ಭಾರತೀಯ ಹಬ್ಬಗಳು ತನ್ನದೇ ಆದ ಸೊಬಗು ಮತ್ತು ಮಹತ್ವವನ್ನು ಹೊಂದಿವೆೆ. ಅದರಲ್ಲೂಶ್ರಾವಣ ಪೂರ್ಣಿಮೆಯಂದು ಆಚರಿಸುವ ರಕ್ಷಾಬಂಧನ ಹಬ್ಬವು ಸಂತೋಷ- ಸಾಮರಸ್ಯದ ಪರಾಕಾಷ್ಠೆಯ ಹಬ್ಬವಷ್ಟೇ ಅಲ್ಲ,ಕೌಟುಂಬಿಕ ಸಂಬಂಧ ಗಳನ್ನು ಇನ್ನಷ್ಟು ಭದ್ರಪಡಿಸುವ ಹಬ್ಬ ಕೂಡ. ಸುರಿಯುವ ಮಳೆ, ಭೂಮಿಯಲ್ಲಿ ಹಸಿರಿನ ಮೊಳಕೆ. ವಾತಾವರಣದಲ್ಲಿ ತಂಪಿನ ಸೆಲೆ. ಇವೆಲ್ಲವುಗಳ ಜೊತೆ ತನ್ನ ಸಹೋದರ ಕಟ್ಟಿದ ರಕ್ಷಾಬಂಧನವು ಸಹೋದರಿಯ ಪಾಲಿಗೆ ಸುರಕ್ಷತೆಯ ಬೆಚ್ಚನೆಯ ಅನುಭವವನ್ನು ಅನುಭವಿಸುವ ಪರ್ವವಾಗಿದೆ.
ಶ್ರಾವಣಮಾಸದ ಹುಣ್ಣಿಮೆಯಂದು ರಕ್ಷಾಬಂಧನ ಅಥವಾ ನೂಲುಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಸಹೋದರಿಯರು ತಮ್ಮ ಸಹೋದರನ ಕೈಗೆ ರಕ್ಷಾಬಂಧನ ಅಥವಾ ರಾಖಿ ಕಟ್ಟಿದ ಮಾತ್ರಕ್ಕೆ ಈ ಹಬ್ಬ ಪೂರ್ಣಗೊಳ್ಳುವುದಿಲ್ಲ. ಕಟ್ಟಿದ ರಾಖಿ ಪ್ರಭಾವಿ ಸುವ ವಾತ್ಸಲ್ಯ ಹಾಗೂ ಸುರಕ್ಷತೆಯ ಭಾವನೆ ಅದ್ಭುತವಾದುದು.ಈ ಭಾವನೆಯು ಭಾಷೆಯ ವಿವರಣೆಯ ಮಿತಿಯನ್ನು ಮೀರಿದ ಸಂಗತಿ. ರಕ್ಷಾಬಂಧನ ಹಬ್ಬ ಹತ್ತಿರ ಬರುತ್ತಿರುವಂತೆ ಸಹೋದರ ನಿಗಾಗಿ ಸಹೋದರಿ ಕಾಯುವಳು. ಅವಳ ಹೃದಯ ಮಿಡಿಯು ವುದು. ರಾಖಿ ಕಟ್ಟಿಸಿಕೊಂಡ ಸಹೋದರನು ತನ್ನ ಸಹೋದರಿಗೆ ಉಡುಗೊರೆ ಕೊಡಲು ಮರೆಯುವುದಿಲ್ಲ. ಆಕೆಗೆ ಅಣ್ಣ ನೀಡುವ ಉಡುಗೊರೆ ಅಥವಾ ಉಡುಗೊರೆಯ ಮೌಲ್ಯಕ್ಕಿಂತ ಆತನ ಆಶೀರ್ವಾದ ಅಥವಾ ಹಾರೈಕೆ ದೊಡ್ಡದು. ಉಡುಗೊರೆ ಸ್ವೀಕರಿಸಿದ ಸಹೋದರಿಯು ಸಹೋದರನಿಗೆ ಮಂಗಳ ಆರತಿಯನ್ನು ಬೆಳಗಿ, ತಿಲಕ ಇಟ್ಟು, ಸಿಹಿ ಹಂಚಿ ಸಂಭ್ರಮಿಸುವಳು. ತನ್ನ ಸಹೋದರನ ಕುಟುಂಬ ಅಥವಾ ತವರುಮನೆ ಕ್ಷೇಮವಾಗಿರಲಿ ಎಂದು ಸಹೋದರಿ ಮನಸಾರೆ ಹಾರೈಸುವಳು. ರಕ್ಷಾಬಂಧನ ಹಬ್ಬವು ಈ ದಿನಕ್ಕೆ ಮಾತ್ರ ಸೀಮಿತವಾಗದೇ ಈ ಸಂಬಂಧದ ಮಾಧುರ್ಯ ವರ್ಷಪೂರ್ತಿ ಮುಂದುವರಿಯಬೇಕು ಎಂಬುದು ಈ ಹಬ್ಬದ ಪ್ರಧಾನ ಆಶಯವಾಗಿದೆ. ಈ ರಾಖಿ ಅಥವಾ ರಕ್ಷಾಸೂತ್ರವು ಸಹೋದರ ಹಾಗೂ ಸಹೋದರಿಯರ ಸಂಬಂಧಕ್ಕೆ ಮಾತ್ರ ಸೀಮಿತವಲ್ಲ. ಇದು ಗುರು-ಶಿಷ್ಯ ಮತ್ತು ಪತಿ-ಪತ್ನಿ ಸಂಬಂಧದಲ್ಲಿಯೂ ಬಲವಾದ ಕೊಂಡಿಯಾಗಿದೆ.
ಪೌರಾಣಿಕ-ಐತಿಹಾಸಿಕ ಹಿನ್ನೆಲೆ: ಮಹಾಭಾರತದಲ್ಲಿ ಶ್ರಾವಣ ಪೂರ್ಣಿಮೆಯಂದು ನಡೆದ ಈ ಸಂದರ್ಭ ಸುಪ್ರಸಿದ್ದವಾದುದು. ಕೃಷ್ಣನು ಶಿಶುಪಾಲನನ್ನು ವಧಿಸುವಾಗ ಸುದರ್ಶನ ಚಕ್ರದ ಕಾರಣದಿಂದ ಕೃಷ್ಣನ ಬಲಗೈ ತೋರುಬೆರಳಿಗೆ ಗಾಯವಾಯಿತು.ಅಲ್ಲೇ ಇದ್ದ ದ್ರೌಪದಿ ಕೂಡಲೇ ತನ್ನ ಸೀರೆಯ ಸೆರಗನ್ನು ಹರಿದು,ಕೃಷ್ಣನ ತೋರುಬೆರಳಿಗೆ ಕಟ್ಟುವಳು. ನಂತರ ದ್ರೌಪದಿ ವಸ್ತ್ರಾಪಹರಣದ ಸಂದರ್ಭದಲ್ಲಿ ಶ್ರೀಕೃಷ್ಣನು ಆಕೆಗೆ ಅಕ್ಷಯಾಂಬರವನ್ನು ಇತ್ತು ರಕ್ಷಿಸಿದ. ದ್ರೌಪದಿ ಶ್ರೀಕೃಷ್ಣನಿಗೆ ಕಟ್ಟಿದ ಕಟ್ಟು ಆಕೆಯ ರಕ್ಷಣೆಗೆ ಕಾರಣವಾಯಿತು. ಪುರಾಣಕಾಲದಿಂದ ಇತಿಹಾಸಕಾಲಕ್ಕೆ ಇಣುಕಿದಾಗ, ಕ್ಷತ್ರಿಯ ಪುರುಷರು ಯುದ್ಧಕ್ಕೆ ತರಳುವಾಗ ಮಹಿಳೆಯರು ರಕ್ಷಾಸೂತ್ರವನ್ನು ಅವರ ಬಲಗೈಗೆ ಕಟ್ಟಿ, ಹಣೆಗೆ ಮಂಗಳ ತಿಲಕವನ್ನು ಇಟ್ಟು ನಮ್ಮ ರಾಜ್ಯದ ರಕ್ಷಣೆಯ ಭಾರ ನಿಮ್ಮದು. ವಿಜಯವಾರ್ತೆಯೊಂದಿಗೆ ಮರಳಿ ಬನ್ನಿ ಎಂದು ಹಾರೈಸಿ ಕಳಿಸುತ್ತಿದ್ದರು. ಒಮ್ಮೆ ಮೇವಾಡದ ರಾಣಿ ಕರ್ವವತೀ ತನ್ನ ರಾಜ್ಯದ ಮೇಲೆ ದಾಳಿ ಮಾಡುವ ಶತ್ರುವಿನಿಂದ ರಕ್ಷಣೆ ನೀಡುವಂತೆ ಆಗಿನ ಮೊಗಲ್ ದೊರೆ ಹುಮಾಯುನ್ಗೆ ರಾಖಿಯೊಂದಿಗೆ ಸಂದೇಶ ಕಳುಹಿಸಿದಾಗ, ಮುಸಲ್ಮಾನನಾಗಿಯೂ ರಾಖಿಯ ಬಗ್ಗೆ ಗೌರವ ಹೊಂದಿ ದವನಾಗಿ ಅದನ್ನು ಸ್ವೀಕರಿಸಿ ಮೇವಾಡ ತಲುಪಿ ಕರ್ವವತಿಯ ರಾಜ್ಯವನ್ನು ರಕ್ಷಿಸಿದ ಪ್ರಸಂಗ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಭಾರತಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ರಕ್ಷಾಬಂಧನ ಪರ್ವವು ಪರಸ್ಪರ ಏಕತೆಯನ್ನು ಸಾರುವ ಹಬ್ಬವಾಗಿ ಹೊರಹೊಮ್ಮಿತ್ತು.
ಈ ದಿನ...: ಸಮುದ್ರತೀರವಾಸಿಗಳು ಈ ದಿನ ಸಮುದ್ರತೀರಕ್ಕೆ ತೆರಳಿ ಸಮುದ್ರರಾಜನನ್ನು ಉದ್ದೇಶಿಸಿ ಕ್ಷೀರಾಭಿಷೇಕ ಮಾಡಿ ಪೂಜಿಸಿ, ಯಜ್ಞೋಪವೀತ ಹಾಗೂ ತೆಂಗಿನಫಲ ಸಮರ್ಪಿಸಿ ಶುಭವನ್ನು ಪ್ರಾರ್ಥಿಸುವರು. ಅಂತೆಯೇ ಈ ದಿನ ಬಾಲಕ-ಬಾಲಕಿಯರು ನಮ್ಮನ್ನು ಆಳುವ ಮಂತ್ರಿ- ಮುಖ್ಯಮಂತ್ರಿ- ಪ್ರಧಾನಮಂತ್ರಿ- ರಾಷ್ಟ್ರಪತಿ, ದೇಶಕಾಯುವ ಸೈನಿಕರ ಕೈಗೆ, ರಾಖಿಯನ್ನು ಕಟ್ಟಿ ಶುಭ ಕೋರುವರು. ರಕ್ಷಾಬಂಧನದ ಜೊತೆಗೆ ಈ ದಿನವನ್ನು ಸಂಸ್ಕೃತದಿನವನ್ನಾಗಿ ಕೂಡ ಆಚರಿಸುವರು.
ರಕ್ಷಾಬಂಧನವನ್ನು ಜೈನ ಹಾಗೂ ಸಿಖ್ ಧರ್ವಿುಯರೂ ಶೃದ್ಧಾ-ಭಕ್ತಿಯಿಂದ ಆಚರಿಸುವರು. ರಕ್ಷಾಬಂಧನ ಅಣ್ಣ-ತಂಗಿ ಯರ ಸಂಬಂಧಕ್ಕೇ ಸೀಮಿತವಾಗಿಲ್ಲ. ಗುರು-ಶಿಷ್ಯ, ಪತಿ-ಪತ್ನಿ ಸಂಬಂಧಗಳನ್ನೂ ಅದು ಗಟ್ಟಿಗೊಳಿಸುವುದು. ಸ್ತ್ರೀಗೌರವ ಈ ಹಬ್ಬದ ಆಚರಣೆ ಮೂಲ ಆಶಯವಾಗಿ ತೋರಿದರೂ ವಾಸ್ತವವಾಗಿ ಸ್ತ್ರೀ-ಪುರುಷರ ನಡುವೆ ಸಮಾನತೆ, ಪಾವಿತ್ರ್ಯ, ವಿಶ್ವಾಸ, ಸ್ನೇಹ-ಸುರಕ್ಷತೆಗಳನ್ನು ಮೂಡಿಸುವುದೇ ಆಗಿದೆ.
ಈ ದಿನ ಕಟ್ಟಲ್ಪಟ್ಟ ರಾಖಿಯ ಒಂದೊಂದು ನೂಲಿನ ಎಳೆಯೂ ಸಹೋದರ -ಸಹೋದರಿಯರ ಪ್ರೀತಿಯಯನ್ನು ಗಟ್ಟಿಗೊಳಿಸುವುದರಲ್ಲಿ ಸಂಶಯವಿಲ್ಲ. ಸ್ತ್ರೀಯರನ್ನು ಗೌರವದಿಂದ ಕಾಣಬೇಕು ಎಂಬುದು ಭಾರತದ ಉನ್ನತ ಪರಂಪರೆ. ಸ್ತ್ರೀಗೌರವದ ಪ್ರತೀಕವಾದ ಈ ಹಬ್ಬವು ಮೂಲತಃ ಪುರುಷರು ಮತ್ತು ಮಹಿಳೆಯರ ನಡುವಿನ ಪರಸ್ಪರ ಗೌರವದ, ಸಮಾನತೆ, ನಂಬಿಕೆ, ವಾತ್ಸಲ್ಯದ ಮತ್ತು ಸುರಕ್ಷತೆಯ ದ್ಯೋತಕವಾಗಿದೆ.
(ಲೇಖಕರು ಸಂಸ್ಕೃತ ಉಪನ್ಯಾಸಕರು)