ಅಂಕಣ

ಚೀನೀ ಕಮ್ಯೂನಿಸ್ಟ್ ಸರ್ಕಾರದ ಅಮಾನವೀಯ ಕರ್ಮಕಾಂಡ

ಇದೇ ಏಪ್ರಿಲ್ 30ರಂದು ಚೀನೀ ಅಧ್ಯಕ್ಷ ಷಿ ಜಿನ್​ಪಿಂಗ್ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಕರೊನಾ ಎರಡನೆಯ ಅಲೆಯಿಂದಾಗಿ ಅತೀವ ಸಂಕಷ್ಟಕ್ಕೀಡಾಗಿರುವ ಭಾರತಕ್ಕೆ ಅಗತ್ಯ ವೈದ್ಯಕೀಯ ಸಹಾಯ ಒದಗಿಸುವ ಪ್ರಸ್ತಾಪ ಮಾಡಿದರು. ಮರುದಿನ ಚೀನೀ ಕಮ್ಯೂನಿಸ್ಟ್ ಪಾರ್ಟಿಯ ಸೆಂಟ್ರಲ್ ಪೊಲಿಟಿಕಲ್ ಆಂಡ್ ಲೀಗಲ್ ಅಫೆರ್ಸ್ ಕಮಿಷನ್ ಚೀನೀ ಸಾಮಾಜಿಕ ಜಾಲತಾಣ ವೀಬೋದಲ್ಲಿನ ತನ್ನ ಅಕೌಂಟ್​ನಲ್ಲಿ ಹಾಕಿದ ‘ಚೈನಾ ಲೈಟಿಂಗ್ ಎ ಫೈರ್ ವರ್ಸಸ್ ಇಂಡಿಯಾ ಲೈಟಿಂಗ್ ಎ ಫೈರ್’ ಎಂಬ ಶೀರ್ಷಿಕೆಯ ಪೋಸ್ಟ್​ನಲ್ಲಿ ಎರಡು ಚಿತ್ರಗಳಿದ್ದವು. ಮೊದಲನೆಯ ಚಿತ್ರದಲ್ಲಿ ಚೀನಾ ಕಳೆದವಾರ ಉಡಾಯಿಸಿದ ರಾಕೆಟ್ ಇದ್ದರೆ, ಎರಡನೆಯ ಚಿತ್ರದಲ್ಲಿ ಭಾರತದಲ್ಲಿ ಕರೊನಾಗೆ ಬಲಿಯಾದವರ ಶವದಹನದ ಚಿತ್ರವಿತ್ತು.

ಫೇಸ್​ಬುಕ್​ನ ಚೀನೀ ಅವತಾರವಾದ ವೀಬೋನಲ್ಲಿ ಚೀನಿ ಕಮ್ಯೂನಿಸ್ಟ್ ಪಕ್ಷದ ಆ ಅಕೌಂಟ್​ಗೆ ಒಂದೂವರೆ ಕೋಟಿ ಫಾಲೋವರ್ಸ್ ಇದ್ದಾರೆ. ಮೇಲೆ ಉಲ್ಲೇಖಿಸಿದ ಪೋಸ್ಟ್ ಕಾಣಿಸಿಕೊಂಡ ಕೆಲವೇ ತಾಸುಗಳಲ್ಲಿ 9 ಸಾವಿರ ಬಾರಿ ಶೇರ್ ಆಯಿತು, ಹೆಚ್ಚಾಗಿ ಸರ್ಕಾರದ ವಿವಿಧ ಖಾತೆಗಳಿಂದಲೇ. ಆದರೆ ನಂತರ ಬೇರೆ ಬಗೆಯ ಪ್ರತಿಕ್ರಿಯೆಗಳು ಬರತೊಡಗಿದವು. ಇದು ಅಸಂವೇದನಾಶೀಲ, ಅಮಾನವೀಯ, ಕೆಟ್ಟ ಬಗೆಯ ಪ್ರಚಾರ ಎಂದೆಲ್ಲ ಟೀಕೆಗಳು ಸಾಮಾನ್ಯ ಚೀನೀಯರಿಂದ ಒಂದೇಸಮನೆ ಬರತೊಡಗಿದವು. ಪರಿಣಾಮವಾಗಿ ಆ ಪೋಸ್ಟ್ ಅನ್ನು ತೆಗೆಯಿತು. ಸಾಮಾನ್ಯವಾಗಿ ಕಮ್ಯೂನಿಸ್ಟ್ ಪಕ್ಷ ಹೀಗೆ ತನ್ನದೊಂದು ಪೋಸ್ಟ್​ಗೆ ತನ್ನದೇ ಜನರಿಂದ ಟೀಕೆಗೊಳಗಾಗುವುದು, ಪರಿಣಾಮವಾಗಿ ಪೋಸ್ಟ್ ಅನ್ನು ತೆಗೆಯುವುದು ಘಟಿಸುವುದಿಲ್ಲ.

ಜಗತ್ತಿಗೇ ಕರೊನಾ ಮಾರಿಯನ್ನು ಹರಡಿದ ದುರುಳ ಸರ್ಕಾರವೊಂದು ತನ್ನ ಕುಪ್ರಚಾರಕ್ಕಾಗಿ ಎಂತಹ ಕೀಳುಮಟ್ಟಕ್ಕೆ ಇಳಿಯಬಹುದೆಂಬುದಕ್ಕೆ ಇದೊಂದು ಉದಾಹರಣೆ. ಅಧ್ಯಕ್ಷ ಜಿನ್​ಪಿಂಗ್ ಹಿಂದಿನ ದಿನವಷ್ಟೇ ನೀಡಿದ್ದ ‘ಸಹಾಯ’ದ ಪ್ರಸ್ತಾಪ ಅದೆಷ್ಟು ವಿಶ್ವಾಸಾರ್ಹ ಎಂಬ ಸೂಚನೆಯೂ ನಮಗಿಲ್ಲಿ ಸಿಗುತ್ತದೆ.

ಈಗ ಚೀನೀ ರಾಕೆಟ್​ನ ಕಥೆ ನೋಡೋಣ. ತನ್ನ ಮೊದಲ ಅಂತರಿಕ್ಷ ನಿಲ್ದಾಣವನ್ನು ಸ್ಥಾಪಿಸಹೊರಟಿರುವ ಚೀನಾ ಆ ಕಾರ್ಯಯೋಜನೆ ಅಂಗವಾಗಿ ಕಳೆದ ವಾರವಷ್ಟೇ 21 ಟನ್ ಭಾರದ ‘ಲಾಂಗ್​ವಾರ್ಚ್ 5ಬಿ’ ಎಂಬ ಪೇಲೋಡ್ ರಾಕೆಟ್ ಒಂದನ್ನು ಅಂತರಿಕ್ಷಕ್ಕೆ ಉಡಾಯಿಸಿತು. ಹೀಗೆ ಅಂತರಿಕ್ಷಕ್ಕೆ ಹಾರಿದ ಪೇಲೋಡ್ ಅಂದರೆ ಅಂತರಿಕ್ಷಕ್ಕೆ ಏನನ್ನಾದರೂ ಹೊತ್ತು ಸಾಗಿಸಿದ ರಾಕೆಟ್​ಗಳು ತಮ್ಮ ಕೆಲಸ ಮುಗಿದ ನಂತರ ನಿರ್ದಿಷ್ಟ ಬಗೆಯಲ್ಲೇ ಹಿಂತಿರುಗಿ ಬಂದು ‘ಸಾಗರದಲ್ಲಿ’ ಬೀಳುವಂತಹ ವ್ಯವಸ್ಥೆಯಿರುತ್ತದೆ. ಆದರೆ ಚೀನೀ ಅಂತರಿಕ್ಷ ವಿಜ್ಞಾನಿಗಳು ಈ ರಾಕೆಟ್​ಗೆ ಅಂತಹ ಯಾವ ವ್ಯವಸ್ಥೆಯನ್ನೂ ಮಾಡಿಲ್ಲ. ಪರಿಣಾಮವಾಗಿ ಅದು ಸದ್ಯದಲ್ಲೇ ಭೂಮಿಯ ಯಾವ ಭಾಗಕ್ಕಾದರೂ ಬೀಳಲಿದೆ. ಹೀಗೆ ನಿಯಂತ್ರಣವಿಲ್ಲದೆ ಭೂಮಿಗೆ ಬೀಳುವ ರಾಕೆಟ್, ಉಪಗ್ರಹ ಮುಂತಾದವು ಭೂ ವಾತಾವರಣ ಪ್ರವೇಶಿಸುವಾಗ ಹೊತ್ತಿ ಉರಿದುಹೋದರೂ ಕೆಲವು ತಮ್ಮ ಗಾತ್ರಕ್ಕೆ ಅನುಗುಣವಾಗಿ ಪೂರ್ಣವಾಗಿ ಉರಿದುಹೋಗದೇ ಹಲವು

ಚೂರುಗಳಾಗಿ ಸಿಡಿದು ಭೂಮಿಯ ವಿವಿಧೆಡೆ ಚೆಲ್ಲಾಡಿಹೋಗುತ್ತವೆ. ಇವು ಜನವಸತಿಯ ಮೇಲೆ ಬಿದ್ದರೆ ಅನಾಹುತ ಖಂಡಿತ. ಈ ಬೃಹತ್ ಚೀನೀ ರಾಕೆಟ್​ನ ಬಹುಭಾಗ ಈಗಿನ ಲೆಕ್ಕಾಚಾರದ ಪ್ರಕಾರ ಉತ್ತರದಲ್ಲಿ ಅಮೆರಿಕ, ದಕ್ಷಿಣ ಯುರೋಪ್, ಟರ್ಕಿ, ಮಧ್ಯ ಏಷ್ಯಾ ಮತ್ತು ಚೀನಾದಿಂದ ಹಿಡಿದು ದಕ್ಷಿಣದಲ್ಲಿ ಚಿಲಿ, ಅರ್ಜೆಂಟೈನಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ಗಳ ನಡುವಿನ ಯಾವುದೇ ಪ್ರದೇಶದಲ್ಲಿ ಬೀಳಬಹುದಾಗಿದೆ. ಇದರ ಅಂತಿಮ ಪರಿಣಾಮ ಹೇಗಿರುತ್ತದೆಂದು ಈಗಲೇ ಹೇಳಲಾಗದಿದ್ದರೂ ರಾಕೆಟ್ ಚೂರುಗಳು ಜನವಸತಿ ಪ್ರದೇಶಗಳ ಮೇಲೆ ಬಿದ್ದರೆ ‘ಚೈನಾ ಲೈಟಿಂಗ್ ಎ ಫೈರ್’ನ ಪರಿಣಾಮದಿಂದಾಗಿ ಅಲ್ಲಲ್ಲಿ ‘ಫೈರ್’ಗಳು ಹೊತ್ತಿಕೊಳ್ಳಬಹುದು.

ಕಳೆದ ವರ್ಷವೂ ಹೀಗೇ ಚೀನೀ ರಾಕೆಟ್ ಒಂದು ಚೂರಾಗಿ ಆಫ್ರಿಕಾದ ಕೆಲ ಪ್ರದೇಶಗಳಲ್ಲಿ ಬಿದ್ದಿತ್ತು. ಜನವಿಹೀನ ಪ್ರದೇಶಗಳಲ್ಲಿ ಬಿದ್ದದ್ದರಿಂದಾಗಿ ಜೀವಹಾನಿಯಾಗದಿದ್ದರೂ ಸೋನಿಕ್ ಬೂಮ್ ಶಬ್ದಗಳು ಮತ್ತು ಕಣ್ಣುಕುಕ್ಕುವ ಕ್ಷಣಿಕ ಪ್ರಕಾಶಗಳಿಂದಾಗಿ ಹತ್ತಿರದ ಹಳ್ಳಿ, ಪಟ್ಟಣಗಳ ಜನರು ಗಾಬರಿಗೊಂಡಿದ್ದರು.

ನಮ್ಮಲ್ಲಿನ ಸಾವುಗಳನ್ನು ಲೇವಡಿ ಮಾಡಿಕೊಂಡು ಖುಷಿಪಡುತ್ತಿರುವ ಚೀನೀ ಕಮ್ಯೂನಿಸ್ಟ್ ಸರ್ಕಾರ ಹೊರಜಗತ್ತಿನಿಂದ ಮುಚ್ಚಿಡಲು ಹೆಣಗಿದ ಒಂದಷ್ಟು ವಿಷಯಗಳನ್ನೀಗ ನೆನಪಿಸಿಕೊಳ್ಳೋಣ. ನಮ್ಮಲ್ಲಿ ಈಗ ಕಾಣಿಸಿಕೊಂಡಿರುವ ಎರಡನೆಯ ಅಲೆ ಚೀನಾದ ಮೇಲೆ ಎರಗಿದ್ದು ವರ್ಷದ ಹಿಂದೆಯೇ. ಅದರ ಪರಿಣಾಮಗಳು ಮತ್ತು ಅವುಗಳ ನಿವಾರಣೆಗಾಗಿ ಸರ್ಕಾರ ಕೈಗೊಂಡ ಅಮಾನವೀಯ ಕ್ರಮಗಳತ್ತ ಗಮನ ಹರಿಸೋಣ. ಆ ದೇಶದಲ್ಲಿ ಮೊದಲ ಅಲೆ ಕಾಣಿಸಿಕೊಂಡದ್ದು 2020ರ ಜನವರಿಯಲ್ಲಿ. ಡಿಸೆಂಬರ್​ನಲ್ಲೇ ವೂಹಾನ್ ನಗರದಲ್ಲಿ ವೈರಸ್ ಕಾಣಿಸಿಕೊಂಡದ್ದು, ಅದನ್ನು ಮುಚ್ಚಿಡಲು ಹೆಣಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕರೊನಾ ಸೋಂಕು ಸಾಂಕ್ರಾಮಿಕ ಎಂದು ಚೀನೀ ಆರೋಗ್ಯ ಸಚಿವಾಲಯ ಅಧ್ಯಕ್ಷ ಜಿನ್​ಪಿಂಗ್​ಗೆ ಅಧಿಕೃತವಾಗಿ ಹೇಳಿದ್ದು 2020 ಜನವರಿ 7ರಂದು. ಆದರೆ ಅಧ್ಯಕ್ಷನ ಆದೇಶದ ಮೇರೆಗೇ ಆ ವಿಷಯವನ್ನು ಚೀನಾ ಜಗತ್ತಿನಿಂದ ಮರೆಯಾಗಿಟ್ಟಿತು. ಈ ವಿಷಯವನ್ನು ಬಹಿರಂಗಗೊಳಿಸಿದ್ದು ವೂಹಾನ್ ನಗರದ ಮೇಯರ್, ಜನವರಿ 27ರಂದು. ತನ್ನಲ್ಲಿ ಸೋಂಕಿನ ಮೊದಲ ಅಲೆಯನ್ನು ತಡೆಯಲು ಚೀನೀ ಸರ್ಕಾರ ಜನವರಿಯ ಮೊದಲ ಮೂರು ವಾರಗಳಲ್ಲಿ 200 ಕೋಟಿ ಮಾಸ್ಕ್​ಗಳನ್ನೂ, 40 ಲಕ್ಷ ಪಿಪಿಇ ಕಿಟ್​ಗಳನ್ನೂ ಸಂಗ್ರಹಿಸಿತು. ಜತೆಗೆ ಅದು ಮಾಡಿದ ಇನ್ನೊಂದು ಕೃತ್ಯ ಮಾನವತೆಗೆ ಎಸಗಿದ ಹೇಯ ಅಪಚಾರ. ವೂಹಾನ್ ನಗರದಿಂದ ದೇಶದ ಇತರ ಭಾಗಗಳಿಗೆ ಬಸ್, ರೈಲು ಮತ್ತು ವಿಮಾನ ಸಂಪರ್ಕವನ್ನು ಕತ್ತರಿಸಿದ ಸರ್ಕಾರ ಅದೇ ವೂಹಾನ್ ನಗರದಿಂದ ಜಗತ್ತಿನ ಇತರ ನಗರಗಳಿಗೆ ವಿಮಾನ ಸಂಪರ್ಕವನ್ನು ಜಾರಿಯಲ್ಲಿಟ್ಟಿತು! ಇದರ ಉದ್ದೇಶ ಇಷ್ಟೇ- ವೈರಸ್ ಚೀನಾದ ಇತರ ಭಾಗಗಳಿಗೆ ಹರಡಬಾರದು, ಅದರೆ ಜಗತ್ತಿನ ಇತರ ದೇಶಗಳಿಗೆ ಹರಡಬೇಕು! ಅದರ ಉದ್ದೇಶ ಯಶಸ್ವಿಯಾಗಿ ಇಟಲಿ, ಸ್ಪೇನ್, ಜರ್ಮನಿ, ಫ್ರಾನ್ಸ್ ಮತ್ತು ಅಮೆರಿಕಗಳು ಸೋಂಕಿಗೆ ನಲುಗಿಹೋದವು.

ಎಲ್ಲ ಪ್ರಯತ್ನಗಳನ್ನೂ ಮೀರಿ ಕರೊನಾವೈರಸ್ ವೂಹಾನ್ ನಗರವನ್ನೂ, ಹುಬೈ ಪ್ರಾಂತ್ಯವನ್ನೂ ದಾಟಿ ಪೂರ್ವ ಚೀನಾದ ಉದ್ದಗಲಕ್ಕೂ ಹರಡತೊಡಗಿತು. ಆಗ ಸರ್ಕಾರಕ್ಕೆ ತೋಚಿದ ಮಾರ್ಗ ಒಂದೇ- ಇಡೀ ಹುಬೈ ಪ್ರಾಂತ್ಯವನ್ನು ಕಠಿಣ ಲಾಕ್​ಡೌನ್​ಗೊಳಪಡಿಸುವುದು. ಅದಾದದ್ದು ಜನವರಿ 23ರಂದು. ಅದಕ್ಕೆ ಪೂರ್ವತಯಾರಿಯಾಗಿ, ನಿಜ ಹೇಳಬೇಕೆಂದರೆ ತನ್ನ ಲಾಕ್​ಡೌನ್ ನಿರ್ಧಾರವನ್ನು ಸಮರ್ಥಿಸಿಕೊಳ್ಳಲೋಸುಗ ಸರ್ಕಾರ ಕರೊನಾ ಸೋಂಕು ಸಾಂಕ್ರಾಮಿಕ ಎಂದು ಜನವರಿ 21ರಂದು ಘೊಷಿಸಿತು. ಇದನ್ನು ಮೊದಲೇ ಹೇಳಿದ್ದರೆ?

2020ರ ಜನವರಿಯಲ್ಲಿ ಆರಂಭವಾಗಿ ಫೆಬ್ರವರಿ, ಮಾರ್ಚ್​ನಲ್ಲಿ ಮುಂದುವರಿದ ಮೊದಲ ಅಲೆಯಲ್ಲಿ ಸೋಂಕಿನ ವ್ಯಾಪಕತೆ ಬಗ್ಗೆ ನಿಖರ ಮಾಹಿತಿಗಳಿಲ್ಲ. ಸರ್ಕಾರ ಹೇಳಿದ್ದು ಸುಮಾರು 82 ಸಾವಿರ ಜನರಿಗೆ ಸೋಂಕು ತಗುಲಿತು ಮತ್ತು ಅವರಲ್ಲಿ ಶೇಕಡ 90 ರೋಗಿಗಳು ಗುಣಮುಖರಾದರು ಎಂದು. ಚೀನೀ ಕಮ್ಯೂನಿಸ್ಟ್ ಸರ್ಕಾರ ಹೇಳುವ ಎಲ್ಲ ಸುಳ್ಳುಗಳಂತೇ ಇದೂ ಸುಳ್ಳೇ ಆಗಿರುತ್ತದೆ. ಆದಾಗ್ಯೂ ಏಪ್ರಿಲ್ ಆರಂಭದ ಹೊತ್ತಿಗೆ ಸೋಂಕಿನ ಹರಡುವಿಕೆ ತಡೆಯುವಲ್ಲಿ ಯಶಸ್ವಿಯಾಗಿರುವುದಾಗಿ ಘೊಷಿಸಿದ ಸರ್ಕಾರ ವೂಹಾನ್ ನಗರದಲ್ಲಿ ವಿಧಿಸಲಾಗಿದ್ದ ಲಾಕ್​ಡೌನನ್ನು 76 ದಿನಗಳ ನಂತರ ಏಪ್ರಿಲ್ 8ರಂದು ತೆಗೆದುಹಾಕಿತು. ಅದನ್ನೊಂದು ಸಂಭ್ರಮದಂತೆ ಆಚರಿಸಿ, ನಗರವನ್ನು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಿ ಅದನ್ನು ಚೀನಾ ಹೊರಜಗತ್ತಿನ ಮುಂದೆ ದೊಡ್ಡದಾಗಿ ಪ್ರಚಾರ ಮಾಡಿತು. (ಆದರೆ ಅದೇ ದಿನ ಅವಕಾಶ ಸಿಕ್ಕಿದ್ದೇ 55 ಸಾವಿರ ಜನ ಸಿಕ್ಕಸಿಕ್ಕ ವಾಹನಗಳಲ್ಲಿ ವೂಹಾನ್ ನಗರವನ್ನು ತೊರೆದು ಓಡಿಹೋದದ್ದನ್ನು ಮಾತ್ರ ಮುಚ್ಚಿಟ್ಟರು.)

ಯಾವುದನ್ನು ತನ್ನ ಯಶಸ್ಸು ಎಂದು ಚೀನೀ ಸರ್ಕಾರ ಘೊಷಿಸಿಕೊಂಡಿತೋ ವಾಸ್ತವವಾಗಿ ಅದು ಮತ್ತೊಂದು, ಹಿಂದಿನದಕ್ಕಿಂತಲೂ ದೊಡ್ಡದಾದ ಅನಾಹುತಕ್ಕೆ ಮುನ್ನುಡಿಯಾಯಿತು, ಎರಡನೆಯ ಅಲೆ ಆರಂಭವಾಗಿತ್ತು. ಮೊದಲ ಅಲೆಯಲ್ಲಿ ಕೊನೇಪಕ್ಷ ಅಧಿಕೃತವಾಗಿ ಹುಬೈ ಪ್ರಾಂತ್ಯದಲ್ಲಿ ಲಾಕ್​ಡೌನ್ ವಿಧಿಸಲಾಗಿತ್ತು, ಸೋಂಕಿತರೆಂದು ಒಂದು ಸಂಖ್ಯೆಯನ್ನೂ ಸರ್ಕಾರ ಬಿಡುಗಡೆಗೊಳಿಸಿತ್ತು. ಆದರೆ ಎರಡನೆಯ ಅಲೆಯ ಬಗ್ಗೆ ಸರ್ಕಾರದಿಂದ ಯಾವುದೇ ಘೊಷಣೆ ಹೊರಡಲಿಲ್ಲ, ಅದರ ಕಟು ನಿಯಂತ್ರಣದಲ್ಲಿರುವ ಮಾಧ್ಯಮಗಳಿಂದ ಯಾವ ವಿವರವೂ ಹೊರಬರಲಿಲ್ಲ. ಆ ಕಬ್ಬಿಣದ ಪರದೆ ಹಿಂದೆ ಏನಾಗುತ್ತಿದೆ ಎನ್ನುವುದು ಹೊರಜಗತ್ತಿಗೆ ತಿಳಿಯತೊಡಗಿದ್ದು ಅಲ್ಲಿಂದ ಗುಪ್ತವಾಗಿ ಹೊರಬಿದ್ದ ಅಲ್ಪಸ್ವಲ್ಪ ಮಾಹಿತಿ ಮತ್ತು ಸಾಂರ್ದಭಿಕ ಸಾಕ್ಷ್ಯಗಳಿಂದ ಮಾತ್ರ.

ನಾಲ್ಕೇ ದಿನದಲ್ಲಿ ವೂಹಾನ್ ನಗರ ಮತ್ತೆ ಲಾಕ್​ಡೌನ್​ಗೊಳಗಾಯಿತು. ಈ ಬಗ್ಗೆ ಚೀನೀ ಸರ್ಕಾರದಿಂದ ಯಾವ ಅಧಿಕೃತ ಪ್ರಕಟಣೆಯೂ ಹೊರಡಲಿಲ್ಲ. ಆದರೆ ಅದರ ಕಣ್ಣುತಪ್ಪಿಸಿ ಹೊರಬರತೊಡಗಿದ ಸುದ್ದಿಗಳು ಭಯಾನಕವಾಗಿದ್ದವು. ನಮ್ಮಲ್ಲಿನಂತೆ ಚೀನಾದಲ್ಲಿನ ಅಗಾಧ ಜನಸಂಖ್ಯೆಯೇ ಅಲ್ಲಿನ ವೈದ್ಯಕೀಯ ವ್ಯವಸ್ಥೆ ಮೇಲೆ ಅತೀವ ಒತ್ತಡ ಉಂಟುಮಾಡಿತು. ಆದರೆ ಈ ಒತ್ತಡಕ್ಕೆ ವರ್ಷದ ಹಿಂದೆ ಚೀನೀ ಸರ್ಕಾರ ಮತ್ತು ಇಂದು ನಮ್ಮ ಸರ್ಕಾರ ಪ್ರತಿಕ್ರಿಯಿಸಿದ ಬಗೆಗಳ ನಡುವೆ ಮಾತ್ರ ಧ್ರುವಗಳ ವ್ಯತ್ಯಾಸವಿದೆ. 2020 ಮೇ ಹೊತ್ತಿಗೆ ಇಡೀ ದೇಶದಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡಿಹೋಗಿ, ಸರ್ಕಾರ ವೂಹಾನ್, ಬೀಜಿಂಗ್ ಸೇರಿ ವಿವಿಧ ನಗರಗಳಲ್ಲಿ ಹಿಂಸಾತ್ಮಕ ಕ್ರಮಗಳ ಮೂಲಕ ಲಾಕ್​ಡೌನ್ ಜಾರಿಗೊಳಿಸಿತು. ಈಶಾನ್ಯದ ಹೇಲೋಂಗ್​ಜಿಯಾಂಗ್ ಪ್ರಾಂತ್ಯದ ರಾಜಧಾನಿ ಹಾರ್ಬಿನ್​ನಲ್ಲಿ ಜನ ಹೊರಬರಬಾರದೆಂದು ಪೊಲೀಸರು ಮನೆಬಾಗಿಲುಗಳಿಗೆ ಹೊರಗಿನಿಂದ ಬೀಗ ಹಾಕಿದರು. ಬೀಜಿಂಗ್​ನ ಕೆಲವು ಪ್ರದೇಶಗಳಲ್ಲಿ ಪೊಲೀಸರು ಅಪಾರ್ಟ್ ಮೆಂಟ್ ಕಟ್ಟಡಗಳ ಮುಖ್ಯದ್ವಾರಗಳನ್ನು ಮುಚ್ಚಿ ಅವುಗಳನ್ನು ತೆರೆಯಲಾಗದಂತೆ ಕಬ್ಬಿಣದ ಪಟ್ಟಿಗಳನ್ನು ಜಡಿದುಬಿಟ್ಟರು. ಸೋಂಕು ಪ್ರಸರಣ ತಡೆಯಲು ಇಂತಹ ಅಮಾನವೀಯ ಕೃತ್ಯಗಳನ್ನು ಭಾರತದ ಪ್ರಜಾಪ್ರಭುತ್ವವಾದಿ ಸರ್ಕಾರ ತೆಗೆದುಕೊಂಡಿದೆಯೇ, ತೆಗೆದುಕೊಳ್ಳಲಾಗುತ್ತದೆಯೇ?

ಅಷ್ಟೆಲ್ಲ ಕ್ರಮಗಳ ಮೂಲಕವೂ ಚೀನೀ ಕಮ್ಯೂನಿಸ್ಟ್ ಸರ್ಕಾರ ಸೋಂಕನ್ನು ತಡೆಯುವುದರಲ್ಲಿ ಯಶಸ್ವಿಯಾಗಲಿಲ್ಲ. ವೂಹಾನ್, ಹಾರ್ಬಿನ್, ಬೀಜಿಂಗ್​ನಂತಹ ನಗರಗಳಲ್ಲಿ ಜನ ಚಿಕಿತ್ಸೆಗಾಗಿ ಕಾಯುತ್ತ ಆಸ್ಪತ್ರೆಗಳ ಮುಂದೆಯೇ ಸತ್ತದ್ದೂ ನಡೆದುಹೋಯಿತು. ‘ನಿರುಪಯುಕ್ತ’ ಜನತೆಯನ್ನು ನಿವಾರಿಸಿಕೊಳ್ಳಲೆಂದು ಅಸಂಖ್ಯ ವೃದ್ಧರಿಗೆ ಚಿಕಿತ್ಸೆ ನೀಡದೆ ಅವರನ್ನು ಸೋಂಕಿಗೆ ಬಲಿಗೊಟ್ಟ ವಿವರಗಳೂ ಇವೆ. ಎಲ್ಲಕ್ಕಿಂತ ಕಳಶಪ್ರಾಯವಾದದ್ದು ಜೂನ್ ತಿಂಗಳಲ್ಲಿ ಅಧ್ಯಕ್ಷ ಷಿ ಜಿನ್​ಪಿಂಗ್ ಮತ್ತು ಕಮ್ಯೂನಿಸ್ಟ್ ಪಾರ್ಟಿಯ ಇಡೀ ಪಾಲಿಟ್​ಬ್ಯೂರೋ ಮೂರು ವಾರಗಳವರೆಗೆ ಸಾರ್ವಜನಿಕ ರಂಗದಿಂದ ಮಾಯವಾದ ವಿಷಯ. ಅವರು ಎಲ್ಲಿದ್ದರು, ಯಾಕಾಗಿ ಆ ಅಜ್ಞಾತವಾಸ ಎಂಬ ಬಗ್ಗೆ ಯಾವ ವಿವರವೂ ಹೊರಬರಲಿಲ್ಲ. ಎರಡು ಸಂದರ್ಭಗಳಲ್ಲಿ ಮಾತ್ರ ಜಿನ್​ಪಿಂಗ್ ಭಾಷಣದ ವಿಡಿಯೋ ರೆಕಾರ್ಡಿಂಗ್​ಗಳು ಪ್ರಸಾರವಾದರೂ ಅವು ಎಲ್ಲಿ ರೆಕಾರ್ಡ್ ಆದವು ಎಂಬುದು ಬಹಿರಂಗವಾಗಲಿಲ್ಲ. ಆದರೆ ಅದೇ ದಿನಗಳಲ್ಲಿ ಬೀಜಿಂಗ್​ನ ಮಿಲಿಟರಿ ಹಾಸ್ಪಿಟಲ್ 301ನ ಸುತ್ತಮುತ್ತ ಬಿಗಿಯಾದ ಭದ್ರತಾ ವ್ಯವಸ್ಥೆ ಇತ್ತು! ಚೀನೀ ನಾಯಕರು ಕರೊನಾ ಸೋಂಕಿಗೊಳಗಾಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೇ?

ಹೀಗೆ, ಎರಡನೆಯ ಅಲೆಯ ವ್ಯಾಪಕತೆ, ಕೈಗೊಂಡ ಕ್ರಮಗಳು, ದೇಶಕ್ಕಾದ ಹಾನಿಯ ಬಗ್ಗೆ ಚೀನೀ ಸರ್ಕಾರ ಏನೂ ಹೇಳಿಲ್ಲ. ಆದರೆ ಘಾತಕ ಎರಡನೆಯ ಅಲೆ ಸುಮಾರು ಒಂದೂವರೆಯಿಂದ ಎರಡು ಕೋಟಿ ಚೀನೀಯರನ್ನು ಆಹುತಿ ತೆಗೆದುಕೊಂಡಿರಬಹುದೆಂದು ಅಂದಾಜಿಸಲಾಗಿದೆ. ಇಷ್ಟು ಪ್ರಮಾಣದ ಸಾವನ್ನು ಹೇಗೆ ನಿಭಾಯಿಸಿರಬಹುದು? ವೃದ್ಧರನ್ನು ಬೇಕೆಂದೇ ಸಾವಿಗಟ್ಟಿದ ಆ ಸರ್ಕಾರಕ್ಕೆ ಶವಗಳನ್ನು ಸದ್ದಿಲ್ಲದೆ, ‘ಬೆಂಕಿಯನ್ನೂ ಹಚ್ಚದೇ’ ವಿಲೇವಾರಿ ಮಾಡುವುದೇನೂ ಕಷ್ಟವಾಗಿರಲಾರದು, ಅದಕ್ಕಾಗಿ ನಾಚಿಕೆಯೂ ಆಗಿರಲಾರದು. ಇದೆಲ್ಲವನ್ನೂ ನೋಡಿದ್ದರಿಂದಲೇ ಇರಬೇಕು, ಹಲವಾರು ಚೀನೀಯರು ದಮನಕಾರಿ ಸರ್ಕಾರದ ಬಗೆಗಿನ ಹೆದರಿಕೆಯನ್ನೂ ಬದಿಗೊತ್ತಿ ಇಂದು ಅದನ್ನು ತರಾಟೆಗೆ ತೆಗೆದುಕೊಂಡದ್ದು, ನಮ್ಮಲ್ಲಿನ ಸಾವಿನ ಬಗ್ಗೆ ಅದು ತೋರಿದ ವಿಕೃತ ಸಂತೋಷವನ್ನು ಹೀಗಳೆದದ್ದು. ಕಮ್ಯೂನಿಸ್ಟ್ ಸರ್ಕಾರದಲ್ಲಿ ಮಾನವೀಯತೆ ಸತ್ತಿರಬಹುದು, ಆದರೆ ಜನರಲ್ಲಿ ಅದಿನ್ನೂ ಜೀವಂತವಾಗಿದೆ. ಈ ಮಾನವೀಯ ಜನತೆಯೇ ಚೀನಾದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವಂತಾದರೆ ಈ ಜಗತ್ತು ಈಗಿರುವುದಕ್ಕಿಂತಲೂ ಮಾನವೀಯವಾಗುತ್ತದೆ, ಸುರಕ್ಷಿತವಾಗುತ್ತದೆ.. ಅದರಲ್ಲಿ ಸಂಶಯವಿಲ್ಲ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)