ಅಂಕಣ

ಜಲ ಅಭಾವದ ಹುಯಿಲು ಪರಿಹಾರ ಮಳೆಕೊಯ್ಲು

ನೀರಿನ ಮಹತ್ವ ಸಾರುವ ಕಾರಣಕ್ಕಾಗಿ ಪ್ರತಿ ವರ್ಷ ಜಗತ್ತಿನಾದ್ಯಂತ ಮಾ. 22ರಂದು ‘ವಿಶ್ವ ಜಲ ದಿನ’ ಆಚರಿಸಲಾಗುತ್ತಿದೆ. ಈ ವರ್ಷದ ಘೊಷವಾಕ್ಯ ‘ಗ್ಲೇಸಿಯರ್ ಸಂರಕ್ಷಣೆ’. ಹಿಮನದಿಗಳ ರಕ್ಷಣೆಯ ಕಾಳಜಿ. ಹಲವು ರೀತಿಯ ಜಾಗೃತಿ ಪ್ರಯತ್ನಗಳ ಹೊರತಾಗಿಯೂ ಕುಡಿಯುವ ನೀರು ಹಾಗೂ ಅಂತರ್ಜಲದ ಕ್ಷೀಣತೆ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ, ಅಂತರ್ಜಲ ಹಾಗೂ ಮಳೆನೀರ ಕೊಯ್ಲು ತಜ್ಞ ಎನ್.ಜೆ. ದೇವರಾಜ ರೆಡ್ಡಿ ಅವರೊಂದಿಗೆ ವಿಜಯವಾಣಿ ನಡೆಸಿದ ಸಂವಾದದ ವಿವರ ಇಲ್ಲಿದೆ.

ಜನಸಂಖ್ಯೆ ಹೆಚ್ಚಳ ಹಾಗೂ ಮಾನವನ ಅವಶ್ಯಕತೆಗಳ ಹೆಚ್ಚಳದಿಂದಾಗಿ ನೀರಿನ ಬೇಡಿಕೆಯೂ ಹೆಚ್ಚುತ್ತಿದೆ. ಈ ಬೇಡಿಕೆ ಪೂರೈಸಿಕೊಳ್ಳಲು ಜನರು ಅಂತರ್ಜಲಕ್ಕೆ ಲಗ್ಗೆ ಹಾಕುತ್ತಿದ್ದಾರೆ. ಅತಿಯಾದ ಅಂತರ್ಜಲ ಬಳಕೆಯಿಂದಾಗಿ ಈಗಾಗಲೇ ಮಿತಿಗಿಂತ ಅಧಿಕ ಪ್ರಮಾಣದ ನೀರನ್ನು ಬಳಸಲಾಗಿದೆ. ನೀರಿನ ಕೊರತೆ ನೀಗಿಸಿಕೊಳ್ಳಲು ಮಳೆಕೊಯ್ಲು ಖಂಡಿತವಾಗಿಯೂ ಪರಿಹಾರ ನೀಡಬಲ್ಲದು... ಇದು ಅಂತರ್ಜಲ ಹಾಗೂ ಮಳೆನೀರ ಕೊಯ್ಲು ತಜ್ಞ ಎನ್.ಜೆ. ದೇವರಾಜ ರೆಡ್ಡಿ ಅವರ ಸ್ಪಷ್ಟ ಅಭಿಪ್ರಾಯ.

ರಾಜ್ಯದಲ್ಲಿ 50 ವರ್ಷದಿಂದೀಚೆಗೆ ನೆಲದಾಳದಲ್ಲಿರುವ ಜಲವನ್ನು ಬರಿದು ಮಾಡಲಾಗಿದೆ. ಇದು ಸಾಲದೆಂಬಂತೆ ಅತಿ ಆಳದಲ್ಲಿರುವ ಜಲವನ್ನು ಕೂಡ ಬಳಸಿಕೊಳ್ಳಲಾಗಿದೆ. ಪ್ರಸ್ತುತ ಮೈನಸ್ 600ಕ್ಕಿಂತ ಹೆಚ್ಚು ಪ್ರಮಾಣದ ಅಂತರ್ಜಲ ಬಳಕೆಯಾಗಿದೆ. ಅತಿ ಆಳದವರೆಗೆ ಬೋರ್​ವೆಲ್ ಕೊರೆಸಿ ಅದರಿಂದ ಲಭಿಸುವ ನೀರನ್ನು ಕುಡಿಯುತ್ತಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದೆ. ನಾಗರಿಕರಲ್ಲಿ ಅರಿವಿನ ಕೊರತೆಯಿಂದಾಗಿ ಇನ್ನಷ್ಟು ಮತ್ತಷ್ಟು ಆಳದ ಅಂತರ್ಜಲ ಕೈವಶ ಮಾಡಿಕೊಳ್ಳಲು ಪೈಪೋಟಿ ನಡೆದಿದೆ. ಇದಕ್ಕೆ ಪೂರ್ಣವಾಗಿ ಕಡಿವಾಣ ಹಾಕಿ ಮಳೆನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕುಡಿಯಲು, ಗೃಹ ಬಳಕೆಗೆ, ಗೃಹೇತರ ಹಾಗೂ ಕೃಷಿಗೂ ಸಾಕಷ್ಟು ಜಲ ಸಂಪತ್ತು ಮಳೆನೀರಿನ ಸಂಗ್ರಹದಿಂದ ಲಭ್ಯವಾಗಲಿದೆ. ಇದಕ್ಕಾಗಿ ಜನರನ್ನು ಜಲ ಸಾಕ್ಷರರನ್ನಾಗಿ ಮಾಡಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ಜಿಲ್ಲೆಗೊಂದು ಜಲ ಕೋಶ ಅಗತ್ಯ

ಅಂತರ್ಜಲ ಬಳಕೆ ಹಾಗೂ ಕೊಳವೆಬಾವಿ ಕೊರೆಯಿಸುವಿಕೆ ಬಗ್ಗೆ ಜನರಿಗೆ ನೈಜ ಹಾಗೂ ನಿಖರ ಮಾಹಿತಿ ನೀಡುವ ವ್ಯವಸ್ಥೆ ಇಲ್ಲ. ಇದರಿಂದ ಜನರು ತಮಗೆ ತೋಚಿದ ರೀತಿಯಲ್ಲಿ ಬೋರ್ ಕೊರೆಯಿಸಿ ಅಂತರ್ಜಲವನ್ನು ಬರಿದು ಮಾಡುತ್ತಿದ್ದಾರೆ. ಈ ದುರ್ಬಳಕೆ ತಡೆಯಲು ಜಿಲ್ಲೆಗೊಂದು ಜಲ ಕೋಶ ಸ್ಥಾಪಿಸಬೇಕು. ಅಲ್ಲಿ ನುರಿತ ಸಿಬ್ಬಂದಿಯಿಂದ ನೀರಿಗೆ ಸಂಬಂಧಿಸಿ ಸಮಗ್ರ ಮಾಹಿತಿಯನ್ನು ನಾಗರಿಕರಿಗೆ ನೀಡುವ ವ್ಯವಸ್ಥೆ ಮಾಡಬೇಕು. ಬೋರ್​ವೆಲ್ ಕೊರೆಯಿಸಲು ವೆಚ್ಚ, ಕಂಪನಿಗಳ ಲಭ್ಯತೆ, ಮಳೆಕೊಯ್ಲು ಅಳವಡಿಸಿಕೊಳ್ಳುವರಿಗೆ ಮಾಹಿತಿ ಇತ್ಯಾದಿ ಅಂಶಗಳು ನಿರಂತರವಾಗಿ ಲಭಿಸಲು ಸರ್ಕಾರ ಮುಂದಾಗಬೇಕು ಎನ್ನುತ್ತಾರೆ ದೇವರಾಜ ರೆಡ್ಡಿ.

ಭೂವಿಜ್ಞಾನಿಗಳ ಸಲಹೆ ಮುಖ್ಯ

ಹಿಂದೆಲ್ಲಾ ವಿವಿಧ ಇಲಾಖೆಗಳಿಂದ ನೇರವಾಗಿ ಬೋರ್​ವೆಲ್ ಪಾಯಿಂಟ್ ಮಾಡುವ ವಿಧಾನ ಇತ್ತು. ಅದಕ್ಕಾಗಿ ಜನರು ಅರ್ಜಿ ಸಲ್ಲಿಸಬೇಕಿತ್ತು. ಅದನ್ನಾಧರಿಸಿ ಅಧಿಕಾರಿಗಳೇ ಬಂದು ನೀರಿನ ಪಾಯಿಂಟ್ ಪತ್ತೆ ಮಾಡುತ್ತಿದ್ದರು. ನಂತರದ ಕಾಲಘಟ್ಟದಲ್ಲಿ, ಮನೆಯ ಮಾಲೀಕರೇ ಭೂವಿಜ್ಞಾನಿಗಳನ್ನು ಕರೆಸಿ ಅಥವಾ ಸಾಂಪ್ರದಾಯಕವಾಗಿ ತೆಂಗಿನಕಾಯಿ, ತಾಯತ ಇತ್ಯಾದಿ ಪದ್ಧತಿ ಬಳಸಿ ನೀರಿನ ಲಭ್ಯತೆ ಗುರುತಿಸುತ್ತಿದ್ದರು. ಆದರೆ, ವೈಜ್ಞಾನಿಕವಾಗಿ ಭೂವಿಜ್ಞಾನಿಗಳು ಪತ್ತೆ ಮಾಡುವ ವಿಧಾನವೇ ದೀರ್ಘ ಅವಧಿಗೆ ಬಾಳಿಕೆ ಬರಲಿದ್ದು, ಇದೇ ಮಾದರಿಯನ್ನು ಜನರು ಅನುಸರಿಸಿದರೆ ಕ್ಷೇಮ.

ಅಂತರ್ಜಲಕ್ಕೆ ಈಶಾನ್ಯ ಮೂಲೆ ಇಲ್ಲ!

ಭೂವಿಜ್ಞಾನಿಗಳು ಜಿಯೋ ಫಿಸಿಕಲ್ ಎಲೆಕ್ಟ್ರಾನಿಕ್ ಸರ್ವೆ ಮೂಲಕ ಅಂತರ್ಜಲದಲ್ಲಿರುವ ನೀರಿನ ಇರುವಿಕೆ ಪತ್ತೆ ಮಾಡುತ್ತಾರೆ. 1,000 ಅಡಿ ತನಕವೂ ಅವರಿಗೆ ಗ್ರಾಫ್ ಸಿಗುತ್ತದೆ. ಜತೆಗೆ ಉಪಕರಣಗಳನ್ನು ಆಧರಿಸಿ ಪರಿಶೀಲನೆ ಮಾಡಲು ಸಾಧ್ಯವಿದೆ. ಇದರ ಜತೆಗೆ ಈಶಾನ್ಯ ಮೂಲೆ, ಬನ್ನಿಮರ, ಹುತ್ತಗಳನ್ನು ಆಧರಿಸಿ ನೀರಿನ ಪಾಯಿಂಟ್ ಮಾಡುವ ಸಾಂಪ್ರದಾಯವಿದೆ. ಆದರೆ, ಅಂತರ್ಜಲಕ್ಕೆ ಈಶಾನ್ಯ ಮೂಲೆ ಇಲ್ಲ. ಅದರಲ್ಲೂ ಜಲ ಶೋಧಕ್ಕಾಗಿ ಸಣ್ಣ ಸೈಟ್​ನಲ್ಲಿ ಈಶಾನ್ಯ ಮೂಲೆಯನ್ನು ನಿಖರವಾಗಿ ಗುರುತಿಸಲು ಸಾಧ್ಯವಿಲ್ಲ. ಪ್ರತಿ ಸೈಟ್​ನಲ್ಲಿ ನೀರು ಲಭ್ಯವಾಗದಿರಲು ಇದೇ ಕಾರಣ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕಿದೆ.

ಬೋರ್ ಹಾಕಿಸುವ ಮುನ್ನ ಯೋಚಿಸಿ

ಪ್ರತಿಯೊಂದು ಸೈಟ್ ಅಥವಾ ಮನೆಯವರು ಕೊಳವೆಬಾವಿ ಕೊರೆಯಿಸಬೇಕಿಲ್ಲ. ಅಗತ್ಯವಾಗಿ ಬೇಕೇ ಬೇಕಿದ್ದಲ್ಲಿ ಬೋರ್​ವೆಲ್ ಕೊರೆಯಿಸುವ ಮುನ್ನ ಭೂವಿಜ್ಞಾನಿಗಳ ಜತೆ ರ್ಚಚಿಸಬೇಕು. ಆಳ, ನೀರಿನ ಲಭ್ಯತೆ ಪ್ರಮಾಣ, ದರ ನಿಗದಿ ಇತ್ಯಾದಿ ಬಗ್ಗೆ ತೀರ್ವನಿಸಿ ಅದನ್ನು ಬೋರ್​ವೆಲ್ ಕೊರೆಯುವ ಮಾಲೀಕನಿಗೂ ತಿಳಿಸಬೇಕು. ಬೋರ್ ಕೊರೆಯುವಾಗ ನುರಿತ ಸಿಬ್ಬಂದಿಯೇ ಕಡೆಯವರೆಗೂ ಇರಬೇಕು. ನೀರು ಲಭ್ಯವಾಗದಿದ್ದರೆ ಮತ್ತೆ ಬೋರ್ ಕೊರೆಯಿಸುವ ಬಗ್ಗೆ ಯೋಚಿಸಬೇಕು. ಇಲ್ಲದಿದ್ದಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ನೀರು ಸಿಗದೇ ಇರಬಹುದು.

ಆಶ್ರಯ ಮನೆಯಲ್ಲೂ ಮಳೆಕೊಯ್ಲು ಸಾಧ್ಯ

ನಗರ, ಪಟ್ಟಣಗಳಲ್ಲಿ 40/60 ಅಡಿ ವಿಸ್ತೀರ್ಣದ ಮೇಲ್ಪಟ್ಟ ಸೈಟ್​ಗಳಲ್ಲಿ ಮಳೆನೀರು ಕೊಯ್ಲು ಕಡ್ಡಾಯಗೊಳಿಸಲಾಗಿದೆ. ಆದರೆ, ಸಣ್ಣ ವಿಸ್ತೀರ್ಣದ ಸೈಟ್​ಗಳಲ್ಲೂ ಮಳೆನೀರನ್ನು ಸಂಗ್ರಹಿಸಬಹುದಾಗಿದೆ. ಆಶ್ರಯ ಮನೆಗಳಲ್ಲಿ 5 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್ ಇದ್ದಲ್ಲಿ ವರ್ಷದ ಹೆಚ್ಚಿನ ದಿನಗಳಲ್ಲಿ ಮಳೆನೀರು ದಿನಬಳಕೆಗೆ ಸಾಕಾಗುತ್ತದೆ. ನಾಲ್ಕು ಸದಸ್ಯರಿರುವ ಒಂದು ಕುಟುಂಬಕ್ಕೆ ದಿನಕ್ಕೆ ಕುಡಿಯುವ ಉದ್ದೇಶಕ್ಕೆ 15 ಲೀ. ಸಾಕು. ಇಂತಹ ಮನೆಗಳಲ್ಲಿ ಮೊಳೆಕೊಯ್ಲಿಗೆ ಟ್ಯಾಂಕ್, ಕೊಳವೆ ಸಹಿತ ಇತರ ಉಪಕರಣಕ್ಕಾಗಿ 40 ಸಾವಿರ ರೂ. ಒಮ್ಮೆ ಖರ್ಚು ಮಾಡಿದರೆ 25 ವರ್ಷಕ್ಕೂ ಹೆಚ್ಚಿನ ಅವಧಿವರೆಗೂ ನೀರಿನ ಕೊರತೆ ಕಾಡದು.

ಮಳೆನೀರು ಕೊಯ್ಲಿಗೆ ಒಂದಿಷ್ಟು ಸಲಹೆ

ಬಳಕೆಯಲ್ಲಿಲ್ಲದ ಬೋರ್​ವೆಲ್​ಗಳಿಗೆ ಜಲ ಮರುಪೂರಣ ಮಾಡಲು ಆದ್ಯತೆ

ಎಲ್ಲ ಕೊಳವೆಬಾವಿಗಳಿಗೆ ಮಳೆನೀರು ಇಂಗಿಸುವ ವಿಧಾನ ಅಳವಡಿಸುವುದು

ಎಲ್ಲ ಮನೆ, ವಾಣಿಜ್ಯ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಮೂಲಕ ನೀರು ಸಂಗ್ರಹ

ಹೊಲಕ್ಕೊಂದು ಕೃಷಿಹೊಂಡ ಮೂಲಕ ಮಳೆನೀರು ಬಳಕೆಗೆ ಪ್ರೋತ್ಸಾಹ

ಮಳೆನೀರು ಎಲ್ಲ ವಿಧದ ಬಳಕೆಗೆ ಬಳಸಿಕೊಳ್ಳಲು ಉತ್ತೇಜನ

ಫ್ಲೋರೈಡ್ ಸಮಸ್ಯೆಯಿರುವ ಪ್ರದೇಶಗಳಲ್ಲಿ ಮಳೆಕೊಯ್ಲು ಯೋಜನೆ ಕಡ್ಡಾಯ

ನೀರಿನ ಗುಣಮಟ್ಟ ಪರಿಶೀಲನೆಗೆ ಲ್ಯಾಬ್ ಸ್ಥಾಪಿಸಿ ಜನರಿಗೆ ಮಾಹಿತಿ ನೀಡುವುದು

ಅಂತರ್ಜಲದ ಮೇಲಿನ ಅವಲಂಬನೆ ಕಡಿಮೆಗೊಳಿಸಿ ಲಭ್ಯ ನೀರಿನಲ್ಲಿ ಮಿತವ್ಯಯ

ತ್ಯಾಜ್ಯನೀರನ್ನು 3ನೇ ಹಂತದ ಸಂಸ್ಕರಣೆಗೆ ಒಳಪಡಿಸಿ ಕೆರೆಗಳಿಗೆ ಹರಿಸುವುದು

ಶಾಲಾ-ಕಾಲೇಜು ಪಠ್ಯದಲ್ಲಿ ಮಳೆಕೊಯ್ಲು ಜಾಗೃತಿಗೆ ಪ್ರತ್ಯೇಕ ಪಾಠ

ಮಳೆ ನೀರಿನ ಬಳಕೆ

ಮಳೆನೀರು ನೈಸರ್ಗಿಕವಾಗಿ ಲಭ್ಯವಾಗುವುದರಿಂದ ಅದನ್ನು ಶುದ್ಧನೀರು ರೂಪದಲ್ಲಿ ಕುಡಿಯುವ ಉದ್ದೇಶಕ್ಕೆ ಬಳಸಬಹುದಾಗಿದೆ. ಕೆಲವು ಮುನ್ನೆಚ್ಚರಿಕೆ, ಶೇಖರಣಾ ವಿಧಾನಗಳನ್ನು ಅನುಸರಿಸಿದರೆ ಸಂಗ್ರಹಿಸಿದ ಮಳೆನೀರನ್ನು ವರ್ಷಪೂರ್ತಿ ಕುಡಿಯಲು ಅಡ್ಡಿಯಿಲ್ಲ. ಇದು ಬೋರ್​ವೆಲ್ ನೀರಿಗಿಂತ, ಮಿನರಲ್ ವಾಟರ್​ಗಿಂತ ಉತ್ತಮ ಎಂಬುದು ಸಾಬೀತಾಗಿದೆ. ಹಾಗಾಗಿಯೇ ವಿಶ್ವದ ವಿವಿಧೆಡೆ ಮಳೆನೀರನ್ನು ಸಂಸ್ಕರಿಸಿ ಕುಡಿಯಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಸುಮಾರು 500 ಮಂದಿ ಮಳೆನೀರನ್ನೇ ನಿತ್ಯವೂ ಬಳಸುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಮಳೆನೀರನ್ನು ಕುಡಿಯಲು ಬಳಸುವ ವಿಧಾನ ಸರಳವಾಗಿದೆ. ತಾರಸಿ ಮೇಲೆ ಬೀಳುವ ಮಳೆನೀರನ್ನು ಮನೆ ಅಥವಾ ಕಟ್ಟಡದೊಳಗೆ ನಿರ್ವಿುಸಿರುವ ಟ್ಯಾಂಕ್​ಗೆ ಹರಿಸಬೇಕು. ಈ ರೀತಿ ಮಾಡುವ ಮುನ್ನ ಕಸ-ಕಡ್ಡಿ ತೆಗೆದು ಅದನ್ನು ಫಿಲ್ಟರ್ ಮಾಡಿಯೇ ಟ್ಯಾಂಕ್​ಗೆ ಹರಿಸಬೇಕು. ಒಮ್ಮೆ ಮಳೆನೀರನ್ನು ಹಾಯಿಸಿದ ಬಳಿಕ ಪದೇಪದೆ ಮುಚ್ಚಳವನ್ನು ತೆಗೆಯುವಂತಿಲ್ಲ. ಕತ್ತಲಿನಲ್ಲಿದ್ದಷ್ಟೂ ಮಳೆನೀರನ್ನು ಹೆಚ್ಚು ದಿನಗಳವರೆಗೂ ಕುಡಿಯಲು ಬಳಸಬಹುದು. ಇದು ಬೋರ್​ವೆಲ್ ನೀರಿಗಿಂತಲೂ ಉತ್ತಮವಾಗಿರುತ್ತದೆ ಎಂಬುದು ದೇವರಾಜ ರೆಡ್ಡಿ ಅವರ ಅಭಿಮತ.