ಅಂಕಣ

ಎತ್ತ ಸಾಗುತ್ತಿದೆ ಪೂತಿನ್-ಪ್ರಿಗೋಝಿನ್ ಸಂಯುಕ್ತಚಿತ್ತ?

ನಾಲ್ಕು ದಶಕಗಳ ಹಿಂದಿನ ಮಾತು. ಆಗಿನ್ನೂ ಕಮ್ಯೂನಿಸ್ಟ್ ಸೋವಿಯೆತ್ ಯೂನಿಯನ್ ಅಸ್ತಿತ್ವದಲ್ಲಿದ್ದ ಮತ್ತದು ಪೋಲ್ಯಾಂಡ್ ಸೇರಿದಂತೆ ಪೂರ್ವ ಯೂರೋಪಿಯನ್ ದೇಶಗಳನ್ನು ತನ್ನ ‘ಉಪಗ್ರಹ’ಗಳನ್ನಾಗಿಸಿಕೊಂಡಿದ್ದ ಕಾಲ. ನನ್ನ ವಿಷಯಕ್ಕೆ ಬಂದರೆ, ದೆಹಲಿಯ ಕನಾಟ್ ಪ್ಲೇಸಸ್​ನ ಎ ಬ್ಲಾಕ್​ನಲ್ಲಿನ ಧೂಮಿಮಲ್ ಆರ್ಟ್ ಗ್ಯಾಲರಿ ಆ ದಿನಗಳಲ್ಲಿ ನಾನು ಮತ್ತೆಮತ್ತೆ ಭೇಟಿ ಕೊಡುತ್ತಿದ್ದ ಸ್ಥಳಗಳಲ್ಲೊಂದು. ಒಂದು ಬಿಸಿಲಿನ ಮಧ್ಯಾಹ್ನ ನನಗಲ್ಲಿ ಒಬ್ಬಳು ಪೋಲಿಷ್ ಚಿತ್ರಕಾರ್ತಿ ಪರಿಚಯವಾದಳು. ನಮ್ಮ ನಮ್ಮ ಚಿತ್ರಕಲಾ ಹವ್ಯಾಸದ ಬಗ್ಗೆ ಮಾತಾಡುತ್ತಾ ಕಾಲಹರಣಕ್ಕೆ ಸಮಯವಿದ್ದಾಗ ಇಬ್ಬರು ಬೇರೆಬೇರೆ ದೇಶಿಗರು ಮಾಡುವ ಹಾಗೆ ಪ್ರಚಲಿತ ಜಾಗತಿಕ ವಿದ್ಯಮಾನಗಳ ಬಗ್ಗೆ ಮಾತಾಡತೊಡಗಿದೆವು. ನಾನಾಕೆಯನ್ನು ಕೇಳಿದೆ: ಪೋಲ್ಯಾಂಡ್ ಮತು ಸೋವಿಯೆತ್ ಯೂನಿಯನ್​ಗಳೆರಡೂ ಕಮ್ಯೂನಿಸ್ಟ್ ರಾಷ್ಟ್ರಗಳೇ. ಅಮೆರಿಕಾ ನೇತೃತ್ವದ ನ್ಯಾಟೋಗೆ ವಿರುದ್ಧವಾಗಿ ಸೋವಿಯೆತ್ ನೇತೃತ್ವದ ವಾರ್ಸಾ ಪ್ಯಾಕ್ಟ್ ಹುಟ್ಡಿದ್ದೇ ಪೋಲ್ಯಾಂಡ್ ರಾಜಧಾನಿ ವಾರ್ಸಾದಲ್ಲಿ. ಎರಡೂ ದೇಶಗಳ ಜನತೆ ಸ್ಲಾವ್ ಜನಾಂಗದವರು. ಧರ್ಮ ಸಹಾ ಒಂದೇ, ಇಬ್ಬರೂ ಈಸ್ಟರ್ನ್ ಆರ್ಥೊಡಾಕ್ಸ್ ಚರ್ಚ್​ನ ಅನುಯಾಯಿಗಳು. ಭಾಷೆಗಳೂ ಹತ್ತಿರದವೇ. ಇಷ್ಟಾಗಿಯೂ, ನೀವು ಪೋಲಿಷ್ ಜನತೆ ರಶಿಯನ್ನರ ಬಗ್ಗೆ ಅಷ್ಟೇನೂ ಸದ್ಭಾವನೆ ತೋರುತ್ತಿಲ್ಲ ಯಾಕೆ? ಆಕೆಯ ತೆಳುನಗೆಭರಿತ ಉತ್ತರ ನನಗೊಂದು ಪ್ರಶ್ನೆಯ ರೂಪದಲ್ಲಿ ಬಂತು: ನೀವು ಭಾರತೀಯರು ಮತ್ತು ನೇಪಾಳಿಗಳ ನಡುವೆ ಎಷ್ಟೆಲ್ಲಾ ಸಮಾನ ವಿಷಯಗಳಿವೆ! ಆದರೂ ನಿಮ್ಮಲ್ಲಿ ಇರಬೇಕಾಗಿದ್ದ ಸದ್ಭಾವನೆ ಇಲ್ಲ ಯಾಕೆ? ಆ ಪ್ರಶ್ನೆಗೆ ನಾನಾಗ ಉತ್ತರಿಸಲಾಗಲಿಲ್ಲ.

ಅದಾದ ಆರೇಳು ವರ್ಷಗಳಲ್ಲಿ ಪೋಲ್ಯಾಂಡ್​ನ ಗ್ಡಾ್ಯನ್ಸ್ಕ್ (ಪೋಲಿಷ್ ಹೆಸರುಗಳೇ ಹಾಗೆ, ನಮ್ಮ ನಾಲಿಗೆ ಹೊರಳುವುದಿಲ್ಲ) ಬಂದರಿನ ಕಾರ್ವಿುಕರ ನಾಯಕ ಲೆಖ್ ವಯೆಂಸಾ (ವ್ಯಾಲೇಸಾ ಎಂದು ಬರೆದು ವಯೆಂಸಾ ಎಂದು ಉಚ್ಚರಿಸುತ್ತಾರೆ ಅಂತ ಆ ದಿನಗಳಲ್ಲಿ ಅಲ್ಲಿದ್ದು ಬಂದಿದ್ದ ನನ್ನ ಹಿರಿಯ ಸಹೋದ್ಯೋಗಿಯೊಬ್ಬರು ಹೇಳಿದ್ದರು) ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ಸಿಡಿದೆದ್ದು ಸಾಲಿಡ್ಯಾರಿಟಿ ಎಂಬ ಕಮ್ಯೂನಿಸ್ಟ್ ವಿರೋಧಿ ಪಕ್ಷ ಕಟ್ಟಿದರು. ಪೋಲಿಷ್ ಜನತೆಯ ಪ್ರಚಂಡ ಬೆಂಬಲ ಗಳಿಸಿದ ಸಾಲಿಡ್ಯಾರಿಟಿ ಸೆಪ್ಟೆಂಬರ್ 1989ರಲ್ಲಿ ನಡೆದ ಪ್ರಥಮ ಬಹುಪಕ್ಷೀಯ ಚುನಾವಣೆಗಳಲ್ಲಿ ವಿಜಯಿಯಾಯಿತು, ಅದರ ನೇತಾರ ತ್ಯಾದಿಯುಸ್ತ್ ಮ್ಯಾಝೆೊವಿಯೇಕಿ ಪ್ರಧಾನಮಂತ್ರಿಯಾಗಿ, ದ್ವಿತೀಯ ಜಾಗತಿಕ ಸಮರಾನಂತರದ ಪೂರ್ವ ಯೂರೋಪಿನ ಪ್ರಪ್ರಥಮ ಕಮ್ಯೂನಿಸ್ಟೇತರ ಸರ್ಕಾರದ ನಾಯಕನಾಗಿ ಇತಿಹಾಸ ನಿರ್ವಿುಸಿದರು. ಆಮೇಲೆ ಪೂರ್ವ ಯೂರೋಪ್​ನ ದೇಶಗಳು ಒಂದೊಂದಾಗಿ ಕಮ್ಯೂನಿಸ್ಟ್ ಸತ್ತೆಗಳನ್ನು ಕೊಡವಿಕೊಂಡವು, ಅಂತಿಮವಾಗಿ ಸೋವಿಯೆತ್ ಯೂನಿಯನ್​ನಲ್ಲೇ ಕಮ್ಯೂನಿಸಂ ಮೂಲೆ ಸೇರಿ ಅಕ್ಟೋಬರ್ - ಡಿಸೆಂಬರ್ 1991ರಲ್ಲಿ ಆ ಬೃಹತ್ ದೇಶವೇ ಹದಿನೈದು ಸ್ವತಂತ್ರ ಕಮ್ಯೂನಿಸ್ಟೇತರ ದೇಶಗಳಾಗಿ ಛಿದ್ರವಾಯಿತು, ಪೋಲೆಂಡ್ ಮತ್ತು ರಶಿಯಾ ನಡುವೆ ಬೆಲರೂಸ್ ಕೂತಿತು. ವಾರ್ಸಾ ಪ್ಯಾಕ್ಟ್ ಸಹಾ ವಿಸರ್ಜನೆಗೊಂಡಿತು. ನ್ಯಾಟೋ ಮಾತ್ರ ನನ್ನನ್ನು ಹಿಡಿಯುವವರಾರು ಎಂದು ಬೀಗುತ್ತಾ ಮುಂದುವರಿಯಿತು, ಮಾರ್ಚ್ 1999ರಲ್ಲಿ ಪೋಲ್ಯಾಂಡ್ ಅದಕ್ಕೆ ಸೇರಿಕೊಂಡಿತು, ರಶಿಯಾ ವಿರುದ್ಧ ನ್ಯಾಟೋದ ಮುಂಚೂಣಿ ರಾಷ್ಟ್ರವಾಯಿತು! ಕಾಲ ಹೇಗೆ ಬದಲಾಗಿಹೋಯಿತು! ಆ ಪೋಲಿಷ್ ಚಿತ್ರಕಾರ್ತಿ ಈಗೆಲ್ಲಿದ್ದಾಳೋ. ಮತ್ತೆ ಸಿಕ್ಕಿದರೆ ಆಕೆಗೆ ಹೇಳಲು ಕೆಲವೊಂದು ವಿಷಯಗಳನ್ನು ರಶಿಯಾ ಅಧ್ಯಕ್ಷ ವ್ಲಾದಿಮಿರ್ ಪೂತಿನ್ ಎರಡು ವಾರಗಳ ಹಿಂದೆ ನನಗೆ ಕೊಟ್ಟಿದ್ದಾರೆ.

ರಶಿಯಾ ವಿರುದ್ಧ ಯೂಕ್ರೇನ್​ಗೆ ಸಮರ್ಥನೆ ನೀಡುತ್ತಿರುವ ಪ್ರಮುಖ ಪೂರ್ವ ಯೂರೋಪಿಯನ್ ದೇಶ ಪೋಲ್ಯಾಂಡ್. ನಾಲ್ಕು ಮಿಲಿಯನ್ ಯೂಕ್ರೇನಿಯನ್ನರಿಗೆ ಆಶ್ರಯ ನೀಡಿರುವುದಲ್ಲದೆ, ಯುದ್ಧ ವಿಮಾನಗಳೂ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು, ಹಣವನ್ನೂ ಯೂಕ್ರೇನ್​ಗೆ ಪೋಲ್ಯಾಂಡ್ ಕೊಟ್ಟಿದೆ, ಕೊಡುತ್ತಿದೆ. ಇದನ್ನು ವಿಶ್ವಾಸದ್ರೋಹ ಎಂದು ಪೂತಿನ್ ಆಗಸ್ಟ್ 30ರಂದು ಸೈಂಟ್ ಪೀಟರ್ಸ್​ಬರ್ಗ್​ನಲ್ಲಿ ಬಣ್ಣಿಸಿ ಇತಿಹಾಸವನ್ನು ನೆನಪಿಸಿಕೊಳ್ಳಿ ಎಂದು ಪೋಲಿಷ್ ಜನತೆಗೆ, ಸರ್ಕಾರಕ್ಕೆ ದೊಡ್ಡದನಿಯ ಕಿವಿಮಾತು ಹೇಳಿದ್ದಾರೆ. ಅದೇನು ಇತಿಹಾಸ?

ನಾಯಿಗೆ ಹೊಡೆದಂತೆ ಹೊಡೆದರು! ಎಂಬ ಮಾತು ಕೇಳಿದ್ದೀರಲ್ಲ? ಹಾಗೆ ನಾಯಿಗೆ ಹೊಡೆಸಿಕೊಂಡಂತೆ ಹೊಡೆಸಿಕೊಂಡ ಒಂದು ದೇಶ ಯೂರೋಪ್​ನಲ್ಲಿ ಇರುವುದಾದರೆ ಅದು ಪೋಲ್ಯಾಂಡ್. ಅದು ಸಶಕ್ತವಾಗಿದ್ದ ಒಂದು ಕಾಲವಿತ್ತು. ಅಂದಿನ ಬಲಿಷ್ಠ ಯೂರೋಪಿಯನ್ ಕ್ರಿಶ್ಚಿಯನ್ ಸಾಮ್ರಾಜ್ಯ ಆಸ್ಟ್ರಿಯಾದ ರಾಜಧಾನಿ ಅಟೋಮಾನ್ ತುರ್ಕಿಯ ಬಲಾಢ್ಯ ಮುಸ್ಲಿಂ ಸೇನೆಗೆ ಇನ್ನೇನು ಬಲಿಯಾಗುತ್ತದೆ ಎನ್ನುವಂತಿದ್ದಾಗ ಸೆಪ್ಟೆಂಬರ್ 1683ರಂದು ತನ್ನ ಸೇನೆಯೊಂದಿಗೆ ಬಂದು ಕಾರಾ ಮುಸ್ತಫಾ ನೇತೃತ್ವದ ತುರ್ಕಿ ಸೇನೆಯನ್ನು ಬಡಿದು ಹಿಮ್ಮೆಟ್ಟಿಸಿದ್ದು ಪೋಲ್ಯಾಂಡ್​ನ ಅರಸ ಜಾನ್ ಸೋಬಿಯೆಸ್ಕಿ. ಆತ ಹಾಗೆ ಮಾಡದಿದ್ದರೆ ಯೂರೋಪ್​ನ ಹೃದಯಭಾಗ ಆಸ್ತ್ರಿಯಾ ಅಟೋಮಾನ್ ತುರ್ಕಿಯ ಪಾಲಾಗುತ್ತಿತ್ತು ಮತ್ತು ಯೂರೋಪ್​ನ ಮುಖ್ಯಭೂಮಿ ಇಸ್ಲಾಮೀಕರಣಗೊಳ್ಳುವ ಪ್ರಕ್ರಿಯೆ ಆರಂಭವಾಗುತ್ತಿತ್ತು. ಹೀಗೆ ಯೂರೋಪ್ ಅನ್ನು ಏಶಿಯನ್ನರಿಂದ, ಕ್ರಿಶ್ಚಿಯಾನಿಟಿಯನ್ನು ಇಸ್ಲಾಂನಿಂದ ಕಾಪಾಡಿದ ಪೋಲ್ಯಾಂಡ್ ಅನ್ನು ನಂತರ ಅದೇ ಯೂರೋಪಿಯನ್ ದೇಶಗಳು ಹೇಗೆ ನೋಡಿದವು? ಅದೇ ಆಸ್ಟ್ರಿಯಾದ ಹಾಪ್ಸ್​ಬರ್ಗ್ ಮತ್ತು ಪ್ರಶಿಯಾದ ಹೊಹೆನ್​ರೆೊಲೆರ್ನ್ ರಾಜಮನೆತನಗಳು ಬೇಕೆಂದಾಗ ಹರಿದು ಹಂಚಿಕೊಳ್ಳಬಹುದಾದ ನೆಲದಂತೆ ಪೋಲ್ಯಾಂಡ್ ಅನ್ನು ಕಂಡವು. ಫ್ರೆಂಚ್ ಬೋಬೋರರ್ನ್​ಗಳಿರಲಿ ನೆಪೋಲಿಯನ್ ಸಹಾ ರಶಿಯಾ ಮೇಲೆ ಆಕ್ರಮಣ ಮಾಡುವಾಗೆಲ್ಲಾ ದಾರಿಯಲ್ಲಿ ಪೋಲ್ಯಾಂಡ್ ಅನ್ನು ಹಿಂಡಿ ಹಿಪ್ಪೆ ಮಾಡಿಯೇ ಹೋಗುತ್ತಿದ್ದುದು. ಅಂತಿಮವಾಗಿ ಇಪ್ಪತ್ತನೇ ಶತಮಾನದ ಆರಂಭದಲ್ಲಿ ಪೋಲ್ಯಾಂಡ್ ಸಮುದ್ರತೀರವೂ ಇಲ್ಲದ ಒಳನಾಡಿನ ಒಂದು ಅಂಗೈಯಗಲದ ದೇಶವಾಯಿತು. ಕೊನೆಗೆ ಪ್ರಥಮ ಜಾಗತಿಕ ಸಂಗ್ರಾಮದ ನಂತರ ಸೋತ ಜರ್ಮನಿಯನ್ನು ಎರಡು ತುಂಡಾಗಿಸಿ ನಡುವಿನ ನೀಳ ನೆಲವನ್ನು ಪೋಲ್ಯಾಂಡ್​ಗೆ ಕೊಟ್ಟು ಅದಕ್ಕೆ ಒಂದು ತುಂಡು ಸಮುದ್ರತೀರವನ್ನು ಒದಗಿಸಲಾಯಿತು. ಪೋಲಿಷ್ ಕಾರಿಡಾರ್ ಎಂಬ ಹೆಸರಿನ ಆ ನೆಲ ಅಂತ್ಯಗೊಳ್ಳುತ್ತಿದ್ದುದು ಬಾಲ್ಟಿಕ್ ಸಮುದ್ರತೀರದ ಪ್ರಸಿದ್ಧ ರೇವುಪಟ್ಟಣ ಡಾನ್​ಝಿಗ್​ನಲ್ಲಿ. (ಅದೇ ಇಂದು ಪೋಲಿಷ್ ಬಂದರು ಗ್ಡಾ್ಯನ್ಸ್್ಕ ನಂತರ ಪೋಲ್ಯಾಂಡ್​ನ ಭೂವಿಸ್ತಾರದಲ್ಲಿ ಮಹತ್ತರ ಬದಲಾವಣೆಗಳಾದದ್ದು 1945ರಲ್ಲಿ. ಮಾಡಿದ್ದು ಸೋವಿಯೆತ್ ಯೂನಿಯನ್.

1945ರ ಹಿಂದಿನ ಮತ್ತು ನಂತರದ ಪೋಲ್ಯಾಂಡ್ ಭೂಪಟಗಳನ್ನು ನೀವೊಮ್ಮೆ ನೋಡಿ ಹೋಲಿಕೆ ಮಾಡಿ. ಆ ದೇಶ ಎತ್ತಿ ಪಕ್ಕಕ್ಕಿಟ್ಟಂತೆ ಕಾಣುತ್ತದೆ!

ಅದಾದದ್ದು ಹೀಗೆ-ಪೋಲ್ಯಾಂಡ್​ನ ಪೂರ್ವ ಭಾಗದಲ್ಲಿ ಬೆಲರೂಸಿಯನ್ನರು ಮತ್ತು ಆಗ್ನೇಯ ಭಾಗದಲ್ಲಿ ಯೂಕ್ರೇನಿಯನ್ನರು ಅಧಿಕವಾಗಿದ್ದ ಕಾರಣ ಆ ಪ್ರದೇಶಗಳನ್ನು ಪೋಲ್ಯಾಂಡ್​ನಿಂದ ಪ್ರತ್ಯೇಕಿಸಿ ತನ್ನ ಭಾಗಗಳಾದ ಬೆಲರೂಸ್ (ಅಂದು ಬೈಲೋರಶಿಯಾ) ಮತ್ತು ಯೂಕ್ರೇನ್​ಗಳಿಗೆ ಸೋವಿಯೆತ್ ಯೂನಿಯನ್ ಹಂಚಿಕೊಟ್ಟಿತು. ಇದಕ್ಕೆ ಪ್ರತಿಯಾಗಿ ಪಶ್ಚಿಮದಲ್ಲಿ ಪೋಲಿಷ್ ಜನತೆ ಅಧಿಕವಾಗಿದ್ದ ಬ್ರಾಂಡೆನ್​ಬರ್ಗ್, ಪೂರ್ವ ಪೊಮೆರಾನಿಯಾ ಮತ್ತು ದಕ್ಷಿಣ ಸೈಲೀಷಿಯಾಗಳನ್ನು ಜರ್ಮನಿಯಿಂದ ಪ್ರತ್ಯೇಕಿಸಿ ಪೋಲ್ಯಾಂಡ್​ಗೆ ನೀಡಲಾಯಿತು. ಹೀಗೆ ಪೂರ್ವದಲ್ಲಿ ನೆಲ ಕಳೆದುಕೊಂಡು ಪಶ್ಚಿಮದಲ್ಲಿ ನೆಲ ಪಡೆದುಕೊಂಡ ಪೋಲ್ಯಾಂಡ್ ಪೂರ್ವದಿಂದ ಪಶ್ಚಿಮಕ್ಕೆ ಜರುಗಿಬಿಟ್ಟಿತು! (ಇತಿಹಾಸಕಾಲದಲ್ಲಿ ಹೀಗೆ ‘ಜರುಗಿದ’ ಇನ್ನೊಂದು ದೇಶ ವಿಯೆಟ್ನಾಂ).

ಹೀಗೆ ‘ಜರುಗಿದ’ ಕಾರಣ ಪೋಲ್ಯಾಂಡ್ ಭೌಗೋಳಿಕವಾಗಿ ವಿಸ್ತಾರಗೊಂಡಿತು ಹಾಗೂ ದೀರ್ಘ ಸಮುದ್ರತೀರ ಅದಕ್ಕೆ ದಕ್ಕಿತು. ಇದನ್ನು ಮಾಡಿಕೊಟ್ಟದ್ದು ಸೋವಿಯೆತ್ ಯೂನಿಯನ್ ಅಂದರೆ ಇಂದಿನ ರಶಿಯಾದ ಅಪ್ಪ. ಅದು ಅಷ್ಟಕ್ಕೇ ನಿಲ್ಲಲಿಲ್ಲ. ತನ್ನ ಪೂರ್ವದ ದೊಡ್ಡ ಪ್ರದೇಶವನ್ನು ಕಳೆದುಕೊಂಡ ಕಾರಾಣ ಜರ್ಮನಿ 1971ರವರೆಗಿನ ಪಾಕಿಸ್ತಾನದಂತೆ ಒಂದಕ್ಕೊಂದು ದೂರವಿದ್ದ ಎರಡು ಪ್ರದೇಶಗಳಾಯಿತು. ನಮ್ಮ ಇಂದಿರಾ ಗಾಂಧಿ 1971ರಲ್ಲಿ ಪಾಕಿಸ್ತಾನಕ್ಕೆ ಮಾಡಿದ್ದನ್ನು ಜೋಸೆಫ್ ಸ್ಟಾ್ಯಲಿನ್ 1945ಕ್ಕೇ ಮಾಡಿ ಜರ್ಮನಿಯ ಮುಖ್ಯ ನೆಲದಿಂದ ದೂರವಿದ್ದ ಪೂರ್ವದ ಈಸ್ಟ್ ಪ್ರಶಿಯಾವನ್ನು ಜರ್ಮನಿಯಿಂದ ಪ್ರತ್ಯೇಕಿಸಿಬಿಟ್ಟರು. ಅಷೇ ಅಲ್ಲ, ಆ ಸೋವಿಯೆತ್ ಸರ್ವಾಧಿಕಾರಿ ಇಂದಿರಾರಿಗಿಂತಲೂ ಒಂದು ಹೆಜ್ಜೆ ಮುಂದೆಹೋಗಿ ಈಸ್ಟ್ ಪ್ರಶಿಯಾವನ್ನು ಎರಡು ತುಂಡುಮಾಡಿ, ಉತ್ತರ ಭಾಗವನ್ನು ತನ್ನ ಕೈಯಲ್ಲಿಟ್ಟುಕೊಂಡು ದಕ್ಷಿಣ ಭಾಗವನ್ನು ಪೋಲ್ಯಾಂಡ್​ಗೆ ದಾನವಾಗಿ ಕೊಟ್ಟುಬಿಟ್ಟರು. ಜತೆಗೆ, ಪೋಲ್ಯಾಂಡ್​ನ ಹೊಸ ಗಡಿಗಳಿಗೆ ಸುರಕ್ಷತೆ ಒದಗಿಸಿದರು. ಅಂದು ಸೃಷ್ಟಿಯಾದ ಪೋಲಿಷ್ ಗಡಿಗಳು ಇಂದಿಗೂ ಹಾಗೇ ಇವೆ. ಇದೊಂದು ಐತಿಹಾಸಿಕ ದಾಖಲೆ. ಅಧ್ಯಕ್ಷ ಪೂತಿನ್ ಪೋಲ್ಯಾಂಡ್​ಗೆ ನೆನಪಿಸಿದ್ದು ಇದನ್ನು. ರಶಿಯಾದಿಂದ ಇಷ್ಟೆಲ್ಲವನ್ನೂ ಪಡೆದುಕೊಂಡು ಈಗ ಅದು ಬಲಹೀನಗೊಂಡಿದೆ ಎಂಬ ಕಾರಣಕ್ಕೆ ಅದರ ವಿರುದ್ಧ ಪಾಳಯ ಸೇರಿಕೊಂಡು ಅದಕ್ಕೇ ಮಗ್ಗಲ ಮುಳ್ಳಾಗಲು ಹೋದರೆ ಪೂತಿನ್​ಗೆ ಪಿತ್ತ ಕೆದರುವುದಿಲ್ಲವೇ? ನಮಗೆ ಯಾರಾದರೂ ಹೀಗೆ ಮಾಡಿದರೆ ಸುಮ್ಮನಿರುತ್ತೇವೆಯೇ? ಹ್ಞಾ, ಇದೇ ಇಂದಿನ ಪ್ರಶ್ನೆ. ರಶಿಯಾ ಸುಮ್ಮನಿರುತ್ತದೆಯೇ?

ಜುಲೈ 2021ಕ್ಕೆ ಹೋಗೋಣ. ಯೂಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿಗೆ ನ್ಯಾಟೋ ಬಯಕೆ ಅತಿಯಾದಾಗ, ಅದಕ್ಕೆ ಶ್ವೇತಭವನದ ಹೊಸ ಪ್ರಭೃತಿ ಬೈಡನ್ ಬೆಂಬಲದ ಸೂಚನೆ ನೀಡತೊಡಗಿದಾಗ ಅಧ್ಯಕ್ಷ ಪೂತಿನ್ ಕೀಯೆವ್​ನ ವಿದೂಷಕನಿಗೆ ಬುದ್ಧಿಮಾತು ಹೇಳಲು ಪ್ರಯತ್ನಿಸಿದರು. ಮೂರು ಶತಮಾನಗಳು ಒಂದೇ ಆಗಿ ಬಾಳಿದ ನಾವು ಮೂರು ದಶಕಗಳಿಂದಷ್ಟೇ ಬೇರಾಗಿ ಬದುಕುತ್ತಿದ್ದೇವೆ. ಈ ಬೇರ್ಪಡುವಿಕೆಯನ್ನು ಶಾಶ್ವತ ಮಾಡಬೇಡಿ, ನ್ಯಾಟೋಗೆ ಸೇರಬೇಡಿ, ರಶಿಯಾದ ಸುರಕ್ಷೆಗೆ ಗಂಡಾಂತರ ಒಡ್ಡಬೇಡಿ ಎಂದೆಲ್ಲಾ ಪೂತಿನ್ ಹೇಳಿದ್ದಲ್ಲೇ ದೀರ್ಘ ಪತ್ರವನ್ನೂ ಬರೆದರು. ನ್ಯಾಟೋ ಅಮಲಿನಲ್ಲಿದ್ದ ಝೆಲೆನ್​ಸ್ಕಿಯವರ ತಲೆಗೆ ಈ ಬುದ್ಧಿಮಾತು ಇಳಿಯಲಿಲ್ಲ. ಅಮೆರಿಕಾದಿಂದ ಮತ್ತೆಮತ್ತೆ ಶಸ್ತ್ರಾಸ್ತ್ರ ತರಿಸಿ ತುಂಬಿಕೊಳ್ಳತೊಡಗಿದರು. ಗಿಡವಾಗಿರುವಾಗಲೇ ಬಗ್ಗಿಸಿಬಿಡಬೇಕು ಎಂದು ಪೂತಿನ್ ದಾಳಿಗೆ ಮುಂದಾಗಿಯೇಬಿಟ್ಟರು. ಅಂದು ಝೆಲೆನ್​ಸ್ಕಿಗೆ ಹೇಳಿದ ಬುದ್ಧಿಮಾತನ್ನೇ ಪೂತಿನ್ ಇಂದು ಪೋಲಿಷ್ ಪ್ರಧಾನಮಂತ್ರಿ ಮ್ಯಾತೆಯುಸ್ಝ್ ಮೊರಾವಿಯೇಕಿ ಅವರಿಗೆ ಹೇಳಿದ್ದಾರೆ. ಮೊರಾವಿಯೇಕಿಯವರಿಗೆ ಪೂತಿನ್ ಮೊರೆ ಕೇಳಿಸಿತೇ? ಹಾಗೆ ಕಾಣುತ್ತಿಲ್ಲ. ಅಂದರೆ ಯೂಕ್ರೇನ್​ಗಾದ ಗತಿ ಪೋಲ್ಯಾಂಡ್​ಗೂ ಆಗಲಿದೆಯೇ?

ಯುದ್ಧನಿರತ ದೇಶವೊಂದನ್ನು ನ್ಯಾಟೋಗೆ ಸೇರಿಸಿಕೊಳ್ಳುವ ಅವಕಾಶ ಇಲ್ಲ. ಯೂಕ್ರೇನ್ ಅನ್ನು ದೀರ್ಘ ಸಮರದಲ್ಲೇ ಕಟ್ಟಿಹಾಕಿ ಆ ದೇಶ ನ್ಯಾಟೋಗೆ ಸೇರುವ ಅವಕಾಶವನ್ನು ಚಾಣಾಕ್ಷ ಪೂತಿನ್ ತಪ್ಪಿಸುತ್ತಲೇ ಇದ್ದಾರೆ. ಆದರೆ, ಪೋಲ್ಯಾಂಡ್ ಈಗಾಗಲೇ ನ್ಯಾಟೋ ಸದಸ್ಯ. ನ್ಯಾಟೋ ಒಪ್ಪಂದದ ಐದನೆಯ ವಿಧಿಯ ಪ್ರಕಾರ ಒಂದು ಸದಸ್ಯರಾಷ್ಟ್ರದ ಮೇಲಿನ ಆಕ್ರಮಣವನ್ನು ತಮ್ಮ ಮೇಲಿನ ಆಕ್ರಮಣವೆಂದೇ ಎಲ್ಲ ಸದಸ್ಯರಾಷ್ಟ್ರಗಳೂ ಬಗೆಯುತ್ತವೆ! ಅಂದರೆ ಪೋಲ್ಯಾಂಡ್ ಮೇಲೆ ರಶಿಯಾ ಆಕ್ರಮಣವೆಸಗಿದರೆ ಇಡೀ ನ್ಯಾಟೋ ರಶಿಯಾ ಮೇಲೆ ಮುಗಿಬೀಳುತ್ತದೆ! ಇಂತಹ ಬುದ್ಧಿಗೇಡಿ ಕೆಲಸಕ್ಕೆ ಪೂತಿನ್ ಕೈಹಾಕುವುದಿಲ್ಲ. ಆದರೆ ಸುಮ್ಮನಿರುವುದೂ ಇಲ್ಲ.

ಪ್ರಿಗೋಝಿನ್​ರ ಪಾಕಕೌಶಲಕ್ಕೂ ಪೂತಿನರ ನಾಲಿಗೆಗೂ ಕಾಲುಶತಮಾನದಿಂದಲೂ ಅದೆಷ್ಟರ ಮಟ್ಟಿಗಿನ ಹೊಂದಣಿಕೆಯಾಗಿದೆಯೆಂದರೆ ಪೂತಿನರಿಗೆ ಇಷ್ಟವಾಗುವಂಥದನ್ನೇ ಪ್ರಿಗೋಝಿನ್ ಮಾಡಿ ಬಡಿಸುತ್ತಾರೆ, ಪ್ರಿಗೋಝಿನ್ ಬಡಿಸಿದ್ದನ್ನೆಲ್ಲಾ ಪೂತಿನ್ ನಾಲಿಗೆ ಚಪ್ಪರಿಸಿ ಸವಿಯುತ್ತಾರೆ. ಇನ್ನು ಇಬ್ಬರೂ ಒಟ್ಟಿಗೆ ಸೇರಿ ಲೆಕ್ಕಹಾಕಿಕೊಂಡು ಮಸಾಲೆ ರುಬ್ಬಿ ಒಲೆ ಹಚ್ಚಿದರೆ ಎಂಥ ಖಾದ್ಯ ತಯಾರಾಗಬಹುದು! ಆ ಖಾದ್ಯ ಇಂದು ಪೋಲ್ಯಾಂಡ್ ಗಡಿಯಲ್ಲಿದೆ. ಅದರ ಪರಿಮಳ ಬ್ರಸೆಲ್ಸ್ ದಾಟಿ ವಾಷಿಂಗಟನ್​ಗೂ ತಲುಪಿದೆ.

ಅಮೆರಿಕಾ ತನ್ನ ಬ್ಲಾ್ಯಕ್ ವಾಟರ್ಸ್ ಕೂಲಿಸೇನೆ ಬಳಸಿ ಒಂದಿಡೀ ದಶಕ ಹೇಯಕೃತ್ಯಗಳನ್ನೆಸಗಿ, ನಾನಲ್ಲ ಗಾಂಧಾರಿ ಎಂದು ಕಳ್ಳಾಟ ಆಡಿ ದಕ್ಕಿಸಿಕೊಳ್ಳುವುದಾದರೆ ಪೂತಿನ್ ತನ್ನ ವ್ಯಾಗ್ನರ್ ಕೂಲಿಸೇನೆ ಬಳಸಿ ಪೋಲ್ಯಾಂಡ್ ಅನ್ನು ಬೆದರಿಸಲಾಗದೇ? ನಾನೂ ಅಲ್ಲ ಗಾಂಧಾರಿ! ಎನ್ನಲಾಗದೇ? ಜಗತ್ತನ್ನೇ (ಅಥವಾ ಅದರಲ್ಲಿನ ಬೈಡನ್​ರಂಥ ಭೋಳೆಗಳನ್ನು) ಯಾಮಾರಿಸಿ ವ್ಯಾಗ್ನರ್ ಕೂಲಿಸೇನೆಯನ್ನು ಪೋಲ್ಯಾಂಡ್ ಗಡಿಗೊಯ್ಯಲು ಪೂತಿನ್-ಪ್ರಿಗೋಝಿನ್ ಪ್ರಳಯಾಂತಕ ಜೋಡಿ ಹಾಕಿದ ಯೋಜನೆಗೆ ಅಮೆರಿಕಾ ತನಗೆ ತಿಳಿಯದಂತೇ ಸಹಾಯ ಮಾಡಿಬಿಟ್ಟಿದೆ. (ಇದನ್ನು ಹಿಂದೆಯೇ ವಿವರವಾಗಿ ಬಿಡಿಸಿಟ್ಟಿದ್ದೇನೆ) ಈಗ ಬೇಸ್ತುಬಿದ್ದಿರುವ ಜೋ ಬೈಡನ್ ಮತ್ತು ಜೆನ್ಸ್ ಸ್ಟೋಲ್ಟೆನ್​ಬರ್ಗ್ ಮುಂದಿರುವ ಪ್ರಶ್ನೆ- ವ್ಯಾಗ್ನರ್ ಕೂಲಿಸೇನೆಯ ಮೇಲೆ ನ್ಯಾಟೋ ಯುದ್ಧ ಸಾರಬೇಕೇ? ಸಾರಿದರೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂದು ಜಗತ್ತು ನಗುವುದಿಲ್ಲವೇ? ಸಾರದಿದ್ದರೆ ನ್ಯಾಟೋ ಸದಸ್ಯತ್ವ ಊಟಕ್ಕಿಲ್ಲದ ಉಪ್ಪಿನಕಾಯಿ ಎಂದು ಪೋಲ್ಯಾಂಡ್ ಅಳುವುದಿಲ್ಲವೇ?

ಮತ್ತೆ, ಈ ವಿಷಯ ಇಷ್ಟು ಸಾಕಲ್ಲವೇ?

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)