ಮಹಾಭಾರತದಲ್ಲೊಂದು ಕಥೆ...
ಪಾಂಡವರು, ಕೌರವರಿಗೆ ವಿದ್ಯೆ ಕಲಿಸುತ್ತಿದ್ದ ದ್ರೋಣಾಚಾರ್ಯರಿಗೆ ಯುಧಿಷ್ಠಿರ ಬಹಳ ಬುದ್ಧಿವಂತ ಎಂಬ ಅಭಿಮಾನವಿತ್ತು. ಆತನ ವಿನಯ, ವಿಧೇಯತೆ, ಕಪಟವಿಲ್ಲದ ವರ್ತನೆ ಎಲ್ಲವೂ ಇಷ್ಟವಾಗಿತ್ತು. ಆದರೆ, ಕೆಲವು ದಿನಗಳಲ್ಲೇ ಈತ ಬುದ್ಧಿವಂತನಲ್ಲ ಪೆದ್ದ ಎಂಬ ಭಾವನೆ ದ್ರೋಣರಲ್ಲಿ ಮೂಡಿತ್ತು. ಕಾರಣ, ಉಳಿದ ರಾಜಕುಮಾರರೆಲ್ಲರೂ ಹೊಸ ಹೊಸ ಪಾಠ ಕಲಿತು ಮುಂದೆ ಸಾಗುತ್ತಿದ್ದರೆ, ಯುಧಿಷ್ಠಿರ ಮಾತ್ರ ಮೊದಲ ಪಾಠವನ್ನೇ ಮುಗಿಸಿರಲಿಲ್ಲ... ಒಂದು ದಿನ ದ್ರೋಣರು ಅಸಹನೆಯಿಂದ, ‘ನೀನು ಮುಂದಿನ ಪಾಠಕ್ಕೆ ಹೋಗುವೆಯೋ ಅಥವಾ ಜೀವನವೆಲ್ಲ ಮೊದಲ ಪಾಠದಲ್ಲೇ ಕುಳಿತಿರುವೆಯೋ’ ಎಂದು ತರಾಟೆಗೆ ತೆಗೆದುಕೊಂಡರು. ಆಗ ಯುಧಿಷ್ಠಿರನು ‘ಗುರುಗಳೇ, ಮೊದಲ ಪಾಠವನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳದೆ ಮುಂದಿನ ಪಾಠಕ್ಕೆ ಹೇಗೆ ಹೋಗಲಿ? ಇಷ್ಟು ಆತುರ ಮಾಡಬೇಡಿ’ ಎಂದು ಮನವಿ ಮಾಡಿಕೊಂಡಾಗ ಪಾಠ ಕಲಿಯುವ ಸರದಿ ದ್ರೋಣರದಾಗಿತ್ತು. ಕಲಿಕೆ ಎಂದರೆ ಪಾಠವನ್ನು ಉರು ಹೊಡೆಯುವುದಲ್ಲ, ಮನನ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದು ಎಂದು ಯುಧಿಷ್ಠಿರ ಆ ದಿನ ದ್ರೋಣರಿಗೆ ಕಲಿಸಿದ್ದ.
ಜೀವನವೆಂದರೂ ಹಾಗೆ. ಪ್ರತಿಯೊಬ್ಬರ ಜೀವನವೂ ಹುಟ್ಟಿನಿಂದ ಸಾವಿನವರೆಗೆ ನಿರಂತರ ಪಾಠಶಾಲೆ. ಪ್ರತಿ ದಿನ, ಪ್ರತಿ ಕ್ಷಣ ಕಲಿಯುವ ಪ್ರಕ್ರಿಯೆ ಜಾರಿಯಲ್ಲಿದ್ದರೆ ಮಾತ್ರ ಪುರುಷ ಪುರುಷೋತ್ತಮನಾಗುತ್ತಾನೆ. ಆದರೆ, ನಮ್ಮ ಜೀವನದ ಉದ್ದೇಶವನ್ನು ನಾವು ಅರ್ಥ ಮಾಡಿಕೊಂಡಿರುವುದಿಲ್ಲ. ಯಾವುದೋ ಆಸೆ, ಇನ್ಯಾವುದೋ ಮೋಹ, ಲೋಭ, ಭೋಗ, ಲಾಲಸೆಗಳ ತಿರುಗಣೆಯೊಳಗೆ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿರುತ್ತೇವೆ. ದೊಡ್ಡ ಗುರಿ ಕಣ್ಣಮುಂದಿದ್ದರೂ ಮಾರ್ಗಮಧ್ಯದ ಪ್ರಲೋಭನೆಗಳಿಗೆ ಮರುಳಾಗಿ ಗಮ್ಯದಿಂದ ವಿಮುಖರಾಗುತ್ತಿರುತ್ತೇವೆ. ಆಸೆಯೆನ್ನುವುದೊಂದು ಪಾಶ, ಇದರ ಬೆನ್ನ ಹಿಂದೆ ಬಿದ್ದರೆ ಜೀವನ ನಾಶ ಎನ್ನುವುದಕ್ಕೆ ಭಗವಾನ್ ಓಶೋ ಕಥೆಯೊಂದನ್ನು ಹೇಳುತ್ತಾರೆ.
ಅವನೊಬ್ಬ ಸಾಧಕ ಸ್ವರ್ಗಕ್ಕೆ ಸಶರೀರನಾಗಿ ಹೋಗಬೇಕೆಂದು ಕಠಿಣ ತಪಸ್ಸು ಮಾಡುತ್ತಿದ್ದ. ಕಾಡಿನಲ್ಲಿ ಉಗ್ರ ತಪ ಕೈಗೊಂಡಿದ್ದ ಅವನಿಗೆ ಗಾಳಿ, ಮಳೆ, ಬಿಸಿಲು, ಊಟ, ನಿದ್ರೆ, ಆಹಾರ ಯಾವುದರ ಲಕ್ಷ ್ಯೂ ಇರಲಿಲ್ಲ. ಅದೇ ಕಾಡಿಗೆ ಸೌದೆ ಆರಿಸಲು ಬರುತ್ತಿದ್ದ ಓರ್ವ ಬಡ ಯುವತಿಗೆ ಈ ತಪಸ್ವಿಯೆಂದರೆ ಭಕ್ತಿ. ಪ್ರತೀ ದಿನ ಕಾಡಿನ ಹಣ್ಣು ಹಂಪಲುಗಳನ್ನು ಆರಿಸಿ ತಂದು, ಹಸಿವಾದಾಗ ತಿನ್ನಲಿ ಎಂದು ಕಾಲಬುಡದಲ್ಲಿಟ್ಟು ಹೋಗುತ್ತಿದ್ದಳು. ತಪಸ್ವಿ ಯಾವುದೋ ಅವೇಳೆಯಲ್ಲಿ ಸಮಾಧಿ ಸ್ಥಿತಿಯಿಂದ ಹೊರಬಂದಾಗ ಅದನ್ನು ತಿನ್ನುತ್ತಿದ್ದ. ಇತ್ತ ಈತನ ಉಗ್ರ ತಪಸ್ಸಿನಿಂದ ದೇವೇಂದ್ರನಿಗೆ ಕಸಿವಿಸಿ ಶುರುವಾಗಿತ್ತು. ತಪೋಭಂಗ ಮಾಡುವ ಉದ್ದೇಶದಿಂದ ಆತ ಸೌದೆ ಆರಿಸುವ ಹುಡುಗಿಗೆ ಅಪ್ಸರೆಯ ಸೌಂದರ್ಯ ನೀಡಿದ. ಅದೊಂದು ದಿನ ತಪಸ್ಸಿನಿಂದ ಎಚ್ಚೆತ್ತ ಆತ, ಎದುರಿಗಿದ್ದ ಆಕೆಗೆ ‘ಇಲ್ಲಿ ನನ್ನ ಸಾಧನೆ ಮುಗಿಯಿತು. ಇನ್ನಷ್ಟು ಕಠಿಣ ತಪಸ್ಸು ಮಾಡಲು ನಾಳೆ ಬೇರೆಡೆಗೆ ತೆರಳುತ್ತಿದ್ದೇನೆ’ ಎಂದು ಹೇಳಿದ. ಇದರಿಂದ ದುಃಖಿತಳಾದ ಆ ಯುವತಿ ‘ನಿಮ್ಮ ಸೇವೆ ಮಾಡುವ ಭಾಗ್ಯ ನನಗೆ ಸಿಗದೇ ಹೋಗುತ್ತದೆ. ನೀವು ಇಲ್ಲಿಯೇ ತಪಸ್ಸು ಮುಂದುವರಿಸಬಾರದೇ’ ಎಂದು ಬೇಡಿಕೊಂಡಳು. ಸೌದೆ ಆರಿಸುವ ಯುವತಿಯ ಬೇಡಿಕೆಯಿಂದ ಅಚ್ಚರಿಗೊಂಡ ತಪಸ್ವಿ ಆಕೆಯನ್ನು ದಿಟ್ಟಿಸಿ ನೋಡಿದಾಗ ಪರಮಾಶ್ಚರ್ಯ. ಹಿಂದೆಂದೋ ನೋಡಿದ್ದಾಗ ಒನಪಿಲ್ಲದ, ವಯ್ಯಾರವಿಲ್ಲದ, ಸಂಸ್ಕಾರವಿಲ್ಲದ, ಶೃಂಗಾರವಿಲ್ಲದ, ಕೃಶಾಂಗಿನಿಯಂತಿದ್ದ ಈಕೆ ಇಷ್ಟು ಪರಮಸುಂದರಿ ಆಗಿದ್ದು ಹೇಗೆ? ಮುನಿಯ ಮನ ವಿಚಲಿತವಾಗಿತ್ತು. ‘ಆಯಿತು, ಎಲ್ಲೂ ಹೋಗುವುದಿಲ್ಲ ಇಲ್ಲೇ ತಪ ಮುಂದುವರಿಸುವೆ’ ಎಂದ. ಅತ್ತ ಆ ಯುವತಿಗೆ ಪಾಪಪ್ರಜ್ಞೆ ಕಾಡಿತು. ಮಹತ್ಸಾಧನೆಗೆ ತಪಸ್ಸು ಮಾಡುತ್ತಿದ್ದ ಸಾಧಕನ ದಾರಿಗೆ ತಾನು ಅಡ್ಡಿಯಾದೆನೇ! ತಪಸ್ವಿಯನ್ನು ಮೋಹದಿಂದ ಭ್ರಷ್ಟಗೊಳಿಸಿದೆನೇ ಎಂಬ ಕಳವಳ ಕಾಡಿತು. ಮಾರನೇ ದಿನವೇ ಆಕೆ ಆ ಕಾಡಿನತ್ತ ಸುಳಿಯದೆ ಬೇರೆಡೆಗೆ ಹೊರಟುಹೋದಳು. ಇತ್ತ ಕೆಲವು ವರ್ಷಗಳ ನಿರಂತರ ತಪಸ್ಸಿನ ಬಳಿಕ ಸ್ವತಃ ದೇವೇಂದ್ರನೇ ತಪಸ್ವಿಯೆದುರು ಪ್ರತ್ಯಕ್ಷನಾದ. ‘ನಿನ್ನ ಸಾಧನೆಗೆ ಮೆಚ್ಚಿದ್ದೇನೆ. ಸ್ವರ್ಗಕ್ಕೆ ಹೋಗೋಣ ಬಾ’ ಎಂದು ಕರೆದ. ಆಗ ತಪಸ್ವಿ ಹೇಳಿದು, ‘ಅಯ್ಯಾ ಇಂದ್ರ, ನಿನ್ನ ಸ್ವರ್ಗ ನನಗಿನ್ನು ಬೇಡ. ಆ ಸೌದೆ ಆರಿಸುವ ಯುವತಿ ಎಲ್ಲಿ ಹೋದಳು ತಿಳಿಸು. ಅವಳು ಸಿಕ್ಕಿದರೆ ಈ ಕಾಡೇ ನನಗೆ ಸ್ವರ್ಗ!’
ಆಸೆ ಎನ್ನುವುದು ಯಾರನ್ನೂ ಬಿಡುವುದಿಲ್ಲ. ಇರುವುದೆಲ್ಲವ ಬಿಟ್ಟು, ಇರದುದಕ್ಕೆ ಆಸೆ ಪಡುವುದೇ ಜೀವನ. ಇದನ್ನೇ ಪುರಂದರ ದಾಸರು ಇನ್ನೊಂದು ಬಗೆಯಲ್ಲಿ ಹೇಳುತ್ತಾರೆ.
ಏತರ ಕಟಪಟಿ| ಒಂದು ದಿನ ಹೋಗುತಿದೆ ಲಟಪಟಿ
ದೊಡ್ಡ ಮನೆಯ ಕಟ್ಟಿ| ಅದರೊಳು ಮಡದಿಯ ಒಯ್ದಿಟ್ಟಿ
ಮಡದಿಗೆ ಮೋಹದ ಮಗುವೊಂದು ಹುಟ್ಟಿ | ಅದರ ಮೇಲೆ ನೀ ಮನಸಿಟ್ಟಿ
ಸಂಸಾರ ಬಲು ಖೊಟ್ಟಿ | ಅದರೊಳು ಬಿದ್ದಿದ್ದಿ ಕಾಲ್ಕಟ್ಟಿ
ತಂದೆ ಶ್ರೀ ಪುರಂದರ ವಿಠಲರಾಯನ | ಯಾಕ ಮರೆತುಬಿಟ್ಟಿ
ಭ್ರಮೆಗಳಲ್ಲಿ ಬದುಕುವುದು ಮನುಷ್ಯ ಗುಣ. ಜಗತ್ತು ನಮ್ಮ ಗ್ರಹಿಕೆಗೆ ನಿಲುಕದಷ್ಟು ವಿಸ್ತಾರವಾಗಿದ್ದರೂ, ನಾವು ಕಂಡಿದ್ದಷ್ಟೇ ಜಗತ್ತು ಎಂದು ವಾದಿಸುವ ಭ್ರಮೆ ಅದು. ಹಿಮಾಲಯದ ತಪ್ಪಲಿನ ಯಾವುದೋ ಒಂದು ಊರು, ತಾಣಕ್ಕೆ ಹೋಗಿಬಂದು ಪೂರ್ತಿ ಹಿಮಾಲಯವನ್ನೇ ಕಂಡಿದ್ದೇನೆ ಎನ್ನುವ ಒಣಜಂಬ ಅದು. ಹಾಗಾಗಿ ಕಣ್ಣಿಗೆ ಕಂಡಿದ್ದೇ ಸತ್ಯವಲ್ಲ, ಒಳಗಿನ ತಿರುಳನ್ನು ಒಳಗಣ್ಣಿನಿಂದ ನೋಡು ಎಂದು ಗೋಪಾಲದಾಸರು ವಿವರಿಸುತ್ತಾರೆ.
ಧನವ ಕಟ್ಟಿದ ಚೀಲ| ಧಾನ್ಯ ತುಂಬಿದ ಗೋಣಿ| ಪುನುಗು ಬೆಕ್ಕಿನಂತೆ| ಪುಣ್ಯಾತ್ಮ ರಘದಂತೆ| ಉಣ್ಣುವ ಜಿಹ್ವೆಗೆ ಕೈ ಅನುಕೂಲವಾದಂತೆ|
ಚೀಲದ ಒಳಗಿರುವ ಹಣಕ್ಕೆ ಬೆಲೆಯೇ ಹೊರತು ಚೀಲಕ್ಕಲ್ಲ, ಗೋಣಿಯಲ್ಲಿರುವ ಧಾನ್ಯಕ್ಕೆ ಬೆಲೆಯೇ ಹೊರತು ಧಾನ್ಯ ಖಾಲಿಯಾದ ಮೇಲೆ ಗೋಣಿಚೀಲವನ್ನು ಯಾರು ಜೋಪಾನ ಮಾಡುತ್ತಾರೆ? ಸೊಗಸಾದ ಭಕ್ಷ ್ಯ ತಿನಿಸುಗಳನ್ನು ಬಾಯಿಗೆ ಒಯ್ಯುವುದಷ್ಟೇ ಕೈನ ಕೆಲಸ. ಹೊರತು ಕೈಗಳಿಗೆ ರುಚಿಯ ಭಾಗ್ಯವಿಲ್ಲ. ಅದೇ ಜೀವನ...
ಕಥಾಕೀರ್ತನದಿಂದ ದೇಶದ ಉದ್ದಗಲದಲ್ಲಿ ಸುಜ್ಞಾನದ ಬೆಳಕು ಪಸರಿಸಿದ್ದ ಸಂತವರೇಣ್ಯರಾದ ಭದ್ರಗಿರಿ ಅಚ್ಯುತದಾಸರು ಶ್ರೇಷ್ಠ ಗ್ರಂಥಕರ್ತರೂ ಹೌದು. ಎರಡು ಸಂಪುಟಗಳಲ್ಲಿ ಅವರು ರಚಿಸಿರುವ ‘ಹರಿಕಥಾಮೃತ ಸಿಂಧು’ ದಾಸಸಾಹಿತ್ಯದ ಶ್ರೇಷ್ಠ ಕೃತಿಗಳಲ್ಲೊಂದು. ಇದು ಹರಿದಾಸರಿಗೆ, ಹರಿಕಥಾಭ್ಯಾಸಿಗಳಿಗೆ ಮಾರ್ಗದರ್ಶಿ ಕೈಪಿಡಿಯಂತೆ ರಚಿತವಾಗಿದ್ದರೂ, ಇದರಲ್ಲಿರುವ ತತ್ತ್ವ, ಚಿಂತನೆ, ಜೀವನದರ್ಶನಗಳ ಕಾರಣಕ್ಕೆ ಪ್ರತಿಯೊಬ್ಬರೂ ಓದಲೇಬೇಕಾದ ಸಾರ್ವಕಾಲಿಕ ಮಹತ್ವ ಹೊಂದಿದೆ. ತಮ್ಮ ಹರಿಕಥೆಗಳಲ್ಲೂ ಲೌಕಿಕ ಆಕರ್ಷಣೆಗಳನ್ನು ಮೀರಿದ ಪರಮಾತ್ಮನ ಚಿಂತನೆಯಿಂದ ಹೇಗೆ ಜೀವನ ಸಾರ್ಥಕವಾಗಿಸಿಕೊಳ್ಳಬಹುದುದು ಎಂಬುದನ್ನು ದಾಸರು, ಶರಣರು, ಸಂತರ ಕೀರ್ತನೆಗಳ ಮೂಲಕ, ಉದಾಹರಣೆಗಳ ಮೂಲಕ ಅವರು ವಿವರಿಸುತ್ತಿದ್ದರು. ಮೂಲನಾರಾಯಣ ಅಂಕಿತದಲ್ಲಿ ಸ್ವತಃ ಸಾವಿರಾರು ಕೀರ್ತನೆಗಳನ್ನು ರಚಿಸಿರುವ ಅಚ್ಯುತದಾಸರು, ಹರಿಕಥಾಮೃತ ಸಿಂಧು ಕೃತಿಯಲ್ಲಿ ದಾಸಸಾಹಿತ್ಯದ ಕನ್ನಡಿಯ ಮೂಲಕ ಜೀವನ ಮೌಲ್ಯಗಳನ್ನು ಅರ್ಥೈಸಿದ್ದಾರೆ. ಲೌಕಿಕದ ಒಳಗಿದ್ದೂ, ಪರಮಾತ್ಮನ ಚಿಂತನೆ ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸುವವರಿಗೂ ದಾಸರು ಕಥೆಯೊಂದರ ಮೂಲಕ ಅರ್ಥ ಮಾಡಿಸುತ್ತಾರೆ.
ಬ್ರಹ್ಮಜ್ಞಾನಿ ಎನಿಸಿಕೊಂಡಿದ್ದ ರಾಜನೊಬ್ಬನ ಬಳಿಗೆ ಕುತೂಹಲಿಯೊಬ್ಬ ಬಂದ. ‘ರಾಜನ್, ಇಷ್ಟೊಂದು ಸುಖ, ಭೋಗ, ವೈಭೋಗಗಳ ನಡುವೆ ನೀನು ಬ್ರಹ್ಮಜ್ಞಾನಿ ಎನಿಸಿಕೊಂಡಿದ್ದು ಹೇಗೆ? ನನಗೂ ತಿಳಿಸು’ ಎಂದ. ಅದಕ್ಕೆ ರಾಜನು, ‘ಸ್ವಲ್ಪ ಕಾಲಾವಕಾಶ ಕೊಡು. ಎಲ್ಲವನ್ನೂ ವಿವರಿಸುತ್ತೇನೆ. ಅಷ್ಟರೊಳಗೆ ನೀನು ಅರಮನೆಯೊಳಗೆ ಇರುವ ವೈಭೋಗವನ್ನು, ಕಲಾಕೃತಿಗಳನ್ನು, ಶೃಂಗಾರ, ಅಲಂಕಾರಗಳನ್ನು ನೋಡಿಕೊಂಡು ಬಾ. ಅರಮನೆಯ ಒಳಗೆ ಅಷ್ಟು ಬೆಳಕಿಲ್ಲ. ನಿನ್ನ ಕೈಗೊಂದು ಹಣತೆ ಕೊಟ್ಟಿರುತ್ತಾರೆ. ಒಂದು ನಿಬಂಧನೆಯೆಂದರೆ ದೀಪ ಆರದಂತೆ ನೋಡಿಕೊಳ್ಳುವುದು ನಿನ್ನ ಜವಾಬ್ದಾರಿ. ದೀಪ ಆರಿದರೆ ನಿನ್ನ ತಲೆ ಕಡಿಯುತ್ತಾರೆ. ಏಕೆಂದರೆ ಅರಮನೆಯೊಳಗೆ ದೀಪ ಆರುವುದು ಅಪಶಕುನ ಎನ್ನುವುದು ನಮ್ಮ ನಂಬಿಕೆ’ ಎಂದು ಎಚ್ಚರಿಸಿದ. ಅದರಂತೆ ಹಣತೆ ಹಿಡಿದು ಅರಮನೆ ಸುತ್ತಿ ಬಂದ ಆತನಿಗೆ ಒಳಗೆ ಏನು ಕಂಡೆ ಎಂದು ಪ್ರಶ್ನಿಸಲು ಹಣತೆಯ ಬೆಳಕಲ್ಲದೆ ಬೇರೇನೂ ಕಾಣಲಿಲ್ಲ. ದೀಪ ಆರಿದರೆ ತಲೆ ಹೋಗುವ ಭಯದಲ್ಲಿ ಏನನ್ನೂ ನೋಡಲಾಗಲಿಲ್ಲ ಎಂದನಂತೆ. ಆಗ ರಾಜ ಹೇಳಿದ- ‘ಅದೇ ಪ್ರಪಂಚ. ಆದರೆ, ನಾನು ಎಲ್ಲ ಭೋಗಗಳ ನಡುವೆ ಇದ್ದರೂ ಪರಮಾತ್ಮನ ಕಡೆಗೆ ಲಕ್ಷ್ಯ ಇಟ್ಟಿರುವ ಕಾರಣ ಬ್ರಹ್ಮಜ್ಞಾನ ಸಾಧ್ಯವಾಗಿದೆ’ ಎಂದನಂತೆ.
ಆದರೂ, ಮನುಷ್ಯನಿಗೆ ಆಸೆ ಮತ್ತು ಅತೃಪ್ತಿಯ ಬಲೆಯಿಂದ ತಪ್ಪಿಸಿಕೊಳ್ಳುವುದು ಕಷ್ಟವೇ. ಬೇರೆಯವರ ಸುಖವನ್ನು ಕಂಡು ತನಗೇಕಿಲ್ಲ ಅಂಥ ಸೌಲಭ್ಯ ಎಂದು ಹಲುಬುವ ಅತೃಪ್ತಿ ಅದು. ಕೆಲವರಿಗೆ ಎಷ್ಟೇ ಇದ್ದರೂ ಇನ್ನಷ್ಟು ಬೇಕೆಂಬ ದುರಾಸೆ. ವಿಜಯದಾಸರು ಹೇಳುವಂತೆ-
ಸಪ್ಪೆ ಮೆಲುವಾಗ ಸೊಪ್ಪಿನ ಚಿಂತೆ | ಸೊಪ್ಪು ದೊರಕಿದರೆ ಉಪ್ಪು ಬರಲಿಲ್ಲೆಂಬ ಚಿಂತೆ|
ಉಪ್ಪು ದೊರಕಿದರೆ ತುಪ್ಪ ಬರಲಿಲ್ಲೆಂಬ ಚಿಂತೆ| ತುಪ್ಪವೇ ದೊರಕಿದರೆ ಕೊಪ್ಪರಿಗೆ ಸಿಗದೆಂಬ ಚಿಂತೆ | ಹೀಗೆ ಮನುಷ್ಯನ ಚಿಂತೆಗೆ ಕೊನೆಯೇ ಇಲ್ಲ. ಇದನ್ನು ಶರಣರು ಇನ್ನೊಂದು ರೀತಿ ಹೇಳುತ್ತಾರೆ.
ಸಂಸಾರವೆಂಬುದು ಗಾಳಿಯ ಸೊಡರು| ಸಿರಿ ಎಂಬುದೊಂದು ಸಂತೆಯ ಮಂದಿ ಕಂಡಯ್ಯ|
ಇದನು ನೆಚ್ಚಿ ಕೆಡಬೇಡ | ಸಿರಿ ಎಂಬುದು ಮರೆದು ಪೂಜಿಸು ನಮ್ಮ | ಕೂಡಲ ಸಂಗಮ ದೇವಾ
ಕಾಲಪುರುಷನದು ಎಂದೂ, ಎಲ್ಲೂ ನಿಲ್ಲದ ಪಯಣ. ದಿನಗಳು, ಮಾಸಗಳು, ಋತುಗಳು, ವರ್ಷಗಳು ಉರುಳುತ್ತಿರುತ್ತವೆ. ಹಳತು ಹೋಗಿ ಹೊಸತು ಬಂದು, ಹೊಸತೂ ಹಳತಾಗಿ ಮತ್ತೇನೋ ಬಂದೀತೆಂಬ ನಿರೀಕ್ಷೆಯಲ್ಲಿ ಬದುಕು ಸಾಗುತ್ತಿರುತ್ತವೆ. ಕಾಲಪಯಣದ ಯಾವುದೋ ಬಿಂದುವಿನಲ್ಲಿ ಪ್ರಾರಂಭವಾದ ನಮ್ಮ ಪಯಣ ಇನ್ನಾವುದೋ ಬಿಂದುವಿನಲ್ಲಿ ಬಿದ್ದುಹೋಗುವುದು ನಿಶ್ಚಿತ. ಇರುವಷ್ಟು ಕಾಲ, ಸಾಗುವಷ್ಟು ದೂರ ನಮ್ಮ ಪಯಣವನ್ನು ಸಾರ್ಥಕವಾಗಿಸಿಕೊಳ್ಳುವುದು ಹೇಗೆ ಎನ್ನುವುದಕ್ಕೆ ನಮ್ಮ ಪ್ರಾಚೀನರ ಬದುಕು, ಬೋಧನೆಗಳೇ ನಮಗೆ ದೀವಟಿಗೆ. 2022 ಕ್ಯಾಲೆಂಡರ್ ವರ್ಷ ಬಂದು ಇಂದಿಗೆ ಏಳು ದಿನಗಳಷ್ಟು ಹಳತಾಗಿದೆ. ಮುಂದಿನ ಮುನ್ನೂರ ಐವತ್ತೆಂಟು ದಿನಗಳು ಸಾರ್ಥಕವಾಗಿರಲಿ ಎಂಬ ಸದಾಶಯದಿಂದ ಈ ಬರಹ.
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)