ರೂಬಿಕ್ ಕ್ಯೂಬ್ಸ್ನಲ್ಲಿ ಎಲ್ಲರಿಗೂ ಹೆಚ್ಚು ಪರಿಚಿತವಿರುವ ಆಕೃತಿಯೆಂದರೆ 3x3x3 ಘನಾಕೃತಿ. ಆದರೆ, ಇದರಲ್ಲಿ 2x2x2ರಿಂದ ಆರಂಭಿಸಿ 20x20x20ರವರೆಗೂ ಘನಾಕೃತಿಗಳಿರುತ್ತವೆ ಎಂದರೆ ಅನೇಕರಿಗೆ ಆಶ್ಚರ್ಯವೆನಿಸಬಹುದು. ಬೇರೆ ಬೇರೆ ಬಣ್ಣಗಳ ಚೌಕಗಳನ್ನು ಪರಸ್ಪರ ಮಿಶ್ರ ಮಾಡಿ ಕಲೆಸಿಬಿಟ್ಟರೆ, ಇದನ್ನು ಮೊದಲಿನ ಸ್ಥಿತಿಗೆ ತರುವುದು ಹೇಗಪ್ಪಾ ಎಂದು ಯಾರಿಗಾದರೂ ಎನ್ನಿಸದಿರದು.
ಆದರೆ, ಶೃಂಗೇರಿಯ ಜ್ಞಾನಭಾರತಿ ವಿದ್ಯಾಕೇಂದ್ರದಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಜಿತಮನ್ಯು ಎನ್. ನಾಗಳೆ ಇದರಲ್ಲಿ ಬಹಳ ಪರಿಣತಿಯನ್ನು ಸಾಧಿಸಿದ್ದಾನೆ. ಇದಕ್ಕಾಗಿ ಅವನು ಯಾವುದೇ ವಿಶೇಷ ತರಬೇತಿಯನ್ನು ಪಡೆದಿಲ್ಲ. ತನ್ನ 8ನೇ ವಯಸ್ಸಿನಿಂದಲೇ, ಇದನ್ನೊಂದು ಆಟಿಕೆಯೆಂದು ಆಡತೊಡಗಿದ ಈತ, ತನ್ನ ಅಣ್ಣನ ಸಹಾಯದಿಂದ ಮೊದಲಿಗೆ ಕಲಿತದ್ದು 3x3x3 ಘನಾಕೃತಿಯನ್ನು. ನಂತರ ಇವನು, 2x2x2 ರಿಂದ 7x7x7 ರವರೆಗೆ ಲೀಲಾಜಾಲವಾಗಿ ಘನಗಳನ್ನು ಬಗೆಹರಿಸಿ, ಕ್ಯೂಬ್ಗಳನ್ನು ಮೊದಲಿನ ಸ್ಥಿತಿಗೆ ತರುತ್ತಾನೆ.
ಈ ರೀತಿ ಸರಳ ಘನಾಕೃತಿಗಳೇ ಅಲ್ಲದೇ, ವಕ್ರಗತಿಯಲ್ಲಿ ಸಾಗುವ ಇನ್ನೂ ಅನೇಕ ಘನಗಳು ಈ ಸಾಲಿನಲ್ಲಿವೆ. ಬಹಳಷ್ಟು ಜನರಿಗೆ ಗೊತ್ತೇ ಇಲ್ಲದ Skewb, Axis cube, Mirror cube, Megamix (12 ಮುಖಗಳ ಘನಾಕೃತಿ, ಒಂದೊಂದು ಮುಖದಲ್ಲೂ 11 ತುಣುಕಗಳು) ನಂತಹ ಆಕೃತಿಗಳು, ಗಣಿತದ ಅತ್ಯಂತ ಕ್ಲಿಷ್ಟಕರವಾದ ಆಲ್ಗಾರಿದಮ್ಳನ್ನು ಹೊಂದಿದ್ದು, ಇವುಗಳನ್ನು ಸಹ ತನ್ನ ಸತತ ಪ್ರಯತ್ನದಿಂದ ಕರತಗಮಾಡಿಕೊಂಡಿದ್ದಾನೆ.
ಇದರ ತಂತ್ರವನ್ನು ತನ್ನ ಅನೇಕ ಸ್ನೇಹಿತರಿಗೆ ಹಾಗೂ ಸಹಪಾಠಿಗಳಿಗೆ ಈಗಾಗಲೇ ಹೇಳಿಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ, ತನ್ನಂತೆಯೇ ಆಸಕ್ತಿಯಿರುವ ಇನ್ನೂ ಅನೇಕ ಮಕ್ಕಳು ಇದನ್ನು ಕಲಿಯುವಂತಾಗಲಿ ಎಂಬ ಉದ್ದೇಶದಿಂದ Jithu's Puzzle World ಎಂಬ ಯೂಟ್ಯೂಬ್ ಚಾನೆಲ್ಲನ್ನು ಕೂಡ ಪ್ರಾರಂಭಿಸಿದ್ದಾನೆ.
ಸದ್ಯ 20 ರಿಂದ 25 ಸೆಕೆಂಡುಗಳಲ್ಲಿ 3x3x3 ರೂಬಿಕ್ಸ್ ಕ್ಯೂಬನ್ನು ಬಗೆಹರಿಸುವ ಈತ, 3.47 ಸೆಕೆಂಡುಗಳ ವಿಶ್ವದಾಖಲೆಯನ್ನು ಹಿಂದಿಕ್ಕುವ ಗುರಿ ಹೊಂದಿದ್ದಾನೆ. ಇದಲ್ಲದೇ, ಕಣ್ಣಿಗೆ ಬಟ್ಟೆ ಕಟ್ಟಕೊಂಡು ರೂಬಿಕ್ಸ್ ಕ್ಯೂಬನ್ನು ಬಗೆಹರಿಸುವ ತಂತ್ರವೂ ಇದ್ದು, ಇದರಲ್ಲಿ ಮಿಶ್ರಗೊಂಡಿರುವ ಬಣ್ಣ ಬಣ್ಣದ ಚೌಕಗಳನ್ನು ಸಮಗ್ರವಾಗಿ ಹಾಗೂ ಆಳವಾಗಿ ಕೆಲವು ಸೆಕೆಂಡುಗಳ ಕಾಲ ಅಧ್ಯಯನ ಮಾಡಿ, ನಂತರ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಅತ್ಯಂತ ಏಕಾಗ್ರತೆಯಿಂದ, ಮನಸ್ಸಿನ ಕಣ್ಣಿನಿಂದ ಕ್ಯೂಬನ್ನು ಬಗೆಹರಿಸಲಾಗುತ್ತದೆ.
ಈ ಸವಾಲನ್ನು ಸ್ವೀಕರಿಸುವ ನಿಟ್ಟಿನಲ್ಲಿ ಈಗಾಗಲೇ ತಯಾರಿಯನ್ನೂ ನಡೆಸಿದ್ದಾನೆ. ಉತ್ತಮ ಹಾಡುಗಾರನೂ, ಈಜುಗಾರನೂ ಆಗಿರುವ ಈತನಿಗೆ ಪ್ರಾಣಿಗಳೆಂದರೆ ಪರಮ ಪ್ರೀತಿ. ದೊಡ್ಡವನಾದ ಮೇಲೆ ಪಶುವೈದ್ಯನಾಗಿ, ತೊಂದರೆಗೊಳಗಾದ ಪ್ರಾಣಿಗಳಿಗಾಗಿ ಶುಶ್ರೂಷಾ ಕೇಂದ್ರವೊಂದನ್ನು ತೆರೆಯುವ ಆಶಯವನ್ನು ಹೊಂದಿದ್ದಾನೆ.