ಅಂಕಣ

ತುಂಟ ಕುದುರೆಯನ್ನು ಸವಾರಿ ಮಾಡಿ, ಆನಂದಿಸುವಂತೆ...

ಕಾಮ ಎನ್ನುವುದು ಪ್ರೇಮದ ವಿಕೃತ ರೂಪ. ಹುಚ್ಚೆದ್ದ ಹೊಳೆಯಂತೆ. ಊರೂರುಗಳನ್ನು ಕೊಚ್ಚಿಕೊಂಡು ಹೋಗುವ ಹೊಳೆಯನ್ನು ಅಣೆಕಟ್ಟು ನಿಯಂತ್ರಿಸಿದರೆ ಅದೇ ಬೆಂಗಾಡನ್ನು ಬಂಗಾರವನ್ನಾಗಿ ಮಾಡಬಲ್ಲದು. ಆದ್ದರಿಂದಲೇ ಅದು ‘ಕಾಮದೇವ’. ಇವೆಲ್ಲ ಮನುಷ್ಯನ ಮುಂದೆ ಪ್ರಕೃತಿಯೊಡ್ಡಿರುವ ಸವಾಲುಗಳು, ಬೀಸುವ ಬಲೆಗಳು. ಸೋತರೆ ಸುಣ್ಣ ; ಗೆದ್ದರೆ ಗಿಣ್ಣು.

ಭಾರತೀಯ ಸಂಸ್ಕೃತಿ ಅಥವಾ ಸನಾತನ ಸಂಸ್ಕೃತಿಯ ಲಕ್ಷಣವೇ ಹಾಗೆ. ನೂರು ರೀತಿಯಲ್ಲಿ ಮನುಷ್ಯನ ಗಮನವನ್ನು ಅಂತಮುಖಿಯಾಗಿಸುವುದು. ಅನಂತದೆಡೆಗೆ ಹರಿಯುವಂತೆ ಮಾಡುವುದು. ಈ ನಿಟ್ಟಿನಲ್ಲಿ ಅದು ಮಾಡದ ಪ್ರಯತ್ನವಿಲ್ಲ, ಹೇಳದ ಮಾತಿಲ್ಲ, ಸೃಷ್ಟಿಸದ ನಡೆಯಿಲ್ಲ. ಕಾರಣ ಇಷ್ಟೇ; ಮತ್ತಾವ ರೀತಿಯಿಂದಲೂ ಮನುಷ್ಯನಿಗೆ ತಾನು ಹುಡುಕುತ್ತಿರುವ ಶಾಂತಿ, ಸಮಾಧಾನ ಸಿಗಲಾರದು ಎಂದು ಅದಕ್ಕೆ ಖಾತ್ರಿಯಾಗಿದೆ.

ಶ್ವೇತಾಶ್ವತರ ಉಪನಿಷತ್ ಸವಾಲಿನೋಪಾದಿಯಲ್ಲಿ, ಒಮ್ಮೆ ಅಲ್ಲ ಹಲವು ಸಲ, ಇದನ್ನು ಮಾರ್ದನಿಗೊಳಿಸಿದೆ. ಈ ನಿಟ್ಟಿನಲ್ಲಿ ಬ್ರಹ್ಮಭಾವ, ಧ್ಯಾನ, ಜಪ, ಸ್ತುತಿ, ಪೂಜೆಗಳಷ್ಟೇ ಅಲ್ಲದೆ ಸಾಮೂಹಿಕ ನೆಲೆಯಲ್ಲಿ ನಡೆಯುವ ಉತ್ಸವ, ಜಾತ್ರೆಗಳಿಗೂ ಬಹಳಷ್ಟು ಮಹತ್ವ ಬರುತ್ತದೆ. ಹೊರನೋಟಕ್ಕೆ ಕೆಲವೊಮ್ಮೆ ಇವು ವಿಚಿತ್ರ ಅಥವಾ ಸಾಧಾರಣ ಆಚರಣೆಯಾಗಿ ಕಂಡರೂ ಒಳಹೊಕ್ಕು ನೋಡಿದಾಗ ಮಹಾನ್ ತತ್ವವೊಂದರ ಬಾಹ್ಯ ಸಂಕೇತವಾಗಿ ಕಂಗೊಳಿಸುತ್ತದೆ. ಗಂಭೀರ, ಗಹನ ತತ್ವಗಳು ಕಾವ್ಯಮಯವಾದ ಆಚರಣೆಗಳಿಂದಲೇ ಸ್ವೀಕರಿಸಲ್ಪಡಬಲ್ಲವು ಎಂಬ ಸೂಕ್ಷ್ಮ ಮನಶಾಸ್ತ್ರೀಯ ಅಂಶವನ್ನು ಸ್ಪಷ್ಟವಾಗಿಯೇ ಗ್ರಹಿಸಿದ್ದರು ನಮ್ಮ ಋಷಿಮುನಿಗಳು. ಈ ಹಿನ್ನೆಲೆಯಲ್ಲಿ ಕಾಮದಹನ ಅಥವಾ ಜಾನಪದರ ಬಾಯಲ್ಲಿ ಬರುವ ‘ಕಾಮಣ್ಣನ ಹಬ್ಬ’ದ ಅರ್ಥವೇನು? ಇದನ್ನು ಅರಿಯುವುದೇ ಈ ಲೇಖನದ ಉದ್ದೇಶ.

ಕಾಮದಹನ, ಮಹಾದೇವ ಶಿವನ ಸುತ್ತ ಅನಾವರಣಗೊಂಡ ಒಂದು ಪ್ರಸಂಗ. ಶಿವ, ವಿಷ್ಣು ಹಾಗೂ ದೇವಿಯರ ಸುತ್ತಲೇ ಎಲ್ಲ ಹಬ್ಬಗಳೂ, ವಿಧಿಗಳೂ, ಉತ್ಸವಗಳು ಇರುವುದು ನಮ್ಮ ಸಂಸ್ಕೃತಿಯ ಹೆಗ್ಗಳಿಕೆ. ಬೇರಾವ ದೇವತೆ ಇಲ್ಲಿ ಕೇಂದ್ರಬಿಂದುವಾಗಿ ಕಂಡುಬಂದರೂ ಅದು ಮೂಲದಲ್ಲಿ ಈ ಮೂವರಲ್ಲಿ ಒಬ್ಬರೊಡನೆ ಸಂಬಂಧವನ್ನು ಹೊಂದಿರುತ್ತದೆ.

ಶಿವ ಸ್ವಭಾವತಃ ನಿರ್ವಿಕಾರ, ನಿಃಸ್ಸಂಗ, ನಿರಾಭಾರಗಳೇ ಮೂರ್ತಿವೆತ್ತ ಧ್ಯಾನೋನ್ಮತ್ತ ವೈರಾಗ್ಯನಿಧಿ. ಅವನೇ ಸಂನ್ಯಾಸ ಕುಲೋತ್ತುಂಗ ; ಸಂನ್ಯಾಸಿಗಳ ರಾಜ. ಅವನಿಗಿರುವ ಪತ್ನಿ ಲೋಕೋದ್ಧಾರಕ್ಕೆ ಪೂರಕವಾಗಿ ಮಾತ್ರ. ಆಧುನಿಕ ಕಾಲದಲ್ಲಿ ಶ್ರೀರಾಮಕೃಷ್ಣರ ಜೊತೆ ಶಾರದಾಮಾತೆಯಿದ್ದಂತೆ. ಕಲ್ಪದ ಪ್ರಾರಂಭದಲ್ಲಿ ಪತ್ನಿಯೇ ಬೇಡವೆಂತಿದ್ದವನು ಅವನು. ಆದರೆ ಅದು ವೇದಗಳು ಯಾವುದನ್ನು ‘ಋತಂ’ ಎಂದು ಕರೆಯುತ್ತವೆಯೋ ಆ ಮಹಾನ್ ವ್ಯವಸ್ಥೆಗೆ ಕೊರತೆ. ಸೃಷ್ಟಿ ಎಂದ ಮೇಲೆ ಅಲ್ಲಿ ವೇದಾಂತದ ಭಾಷೆಯಲ್ಲಿ ಉಪಾದಾನ, ನಿಮಿತ್ತಗಳು; ಸಾಂಖ್ಯದ ಭಾಷೆಯಲ್ಲಿ ಪುರುಷ ಮತ್ತು ಪ್ರಧಾನ್; ಆಧುನಿಕ ವಿಜ್ಞಾನದ ಭಾಷೆಯಲ್ಲಿ ಶಕ್ತಿ ಮತ್ತು ದ್ರವ್ಯಗಳು ಪರಸ್ಪರ ಸಮನ್ವಯ ಸಂಯೋಗವನ್ನು ಹೊಂದಿರಲೇಬೇಕು. ಇಲ್ಲದಿದ್ದಲ್ಲಿ ಅದು ಅಪೂರ್ಣ! ಇದರ ಸಾಂಕೇತಿಕ ಪ್ರತಿಪಾದನೆಯೇ ಅರ್ಧನಾರೀಶ್ವರ. ಇದೇ ಕಾಳಿದಾಸನ ಭಾಷೆಯಲ್ಲಿ ವಾಕ್ ಮತ್ತು ಅರ್ಥ.

ಇದನ್ನು ಅರ್ಥ ಮಾಡಿಕೊಂಡ ವಿಷ್ಣು ಮತ್ತು ಬ್ರಹ್ಮರು ಶಿವನಿಗೆ ಒತ್ತಡ ಹೇರಿ ದಕ್ಷನ ಮಗಳು ‘ಸತಿ’ಯನ್ನು ಪತ್ನಿಯಾಗಿ ಸ್ವೀಕರಿಸುವಂತೆ ಸಫಲರಾದರು. ಆದರೆ ದಕ್ಷನ ಶಿವನಿಂದೆಯಿಂದ ನೊಂದ ‘ಸತಿ’ ಅವನ ಕಣ್ಣು ಮುಂದೆಯೇ ಅವನೇ ನಿರ್ವಿುಸಿದ್ದ ಹೋಮಕುಂಡಕ್ಕೆ ಹಾರಿ ಅಸುನೀಗಿದಳು. ಅಂದಿನಿಂದ ಈ ಪದ್ಧತಿಗೆ ‘ಸತಿ’ ಎಂತಲೇ ಹೆಸರಾಗಿದೆ. ಯಾರು ಸತಿ ಹೋದರೂ ಪತಿಯ ಮೇಲಿನ ಪ್ರೇಮ ಮತ್ತು ಇವನನ್ನು ಬಿಟ್ಟಿರಲಾರದ ನೋವೇ ಇದಕ್ಕೆ ಕಾರಣ. ಯಾರೋ ಬಲವಂತವಾಗಿ ಎಳೆತಂದು ಬೆಂಕಿ ಹಚ್ಚಿದ್ದು ಕ್ರೌರ್ಯ, ರಾಕ್ಷಸಿಕೃತ್ಯವೇ ಹೊರತು ಸತಿ ಅಲ್ಲ. ಅಜ್ಞಾನಿಗಳ ಅಪಪ್ರಚಾರಕ್ಕೆ ಮಿತಿಯುಂಟೇ? ಆದರೆ ಸತಿಯ ಪ್ರತಿಪ್ರೇಮ ಅವಳು ಬೇಗನೆ ಹಿಮವಂತನ ಪುತ್ರಿ ಹೈಮವತಿಯಾಗಿ ಹುಟ್ಟಿ ಮತ್ತೆ ಶಿವನನ್ನು ಕೂಡಿಕೊಳ್ಳಲು ಹಾತೊರೆಯುತ್ತಿದ್ದಳು. ಬಾಲಕಿಯಾಗಿದ್ದಾಗಲೇ ಅವಳ ಶಿವಪ್ರೇಮ, ಸೌಂದರ್ಯ, ಸದಾಚಾರಗಳ ವಿವರ ಕಾಳಿದಾಸನ ‘ಕುಮಾರಸಂಭವಂ’ನ್ನು ಓದದೆ ಕಲ್ಪನೆಗೂ ಸಿಗದು.

ಸತಿಯ ಮರಣದಿಂದ ಸ್ವಭಾವವೇ ಆಗಿದ್ದ ಶಿವನ ಅಂತಮುಖತೆ ಸಾಸಿರಗೂಂಡು ಅವನನ್ನು ಗಾಢಧ್ಯಾನದಲ್ಲಿ ಮುಳುಗಿಸಿತು. ಶಿವನ ಸುತನಿಂದಲೇ ತನ್ನ ಸಿಂಹಾಸನಕ್ಕೆ ಸಂಚಕಾರವಾಗಿರುವ ‘ತಾರಕಾಸುರ’ನ ಸಂಹಾರವೆಂದರಿತ ಇಂದ್ರ ಯಾರಿಗಾಗಿ ತಾನು ಹುಟ್ಟಿದ್ದೇನೆಯೋ ಅವನನ್ನು ಸೇರಲು ಉತ್ಸುಕಳಾದ ಪಾರ್ವತಿಗೆ ತನ್ನ ಸಹಾಯಹಸ್ತವನ್ನು ನೀಡಲು ಕಾಮದೇವ ಅಥವಾ ಮನ್ಮಥನನ್ನು ಸಂಯೋಜಿಸಿದ. ಇತ್ತ ಮುಗ್ಧೆ ಪಾರ್ವತಿಯೂ ಲೋಕಸಹಜವಾಗಿಯೇ ತನ್ನ ಲೋಕೋತ್ತರ ಲಾವಣ್ಯ, ಪ್ರೇಮೋನ್ಮತೆಗಳಿಂದಲೇ ಶಿವನನ್ನು ಪಡೆಯಬಹುದೆಂದು ಭಾವಿಸಿ ಮನ್ಮಥನ ಜೊತೆ ನಡೆದಳು.

ಮನ್ಮಥ ಕ್ರಿಯಾಶೀಲನಾದ. ಧ್ಯಾನಮಗ್ನ ಶಿವ ತನ್ನ ಮನಸ್ಸು ವಿಚಲಿತಗೊಳ್ಳುವುದಕ್ಕೆ ಮುಂಚೆಯೇ ಅಪಾಯವನ್ನು ಗ್ರಹಿಸಿ ತನ್ನ ಭ್ರೂಮಧ್ಯದಲ್ಲಿರುವ ಮೂರನೇ ಕಣ್ಣಿನಿಂದ (ಆದ್ದರಿಂದಲೇ ಅವನು ಮುಕ್ಕಣ್ಣ) ಮನ್ಮಥನನ್ನು ಸುಟ್ಟು ಬೂದಿ ಮಾಡಿಬಿಟ್ಟ. ತಲ್ಲಣಿಸಿದ ಪಾರ್ವತಿ ಎಚ್ಚೆತ್ತು ಆಹಾರ, ನಿದ್ರೆಗಳನ್ನು ಬಿಟ್ಟು ಶಿವನನ್ನು ಪಡೆಯಲು ತಪಸ್ಸಿಗೆ ಕುಳಿತಳು. ಆಗಲೇ ಅವಳು ‘ಅಪರ್ಣೆ’ ಆದದ್ದು. ಇಂದ್ರ ದಿಕ್ಕು ತೋಚದವನಂತಾದ. ಇದು ಘಟನೆ.

ಕಾಮ ವಿಶಾಲಾರ್ಥದಲ್ಲಿ ‘ಆಸೆ’ ಎಂಬ ಅರ್ಥವನ್ನು ಕೊಡುತ್ತದೆ. ಸೀಮಿತ ಅರ್ಥದಲ್ಲಿ ಪ್ರತಿಜೀವಿಯೂ ತನ್ನಲ್ಲಿ ಹುದುಗಿಸಿಕೊಂಡಿರುವ ಸಂತಾನೋತ್ಪತ್ತಿಯ ತೀವ್ರ ವಾಂಛೆ. ಜೀವಿಯ ಸ್ವಭಾವದಲ್ಲೇ ಇದು ಮಿಳಿತ. ಒಂದರ್ಥದಲ್ಲಿ ಡಾರ್ವಿನ್ನಿನ ವಿಕಾಸವಾದದಲ್ಲೂ ಇದರ ಬಗ್ಗೆ ವಿವರಗಳಿವೆ. ವಿಖ್ಯಾತ ಮನಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್್ಡಂತೂ ಇದನ್ನು ತನ್ನ ತತ್ವದ ಪ್ರಧಾನಾಂಶಗಳಲ್ಲಿ ಒಂದಾಗಿ ಮಾಡಿಕೊಂಡಿದ್ದಾನೆ.

ಯಾರು ಪ್ರಸ್ತಾಪಿಸದಿದ್ದರೂ ಪ್ರತಿಜೀವಿಗೂ ಸುಪರಿಚಿತವಾದ ವಿಷಯವೇ ಇದು. ಮನುಷ್ಯನ ಅಧೋಗತಿಗೆ ಕಾರಣವಾಗುವ, ತನ್ನ ಮನಸ್ಸಿನಲ್ಲೇ ಹುದುಗಿಕೊಂಡಿರುವ ಆರು ಶತ್ರುಗಳಲ್ಲಿ ಮೊದಲನೆಯ ಮತ್ತು ಅತ್ಯಂತ ಪ್ರಬಲವಾದದ್ದೇ ಕಾಮ. ಮಿಕ್ಕಿದ್ದೇ ಕ್ರೋಧ (ಕೋಪ), ಲೋಭ (ಯಾವ ಮಾರ್ಗದಿಂದಾದರೂ ಸರಿಯೇ ಎಲ್ಲವನ್ನೂ ಬಾಚಿಕೊಳ್ಳಬೇಕು), ಮೋಹ (ತನ್ನದ್ದನ್ನು ಬಿಟ್ಟಿರದ ವಾಂಛೆ), ಮದ (ಸೊಕ್ಕು), ಮಾತ್ಸರ್ಯ (ಅಸೂಯೆ). ಪರಮಾತ್ಮನನ್ನು ಬಿಟ್ಟರೆ ‘ಕಾಮ’ದಷ್ಟು ಪ್ರಬಲವಾದದ್ದು ಯಾವುದೂ ಇಲ್ಲ ಎನ್ನುವುದು ಜ್ಞಾನಿಗಳ ಅನುಭವ.

ರಾಜ ಮಹಾರಾಜರೂ, ಚಕ್ರವರ್ತಿಗಳೂ, ಕವಿ ಕೋವಿದರೂ, ವಿದ್ವಾಂಸರೂ ಅಷ್ಟೇಕೆ ಪ್ರಾರಂಭದಲ್ಲಿ ಎಷ್ಟೋ ತಪಸ್ವಿಗಳೂ ಇದರ ಮುಂದೆ ಸೋತಿದ್ದಾರೆ. I came , I saw , I conquered. ‘ನಾನು ಬಂದೆ, ನಾನು ಕಂಡೆ, ನಾನು ಗೆದ್ದೆ’ ಅರ್ಥಾತ್ ಹೋದಲ್ಲೆಲ್ಲ, ಕಂಡದ್ದನ್ನೆಲ್ಲ ಗೆದ್ದೇ ತೀರುವ ಸ್ವಭಾವ ಸಾಮರ್ಥ್ಯವನ್ನು ತನ್ನದಾಗಿಸಿಕೊಂಡಿದ್ದ ರೋಮನ್ ಚಕ್ರವರ್ತಿ ಜೂಲಿಯಸ್ ಸೀಜರ್ ತನ್ನೂರಿಗೆ ಭೇಟಿಕೊಟ್ಟ ಈಜಿಪ್ಟಿನ ‘ಕ್ಲಿಯೋಪಾತ್ರಾ’ಳನ್ನು ಮಂಡಿಯೂರಿ ಸೇವಕನಂತೆ ಸ್ವಾಗತಿಸಿದ್ದು, ತಪಸ್ಸಿಗೆ ಕುಳಿತಿದ್ದರೂ ಮತ್ತೆ ಮತ್ತೆ ಬೀಳುತ್ತಿದ್ದ ರಾಜಾ ಕೌಶಿಕ (ಇವನೇ ಮುಂದೆ ಮಹರ್ಷಿ ವಿಶ್ವಾಮಿತ್ರ), ದೇವಯಾನಿಯ ಕೈಗೊಂಬೆಯಾಗಿದ್ದ ರಾಜಾ ಯಯಾತಿ, ಆಧುನಿಕ ಕಾಲದ ಅದೆಷ್ಟೋ ಮಹಾಮಹಿಮರ ಜುಟ್ಟನ್ನು ತನ್ನ ಕೈಯಲ್ಲಿಟ್ಟು ಆಡಿಸಿದ್ದು ಈ ಕಾಮನ ಬಾಣಗಳು.

ಇವನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ ಸುಟ್ಟು ಹಾಕಿದವನು ಶಿವ. ಈ ನಿಟ್ಟಿನಲ್ಲಿ ಆಧುನಿಕಕಾಲದ ಅವತಾರ ವರಿಷ್ಠ ಭಗವಾನ್ ಶ್ರೀರಾಮಕೃಷ್ಣರು ಪ್ರಾತಃಸ್ಮರಣೀಯರು. ತುಂಬು ಯೌವನದ, ಹದಿನೆಂಟರ ತರುಣಿ ಶಾರದಾಮಾತೆಯೊಂದಿಗೆ ಎಂಟು ತಿಂಗಳು ಒಂದೇ ಹಾಸಿಗೆಯಲ್ಲಿ ಮಲಗಿದ್ದರೂ ಎಳೆ ಹಸುಳೆಗಳಂತಿದ್ದರು ಎಂದು ರಾಷ್ಟ್ರಕವಿ ಕುವೆಂಪು ಹಾಡಿದ್ದಾರೆ.

ತುಂಟ ಕುದುರೆಯೊಂದನ್ನು ಪಳಗಿಸಿ, ಸವಾರಿ ಮಾಡಿ, ಆನಂದಿಸುವಂತೆ ಈ ಕಾಮ ಮತ್ತು ಅದರ ಸಹಚರರಾದ ಕ್ರೋಧ ಇತ್ಯಾದಿಗಳನ್ನು ಉಪಾಯದಿಂದ ಪಳಗಿಸಿ ಉದಾತ್ತೀಕರಿಸಿದರೆ ಅವು ಮನುಷ್ಯನನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುತ್ತವೆ. ಇದು ಮನುಷ್ಯನ ನಿಜಾರ್ಥದಲ್ಲಿನ ಉದ್ಧಾರಕ್ಕೆ ಅನಿವಾರ್ಯವೂ ಹೌದು. ಬೃಂದಾವನದ ಗೋಪಿಯರು, ಮೀರಾ, ಅಕ್ಕಮಹಾದೇವಿ ಅಷ್ಟೇಕೆ ಪ್ರತಿ ಭಕ್ತಿಯೋಗದ ಸಂತನೂ ಸಂಧಿಸಿದ, ತನ್ನ ಪ್ರಿಯಕರನೆಡೆಗೆ ಹರಿಯಿಸಿದ ಪ್ರೇಮ ಪ್ರವಾಹದ ಜೋರು ಬಂದಿದ್ದೇ ಈ ಉದಾತ್ತತೆಯಿಂದ. ನೇರವಾಗಿ ಕಾಮವನ್ನು ಗೆಲ್ಲ ಹೊರಡುವುದು ಅಷ್ಟು ಅಪೇಕ್ಷಣೀಯವಲ್ಲ. ಶ್ರೀರಾಮಕೃಷ್ಣರು ಹೇಳುತ್ತಿದ್ದ, ‘ಪೂರ್ವಕ್ಕೆ ಪಯಣಿಸುತ್ತಿದ್ದರೆ ಪಶ್ಚಿಮ ತಾನೇ ದೂರವಾಗುತ್ತದೆ’ ಎಂಬುದು ಇಲ್ಲಿ ಪ್ರಸ್ತುತ. ಈ ಆತಂಕಕಾರಿ ಕಾಮವನ್ನು ಆಹ್ಲಾದಕಾರಿ ಪ್ರೇಮವನ್ನಾಗಿ, ಭಕ್ತಿಯಾಗಿ ಪರಿವರ್ತಿಸುವುದಕ್ಕೆ ಒಂದು ವ್ಯವಸ್ಥಿತವಾದ ವಿಜ್ಞಾನವನ್ನೇ ನಿರ್ಮಾಣ ಮಾಡಿದೆ ಸನಾತನ ಧರ್ಮ.

ಅದೇ ಭಕ್ತಿಯೋಗದ ಮಧುರಭಾವ. ಮೀರಾ, ಅಕ್ಕ, ರಾಧೆ, ಶ್ರೀರಾಮಕೃಷ್ಣರು, ಶ್ರೀಚೈತನ್ಯ ಇವರೆಲ್ಲ ಅದನ್ನೇ ಅನುಸರಿಸಿ ನಮಗೆ ಮೇಲ್ಪಂಕ್ತಿಯಾಗಿದ್ದಾರೆ. ನಿಜಕ್ಕೂ ಹೇಳಬೇಕೆಂದರೆ ಈ ಕಾಮ ಎನ್ನುವುದು ಪ್ರೇಮದ ವಿಕೃತ ರೂಪ. ಹುಚ್ಚೆದ್ದ ಹೊಳೆಯಂತೆ. ಊರೂರುಗಳನ್ನು ಕೊಚ್ಚಿಕೊಂಡು ಹೋಗುವ ಹೊಳೆಯನ್ನು ಅಣೆಕಟ್ಟು ನಿಯಂತ್ರಿಸಿದರೆ ಅದೇ ಬೆಂಗಾಡನ್ನು ಬಂಗಾರವನ್ನಾಗಿ ಮಾಡಬಲ್ಲದು. ಆದ್ದರಿಂದಲೇ ಅದು ‘ಕಾಮದೇವ’. ಇವೆಲ್ಲ ಮನುಷ್ಯನ ಮುಂದೆ ಪ್ರಕೃತಿಯೊಡ್ಡಿರುವ ಸವಾಲುಗಳು, ಬೀಸುವ ಬಲೆಗಳು. ಸೋತರೆ ಸುಣ್ಣ; ಗೆದ್ದರೆ ಗಿಣ್ಣು. ಜೀವಿ ಗಟ್ಟಿಯಾಗಬೇಕು. ಕಾಡುಕಲ್ಲು ಬೇಲೂರಿನ ಚೆನ್ನಕೇಶವನಾಗಬೇಕಾದರೆ ಸಾವಿರ ಪೆಟ್ಟುಗಳನ್ನು ತಿನ್ನಬೇಕು. ಮುರಿದು ಹೋಗಬಾರದು.

ಉದಾತ್ತಗೊಳಿಸದಿದ್ದಲ್ಲಿ ‘ಕಾಮ’ ಮನುಷ್ಯನ ಜೀವನವನ್ನು ಮುರಾಬಟ್ಟೆ (ಐ್ಟಟಚ್ಟಚಚ್ಝಿಛಿ)ಯನ್ನಾಗಿಸುತ್ತದೆ. ಅಂಥ ಪ್ರಬಲ ಶತ್ರು ಅದು. ಶತ್ರು ಪ್ರಬಲನಾಗಿದ್ದರೆ ಕೋಟೆಯೊಳಗಿಂದಲೇ ಹೋರಾಡಬೇಕು. ಅದಕ್ಕಾಗಿಯೇ ‘ವಿವಾಹ’ ಎಂಬ ವ್ಯವಸ್ಥೆಯನ್ನೂ ಮಾಡಲಾಗಿದೆ. ‘ಒಂದೆರೆಡು ಮಕ್ಕಳಾದ ಮೇಲೆ ಪತಿ, ಪತ್ನಿಯರು ಅಣ್ಣ-ತಂಗಿಯರಂತೆ ಬದುಕಬೇಕು’ ಎಂದು ಶ್ರೀರಾಮಕೃಷ್ಣರು ಹೇಳುತ್ತಿದ್ದರು. ಭೋಗಾಕಾಂಕ್ಷಿ ಯಾವ ಬೆಲೆಯನ್ನು ತೆತ್ತು ತಾನು ಸುಖಿಸುತ್ತಿದ್ದೇನೆ ಎಂಬ ಕಲ್ಪನೆಯೇ ಇಲ್ಲದವನು. ಮೃಗೀಯ ತೃಷೆಯಿಂದ ತಾನು ಕಳೆದುಕೊಳ್ಳುತ್ತಿರುವ ವಸ್ತುವನ್ನು ಧ್ಯಾನ, ಪ್ರಾರ್ಥನೆ, ಪೂಜೆ, ಸ್ವಾಧ್ಯಾಯಗಳಿಂದ ಓಜಸ್ಸನ್ನಾಗಿ ಪರಿವರ್ತಿಸಿದರೆ ಮಾನವ ದೇವಮಾನವನಾಗುತ್ತಾನೆ.

ದೇವನೇ ಆಗುತ್ತಾನೆ. ಪ್ರತಿ ಪುರುಷ ಅಥವಾ ಸ್ತ್ರೀಯ ಬೆನ್ನುಮೂಳೆಯ ಕೆಳಗಡೆಯಿರುವ ಶುಕ್ಲ ಅಥವಾ ಶೋಣಿತಗಳನ್ನು ಓಜಸ್ಸನ್ನಾಗಿ ಪರಿವರ್ತಿಸಿ ವಿಭೂತಿಪುರುಷನಾಗಿ ಹೇಗೆ ವಿಜೃಂಭಿಸಬಹುದು ಎಂಬುದಕ್ಕೆ ಸನಾತನ ಧರ್ಮ ಮತ್ತೊಂದು ಅದ್ಭುತ ವಿಜ್ಞಾನವನ್ನು ನಿರ್ವಿುಸಿದೆ. ಇದೇ ರಾಜಯೋಗ ಅಥವಾ ಧ್ಯಾನಯೋಗ. ಸನಾತನ ಧರ್ಮ ಈ ಜಗತ್ತಿಗೆ ಏನೇನು ಉಪಕಾರ ಮಾಡಿದೆ ಎಂಬುದನ್ನು ತಿಳಿಯಲು ಬಹಳ ಗ್ರಹಣ ಶಕ್ತಿ, ಬುದ್ಧಿಸಾಮರ್ಥ್ಯ ಬೇಕು. ಜೊಳ್ಳು ಜೊಟ್ಟುಗಳಿಗೆ ಅದು ತಿಳಿಯದು. ವಜ್ರದ ಬೆಲೆ ವಜ್ರದ ವ್ಯಾಪಾರಿಗೆ ಗೊತ್ತು. ಗೊತ್ತಿಲ್ಲದರ ಬಗ್ಗೆ ಅಪಸ್ವರ ತೆಗೆಯುವುದು ನರಿ ಸಂಸ್ಕೃತಿ. ನರಿಗಳ ಸಂಖ್ಯೆ ಜಾಸ್ತಿಯಾದರೆ ಅದೇ ಒಂದು ಡಿಟ್ಟ್ಟ. ಮನುಷ್ಯ ಅದ್ವೈತ ಭಾವದಲ್ಲಿದ್ದಾಗ ಅವನು ಶಿವನೇ. ‘ಶಿವೋಹಂ’ ಎಂದೇ ಬೋಧಿಸುತ್ತದೆ ವೇದಾಂತ. ಹನುಮಂತನಂಥ ಭಕ್ತನೂ ಇದನ್ನು ಅನುಮೋದಿಸುತ್ತಾನೆ. ಅಷ್ಟೇಕೆ ಕ್ರಿಸ್ತ ಕೂಡ ತನ್ನ ಕೆಲ ಶಿಷ್ಯರಿಗೆ ಇದನ್ನು ಬೋಧಿಸಿದ್ದ.

ಸಚ್ಚಿದಾನಂದಶಿವನ ಪ್ರಿಯವಾದ ಸ್ಥಿತಿ ‘ಚಿತ್’ ಭಾವ. ಇದು ಜ್ಞಾನಪ್ರಧಾನ. ಜ್ಞಾನದಲ್ಲೇ ಅಥವಾ ಚಿದ್ಭಾವದಲ್ಲೇ ‘ಸತ್’ ಮತ್ತು ‘ಆನಂದ’ಗಳನ್ನು ಕಾಣುವವನು ಅವನು. ಜ್ಞಾನದ ಅತ್ಯುಚ್ಚ ಸ್ಥಿತಿಯಾದ ‘ಸೋಹಂ’ ಶಿವನ ಉಸಿರು. ‘ಸೋಹಂ’ನಲ್ಲಿ ಅವನು ಉನ್ಮತ್ತನಾದಾಗಲೇ ಅವನು ಕುಣಿದು ‘ನಟರಾಜ’ನಾಗುವುದು.

ಪರಮಕರುಣಾಮಯಿ, ಲೋಕಹಿತವೇ ತನ್ನ ಉಸಿರೆಂದು ಭಾವಿಸಿ ಅದನ್ನೇ ತನ್ನ ಅಸ್ತಿತ್ವವಾಗಿಸಿಕೊಂಡ ಶಿವ ತನ್ನ ಮೂರನೇ ಕಣ್ಣನ್ನು ಪ್ರತಿ ಜೀವಿಗೂ ದಯಪಾಲಿಸುತ್ತಿದ್ದಾನೆ. ಅದೇ ಆಜ್ಞಾಚಕ್ರ. ಕುಂಡಲಿನೀ ಶಕ್ತಿ ಸುಷುಮ್ನಾ ನಾಡಿಯ ಮೂಲಕ ಅನಾಹತ ಚಕ್ರಕ್ಕೆ ಬಂದಾಗ ಅವನ ಕಾಮ ಭಾವನೆ ಹಲ್ಲಿಲ್ಲದ ಹಾವಾಗುತ್ತದೆ. ಅಲ್ಲಿಂದ ಆಜ್ಞಾಚಕ್ರಕ್ಕೆ ಬಂದರೆ ಸಂಪೂರ್ಣವಾಗಿ ಸತ್ತೇ ಹೋಗುತ್ತದೆ. ಜ್ಞಾನದ ಪರಮ ಶತ್ರುವಾದ ಕಾಮ ಅಗ್ನಿಯನ್ನು ಹೊಗೆ ಮುಚ್ಚಿದಂತೆ ಇಲ್ಲಿಯವರೆಗೆ ಜ್ಞಾನವನ್ನು ಮುಚ್ಚಿತ್ತು. ಈಗ ಅದೃಶ್ಯವಾಯಿತು. ಇನ್ನು ಸೋಹಂ ಭಾವಕ್ಕೆ, ಬ್ರಹ್ಮಜ್ಞಾನಕ್ಕೆ ಕೇವಲ ಒಂದು ಮೆಟ್ಟಿಲು ಬಾಕಿ. ಆದರೆ ಇಲ್ಲಿಂದಲೇ ಮನುಷ್ಯ ಅತೀವ ಆನಂದವನ್ನೂ ಜ್ಞಾನವನ್ನೂ ಪಡೆಯಲು ಪ್ರಾರಂಭಿಸುತ್ತಾನೆ. ಅವನ ಪೂರ್ಣತೆಗೆ ಇದ್ದ ಅಡ್ಡಿಗಳೆಲ್ಲ ಸರಿಯಿತು ಎನ್ನುತ್ತಾರೆ ಶ್ರೀರಾಮಕೃಷ್ಣರು.

ಶಿವರಾತ್ರಿಯಿಂದ ಒಂದು ಪಕ್ಷದ ನಂತರ ಬರುವುದೇ ಕಾಮದಹನ. ಅಲ್ಲಿಂದ ಒಂದು ಪಕ್ಷಕ್ಕೇ ಯುಗಾದಿ. ಇವೆಲ್ಲ ಭಾರತೀಯ ಸಂಸ್ಕೃತಿ ಒಂದು ಮಹಾನ್ ಸಂಶೋಧನೆಯ ಫಲಶೃತಿ ಎಂಬುದನ್ನು ನಿಚ್ಚಳವಾಗಿ ತೋರಿಸುತ್ತದೆ. ಆದರೆ ಸಂಕೇತಗಳ ಹಿಂದಿನ ಅರ್ಥವನ್ನು ತಿಳಿಯುವ ಬುದ್ಧಿ ಮತ್ತು ತಾಳ್ಮೆಗಳು ಬೇಕಷ್ಟೆ!

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)