ಅಂಕಣ

ಬುದ್ಧಿ, ಜ್ಞಾನ ದಯಪಾಲಿಸುವ ಮಹಾಮಾತೆ ಶಾರದೆ

Webdesk - Ravikanth

| ಡಾ.ಗಣಪತಿ ಹೆಗಡೆ ಸಂಸ್ಕೃತ ವಿದ್ವಾಂಸರು

ಯಯಾ ವಿನಾ ಜಗತ್ಸರ್ವಂ ಮೂಕಮುನ್ಮತ್ತವತ್ಸದಾ||

ಯಾ ದೇವೀ ವಾಗಧಿಷ್ಠಾತ್ರೀ ತಸ್ಯೈ ವಾಣ್ಯೈ ನಮೋನಮಃ||

ವಾಗ್ದೇವಿಯಾದ ವಾಣಿಯು ಮನುಷ್ಯನಿಗೆ ಮಾತಾಡುವ ಶಕ್ತಿಯೊಂದನ್ನು ಕರುಣಿಸಿರದಿದ್ದರೆ ಈ ಪ್ರಪಂಚವು ಮೂಕವಾಗಿ, ಹುಚ್ಚನಂತಾಗಿಬಿಡುತ್ತಿತ್ತು. ವಾಕ್​ಶಕ್ತಿಯನ್ನು ಕರುಣಿಸುವುದರ ಮೂಲಕ ನಮ್ಮನ್ನೆಲ್ಲ ಉದ್ಧರಿಸಿದ ಆ ಮಾತೆಗೆ ನಮನಗಳು.

ಮಾತಿಲ್ಲದ ಮನುಷ್ಯ ಪ್ರಪಂಚವನ್ನು ಊಹಿಸಿಕೊಳ್ಳುವುದೂ ಕಷ್ಟ. ಆದರೆ ಹಾಗಾಗಲು ಬಿಡದೇ ನಮ್ಮೆಲ್ಲರಿಗೂ ಧೀಶಕ್ತಿಯನ್ನೂ, ವಾಕ್ಶಕ್ತಿಯನ್ನೂ ದಯಪಾಲಿಸಿದ ಆ ಮಹಾಮಾತೆಯೇ ಶಾರದೆ, ಸರಸ್ವತೀ, ವಾಗ್ದೇವಿ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ಜ್ಞಾನೇಶ್ವರಿ. ಇಂದು ಮನುಕುಲವು ಬುದ್ಧಿಶಕ್ತಿಯ ಆಧಾರದಲ್ಲಿಯೇ ಮುನ್ನಡೆಯುತ್ತಿದೆ. ಅಂತಹ ಅಪ್ರತಿಮವಾದ ಬುದ್ಧಿಶಕ್ತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಮಾನವನು ಸದಾ ಪ್ರಯತ್ನಶೀಲನಾಗಿರುತ್ತಾನೆ. ಪ್ರಯತ್ನಕ್ಕೆ ತಕ್ಕ ಫಲವನ್ನೂ ಪಡೆಯುತ್ತಿದ್ದಾನೆ. ಜೊತೆ ಜೊತೆಗೆ ಇವೆಲ್ಲದಕ್ಕೂ ಮೂಲ ತನ್ನ ಜ್ಞಾನಶಕ್ತಿ; ಅಂತಹ ಜ್ಞಾನಶಕ್ತಿಯನ್ನು ಧಾರೆ ಎರೆದವಳು ಮಾತೆ ಶಾರದೆ ಎಂಬ ಅಗಾಧವಾದ ವಿಶ್ವಾಸವೂ ಆತನಲ್ಲಿದೆ. ಆದ್ದರಿಂದಲೇ ತನ್ನ ಮುಂದಿನ ಸಂತತಿಯೂ ಹಾಗೆಯೇ ಆಗಲೆಂಬ ಆಶಯದಿಂದ ತನ್ನ ಮಕ್ಕಳಿಗೂ ಇದೇ ಪದ್ಧತಿಯಲ್ಲಿಯೇ ಅಕ್ಷರಾಭ್ಯಾಸದ ಆರಂಭ ಮಾಡಿಸುತ್ತಾನೆ. ಎಷ್ಟೆಂದರೂ ಅವಳು ಜ್ಞಾನಸ್ವರೂಪಳೂ, ಜ್ಞಾನದಾಯಿನಿಯೂ ಆಗಿರುವಳಲ್ಲವೇ? ಎಂಬ ಭಾವನೆಯು ಅವನಿಗೆ ಸದಾ ಶ್ರೀರಕ್ಷೆಯಾಗಿ ಕಾಯುತ್ತಿದೆ.

||ಶಾರಂ ದದಾತಿ ಇತಿ ಶಾರದಾ|| ಶಾರಂ ಅಂದರೆ ಜ್ಞಾನವೆಂದು ಕೂಡ ಅರ್ಥವಿದೆ. ದದಾತಿ ಅಂದರೆ ಕೊಡುವವಳು. ಸರ್ವಜ್ಞಾನಸ್ವರೂಪಿಣಿ ಶಾರದೆಯು ಆ ಜ್ಞಾನವನ್ನು ನಮಗೂ ದಯಪಾಲಿಸುತ್ತಾಳೆ ಎಂಬ ಕಾರಣದಿಂದ ಅವಳನ್ನು ಶಾರದಾ ಎಂದು ಕರೆಯಲಾಗಿದೆ. ಅಜ್ಞಾನವೆಂಬುದು ಬದುಕಿನ ಅತ್ಯಂತ ಘೊರವಾದ ಅಂಧಕಾರ. ಈ ಅಂಧಕಾರದ ನಿವಾರಣೆಯಾಗಬೇಕಾದರೆ ಅಲ್ಲಿ ಜ್ಞಾನವನ್ನು ತುಂಬಬೇಕು. ಅಂದರೆ ಅಜ್ಞಾನವನ್ನು ತೊಲಗಿಸುವಲ್ಲಿ ಜ್ಞಾನವೇ ಪ್ರಧಾನ ಅಂಶ. ಅಂತಹ ಜ್ಞಾನವನ್ನು ದಯಪಾಲಿಸುವವಳು ಶಾರದೆ.

ನಮಸ್ತೇ ಶಾರದೇ ದೇವಿ ಕಾಶ್ಮೀರಪುರವಾಸಿನಿ|

ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾಂ ಬುದ್ಧಿಂ ಚ ದೇಹಿ ಮೇ||

‘ವಿದ್ಯಾವಂತರ, ಜ್ಞಾನಿಗಳ ತವರೂರಾದ ಕಾಶ್ಮೀರಪುರದಲ್ಲಿ ನೆಲೆಸಿರುವ ಶಾರದೆಯೇ, ನಿನಗೆ ನಮಸ್ಕಾರಗಳು. ನನಗೆ ವಿದ್ಯೆಯನ್ನೂ, ಬುದ್ಧಿಯನ್ನೂ ಕೊಡೆಂದು ನಿನ್ನನ್ನು ನಿತ್ಯವೂ ಪ್ರಾರ್ಥಿಸುತ್ತೇನೆ.’ ಜ್ಞಾನಕಮಲವನ್ನು ಅರಳಿಸುವ ಮೂಲಕ ಜ್ಞಾನದಾನ ಮಾಡುವವಳು ಅವಳು ಎಂಬ ಕಾರಣಕ್ಕಾಗಿ ಈ ಸ್ತುತಿ ಎಲ್ಲರ ಮನೆಗಳಲ್ಲಿ ನಿತ್ಯಪಠಣದ ವಿಷಯವಾಗಿದೆ.

ಶಾರದೆ ಶುಭ್ರವರ್ಣಳು, ಬ್ರಹ್ಮವಿಚಾರದ ಸಾರವನ್ನು ಅರುಹುವವಳು, ಆದ್ಯಳು, ಜ್ಞಾನಶಕ್ತಿಯ ಮೂಲಕ ಜಗತ್ತನ್ನೇ ವ್ಯಾಪಿಸಿದವಳು, ಪದ್ಮಾಸನದಲ್ಲಿ ಕುಳಿತವಳು, ಕೈಯಲ್ಲಿ್ಲ ಸ್ಪಟಿಕಮಾಲೆ, ವೀಣೆ, ಪುಸ್ತಕಗಳನ್ನು ಹಿಡಿದವಳು, ಜಾಡ್ಯವೆಂಬ ಅಂಧಕಾರವನ್ನು ನಾಶಮಾ ಡುವವಳು, ಬುದ್ಧಿಯನ್ನು ಕೊಡುವವಳು. ಇಷ್ಟೆಲ್ಲ ಒಳಿತುಗಳನ್ನು ಮಾಡುವ ಭಗವತಿ ಪರಮೇಶ್ವರಿ ಶಾರದೆಯನ್ನು ನಾನು ವಂದಿಸುತ್ತೇನೆ ಎಂಬ ತಾತ್ಪರ್ಯದ ಅದ್ಭುತವಾದ ಈ ಶ್ಲೋಕವನ್ನು ಗಮನಿಸಿ.

ಶುಕ್ಲಾಂ ಬ್ರಹ್ಮವಿಚಾರಸಾರಪರಮಾಮ್ ಆದ್ಯಾಂ ಜಗದ್ವಾ್ಯಪಿನೀಂ

ವೀಣಾಪುಸ್ತಕಧಾರಿಣೀಮ್ ಅಭಯದಾಂ ಜಾಡ್ಯಾಂಧಕಾರಾಪಹಾಮ್

ಹಸ್ತೇಸ್ಪಾಟಿಕಮಾಲಿಕಾಂ ವಿದಧತೀಂ ಪದ್ಮಾಸನೇ ಸಂಸ್ಥಿತಾಂ

ವಂದೇ ತಾಂ ಪರಮೇಶ್ವರೀಂ ಭಗವತೀಂ ಬುದ್ಧಿಪ್ರದಾಂ ಶಾರದಾಮ್|

ಶಾರದೆಯ ಇನ್ನೊಂದು ರೂಪವೇ ಸರಸ್ವತಿಯ ಸ್ವರೂಪ. ವಿದ್ಯೆ ಮತ್ತು ಜ್ಞಾನದ ಸಂಕೇತವಾಗಿ ಶಾರದೆಯನ್ನು ಸ್ತುತಿಸಿದರೆ, ಕಲೆ ಮತ್ತು ಸಂಸ್ಕೃತಿಯ ರೂಪವಾಗಿ ಸರಸ್ವತಿಯನ್ನು ಸ್ತುತಿಸಲಾಗಿದೆ. ಈ ಶ್ಲೋಕವು ಅದನ್ನು ಪುಷ್ಟೀಕರಿಸುತ್ತದೆ.

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ|

ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ||

‘ಹೇ ಸರಸ್ವತಿಯೇ ನಿನಗೆ ನಮಸ್ಕಾರ. ವರಗಳನ್ನು ನೀಡುವುದರ ಮೂಲಕ ನಾವು ಬಯಸಿದ ಫಲಗಳನ್ನು ಪೂರೈಸುವ ನಿನ್ನಲ್ಲಿ ನನ್ನದೊಂದು ಪ್ರಾರ್ಥನೆ. ವಿದ್ಯಾರಂಭವನ್ನು ಮಾಡುತ್ತಿದ್ದೇನೆ. ಅದು ನನಗೆ ಸಿದ್ಧಿಯಾಗುವಂತೆ ಕರುಣಿಸು’ ಎಂಬ ಅರ್ಥ ಕೊಡುವ ಈ ಪದ್ಯದಲ್ಲಿ ವಿದ್ಯಾರಂಭಕ್ಕೆ ಶಾರದೆಯಂತೆಯೇ ಸರಸ್ವತಿಯನ್ನೂ ಪ್ರಾರ್ಥಿಸಲಾಗಿದೆ. ಶಾರದೆ-ಸರಸ್ವತಿಯರು ಒಂದೇ ಶಕ್ತಿಯ ಎರಡು ರೂಪಗಳು ಎಂಬುದನ್ನು, ‘ಶಾರದೇ ಶರದಭ್ರಸಿತಾಂಗೇ ನೌಮಿ ಸರಸ್ವತಿ ನಾದತರಂಗಿತಪಾವನಗಂಗೇ||’ ಎಂಬುದಾಗಿ ಕವಿವರೇಣ್ಯರೊಬ್ಬರು ಶಾರದಾ ಸರಸ್ವತಿಯರನ್ನು ಏಕರೂಪದಲ್ಲಿ ಸ್ತುತಿಸಿದ್ದಾರೆ.

ಇನ್ನೊಂದು ಮಂತ್ರದಲ್ಲಿ ಋಷಿಯೊಬ್ಬ ಪರಿಶುದ್ಧವಾದ, ಜ್ಞಾನಸ್ವರೂಪಿಣಿಯಾದ ಸರಸ್ವತಿಯನ್ನು ಹೀಗೆ ಸ್ತುತಿಸಿದ್ದಾನೆ.

‘ಪ್ರಣೋದೇವೀ ಸರಸ್ವತೀ ವಾಜೇಭಿರ್ವಾಜಿನೀವತೀ| ಧೀನಾಮವಿತ್ರ್ಯವತು||’

‘ಜ್ಞಾನಶಕ್ತಿಯ ಮೂಲಕ ಪಡೆದ ಬುದ್ಧಿಶಕ್ತಿಯನ್ನು ರಕ್ಷಿಸುವ ದೇವಿ ಸರಸ್ವತಿಯು ನಮ್ಮೆಲ್ಲರ ಬುದ್ಧಿಯನ್ನು ಕಾಪಾಡಲಿ’.

ನಮಸ್ತೇ ಶಾರದೇ ದೇವಿ ಸರಸ್ವತಿ ಮತಿಪ್ರದೇ|

ವಸ ತ್ವಂ ಮಮ ಜಿಹ್ವಾಗ್ರೇ ಸರ್ವವಿದ್ಯಾ ಪ್ರದಾ ಭವ||

ಇಷ್ಟೆಲ್ಲ ಒಳಿತುಗಳನ್ನು ಮಾಡುವ ಶಾರದೆಯು ನಮ್ಮ ನಾಲಿಗೆಯ ತುದಿಯಲ್ಲಿಯೇ ನೆಲೆಸಲಿ ಎಂಬ ಭಾವದಿಂದ ‘ಹೇ ಶಾರದೆಯೇ ನೀನು ನನ್ನ ನಾಲಗೆಯಲ್ಲಿಯೇ ವಾಸಮಾಡು’ ಎಂಬುದಾಗಿ ಮತ್ತೊಬ್ಬ ಭಕ್ತಕವಿ ಭಗವತಿಯಲ್ಲಿ ನಿವೇದಿಸಿಕೊಳ್ಳುತ್ತಾನೆ. ಓಂಕಾರ ರೂಪಿಣಿ ಶಾರದೆ, ವಾಗ್ದೇವತಾ, ವಾಗೀಶ್ವರೀ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ವಾಗ್ದೇವಿಯು ನಮಗೆ ಸದಾ ಜ್ಞಾನಾಮೃತವನ್ನು ಉಣಿಸುವಂತಾಗಲಿ, ಜ್ಞಾನಮಯವಾದ ಆನಂದವನ್ನು ನಾವು ಸರ್ವದಾ ಅನುಭವಿಸುವಂತಾಗಲಿ.

ಶಾರದೆಯ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ

ಜ್ಞಾನಾರಾಧನೆ ಮನುಷ್ಯನ ಜೀವನದ ಆದ್ಯಕರ್ತವ್ಯ. ಅಜ್ಞಾನದ ಕತ್ತಲೆಯ ಕೂಪರೂಪದ ಬದುಕಿನಲ್ಲಿ ಜ್ಞಾನದ ಬೆಳಕನ್ನು ಯಥಾಸಾಧ್ಯ ತುಂಬಿಕೊಳ್ಳಬೇಕೆಂಬುದು ಅವನ ಹಂಬಲ. ಅದಕ್ಕಾಗಿಯೇ ಮನುಷ್ಯ ಜ್ಞಾನಾರಾಧನೆಯನ್ನು ಮಾಡಬಯಸುತ್ತಾನೆ. ಅದಕ್ಕೊಂದು ಆರಂಭವೇ ಅಕ್ಷರಾಭ್ಯಾಸ. ಅದು ದೇವತಾಸನ್ನಿಧಿಯಲ್ಲಿಯೇ ಆಗಲೆಂಬುದು ಆತನ ಆಶಯ. ಯಾಕೆಂದರೆ ಅವನ ಎಲ್ಲ ಚಟುವಟಿಕೆಗಳಿಗೂ ಮೂಲ ಎಂದು ಆತ ನಂಬಿದ್ದು ದೈವಶಕ್ತಿಯನ್ನು ಮಾತ್ರ. ಹಾಗಾದರೆ ಯಾವ ದೇವರ ಸನ್ನಿಧಿಯಲ್ಲಿ? ಸಹಜವಾಗಿಯೇ ಜ್ಞಾನದೇವತೆ ಶಾರದೆಯ ಸನ್ನಿಧಿ ನೆನಪಾಗುತ್ತದೆ. ಅಕ್ಷರಾಭ್ಯಾಸಕ್ಕಾಗಿ ಶುಭದಿನವೊಂದನ್ನು ನಿಶ್ಚಯಿಸಿ, ಭಗವತಿ ಶಾರದೆಯ ಮಂದಿರಕ್ಕೆ ಬಂದು, ಶಾರದೆಗೆ ಪೂಜೆ, ಅರ್ಚನೆ, ನೈವೇದ್ಯಗಳನ್ನು ಅರ್ಪಿಸಿ, ಹರಿವಾಣದಲ್ಲಿ ಅಕ್ಕಿಯನ್ನು ತುಂಬಿಸಿ ಅದರಲ್ಲಿ ಅರಿಶಿನದ ಕೊಂಬಿನಿಂದ ಮೊದಲ ಅಕ್ಷರವನ್ನು ಬರೆಯುತ್ತಾನೆ. ಅಲ್ಲಿಂದ ಆತನ ಜ್ಞಾನಾರಾಧನೆಯ ಕಾರ್ಯ ಆರಂಭವಾಗುತ್ತದೆ. ಭವಿಷ್ಯದಲ್ಲಿ ಗಳಿಸುವ ಎಲ್ಲ ವಿದ್ಯೆಗಳಿಗೂ ಇದೇ ಅಡಿಪಾಯ ಎಂಬುದು ಅವನ ದೃಢವಾದ ನಂಬಿಕೆ.