅಧಿಸೂಚನೆ ಯಡಿ ಸ್ಥಾಪಿತವಾದಂತಹ ಎಲ್ಲ ಸಂಸ್ಥೆಗಳು ಅಥವಾ ಸರ್ಕಾರಿ ಒಡೆತನದ, ನಿಯಂತ್ರಣದ ಅಥವಾ ಸರ್ಕಾರದಿಂದ ಗಣನೀಯವಾಗಿ ಆರ್ಥಿಕ ನೆರೆವು ಪಡೆಯು ತ್ತಿರುವ ಸರ್ಕಾರೇತರ ಸಂಘ ಸಂಸ್ಥೆಗಳೂ ಈ ಅಧಿನಿಯಮದ ವ್ಯಾಪ್ತಿಗೆ ಬರುತ್ತವೆ.

ಕಾಯ್ದೆಯ ಉದ್ದೇಶ

ಸರ್ಕಾರದ ಮಟ್ಟದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುವುದು, ಭ್ರಷ್ಟಾಚಾರ ತಡೆಗಟ್ಟುವುದು ಮತ್ತು ನಿಜವಾದ ಅರ್ಥದಲ್ಲಿ ಜನರಿಗೆ ಪ್ರಜಾಪ್ರಭುತ್ವದ ಪರಿಚಯ ಮಾಡಿಕೊಡುವುದು, ನಾಗರಿಕರಿಗೆ ಮಾಹಿತಿಯ ಅಧಿಕಾರ ನೀಡುವುದು, ಈ ಕಾಯ್ದೆಯ ಮೂಲಭೂತ ಉದ್ದೇಶವಾಗಿದೆ. ಆಡಳಿತದ ಮೇಲೆ ಅಗತ್ಯ ನಿಗಾ ಇರಿಸಲು ಮತ್ತು ಹೆಚ್ಚು ಜವಾಬ್ದಾರಿಯುತ ವರ್ತನೆ ತೋರಲು, ಜನರನ್ನು ತಿಳಿವಳಿಕೆಯುಳ್ಳ ನಾಗರಿಕರನ್ನಾಗಿ ರೂಪಿಸಲು ಇದು ಸಹಾಯಕವಾಗಿದೆ.