ಅಂಕಣ

ಪ್ರಾಣ ಶಕ್ತಿ ಹೆಚ್ಚಾಗಿಸಲು ಪ್ರಾಣಮುದ್ರೆ - ಪಿತ್ತ ನಾಶಕ ಮುದ್ರೆ

ಪ್ರಮುಖ ಮುದ್ರಾ ಚಿತ್ರಗಳನ್ನು ಮತ್ತು ಮಾನವ ದೇಹಕ್ಕೆ ದೊರಕುವ ಪ್ರಯೋಜನಗಳನ್ನು ತಿಳಿಸಿ?

| ಉದಯ ಕುಮಾರ್ ಆರ್. ಬಿ. ಬೆಂಗಳೂರು

ನಮ್ಮ ಕೈ ಮತ್ತು ಬೆರಳುಗಳಿಂದ ಮಾಡಿದ ಮುದ್ರೆಗಳ ಶಕ್ತಿಯನ್ನು ನಮ್ಮ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದಿಂದ ಪ್ರಯೋಜನ ಕ್ಕಾಗಿ ಅನ್ವಯಿಸಬಹುದು. ಯೋಗ, ನೃತ್ಯ, ಚಕ್ರ ಚಿಕಿತ್ಸೆ, ರೇಖಿ ಚಿಕಿತ್ಸೆ ಮತ್ತು ವಿವಿಧ ಪ್ರಕಾರಗಳಲ್ಲಿ ಮುದ್ರೆಗಳನ್ನು ಶತಮಾನಗಳಿಂದ ಬಳಸಲಾಗಿದೆ. ಇಲ್ಲಿ ನಿಮ್ಮ ಆರೋಗ್ಯ, ತೂಕ ನಷ್ಟ, ಮನಸ್ಸಿನ ಚಿಕಿತ್ಸೆ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಅದರ ಪ್ರಾಯೋಗಿಕ ಬಳಕೆಗೆ ಸಂಬಂಧಿಸಿದ ಪ್ರಮುಖ ಅಂಶಗಳಿಗಾಗಿ ವಿವಿಧ ಮುದ್ರೆಗಳನ್ನು ಕಲಿಯುವಿರಿ. ಮುದ್ರೆಗಳು ಮುಖ್ಯವಾಗಿ ಉಸಿರಾಟದ ಮೇಲೆ ನಿಯಂತ್ರಣದೊಂದಿಗೆ ನಿರ್ದಿಷ್ಟ ದೇಹದ ಮಾದರಿಗಳನ್ನು ಅಳವಡಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸುತ್ತದೆ. ಗುಣಪಡಿ ಸಲು ಮುದ್ರೆಗಳು ಶಕ್ತಿಯು ಶರೀರವನ್ನು ಮಾರ್ಗದರ್ಶನ ಮಾಡುವ ಮತ್ತು ಒಳಗಿನಿಂದ ನಿಮ್ಮನ್ನು ಗುಣಪಡಿಸುವ ಅತ್ಯಂತ ಶಕ್ತಿಶಾಲಿ ಅಧ್ಯಾತ್ಮಿಕ ಸಾಧನವಾಗಿದೆ. ಮುದ್ರೆಗಳನ್ನು ಭಾರತೀಯ ಶಾಸ್ತ್ರೀಯ ನೃತ್ಯಗಳಲ್ಲಿ ಭಾವನೆಯನ್ನು ತಿಳಿಸಲು ಅರ್ಥಪೂರ್ಣ ಸನ್ನೆಗಳಾಗಿ ಬಳಸಲಾಗುತ್ತದೆ.

ಇಂದು ಪ್ರಾಣಮುದ್ರೆ ಬಗ್ಗೆ ಮಾಹಿತಿ ತಿಳಿಯೋಣ: ಪ್ರಾಣಮುದ್ರೆ ಅಥವಾ ಪಿತ್ತ ನಾಶಕ ಮುದ್ರೆ ಪ್ರಸ್ತುತ ಜೀವನ ಶೈಲಿಯಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ತುಂಬ ಸಹಕಾರಿ. ದೈಹಿಕ ವ್ಯಾಯಾಮ ಕೊರತೆ ಮತ್ತು ಕಂಪ್ಯೂಟರ್​ನೆದುರು ಬೆಳಿಗ್ಗೆಯಿಂದ ಸಂಜೆಯವರೆಗೆ ಕುಳಿತು ಕೆಲಸ ಮಾಡುವ ಮಂದಿಯಲ್ಲಿ ಕಾಣಿಸುವ ವಿಟಮಿನ್ ಡಿ ಜೀವಸತ್ವ ಕೊರತೆಯನ್ನು ಈ ಮುದ್ರೆಯಿಂದ ನೀಗಿಸಬಹುದು. ದೇಹ, ಭಾವನೆಗಳು ಮತ್ತು ಮನಸ್ಸಿನ ವಿಕಾಸದ ಹಠಯೋಗ ಮತ್ತು ಪ್ರಾಣಾಯಾಮ ವ್ಯವಸ್ಥೆಗಳಿಗೆ ಮುದ್ರೆಗಳು ಪ್ರಮುಖವಾಗಿದೆ. ಯೋಗದ ಅಭ್ಯಾಸ ಮಾಡಿದ್ದಲ್ಲಿ ಮುದ್ರೆಗಳನ್ನು ಮನಸ್ಸನ್ನು ಸೂಚಿಸಲು ಬಳಸಲಾಗುತ್ತದೆ. ಇದು ಮೂಲಾಧಾರ ಅಥವಾ ಮೂಲ ಚಕ್ರವನ್ನು ಪ್ರಚೋದಿಸುತ್ತದೆ. ಮೂಲಾಧಾರವು ಏಳು ಪ್ರಾಥಮಿಕ ಚಕ್ರಗಳಲ್ಲಿ ಒಂದಾಗಿದೆ. ಪ್ರಾಣ ಮುದ್ರೆಯು ಮೂಲದಿಂದ ಚೈತನ್ಯವನ್ನು ಹೆಚ್ಚಿಸುತ್ತದೆ ಮತ್ತು ನರಮಂಡಲ, ಚಕ್ರಗಳ ಮೂಲಕ ಶಕ್ತಿಯನ್ನು ಹೊರಸೂಸುತ್ತದೆ. ಪ್ರಾಣ ಮುದ್ರೆಯು ಭೂಮಿ ಮತ್ತು ನೀರಿನ ಅಂಶವನ್ನು ಹೆಚ್ಚಿಸುತ್ತದೆ.

ಮಾಡುವ ವಿಧಾನ: ಸೂಕ್ತವಾದ ಭಂಗಿ ಸುಖಾಸನ/ಸ್ವಸ್ತಿಕಾಸನ/ಪದ್ಮಾಸನ/ವಜ್ರಾಸನ/ ವೀರಾಸನ ಇಲ್ಲವೇ ಸಿದ್ಧಾಸನದಲ್ಲಿ ಕುಳಿತುಕೊಳ್ಳಿ. ಕಿರುಬೆರಳು ಮತ್ತು ಉಂಗುರ ಬೆರಳಿನ ತುದಿಗಳನ್ನು ಹೆಬ್ಬೆರಳಿನ ತುದಿಗೆ ಜೋಡಿಸಿ.ಉಳಿದ ಬೆರಳುಗಳು ನೇರವಾಗಿರಲಿ. 10 ರಿಂದ 20 ನಿಮಿಷಗಳವರೆಗೆ ಅಭ್ಯಾಸ ಮಾಡಿ. ಕ್ರಮೇಣ 20 ರಿಂದ 50 ನಿಮಿಷಗಳ ಕಾಲ ಮಾಡಬಹುದು. ಪ್ರಾಣಮುದ್ರೆಯಲ್ಲಿ ಇಷ್ಟ ದೇವರನ್ನು ಅಥವಾ ‘ಓಂ ಹಿರಣ್ಯಗರ್ಭಾಯ ನಮಃ’ ಎಂದು 108 ಬಾರಿ ಪಠಿಸಿ.

ಪ್ರಯೋಜನ: ಈ ಮುದ್ರೆಯು ದೇಹದಾದ್ಯಂತ ಚೈತನ್ಯ ಅಥವಾ ಪ್ರಾಣದ ಹರಿಯುವಿಕೆಯನ್ನು ಉತ್ತೇಜಿಸುತ್ತದೆ. ನರ ದೌರ್ಬಲ್ಯ, ಆಯಾಸವನ್ನು ಪರಿಹರಿಸಿ ಶರೀರದಲ್ಲಿ ಲವಲವಿಕೆ ತುಂಬುತ್ತದೆ. ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ದೇಹದ ವಿಟಮಿನ್​ಗಳ ಪೂರೈಕೆಗೆ ಸಹಕಾರಿಯಾಗುತ್ತದೆ. ಕಣ್ಣುಗಳ ಉರಿ, ಕಣ್ಣು ಮಂಜಾಗುವುದು ಮುಂತಾದ ನೇತ್ರ ಸಂಬಂಧಿ ತೊಂದರೆಗಳಿದ್ದಲ್ಲಿ ಪ್ರಾಣ ಮುದ್ರೆಯು ಅವುಗಳ ವಿರುದ್ಧ ರಾಮಬಾಣದಂತೆೆ ಕೆಲಸ ಮಾಡುತ್ತದೆ. ಉಪವಾಸ ಸಂದರ್ಭದಲ್ಲಿ ಈ ಪ್ರಾಣಮುದ್ರೆಯನ್ನು ಮಾಡಿದರೆ ಆಯಾಸ, ಹಸಿವು ಕಾಡುವುದಿಲ್ಲ. ಶರೀರದಲ್ಲಿ ರಕ್ತ ಪರಿಚಲನೆ ಸುಗಮಗೊಳ್ಳುತ್ತದೆ. ಕಾಲುಗಳಲ್ಲಿಯೂ ನೋವು ರಕ್ತನಾಳಗಳ ಸೆಳೆತ ನಿವಾರಣೆಯಾಗುತ್ತದೆ. ಮುದ್ರೆಗಳನ್ನು ಯಾರೂ ಬೇಕಾದರೂ ಯಾವಾಗ ಬೇಕಾ ದರೂ ಅಭ್ಯಾಸ ಮಾಡಬಹುದು. ಮುದ್ರೆಗಳನ್ನು ಗುರುಮುಖೇನವೇ ಕಲಿತು ಅಭ್ಯಾಸ ನಡೆಸಿ.