ಹಣಕಾಸು ನಿರ್ವಹಣೆಯನ್ನು ಯಶಸ್ವಿಯಾಗಿ ನಿಭಾಯಿಸುವ ಮೊದಲ ಹೆಜ್ಜೆ ಎಂದರೆ ಅಗತ್ಯತೆ ಮತ್ತು ಬಯಕೆಯ ನಡುವಿನ ವ್ಯತ್ಯಾಸವನ್ನು ಗುರುತಿಸುವುದು. ಉದಾ-ಊಟಕ್ಕೆ ಚಪಾತಿ ಅಥವಾ ರೊಟ್ಟಿ ಅಗತ್ಯ. ಆದರೆ ಐಸ್ಕ್ರೀಂ ಬೇಕೇಬೇಕು ಎಂದಿಲ್ಲ ಅಲ್ಲವೆ? ಹೀಗಾಗಿ ಐಸ್ಕ್ರೀಂ ಎಂಬುದು ಬಯಕೆ. ಅಗತ್ಯ ವಸ್ತುಗಳನ್ನು ನಾವು ಹೊಂದಲೇಬೇಕಾಗುತ್ತದೆ. ಆದರೆ, ಬಯಕೆಯ ವಸ್ತುಗಳನ್ನು ಮುಂಬರುವ ದಿನಗಳಲ್ಲಿ ಹೊಂದಬಹುದಾಗಿದೆ. ಹೀಗೆ ನಮ್ಮ ಬಯಕೆಗಳನ್ನು ಗುರುತಿಸಿ, ಅವುಗಳನ್ನು ಮುಂದೂಡುವುದರಿಂದ ಹಣಕಾಸು ಗುರಿ ತಲುಪಲು ಸಾಧ್ಯವಾಗುತ್ತದೆ.
ಬ್ಯಾಂಕಿಂಗ್ ವ್ಯವಸ್ಥೆಯ ಪರಿಚಯ: ಠೇವಣಿ ಹಣ ಪಡೆದುಕೊಳ್ಳುವ ಹಾಗೂ ಸಾಲ ನೀಡುವ ಹಣಕಾಸು ಸಂಸ್ಥೆಗಳೇ ಬ್ಯಾಂಕುಗಳು. ಖಾತೆಗಳು, ಠೇವಣಿ, ಸಾಲ ಮುಂತಾ ದವುಗಳ ಬಗೆಗೆ ತಿಳಿದುಕೊಳ್ಳೋಣ. ಬ್ಯಾಂಕ್ ಖಾತೆಗಳಲ್ಲಿ ಪ್ರಮುಖ ವಾಗಿ ಉಳಿತಾಯ ಹಾಗೂ ಚಾಲ್ತಿ ಎಂಬ 2 ರೀತಿಯ ಖಾತೆಗಳಿವೆ.
ಉಳಿತಾಯ ಖಾತೆ: ಈ ಖಾತೆಯನ್ನು ಒಬ್ಬ ವ್ಯಕ್ತಿ ಇಲ್ಲವೇ ಜಂಟಿಯಾಗಿ ಅನೇಕರು ಸೇರಿಕೊಂಡು ತೆರೆಯಬಹುದಾಗಿದೆ. ಇದರಲ್ಲಿರುವ ಹಣಕ್ಕೆ ಅಲ್ಪ ಪ್ರಮಾಣದ ಬಡ್ಡಿಯನ್ನು ನೀಡಲಾಗುತ್ತದೆ. ಕನಿಷ್ಠ ಹಣವನ್ನು ಖಾತೆಯಲ್ಲಿ ಉಳಿಸಬೇಕಾಗುತ್ತದೆ.
ಅಪ್ರಾಪ್ತರಿಗೆ ಉಳಿತಾಯ ಖಾತೆ: 18 ವರ್ಷದೊಳಗಿನ ಅಪ್ರಾಪ್ತ ವಯಸ್ಕರು ಕೂಡ ತಮ್ಮ ಪಾಲಕರ ಮೂಲಕ ಉಳಿತಾಯ ಬ್ಯಾಂಕ್ ಖಾತೆ ತೆರೆಯಬಹುದಾಗಿದೆ. 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಮಕ್ಕಳು ಬಯಸಿದಲ್ಲಿ ಸ್ವತಂತ್ರವಾಗಿ ಖಾತೆ ನಿರ್ವಹಣೆ ಮಾಡಬಹುದಾಗಿದೆ. ಬ್ಯಾಂಕ್ ಠೇವಣಿಗಳಲ್ಲಿ ಮರುಕಳಿಸುವ ಠೇವಣಿ (ರೆಕರಿಂಗ್ ಡಿಪಾಸಿಟ್- ಆರ್ಡಿ) ಹಾಗೂ ನಿಶ್ಚಿತಾವಧಿಯ ಠೇವಣಿ (ಫಿಕ್ಸ್ಡ್ ಡೆಪಾಸಿಟ್- ಎಫ್ಡಿ) ಎಂಬ ಎರಡು ರೀತಿಗಳಿವೆ.
ಚಾಲ್ತಿ ಖಾತೆ: ಈ ಖಾತೆಯನ್ನು ವ್ಯಾಪಾರ ವಹಿವಾಟು ನಿರ್ವಹಣೆಗಾಗಿ ಬಳಕೆ ಮಾಡಲಾಗುತ್ತದೆ. ಮಾಲೀಕತ್ವದ ವ್ಯಾಪಾರಿ ಸಂಸ್ಥೆಗಳು, ಜಂಟಿ ಸಂಸ್ಥೆಗಳು, ಟ್ರಸ್ಟ್ಗಳು, ಸಾರ್ವಜನಿಕ ಅಥವಾ ಖಾಸಗಿ ಕಂಪನಿಗಳು, ಸಂಘಗಳು ಮುಂತಾದವು ಇಂತಹ ಖಾತೆಯನ್ನು ತೆರೆಯುತ್ತವೆ. ಇದರಲ್ಲಿ ಹಣ ಹಾಕುವುದಕ್ಕೆ ಹಾಗೂ ಹಿಂತೆಗೆದುಕೊಳ್ಳುವುದಕ್ಕೆ ಯಾವುದೇ ತೆರನಾದ ನಿರ್ಬಂಧ, ಮಿತಿ ಇರುವುದಿಲ್ಲ. ಈ ಖಾತೆಯಲ್ಲಿರುವ ಹಣಕ್ಕೆ ಬಡ್ಡಿಯನ್ನು ನೀಡಲಾಗುವುದಿಲ್ಲ.
ವಿವಿಧ ಸಾಲಗಳು: ಸಾಲಗಳಲ್ಲಿ ಅನೇಕ ಬಗೆಗಳಿವೆ. ಈ ಪೈಕಿ ಕೆಲವು ವಿದ್ಯಾರ್ಥಿಗಳಿಗೆ ನೇರವಾಗಿ ಸಂಬಂಧಿಸಿಲ್ಲವಾದರೂ ಆ ಕುರಿತು ಮಾಹಿತಿ ಹೊಂದಿರುವುದು ಸೂಕ್ತ.
ಗೃಹ ಸಾಲ: ಪ್ರತಿಯೊಬ್ಬರು ಸ್ವಂತ ಮನೆ ಖರೀದಿ ಕನಸನ್ನು ಕಾಣುತ್ತಿರುತ್ತಾರೆ. ಆದರೆ, ಮನೆ ಖರೀದಿಗೆ ಬೃಹತ್ ಮೊತ್ತದ ಹಣ ಬೇಕಾಗುತ್ತದೆ. ಇಷ್ಟೊಂದು ಹಣ ಹೊಂದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆಗ ಬ್ಯಾಂಕ್ನಿಂದ ಗೃಹ ಸಾಲ ಪಡೆಯುತ್ತಾರೆ.
ಬಜೆಟ್ ಹೊಂದಾಣಿಕೆ: ಆದಾಯ ಮತ್ತು ಖರ್ಚನ್ನು ಸಮತೋಲಿತವಾಗಿ ನಿಭಾಯಿಸುವ ಕಲೆಯೇ ಬಜೆಟ್ ಹೊಂದಾಣಿಕೆ. ಯಾವಾಗಲೂ ನಮ್ಮ ಆದಾಯಕ್ಕಿಂತ ಖರ್ಚುಗಳು ಕಡಿಮೆ ಇರಬೇಕು. ಹೆಚ್ಚುವರಿ ಆದಾಯವನ್ನು ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಹೂಡಿಕೆ ಮಾಡಬಹುದಾಗಿದೆ.
ರೆಕರಿಂಗ್ ಡೆಪಾಸಿಟ್: ಮರುಕಳಿಸುವ ಠೇವಣಿಯು ಆರ್ಡಿ ಎಂದೇ ಜನಪ್ರಿಯ. ಒಂದು ಅವಧಿಯವರೆಗೆ ಪ್ರತಿ ತಿಂಗಳು ನಿರ್ದಿಷ್ಟ ಹಣವನ್ನು ಬ್ಯಾಂಕ್ ಪಡೆಯುತ್ತದೆ. ಆ ಅವಧಿ ಮುಗಿದ ನಂತರ ಬಡ್ಡಿ ಸಮೇತವಾಗಿ ಹಣವನ್ನು ಮರುಪಾವತಿಸುತ್ತದೆ. ಇದರಲ್ಲಿ 6 ತಿಂಗಳಿಂದ 120 ತಿಂಗಳವರೆಗೆ ಹಣ ಇಡಬಹುದು. ಹೆಚ್ಚಿನ ಉಳಿತಾಯ ಹೊಂದದ ಹಾಗೂ ಪ್ರತಿ ತಿಂಗಳು ಅಲ್ಪ ಪ್ರಮಾಣದ ಉಳಿತಾಯ ಮಾಡುವವರಿಗೆ ಇದು ಸೂಕ್ತವಾಗಿದೆ.
ನಿಶ್ಚಿತ ಅವಧಿಯ ಠೇವಣಿ: ಹೆಸರೇ ಸೂಚಿಸುವಂತೆ ಇದು ನಿಶ್ಚಿತ ಅವಧಿಯವರೆಗೆ ಇಡುವ ಠೇವಣಿಯಾಗಿರುತ್ತದೆ. 7 ದಿನದಿಂದ 10 ವರ್ಷಗಳ ಅವಧಿಯವರೆಗೆ ಹಣ ಇಡಲು ಅವಕಾಶ ಇರುತ್ತದೆ. ಹಣದ ಮೊತ್ತ ಹಾಗೂ ಠೇವಣಿ ಇಡುವ ಅವಧಿ ಆಧರಿಸಿ ಬಡ್ಡಿ ದರ ನಿಗದಿಯಾಗುತ್ತದೆ. ಬಡ್ಡಿಯನ್ನು ಅವಧಿಯ ಕೊನೆಯಲ್ಲಿ ಒಟ್ಟಾರೆಯಾಗಿ ನೀಡಲಾಗುತ್ತದೆಯಾದರೂ ಮಧ್ಯದ ಕೆಲ ಅವಧಿಗಳಲ್ಲಿ ಬಡ್ಡಿ ಹಣ ಪಡೆಯುವ ಆಯ್ಕೆಯೂ ಇರುತ್ತದೆ. ಅವಧಿಗೆ ಮುಂಚಿತವಾಗಿಯೇ ಠೇವಣಿ ಪಡೆಯಲು ಕೂಡ ಅವಕಾಶವಿರುತ್ತದೆ.
ವೈಯಕ್ತಿಕ ಸಾಲ: ಈ ರೀತಿಯ ಸಾಲವನ್ನು ಯಾವುದೇ ಉದ್ದೇಶಕ್ಕಾದರೂ ಬಳಸಬಹುದಾಗಿದೆ. ವೈದ್ಯಕೀಯ ವೆಚ್ಚ, ಮದುವೆ ಖರ್ಚು ಮುಂತಾದ ತುರ್ತು ಸಂದರ್ಭಗಳಲ್ಲಿ ಈ ಸಾಲವನ್ನು ಪಡೆದುಕೊಳ್ಳಲಾಗುತ್ತದೆ. ಇಂತಹ ಸಾಲಗಳಿಗೆ ಬಡ್ಡಿ ದರದ ಪ್ರಮಾಣ ಹೆಚ್ಚು ಇರುತ್ತದೆ.
ವಾಹನ ಸಾಲ: ವಾಹನ ಖರೀದಿಗೆ ಇಂತಹ ಸಾಲಗಳನ್ನು ನೀಡಲಾಗುತ್ತದೆ. ವಾಹನವನ್ನು ಬ್ಯಾಂಕ್ಗೆ ಅಡಮಾನ ಇಡಲಾಗಿರುತ್ತದೆ. ಸಾಲ ಮರುಪಾವತಿಸದಿದ್ದರೆ ವಾಹನವನ್ನು ಬ್ಯಾಂಕ್ ಮುಟ್ಟುಗೋಲು ಹಾಕಿಕೊಳ್ಳುತ್ತದೆ.
ಶಿಕ್ಷಣ ಸಾಲ: ಉನ್ನತ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಬ್ಯಾಂಕ್ಗಳು ಶಿಕ್ಷಣ ಸಾಲ ಒದಗಿಸುತ್ತವೆ. ವಿದ್ಯಾರ್ಥಿಗಳು ಶಿಕ್ಷಣ ಪೂರ್ಣಗೊಳಿಸಿ ಗಳಿಸಲು ಆರಂಭಿಸಿದ ನಂತರ ಸಾಲ ಮರುಪಾವತಿಸಲು ಅವಕಾಶವಿರುತ್ತದೆ.