ಅಂಕಣ

ಮತಾಂತರ ತಂದ ಅವಾಂತರ: ಆ ಕ್ಷಣ ಅಂಕಣ..

Webdesk - Ravikanth
ಅರವತ್ತು ವರ್ಷದ ಗೋಪಿಕೃಷ್ಣ ಬಡ ಕುಟುಂಬದಲ್ಲಿ ಜನಿಸಿದವ. ಅವಿರತ ಪರಿಶ್ರಮ ಮತ್ತು ಛಲದ ಫಲವಾಗಿ ನಿಧಾನವಾಗಿ ಯಶಸ್ಸಿನ ಸೋಪಾನಗಳನ್ನೇರುತ್ತಾ ತನ್ನ 40 ವರ್ಷಕ್ಕೆ ಶ್ರೀಮಂತಿಕೆಯನ್ನು ಕಂಡ. ಹಲವಾರು ಉದ್ದಿಮೆಗಳನ್ನು ಸ್ಥಾಪಿಸಿ ನೂರಾರು ಜನರಿಗೆ ಅನ್ನ ಕೊಡುವಂತಾದ, ಐದಾರು ಮನೆಗಳ ಒಡೆಯನಾದ. ಅವನಿಗಿದ್ದದ್ದು ಒಂದೇ ಚಟ. ಸದಾ ಸ್ತ್ರೀಸಂಗ ಬಯಸುತ್ತಾ ವೇಶ್ಯೆಯರ ಮನೆಗಳಿಗೆ ಹೋಗುತ್ತಿದ್ದ. ಆತ ತನ್ನ 25ನೇ ವರ್ಷದಲ್ಲಿಯೇ ಮಾತಾಪಿತರು ನೋಡಿದ್ದ, ತನಗಿಂತ 10 ವರ್ಷ ಸಣ್ಣವಳಾದ ಯಮುನಾ ಎನ್ನುವವಳನ್ನು ಲಗ್ನವಾಗಿದ್ದ. ಅವರಿಗೆ ಇಬ್ಬರು ಮಕ್ಕಳಾದರು. ಮದುವೆಯಾದ ನಂತರವೂ ವೇಶ್ಯೆಯರ ಸಂಗವನ್ನು ಗೋಪಿಕೃಷ್ಣ ಮುಂದುವರಿಸಿದ್ದ ಕಾರಣ ಯಮುನಾ ಅವನಿಗೆ ಈ ಚಟವನ್ನು ಬಿಡಲು ಹೇಳಿದಳು.

ಆದರೆ ಸುಧಾರಿಸದ ಕಾರಣ ಅವನಿಗೆ ಅಸೂಯೆ ಬರಿಸಬೇಕೆಂತಲೋ ಅಥವಾ ಬೇರಾವುದೋ ಕಾರಣದಿಂದಲೋ ಯಮುನಾ ತನ್ನ ಗಂಡನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನೊಡನೆ ದೈಹಿಕ ಸಂಪರ್ಕ ಬೆಳೆಸಿದಳು. ಇದನ್ನರಿತ ಗೋಪಿಕೃಷ್ಣ ‘ಎರಡು ಮಕ್ಕಳ ತಾಯಿಯಾದ ನೀನು ಈ ರೀತಿಯ ಸಂಬಂಧ ಬೆಳೆಸಿ ನನಗೆ ಕೆಟ್ಟ ಹೆಸರು ತರುತ್ತಿರುವೆ’ ಎಂದು ಬೈದ. ಆಕೆ ಅವನ ಮಾತನ್ನು ಕೇಳಲಿಲ್ಲ. ಬೇಸತ್ತ ಗೋಪಿಕೃಷ್ಣ ತನ್ನ ಇನ್ನೊಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ನೌಕರನ ಪತ್ನಿಯಾದ ಗಂಗಾಳ ಜೊತೆ ಅನೈತಿಕ ಸಂಬಂಧ ಬೆಳೆಸಿ ಆಕೆಯನ್ನು ದೇವಸ್ಥಾನದಲ್ಲಿ ಮದುವೆಯಾದ. ಆಕೆಯ ಗಂಡನಿಗೆ ಧನಸಹಾಯ ಮಾಡಿದ. ಈ ಮದುವೆಗೆ ಯಮುನಾ ವಿರೋಧ ತೋರಿದಾಗ, ‘ನೀನು ಮಾಡಿದಂತೆಯೇ ನಾನೂ ಮಾಡಿದೆ’ ಎಂದ ಗೋಪಿಕೃಷ್ಣ.

ಯಮುನಾ ಮತ್ತು ಗಂಗಾಳನ್ನು ಗೋಪಿಕೃಷ್ಣ ಬೇರೆ ಬೇರೆ ಮನೆಗಳಲ್ಲಿಟ್ಟ. ಒಂದೊಂದು ವಾರ ಒಬ್ಬೊಬ್ಬ ಪತ್ನಿಯ ಮನೆಗೆ ಹೋಗುತ್ತಿದ್ದ. ಅವನಿಗೆ ಗಂಗಾಳಿಂದ ಮೂರು ಮಕ್ಕಳಾದವು. ಆ ಬಳಿಕ ಅವನಿಗೆ ಇಬ್ಬರೂ ಪತ್ನಿಯರು ಬೇಡವಾದರು. 20 ವರ್ಷದೊಳಗಿನವಳನ್ನು ಮದುವೆಯಾಗಬೇಕೆಂದು ಆಸೆಪಟ್ಟ ಗೋಪಿಕೃಷ್ಣ ತನ್ನ ಆಸೆಯನ್ನು ಆಪ್ತ ಗೆಳೆಯ ವಿಠಲನ ಜತೆ ತೋಡಿಕೊಂಡ. ವಿಠಲ ಈ ಮಾಹಿತಿಯನ್ನು ತನ್ನ ಗೆಳೆಯರಿಗೆ ತಿಳಿಸಿ ಕನ್ಯೆಯನ್ನು ಹುಡುಕಲು ತಿಳಿಸಿದ.

ಕೆಲದಿನಗಳ ನಂತರ ವಿಠಲ ಪಕ್ಕದ ಜಿಲ್ಲೆಯ ಇಬ್ಬರನ್ನು ಗೋಪಿಕೃಷ್ಣನ ಬಳಿಗೆ ಕರೆದುಕೊಂಡು ಬಂದ. ಅವರಲ್ಲೊಬ್ಬ, ‘ನಮ್ಮ ಗ್ರಾಮದಲ್ಲಿ 20 ವರ್ಷದ ಒಬ್ಬ ಹೆಣ್ಣು ಮಗಳಿದ್ದಾಳೆ. ಆಕೆಗೆ ಮದುವೆಯಾಗಿ ಕೇವಲ ಎರಡು ವರ್ಷಗಳಾಗಿದ್ದು, ಇತ್ತೀಚೆಗಷ್ಟೇ ಅವಳ ಗಂಡ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ. ಆಕೆಗೆ ಒಂದು ವರ್ಷದ ಮಗುವಿದೆ. ನೋಡಲು ಬಹಳ ಸುಂದರವಾಗಿದ್ದಾಳೆ, ಸುಶಿಕ್ಷಿತಳೂ, ಸುಶೀಲೆಯೂ ಆಗಿದ್ದಾಳೆ. ನೀವೇಕೆ ಅವಳನ್ನು ಮದುವೆಯಾಗಬಾರದು’ ಎಂದ. ಮಗುವಿರುವ ವಿಧವೆಯನ್ನು ಲಗ್ನವಾಗಲಾರೆ ಎಂದು ಗೋಪಿಕೃಷ್ಣ ಉತ್ತರಿಸಿದಾಗ ಆ ವ್ಯಕ್ತಿ, ಅವಳ ಫೋಟೋವನ್ನು ಒಮ್ಮೆ ನೋಡಿ ಆನಂತರ ತೀರ್ವನಿಸಿ ಎಂದ. ಫೋಟೋ ನೋಡಿದ ಗೋಪಿಕೃಷ್ಣ ವಿವರಗಳನ್ನು ಕೇಳಿದ.

ಆಕೆಯ ಹೆಸರು ಸೋನಿಯಾ ಎಂದಿದ್ದು, ಬೇರೆ ಧರ್ಮಕ್ಕೆ ಸೇರಿದವಳು ಎಂದು ತಿಳಿದಾಗ ಗೋಪಿಕೃಷ್ಣ ಹಿಂಜರಿಕೆ ತೋರಿಸಿದರೂ, ಆಕೆಯ ರೂಪದಿಂದ ಆಕರ್ಷಿತನಾಗಿ ಅವಳನ್ನು ನೋಡಲು ಒಪ್ಪಿದ. ಮಾರನೆಯ ದಿನವೇ ವಿಠಲನ ಜತೆಗೆ ಆತ ಅವಳಿದ್ದ ಊರಿಗೆ ಹೋದ. ಸೋನಿಯಾಗೆ ತಾಯಿತಂದೆಯರಿರದಿದ್ದ ಕಾರಣ ಆಕೆ ತನ್ನ ಸೋದರಮಾವನ ಮನೆಯಲ್ಲಿ ವಾಸಿಸುತ್ತಿದ್ದಳು. ಆಕೆಯನ್ನು ನೋಡಿದ ಕೂಡಲೇ ಗೋಪಿಕೃಷ್ಣ ಲಗ್ನವಾಗುವುದಾಗಿ ನಿರ್ಧರಿಸಿ ಅವಳ ಕುಟುಂಬದವರೊಡನೆ ಮದುವೆಯ ಪ್ರಸ್ತಾಪವನ್ನಿಟ್ಟ. ‘ನೀವು ಈಗಾಗಲೇ ಎರಡು ಮದುವೆಯಾಗಿದ್ದೀರಿ, ನಮ್ಮ ಮಗಳನ್ನು ನಿಮಗೆ ಮದುವೆ ಮಾಡಿಕೊಟ್ಟರೆ ಅವಳ ಭವಿಷ್ಯವೇನು’ ಎಂದು ಸೋನಿಯಾಳ ಕುಟುಂಬಸ್ಥರು ಕೇಳಿದರು. ‘ಅವಳಿಗಾಗಿ ನಾನು ಬೇರೆ ಮನೆ ಮಾಡುತ್ತೇನೆ ಮತ್ತು ಅವಳ ಮಗುವನ್ನೂ ಜತನದಿಂದ ಸಾಕುತ್ತೇನೆ, ನೀವೇನೂ ಹೆದರಬೇಡಿ’ ಎಂದ ಗೋಪಿಕೃಷ್ಣ. ಅವಳ ಸೋದರಮಾವ, ‘ನಾವೇನೋ ಮದುವೆ ಮಾಡಿಕೊಡಲು ತಯಾರಿದ್ದೇವೆ, ಆದರೆ ನೀವು ನಮ್ಮ ಧರ್ಮಕ್ಕೆ ಮತಾಂತರಗೊಂಡರೆ ಮಾತ್ರ ಮದುವೆಯಾಗಬಹುದು’ ಎಂಬ ಷರತ್ತನ್ನು ಹಾಕಿದ. ಇದಕ್ಕೊಪ್ಪಿದ ಗೋಪಿಕೃಷ್ಣ ಮರುವಾರವೇ ತನ್ನ ಸಂಬಂಧಿಕರಿಗೆ ತಿಳಿಯದಂತೆ ಮತಾಂತರಗೊಂಡ. ಅದೇ ದಿನವೇ ಸೋನಿಯಾಳನ್ನು ಅವಳ ಸೋದರಮಾವ ಮತ್ತು ಅವಳ ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾದ. ಅದೇ ಊರಿನಲ್ಲಿಯೇ ಅವಳಿಗಾಗಿ ಒಂದು ಮನೆಯನ್ನು ಬಾಡಿಗೆಗೆ ಪಡೆದ. ಮೊದಲ ಇಬ್ಬರು ಪತ್ನಿಯರು ಮತ್ತು ಇತರ ಸಂಬಂಧಿಕರಿಂದ ಮೂರನೆಯ ಮದುವೆಯ ವಿಷಯವನ್ನು ಗುಟ್ಟಾಗಿಯೇ ಇಟ್ಟ. ವಾರಕ್ಕೊಂದೋ ಎರಡೋ ದಿನಗಳ ಕಾಲ ಮಾತ್ರ ಸೋನಿಯಾ ಜತೆ ಕಳೆದು ಉಳಿದ ದಿನಗಳನ್ನು ತನ್ನ ಮೊದಲೆರಡು ಪತ್ನಿಯರೊಡನೆ ಕಳೆಯುತ್ತಿದ್ದ.

ವರ್ಷ ಕಳೆದ ನಂತರ ಸೋನಿಯಾ ತಾನು ಆರು ತಿಂಗಳ ಗರ್ಭಿಣಿಯೆಂದು ತಿಳಿಸಿದಾಗ ಗೋಪಿಕೃಷ್ಣ ಹೌಹಾರಿದ. ‘ನಮ್ಮಿಬ್ಬರ ಲಗ್ನವನ್ನು ನಾನು ಗುಟ್ಟಾಗಿಯೇ ಇಟ್ಟಿರುವೆ, ಈಗ ನಿನಗೆ ಮಗುವಾದರೆ ಲಗ್ನದ ಬಗ್ಗೆ ಜಾಹೀರಾಗುತ್ತದೆ, ಮತಾಂತರಗೊಂಡಿರುವ ವಿಷಯ ಬಹಿರಂಗವಾದರೆ ನನಗೆ ತೊಂದರೆಯಾಗುತ್ತದೆ, ನೀನು ಗರ್ಭಪಾತ ಮಾಡಿಸಿಕೊ’ ಎಂದ. ಆಕೆಯೂ ಒಪ್ಪಿದಳು. ಸೋನಿಯಾ ತನ್ನ ಸೋದರತ್ತೆಯ ಜತೆಗೆ ಆಸ್ಪತ್ರೆಗೆ ಹೋದಳು. ಆದರೆ ಅಲ್ಲಿನ ವೈದ್ಯರು ನಿನಗೀಗಾಗಲೇ ಆರು ತಿಂಗಳು ತುಂಬಿರುವುದರಿಂದ, ಗರ್ಭಪಾತ ಮಾಡುವುದು ಸಾಧ್ಯವಿಲ್ಲ ಎಂದರು. ಸೋನಿಯಾ ಈ ವಿಷಯವನ್ನು ತಿಳಿಸಿದಾಗ ಗೋಪಿಕೃಷ್ಣನಿಗೆ ಮುಂದೇನು ಮಾಡಬೇಕು ಎಂದೇ ತೋಚಲಿಲ್ಲ. ಸೋನಿಯಾಳಿಗೆ ಹೆರಿಗೆಯಾಗುವ ವೇಳೆಗೆ ಯಾವುದಾದರೊಂದು ತೀರ್ಮಾನ ತೆಗೆದುಕೊಳ್ಳಲು ನಿಶ್ಚಯಿಸಿದ.

ಏತನ್ಮಧ್ಯೆ ಗೋಪಿಕೃಷ್ಣನ ಎರಡನೆಯ ಹೆಂಡತಿ ಗಂಗಾಳಿಗೆ ಅವಳ ಸಂಬಂಧಿಕನೊಬ್ಬ ವಾಟ್ಸಪ್ ಮೂಲಕ ವಿಡಿಯೊವೊಂದನ್ನು ಕಳಿಸಿದ. ಅದು ಗೋಪಿಕೃಷ್ಣ ಬೇರೊಂದು ಧರ್ಮಕ್ಕೆ ಮತಾಂತರಗೊಂಡು ಸೋನಿಯಾಳನ್ನು ಮದುವೆಯಾಗುತ್ತಿರುವ ವಿಡಿಯೋ ಆಗಿತ್ತು. ಗಾಬರಿಯಾದ ಗಂಗಾ ಆ ವಿಡಿಯೋವನ್ನು ಯುಮುನಾ ಮತ್ತು ತನ್ನ ಸಂಬಂಧಿಕರಿಗೆ ತೋರಿಸಿದಳು.

‘ನಿನ್ನ ಗಂಡನಿಗೆ ಆಮಿಷವೊಡ್ಡಿ ಮತಾಂತರ ಮಾಡಲಾಗಿದೆ, ಇದು ಬಹಳ ಸೀರಿಯಸ್ ಪ್ರಕರಣವಾಗಿರುವ ಕಾರಣ ನೀನು ಸೋನಿಯಾ ಮತ್ತವಳ ಕುಟುಂಬದವರ ವಿರುದ್ಧ ನಿನ್ನ ಗಂಡನನ್ನು ಬಲವಂತವಾಗಿ ಮತಾಂತರ ಮಾಡಿ ಅಪಹರಣ ಮಾಡಿದ್ದಾರೆ ಎಂಬ ದೂರನ್ನು ನೀಡು’ ಎಂದು ಅವರೆಲ್ಲರೂ ಸೂಚಿಸಿದರು. ಇದರ ಸುಳಿವನ್ನು ಅರಿತ ಗೋಪಿಕೃಷ್ಣ ಆ ಊರಿನಿಂದ ಪರಾರಿಯಾದ. ಗಂಗಾ ನೀಡಿದ ದೂರಿನನ್ವಯ ಪೊಲೀಸರು ಸೋನಿಯಾ ಮತ್ತವಳ ಕುಟುಂಬದವರ ವಿರುದ್ಧ ಅಪಹರಣದ ದೂರನ್ನು ದಾಖಲಿಸಿದರು.

ಈ ಮಾಹಿತಿಯನ್ನರಿತ ಸೋನಿಯಾಳ ಸೋದರಮಾವ, ಆಸ್ತಿಯನ್ನು ಕೊಡದೆ ನಿನ್ನನ್ನು ತನ್ನಿಂದ ದೂರ ಮಾಡಬೇಕೆಂದು ಗೋಪಿಕೃಷ್ಣ ನಡೆಸಿರುವ ಷಡ್ಯಂತ್ರ ಇದಾಗಿರಬಹುದು ಎಂದು ಸೋನಿಯಾಳಿಗೆ ಹೇಳಿ ಅವಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ನೀಡಲು ಪ್ರಚೋದಿಸಿದ. ‘ಗೋಪಿಕೃಷ್ಣ ನನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ ಲೈಂಗಿಕ ಕ್ರಿಯೆ ನಡೆಸಿ ಗರ್ಭಿಣಿಯ್ನಾಗಿ ಮಾಡಿ ನನ್ನನ್ನು ಬಿಟ್ಟು ಓಡಿಹೋಗಿದ್ದಾನೆ. ಅವನ ವಿರುದ್ಧ ರೇಪ್ ಕೇಸನ್ನು ದಾಖಲಿಸಿ’ ಎಂದು ಆಕೆ ಲಿಖಿತ ದೂರನ್ನು ನೀಡಿದಳು. ಇದರನ್ವಯ ಗೋಪಿಕೃಷ್ಣನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾಯಿತು. ಪೊಲೀಸರು ಗೋಪಿಕೃಷ್ಣನಿಗಾಗಿ ಹುಡುಕತೊಡಗಿದರು.

ಅಷ್ಟರಲ್ಲಿ ಗಂಗಾಳಿಂದ ದೂರು ಪಡೆದಿದ್ದ ಇನ್ನೊಂದು ಠಾಣೆಯ ಪೊಲೀಸರು ಸೋನಿಯಾಳ ಮನೆಗೆ ಬಂದರು. ಆಗ ಅವರಿಗೆ ಗೋಪಿಕೃಷ್ಣನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿರುವ ಮಾಹಿತಿ ತಿಳಿಯಿತು. ಎರಡೂ ಪ್ರಕರಣಗಳು ಒಂದಕ್ಕೊಂದು ಸಂಬಂಧ ಹೊಂದಿರುವ ಕಾರಣ ಒಬ್ಬರೇ ಅಧಿಕಾರಿ ಎರಡರ ತನಿಖೆಯನ್ನೂ ನಡೆಸಬೇಕೆಂದು ಪೊಲೀಸ್ ವರಿಷ್ಠರು ಆದೇಶಿಸಿದ ಮೇರೆಗೆ ಹಿರಿಯ ಅಧಿಕಾರಿಯೊಬ್ಬರು ಪ್ರಕರಣದ ತನಿಖೆಯನ್ನು ಮುಂದುವರಿಸಿದರು.

ಅವರು ಗೋಪಿಕೃಷ್ಣನನ್ನು ಪತ್ತೆ ಮಾಡಿ ಕೂಲಂಕಷವಾಗಿ ವಿಚಾರಣೆ ಮಾಡಿದಾಗ, ಆತ ಎಲ್ಲಾ ವಿಷಯವನ್ನು ಸವಿಸ್ತಾರವಾಗಿ ಹೇಳಿದ. ತಾನು ಮತಾಂತರಗೊಂಡಿದ್ದು ನಿಜ, ಆದರೆ ಅದನ್ನು ಸ್ವಯಂಪ್ರೇರಿತವಾಗಿಯೇ ಮಾಡಿದ್ದು ಯಾರ ಬಲವಂತವೂ ಇರಲಿಲ್ಲ ಎಂದ. ತನ್ನನ್ನು ಯಾರೂ ಅಪಹರಣ ಮಾಡಿಲ್ಲ. ತಾನು ಸೋನಿಯಾಳ ಮೇಲೆ ಅತ್ಯಾಚಾರ ನಡೆಸಿಲ್ಲ. ಮದುವೆಯಾದ ನಂತರವೇ ಆಕೆಯ ಜೊತೆ ಲೈಂಗಿಕ ಸಂಪರ್ಕ ಮಾಡಿರುವುದಾಗಿ ಹೇಳಿದ. ಮತಾಂತರ ನಿಷೇಧ ಕಾನೂನು ಇರದ ಕಾರಣ ಹಾಗೂ ತನ್ನ ಅಪಹರಣವಾಗಿಲ್ಲ ಎಂದು ಗೋಪಿಕೃಷ್ಣ ಸ್ಪಷ್ಟಪಡಿಸಿದ ಕಾರಣ ಗಂಗಾಳ ದೂರು ತಪ್ಪುಕಲ್ಪನೆಯಿಂದ ನೀಡಿದ್ದೆಂದು ಪೊಲೀಸರು ಪ್ರಕರಣ ಅಂತ್ಯಗೊಳಿಸಿದರು.

ಆದರೆ ಗೋಪಿಕೃಷ್ಣ ಅತ್ಯಾಚಾರ ಮಾಡಿದ್ದಾನೆ ಎಂದೇ ಸೋನಿಯಾ ಪೊಲೀಸರ ಮುಂದೆ ಹೇಳಿದ್ದ ಕಾರಣ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಯಿತು. ನ್ಯಾಯಾಲಯದ ವಿಚಾರಣೆ ಇನ್ನೂ ಮುಗಿದಿಲ್ಲ. ಸೋನಿಯಾ ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ಬದಲಿಸಿದರೆ ಗೋಪಿಕೃಷ್ಣ ಬಿಡುಗಡೆಯಾಗುತ್ತಾನೆ ಎನ್ನುವುದು ಕಾನೂನು ತಜ್ಞರ ಅಭಿಮತ. ‘ಈರೈದು ತಕೆಯುಳ್ಳ ಧೀರ ರಾವಣ ಸತ್ತ, ವೀರ ಕೀಚಕನು ಸುಡುಸತ್ತ ಪರಸತಿಯ ದಾರಿ ಬೇಡೆಂದ ಸರ್ವಜ್ಞ’ ಎನ್ನುವ ವಚನವನ್ನು ಗೋಪಿಕೃಷ್ಣ ನೆನಪಿಟ್ಟು ಏಕಪತ್ನಿ ವ್ರತಸ್ಥನಾಗಿದ್ದಿದ್ದರೆ ಅವನಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೋ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)