ದೊಡ್ಡ ದೊಡ್ಡ ರಿಯಾಲಿಟಿ ಶೋಗಳಲ್ಲಿ ಎಲ್ಲ ಪ್ರತಿಭೆಗಳಿಗೂ ಅವಕಾಶ ದೊರೆಯುವುದಿಲ್ಲ. ಕೆಲವೊಮ್ಮೆ ಸಿಗುವ ವೇದಿಕೆಗಳನ್ನು ಸರಿಯಾಗಿ ಬಳಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹೀಗಿರುವಾಗ ತಾವೇ ವೇದಿಕೆಗಳನ್ನು ನಿರ್ವಿುಸಿಕೊಂಡು ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಮನೆ ಮಾತಾಗಿರುವ ಮೂವರು ಬಾಲ ಗಾಯಕಿಯರ ಮಾಹಿತಿ ಇಲ್ಲಿದೆ.
ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಕೆಲ ಪ್ರತಿಭೆಗಳು ಬೇಗ ಬೆಳಕಿಗೆ ಬರುತ್ತವೆ, ಇನ್ನು ಕೆಲ ಪ್ರತಿಭೆಗಳು ತಡವಾಗಿ ಬೆಳಕಿಗೆ ಬರಬಹುದು. ಅಂತಹ ಎಲೆಮರೆಯ ಕಾಯಿಯಂತಿರುವ ಶ್ರೇಷ್ಠ ಆಳ್ವ ಪುತ್ತೂರು, ಪ್ರಸೀದಾ ಪಿ ರಾವ್ ಧರ್ಮಸ್ಥಳ ಮತ್ತು ದಿಯಾ ರಾವ್ ಮಂಗಳೂರು ಅವರ ಸಂಗೀತ ಪಯಣದ ಬಗ್ಗೆ ಅರಿಯೋಣ.
ಆಧುನಿಕ ಯುಗದಲ್ಲಿ ಬಾಲಪ್ರತಿಭೆಗಳಿಗೆ ಸಾಕಷ್ಟು ವೇದಿಕೆ ಸೃಷ್ಟಿಯಾಗಿವೆ. ಅವುಗಳಲ್ಲದೇ ಸಾಮಾಜಿಕ ಮಾಧ್ಯಮಗಳೂ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿವೆ. ಯೂಟ್ಯೂಬ್ ಎಂಬ ಸಾಮಾಜಿಕ ಮಾಧ್ಯಮದಿಂದ ಜೀವನ ರೂಪಿಸಿಕೊಂಡ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅದೇ ರೀತಿ ಈ ಮೂವರು ಗಾಯಕಿಯರು ಯೂಟ್ಯೂಬ್ ಚಾನಲ್ ಮೂಲಕ ತಮ್ಮ ಸಂಗೀತ ಪಯಣ ಆರಂಭಿಸಿದ್ದಾರೆ.
ಶ್ರೇಷ್ಠ ಆಳ್ವ, ಪ್ರಸೀದಾ ಪಿ ರಾವ್ ಹಾಗೂ ದಿಯಾ ರಾವ್ ಮೂವರೂ ಬೇರೆ ಬೇರೆ ಊರಿನವರಾದರೂ, ಇಂದು ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಕೆಲ ವರ್ಷಗಳ ಹಿಂದೆ ಪುತ್ತೂರಿನಲ್ಲಿ ಸಂಸ್ಕೃತಸಿರಿ ಆಯೋಜಿಸಿದ್ದ ‘ದೇವರ ಮಕ್ಕಳು’ ಎಂಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ಮೂವರ ಸಂಗಮವಾಗಿ ಅಂದೇ ಗೆಳೆತನ ಆರಂಭವಾಯಿತು. ಅಂದಿನಿಂದ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾ ‘ಸ್ವರ ತ್ರಿವೇಣಿ’ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಮಾಡಿಕೊಂಡು ಸಂಗೀತದ ರಥ ಎಳೆಯುತ್ತಿದ್ದಾರೆ.
ಈ ಮೂವರು ಹಾಡಿರುವ ಐಗಿರಿ ನಂದಿನಿ, ತೆರಿ ಮಿಟ್ಟಿ ಕನ್ನಡ ವರ್ಷನ್, ಜಯ ಜನಾರ್ದನ, ಬ್ರಹ್ಮಮುರಾರಿ, ಅಯ್ಯಪ್ಪ ಸ್ವಾಮಿಯ ಹರಿವರಾಸನಂ, ಅಚ್ಯುತಂ ಕೇಶವಂ, ರಘುಪತಿ ರಾಘವ ರಾಜಾರಾಮ- ಮುಂತಾದವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗಿವೆ. ಇವರ ಸಂಗೀತಪ್ರೀತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಅನೇಕ ಮಠ, ಸಂಘ- ಸಂಸ್ಥೆಗಳಿಂದ ಗೌರವ ಸಂದಿದೆ.
- ಹರೀಶ್ ಆಳ್ವ ಮತ್ತು ಉಷಾ ಆಳ್ವ ಇವರ ದ್ವಿತೀಯ ಪುತ್ರಿಯಾದ ಶ್ರೇಷ್ಠ ಆಳ್ವ ಪ್ರಸ್ತುತ ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಪ್ರೌಢ ಶಿಕ್ಷಣ ಓದುತ್ತಿದ್ದಾರೆ. ಸಂಗೀತದ ಜತೆಗೆ ಭರತನಾಟ್ಯ ಅಭ್ಯಸಿಸುತ್ತಿರುವ ಇವರು ‘ಪೆನ್ಸಿಲ್ ಬಾಕ್ಸ್’ ಚಲನಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಮುಂದೆ ಮೆಡಿಕಲ್ ಫಾರ್ಮಸಿ ಮಾಡಬೇಕೆಂದುಕೊಂಡಿದ್ದಾರೆ. ಹಾಗಂತ ಸಂಗೀತ ಕ್ಷೇತ್ರ ತೊರೆಯುವುದಿಲ್ಲ ಎನ್ನುತ್ತಾರೆ.
- ಪ್ರಸನ್ನ ರಾವ್ ಹಾಗೂ ದಿವ್ಯಾ ದಂಪತಿಯ ಜೇಷ್ಠಪುತ್ರಿಯಾದ ಪ್ರಸೀದಾ ರಾವ್ ಎಸ್ಡಿಎಂ ಉಜಿರೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದಾರೆ. ಸಂಗೀತದಲ್ಲಿ ಜೂನಿಯರ್ ಮುಗಿಸಿ ಪ್ರಸ್ತುತ ಸೀನಿಯರ್ ಅಭ್ಯಾಸ ಮಾಡುತ್ತಿದ್ದಾರೆ. ಸಂಗೀತದ ಜತೆಗೆ ಭರತನಾಟ್ಯ ಹಾಗೂ ವಯಲಿನ್ ಅನ್ನೂ ಅಭ್ಯಾಸ ಮಾಡುತ್ತಿದ್ದಾರೆ. ಗಾಯನ ಲೋಕದಲ್ಲಿ ಹೆಸರು ಮಾಡುವುದರ ಜತೆಗೆ ಹಿನ್ನೆಲೆ ಗಾಯಕಿಯಾಗಬೇಕೆಂಬ ಕನಸು ಕಂಡಿದ್ದಾರೆ.
- ಪ್ರದೀಪ್ ಕುಮಾರ್ ಮತ್ತು ಸಿಂಧು ರಾವ್ ಇವರ ದ್ವಿತೀಯ ಪುತ್ರಿಯಾದ ದಿಯಾ ರಾವ್ ಮಂಗಳೂರಿನ ಸೇಂಟ್ ಮೇರೀಸ್ನಲ್ಲಿ ಪ್ರೌಢ ಶಿಕ್ಷಣ ಅಭ್ಯಾಸ ಮಾಡುತ್ತಿದ್ದಾರೆ. ಕರ್ನಾಟಕ ಸಂಗೀತದಲ್ಲಿ ಜೂನಿಯರ್ ಮುಗಿಸಿ ಈಗ ಸೀನಿಯರ್ ವಿಭಾಗದಲ್ಲಿ ಕಲಿಯುತ್ತಿದ್ದಾರೆ. ಭರತನಾಟ್ಯದ ಜತೆಗೆ ಈಜು ಸ್ಪರ್ಧೆ, ಓಟದ ಸ್ವರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರು ಪೆಪ್ಪರೇರೆ ಪೆರೇರೆರೆ ತುಳು ಸಿನಿಮಾದಲ್ಲಿ ಹಾಡಿದ್ದು, ಮುಂದೆ ವೆಟರ್ನರಿ ವೈದ್ಯೆ ಹಾಗೂ ಹಿನ್ನೆಲೆ ಗಾಯಕಿ ಆಗಬೇಕು ಎಂದುಕೊಂಡಿದ್ದಾರೆ.
- ದಕ್ಷಿಣ ಕನ್ನಡದ ಈ ಪ್ರತಿಭೆಗಳು ಇಂದು ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇವರ ಸುಮಧುರ ಕಂಠ ಹಾಗೂ ಸಂಗೀತದಲ್ಲಿ ಮಾಡುವ ವಿಭಿನ್ನವಾದ ಪ್ರಯತ್ನಕ್ಕೆ ಲಕ್ಷಾಂತರ ಅಭಿಮಾನಿಗಳು ಮನಸೋತಿದ್ದಾರೆ. ನೂರಾರು ವೇದಿಕೆಗಳಲ್ಲಿ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಾ ಭೇಷ್ ಎನಿಸಿಕೊಳ್ಳುತ್ತಿದ್ದಾರೆ.