ಕರೊನಾ ಬಿಕ್ಕಟ್ಟಿನ ನಡುವೆಯೂ ತರಗತಿಗಳು ಆರಂಭವಾಗಿವೆ. ನರ್ಸರಿ, 1ರಿಂದ 5ನೇ ತರಗತಿ ಮಕ್ಕಳಿಗೆ ಅಧಿಕೃತವಾಗಿ ಶಾಲೆ ತೆರೆದಿಲ್ಲವಾದರೂ 6ರಿಂದ-9ನೇ ತರಗತಿ ಮಕ್ಕಳಿಗೆ ಆರಂಭವಾಗಿದೆ. ಒಂದು ವರ್ಷ ಮನೆಯಲ್ಲೇ ಕಾಲ ಕಳೆದಿದ್ದ ಮಕ್ಕಳಿಗೀಗ ಶಾಲೆಗೆ ಒಗ್ಗಿಕೊಳ್ಳಲು, ಮೊದಲಿನ ಹಾಗೆ ಹೋಂ ವರ್ಕ್ ಮಾಡಲು, ಮನೆಯಲ್ಲೇ ಉಳಿದು ಆವರಿಸಿದ ಜಿಡ್ಡುತನ ಹೋಗಲಾಡಿಸಲು ಕೆಲ ಚಟುವಟಿಕೆಗಳು ತುರ್ತಾಗಿ ಬೇಕಿದೆ. ಶಾಲೆಗೆ ಖುಷಿಯಿಂದಲೇ ಹೊರಡಲು ಅಣಿಯಾಗಬೇಕಿದೆ. ಅದಕ್ಕಾಗಿ ಇಲ್ಲಿದೆ ಉಪಯುಕ್ತ ಮಾಹಿತಿ.
| ಅರುಣ ಎಂ.ಜಿ.
ಶಾಲೆಗಳ ಬಾಗಿಲು ತೆರೆದಿದ್ದು, ಜ್ಞಾನದೇಗುಲಕ್ಕೆ ಹೊರಡಲು ಮಕ್ಕಳೀಗ ಅಣಿಯಾಗಬೇಕಿದೆ. ಕರೊನಾ ಬಿಕ್ಕಟ್ಟಿನಿಂದಾಗಿ ಆನ್ಲೈನ್ ಕ್ಲಾಸ್, ಟಿವಿ, ನಿದ್ರೆ, ಮೊಬೈಲ್ ಗೇಮ್ಲ್ಲೇ ಕಾಲ ಕಳೆಯುತ್ತಾ ರಜೆಯ ಗುಂಗಿನಲ್ಲೇ ಇದ್ದ ಚಿಣ್ಣರ ಪೈಕಿ ಹಲವರಿಗೆ ಒಮ್ಮೆಲೆ ಶಾಲೆಗೆ ಹೋಗುವುದು ಅಂದ್ರೆ ಉದಾಸೀನ. ‘ಇಷ್ಟು ದಿನ ಕುಣಿದದ್ದು ಸಾಕು ಇನ್ಮೇಲಾದ್ರೂ ಓದ್ಕೋ, ಟೈ ಕಟ್ಟಿದ್ಯಾ? ಸಮವಸ್ತ್ರ ನೀಟಾಗಿರಲಿ, ಸ್ಕೂಲ್ನಲ್ಲಿ ಮಾಸ್ಕ್ ತೆಗೆಯಬೇಡ... ಹೋಂ ವರ್ಕ್ ಮಾಡಿದ್ಯಾ?’ ಎಂಬ ಮಾತು ಮನೆಯಲ್ಲೀಗ ರಿಂಗಣಿಸುತ್ತಿದೆ ಅಲ್ಲವೇ? ಅಮ್ಮ/ ಅಜ್ಜಿಯ ಈ ಮಾತು ನಿಮಗೆ ಒಳಿತನ್ನೇ ಬಯಸಿದೆ. ನಿಮ್ಮ ಪಾಲಿಗೆ ಶಾಲೆಗಳೇ ಜಗತ್ತು, ಪುಸ್ತಕವೇ ಬದುಕಾಗಲಿ. ಪ್ರತಿಯೊಬ್ಬರೂ ಸಂಭ್ರಮದಿಂದ ಶಾಲೆಗೆ ಹೋಗಲು ಸಿದ್ಧರಾಗಿ. ನೀವು ಆಟವಾಡುವ ಚೆಂಡನ್ನು ಹೇಗೆ ನೆಲಕ್ಕೆ ಒಗೆದರೆ ಪುಟಿದೇಳುತ್ತದೋ ಹಾಗೆ ತರಗತಿ ವಿಷಯದಲ್ಲೂ ನಿಮ್ಮ ಉತ್ಸಾಹದ ಚಿಲುಮೆ ಉಕ್ಕುತ್ತಿರಲಿ. ಶಿಕ್ಷಕರು, ಗೆಳೆಯರೊಂದಿಗೆ ಆಡುತ್ತಾ-ಕಲಿಯುತ್ತಾ ನಲಿಯಿರಿ.
ಅಯ್ಯೋ, ಮನೆಯಲ್ಲೇ ಇದ್ದು ಜಡತ್ವ ಆವರಿಸಿದಂತಾಗಿದೆ, ಹೇಗಪ್ಪಾ ಮೊದಲಿನಂತೆ ಲವಲವಿಕೆಯಿಂದ ಶಾಲೆಗೆ ಹೋಗೋದು? ಬೆಸ್ಟ್ ಸ್ಟೂಡೆಂಟ್ಸ್ ಅನ್ನಿಸಿಕೊಳ್ಳೋ ಚಾನ್ಸ್ ಮಿಸ್ ಆಗ್ಬಹುದು ಎಂದೆಲ್ಲ... ಚಿಂತಿಸದಿರಿ. ನಿಮ್ಮ ಶಾಲೆ ಜರ್ನಿ ಹಿತವಾಗಿರಲು ನೀವು ಏನೆಲ್ಲ ಮಾಡಿದರೆ ಒಳಿತು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಅಂದದ ಬರವಣಿಗೆ ಮರೆಯದಿರಿ
‘ಅಯ್ಯೋ, ನಿನ್ ಹ್ಯಾಂಡ್ರೈಟಿಂಗ್ ಸರಿ ಆಗೋದ್ ಯಾವಾಗ? ಶಾಲೆಗೂ ಹೋಗ್ದೆ, ಆನ್ಲೈನ್ ಕ್ಲಾಸ್ನಿಂದಾಗಿ ಬರೆಯೋದೂ ಕಡಿಮೆ ಆಗೋಯ್ತು. ಈಗ ಶಾಲೆ ಬೇರೆ ಶುರುವಾಗಿದೆ, ನಿನ್ನ ಬ್ರಹ್ಮಲಿಪಿ ನೋಡಿ ಅದ್ಯಾರು ಮಾರ್ಕ್ಸ್ ಕೊಡ್ತಾರೋ...’ ಎಂದು ಮನೆಯಲ್ಲಿ ಮೂದಲಿಸುವುದು ಸಾಮಾನ್ಯ. ಈ ಮಾತು ಕೇಳಿ ನಿಮಗೂ ಬೋರ್ ಆಗಿರುತ್ತೆ ಅಲ್ವೆ? ಮತ್ತೇಕೆ ತಡ, ಚಂದವಾಗಿ ಬರೆಯಲು ಇಂದಿನಿಂದಲೇ ಪ್ರಯತ್ನಿಸಿ. ಶಾಲೆಗೆ ಹೋದ ಕೂಡಲೇ ನಿಮ್ಮ ಶಿಕ್ಷಕರು ಅಂದದ ಬರವಣಿಗೆ ಕಂಡು ಭೇಷ್ ಅನ್ನದೆ ಇರಲಾರರು.
ಕಳೆದಿರುವುದನ್ನು ಹುಡುಕಿ
ಕಳೆದ ವರ್ಷ ಬಳಸಿದ ಪೆನ್ನು, ಪೆನ್ಸಿಲ್, ರಬ್ಬರ್, ಜಾಮೆಟ್ರಿ ಬಾಕ್ಸ್, ಬ್ಯಾಗ್ ಎಲ್ಲಿದೆ ಹುಡುಕಿ. ಇವು ಹಳೆಯದಾದರೂ ಈ ವರ್ಷ ಉಪಯೋಗಕ್ಕೆ ಬರುತ್ತವೆ. ಹೊಸದನ್ನೇ ಕೊಡಿಸಿ ಎಂದು ಅಪ್ಪಅಮ್ಮನನ್ನು ಪೀಡಿಸಬೇಡಿ. ಅವುಗಳ ಹೊರತಾಗಿ ಮತ್ತೇನು ಅಗತ್ಯ ಇದೆಯೋ ಅದನ್ನು ತರುವಂತೆ ಅಪ್ಪನಿಗೆ ಪಟ್ಟಿ ಕೊಡುವುದನ್ನ ಮರೆಯದಿರಿ.
ಓದಿದ್ದೆಲ್ಲ ನೆನಪಿಡಿ...
ಮಕ್ಕಳೇ ಕಲಿಕೆಯ ವೇಗ ಹೆಚ್ಚಾಗಿರುವುದು ನಿಮ್ಮಲ್ಲಿ ಮಾತ್ರ. ನಿತ್ಯ ಯೋಗಾಭ್ಯಾಸ ಮಾಡಿ ಏಕಾಗ್ರತೆ ಹೆಚ್ಚಿಸಿಕೊಳ್ಳಿ, ಧನಾತ್ಮಕ ಅಂಶಗಳನ್ನ ಅಳವಡಿಸಿಕೊಳ್ಳಿ. ಜಂಕ್ಫುಡ್, ಮಸಾಲೆ-ಕರಿದ-ಬೇಕರಿ ಪದಾರ್ಥದಿಂದ ದೂರವಿರಿ. ಧಾರಾಳವಾಗಿ ನೀರು ಕುಡಿಯಿರಿ. ಮೊಬೈಲ್, ಟಿವಿಯಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಓದಿನ ಜತೆಗೆ ಮನರಂಜನೆ ಚಟುವಟಿಕೆಯಲ್ಲೂ ಪಾಲ್ಗೊಳ್ಳಿ.
ಮತ್ತೆ ತಪ್ಪು ಮಾಡದಿರಿ, ಶಿಸ್ತು ಪಾಲಿಸಿ
ಲಾಸ್ಟ್ ಇಯರ್ನಲ್ಲಿ ಯಾವುದೋ ಸ್ಪರ್ಧೆಗೆ ಹೋಗಿ ವಾಪಸ್ ಭಯದಿಂದ ಬಂದದ್ದು, ಪರ್ಫಾರ್ವೆುನ್ಸ್ ಸರಿ ಇಲ್ಲದೆ ಸೋತದ್ದು, ತಯಾರಿ ಇಲ್ಲದೆ ಮುಜುಗರಕ್ಕೊಳಗಾಗಿದ್ದು, ಕೊನೇ ಹಂತದಲ್ಲಿ ಗೆಲುವು ಕೈಕೊಟ್ಟದ್ದು, ಶಾಲೆಗೆ ತಡವಾಗಿ ಹೋಗಿ ಪಿಟಿ ಮಾಸ್ಟರ್ ಕೈಯಲ್ಲಿ ಪೆಟ್ಟು ತಿಂದದ್ದು, ತರಗತಿಯಲ್ಲೇ ತೂಕಡಿಸಿ ಮುಜುಗರಕ್ಕೊಳಗಾಗಿದ್ದು... ಇದ್ಯಾವುದೂ ಈ ಬಾರಿ ರಿಪೀಟ್ ಆಗದಂತೆ ಜಾಗ್ರತೆ ವಹಿಸಿ. ಭಯ, ಸಂಕೋಚ ಬಿಟ್ಟು ಎಲ್ಲ ಸ್ಪರ್ಧೆಯಲ್ಲೂ ಪಾಲ್ಗೊಳ್ಳಿ. ಕಳೆದ ವರ್ಷ ನೀವು ಕಲಿತ ಪ್ರಮುಖ ಪಾಠಗಳನ್ನು ಮನನ ಮಾಡಿಕೊಳ್ಳಿ. ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳಿ ಶಿಸ್ತು ಪಾಲಿಸಿ. ಅಂದಿನ ಪಾಠವನ್ನು ಆ ದಿನವೇ ಅಭ್ಯಾಸ ಮಾಡಿ.
ತೂಕಡಿಸಿ ತೂಕಡಿಸಿ ಬೀಳದಿರು...
ಕರೊನಾ ನೆಪದಲ್ಲಿ ಶಾಲೆಗೆ ಹೋಗದೆ ಮನೆಯಲ್ಲೇ ಇದ್ದ ಬಹುತೇಕ ಮಕ್ಕಳಲ್ಲಿ ಟಿವಿ ನೋಡುತ್ತ, ಐಪಾಡ್ ಮೊಬೈಲ್, ಕಂಪ್ಯೂಟರ್ ಬಳಸುತ್ತಾ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಲೇಟಾಗಿ ಏಳುವ ಪರಿಪಾಠ ಬೆಳೆದಿದೆ. ಮಧ್ಯಾಹ್ನದ ವೇಳೆ ಟಿವಿ ನೋಡುತ್ತಲೇ ನಿದ್ರೆಗೆ ಜಾರಿರುತ್ತಾರೆ. ಇದೀಗ ಅನೇಕ ಮಕ್ಕಳು ಒಲ್ಲದ ಮನಸ್ಸಿನಲ್ಲಿಯೇ ಬೇಗ ಎದ್ದು ಶಾಲೆಗೆ ಹೊರಡಬೇಕು. ಶಾಲೆಯಲ್ಲಿ ತೂಕಡಿಸಿ ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಇನ್ನಾದರೂ ‘ಬೇಗ ಮಲಗಿ ಬೇಗ ಏಳು’ ಎಂಬ ಮಾತಿನಂತೆ ರಾತ್ರಿ ಬೇಗ ಮಲಗುವ ಹವ್ಯಾಸ ಬೆಳೆಸಿಕೊಳ್ಳಿ. ಶಾಲೆಯಲ್ಲಿ ನಿದ್ರೆ ಬಂದರೆ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ, 1 ಲೋಟ ನೀರು ಕುಡಿಯಿರಿ. ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ, ಪಠ್ಯೇತರ ಚಟುವಟಿಕೆಯಲ್ಲೂ ಪಾಲ್ಗೊಳ್ಳಿ. ನೀವೆ ಮಾಡಬಹುದಾದ ಕೆಲ ಯೋಗಾಸನಗಳಿವೆ, ಮಾಡಿ. ಮಲಗುವ ಮುನ್ನ ಪುಸ್ತಕ ಓದಿ, ಒಂದೈದು ನಿಮಿಷ ಧ್ಯಾನ ಮಾಡಿ. ಅಳುತ್ತಾ ಮಲಗದಿರಿ.
ದಿನಚರಿ ಬರೆಯಿರಿ
ಪ್ರತಿಯೊಬ್ಬರ ಯಶಸ್ಸಿನ ಮೆಟ್ಟಿಲು ದಿನಚರಿ. ದಿನಚರಿ ಬರೆಯುವ ಹವ್ಯಾಸ ಇಲ್ಲವಾದರೆ ಇಂದಿನಿಂದಲೇ ಬರೆಯಲು ಶುರು ಮಾಡಿ. ಆ ದಿನದ ಕೆಲಸ, ಸಾಧನೆಯ ಮೆಟ್ಟಿಲು ಹತ್ತಲು ನೀವು ಮಾಡಬೇಕಿರುವ ಯೋಜನೆ, ಸಿದ್ಧತೆಯನ್ನು ಅಕ್ಷರರೂಪಕ್ಕಿಳಿಸಿ. ನಿತ್ಯ ಯೋಗ, ಧ್ಯಾನ ಮಾಡುವ ಸಂಕಲ್ಪ ಮಾಡಿದ್ದರೆ ಅದನ್ನೂ ನಮೂದಿಸಿ. ದಿನಕ್ಕೊಮ್ಮೆಯಾದರೂ ಡೈರಿಯ ಪುಟವನ್ನ ತಿರುವಿ ಹಾಕಿ. ಆಗ ನೀವು ಮಾಡಬೇಕೆಂದಿರುವ ಕರ್ತವ್ಯದ ಪ್ರಜ್ಞೆ ಜಾಗ್ರತಾವಸ್ಥೆಯಲ್ಲಿರುತ್ತದೆ.
ಬಿಸಿಲಿನ ವಿಷಯದಲ್ಲೂ ಜಾಗ್ರತೆ!
ಕರೊನಾ ಭೀತಿ ದಟ್ಟವಾಗಿದೆ. ಸೀನುವಾಗ-ಕೆಮ್ಮುವಾಗ ಕರವಸ್ತ್ರ ಬಳಸಿ, ಮಾಸ್ಕ್, ಸ್ಯಾನಿಟೈಸರ್, ಪ್ರತ್ಯೇಕ ನೀರಿನ ಬಾಟಲಿ ಬಳಿಸಿ. ಸೋಂಕಿನ ಬಗ್ಗೆ ಆತಂಕ ಬಿಟ್ಟು ಮುಂಜಾಗ್ರತೆ ವಹಿಸಿ. ವೈಯಕ್ತಿಕ ಸ್ವಚ್ಛತೆ ಜತೆಗೆ ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನ ಮರೆಯದಿರಿ. ಇದೀಗ ಬೇಸಿಗೆ ಶುರುವಾಗಿದೆ. ಶಾಲೆಯಿಂದ ಮನೆಗೆ ಬರುವ ಮಾರ್ಗದಲ್ಲಿ ಕೆರೆ-ಕಟ್ಟೆ-ಬಾವಿ-ಕೃಷಿಹೊಂಡ ಕಂಡ ಕೂಡಲೇ ನೀರಾಟಕ್ಕೆಂದು ಹೋಗದಿರಿ.