ಹೊಸದಿಲ್ಲಿ: ಲೈಂಗಿಕ ದೌರ್ಜನ್ಯದ ಆರೋಪದ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವ ಕಾರಣ ಜರ್ಮನಿ ಪ್ರವಾಸಕ್ಕೆ ರಾಜಕೀಯ ಅನುಮತಿ ಕೋರಿಲ್ಲ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ)ದ ವಕ್ತಾರ ರಣಧೀರ್ ಜೈಸ್ವಾಲ್ , ಜರ್ಮನಿಗೆ ತೆರಳಿರುವ ಸಂಸದ ಪ್ರಜ್ವಲ್ ರೇವಣ್ಣ ಪ್ರಯಾಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಇಲಾಖೆಯಿಂದ ಯಾವುದೇ ರಾಜಕೀಯ ಅನುಮತಿಯನ್ನು ಕೋರಲಾಗಿಲ್ಲ, ನಾವೂ ನೀಡಿಲ್ಲ' ಎಂದು ಸ್ಪಷ್ಟಪಡಿಸಿದರು.
'ಸಂಸದ ಪ್ರಜ್ವಲ್ ರೇವಣ್ಣಗೆ ನಿಸ್ಸಂಶಯವಾಗಿ, ಯಾವುದೇ ವೀಸಾವನ್ನು ಸಹ ನೀಡಲಾಗಿಲ್ಲ. ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರಿಗೆ ಜರ್ಮನಿಗೆ ಪ್ರಯಾಣಿಸಲು ಯಾವುದೇ ವೀಸಾದ ಅಗತ್ಯವಿಲ್ಲ. ಹೀಗಾಗಿಯೇ ಅವರು ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸಿದ್ದಾರೆ ಎಂದು ಹೇಳಿದರು.
ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದು ವಿಡಿಯೋಗಳು ವೈರಲ್ ಆಗುತ್ತಿದ್ದ ವೇಳೆಯಲ್ಲೇ ಪ್ರಜ್ವಲ್ ರೇವಣ್ಣ ಏಪ್ರಿಲ್ 26 ರಂದು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ತೆರಳಿದ್ದಾರೆ.
ಲುಕ್‌ಔಟ್ ನೋಟಿಸ್ ಜಾರಿ: ಲೈಂಗಿಕ ಹಗರಣದ ತನಿಖೆಗೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದು, ಗುರುವಾರ ಎಸ್‌ಐಟಿ ಪ್ರಜ್ವಲ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ.
ಗುರುವಾರ ಎಸ್‌ಐಟಿ ಮುಂದೆ ಹಾಜರಾಗಬೇಕಿದ್ದ ರೇವಣ್ಣ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.