ಅಂಕಣ

ನಟನೆಯಷ್ಟೇ ಅಲ್ಲ... ನಾಯಕತ್ವದಲ್ಲೂ ದಿಟ್ಟೆ

ದಿಟ್ಟತನಕ್ಕೆ ಮತ್ತೊಂದು ಹೆಸರಾದ ಪ್ರೇಮಾ ಗುಳೇದಗುಡ್ಡ ವೃತ್ತಿರಂಗಭೂಮಿಯ ಹೆಸರಾಂತ ನಟಿ. ಶ್ರೀ ಸಂಗಮೇಶ್ವರ ನಾಟ್ಯ ಸಂಘವನ್ನು ಕಳೆದ 38 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಪತಿ ತೀರಿ ಹೋಗಿ 13 ವರ್ಷ ಗತಿಸಿದರೂ ಕಂಪನಿಯನ್ನು ನಿಲ್ಲಿಸದೆ ನಡೆಸುತ್ತಿರುವ ಧೀಮಂತೆ. ರಾಜ್ಯೋತ್ಸವ, ಮಾಲತಿಶ್ರೀ ರಂಗಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

ಅಪರಿಮಿತ ಚೆಲುವು, ದಿಟ್ಟ ನಟನೆ, ಕಂಚಿನ ಕಂಠದ ಹಾಡುಗಾರಿಕೆಯಿಂದ ಊರಿಂದ ಊರಿಗೆ ಗುಳೆ ಹೋಗುತ್ತಲೇ ಪ್ರೇಮಾ ಅವರ ಜೀವಮಾನದ ಅರ್ಧ ಶತಮಾನ ಸಾರ್ಥಕತೆ ಕಂಡಿತು. ಬಾಗಲಕೋಟ ಜಿಲ್ಲೆ ಗುಳೇದಗುಡ್ಡದ ಪ್ರೇಮಾ ತಮ್ಮ ಊರಿನ ಹೆಸರನ್ನು ವೃತ್ತಿರಂಗಭೂಮಿ ಇತಿಹಾಸದಲ್ಲಿ ಚಿರಸ್ಥಾಯಿಯಾಗಿಸಿದರು.

ಪ್ರೇಮಾ ಗುಳೇದಗುಡ್ಡ ವೃತ್ತಿರಂಗಭೂಮಿಯ ಹೆಸರಾಂತ ಹಾಡು ನಟಿ. ಗುಳೇದಗುಡ್ಡದ ಸ್ವಸ್ತಿಕ್ ಚಿತ್ರಮಂದಿರದ ಮಾಲೀಕರಾಗಿದ್ದ ಬಸಪ್ಪ ಕರಿಗೂಳಣ್ಣವರ- ಸುಲೋಚನಾಬಾಯಿ ದಂಪತಿಯ ಪುತ್ರಿ (ಜನನ 1958). ತಾಯಿ ಸುಲೋಚನಾಬಾಯಿ ಮಹಾರಾಷ್ಟ್ರದ ಪುಣೆ ಮೂಲದವರು. ಹೆಸರಾಂತ ತಮಾಷ ಜಾನಪದ ರಂಗಪ್ರಕಾರದ ನರ್ತಕಿ, ನಟಿಯಾಗಿದ್ದವರು.

ತಂದೆ ತಾಯಿಯ ಪೋ›ತ್ಸಾಹದಿಂದ ಗ್ರಾಮೀಣ ನಾಟಕಗಳಲ್ಲಿ ನೃತ್ಯ ಮಾಡುವ ಮೂಲಕ ರಂಗಪ್ರವೇಶ ಮಾಡಿದ ಪ್ರೇಮಾ- ಆ ಕಾಲದ ವಿಜಯಪುರ, ಬೆಳಗಾವಿ, ಧಾರವಾಡ ಭಾಗದ ಮೂರ್ನಾಲ್ಕು ನಾಟಕ ಕಂಪೆನಿಗಳಲ್ಲಿ ನಟಿಯಾಗಿ ತರಬೇತಿ ಪಡೆದರು. ಬಳ್ಳಾರಿ, ರಾಯಚೂರು, ಕೊಪ್ಪಳ ಭಾಗದ ಹಳ್ಳಿಪಟ್ಟಣಗಳ ನಾಟಕಗಳಲ್ಲಿ ಆಹ್ವಾನಿತ ನಟಿಯಾಗಿ ನಟನೆಯ ವಿವಿಧ ಆಯಾಮಗಳನ್ನು ಒಲಿಸಿಕೊಂಡರು. ಯಾವುದೇ ಪಾತ್ರಕ್ಕೆ ಒಗ್ಗುವ ರೂಪಲಾವಣ್ಯ, ಎತ್ತರದ ಸ್ಥಾಯಿಯಲ್ಲಿ ಹಾಡಬಲ್ಲ ಶಾರೀರ, ಆತ್ಮವಿಶ್ವಾಸದ ಅಭಿನಯ ಮೇಳೈಸಿದ್ದ ಪ್ರೇಮಾ ರಂಗರಸಿಕರ ಮನಸ್ಸನ್ನು ಸೆಳೆದುಬಿಟ್ಟರು. ರಂಗಪ್ರವೇಶಿಸಿದ ಹತ್ತು ವರ್ಷಗಳಲ್ಲಿ ‘ನನ್ನನ್ನು ಗಮನಿಸದೇ ಇರಲಾರೆ’ ಎಂಬ ಛಾಪು ಒತ್ತಿದರು.

ಇಷ್ಟೇ ಆಗಿದ್ದರೆ ಹೆಸರಾಂತ ಹಾಡು ನಟಿಯರ ಸಾಲಿನಲ್ಲಿ ಪ್ರೇಮಾ ಸೇರಿಹೋಗುತ್ತಿದ್ದರು. ತಮ್ಮ ಪತಿ ರಾಯಚೂರು ಸಮೀಪದ ಆಶಾಪುರ ಗೌಡರ (ಬಸವರಾಜ ಪಾಟೀಲ) ನೆರವಿನಿಂದ 1982ರಲ್ಲಿ ಯಾವಾಗ ಅವರು ಶ್ರೀ ಸಂಗಮೇಶ್ವರ ನಾಟ್ಯಸಂಘ ಎಂಬ ನಾಟಕ ಕಂಪನಿಗೆ ನಾಂದಿ ಹಾಡಿದರೋ- ಅಂದಿನಿಂದ ಅವರ ರಂಗಪಯಣಕ್ಕೆ ನಿಶ್ಚಿತ ಗುರಿ ಪ್ರಾಪ್ತವಾಯಿತು. ಮುಖ್ಯ ಪಾತ್ರದಲ್ಲಿ ನಟನೆ, ಹಾಡುಗಾರಿಕೆ, ಕಲಾವಿದರ ಸಂಘಟನೆ ಮುಂತಾದ ಬಹುತೇಕ ಹೊಣೆಗಾರಿಕೆ ಪ್ರೇಮಾ ಅವರದೇ ಆಗಿದ್ದರೂ- ಜತೆಗೊಬ್ಬ ಗಂಡಸಿದ್ದಾನೆ ಎಂಬ ಅಭಯ ಪ್ರೇಮಾ ಅವರಿಗೆ ಆ ಕಾಲಕ್ಕೆ ಇತ್ತು. ‘ಎಂಥಾ ಮೋಜಿನ ಕುದುರೆ’, ‘ಬಸ್ ಹಮಾಲ’, ‘ದೇಸಾಯರ ದರ್ಬಾರು’, ‘ತಾಳಿಯ ತಕರಾರು’ ಮುಂತಾದ ಅಂದಿನ ಹೆಸರಾಂತ ನಾಟಕಗಳು ಸಾಲುಗಟ್ಟಿದವು. ನೂರು, ಇನ್ನೂರು, ಐನೂರು ಸತತ ನಾಟಕ ಪ್ರಯೋಗ ಹಲವು ಊರುಗಳಲ್ಲಿ ದಾಖಲೆ ಮಾಡಿದವು. ಏಳುಬೀಳಿನೊಂದಿಗೆ ಕಾಲು ಶತಮಾನ ಕಳೆದೇ ಹೋಯಿತು. ‘ಕಿತ್ತೂರು ಚೆನ್ನಮ್ಮ’ ನಾಟಕ ಕಂಪೆನಿಯ ಘನತೆ ಹೆಚ್ಚಿಸಿತು. ಪ್ರೇಮಾ ಚೆನ್ನಮ್ಮಳಾಗಿ ಜನರ ಮನಸ್ಸು ಗೆದ್ದರು.

ಮತ್ತೊಂದು ಸಾಹಸಗಾಥೆ: ಪ್ರೇಮಾ ಸಾಧನೆಯ ಶಿಖರ ಏರಲಿದ್ದಾರೆ ಎನಿಸುವ ಹೊತ್ತಿಗೆ 2007ರಲ್ಲಿ ಕುಟುಂಬಕ್ಕೆ ಬರಸಿಡಿಲೊಂದು ಬಂದೆರಗಿತು. ಮಗ ಪ್ರವೀಣ ಅಪಘಾತದಲ್ಲಿ ತೀರಿಹೋದ. ಹಿಂದೆಯೇ ಪತಿ ನಿಧನರಾದರು. ಪ್ರೇಮಾಗೆ ಉಣಲು ಉಡಲು ಕೊರತೆ ಇರಲಿಲ್ಲ. ‘ಕಂಪನಿ ನಿಲ್ಲಿಸುವುದು ಬೇಡ’ ಎಂದರು ಅವರ ಹಿತೈಷಿಗಳು. ಇಲ್ಲಿಂದ ಮುಂದಿನದು ಮತ್ತೊಂದು ಸಾಹಸಗಾಥೆ. ಕಲಾವಿದರಲ್ಲಿ ಒಡಕುಂಟು ಮಾಡಿ ಓಡಿಸಿಕೊಂಡು ಹೋಗುವುದು, ಗಲ್ಲಾಪೆಟ್ಟಿಗೆಗೆ ಕನ್ನ ಹಾಕುವುದು, ಲೈಸನ್ಸಿಗೆ ಕಿರುಕುಳ, ಅನಾರೋಗ್ಯಕರ ಸ್ಪರ್ಧೆ- ಇಂತಹವೆಲ್ಲಾ ನಾಟಕ ಕಂಪನಿ ನಡೆಸುವ ಮಾಲೀಕರಿಗೆ ಹೊಸದಲ್ಲ. ಜೀವನದುದ್ದಕ್ಕೂ ಪ್ರೇಮಾ ಅವನ್ನೆಲ್ಲ ಎದುರಿಸಿ ಗೆದ್ದಿದ್ದರು. ಮಹಿಳೆ ಒಬ್ಬಳೇ ಇದ್ದಾಳೆ ಎಂದಾಗ ಕಿರುಕುಳ ಜಾಸ್ತಿ. ಕಲಾವಿದರನ್ನು ಓಡಿಸಿಕೊಂಡು ಹೋದರು. ಕಳುವಾಯಿತು. ಅಪಘಾತಗಳು ಸಂಭವಿಸಿದವು. ಪ್ರೇಮಾ ಅವನ್ನೆಲ್ಲ ಎದುರಿಸಿದರು. ಎರಡನೇ ಹಂತದ ಅಂತಹ ಸಾಹಸಕ್ಕೆ ಈಗ 13 ವರ್ಷ.

ಪುರುಷನಿಗೆ ಸರಿಸಾಟಿ: ವೃತ್ತಿ ರಂಗಭೂಮಿಯಲ್ಲಿ ಮಹಿಳೆ ಪಾತ್ರ ನಗಣ್ಯವಲ್ಲ. ಪುರುಷನಿಗೆ ಸರಿಸಾಟಿಯಾದುದು. ಸಂಖ್ಯೆಯ ದೃಷ್ಟಿಯಲ್ಲಿ ಸಮ ಇಲ್ಲದಿರಬಹುದು, ಆದರೆ ಸಾಮರ್ಥ್ಯದಲ್ಲಿ ಆಕೆಯ ಕೊಡುಗೆ ಪುರುಷರಿಗಿಂತ ಕಡಿಮೆ ಇಲ್ಲ. ಅದಕ್ಕೊಂದು ಸುದೀರ್ಘ ಪರಂಪರೆಯೇ ಇದೆ. ಆತನಂತೆ ಆಕೆಯೂ ನಟಿಯಾಗಿ, ರಾಗಸಂಯೋಜಕಿಯಾಗಿ, ನಾಟಕ ಕೂಡಿಸುವ ಸಂಘಟಕಿಯಾಗಿ (ನಿರ್ದೇಶನ) ಹೆಗಲೆಣೆಯಾಗಿದ್ದಾಳೆ. ಸಾಮಾನ್ಯವಾಗಿ ಪುರುಷ ನಿಭಾಯಿಸುವ ಮಾಲೀಕತ್ವದ ಜವಾಬ್ದಾರಿಯನ್ನು ಮಹಿಳೆಯೂ ನಿರ್ವಹಿಸಿದ ಉದಾಹರಣೆಗಳಿವೆ. ಚಿಂದೋಡಿ ಲೀಲಾ, ಆರ್. ನಾಗರತ್ನಮ್ಮ, ಮಾಲತಿ ಸುಧೀರ್ ಸೇರಿದಂತೆ ಹಲವು ಮಹಿಳೆಯರು ಮಾಲೀಕರಾಗಿ ನಾಟಕ ಕಂಪೆನಿಗಳನ್ನು ಮುನ್ನಡೆಸಿದ್ದಾರೆ. ಕೆಲವರಿಗೆ ಕುಟುಂಬದ ಬೆಂಬಲ ಇದೆ. ಅಂದರೆ ಅವರದೇ ಕುಟುಂಬದಲ್ಲಿ ನಾಲ್ಕಾರು ಮಂದಿ ಕಲಾವಿದರು, ರಂಗಕರ್ವಿುಗಳು ಬೆನ್ನಿಗಿರುತ್ತಾರೆ. ಆದರೆ ತನ್ನ ಧೈರ್ಯ, ಮುನ್ನುಗ್ಗುವ ಛಾತಿ, ದಿಟ್ಟತನದಿಂದ 35 ವರ್ಷಗಳ ಸುದೀರ್ಘ ಅವಧಿಗೆ ಕಂಪನಿಯನ್ನು ಮುನ್ನಡೆಸಿಕೊಂಡು ಬಂದ ಕೀರ್ತಿ ಪ್ರೇಮಾ ಗುಳೇದಗುಡ್ಡ ಅವರಿಗೆ ಸಲ್ಲುತ್ತದೆ.

(ಲೇಖಕರು ಹಿರಿಯ ಪತ್ರಕರ್ತರು, ರಂಗವಿಮರ್ಶಕರು)