ಇದನ್ನು ಕೇಳಿದ ಪೂನಂ, ‘ರಾಜೇಶ್, ನಿನ್ನ ಸ್ನೇಹಿತನನ್ನು ನಾನು ಮದುವೆಯಾಗಬೇಕೆಂದು ಅಪೇಕ್ಷಿಸುತ್ತಿದ್ದರೆ ಅದು ನಿನ್ನ ಮೂರ್ಖತನ. ನಾನು ಸಿನಿಮಾದಲ್ಲಿ ನಾಯಕಿಯಾಗುವವರೆಗೆ ಮದುವೆಯಾಗುವುದಿಲ್ಲ ಎಂದು ತೀರ್ವನಿಸಿರುವೆ. ಒಂದು ವೇಳೆ ಎರಡು ವರ್ಷಗಳ ನಂತರವೂ ನನಗೆ ನಾಯಕಿಯ ಪಾತ್ರವು ದೊರೆಯದಿದ್ದರೆ ಆಗ ನೋಡೋಣ’ ಎಂದಳು. ‘ಪೂನಂ, ನನ್ನ ಮಾತನ್ನು ಇನ್ನೂ ಪೂರ್ತಿಯಾಗಿ ನಿನಗೆ ವಿವರಿಸಿಲ್ಲ. ನೀನು ದರ್ಶನ್ನನ್ನು ಮದುವೆ ಮಾಡಿಕೊಂಡು ಅವನೊಡನೆ ಸಂಸಾರ ನಡೆಸೆಂದು ನಾನು ಹೇಳುತ್ತಿಲ್ಲ. ನೀನು ಮಾಡಬೇಕಾದ್ದಿಷ್ಟೇ, ದರ್ಶನ್ನೊಡನೆ ಮದುವೆ ಮಾಡಿಕೊಳ್ಳುವ ನಾಟಕವಾಡಬೇಕಷ್ಟೇ. ಅವನ ಮಾತಾಪಿತರ ತೃಪ್ತಿಗೆಂದು ಈಗ ಅವನ ಮದುವೆ ಮಾಡಿಕೋ. ಹದಿನೈದು ದಿನಗಳ ಕಾಲ ಅವನ ಪತ್ನಿಯಂತೆ ಅವನ ಮನೆಯಲ್ಲಿ ಇರು. ಆನಂತರ ನೀನು ಇಲ್ಲಿಗೆ ವಾಪಸ್ ಬರುವೆಯಂತೆ. ಮುಂದೆ ನಿನ್ನ ದಾರಿ ನಿನಗೆ, ಅವನ ದಾರಿಗೆ ಅವನಿಗೆ’ ಎಂದ.
‘ರಾಜೇಶ್, ನಿನ್ನ ಪ್ರಪೋಸಲ್ ಯಾವುದೋ ಸಿನಿಮಾದ ಕಥೆಯಂತಿದೆ. ಇಂತಹ ಕಥೆಗಳು ತೀರಾ ಹಳೆಯದಾಗಿವೆ, ಈಗ ಚಾಲ್ತಿಯಲ್ಲಿಲ್ಲ’ ಎಂದು ನಕ್ಕಳು ಪೂನಂ. ‘ನಾನು ಬಹಳ ಸೀರಿಯಸ್ ಆಗಿ ಮಾತನಾಡುತ್ತಿರುವೆ. ಒಂದು ಕುಟುಂಬದ ಕಲ್ಯಾಣವನ್ನು ಮಾಡುವುದು ನಿನ್ನ ಕೈಯಲ್ಲಿದೆ, ಇಲ್ಲ ಎನ್ನಬೇಡ’ ಎಂದ ರಾಜೇಶ್. ದೀಪಿಕಾಳೂ ‘ಪೂನಂ, ನೀನು ಟಿ.ವಿ ಧಾರಾವಾಹಿಯಲ್ಲಿ ನಟಿಸುವಂತೆಯೇ ಇಲ್ಲೂ ನಟಿಸಬೇಕು, ಅಷ್ಟೇ’ ಎಂದು ಅವಳನ್ನು ನಕಲಿ ಮದುವೆಗೆ ಒಪ್ಪಲು ಬಲವಂತ ಮಾಡಿದಳು. ಕಡೆಗೆ ಮನಕರಗಿದ ಪೂನಂ, ‘ಆಗಲಿ, ಒಂದು ವೇಳೆ ನಿಮ್ಮ ಮಾತಿಗೊಪ್ಪಿ ದರ್ಶನ್ನನ್ನು ಲಗ್ನವಾಗುವ ನಾಟಕವಾಡಿದರೆ ನನಗೇನು ಲಾಭ?’ ಎಂದು ಕೇಳಿದಳು. ‘ನೀನು ಸದ್ಯ ಪ್ರತಿ ತಿಂಗಳೂ ಅಂದಾಜು ಐದು ಲಕ್ಷ ರೂಪಾಯಿ ಸಂಪಾದಿಸುತ್ತಿರಬಹುದು. ಹದಿನೈದು ದಿನಗಳ ಕಾಲ ನೀನು ದರ್ಶನ್ನ ಪತ್ನಿಯಂತೆ ನಟಿಸಿ ಅವನ ಜತೆಯಿದ್ದರೆ ನಿನಗೆ ಐದು ಲಕ್ಷ ರೂ ಕೊಡುತ್ತಾನೆ, ಅಡ್ವಾನ್ಸ್ ಎರಡು ಲಕ್ಷ ಇಲ್ಲಿದೆ’ ಎಂದ ರಾಜೇಶ್ ಅವಳ ಕೈಗೆ 500 ರೂ. ನೋಟುಗಳ ಐದು ಕಂತೆಗಳನ್ನಿತ್ತ.
‘ನನ್ನದೊಂದು ಷರತ್ತಿದೆ. ದರ್ಶನ್ ನನ್ನೊಡನೆ ದೈಹಿಕ ಸಂಪರ್ಕ ಮಾಡಬಾರದು. ಆತನೇನಾದರೂ ನಾನವನ ಹೆಂಡತಿಯೆಂದು ಇಂತಹ ಪ್ರಯತ್ನ ಮಾಡಹೊರಟರೆ ಅದೇ ಕ್ಷಣ ನಾನು ಊರಿಗೆ ವಾಪಸಾಗುವೆ’ ಎಂದಳು. ಇದಕ್ಕೊಪ್ಪಿದ ರಾಜೇಶ್ ದಂಪತಿ ಮಾರನೆಯ ದಿನವೇ ದರ್ಶನ್ನನ್ನು ಪೂನಂಗೆ ಭೆಟ್ಟಿ ಮಾಡಿಸಿದರು. ಆಕೆ ತನ್ನ ಷರತ್ತುಗಳನ್ನು ಅವನಿಗೆ ವಿವರಿಸಿದಳು. ಆತ ಒಪ್ಪಿದ ನಂತರ ಅವನ ಊರಿಗೆ ಹೋಗಲು ತಯಾರಾದಳು. ಮುಂದಿನ ವಾರ ಪೂನಂ, ದೀಪಿಕಾ ಮತ್ತು ರಾಜೇಶ್ ಸ್ನೇಹಿತರ ಜತೆಗೂಡಿ ದರ್ಶನ್ನ ಊರಿಗೆ ಹೋದರು. ಅದೇ ಸಂಜೆ ಆ ಮೂವರೂ ದರ್ಶನ್ನ ಮಾತಾಪಿತರನ್ನು ಭೇಟಿಯಾದರು. ರಾಜೇಶ್ ಪೂನಂಳನ್ನು ತನ್ನ ಅವಿವಾಹಿತ ಸೋದರಿಯೆಂದು ಬಿಂಬಿಸಿದ. ದರ್ಶನ್ ತನ್ನ ಮನೆಯವರಿಗೆ ತಾನು ಪೂನಂಳನ್ನು ನಗರದಲ್ಲಿ ಭೇಟಿ ಮಾಡಿರುವುದಾಗಿಯೂ ತಾವಿಬ್ಬರೂ ಲಗ್ನವಾಗಲು ಒಪ್ಪಿರುವುದಾಗಿಯೂ ತಿಳಿಸಿದ. ದರ್ಶನ್ನ ಮಾತಾಪಿತರ ಆನಂದಕ್ಕೆ ಪಾರವೇ ಇರಲಿಲ್ಲ. ಸ್ಪುರದ್ರೂಪಿ ಯುವತಿ ದರ್ಶನ್ನನ್ನು ಲಗ್ನವಾಗಲು ಒಪ್ಪಿದ್ದನ್ನು ಕೇಳಿ ಅವರು ಹಿಗ್ಗಿಹೋದರು. ಶುಭಸ್ಯ ಶೀಘ್ರಂ ಎಂಬಂತೆ ಮಾರನೆಯ ದಿನವೇ ಲಗ್ನ ಮಾಡಿಬಿಡೋಣ ಎಂದರು. ಎಲ್ಲರೂ ಇದಕ್ಕೊಪ್ಪಿದರು. ಹತ್ತಿರದ ಸಂಬಂಧಿಕರ ಸಮ್ಮುಖದಲ್ಲಿ ದೇವಸ್ಥಾನವೊಂದರಲ್ಲಿ ಅವರಿಬ್ಬರ ಲಗ್ನವೂ ನಡೆದು ಹೋಯಿತು.
ಮದುವೆಯಾದ ಪ್ರಥಮ ರಾತ್ರಿ ದರ್ಶನ್ ಬೇರೆಡೆಯೇ ಮಲಗಿದ. ಮಾರನೆಯ ಬೆಳಗ್ಗೆ ರಾಜೇಶ್ ಮತ್ತಿತರರು ದರ್ಶನ್ಗೆ ಹದಿನೈದು ದಿನಗಳ ನಂತರ ಪೂನಂಳನ್ನು ಊರಿಗೆ ಕಳಿಸಿಕೊಡಬೇಕೆಂದೂ, ಕಳಿಸುವ ಮುನ್ನ ಆಕೆಗೆ ಕೊಡಬೇಕಾದ ಬಾಕಿ ಹಣವನ್ನು ಕೊಡಬೇಕೆಂದೂ ಹೇಳಿ ವಾಪಸಾದರು. ಆತ ಒಪ್ಪಿದ. ಗೆಳೆಯರೆಲ್ಲಾ ಊರಿಗೆ ಹೋದ ಮೇಲೆ ದರ್ಶನ್ನ ಮನ ಬದಲಾಯಿತು. ತಾನು ಹೇಗಿದ್ದರೂ ದೇವರ ಸಮ್ಮುಖದಲ್ಲಿ ಪೂನಂಳನ್ನು ತಾಳಿ ಕಟ್ಟಿ ವಿವಾಹವಾಗಿದ್ದೇನೆ, ಅವಳಿಗೆ ಹಣವನ್ನೂ ಕೊಟ್ಟಿದ್ದೇನೆ. ಹೀಗಾಗಿ ಅವಳ ದೇಹದ ಮೇಲೆ ತನಗೆ ಹಕ್ಕಿದೆ ಎಂದು ಆತ ರ್ತಸಿದ. ಇಂತಹ ಸುಂದರ ಯುವತಿ ತನ್ನವಳಾಗಿರುವಾಗ ಏಕೆ ಅವಳನ್ನು ಅನುಭವಿಸಬಾರದು ಎಂದಾತ ಯೋಚಿಸಿದ.
ಆ ದಿನ ದರ್ಶನ್ ಪೂನಂಳನ್ನುದ್ದೇಶಿಸಿ, ‘ಹೇಗಿದ್ದರೂ ನಾವು ಮದುವೆಯಾಗಿರುವುದರಿಂದ ಗಂಡ ಹೆಂಡಿರಂತೆ ನಾಟಕವನ್ನೇಕೆ ಆಡಬೇಕು? ಗಂಡಹೆಂಡಿರಾಗಿಯೇ ಬಾಳೋಣ, ನೀನೇನೂ ಊರಿಗೆ ವಾಪಸಾಗಬೇಕಿಲ್ಲ, ನನ್ನೊಡನೆಯೇ ಇದ್ದುಬಿಡು’ ಎಂದ. ಈ ಮಾತು ಕೇಳಿ ಪೂನಂ ಹೌಹಾರಿದಳು. ‘ನೀನು ನನ್ನನ್ನು ಪತ್ನಿಯೆಂದು ಸ್ವೀಕರಿಸಿರಬಹುದು, ಆದರೆ ನಾನು ನಿನ್ನನ್ನು ಪತಿಯೆಂದು ಸ್ವೀಕರಿಸಲಾರೆ. ಟಿ.ವಿ ಧಾರಾವಾಹಿಯಲ್ಲಿ ನಟನೆ ಮಾಡುವಂತೆ ನಾನು ನಟಿಸಿರುವೆನೇ ಹೊರತು, ನಿನಗೆ ನನ್ನ ಮೇಲೆ ಯಾವುದೇ ಹಕ್ಕಿಲ್ಲ’ ಎಂದಳು. ‘ನಾನು ನಿನ್ನೊಡನೆ ಮಾಡಿಕೊಂಡ ಒಪ್ಪಂದದಂತೆ ಇನ್ನು ಹದಿಮೂರು ದಿನಗಳು ಮಾತ್ರ ಇಲ್ಲಿರುವೆ, ನನಗೆ ಕೊಡಬೇಕಾದ ಬಾಕಿ ಹಣವನ್ನು ಕೊಟ್ಟು ನಗರಕ್ಕೆ ಕಳಿಸು’ ಎಂದಳು. ದರ್ಶನ್ ಒಪ್ಪಲಿಲ್ಲ. ಮುಂದೇನಾಗುತ್ತದೋ ನೋಡೋಣ ಎಂದು ಪೂನಂ ಸುಮ್ಮನಾದಳು.
ಅದೇ ರಾತ್ರಿ ದರ್ಶನ್ ಆಕೆಯನ್ನು ಅಪ್ಪಿಕೊಂಡು ಅನುಭವಿಸಲು ಹೊರಟ. ಕಷ್ಟಪಟ್ಟು ಅವನಿಂದ ಬಿಡಿಸಿಕೊಂಡ ಪೂನಂ ತನ್ನ ಫೋನ್ ಮೂಲಕ ರಾಜೇಶ್ನನ್ನು ಸಂರ್ಪಸಿ ಅವನಿಗೆ ವಿಷಯ ತಿಳಿಸಲು ಹೊರಟಾಗ ದರ್ಶನ್ ಫೋನನ್ನು ಕಸಿದುಕೊಂಡು ಮುರಿದು ಹಾಕಿದ. ‘ನಡೆದ ವಿಷಯವನ್ನು ನಾನು ನಿನ್ನ ಮಾತಾಪಿತರಿಗೆ ತಿಳಿಸುವೆ’ ಎಂದು ಪೂನಂ ಹೇಳಿದಾಗ, ‘ಸಾರಿ, ನಾನು ಮಾಡಿದ ಕೆಲಸಕ್ಕೆ ಪಶ್ಚಾತ್ತಾಪವಾಗಿದೆ, ನಿನ್ನನ್ನು ಈಗಲೇ ಊರಿಗೆ ಕಳಿಸುವೆ, ಬಾ ಬಸ್ಸ್ಟಾ್ಯಂಡಿಗೆ ಬಿಡುತ್ತೇನೆ’ ಎಂದು ಅವಳನ್ನು ಕರೆದುಕೊಂಡು ಹೊರಟ. ಬಸ್ ನಿಲ್ದಾಣಕ್ಕೆ ಹೋಗುವ ಬದಲು ತನ್ನ ಸಂಬಂಧಿಕರೊಬ್ಬರ ಖಾಲಿಯಿದ್ದ ಮನೆಗೆ ಹೋಗಿ ಅಲ್ಲಿನ ಕೋಣೆಯೊಂದರಲ್ಲಿ ಅವಳನ್ನು ಕೂಡಿಹಾಕಿದ.
ಪೂನಂಗೆ ಏನು ಮಾಡುವುದೆಂದೇ ತೋಚಲಿಲ್ಲ. ಮಾರನೆಯ ಬೆಳಿಗ್ಗೆ ಅವಳು ಕೋಣೆಯ ಕಿಟಕಿಯ ಮೂಲಕ ತರಕಾರಿ ಮಾರುವವಳೊಬ್ಬಳನ್ನು ನೋಡಿ ಅವಳನ್ನು ಹತ್ತಿರಕ್ಕೆ ಕರೆದು ತನ್ನನ್ನು ಬಂಧನದಲ್ಲಿಟ್ಟಿರುವ ಬಗ್ಗೆ ತಿಳಿಸಿದಳು. ಅವಳ ಮೊಬೈಲ್ ಎರವಲು ಪಡೆದು ನಡೆದ ವಿಷಯವನ್ನು ಗೆಳತಿ ದೀಪಿಕಾಗೆ ತಿಳಿಸಿದಳು. ಗಾಬರಿಯಾದ ದೀಪಿಕಾ ಮತ್ತು ರಾಜೇಶ್, ದರ್ಶನ್ ಇದ್ದ ಊರಿಗೆ ಧಾವಿಸಿ ಅಲ್ಲಿನ ಪೊಲೀಸ್ ಠಾಣೆಗೆ ಹೋಗಿ ನಡೆದ ವಿಷಯವನ್ನು ತಿಳಿಸಿದರು. ಅಪಹರಣದ ದೂರು ದಾಖಲು ಮಾಡಿಕೊಂಡ ಅಲ್ಲಿನ ಠಾಣಾಧಿಕಾರಿ ಸಿಬ್ಬಂದಿಯೊಡನೆ ದರ್ಶನ್ನ ಮನೆಗೆ ಧಾವಿಸಿದರು. ಆದರೆ, ದರ್ಶನ್ ಮನೆಯಲ್ಲಿರಲಿಲ್ಲ. ಅವನ ಕುಟುಂಬದವರಿಗೆ ಪೂನಂಳ ಅಪಹರಣವಾಗಿದೆ ಎಂದು ತಿಳಿಸಿದ ಪಿಎಸ್ಐ ಅವರ ಮನೆಯನ್ನು ಶೋಧಿಸಿದರು. ಪೂನಂ ಅಲ್ಲಿರಲಿಲ್ಲ.
ನಂತರ ದೀಪಿಕಾಳ ಫೋನಿಗೆ ಬಂದಿದ್ದ ತರಕಾರಿ ಮಾರುವವಳ ಮೊಬೈಲ್ ನಂಬರ್ ಮೂಲಕ ಆ ಮಹಿಳೆಯನ್ನು ಪತ್ತೆ ಮಾಡಿದರು. ಅವಳ ಸಹಾಯದಿಂದ ಪೂನಂಳನ್ನು ಬಂಧನದಲ್ಲಿಟ್ಟಿದ್ದ ರೂಮನ್ನು ಪತ್ತೆ ಮಾಡಿದರು. ರೂಮಿನ ಬೀಗ ಒಡೆದು ಪೂನಂಳನ್ನು ರಕ್ಷಿಸಿ ಅಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ, ಆನಂತರ ಅವಳ ಹೇಳಿಕೆಯನ್ನು ಪಡೆದು ನಗರಕ್ಕೆ ಕಳಿಸಿದರು. ಏತನ್ಮಧ್ಯೆ ಪೊಲೀಸರು ತನ್ನ ಮನೆಗೆ ಬಂದಿದ್ದ ಮಾಹಿತಿ ತಿಳಿದ ದರ್ಶನ್ ಹೆದರಿ ಪರಾರಿಯಾದ. ಆರು ತಿಂಗಳವರೆಗೆ ಆತ ಪೊಲೀಸರಿಂದ ತಪ್ಪಿಸಿಕೊಂಡ. ಆನಂತರ ತಾನಾಗಿ ನ್ಯಾಯಾಲಯಕ್ಕೆ ಶರಣಾದ. ಅವನನ್ನು ಬಂಧಿಸಿ ಅಪಹರಣ, ರೇಪ್, ಅಕ್ರಮ ಬಂಧನ ಮತ್ತು ಮೋಸದ ಆರೋಪವಿರುವ ಆರೋಪ ಪಟ್ಟಿಯನ್ನು ಸಲ್ಲಿಸಲಾಯಿತು. ತನ್ನ ಕಕ್ಷಿದಾರ ಪೂನಂಳನ್ನು ಅಪಹರಿಸಿಲ್ಲ, ಅವಳು ಸ್ವಯಂಪೂರ್ವಕವಾಗಿಯೇ ಅವನನ್ನು ಮದುವೆಯಾದಳೆಂದು ದರ್ಶನ್ನ ವಕೀಲರು ವಾದಿಸಿದರು. ಪೂನಂಳನ್ನು ಅಕ್ರಮ ಬಂಧನದಲ್ಲಿಟ್ಟು ಅವಳ ಇಚ್ಛೆಗೆ ವಿರುದ್ಧ ಅವಳನ್ನು ರೇಪ್ ಮಾಡಲು ಪ್ರಯತ್ನಿಸಿದ ಅಪರಾಧಕ್ಕೆ ನ್ಯಾಯಾಧೀಶರು ದರ್ಶನ್ಗೆ ಐದು ವರ್ಷಗಳ ಕಾರಾಗೃಹವಾಸ ನೀಡಿದರು. ‘ವಿಶ್ವವನ್ನು 3 ಭಾರಿ ಬಲಗಳು ಆಳುತ್ತವೆ-ಮೂರ್ಖತನ, ಹೆದರಿಕೆ ಮತ್ತು ದುರಾಸೆ’ ಎಂದಿದ್ದಾನೆ ಖ್ಯಾತ ವಿಜ್ಞಾನಿ ಐನ್ಸ್ಟೈನ್. ದರ್ಶನ್ ತನ್ನ ಮೂರ್ಖತನ ಮತ್ತು ದುರಾಸೆಯಿಂದಲೇ ತೊಂದರೆಗೀಡಾಗಬೇಕಾಯಿತು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)