ದಕ್ಷಿಣದ ದ್ವೀಪರಾಷ್ಟ್ರ ಶ್ರೀಲಂಕಾದಲ್ಲೊಂದು ಕುತೂಹಲಕರ ಬೆಳವಣಿಗೆ ಘಟಿಸುತ್ತಿದೆ. ಕೊಲಂಬೋ ಬಂದರಿನ ಬಳಿ ಸಮುದ್ರವನ್ನು ಹಿಂದಕ್ಕೆ ತಳ್ಳಿ 269 ಹೆಕ್ಟೇರ್ ನೆಲವನ್ನು ಹೊಸದಾಗಿ ಸೃಷ್ಟಿಸಿ ಅಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಆರ್ಥಿಕ ಕೇಂದ್ರ ಸ್ಥಾಪಿಸುವುದರಲ್ಲಿ ಚೀನಾ ನಿರತವಾಗಿದೆ, ಅದಕ್ಕೆ ಬೇಕಾದ ಎಲ್ಲ ಸಾಂವಿಧಾನಿಕ, ಅಸಾಂವಿಧಾನಿಕ ಸಹಕಾರಗಳನ್ನು ಶ್ರೀಲಂಕಾದ ಸರ್ಕಾರ ಒದಗಿಸುತ್ತಿದೆ! ಇಂತಹದೊಂದು ‘ಆರ್ಥಿಕ ಕೇಂದ್ರ’ದ ಯೋಜನೆ ಮೊದಲಿಗೆ ಕಾಣಿಸಿಕೊಂಡದ್ದು 2004ರಲ್ಲಿ. ಕೇಂದ್ರ ಲಂಡನ್ನಷ್ಟು ವಿಸ್ತಾರವಾದ, ದುಬೈನಂತೆ ವಿತ್ತೀಯ ಚಟುವಟಿಕೆಗಳನ್ನು, ಸಿಂಗಾಪುರದಂತೆ ವ್ಯವಹಾರಾನುಕೂಲೀ ವಾತಾವರಣವನ್ನು ಹೊಂದಿರುವ ‘ನಗರ’ವೊಂದನ್ನು ಸ್ಥಾಪಿಸುವ ಕನಸು ಕಂಡದ್ದು ಆಗ ಶ್ರೀಲಂಕಾದ ಪ್ರಧಾನಿಯಾಗಿದ್ದ ಮಹಿಂದ ರಾಜಪಕ್ಷ. ಮರುವರ್ಷವೇ ಅವರು ರಾಷ್ಟ್ರಾಧ್ಯಕ್ಷರಾದಾಗ ಯೋಜನೆಯ ಅನುಷ್ಠಾನಕ್ಕಾಗಿ ವಿದೇಶಗಳಿಂದ ಧನಸಹಾಯ ಗಳಿಸುವ ಪ್ರಯತ್ನ ಆರಂಭಿಸಿದರು. ಆದರೆ ಈ ಯೋಜನೆ ಲಾಭದಾಯಕವಲ್ಲ ಎಂದರಿತ ವಿದೇಶೀ ಸಂಸ್ಥೆಗಳು ಹಣ ಹೂಡುವುದಕ್ಕೆ ಹಿಂದೆಗೆದವು. ಹಾಗೆ ನೋಡಿದರೆ ಚೀನಾ ಸಹ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅಧ್ಯಕ್ಷ ಹು ಜಿಂಟಾವೋ ಗಮನಹರಿಸಿದ್ದು ದ್ವೀಪದ ದಕ್ಷಿಣ ತುದಿಯ ಹಂಬನತೋಟ ಬಂದರಿನ ಮೇಲೆ.
2013ರಲ್ಲಿ ಷಿ ಜಿನ್ಪಿಂಗ್ ಅಧ್ಯಕ್ಷರಾದದ್ದೇ ಎಲ್ಲವೂ ಬದಲಾಗಿಹೋಯಿತು. ಜಗತ್ತಿನ ವಿವಿಧ ಬಂದರುಗಳು, ವಿಮಾನನಿಲ್ದಾಣಗಳು ಮತ್ತು ಪ್ರಮುಖ ವ್ಯಾಪಾರ ಮಾರ್ಗಗಳನ್ನು ಚೀನಾಗೆ ಜೋಡಿಸುವ ‘ಬೆಲ್ಟ್ ಆಂಡ್ ರೋಡ್’ ಯೋಜನೆಯನ್ನು ಅನುಷ್ಠಾನಗೊಳಿಸಿದ ಅವರು ಅದಕ್ಕಾಗಿ ಜಗತ್ತಿನಾದ್ಯಂತ ಸಹಯೋಗಿಗಳನ್ನು ಹುಡುಕತೊಡಗಿದಾಗ ಅವರಿಗೆ ದೊಡ್ಡದಾಗಿ ಕಂಡದ್ದು ಶ್ರೀಲಂಕಾ, ಅದಕ್ಕಿಂತಲೂ ದೊಡ್ಡದಾಗಿ ಕಂಡದ್ದು ಅದರ ಅಧ್ಯಕ್ಷ ಮಹಿಂದ ರಾಜಪಕ್ಷ.
ಸರಿಸುಮಾರು ಅರ್ಧ ಶತಮಾನದ ಹಿಂದೆ ಚೇರ್ಮನ್ ಮಾವೋ ಜೆದಾಂಗ್ ಅಮೆರಿಕದ ಅಂದಿನ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಹೆನ್ರಿ ಕಿಸಿಂಜರ್ ಮುಂದೆ ಅಲವತ್ತುಕೊಂಡ ಪ್ರಕಾರ ಅಂದು ಹೊರದೇಶಗಳಿಗೆ ರಫ್ತು ಮಾಡಲು ಬಡದೇಶವಾದ ಚೀನಾದಲ್ಲಿ ಲಭ್ಯವಿದ್ದ ಏಕೈಕ ‘ಸಾಮಗ್ರಿ’ ಎಂದರೆ ಚೀನೀ ಯುವತಿಯರು ಮಾತ್ರ. ಆ ಪ್ರಕಾರ ಅಮೆರಿಕಕ್ಕೆ ಹತ್ತು ಮಿಲಿಯನ್ ಚೀನೀ ಯುವತಿಯರನ್ನು ‘ರಫ್ತು’ ಮಾಡಲು ಮಾವೋ ‘ಮಾಮ’ ಮಾಡಿದ ಪ್ರಸ್ತಾಪವನ್ನು ಕಿಸಿಂಜರ್ ಅತಿ ವಿನಯದಿಂದ ತಿರಸ್ಕರಿಸಿದರು. ಆದರೆ ಮುಂದಿನ ದಿನಗಳಲ್ಲಿ ಚೀನಾ ಅಭೂತಪೂರ್ವ ಆರ್ಥಿಕ ಬೆಳವಣಿಗೆ ಕಂಡು, ಜಿನ್ಪಿಂಗ್ ಅಧ್ಯಕ್ಷರಾಗುವ ಹೊತ್ತಿಗೆ ಆ ಕಮ್ಯೂನಿಸ್ಟ್ ದೇಶ ಜಗತ್ತಿನ ಎರಡನೆಯ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆದಿತ್ತು ಮತ್ತು ಅದು ಮೂರು ಟ್ರಿಲಿಯನ್ ಡಾಲರ್ಗಳ ಅಗಾಧ ವಿದೇಶೀ ವಿನಿಮಯದ ಬೆಟ್ಟದ ಮೇಲೆ ಕುಳಿತಿತ್ತು. ಈ ಹಣವನ್ನು ವಿದೇಶಗಳಲ್ಲಿ ಚೀನಾಗೆ ಆರ್ಥಿಕ ಸವಲತ್ತುಗಳನ್ನು ಗಳಿಸಿಕೊಳ್ಳುವುದಕ್ಕಾಗಿ ಬಳಸಲು ಜಿನ್ಪಿಂಗ್ ತಯಾರಾದರು. ಅವರ ಈ ಯೋಜನೆಯ ಪ್ರಮುಖ ಅಂಶವೆಂದರೆ ಬಡದೇಶಗಳಿಗೆ ವ್ಯರ್ಥ ಯೋಜನೆಗಳಿಗಾಗಿ ಅಧಿಕ ಪ್ರಮಾಣದ ಸಾಲ ನೀಡುವುದು; ಸಾಲ ತೀರಿಸಲಾಗದಿದ್ದರೆ ಆ ದೇಶಗಳು ತಮ್ಮ ಬಂದರನ್ನೋ, ವಿಮಾನನಿಲ್ದಾಣವನ್ನೋ, ಗಣಿಕ್ಷೇತ್ರಗಳನ್ನೋ ಚೀನಾಗೆ ದೀರ್ಘಕಾಲದವರೆಗೆ ಗುತ್ತಿಗೆಗೆ ಬಿಟ್ಟುಕೊಡುವ ಕಲಮುಗಳನ್ನು ಸಾಲದ ಒಪ್ಪಂದದಲ್ಲೇ ಸೇರಿಸುವುದಾಗಿತ್ತು. ಹೀಗೆ ಸಾಲಸಂಕೋಲೆಗೆ ಸಿಲುಕಿಕೊಳ್ಳಲು ಯಾವ ದೇಶವೂ ಸಿದ್ಧವಿರುವುದಿಲ್ಲ. ಅದಕ್ಕಾಗಿ ಜಿನ್ಪಿಂಗ್ ಹುಡುಕಿದ ಉಪಾಯವೆಂದರೆ ರಾಷ್ಟ್ರನಾಯಕರಿಗೇ ಗಾಳ ಹಾಕುವುದು! ಇದನ್ನು ಹಿಂದಿನ ಅಧ್ಯಕ್ಷ ಹು ಜಿಂಟಾವೋ ಸಣ್ಣಪ್ರಮಾಣದಲ್ಲಿ ಆರಂಭಿಸಿಯಾಗಿತ್ತು. ಆಗ ಚೀನಿಯರ ಬಲೆಗೆ ಬಿದ್ದ ಹಿಂದೂ ಮಹಾಸಾಗರದ ದೊಡ್ಡ ಮೀನೆಂದರೆ ಇದೇ ಮಹಿಂದ ರಾಜಪಕ್ಷ.
ಒಂಬತ್ತು ವರ್ಷಗಳ ಅಧ್ಯಕ್ಷಾವಧಿಯಲ್ಲಿ ರಾಜಪಕ್ಷ ಚೀನಾಗೆ ಏಳು ಸಲ ಭೇಟಿ ನೀಡಿದ್ದರು ಮತ್ತು ಹಂಬನತೋಟದಲ್ಲಿ ಬಂದರಲ್ಲದೆ 18 ಕಿಲೋಮೀಟರ್ ಹತ್ತಿರದಲ್ಲಿನ ಮಟ್ಟಾಲದಲ್ಲಿ ವಿಮಾನನಿಲ್ದಾಣ ಸ್ಥಾಪನೆಗೆ ಚೀನಾದಿಂದ ಹೇರಳ ಸಾಲ ಪಡೆದಿದ್ದರು. ಹಿಂದೂ ಮಹಾಸಾಗರದ ಮೇಲೆ ಹಾರುವ ವಿಮಾನಗಳು ಇಂಧನ ಪೂರೈಕೆಗೆ ಅಥವಾ ತಾತ್ಕಾಲಿಕ ತಂಗುವಿಕೆಗೆ ಈ ವಿಮಾನನಿಲ್ದಾಣವನ್ನು ಬಳಸಿಕೊಳ್ಳುತ್ತವೆ, ಹಾಗಾಗಿ ಮಟ್ಟಾಲ ವಿಮಾನನಿಲ್ದಾಣ ಶ್ರೀಲಂಕಾಗೆ ವರ್ಷಂಪ್ರತಿ ಅಧಿಕ ಆದಾಯದ ಮೂಲವಾಗುತ್ತದೆ ಎಂದು ಚೀನೀಯರು ಹೇಳಿದ್ದನ್ನು ರಾಜಪಕ್ಷ ನಂಬಿದರು, 2013ರಲ್ಲಿ ವಿಮಾನನಿಲ್ದಾಣವನ್ನು ಪೂರ್ಣಗೊಳಿಸಿದರು, ಅದಕ್ಕೆ, ‘ಮಟ್ಟಾಲ ರಾಜಪಕ್ಷ ಜಾತ್ಯಾಂತರ ಗುವಂಟೊತುಪಳ’ ಅಂದರೆ ‘ಮಟ್ಟಾಲ ರಾಜಪಕ್ಷ ಅಂತಾರಾಷ್ಟ್ರೀಯ ವಿಮಾನನಿಲ್ದಾಣ’ ಅಂತ ತಮ್ಮ ಹೆಸರನ್ನೂ ಇಟ್ಟರು, ವಿದೇಶೀ ವಿಮಾನಗಳಿಗಾಗಿ ಕಾದು ಕೂತರು. ಬರೀ ಕಾದದ್ದೇ ಬಂತು. ಮಟ್ಟಾಲ ವಿಮಾನ ನಿಲ್ದಾಣಕ್ಕೆ ವಿಮಾನಗಳು ಬರಲಿಲ್ಲ. ಅದೀಗ ‘ಜಗತ್ತಿನ ಅತ್ಯಂತ ಖಾಲಿ ವಿಮಾನನಿಲ್ದಾಣ’ ಎಂದು ಹೆಸರಾಗಿದೆ.
ಹೀಗೆ ಮಟ್ಟಾಲಾ ವಿಮಾನನಿಲ್ದಾಣದಿಂದ ಚೀನೀ ಸಾಲ ತೀರಿಸಲು ಅಗತ್ಯವಾದಷ್ಟು ಆದಾಯ ಬರಲೇ ಇಲ್ಲ. ಜತೆಗೆ ಹಂಬನತೋಟ ಬಂದರನ್ನು ಅಭಿವೃದ್ಧಿಪಡಿಸಲು ಪಡೆದಿದ್ದ ಸಾಲ ತೀರಿಸುವ ಹಾದಿಯೂ ಕಾಣಲಿಲ್ಲ. ಅಷ್ಟರಲ್ಲಿ 2015 ಜನವರಿಯಲ್ಲಿ ಮಹಿಂದ ರಾಜಪಕ್ಷ ಅಧಿಕಾರ ಕಳೆದುಕೊಂಡರು. ಈ ಎರಡು ವ್ಯರ್ಥ ಯೋಜನೆಗಳು ಹೊಸ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂಘ ಅವರಿಗೆ ನಿಭಾಯಿಸಲಾಗದ ವ್ಯವಹಾರಗಳಾಗಿ ಕಂಡವು. ಅಂತಿಮವಾಗಿ ಚೀನೀಯರು ಸಾಲದ ಒಪ್ಪಂದಗಳಲ್ಲಿ ಸೇರಿಸಿದ್ದ ಕುಟಿಲ ಕಲಮುಗಳು ಸಿರಿಸೇನ ಸರ್ಕಾರದ ಕೊರಳಿಗೆ ಉರುಳಾಗಿ ಪರಿಣಮಿಸಿ ಹಂಬನತೋಟ ಬಂದರನ್ನು ಚೀನಾಗೆ 99 ವರ್ಷಗಳ ಗುತ್ತಿಗೆಗೆ ಒಪ್ಪಿಸುವಂಥ ದುರ್ಭರ ಪರಿಸ್ಥಿತಿಗೆ ಸರ್ಕಾರ ಸಿಲುಕಿತು. ಆ ಬಂದರನ್ನು ಹಿಂದೂ ಮಹಾಸಾಗರದಲ್ಲಿ ಭಾರತಕ್ಕೆ ವಿರುದ್ಧವಾಗಿ ತನ್ನ ನೌಕಾನೆಲೆಯನ್ನಾಗಿ ಉಪಯೋಗಿಸಿಕೊಳ್ಳಬಹುದಾದ ಸಾಧ್ಯತೆ ಇರುವುದರಿಂದ ಚೀನಾ ಗುತ್ತಿಗೆಗೆ ತೆಗೆದುಕೊಳ್ಳಲು ಹಿಂಜರಿಯಲಿಲ್ಲ.
ನಿಜ ಹೇಳಬೇಕೆಂದರೆ, ಅದನ್ನು ತನ್ನ ಕೈವಶ ಮಾಡಿಕೊಳ್ಳಲು ಚೀನಾ ರಹಸ್ಯ ಕಾರ್ಯಯೋಜನೆ ರೂಪಿಸಿ ಹಂತಹಂತವಾಗಿ ಅನುಷ್ಠಾನಗೊಳಿಸಿತ್ತು! ಆದರೆ ಅದೇ ಚೀನಾ ಮಟ್ಟಾಲ ವಿಮಾನನಿಲ್ದಾಣದಿಂದ ತನಗೇನೂ ಪ್ರಯೋಜನವಿಲ್ಲ ಎಂದು ಅರಿತಿರುವ ಕಾರಣ ಅದನ್ನು ಗುತ್ತಿಗೆಗೆ ಪಡೆದುಕೊಂಡು ಶ್ರೀಲಂಕಾವನ್ನು ಋಣಬಾಧೆಯಿಂದ ಮುಕ್ತ ಗೊಳಿಸಲು ತಯಾರಿಲ್ಲ. ಪರಿಣಾಮವಾಗಿ, ಇಂದು ವಿಮಾನನಿಲ್ದಾಣದ ಕಾಗೋ ಟರ್ವಿುನಲ್ಗಳನ್ನು ಭತ್ತದ ದಾಸ್ತಾನು ಸೇರಿ ಇನ್ನಿತರ ಕೆಲಸಗಳಿಗಾಗಿ ಬಾಡಿಗೆ ಕೊಟ್ಟು ಹಣ ಸಂಗ್ರಹಿಸಲು ಶ್ರೀಲಂಕಾ ಸರ್ಕಾರ ಹೆಣಗಾಡುತ್ತಿದೆ. ಹೀಗೆ ಚೀನೀ ಅಮಿಷಗಳಿಗೆ ಒಳಗಾಗಿ ತನ್ನ ದೇಶಕ್ಕೆ ಆರ್ಥಿಕವಾಗಿ ನಷ್ಟಕರವಾದ ಹಾಗೂ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೇ ಧಕ್ಕೆ ತರುವಂತಹ ಒಪ್ಪಂದಗಳಿಗೆ ಸಹಿಹಾಕಿದ ಮಹಿಂದ ರಾಜಪಕ್ಷರ ಮೇಲೆ ಜಿನ್ಪಿಂಗ್ರ ದುರಾಸೆಯ ಕಣ್ಣು ಬಿದ್ದದ್ದು ಹೀಗೆ. ಅತ್ಯಾಧುನಿಕ ಆರ್ಥಿಕ ಕೇಂದ್ರ ಸ್ಥಾಪಿಸುವ ರಾಜಪಕ್ಷರ ಕನಸಿಗೆ ನೀರೆರೆಯುವುದರ ಮೂಲಕ ಶ್ರೀಲಂಕಾದ ರಾಜಧಾನಿ ಹಾಗೂ ಏಕೈಕ ಬಂದರಿನಲ್ಲೇ ಚೀನಾ ತಳವೂರಬಹುದಾದ ಅವಕಾಶವನ್ನು ಗುರುತಿಸಿದ ಜಿನ್ಪಿಂಗ್ ಕಾರ್ಯಸಾಧನೆಗಾಗಿ ಎರಡು ಚೀನೀ ಸಂಸ್ಥೆಗಳನ್ನು ನಿಯೋಜಿಸಿದರು. ‘ಕೊಲಂಬೋ ಪೋರ್ಟ್ ಸಿಟಿ’ ನಿರ್ವಣಕ್ಕಾಗಿ ಅವು ಸೂಚಿಸಿದ 1.4 ಬಿಲಿಯನ್ ಡಾಲರ್ ಖರ್ಚಿನ ಯೋಜನೆಯನ್ನು ರಾಜಪಕ್ಷ ಒಪ್ಪಿಕೊಂಡದ್ದೂ ಆಯಿತು. 2014ರ ಸೆಪ್ಟೆಂಬರ್ನಲ್ಲಿ ಯೋಜನೆ ಜಾರಿಗೆ ಬಂದಾಗ ಸ್ವತಃ ಜಿನ್ಪಿಂಗ್ ಕೊಲಂಬೋದಲ್ಲಿ ಹಾಜರಿದ್ದರು. ಪೋರ್ಟ್ ಸಿಟಿ ಪೂರ್ಣಗೊಂಡಾಗ ಅಲ್ಲಿ ಪ್ರಪಂಚದ ಸುವ್ಯವಸ್ಥಿತ ಆರ್ಥಿಕ ಹಾಗೂ ವಿತ್ತೀಯ ಕೇಂದ್ರವಾಗಿರುತ್ತದೆ, ಇಲ್ಲಿ ಚೀನೀ ನಿರ್ವಿುತ ಗಗನಚುಂಬಿಗಳು, ಹೋಟೆಲ್ಗಳು, ಮಾಲ್ಗಳು, ವಿಶಾಲ ರಸ್ತೆಗಳು ಇನ್ನಿತರ ಎಲ್ಲ ಬಗೆಯ ಆಧುನಿಕ ಸೌಲಭ್ಯಗಳಿರುತ್ತವೆ. 80 ಸಾವಿರ ಜನ ಇಲ್ಲಿನ ಕಾಯಂ ನಿವಾಸಿಗಳಾದರೆ ಪ್ರತಿದಿನ ಲಕ್ಷಾಂತರ ಜನ ವ್ಯವಹಾರಗಳಿಗಾಗಿ ಬಂದು ಹೋಗುತ್ತಿರುತ್ತಾರೆ- ಇದು ಚೀನೀಯರು ಮಹಿಂದ ರಾಜಪಕ್ಷರ ಎದೆಯಲ್ಲಿ ಬಿತ್ತಿದ ಕನಸು.
ಆದರೆ ಮುಂದಿನ ನಾಲ್ಕು ತಿಂಗಳಲ್ಲಿ ರಾಜಪಕ್ಷ ಅಧಿಕಾರ ಕಳೆದುಕೊಂಡರು. ಅವರ ಉತ್ತರಾಧಿಕಾರಿ ಸಿರಿಸೇನ ಕೊಲಂಬೋ ಪೋರ್ಟ್ ಸಿಟಿ ಯೋಜನೆಯನ್ನು ತಡೆಹಿಡಿದರು. ಆದರೆ 2019ರ ಅಂತ್ಯದಲ್ಲಿ ಮಹಿಂದರ ತಮ್ಮ ಗೋಟಾಬಯ ರಾಜಪಕ್ಷ ಅಧ್ಯಕ್ಷರಾಗಿ, ಸ್ವತಃ ಮಹಿಂದ ರಾಜಪಕ್ಷ ಪ್ರಧಾನಿಯಾಗಿ ಆಯ್ಕೆಯಾದೊಡನೇ ಪೋರ್ಟ್ ಸಿಟಿ ಯೋಜನೆ ಮರುಜೀವ ಪಡೆದುಕೊಂಡಿತಷ್ಟೇ ಅಲ್ಲ ಬಲು ದೊಡ್ಡದಾಗಿ ಚಾಲನೆಗೊಂಡಿದೆ ಕೂಡ.
ಈ ಯೋಜನೆ ಪ್ರಕಾರ ಸಮುದ್ರದಿಂದ 269 ಹೆಕ್ಟೇರ್ ನೆಲವನ್ನು ಪಡೆಯಲಾಗುತ್ತದೆ. ಚೀನೀ ತಂತ್ರಜ್ಞಾನದೊಂದಿಗೆ ಡಜನ್ಗಟ್ಟಲೆ ಶ್ರೀಲಂಕನ್ ಮತ್ತು ಚೀನೀ ನೌಕೆಗಳು ಸಮುದ್ರದಾಳದ ಮಣ್ಣನ್ನು ಅಗೆದು ತೀರದಲ್ಲಿ ಸುರಿಯುತ್ತ ಹಿಂದೂ ಮಹಾಸಾಗರವನ್ನು ಈಗಿನ ತೀರದಿಂದ ದೂರದೂರಕ್ಕೆ ಸರಿಸುವುದರಲ್ಲಿ ನಿರತವಾಗಿವೆ. ಹೀಗೆ ಸಾಗರದಿಂದ ಪಡೆಯುವ ನೆಲದಲ್ಲಿ 125 ಹೆಕ್ಟೇರ್ ನೆಲ ಶ್ರೀಲಂಕಾ ಸರ್ಕಾರಕ್ಕೆ ಸೇರಿರುತ್ತದೆ, 88 ಹೆಕ್ಟೇರ್ ನೆಲದ ಮೇಲೆ ಶ್ರೀಲಂಕಾದ ಸಾರ್ವಭೌಮತ್ವವಿದ್ದರೂ ಅದನ್ನು ಚೀನಾ 99 ವರ್ಷಗಳ ಗುತ್ತಿಗೆಗೆ ಪಡೆಯುತ್ತದೆ. ಜತೆಗೆ 20 ಹೆಕ್ಟೇರ್ ನೆಲ ಚೀನಾಗೆ ಫ್ರೀಹೋಲ್ಡ್ ಆಗಿ ದೊರೆಯುತ್ತದೆ! ಒಟ್ಟು 108 ಹೆಕ್ಟೇರ್ ನೆಲವನ್ನು ಚೀನಾ ತನಗೆ ಬೇಕಾದಂತೆ ಬಳಸಿಕೊಳ್ಳಬಹುದು. ಇದಕ್ಕೆ ಪೂರ್ಣ ಅವಕಾಶ ಮಾಡಿಕೊಡುವುದು ಶ್ರೀಲಂಕಾ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ‘ಕೊಲಂಬೋ ಪೋರ್ಟ್ ಸಿಟಿ ಇಕನಾಮಿಕ್ ಕಮಿಷನ್ ಆಕ್ಟ್’. ಈ ಕಾಯಿದೆ ಮೂಲಕ ಅಸ್ತಿತ್ವಕ್ಕೆ ಬರಲಿರುವ ಪೋರ್ಟ್ ಸಿಟಿ ಕಮಿಷನ್ ಹೊಸ ಬಂದರು ನಗರದಲ್ಲಿ ಯಾರ್ಯಾರಿಗೆ ಏನೇನು ಮಾಡಲು ಏನೇನು ಅವಕಾಶ ಮತ್ತು ಸೌಲಭ್ಯ ನೀಡಬೇಕು ಎಂದು ನಿರ್ಧರಿಸುವ ಪೂರ್ಣ ಅಧಿಕಾರವನ್ನು ಹೊಂದಿರುತ್ತದೆ. ರಾಷ್ಟ್ರಾಧ್ಯಕ್ಷರಿಂದ ರಚಿತವಾಗಲಿರುವ ಈ ಕಮಿಷನ್ನಲ್ಲಿನ ಸದಸ್ಯರೆಲ್ಲರೂ ಅಧ್ಯಕ್ಷರಿಂದಲೇ ನೇಮಕಗೊಳ್ಳುತ್ತಾರೆ, ಯಾವೊಬ್ಬ ಚುನಾಯಿತ ಸದಸ್ಯನೂ ಇರುವುದಿಲ್ಲ. ಜತೆಗೆ ಇದರಲ್ಲಿ ಚೀನೀಯರೂ ಇರುತ್ತಾರೆ. ಅಷ್ಟೇ ಅಲ್ಲ, ಈ ಕಮಿಷನ್ ದೇಶದ ಕಾನೂನುಗಳ ಹಿಡಿತದಿಂದ ಹೊರಗಿರುತ್ತದೆ! ಇದರರ್ಥ ಪೋರ್ಟ್ ಸಿಟಿಯ ಎಲ್ಲ ವ್ಯವಹಾರಗಳೂ ಚೀನೀಯರಿಂದ ಮತ್ತು ಅಣ್ಣತಮ್ಮ ರಾಜಪಕ್ಷರಿಂದ ನಿರ್ಧಾರಿತವಾಗುತ್ತವೆ. ಈ ‘ಸ್ವಾತಂತ್ರ್ಯ’ಕ್ಕಾಗಿ ಎಷ್ಟು ಬಿಲಿಯನ್ ಚೀನೀ ಯುವಾನ್ಗಳು ಕೊಲಂಬೋದಲ್ಲಿ ಕಳ್ಳತನದಲ್ಲಿ ಕೈ ಬದಲಾಯಿಸಿರಬಹುದು?
ಈ ಪ್ರಶ್ನೆ ಈಗ ಶ್ರೀಲಂಕನ್ನರನ್ನೇ ಕಾಡತೊಡಗಿದೆ. ರಾಷ್ಟ್ರದ ಸಾರ್ವಭೌಮತ್ವಕ್ಕೆ ಚ್ಯುತಿ ತರುವ ಕೃತ್ಯ ಇದು ಎಂದು ಆಪಾದಿಸಿ ಇಪ್ಪತ್ತು ಶ್ರೀಲಂಕನ್ ನಾಗರಿಕರು ಮತ್ತು ಸಂಸ್ಥೆಗಳು ಸವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿವೆ. ಕೊಲಂಬೋ ಪೋರ್ಟ್ ಸಿಟಿ ಕಮಿಷನ್ ಸಂವಿಧಾನ-ವಿರೋಧಿಯಾಗಿದೆ; ಅಧ್ಯಕ್ಷ ಮತ್ತು ಪ್ರಧಾನಿ ದೇಶವನ್ನು ಚೀನೀಯರ ವಸಾಹತುವನ್ನಾಗಿ ಪರಿವರ್ತಿಸುತ್ತಿದ್ದಾರೆ, ಇದನ್ನು ತಡೆಯಬೇಕು ಎನ್ನುವುದು ಅವರೆಲ್ಲರ ಬೇಡಿಕೆ. ಇದಕ್ಕೆ ಶ್ರೀಲಂಕಾದ ಪ್ರಭಾವಿ ವ್ಯಕ್ತಿಗಳೂ ಕೈಜೋಡಿಸಿದ್ದಾರೆ. ಇಡೀ ಶ್ರೀಲಂಕಾ ಇಂದು ಚೀನಾದ ವಸಾಹತು ಆಗಿಹೋಗಿದೆ ಎಂದು ಮಾಜಿ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಜತೆ ದೇಶದ ಧಾರ್ವಿುಕ ನಾಯಕರೂ ದನಿಗೂಡಿಸಿದ್ದಾರೆ. ಕೊಲಂಬೋದ ಪ್ರಸಿದ್ಧ ಅಭಯರಾಮ ಬೌದ್ಧ ವಿಹಾರದ ಮುಖ್ಯಸ್ಥರು ‘ಕೊಲಂಬೋ ಪೋರ್ಟ್ ಸಿಟಿಯನ್ನು ಸರ್ಕಾರ ಚೀನೀ ವಸಾಹತುವನ್ನಾಗಿ ಮಾಡಹೊರಟಿದೆ’ ಎಂದು ಆಪಾದಿಸಿದ್ದಾರೆ. ಕೊಲಂಬೋ ನಗರದ ಆರ್ಚ್ಬಿಷಪ್ ಕಾರ್ಡಿನಲ್ ಮ್ಯಾಲ್ಕೋಂ ರಂಜಿತ್ ‘ಅಭಿವೃದ್ಧಿಯೆಂದರೆ ದೇಶದ ಸಂಪನ್ಮೂಲಗಳನ್ನು ವಿದೇಶಗಳಿಗೆ ಮಾರುವುದಲ್ಲ, ನಮ್ಮ ಭೂಮಿಯನ್ನು ಬೇರೆಬೇರೆ ದೇಶಗಳಿಗೆ ಒಪ್ಪಿಸಬೇಡಿ’ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಶ್ರೀಲಂಕಾದಲ್ಲಿ ನಡೆಯುತ್ತಿರುವುದು ಚೀನಾದ ಸಾಲಸಂಕೋಲೆಯಿಂದ ಈಗಾಗಲೇ ಆಗಿರುವ ಅನಾಹುತಗಳನ್ನು ಗಣನೆಗೆ ತೆಗೆದುಕೊಳ್ಳದೇ ದೇಶದ ಸಾರ್ವಭೌಮತ್ವವನ್ನು ಚೀನಾಗೆ ಅಡವಿಡಲು ಹೊರಟಿರುವ ಇಬ್ಬರು ರಾಜಕಾರಣಿಗಳು ಮತ್ತು ದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ತಡವಾಗಿಯಾದರೂ ಎದ್ದು ನಿಲ್ಲತೊಡಗಿರುವ ದೇಶವಾಸಿಗಳ ನಡುವಿನ ಕದನ. ಸಂವಿಧಾನದ ಮೂಲಕ ಅಧಿಕಾರಕ್ಕೆ ಬಂದಿರುವ ಅಣ್ಣತಮ್ಮ ರಾಜಪಕ್ಷರು ಸಂವಿಧಾನವನ್ನೇ ಧಿಕ್ಕರಿಸುತ್ತಿದ್ದಾರೆ. ಅವರ ವಿರುದ್ಧದ ಜನಾಕ್ರೋಶಕ್ಕೆ ಜಯ ಲಭಿಸಿದರೆ ಅದು ಶ್ರೀಲಂಕಾದಂತೆಯೇ ಚೀನೀ ಸಾಲಸಂಕೋಲೆಗೆ ಸಿಲುಕಿರುವ ಹಲವು ಬಡದೇಶಗಳ ಜನತೆಗೆ ಆಶಾಕಿರಣವಾಗುತ್ತದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)