| ವಿಶ್ವ ಕುಂದಾಪುರ
‘ಕ್ಷಿಪಣಿ ಮಾನವ’ (ಮಿಸೈಲ್ ಮ್ಯಾನ್) ಎಂದೇ ಜನಪ್ರಿಯರಾದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ತಮ್ಮ ಕ್ಷೇತ್ರದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದ್ದಲ್ಲದೆ ಮಾನವೀಯತೆಗೂ ಪ್ರಖ್ಯಾತರಾದವರು. ಕಲಿಕೆಗೆ ಕೊನೆಯೆಂಬುದಿಲ್ಲ ಎಂಬ ಧೋರಣೆಯಲ್ಲಿ ನಂಬಿಕೆಯಿಟ್ಟಿದ್ದ ಅವರು, ಜೀವನಪೂರ್ತಿ ಕಲಿಯುತ್ತಲೇ ಹೋಗಿದ್ದು ಮಾತ್ರವಲ್ಲದೆ ಕಲಿಸುವ ‘ಮೇಷ್ಟ್ರು’ ಆಗಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಮಾರ್ಗದರ್ಶಕರಾದವರು. ರಾಷ್ಟ್ರಪತಿ ಆಗಿದ್ದ ವೇಳೆ, ಬಹುತೇಕ ಸಂದರ್ಭಗಳಲ್ಲಿ ತಾವು ಹೋದಲ್ಲೆಲ್ಲ ವಿದ್ಯಾರ್ಥಿಗಳೊಂದಿಗೆ ಸಂವಾದಿಸುವ ಪರಿಪಾಠ ಇಟ್ಟುಕೊಂಡಿದ್ದರು. ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಿಂದ ನಿರ್ಗಮಿಸಿದ ನಂತರವೂ ಎಂದಿನಂತೆ ಸರಳ ಜೀವನ ನಡೆಸುವುದರ ಜೊತೆಗೆ ಭವಿಷ್ಯದ ಪ್ರಜೆಗಳ ಜ್ಞಾನಾಭಿವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಗಮನ ಹರಿಸಿದರು. ಯುವ ಸಮುದಾಯವೇ ಮುಂದಿನ ಭವಿಷ್ಯ ಎಂದು ಅರಿತಿದ್ದ ಕಲಾಂ, ಯುವಜನರು; ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮಿತ್ರ, ಮಾರ್ಗದರ್ಶಕ ಆಗಿದ್ದರು. ಅವರು ವಿದ್ಯಾರ್ಥಿಗಳಿಗಾಗಿ ಹೇಳಿಕೊಟ್ಟ ಮೌಲಿಕ ಪಾಠಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿರುತ್ತವೆ.
ವಿಶಿಷ್ಟವಾಗಿರುವ ಬಯಕೆ: ಪ್ರತಿ ಮಗುವಿನಲ್ಲೂ ವಿಶಿಷ್ಟವಾದ ಪ್ರತಿಭೆ ಇರುತ್ತದೆ. ಅದರ ವಿಕಸನಕ್ಕೆ ಹೆತ್ತವರು ಅವಕಾಶ ಕಲ್ಪಿಸಬೇಕೆನ್ನುವುದು ಕಲಾಂ ಅವರ ದೃಢವಾದ ನಂಬಿಕೆಯಾಗಿತ್ತು. ಮಕ್ಕಳು ತಮ್ಮ ಕನಸುಗಳ ಬೆನ್ನೇರಿ ಹೋಗಲು ಬಿಡಿ ಎನ್ನುವುದು ಅವರ ಕಳಕಳಿಯ ಮನವಿಯಾಗಿತ್ತು. ‘ಗುಂಪಿನೊಳಗೆ ಗೋವಿಂದ’ ಆಗದಂತೆ ನೋಡಿಕೊಳ್ಳಬೇಕು ಎನ್ನುತ್ತಿದ್ದರು.
ವೈಫಲ್ಯಕ್ಕೆ ಎದೆಗುಂದದಿರಿ...: ವೈಫಲ್ಯದಿಂದ ಎದೆಗುಂದಬಾರದು ಎನ್ನುವುದು ಕಲಾಂರ ಇನ್ನೊಂದು ಮಹತ್ವದ ಸಲಹೆಯಾಗಿರುತ್ತಿತ್ತು. ಊಅಐಔ ಎನ್ನುವುದನ್ನು ಅವರು ವ್ಯಾಖ್ಯಾನಿಸಿದ ಬಗೆಯೇ ವಿಭಿನ್ನ. ಅಲ್ಲದೆ ಅದು ವಿದ್ಯಾರ್ಥಿಗಳು ಮಾತ್ರವಲ್ಲದೆ ಎಲ್ಲರಿಗೂ ಅನ್ವಯವಾಗುವಂಥದ್ದು. ವೈಫಲ್ಯಗಳಿಗೆ ಹೆದರಿದರೆ ಯಶಸ್ಸಿನತ್ತ ಮಾನವನ ಪ್ರಯತ್ನ ಕುಂದುತ್ತದೆ ಎನ್ನುವುದು ಅವರ ಅಭಿಮತ. ‘ವಿಫಲರಾದರೆ ಪ್ರಯತ್ನವನ್ನು ನಿಲ್ಲಿಸಬೇಡಿ. ಯಾಕೆಂದರೆ ಊಅಐಔ ಎಂದರೆ ಊಜ್ಟಿಠಠಿ ಅಠಿಠಿಛಿಞಟಠಿ ಜ್ಞಿ ಔಛಿಚ್ಟ್ಞ್ಞ ಎಂದು ಹೇಳುತ್ತಿದ್ದರು. ವೈಫಲ್ಯದಿಂದ ಪಾಠ ಕಲಿತು ಮುನ್ನುಗ್ಗಬೇಕೆನ್ನುವುದು ಅವರ ನಿಲುವಾಗಿತ್ತು. ಯಶಸ್ಸು ಗಳಿಸಲೇ ಬೇಕೆಂದು ದೃಢ ಸಂಕಲ್ಪ ಮಾಡಿದ್ದರೆ ವೈಫಲ್ಯ ನಮ್ಮನ್ನು ಏನನ್ನೂ ಮಾಡಲಾಗದು ಎನ್ನುತ್ತಿದ್ದರು.
4 ಅಂಶ ಸೂತ್ರ: ಒಮ್ಮೆ ಕಾರ್ಯಕ್ರಮವೊಂದರಲ್ಲಿ; ಜೀವನದಲ್ಲಿ ಯಶಸ್ಸು ಪಡೆಯಲು ಯುವಜನರಿಗೆ ನಿಮ್ಮ ಸಲಹೆಯೇನು ಎಂದು ಒಬ್ಬ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಕಲಾ ಸೂತ್ರವೊಂದನ್ನು ಮುಂದಿಟ್ಟರು. 1. ದೊಡ್ಡ ಗುರಿ. 2. ಸತತ ಜ್ಞಾನ ಸಂಪಾದನೆ. 3. ಕಠಿಣ ಪರಿಶ್ರಮ. 4. ಸತತ ಯತ್ನ ಹಾಗೂ ಯಶಸ್ಸು -ಇದುವೇ ಆ ಸೂತ್ರವಾಗಿದೆ.
ಕನಸಿನ ಬಗ್ಗೆ ಕಲಾಂ ವ್ಯಾಖ್ಯಾನ ಅದ್ಭುತವಾದುದು: ‘ನಿದ್ದೆಯಲ್ಲಿ ನೀವೇನು ಕಾಣುತ್ತೀರೋ ಅದು ಕನಸಲ್ಲ. ನಿಮ್ಮನ್ನು ನಿದ್ದೆ ಮಾಡಲು ಬಿಡದಿರುವುದೇ ಕನಸು’ ಎಂದವರು ಹೇಳಿದ್ದಾರೆ. ಸತತ ಪ್ರಯತ್ನಶೀಲರಾಗಿರಬೇಕೆನ್ನುವುದು ಇದರ ತಾತ್ಪರ್ಯವಾಗಿದೆ.
ಸನ್ನಡತೆ ಮತ್ತು ಮಾನವೀಯತೆ: ಕಲಾಂ ಪ್ರಕಾರ ಶಿಕ್ಷಣ ಎನ್ನುವುದು ಕೇವಲ ಶಾಲಾ-ಕಾಲೇಜ್ಗಳಲ್ಲಿ ವ್ಯಾಸಂಗ ಮಾಡಿ ಸರ್ಟಿಫಿಕೆಟ್ ಪಡೆಯುವುದು ಮಾತ್ರವೇ ಅಲ್ಲ. ಜ್ಞಾನ ಮತ್ತು ಅರಿವಿನ ಮೂಲಕ ಸಾಗುವ ಕೊನೆಯಿಲ್ಲದ ಪಯಣವೇ ಶಿಕ್ಷಣ ಎನ್ನುವುದು ಅವರ ಅಭಿಪ್ರಾಯ. ಶಿಕ್ಷಣ ವ್ಯವಸ್ಥೆಯು ಮಕ್ಕಳ ಮೊಗದಲ್ಲಿ ನಗುವನ್ನು ಉಳಿಸುವಂತಿರಬೇಕು. ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಸನ್ನಡತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎನ್ನುವುದು ಅವರ ಆಶಯವಾಗಿತ್ತು.