ನ
ತಾರುಣ್ಯ ಎಲ್ಲರ ಬೆಳವಣಿಗೆಯ ಒಂದು ಅವಿಭಾಜ್ಯ ಹಂತ. ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಯನ್ನು ತಲುಪುವಲ್ಲಿ ಎಲ್ಲರೂ ಈ ಅವಸ್ಥೆಯನ್ನು ದಾಟಿ ಹೋಗಲೇ ಬೇಕಾಗುತ್ತದೆ. ಇದು ಅನಿವಾರ್ಯ. ಅಂದಾಜು 10ರಿಂದ 20ರ ವಯಸ್ಸಿನವರೆಗೆ ಕೆಲವೇ ವರುಷಗಳಷ್ಟೇ ಸೀಮಿತವಾಗಿರುವ ಈ ಅವಧಿ ಅತ್ಯಂತ ರೋಚಕ, ರಮಣೀಯ, ಸೂಕ್ಷ್ಮ, ವಿಶೇಷ ಹಾಗೂ ವಿಶಿಷ್ಟ. ಈ ಅವಧಿಯಲ್ಲಿ ಕೊಂಚ ಏರು ಪೇರಾದರೂ, ಮೈ ಮರೆತರೂ ಅಪಾಯ ತಪ್ಪಿದ್ದಲ್ಲ. ಈ ವಯಸ್ಸಿನವರನ್ನು ಏನೂ ಅರಿಯದ ಮುಗ್ಧ ಬಾಲಕರೆಂದಾಗಲೀ, ಎಲ್ಲವನ್ನೂ ಅರಿತಿರುವ ಪ್ರೌಢರೆಂದಾಗಲೀ, ಪರಿಗಣಿಸುವಂತಿಲ್ಲ. ಅಪಕ್ವ ಮತ್ತು ಪರಿಪಕ್ವ ಮನೋಸ್ಥಿತಿಗಳ ನಡುವಿನ ಕಾಲವಿದು. ಒಮ್ಮೆ ಹಳಿ ತಪ್ಪಿದರೆ, ಮುಂದೆ ಸರಿದಾರಿಗೆ ಬರಲು ಸುಲಭ ಸಾಧ್ಯವಲ್ಲದ ಹಂತವಿದು. ಏನೇನೋ ಕನಸುಗಳನ್ನು ಕಾಣುವ, ತರತರದ ಭ್ರಮೆಗಳನ್ನು ಹೊಂದಿರುವ, ಪ್ರಶ್ನಿಸುವ, ಭಾವನೆಗಳೇ ಉಸ್ತುವಾರಿ ವಹಿಸಿರುವ ಸೂಕ್ಷ್ಮವಾದ ಸಮಯವಿದು.
ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಮಕ್ಕಳು ಯಾರನ್ನೂ ಒಳಬಿಡದ, ಬಿಡಲಿಚ್ಚಿಸದ ತಮ್ಮದೇ ಆದ ಒಂದು ಲೋಕವನ್ನು ಸೃಷ್ಟಿಸಿಕೊಳ್ಳುತ್ತಾರೆ. ಈ ವಯಸ್ಸಿನಲ್ಲಿ ಬುದ್ಧಿವಾದಗಳು, ಶಿಸ್ತಿನ ಪಾಠಗಳು, ನಿರ್ಬಂಧಗಳು, ಹಸ್ತಕ್ಷೇಪಗಳು ಅವರಿಗೆ ಇಷ್ಟವೆನಿಸೋದಿಲ್ಲ. ವಿವೇಕ ವಿವೇಚನೆಗಳ ಕೊರತೆಯಿಂದಾಗಿ ಅನೇಕ ದುಶ್ಚಟ-ದುರಾಭ್ಯಾಸಗಳಿಗೂ ಪ್ರಲೋಭ-ಪ್ರಚೋದನೆಗಳಿಗೂ ಸುಲಭವಾಗಿ ಬಲಿಯಾಗಬಲ್ಲ ಕಾಲವಿದು. ದುರ್ನಡತೆ, ಕೆಟ್ಟ ಅಭ್ಯಾಸಗಳು ರೂಡಿಯಾಗೋದು ಈ ವಯಸ್ಸಿನಲ್ಲೇ.
ಹಾಗೆಂದು, ತಾರುಣ್ಯಾವಸ್ಥೆ ಒಂದು ಕೆಟ್ಟ ಕಾಲ ಇಲ್ಲವೇ ಒಂದು ಸಮಸ್ಯೆ ಎಬ ಅರ್ಥವೂ ಅಲ್ಲ. ಎಲ್ಲರೂ ತಮ್ಮ ಜೀವಿತಕಾಲದಲ್ಲಿ ಹಾದು ಹೋಗಲೇಬೇಕಾದ ಒಂದು ತಾತ್ಕಾಲಿಕ ಅವಧಿ. ತಾರುಣ್ಯಾವಸ್ಥೆ ಅತಿ ಸುಂದರವೂ, ರೋಚಕವೂ ಹೌದು. ಈ ಅವಸ್ಥೆಯಲ್ಲಿ ಆಗುವ ಬದಲಾವಣೆಗಳನ್ನು ವಹಿಸಬೇಕಾದ ಮುಂಜಾಗ್ರತೆಗಳನ್ನು ಮುಂಚಿತವಾಗಿಯೇ ಅರಿತುಕೊಂಡಲ್ಲಿ, ಯಾವ ಅಪಾಯವೂ ಇಲ್ಲ. ಮೇಲಾಗಿ ಸದ್ಗುಣಗಳು, ಜೀವನದ ಧ್ಯೇಯೋದ್ದೇಶಗಳು ರೂಪುಗೊಳ್ಳುವುದು ಈ ಕಾಲದಲ್ಲೇ. ಈ ದಿನಗಳನ್ನು ರಚನಾತ್ಮಕ ದಿನಗಳನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಈ ಶುಭಚಿಂತನೆ.
ತಾರುಣ್ಯಾವಸ್ಥೆ ಕಾಲಿಡುತ್ತಿದ್ದಂತೆ, ಪಿಟ್ಯುಟರಿ ಗ್ರಂಥಿಯು ಸುರಿಸುವ ಬೆಳವಣಿಗೆಯನ್ನು ಪ್ರಚೋದಿಸುವ, ಸಂತಾನೋತ್ಪತ್ತಿಗೆೆ ನೆರವಾಗುವ ಗ್ರಂಥಿಗಳು ಸುರಿಸುವ ರಸ ವಿಶೇಷಗಳಿಂದಾಗಿ ಗಂಡು ಹೆಣ್ಣು ಮಕ್ಕಳಿಬ್ಬರಲ್ಲೂ ಅನೇಕ ಶಾರೀರಿಕ, ಮಾನಸಿಕ, ಲೈಂಗಿಕ ಹಾಗೂ ಸ್ವಭಾವ ಮತ್ತು ವರ್ತನೆಗಳಲ್ಲಿ ಬದಲಾವಣೆಗಳು ಕಾಣಲಾರಂಭಿಸುತ್ತವೆ.
ಶಾರೀರಿಕ ಬದಲಾವಣೆಗಳು: ಹುಡುಗರಲ್ಲಿ ಅಸ್ಥಿ, ಮಾಂಸಖಂಡಗಳ ಬೆಳವಣಿಗೆಯಾಗಿ, ದೇಹದ ಎತ್ತರ ಮತ್ತು ತೂಕ ಹೆಚ್ಚಾಗುತ್ತದೆ. ಸ್ನಾಯುಗಳು ಬಲಾಢ್ಯಗೊಳ್ಳುತ್ತವೆ. ಪುರುಷ ಲಕ್ಷಣವಾದ ಗಡ್ಡ ಮೀಸೆಗಳು ಕಾಣಿಸಿಕೊಳ್ಳುತ್ತವೆ. ಧ್ವನಿಯು ಮಕ್ಕಳ ಧ್ವನಿಯಿಂದ ಗಡುಸಾದ ಗಂಡಸು ಧ್ವನಿಗೆ ಮಾರ್ಪಾಡುಗೊಳ್ಳುತ್ತವೆ. ಇಡೀ ಶರೀರ ಪುರುಷ ಪ್ರಕೃತಿಯನ್ನು ರೂಪು ರೇಖೆಯನ್ನು ಪಡೆಯುತ್ತವೆ. ಬೆವರಿನ ಗ್ರಂಥಿಗಳು ಚುರುಕುಗೊಳ್ಳುತ್ತವೆ. ಹೆಣ್ಣು ಮಕ್ಕಳು ಅಸ್ಥಿ ಮತ್ತು ಮಾಂಸಖಂಡಗಳ ಬೆಳವಣಿಗೆಯ ಪರಿಣಾಮವಾಗಿ ಶಾರೀರಿಕ ಎತ್ತರ ತೂಕಗಳು ಹೆಚ್ಚಾಗುತ್ತವೆ. ಧ್ವನಿ ಮಾತ್ರ ಹೆಣ್ಣು ಧ್ವನಿಯಾಗಿಯೇ ಉಳಿದುಕೊಳ್ಳುತ್ತದೆ. ಹುಡುಗಿ ಸ್ತ್ರೀ ಸಹಜವಾದ ಅಂದ ಲಾವಣ್ಯವನ್ನು ಪಡೆದುಕೊಳ್ಳುತ್ತಾಳೆ.
ಲೈಂಗಿಕ ಬದಲಾವಣೆಗಳು: ಹುಡುಗ ಹುಡುಗಿಯರಲ್ಲಿ ಸಂತಾನೋತ್ಪತ್ತಿಗೆ ಸಂಬಂಧಿಸಿದ ಅಂಗಾಂಗಗಳು, ಗ್ರಂಥಿಗಳು ಗಾತ್ರದಲ್ಲೂ ಬೆಳೆಯಲಾರಂಭಿಸಿ ಕ್ರಿಯೆಯಲ್ಲೂ ಚುರುಕುಗೊಳ್ಳುತ್ತವೆ. ಇಬ್ಬರಲ್ಲೂ ಲೈಗಿಂಕಾಸಕ್ತಿ ಪ್ರಚೋದನೆಗೊಳ್ಳುತ್ತದೆ. ಇಬ್ಬರೂ ಸಂತಾನೋತ್ಪತ್ತಿಗೆ ತಯಾರಾಗಿರುತ್ತಾರೆ.
ಹುಡುಗರಲ್ಲಿ ಸಾಹಸ ಪ್ರವೃತ್ತಿ, ಮೊಂಡು ಧೈರ್ಯ, ಆತ್ಮ ವಿಶ್ವಾಸಗಳು ಹೆಚ್ಚಾಗಿರುತ್ತವೆ. ಈ ವಯಸ್ಸಿನಲ್ಲಿ ಓಡಾಡುವ, ಹೊಡೆದಾಡುವ, ಗುದ್ದಾಡುವ ಕ್ರೀಡೆಗಳನ್ನು ಹುಡುಗರು ಹೆಚ್ಚು ಹೆಚ್ಚಾಗಿ ಮೆಚ್ಚಿಕೊಳ್ಳುತ್ತಾರೆ. ಏನನ್ನೂ, ಎಲ್ಲವನ್ನೂ ಮಾಡಬಲ್ಲೆನೆಂಬ ಒಣ ಜಂಭ ಧೈರ್ಯ ಇವರಲ್ಲಿ ಹೆಚ್ಚಾಗಿ ಕಾಣಬರುತ್ತೆ. ಎಲ್ಲವನ್ನೂ ಪ್ರಶ್ನಿಸುವ ಮನೋಭಾವ ಹೆಚ್ಚಾಗುತ್ತದೆ. ಹುಡುಗಿಯರಲ್ಲಿ ಸ್ತ್ರೀ ಸಹಜವಾದ ನಾಚಿಕೆ, ಹೆಣ್ಣುತನ ಕಾಣಿಸಿಕೊಳ್ಳುತ್ತದೆ. ತಾನು ರೂಪವತಿಯಾಗುತ್ತಿದ್ದೇನೆ, ಹುಡುಗರು ತನ್ನತ್ತ ಆಕರ್ಷಿತರಾಗುತ್ತಿದ್ದಾರೆ ಎಂಬೆಲ್ಲಾ ವಿಕಲ್ಪಗಳು ಹುಟ್ಟಿಕೊಳ್ಳುತ್ತವೆ. ತನ್ನ ಸೌಂದರ್ಯವನ್ನೇ ವೀಕ್ಷಿಸುತ್ತಾ ಕನ್ನಡಿಯ ಮುಂದೆ ಬಹಳಷ್ಟು ಸಮಯವನ್ನು ಕಳೆಯುತ್ತಾರೆ. ಒಡವೆ, ಬಟ್ಟೆ ಬರೆ ಸೌಂದರ್ಯವರ್ಧಕ ವಸ್ತುಗಳಿಗೆ ಮಾರುಹೋಗುತ್ತಾರೆ. ಅಂತೆಯೇ ತಾರುಣ್ಯದಲ್ಲಿ ಹುಡುಗಿಯರು ತುಂಬಾ ಭಾವನಾ ಪರವಶರಾಗುತ್ತಾರೆ. ಸಣ್ಣ ಪುಟ್ಟ ವಿಷಯಗಳಿಗೂ ಕಣ್ಣೀರ ಧಾರೆಯನ್ನೇ ಹರಿಸುತ್ತಾರೆ. ಒಟ್ಟಿನಲ್ಲಿ ಗಂಡು ಹೆಣ್ಣು ಮಕ್ಕಳಿಬ್ಬರೂ ವಾಸ್ತವಿಕತೆಗೆ ದೂರವಾದ ಭಾವನಾತ್ಮಕ ಪ್ರಪಂಚದಲ್ಲಿ ವಿಹರಿಸುತ್ತಿರುತ್ತಾರೆ; ಮಾತ್ರವೇ ಅಲ್ಲ ಪೂರ್ವಾಪರ ಯೋಚನೆಗಳಿಲ್ಲದೆ ದುಡುಕುತ್ತಾರೆ. ಈ ಕಾರಣದಿಂದಲೇ, ಈ ವಯಸ್ಸಿನಲ್ಲಿ ಇವರನ್ನು ದಾರಿ ತಪ್ಪಿಸೋದು ಸುಲಭ.
ವರ್ತನೆಗಳಲ್ಲಿ ಬದಲಾವಣೆ: ಗಂಡು ಹೆಣ್ಣುಗಳಿಬ್ಬರ ಗುಣ ಸ್ವಭಾವ, ವರ್ತನೆಗಳಲ್ಲೂ ಗಣನೀಯವಾದ ಬದಲಾವಣೆಗಳನ್ನು ಗುರುತಿಸಬಹುದು. ಕೆಲವರಲ್ಲಿ ಅಶಿಸ್ತು, ಅವಿಧೇಯತನ, ಹಿಂಸಾಮನೋಪ್ರವೃತ್ತಿ ಬೇಜಾವಾಬ್ದಾರಿತನ, ಪ್ರಶ್ನಿಸುವ ಮನೋಭಾವ ಎದ್ದು ಕಾಣುತ್ತದೆ. ಇಬ್ಬರಲ್ಲೂ ಲೈಂಗಿಕ ಆಕರ್ಷಣೆಗೆ ಬಲವಾಗಿ ಬೆಳೆಯುವುದರಿಂದ ದಾರಿ ತಪು್ಪವ ಸಾಧ್ಯತೆ ಹೆಚ್ಚು. ಇನ್ನು ಕೆಲ ಹುಡುಗರು ದರೋಡೆ, ಕೊಲೆ, ಸುಲಿಗೆ, ಹೊಡೆದಾಟ, ಜಗಳ, ಮುಷ್ಕರಗಳಲ್ಲಿ ಭಾಗಿಗಳಾಗುತ್ತಾರೆ. ಹುಡುಗಿಯರು ಸೇರಿದಂತೆ ಈ ನಡುವೆ ಕೆಲವರು ಧೂಮಪಾನ, ಮದ್ಯಪಾನ, ಮಾದಕ ವಸ್ತುಗಳಿಗೆ ಬಲಿಯಾಗುತ್ತಿರೋದೂ ಸರ್ವೆ ಸಾಮಾನ್ಯ. ಕ್ಷುಲ್ಲಕ ವಿಷಯಗಳಿಗೆ ಮಾಡಿಕೊಳ್ಳುವ ಆತ್ಮಹತ್ಯೆಗಳೂ ಈ ವಯಸ್ಸಿನಲ್ಲಿ ಅಪರೂಪವೇನಲ್ಲ. ಪುಟ್ಟ ಜಗಳ, ಅವಮಾನ, ಅನುತೀರ್ಣತೆ, ಪ್ರೇಮ ವೈಫಲ್ಯಗಳೇ ಮುಂತಾದ ಪುಟ್ಟ ಕಾರಣಗಳಿಗೆ ತಮ್ಮ ಜೀವನವನ್ನೇ ಅಂತ್ಯಗೊಳಿಸುವವರೂ ಇದ್ದಾರೆ. ಕೆಲವರಂತೂ ಪ್ರೇಮವೆಂಬ ಜ್ವರಕ್ಕೆ ತುತ್ತಾಗಿ, ವಿದ್ಯಾಭ್ಯಾಸವನ್ನೇ ಮರೆತು ಹಳಿ ತಪ್ಪಿದ ರೈಲು ಬಂಡಿಯಂತಾಗುತ್ತಾರೆ. ‘ಕಾಮಾತುರಾಣಾ ನಭಯಾಂ ನಲಜ್ಜಾಂ’ ಎಂಬ ಮಾತಿನಂತೆ ಪ್ರೇಮ ಪಾಶದಲ್ಲಿ ಸಿಲುಕಿದವರಿಗೆ ಯಾರ ಭಯವೂ ಇಲ್ಲ; ಯಾವ ಲಜ್ಜೆಯೂ ಇರೋದಿಲ್ಲ. ಕಾರಣ 20 ವರುಷಗಳು ಬೇಕು ಒಂದು ತಾಯಿಗೆ ತನ್ನ ಮಗನನ್ನು ಬೆಳೆಸಲು; ಆದರೆ 20 ನಿಮಿಷಗಳು ಸಾಕು ಒಂದು ಹುಡುಗಿಗೆ ಅವನ ತಲೆಯನ್ನು ಕೆಡಿಸಲು. ಅನೈತಿಕ ಲೈಂಗಿಕ ಸಂಪರ್ಕದಿಂದಾಗಿ ಲೈಂಗಿಕ ರೋಗಗಳಿಗೂ ಈ ಯುವ ಜನಾಂಗ ಬಲಿಯಾಗುತ್ತಿರೋದು ಮಾತ್ರವೇ ಅಲ್ಲ ಗರ್ಭಪಾತ ಮಾಡಿಸಿಕೊಳ್ಳುವ ಅವಿವಾಹಿತ ಬಾಲೆಯರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬರುತ್ತಿರುವುದು ವಿಷಾದಕರ. ಶಾಲಾ ಕಾಲೇಜುಗಳಲ್ಲಿ ಶಿಕ್ಷಕರನ್ನು ಹಾಗೂ ಮನೆಯಲ್ಲಿ ಹೆತ್ತವರನ್ನು ಜರಿಯುವ, ಹೊಡೆಯುವ ಇಲ್ಲವೇ ಕೆಲವೊಮ್ಮೆ ಕೊಂದೇ ಬಿಡುವ ಪ್ರಕರಣಗಳೂ ಅಪರೂಪವೇನಲ್ಲ.
ತಾರುಣ್ಯ ತಲ್ಲಣಗಳಿಗೆ ಒಳಗಾಗಿ, ತಮ್ಮ ಭವಿಷ್ಯಕ್ಕೆ ತಾವೇ ಕೊಳ್ಳಿ ಇಟ್ಟುಕೊಳ್ಳುವ ಈ ಯುವ ಜನಾಂಗವನ್ನು ರಕ್ಷಿಸಿ ಕಾಲ ಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕಾದುದು ಪಾಲಕರು ಮತ್ತು ಶಿಕ್ಷಕರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಅವರ ಸ್ನೇಹಿತರ ಬಗ್ಗೆ ಒಂದು ಕಣ್ಣಿರಲಿ, ಕೆಟ್ಟವರ ಸಹವಾಸ ಮಾಡೋದರ ಬದಲು ಮಕ್ಕಳು ಒಂಟಿಯಾಗಿರೋದೇ ಲೇಸು. ಬಾಲ್ಯದಿಂದಲೇ ಶಿಕ್ಷಣದ ಜತೆ ಸಂಸ್ಕಾರವೆಂಬ ಚುಚ್ಚುಮದ್ದನ್ನು ನೀಡುತ್ತಿರಬೇಕು. ಪೋಷಕರಾಗಲೀ ಶಿಕ್ಷಕರಾಗಲೀ ಮಕ್ಕಳ ಜತೆ ಆತ್ಮೀಯ ಮಿತ್ರರಂತೆ ವರ್ತಿಸಿದರೆ, ಹೆಚ್ಚಿನ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಮಕ್ಕಳಿಗೆ ಆಗಾಗ ಒಳ್ಳೊಳ್ಳೆಯ ನೀತಿ ಕತೆಗಳನ್ನು ಹೇಳುತ್ತಿರಬೇಕು; ಮೌಲ್ಯಧಾರಿತ ಶಿಕ್ಷಣವನ್ನು ನೀಡಬೇಕು. ಮಕ್ಕಳಿಗೆ ಮಿತಿಮೀರಿದ ಸ್ವಾತಂತ್ರ್ಯ ಒಳ್ಳೆಯದಲ್ಲ; ಅತಿಯಾದ ನಿರ್ಬಂಧಗಳೂ ಒಳಿತಲ್ಲ. ನಾವು ಹಿರಿಯರು, ಹೆತ್ತವರು, ನಾವೇ ಹೇಳಿದ್ದೇ ಸರಿ ಎಂಬ ಧೋರಣೆಯನ್ನು ಬಿಟ್ಟು, ಅವರ ಪ್ರೀತಿ ವಿಶ್ವಾಸಗಳನ್ನು ಗಳಿಸಿ ಅವರ ದೃಷ್ಟಿ ಕೋನದಿಂದಲೂ ನೋಡುತ್ತಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಏಕಾಂತದಲ್ಲಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ಬುದ್ಧಿವಾದಗಳನ್ನು ತಿಳಿಹೇಳುತ್ತಿರಬೇಕು. ಒಟ್ಟಿನಲ್ಲಿ ತಾರುಣ್ಯ ಅವರ ಪಾಲಿಗೆ ಸದ್ಗುಣಗಳನ್ನು ಕಲಿಯುವ, ಭವ್ಯವಾದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಸುಂದರ ಸ್ಮರಣೀಯ ವರುಷಗಳಾಗಲಿ. ಆಗಲೇ ಅವರ ಜೀವನ ಹರುಷದಾಯಕವಾಗುತ್ತವೆ.