ಅಂಕಣ

ರೇಡಿಯೋ ಎಂಬ ಬೆರಗಿನ ಫೀನಿಕ್ಸ್!; ರಂಜನೆಯಷ್ಟೇ ಅಲ್ಲ, ಸಾಮಾಜಿಕ ಕಳಕಳಿಯೂ ಇದೆ

1946ರ ಫೆಬ್ರವರಿ 13ರಂದು ವಿಶ್ವಸಂಸ್ಥೆಯು ‘ಯುನೈಟೆಡ್ ನೇಷನ್ಸ್ ರೇಡಿಯೋ’ ಆರಂಭಿಸಿದ ದಿನವನ್ನೇ ‘ವಿಶ್ವ ರೇಡಿಯೋ ದಿನ’ವನ್ನಾಗಿ ಪ್ರತಿ ವರ್ಷ ಆಚರಿಸಲು ಯುನೆಸ್ಕೊ 2012ರಲ್ಲಿ ಆರಂಭಿಸಿತು. ಸ್ಪ್ಯಾನಿಷ್ ರೇಡಿಯೋ ಅಕಾಡೆಮಿ 2010ರಲ್ಲಿ ಮಾಡಿದ ಮನವಿಯ ಮೇರೆಗೆ ಯುನೆಸ್ಕೊ ಈ ನಿರ್ಧಾರ ಕೈಗೊಂಡಿತು. ಸರ್ವವ್ಯಾಪಿಯಾಗಿರುವ, ಸರ್ವಸ್ಪರ್ಶಿ ಯಾಗಿರುವ ರೇಡಿಯೋ ಈಗಲೂ ತನ್ನ ಬೇಡಿಕೆ ಕಳೆದುಕೊಂಡಿಲ್ಲ.

ರೇಡಿಯೋ ಕೇವಲ ಮನರಂಜನೆಗಾಗಿ ಬಳಕೆಯಾಗುತ್ತಿದೆಯೇ? ಜನಹಿತಕ್ಕೂ ಉಪಯೋಗವಾಗುತ್ತಿದೆಯೇ? ನಿರಂತರ ಬದಲಾವಣೆಯ ಈ ಕಾಲದಲ್ಲೂ ಅದು ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದ್ದು ಹೇಗೆ? ಆರ್​ಜೆ ರೋಹಿತ್ ಏನಂತಾರೆ?..

ಮಾಹಿತಿಯನ್ನು ಪ್ಲೇನ್ ಆಗಿ ಪ್ರಸ್ತುತಪಡಿಸದೆ, ಫನ್ ರೀತಿಯಲ್ಲಿ ಶ್ರೋತೃಗಳ ಗಮನಕ್ಕೆ ತರುವ ಕೆಲಸವನ್ನು ನಾನು ಆರ್​ಜೆಯಾಗಿ ಮಾಡುತ್ತಿದ್ದೇನೆ. ಸಣ್ಣ ವಿಷಯಗಳೇ ಆಗಿದ್ದರೂ ಅವುಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಿದ ಖುಷಿ ಇದೆ. ಎಲ್ಲವೂ ಸಾಮಾಜಿಕ ಉದ್ದೇಶಕ್ಕಾಗಿ ಮಾಡಿದ್ದು ಎಂದು ಹೇಳಲು ಆಗುವುದಿಲ್ಲ.

ಏನಾದರೂ ವಿಭಿನ್ನವಾಗಿ ಯೋಚಿಸಬೇಕಿತ್ತು. ಆಗ ಹಲವು ಶೋಗಳನ್ನು ಮಾಡಿದ್ದೆವು. ಆ ಪೈಕಿ ‘ದಮ್ ಇದ್ರೆ ದಮ್ ಬಿಡಿ’ ಅಭಿಯಾನ ಶುರುವಾಗಿತ್ತು. ಸಿಗರೇಟ್ ಚಟಕ್ಕೆ ದಾಸರಾದವರಿಗೆ ಆ ಗೀಳಿನಿಂದ ಮುಕ್ತಿ ಕೊಡಿಸುವ ಕೆಲಸವದು. ಮೂರು ದಿನ ವೈದ್ಯರನ್ನು ಜತೆಗಿರಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಿ, ಆ ಚಟದಿಂದ ದೂರ ಮಾಡುವ ಪ್ರಯತ್ನ ಮಾಡಿದೆವು. ಅದೇ ರೀತಿ ಬೆಂಗಳೂರಿನಲ್ಲಿ ನೀರಿನ ಕೊರತೆ ತಲೆದೋರಿದಾಗ ‘ಬಕೆಟ್ ಹಿಡೀರಿ’ ಕಾರ್ಯಕ್ರಮ ಮಾಡಿದ್ದೆವು. ದಿನೇದಿನೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಆ ಕಾರಣಕ್ಕೆ ನೀರು ಉಳಿಸಿ ಎಂಬುದನ್ನು ಹೀಗೆ ವ್ಯಂಗ್ಯವಾಗಿ ಹೇಳಲಾಗಿತ್ತು. ಅದಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಹಸಿ ಕಸ ಒಣ ಕಸ ನಿರ್ವಹಣೆ ಬಗ್ಗೆಯೂ ಆಗಾಗ ಒಂದಷ್ಟು ಮಾಹಿತಿ ನೀಡುತ್ತಿರುತ್ತೇವೆ. ಒಟ್ಟಿನಲ್ಲಿ ಮನರಂಜನೆಗಾಗಿ ಅಷ್ಟೇ ರೇಡಿಯೊ ಕೆಲಸ ಮಾಡುತ್ತಿಲ್ಲ. ಸಾಮಾಜಿಕ ಕಳಕಳಿಗಾಗಿಯೂ ತನ್ನನ್ನು ತೊಡಗಿಸಿಕೊಂಡಿದೆ.