ಅಂಕಣ

ರಾಷ್ಟ್ರಘಾತಕ ಹುನ್ನಾರಗಳಿಗೆ ಮದ್ದು ರಾಷ್ಟ್ರಹಿತ ಚಿಂತನೆಗಳು

ಭಾಗ-4

ಭಾರತೀಯ ಅಸ್ಮಿತೆಯ ಮೂಲವಾದ ರಾಮಾಯಣ, ಮಹಾಭಾರತಗಳು ‘ಶಿಕ್ಷಿತ’ ಭಾರತೀಯರಿಂದ ನಿರ್ಲಕ್ಷ್ಯಕ್ಕೊಳಗಾದ, ತಿರಸ್ಕೃತಗೊಂಡ ದುರಂತವನ್ನು ಕಳೆದೆರಡು ಶತಮಾನಗಳು ಕಂಡಿವೆ. ಈ ಪ್ರಕ್ರಿಯೆ ಘಟಿಸಿದ ಬಗೆಯನ್ನು ಶೋಧಿಸೋಣ.

ಹನ್ನೊಂದನೆಯ ಶತಮಾನದ ಆದಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಪರ್ಷಿಯನ್ ಇತಿಹಾಸಕಾರ ಅಲ್ ಬೆರೂನಿ ಇಲ್ಲಿನ ಜನಜೀವನ, ಧಾರ್ವಿುಕತೆ, ಇತಿಹಾಸ, ಸಾಹಿತ್ಯ ಎಲ್ಲವನ್ನೂ ಅಧ್ಯಯನ ಮಾಡಿ ಬರೆದ ‘ತೆಹ್ಖೀಖ್ ಮಾ ಲಿ-ಲ್ ಹಿಂದ್’ ಕೃತಿಯಲ್ಲಿ ಅಮೂಲ್ಯ ವಿವರಗಳನ್ನು ದಾಖಲಿಸಿದ್ದಾನೆ. ಅವುಗಳಲ್ಲಿ ಒಂದು ರಾಮ ಐತಿಹಾಸಿಕ ವ್ಯಕ್ತಿ ಮತ್ತು ರಾಮಾಯಣ ಐತಿಹಾಸಿಕ ಘಟನಾವಳಿಗಳ ದಾಖಲೆ ಎನ್ನುವುದು. ಆದರೆ 800 ವರ್ಷಗಳ ನಂತರ ಬ್ರಿಟಿಷರು ಭಾರತವನ್ನು ತಮ್ಮ ವಸಾಹತಾಗಿಸಿಕೊಂಡಾಗ ಇಲ್ಲಿನ ಶಾಲೆಗಳ ಇತಿಹಾಸ ಪಠ್ಯಪುಸ್ತಕಗಳನ್ನು ರಚಿಸಲು ಲಾರ್ಡ್ ಮೆಕಾಲೆ ಮೂಲವಾಗಿ ಬಳಸಿಕೊಂಡದ್ದು ಜೇಮ್ಸ್​ ಮಿಲ್ಸ್ ಮತ್ತು ಚಾರ್ಲ್ಸ್​ ಗ್ರ್ಯಾಂಟ್​ 1808ರಲ್ಲಿ ಹೈಲಿಬರಿ ಕಾಲೇಜಿಗಾಗಿ ರಚಿಸಿದ್ದ ಭಾರತದ ಇತಿಹಾಸದ ಪಠ್ಯಕ್ರಮ.

ಮಿಲ್ಸ್ ಮತ್ತು ಗ್ರ್ಯಾಂಟ್​ ಭಾರತಕ್ಕೆ ಒಮ್ಮೆಯೂ ಭೇಟಿ ನೀಡದೇ, ಇಲ್ಲಿನ ಬದುಕನ್ನು ನೋಡದೇ, ಇಲ್ಲಿನ ಸಾಹಿತ್ಯಕ-ಧಾರ್ವಿುಕ-ಐತಿಹಾಸಿಕ ಆಧಾರಗಳನ್ನು ಖುದ್ದಾಗಿ ಪರಿಶೀಲಿಸದೇ ರಚಿಸಿದ್ದ ಪಠ್ಯಕ್ರಮದಲ್ಲಿ ಭಾರತದ ಇತಿಹಾಸ ಏಕಪ್ರಕಾರವಾಗಿ ತುಂಬಿ ಹರಿಯದೇ ಅಲ್ಲಲ್ಲಿ ಒಂದಕ್ಕೊಂದು ಸಂಪರ್ಕವಿಲ್ಲದ ನೀರಿನ ಗುಂಡಿಗಳನ್ನು ಹೊಂದಿದ ಬೇಸಿಗೆಯ ನದೀಪಾತ್ರವಾಗಿತ್ತು. ಅಲ್ ಬೆರೂನಿ ಗುರುತಿಸಿದ್ದಂತೆ ಭಾರತೀಯರು ಇತಿಹಾಸವೆಂದೇ ನಂಬಿದ್ದ ರಾಮಾಯಣವನ್ನು ಕಲ್ಪಿತ ಕಥೆಯೆಂದು ಮಿಲ್ಸ್ ಆಂಡ್ ಗ್ರಾ್ಯಂಟ್ ಬರೆದಿದ್ದರು. ಮೆಕಾಲೆ ರಚಿಸಿದ ಪಠ್ಯಕ್ರಮದಲ್ಲಿ ಅಲ್ ಬೆರೂನಿಯ ಮಾತುಗಳು ಮರೆಯಾಗಿ ಮಿಲ್ಸ್ ಮತ್ತು ಗ್ರಾ್ಯಂಟರ ಮಾತುಗಳು ಇತಿಹಾಸವಾಗಿ ಸೇರಿಕೊಂಡವು. ಹೀಗಾಗಿ ಮುಂದಿನ ತಲೆಮಾರುಗಳ ‘ಶಿಕ್ಷಿತ’ ಭಾರತೀಯರು ತಾವೆಲ್ಲ ಒಂದು ಎಂಬ ಅಸ್ಮಿತೆಯನ್ನು ತಮಗೆ ನೀಡಿದ್ದ ರಾಮಾಯಣ, ಮಹಾಭಾರತಗಳ ಬಗ್ಗೆಯೇ ನಿರ್ಲಕ್ಷ್ಯ ಬೆಳೆಸಿಕೊಳ್ಳುವಂತಾಯಿತು. ಜತೆಗೆ, ಪ್ರಾಚೀನ ಅಂದರೆ ಹಿಂದೂ ಭಾರತ ಅಸಮಾನತೆಯ ಅಗರ, ಕಂದಾಚಾರಗಳ ಕೂಪ ಎಂದೂ ಬ್ರಿಟಿಷ್ ಶಿಕ್ಷಣಕ್ರಮ ಇವರ ತಲೆಯಲ್ಲಿ ತುಂಬಿತು. ಇದನ್ನೂ ಓದಿ: ಜಗದಗಲ: ಭಾರತ ಗಣರಾಜ್ಯ ಏಳು ದಶಕಗಳ ಏಳುಬೀಳುಗಳು 

ಹೀಗೆ, ಸ್ವಾತಂತ್ರ್ಯದ ಹೊತ್ತಿಗೆ ಭಾರತೀಯ ಮೌಲ್ಯಗಳು ಹಾಗೂ ಸಂಪ್ರದಾಯಗಳ ಬಗ್ಗೆ ಕೀಳರಿಮೆ ಮತ್ತು ತಿರಸ್ಕಾರ ಬೆಳೆಸಿಕೊಂಡಿದ್ದ ಒಂದು ‘ಶಿಕ್ಷಿತ’ ವರ್ಗ ಅಸ್ತಿತ್ವದಲ್ಲಿತ್ತು. ಜತೆಗೆ, ಶಿಕ್ಷಣಕ್ಕಾಗಿ ಪಶ್ಚಿಮ ಯೂರೋಪಿಗೆ ಹೋದವರಲ್ಲಿ ಅನೇಕರು ಅಲ್ಲಿ ಪ್ರಖರವಾಗಿ ಬೀಸುತ್ತಿದ್ದ ಎಡಚಿಂತನೆಗಳ ಸೆಳೆತಕ್ಕೂ ಸಿಕ್ಕಿಬಿದ್ದಿದ್ದರು. ಈ ಸೆಳೆತದ ಹಿಂದೆ ಹೊಸ ಚಿಂತನೆಯ ಆಕರ್ಷಣೆಯಷ್ಟೇ ಅಲ್ಲ, ತನ್ನದೇ ಸಂಸ್ಕೃತಿಯ ಬಗೆಗಿನ ತಿರುಚಿದ ವಿವರಣೆ ಮೂಡಿಸಿದ್ದ ಕೀಳರಿಮೆ ಸಹ ಕೆಲಸ ಮಾಡುತ್ತಿತ್ತು. ಹೀಗೆ ಭಾರತೀಯ ಮೌಲ್ಯಗಳ ಬಗ್ಗೆ ಕೀಳರಿಮೆಯ ಜತೆಗೆ, ಇಲ್ಲಿನ ‘ಎಲ್ಲ’ ನ್ಯೂನತೆಗಳಿಗೂ ಎಡಪಂಥೀಯ ಚಿಂತನೆಯಲ್ಲಿ ಪರಿಹಾರವಿದೆಯೆಂದು ನಂಬಿದ್ದ ಇವರೇ, ಅಂದರೆ ಜನಾಭಿಪ್ರಾಯ ಮೂಡಿಸಬಲ್ಲಂತಹ ಸಾಂಸ್ಕೃತಿಕ ವ್ಯಕ್ತಿಗಳೇ ಅಂದಿನ ಕಾಂಗ್ರೆಸ್ ಸರ್ಕಾರಕ್ಕೂ ಬೇಕಾಗಿದ್ದದ್ದು. ಸೆಕ್ಯೂಲರಿಸಂ, ಸೋಷಿಯಲಿಸಂ ಎಂದೆಲ್ಲ ಘೊಷಣೆ ಕೂಗಿಕೊಂಡು, ಅವುಗಳ ಆಧಾರದ ಮೇಲೆ ನವಭಾರತದ ನಿರ್ವಣಕ್ಕಿಳಿದಿರುವುದಾಗಿ ದೇಶವನ್ನು ನಂಬಿಸುವ ತನ್ನ ಹುನ್ನಾರದ ಬೌದ್ಧಿಕ ಮುಖವಾಡವಾಗಲು ನೆಹರೂ ಪ್ರಭುತ್ವಕ್ಕೆ ಈ ಎಡಪಂಥೀಯ ಸಾಹಿತಿಗಳು ಅತ್ಯುತ್ತಮ ಕಾಲಾಳುಗಳಂತೆ ಕಂಡರು. ಅದು ಹೇಗೆಂದರೆ, ಉದಾತ್ತ ವಿಚಾರಗಳನ್ನು ಬರೆಯುತ್ತ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೆಲ್ಲ ಉದ್ದುದ್ದದ ಭಾಷಣಗಳನ್ನು ಕುಟ್ಟುತ್ತ ತಮ್ಮನ್ನು ಉದಾರವಾದಿಗಳು, ಪ್ರಗತಿಪರರು ಎಂದು ಬಿಂಬಿಸಿಕೊಳ್ಳುತ್ತಿದ್ದ ಇವರುಗಳು ವಾಸ್ತವವಾಗಿ ಐಹಿಕ ಸುಖಸವಲತ್ತುಗಳಿಗಾಗಿ ಹಪಹಪಿಸುವ ಸಾಮಾನ್ಯ ಮನುಷ್ಯರಾಗಿದ್ದರು. ತಮ್ಮ ಮಾನವಸಹಜ ಕಾಮನೆಗಳನ್ನು ತಣಿಸಿಕೊಳ್ಳಲು ಅಂದರೆ ಪ್ರಶಸ್ತಿ, ಸ್ಥಾನಮಾನ, ಹಣಕಾಸನ್ನು ಗಳಿಸಿಕೊಳ್ಳಲು ಇವರಿಗೆ ಪ್ರಭುತ್ವದ ಬೆಂಬಲದ ಅಗತ್ಯವಿತ್ತು. ಎಡಪಂಥೀಯ ಸಾಹಿತಿಗಳು ಮತ್ತು ಕಾಂಗ್ರೆಸ್ ಪ್ರಭುತ್ವದ ನಡುವಿನ ಈ ವ್ಯವಹಾರ ‘ಹಿಟ್ಟು ಹಳಸಿತ್ತು ನಾಯಿ ಹಸಿದಿತ್ತು’ ಎಂಬ ಗಾದೆಮಾತಿಗೆ ಸೊಗಸಾದ ಉದಾಹರಣೆ. ನಂತರದ ದಶಕಗಳಲ್ಲಿ ಇವರ ಜತೆಗೆ ಮಧ್ಯಮ ಹಾಗೂ ಕೆಳವರ್ಗದ ನವ ಸಾಹಿತಿಗಳ, ಕಲಾವಿದರ ಅಂದರೆ ಸಾಂಸ್ಕೃತಿಕ ವ್ಯಕ್ತಿಗಳ ದೊಡ್ಡ ಪಡೆಯೇ ಸೇರಿಕೊಂಡಿತು. ವಿವಿಧ ಸಾಮಾಜಿಕ-ಧಾರ್ವಿುಕ ಕಾರಣಗಳಿಂದಾಗಿ ಅಸಂತುಷ್ಟರಾಗಿದ್ದ ಇವರಿಗೆ ಹಿರಿಯ ಎಡಪಂಥೀಯ ಸಾಂಸ್ಕೃತಿಕ ವ್ಯಕ್ತಿಗಳು ರೋಲ್ ಮಾಡೆಲ್​ಗಳಾಗಿ ಕಂಡದ್ದರಲ್ಲಿ ಅಚ್ಚರಿಯೇನಿಲ್ಲ. ರಾಷ್ಟ್ರ ರಾಜಕಾರಣವನ್ನು ನಿರಂತರವಾಗಿ ತನ್ನ ಕೈಲಿಟ್ಟುಕೊಂಡ ಕಾಂಗ್ರೆಸ್ ಪ್ರಭುತ್ವ ಆಮಿಷಗಳನ್ನು ಒಡ್ಡುವ, ಸವಲತ್ತುಗಳನ್ನು ನೀಡುವ ತಂತ್ರದ ಮೂಲಕ ಈ ಎಡಪಂಥೀಯ ಸಾಂಸ್ಕೃತಿಕ ವ್ಯಕ್ತಿಗಳ ಪ್ರತೀ ತಲೆಮಾರನ್ನೂ ತನ್ನ ತೆಕ್ಕೆಯೊಳಗಿಟ್ಟುಕೊಂಡಿತು. ಪರಿಣಾಮವಾಗಿ ಶಿಕ್ಸಣ, ಸಂಸ್ಕೃತಿ, ಮಾಧ್ಯಮ ಸೇರಿ ರಾಷ್ಟ್ರದ ಎಲ್ಲ ಕ್ಷೇತ್ರಗಳನ್ನೂ ಕಾಂಗ್ರೆಸ್ ಕಳೆಯಂತೇ ಆವರಿಸಿಕೊಂಡ ಈ ತಥಾಕಥಿತ ಪ್ರಗತಿಪರರು ಹೊಸ ತಲೆಮಾರುಗಳಿಂದ ಮುಚ್ಚಿಟ್ಟ ಕೆಲ ಐತಿಹಾಸಿಕ ಸತ್ಯಗಳನ್ನೀಗ ಗಮನಿಸೋಣ. ಇದನ್ನೂ ಓದಿ: ಜಗದಗಲ ಅಂಕಣ: ಏಳು ಅಧ್ಯಕ್ಷರ ಎಂಟು ಭಾರತ ಭೇಟಿಗಳು…

ವಿಭಿನ್ನ ಭಾಷೆಗಳ, ಆಹಾರಪದ್ಧತಿಗಳ, ಭೌಗೋಳಿಕ ಪರಿಸರಗಳ ಭಾರತೀಯರು ಸಾಂಸ್ಕೃತಿಕವಾಗಿ ತಾವೆಲ್ಲ ಒಂದು ಎಂದು ರೂಢಿಸಿಕೊಂದ ಐಕ್ಯತಾ ಭಾವನೆಯನ್ನು ಹೊರಗಿನವರಿಗೂ ವಿಸ್ತರಿಸಿದ ಉದಾಹರಣೆಗಳು ಇತಿಹಾಸದಲ್ಲಿ ಮತ್ತೆಮತ್ತೆ ದೊರೆಯುತ್ತವೆ. ಕ್ರಿ.ಪೂ. ಒಂದನೆಯ ಶತಮಾನದಲ್ಲಿ ರೋಮನ್ ದಬ್ಬಾಳಿಕೆಯಿಂದ ತಪ್ಪಿಸಿಕೊಳ್ಳಲು ಪೂರ್ವದ ನಾಡುಗಳತ್ತ ಓಡಿಬಂದ ಇಸ್ರೇಲಿನ ಯೆಹೂದಿಗಳಿಗೆ ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸಿಕೊಳ್ಳಲು ಅವಕಾಶ ನೀಡಿದ ಏಕೈಕ ದೇಶ ಭಾರತ. ನಂತರ ಜೀಸಸ್ ಕ್ರೆ್ತ್ರಸ್ಟ್​ನ ಶಿಷ್ಯರಲ್ಲೊಬ್ಬರಾದ ಸಂತ ಥಾಮಸ್ ಕ್ರಿ.ಶ. ಒಂದನೆಯ ಶತಮಾನದಲ್ಲಿ ಕೋರಮಂಡಲ ತೀರದಲ್ಲಿ ಕ್ರೆ್ತ್ರಸ್ತಧರ್ಮವನ್ನು ಪ್ರಚಾರ ಮಾಡಲು ಬಂದಾಗ ಅವರಿಗಿಲ್ಲಿ ಯಾವ ಅಡ್ಡಿಯೂ ಉಂಟಾಗಲಿಲ್ಲ. ಹಾಗೆಯೇ, ಪ್ರವಾದಿ ಮಹಮ್ಮದರ ಜೀವನಕಾಲದಲ್ಲಿಯೇ ಅಂದರೆ ಕ್ರಿ.ಶ. 629ರಲ್ಲೇ ಅರಬ್ ವರ್ತಕರು ಕೇರಳದ ಕೋಡಂಗಲ್ಲೂರಿನಲ್ಲಿ ಮಸೀದಿಯೊಂದನ್ನು ನಿರ್ವಿುಸಿದರು. ಇದಕ್ಕೆ ಅವಕಾಶ ಹಾಗೂ ಸಹಕಾರ ನೀಡಿದ್ದು ಸ್ಥಳೀಯ ಅರಸ. ಪರಧರ್ವಿುೕಯರಿಂದ ತುಂಬಿದ್ದ, ತಮ್ಮ ರಾಜಕೀಯ ಅಧಿಕಾರ ಹಾಗೂ ಸೇನಾ ಹಿಡಿತದಲ್ಲಿಲ್ಲದ ದೂರದ ನಾಡೊಂದರಲ್ಲಿ ತಮ್ಮ ಧರ್ಮವನ್ನು ಬಹಿರಂಗವಾಗಿ ಆಚರಿಸುವ ಸ್ವಾತಂತ್ರ್ಯ ಮುಸ್ಲಿಂ ಸಮುದಾಯಕ್ಕೆ ಮೊಟ್ಟಮೊದಲು ದೊರೆತದ್ದು ಭಾರತದಲ್ಲಿ. ಇದೆಲ್ಲವೂ ಹೇಳುವುದೇನೆಂದರೆ ತನ್ನ ನಡುವೆ ತಲೆಯೆತ್ತಿ ಬೆಳೆದು ಪ್ರತ್ಯೇಕವಾಗಿಯೇ ನಿಲ್ಲುವ ಅವಕಾಶವನ್ನು ಅನ್ಯಧರ್ಮಗಳಿಗೆ ಹಿಂದೂಧರ್ಮ ನೀಡುತ್ತಲೇ ಬಂದಿದೆ. ಹಿಂದೂಧರ್ಮ ಬಹುತ್ವವನ್ನು ಮಾನ್ಯ ಮಾಡುವುದಿಲ್ಲ ಎಂದು ತಥಾಕಥಿತ ಪ್ರಗತಿಪರ ಕಾಂಗ್ರೆಸ್-ಕಮ್ಯೂನಿಸ್ಟ್ ‘ಕಾಕ’ ಸಾಂಸ್ಕೃತಿಕ ವ್ಯಕ್ತಿಗಳು ಶಿಕ್ಷಣ, ಸಾಹಿತ್ಯ ಮತ್ತು ಮಾಧ್ಯಮದ ಮೂಲಕ ಮಾಡಿದ ಆಪಾದನೆ ಐತಿಹಾಸಿಕವಾಗಿ ಸತ್ಯದೂರ ಎಂಬುದು ಹೀಗೆ ಸಾಬೀತಾಗುತ್ತದೆ. ಇದನ್ನೂ ಓದಿ: ಜಗದಗಲ: ಉನ್ನತ ಹಿಮಾಲಯದಲ್ಲಿ ಪಾತಾಳಕ್ಕಿಳಿದ ರಾಜತಂತ್ರ

ಭಾರತದ ಇತಿಹಾಸವನ್ನು ಪ್ರಾಚೀನ (ಹಿಂದೂ), ಮಧ್ಯಕಾಲೀನ (ಮುಸ್ಲಿಂ) ಹಾಗೂ ಆಧುನಿಕ (ಬ್ರಿಟಿಷ್ ಹಾಗೂ ವಸಾಹತೋತ್ತರ) ಕಾಲಗಳೆಂದು ವಿಂಗಡಿಸಲಾಗುತ್ತದೆ. ಈ ಮೂರೂ ಅವಧಿಗಳಲ್ಲಿ ಭಾರತವನ್ನು ಹೊರಜಗತ್ತು ನೋಡಿದ ಬಗೆ ಅಚ್ಚರಿ ಹುಟ್ಟಿಸುತ್ತದೆ.

ಹಿಂದೂ ಕಾಲದಲ್ಲಿ ಹೊರಗಿನ ದಮನಿತ ಜನಸಮುದಾಯಗಳು ಭಾರತವನ್ನು ಆಶ್ರಯದಾತನಂತೆ ಕಂಡವು. ಯಹೂದಿಗಳ ಹಾಗೇ ಕ್ರಿ.ಶ. ಏಳನೆಯ ಶತಮಾನದಲ್ಲಿ ಪಾರ್ಸಿಗಳೂ ಆಶ್ರಯಕ್ಕಾಗಿ ಭಾರತದತ್ತ ಮುಖಮಾಡಿದರು. ಅರಬ್ ಮುಸ್ಲಿಂ ದಾಳಿಕಾರರು ಪರ್ಷಿಯಾವನ್ನು ಆಕ್ರಮಿಸಿಕೊಂಡು ಅಗ್ನಿ ಆರಾಧಕ ಪಾರ್ಸಿಗಳ ಮುಂದೆ ಇಸ್ಲಾಂ ಅಥವಾ ತಲೆದಂಡದ ಆಯ್ಕೆಯನ್ನಿತ್ತದ್ದೀಗ ಇತಿಹಾಸ. ತಪ್ಪಿಸಿಕೊಂಡು ಬಂದ ಪಾರ್ಸಿಗಳಿಗೆ ಭಾರತ ಆಶ್ರಯ ನೀಡಿದ್ದೂ ಈಗ ಇತಿಹಾಸವೇ, ಆದರೆ, ನಂತರದ ಮುಸ್ಲಿಂ ಕಾಲದಲ್ಲಿ ಯಾವುದೇ ಹೊರಗಿನ ದಮನಿತ ಜನಸಮುದಾಯ ಆಶ್ರಯಕ್ಕಾಗಿ ಭಾರತಕ್ಕೆ ಬರಲಿಲ್ಲ. ಅಂದರೆ ಹಿಂದೂ ಭಾರತ ತಮಗೆ ಆಶ್ರಯ ನೀಡಿದಂತೆ ಮುಸ್ಲಿಂ ಭಾರತ ನೀಡಲಾರದು ಎಂದು ಸುತ್ತಲಿನ ಎಲ್ಲ ನಾಡುಗಳ ದಮನಿತರಿಗೂ ಮನವರಿಕೆಯಾಗಿಹೋಗಿತ್ತು! ಬ್ರಿಟಿಷ್ ಕಾಲಕ್ಕೆ ಬಂದರೆ ಪರಿಸ್ಥಿತಿ ಸಂಪೂರ್ಣ ಬದಲಾಗಿ ಇಲ್ಲಿನ ಜನರೇ ಹೊರನಾಡುಗಳಿಗೆ ವಲಸೆ ಹೋಗಲಾರಂಭಿಸಿದರು!

ಹೀಗೆ ಕಾಂಗ್ರೆಸ್ ಪ್ರಭುತ್ವದ ಬೌದ್ಧಿಕ ಮುಖವಾಡಗಳಾದ ತಥಾಕಥಿತ ಪ್ರಗತಿಪರ ಎಡಪಂಥೀಯರು ರಚಿಸಿ ಬೋಧಿಸಿದ ಇತಿಹಾಸ ಈ ಸತ್ಯಗಳನ್ನು ವ್ಯವಸ್ಥಿತವಾಗಿ ಮರೆಮಾಚಿದ ಪರಿಣಾಮವಾಗಿ ಭಾರತೀಯ ಅಸ್ಮಿತೆಯನ್ನು ಮೂಡಿಸಿ ಈ ನಾಡಿನ ಜನರನ್ನು ಒಂದಾಗಿ ಬೆಸೆದ ರಾಮಾಯಣ ಹಾಗೂ ಮಹಾಭಾರತಗಳು ಎರಡುಮೂರು ‘ಶಿಕ್ಷಿತ’ ತಲೆಮಾರುಗಳಿಂದ ಅವಜ್ಞೆಗೊಳಗಾದವು. ಇವರು ರಾಮನನ್ನಷ್ಟೇ ನಿರಾಕರಿಸಲಿಲ್ಲ, ಅಯೋಧ್ಯೆಯಲ್ಲಿ ಮಂದಿರವಿತ್ತು ಎಂದು ಸಾರುವ, ಭಾರತದ ಅಧಿಕೃತ ಪುರಾತತ್ವ ಇಲಾಖೆಯೇ ಉತ್ಖನನದ ಮೂಲದ ಪತ್ತೆಹಚ್ಚಿದ 253 ಪ್ರಾಚ್ಯವಸ್ತುಗಳನ್ನೂ ಗುರುತಿಸಲು ಸೋತಿತು. ಕೊನೆಗೆ ಇವರ ಮುಖಕ್ಕೆ ಕನ್ನಡಿ ಹಿಡಿಯಲು ನ್ಯಾಯಾಂಗವೇ ಬರಬೇಕಾಯಿತು. ಇದನ್ನೂ ಓದಿ: ಜಗದಗಲ: ಕಣ್ಣುಕುಕ್ಕುವ ಅಣ್ವಸ್ತ್ರದಿಂದ ಕಣ್ಣಿಗೆ ಕಾಣದ ಕರೊನಾವರೆಗೆ

ರಾಮಾಯಣ ಮೂಡಿಸಿದ ಭಾರತೀಯ ಅಸ್ಮಿತೆ, ಅದನ್ನು ಗಟ್ಟಿಗೊಳಿಸುತ್ತ ಬಂದ ಹಿಂದೂ ಮೌಲ್ಯಗಳು ಕಳೆದ ಆರೇಳು ದಶಕಗಳಲ್ಲಿ ವ್ಯವಸ್ಥಿತವಾಗಿ ನಿರ್ಲಕ್ಷ್ಯಕ್ಕೊಳಗಾದದ್ದರ ಪರಿಣಾಮ ಭಾರತ ಎಂಬ ದೇಶದ ಮೇಲೆ ಏನಾಗಿದೆ ನೋಡೋಣ. ತನ್ನ ನಡುವೆ ತಲೆಯೆತ್ತಿ ಬೆಳೆದು ಪ್ರತ್ಯೇಕವಾಗಿಯೇ ನಿಲ್ಲುವ ಅವಕಾಶವನ್ನು ಯೆಹೂದೀ, ಕ್ರಿಶ್ಚಿಯಾನಿಟಿ, ಇಸ್ಲಾಂ, ಪಾರ್ಸಿ ಮುಂತಾದ ತನ್ನಲ್ಲಿಗೆ ಬಂದ ಎಲ್ಲ ಧರ್ಮಗಳಿಗೂ ಹಿಂದೂಧರ್ಮ ನೀಡುತ್ತಲೇ ಬಂದಿರುವುದನ್ನು ಮೇಲೆ ಆಧಾರಸಹಿತವಾಗಿಯೇ ವಿವರಿಸಿದ್ದೇನೆ. ಇತರರ ಜತೆ ರಾಜಕೀಯ ಅಧಿಕಾರ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಹಿಂದೂಗಳು ಎಂದೂ ನಿರಾಕರಿಸಲಿಲ್ಲ. ಜೆಜಿಯಾ ತೆರಿಗೆ, ಆಮಿಷವೊಡ್ಡುವ ಅಥವಾ ಬಲವಂತದ ಮತಾಂತರ ಹಾಗೂ inquisitionನಂತಹ ಅನೀತಿಯುತ ಹಾಗೂ ಕ್ರೂರ ವಿಧಾನಗಳನ್ನು ಅನ್ಯರ ವಿರುದ್ಧ ಅದೆಂದೂ ಅನುಸರಿಸಲಿಲ್ಲ. ಇದಕ್ಕೆ ಪ್ರತಿಯಾಗಿ ಹಿಂದೂಗಳಿಗೆ ಇತರರಿಂದ ಸಿಕ್ಕಿದ್ದೇನು? ಇತರ ಧರ್ವಿುೕಯರು ಒಂದು ಪ್ರದೇಶದಲ್ಲಿ ಬಹುಸಂಖ್ಯಾತರಾದೊಡನೆ ಅಲ್ಲಿನ ರಾಜಕೀಯ ಅಧಿಕಾರ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಹಿಂದೂಗಳೊಡನೆ ಹಂಚಿಕೊಳ್ಳಲು ನಿರಾಕರಿಸಿದರು! ತಾವು ಬಹುಸಂಖ್ಯಾತರಾದ ಪ್ರದೇಶಗಳನ್ನು ಭಾರತದಿಂದ ಪ್ರತ್ಯೇಕಿಸಿ ಪಾಕಿಸ್ತಾನ ನಿರ್ವಿುಸಬೇಕೆಂಬ ಬೇಡಿಕೆಯನ್ನಿತ್ತು ಮುಸ್ಲಿಮರು ಅದರಲ್ಲಿ ಯಶಸ್ವಿಯಾದರು. ಕಾಶ್ಮೀರ ಕಣಿವೆಯ ಮುಸ್ಲಿಮರದೂ ಅದೇ ಮನೋಭಾವ. ಪೂರ್ವೇತ್ತರದ ಕೆಲ ರಾಜ್ಯಗಳಲ್ಲಿ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿರುವುದರಿಂದ ಅವರಿಗೆ ಭಾರತದ ಜತೆಗಿರುವುದು ಬೇಕಾಗಿಲ್ಲ. ಅಂತಹ ಭಾವನೆಯನ್ನು ಕೆಲ ಸಿಖ್ಖರು ಹೊಂದಿದ್ದ ಕಾಲದಲ್ಲಿ ಪಂಜಾಬ್ ಪ್ರತ್ಯೇಕತೆಯ ದಾರಿಗಿಳಿದಿತ್ತು. ದ್ರವಿಡಿಯನ್ ಪಕ್ಷಗಳಲ್ಲಿ ನಾಸ್ತಿಕವಾದ ಉಗ್ರವಾಗಿದ್ದ ಕಾಲದಲ್ಲಿ ತಮಿಳುನಾಡಿನಲ್ಲೂ ಪ್ರತ್ಯೇಕತೆಯ ಕೂಗೆದ್ದಿತ್ತು. ಅದು ತಣ್ಣಗಾದದ್ದು ಆ ಪಕ್ಷಗಳೆಲ್ಲವೂ ಸದ್ದಿಲ್ಲದೇ ಹಿಂದೂಧರ್ಮಕ್ಕೆ ಮರಳಿದ್ದರಿಂದ. ಇದೆಲ್ಲದರ ಅರ್ಥವನ್ನು ನೇರಾನೇರ ಹೇಳುವುದಾದರೆ ಹಿಂದೂಗಳ ಹೊರತಾಗಿ ಇತರರಿಗೆ ಭಾರತ ಒಂದಾಗಿರುವುದು ಬೇಕಾಗಿಲ್ಲ! ಅವರೆಲ್ಲ ರಾಷ್ಟ್ರಭಂಜಕ ಹುನ್ನಾರಗಳಿಗೂ ತಮ್ಮ ಸಾಹಿತ್ಯದಿಂದ, ವಿಚಾರಗಳಿಂದ ಬೆಂಬಲ ನೀಡುತ್ತ ಬಂದಿರುವವರು ಮಹಮದ್ ಇಕ್ಬಾಲ್​ರಿಂದ ಅರುಂಧತಿ ರಾಯ್ವರೆಗಿನ ನೂರೊಂದು ಸಾಂಸ್ಕೃತಿಕ ವ್ಯಕ್ತಿಗಳು! ಹಿಂದೂ ಮೌಲ್ಯಗಳು, ಅವುಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ರಾಮಾಯಣ ನಮಗಿಂದು ಮುಖ್ಯವಾಗುವುದು ಹೀಗೆ. ವಾಲ್ಮೀಕಿಯಿಂದಾರಂಭಿಸಿ ನಮ್ಮ ಕಾಲದ ಕುವೆಂಪುವರೆಗೆ ಅಸಂಖ್ಯ ಸಾಹಿತಿಗಳು, ಶಿಲ್ಪಿಗಳು, ಕಲಾಕಾರರು, ಕಲಾವಿದರು ಅಂದರೆ ಸಾಂಸ್ಕೃತಿಕ ವ್ಯಕ್ತಿಗಳು ನಿಸ್ವಾರ್ಥ ಮನೋಭಾವದಿಂದ ಕಟ್ಟಿದ ಭಾರತ ಎಂಬ ಅಸ್ಮಿತೆಯನ್ನು ತಥಾಕಥಿತ ಪ್ರಗತಿಪರ ಸಾಂಸ್ಕೃತಿಕ ವ್ಯಕ್ತಿಗಳು ವೈಯಕ್ತಿಕ ಸ್ವಾರ್ಥಸಾಧನೆಗಾಗಿ ಒಡೆಯಹೊರಟಿದ್ದಾರೆ. ಇದನ್ನೂ ಓದಿ: ಜಗದಗಲ | ಚೀನಾ ಹಿಂದೆ ಸರಿದಿಲ್ಲ, ಹಿಂದಕ್ಕೆ ದೂಡಿಸಿಕೊಂಡಿದೆ!

ಇವರ ಪೋಷಕ ಕಾಂಗ್ರೆಸ್ ಇಂದು ಅಧಿಕಾರದಲ್ಲಿರದಿರಬಹುದು. ಆದರೆ ಇವರು ಕಾಂಗ್ರೆಸ್ ಕಳೆಯಂತೇ ಸಾಂಸ್ಕೃತಿಕಲೋಕದಲ್ಲಿ ಹುಲುಸಾಗಿಯೇ ಹರಡಿಹೋಗಿದ್ದಾರೆ. ಈ ಆಷಾಢಭೂತಿಗಳು ಸಮಾಜದಲ್ಲಿ ಗಳಿಸಿಕೊಂಡಿರುವ ಸ್ಥಾನವನ್ನು ಕುಗ್ಗಿಸುವ ಮೂಲಕವಷ್ಟೇ ಈ ದೇಶವನ್ನು ನಾವು ಉಳಿಸಿಕೊಳ್ಳಬಹುದು. ಇದು ಸಾಧ್ಯವಾಗಬೇಕಾದರೆ ರಾಮಾಯಣ ಮೂಡಿಸಿದ ಭಾರತೀಯ ಎಂಬ ಅಸ್ಮಿತೆಯನ್ನು ನಾವು ನಮ್ಮೆದೆಗಳಲ್ಲಿ ಜಾಗೃತಗೊಳಿಸಿಕೊಳ್ಳಬೇಕು; ಈ ಅಸ್ಮಿತೆಯನ್ನು ಬಲಗೊಳಿಸುವ ವೈಚಾರಿಕ, ಸಾಹಿತ್ಯಕ, ಒಟ್ಟಾರೆ ಸಾಂಸ್ಕೃತಿಕ ಚಿಂತನೆಗಳು ನಮ್ಮಲ್ಲಿ ವ್ಯಾಪಕವಾಗಿ ಮೂಡಿಬರಬೇಕು. ಈ ಚಿಂತನೆಗಳು ರಾಷ್ಟ್ರಭಂಜಕ ‘ಕಾಕ’ ಚಿಂತನೆಗಳಿಗೆ ‘ವಿಷಹರಣಕಾರಿ’ (Anti-dote) ಆಗಿ ಕಾರ್ಯನಿರ್ವಹಿಸುವಂತಿರಬೇಕು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)