ಕಪೀಶಂ ಅಕ್ಷಹಂತಾರಂ ವಂದೇ ಲಂಕಾ ಭಯಂಕರಂ||
ಹೀಗೊಂದು ಕಥೆ.
ವಾಲ್ಮೀಕಿ ಮಹರ್ಷಿಗಳ ಅಪರಾವತಾರ ಎಂದು ಭಾವಿಸಲಾಗಿರುವ ಗೋಸ್ವಾಮಿ ತುಳಸಿದಾಸರು ಹನುಮಾನ್ ಚಾಲೀಸಾ ಬರೆಯಲು ಆರಂಭಿಸಿದ್ದರು. ಆದರೆ, ಅವರಿಗೊಂದು ವಿಚಿತ್ರ ಸಮಸ್ಯೆ ಎದುರಾಗಿತ್ತು. ಹನುಮನನ್ನು ಸ್ತುತಿಸಿ ಶ್ಲೋಕಗಳನ್ನು ಬರೆದ ತಾಳೆಗರಿಗಳನ್ನು ಅವರು ಎಷ್ಟು ಜೋಪಾನವಾಗಿ ಎತ್ತಿಟ್ಟರೂ, ಮಾರನೇ ದಿನ ನೋಡುವಾಗ ಅದರಲ್ಲಿರುವ ಅಕ್ಷರಗಳೆಲ್ಲ ಅಳಿಸಿಹೋಗಿರುತ್ತಿದ್ದವು.
ಎರಡು ಬಾರಿ, ನಾಲ್ಕು ಬಾರಿ, ಅನೇಕ ಬಾರಿ ಇದೇ ರೀತಿ ಪುನರಾವರ್ತನೆಯಾದಾಗ, ಬರೆದಿರುವುದನ್ನು ಈ ರೀತಿ ಯಾರು ಅಳಿಸುತ್ತಿದ್ದಾರೆ ಎಂಬುದೇ ತಿಳಿಯದೆ ದುಃಖಿತರಾದ ತುಳಸೀದಾಸರು ಹನುಮನನ್ನೇ ಪ್ರಾರ್ಥಿಸಿದರು. ಆಗ ಪ್ರತ್ಯಕ್ಷನಾದ ಹನುಮಂತ, ತಾಳೆಗರಿಯಲ್ಲಿದ್ದ ಶ್ಲೋಕಗಳನ್ನು ಅಳಿಸಿ ಹಾಕಿದ್ದು ನಾನೇ. ನಿನಗೆ ಯಾರನ್ನಾದರೂ ಗುಣಗಾನ ಮಾಡಬೇಕೆಂದಿದ್ದರೆ ಪ್ರಭು ಶ್ರೀರಾಮಚಂದ್ರನನ್ನು ಹಾಡಿಹೊಗಳು, ನನ್ನ ಗುಣಗಾನವೇಕೆ? ಎಂದು ತಾಳೆಗರಿ ಬರಹ ಅಳಿಸಿದ ಕಾರಣವನ್ನು ವಿವರಿಸುತ್ತಾನೆ. ಆಗ ತುಳಸೀದಾಸರು ಚಾಲೀಸಾದ ಆರಂಭದಲ್ಲಿ
ಶ್ರೀ ಗುರು ಚರಣ ಸರೋಜ ರಜ ನಿಜ ಮನ ಮುಕುರ ಸುಧಾರಿ | ಬರನೌ ರಘುವರ ಬಿಮಲ್ ಜಸು ಜೋ ದಾಯಕು ಫಲ ಚಾರಿ || (ಶ್ರೀ ಗುರುವಿನ ಚರಣ ಕಮಲಗಳ ಧೂಳಿನಿಂದ ನನ್ನ ಮನಸ್ಸೆಂಬ ಕನ್ನಡಿಯನ್ನು ಬೆಳಗಿ, ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ನೀಡುವ ಶ್ರೀ ರಘುವರನ ವಿಮಲ ಚರಿತೆಯನ್ನು ಹಾಡುವೆನು) ಎಂಬ ಪ್ರಾರ್ಥನಾಶ್ಲೋಕವನ್ನು ಸೇರಿಸುತ್ತಾರೆ. ಆಗಲೂ ಹನುಮಂತ, ನಾನು ಶ್ರೀರಾಮನ ಪಾದಸೇವಕ, ನನ್ನನ್ನು ರಘುವರನಿಗೆ ಹೋಲಿಕೆ ಮಾಡಿದ್ದು ಸರಿಯಲ್ಲ ಎಂದು ತಕರಾರು ತೆಗೆಯುತ್ತಾನೆ. ಆಗ ತುಳಸೀದಾಸರು, ಪುರಾಣಕಥೆಯೊಂದನ್ನು ಉದಾಹರಿಸುವ ಮೂಲಕ ಶ್ರೀರಾಮ ಮತ್ತು ಹನುಮ ಇಬ್ಬರೂ ಒಂದೇ ವರಪ್ರಸಾದದಿಂದ ಜನಿಸಿದ ಅವತಾರಪುರುಷರು ಎಂದು ತಮ್ಮ ಶ್ಲೋಕವನ್ನು ಸಮರ್ಥಿಸಿಕೊಳ್ಳುತ್ತಾರೆ.
ಬ್ರಹ್ಮಲೋಕದಲ್ಲಿ ಸುವರ್ಚಲ ಎಂಬ ಅಪ್ಸರೆ ಒಮ್ಮೆ ಬ್ರಹ್ಮದೇವರ ಮೇಲೆ ಮೋಹಗೊಳ್ಳುತ್ತಾಳೆ. ಆಗ ಕೋಪಾವಿಷ್ಟನಾಗುವ ಬ್ರಹ್ಮ, ರಣಹದ್ದಾಗಿ ಜನಿಸುವಂತೆ ಶಾಪ ನೀಡುತ್ತಾನೆ. ಶಾಪದಿಂದ ಕಂಗಾಲಾಗಿ ದೈನ್ಯದಿಂದ ಅಳತೊಡಗುವ ಅಪ್ಸರೆಯನ್ನು ಕಂಡು ಬ್ರಹ್ಮದೇವರಿಗೇ ಮನಸ್ಸು ಕರಗುತ್ತದೆ. ಭೂಲೋಕದಲ್ಲಿ ರಾಜ ದಶರಥ ಪುತ್ರಾಪೇಕ್ಷೆಯಿಂದ ಯಜ್ಞ ಮಾಡುತ್ತಾನೆ. ಆಗ ಲಭಿಸುವ ವರಪ್ರಸಾದವನ್ನು ಆತ ಮೂವರೂ ಮಡದಿಯರಿಗೆ ಸಮನಾಗಿ ಹಂಚುತ್ತಾನೆ. ಆಗ ಕೈಕೇಯಿಯ ಭಾಗವನ್ನು ನೀನು ತೆಗೆದುಕೊಂಡು ಅಲ್ಲಿಂದ ಹಾರಬೇಕು. ಅದೇ ನಿನಗೆ ಶಾಪವಿಮೋಚನೆ ಎಂದು ಪರಿಹಾರ ಸೂಚಿಸುತ್ತಾನೆ. ಅದೇ ರೀತಿ ರಣಹದ್ದು ಕೈಕೇಯಿ ಬೊಗಸೆಯಿಂದ ಪ್ರಸಾದ ಕಿತ್ತುಕೊಂಡು ಹಾರುವಾಗ ಇನ್ನೊಂದೆಡೆ ಅಂಜನಾ ದೇವಿಯೂ ಬೊಗಸೆ ಕೈಗಳನ್ನು ಹಿಡಿದುಕೊಂಡು ಮಗನನ್ನು ಕರುಣಿಸುವಂತೆ ಶಿವನಲ್ಲಿ ಪ್ರಾರ್ಥಿಸುತ್ತಿರುತ್ತಾಳೆ. ರಣಹದ್ದು ಅಪಹರಿಸಿದ ಪ್ರಸಾದ ಅಂಜನಾದೇವಿಯ ಕೈಸೇರುತ್ತದೆ. ಅದೇ ಪ್ರಸಾದವನ್ನು ಆಕೆ ಸೇವಿಸಿ ಜನಿಸಿದ ಅವತಾರ ಪುರುಷನೇ ನೀನು ಹನುಮಂತ ಎಂದು ತುಳಸೀದಾಸರು ಹನುಮನಿಗೆ ನೆನಪಿಸುತ್ತಾರೆ.
ರಘುಪತಿ ಕೀನ್ಹೀ ಬಹುತ ಬಡಾಯಿ | ತುಮ ಮಮ ಪ್ರಿಯ ಭರತ ಹಿ ಸಮ ಭಾಯಿ|| ಲಂಕಾಯುದ್ಧದಲ್ಲಿ ಪ್ರಜ್ಞೆ ತಪ್ಪಿದ ಲಕ್ಷ್ಮಣನ ಚೇತರಿಕೆಗಾಗಿ ನೀನು ಸಂಜೀವಿನಿ ಪರ್ವತವನ್ನೇ ಹೊತ್ತು ತಂದೆ. ಆಗ ‘ನನ್ನ ಸೋದರ ಭರತನಷ್ಟೇ ನೀನು ನನಗೆ ಪ್ರಿಯನು’ ಎಂದು ಶ್ರೀರಾಮನೇ ನಿನ್ನನ್ನು ಹೊಗಳಿದ್ದಾನೆ. ಅದೇ ರೀತಿ ಶ್ರೀರಾಮನ ಮುದ್ರಿಕೆ ಹೊತ್ತು ಲಂಕೆಗೆ ಹಾರುವ ನೀನು ಅಶೋಕವನದಲ್ಲಿ ಸೀತೆಯನ್ನು ಭೇಟಿ ಮಾಡಿದಾಗ ಆಕೆ ನಿನ್ನನ್ನು ಸ್ವಂತ ಮಗನಂತೆ ಆದರಿಸುತ್ತಾಳೆ. ನೀನು ಚಿರಂಜೀವಿ. ಅವತಾರ ಪುರುಷ. ಶ್ರೀರಾಮನಿಗೆ ಅತ್ಯಂತ ಪ್ರೀತಿಪಾತ್ರನಾದವನು ಎಂಬ ತುಳಸೀದಾಸರ ವಿವರಣೆಯನ್ನು ಹನುಮ ಒಪ್ಪಿಕೊಳ್ಳುತ್ತಾನೆ. ಮುಂದೆ ಅವರು ನಿರ್ವಿಘ್ನವಾಗಿ ಹನುಮಾನ್ ಚಾಲೀಸಾ ಬರೆದು ಮುಗಿಸುತ್ತಾರೆ.
ತುಳಸಿದಾಸರ ಹನುಮಾನ್ ಚಾಲೀಸಾ ಕುರಿತು ಇನ್ನೂ ಒಂದು ಕಥೆ ಇದೆ. ಒಮ್ಮೆ ತುಳಸೀದಾಸರು ರಾಮನ ಸೇವೆ ಮಾಡಿ ದೇಗುಲದಿಂದ ಮರಳುತ್ತಿರುವಾಗ ಮಹಿಳೆಯೊಬ್ಬಳು ಕಾಲಿಗೆರಗುತ್ತಾಳೆ. ರಾಮಧ್ಯಾನದಲ್ಲಿದ್ದ ತುಳಸೀದಾಸರು ಪುತ್ರವತೀ ಭವ ಎಂದು ಆಶೀರ್ವದಿಸುತ್ತಾರೆ. ಕೂಡಲೇ ಆ ಮಹಿಳೆ, ನನ್ನ ಗಂಡ ಈಗಷ್ಟೇ ಅಸುನೀಗಿದ್ದಾನೆ, ಇನ್ನೆಂಥ ಪುತ್ರ ಸೌಭಾಗ್ಯ? ನೀವೇ ನನ್ನ ಗಂಡನನ್ನು ಬದುಕಿಸಬೇಕು ಎಂದು ರೋದಿಸುತ್ತಾಳೆ. ತುಳಸೀದಾಸರು ಇದರಿಂದ ಸ್ವಲ್ಪವೂ ವಿಚಲಿತರಾಗುವುದಿಲ್ಲ. ಶ್ರೀರಾಮನೇ ನನ್ನ ಬಾಯಲ್ಲಿ ಈ ಮಾತು ನುಡಿಸಿದ್ದಾನೆ. ರಾಮನ ನುಡಿ ಸುಳ್ಳಾಗುವುದಿಲ್ಲ ಎಂದು ರಾಮನನ್ನು ಭಜಿಸುತ್ತಾರೆ.
ಪವಾಡಸದೃಶವಾಗಿ ಆ ಮಹಿಳೆಯ ಪತಿ ಪುನಃ ಜೀವತಳೆದು ಎದ್ದು ಬರುತ್ತಾನೆ. ಈ ಘಟನೆಯನ್ನು ಕೇಳಿ ತಿಳಿದ ಮೊಘಲ್ ದೊರೆ ಅಕ್ಬರ್, ತುಳಸೀದಾಸರನ್ನು ತನ್ನ ಅರಮನೆಗೆ ಕರೆಸಿಕೊಂಡು, ‘ನೀವು ಪವಾಡಪುರುಷರಂತೆ, ನಿಮ್ಮ ಪವಾಡವನ್ನು ನನಗೂ ತೋರಿಸಿ’ ಎಂದು ಆಜ್ಞಾಪಿಸುತ್ತಾನೆ. ಅದಕ್ಕೆ ದಾಸರು, ‘ನಾನೊಬ್ಬ ಸಾಧಾರಣ ರಾಮಭಕ್ತ, ಪವಾಡಗಳು ನನಗೆ ತಿಳಿಯವು’ ಎಂದು ನಿರ್ಲಿಪ್ತರಾಗಿ ನುಡಿಯುತ್ತಾರೆ. ಇದರಿಂದ ಕ್ರುದ್ಧನಾಗುವ ಅಕ್ಬರ್, ದಾಸರನ್ನು ಬಂಧಿಸಿ ಕಾರಾಗೃಹಕ್ಕೆ ಕಳಿಸುತ್ತಾನೆ. ಬಂಧನದಲ್ಲಿರುವಾಗಲೇ ತುಳಸೀದಾಸರು ಹನುಮಾನ್ ಚಾಲೀಸಾ ಬರೆಯುತ್ತಾರೆ. ಬಂಧನದಲ್ಲಿ 40 ದಿನಗಳು ಕಳೆಯುತ್ತಿದ್ದಂತೆಯೇ ಪವಾಡ ಸಂಭವಿಸುತ್ತದೆ. ಸಾವಿರಾರು ವಾನರರ ಸೈನ್ಯವೇ ಅಕ್ಬರನ ಅರಮನೆಗೆ ಲಗ್ಗೆ ಹಾಕುತ್ತದೆ. ಇದರಿಂದ ಗಾಬರಿಗೊಂಡು ದಿಕ್ಕೆಟ್ಟ ಅಕ್ಬರ್, ತಕ್ಷಣವೇ ತುಳಸೀದಾಸರನ್ನು ಜೈಲಿನಿಂದ ಬಿಡುಗಡೆ ಮಾಡುತ್ತಾನೆ. ಮುಂದೆ ಜೀವನದುದ್ದಕ್ಕೂ ತುಳಸೀದಾಸರೊಂದಿಗೆ ಅಕ್ಬರ್ ಆಪ್ತತೆ ಬೆಳೆಸಿಕೊಳ್ಳುತ್ತಾನೆ.
ಇತಿಹಾಸ ಮತ್ತು ಪುರಾಣದ ಹಿನ್ನೋಟದಲ್ಲಿ ಇಂಥ ಕಥೆಗಳು ನೂರಾರು. ಇವುಗಳಲ್ಲಿ ಸತ್ಯಕಥೆಗಳೆಷ್ಟು? ದಂತಕಥೆಗಳೆಷ್ಟು ಎಂಬ ಜಿಜ್ಞಾಸೆಗೆ ತೊಡಗದೆ, ಕಥೆಯ ಅಂತರಾರ್ಥ, ಸಂದೇಶವನ್ನು ಅರಿಯುವುದು ವಿಹಿತ.
ಭಾರತೀಯ ಸಂಸ್ಕೃತಿ, ಸಂಸ್ಕಾರಗಳ ಆತ್ಮವೇ ಆಗಿರುವ ರಾಮಾಯಣವು ರಾಮ ಚರಿತೆಯಷ್ಟೇ, ಹನುಮನ ಕಥೆಯೂ ಹೌದು. ರಾವಣನನ್ನು ವಧಿಸಿ, ಸೀತಾ, ಲಕ್ಷ್ಮಣ ಸಮೇತನಾಗಿ ಅಯೋಧ್ಯೆಗೆ ಮರಳುವ ಶ್ರೀರಾಮ ಪಟ್ಟಾಭಿಷೇಕದ ಬಳಿಕ ವಿಭೀಷಣ, ಸುಗ್ರೀವ, ಅಂಗದ ಮೊದಲಾದ ಸಮಸ್ತರಿಗೂ ಕೃತಜ್ಞತೆಯ ಪ್ರತೀಕವಾಗಿ ಉಡುಗೊರೆಗಳನ್ನು ನೀಡುತ್ತಾನೆ. ಆಗ, ಹನುಮಂತ ತನಗೆ ಯಾವುದೇ ಭೌತಿಕ ಉಡುಗೊರೆಗಳು ಬೇಡ, ‘ನಿನ್ನ ಚರಣಸೇವೆ ಕೊಡು ಎನಗೆ’ ಎಂದು ಪ್ರಾರ್ಥಿಸುತ್ತಾನೆ. ಭೂಮಂಡಲದಲ್ಲಿ ಎಲ್ಲಿಯವರೆಗೆ ನಿನ್ನ ಚರಿತೆ ಅಜರಾಮರವಾಗಿರುವುದೋ, ರಾಮನಾಮವು ಜನಜನಿತವಾಗಿರುವುದೋ ಅಲ್ಲಿಯವರೆಗೂ ನನಗೆ ಈ ದೇಹದಲ್ಲಿಯೇ ಇರಲು ವರವನ್ನು ಅನುಗ್ರಹಿಸು ಎಂದು ಬೇಡಿಕೊಳ್ಳುತ್ತಾನೆ. ರಾಮನು ತಥಾಸ್ತು ಅನ್ನುತ್ತಾನೆ. ಹನುಮಂತ ಚಿರಂಜೀವಿಯಾಗಿದ್ದು ಹೀಗೆ. ‘ಎಲ್ಲಿ ರಾಮನೋ ಅಲ್ಲೇ ಹನುಮನು..’ ಎಲ್ಲಿ ರಾಮನ ಪ್ರಾರ್ಥನೆ, ಅರ್ಚನೆ, ಸಂಕೀರ್ತನೆ ನಡೆಯುವುದೋ, ಅಲ್ಲಿ ಹನುಮ ಉಪಸ್ಥಿತನಿರುತ್ತಾನೆ ಎಂದು ನಮ್ಮ ಹರಿದಾಸರು ಸಹ ವರ್ಣಿಸುತ್ತಾರೆ.
ಮನೋಜವಂ ಮಾರುತತುಲ್ಯವೇಗಂ | ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ | ವಾತಾತ್ಮಜಂ ವಾನರಯೂತಮುಖ್ಯಂ | ಶ್ರೀರಾಮದೂತಂ ಶರಣಂ ಪ್ರಪದ್ಯೆ|| ಜಗತ್ತಿನಲ್ಲಿ ಎಲ್ಲಕ್ಕಿಂತ ವೇಗವೆಂದರೆ ಮನೋವೇಗ. ಮನಸ್ಸಿನ ವೇಗವನ್ನು ಮೀರಿಸುವಷ್ಟು ಚುರುಕಾಗಿರುವವನು ಮನೋಜ, ಗಾಳಿಗಿಂತ ವೇಗವಾಗಿ ಚಲಿಸಬಲ್ಲವನು ಮಾರುತಿ, ಇಂದ್ರಿಯವನ್ನು ಗೆದ್ದವನು, ಜ್ಞಾನಿಗಳಲ್ಲಿ ಶ್ರೇಷ್ಠ ಜ್ಞಾನಿ, ವಾಯುಪುತ್ರ, ಶ್ರೀರಾಮನ ದೂತ ಹನುಮಂತ. ಅಂಥ ಆಂಜನೇಯನ ಪಾದಗಳಿಗೆ ಶರಣು ಹೊಂದುವವರಿಗೆ ಯಾವುದೇ ಭಯವಿಲ್ಲ. ಅದಕ್ಕೇ ಭಾರತ ಖಂಡದಲ್ಲಿ ಹನುಮಂತನೆಂದರೆ ಮಕ್ಕಳಿಗೂ ಪ್ರೀತಿ, ಎಲ್ಲರಿಗೂ ಭಕ್ತಿ. ಭೂತ ಪಿಶಾಚ ನಿಕಟ ನಹಿ ಆವೆ | ಮಹಾವೀರ ಜಬ್ ನಾಮ ಸುನಾವೆ | ಹನುಮನ ಹೆಸರನ್ನು ಸ್ಮರಿಸಿದರೆ ಸಾಕು, ಭೂತ ಪಿಶಾಚಿಗಳು ಕೂಡ ಹತ್ತಿರ ಸುಳಿಯುವುದಿಲ್ಲ ಎಂಬ ನಂಬಿಕೆಯಿಂದ ಪಾಲಕರು ಮಕ್ಕಳಿಗೆ ಬಾಲ್ಯದಲ್ಲೇ ಹನುಮ ಭಕ್ತಿ ರೂಢಿಸುತ್ತಾರೆ. ನಾಸೈ ರೋಗ ಹರೇ ಸಬ್ ಪೀರಾ | ಜಪತ ನಿರಂತರ ಹನುಮತ್ ಬೀರಾ || ಹನುಮನ ನಾಮವನ್ನು ನಿರಂತರ ಜಪಿಸುವುದರಿಂದ ಎಲ್ಲ ರೋಗಗಳು ಪರಿಹಾರವಾಗುತ್ತವೆ, ಎಲ್ಲ ಕಷ್ಟಗಳು ಕಳೆಯುತ್ತವೆ ಎಂಬ ನಂಬಿಕೆಯಿಂದ ಆರಾಧಿಸುತ್ತಾರೆ.
ಆಂಜನೇಯ ಸಾತ್ವಿಕರಲ್ಲಿ ಸಾತ್ವಿಕ. ಆದರೆ, ಮಹಾನ್ ಸಾಹಸಿ. ಹನುಮನಿಗೆ ಅಸಾಧ್ಯವೆನ್ನುವುದು ಯಾವುದೂ ಇಲ್ಲ. ಶರಣು ಬಂದವರನ್ನು ಕಾಯುವ ಕಾಯಕದಲ್ಲಿ ಶ್ರೀರಾಮನಂತೆಯೇ ಹನುಮನೂ ಪ್ರಸಿದ್ಧಿ. ಹನುಮಂತನ ಆರಾಧಿಸುವ ಭಕ್ತರ ಮೇಲೆ ಶನಿ ಪ್ರಭಾವವೂ ಆಗುವುದಿಲ್ಲ ಎನ್ನುವುದು ಪ್ರತೀತಿ. ರಾಮಚಂದ್ರನ ಪ್ರಾಣನೊ ಅಸುರ ಹೃದಯಬಾಣನೊ | ಖಳರ ಗಂಟಲಗಾಣನೊ ಜಗದೊಳಗೆ ಪ್ರವೀಣನೋ || ಎಂಥಾ ಬಲವಂತನೊ|| ಎಂದು ಪುರಂದರ ದಾಸರು ಆಂಜನೇಯನನ್ನು ಭಜಿಸಿರುವುದೇ ಅದಕ್ಕೆ ಸಾಕ್ಷಿ. ಅಂಜಿಕಿನ್ಯಾತಕಯ್ಯ, ಸಜ್ಜನರಿಗೆ | ಭಯವು ಇನ್ಯಾತಕಯ್ಯಾ | ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ | ಎಂದು ವರ್ಣಿಸುವ ಪುರಂದರ ದಾಸರು, ಕನಸಿಲಿ ಮನಸಿಲಿ ಕಳವಳವಾದರೆ | ಹನುಮನ ನೆನೆದರೆ ಹಾರಿಹೋಗದೆ ಭೀತಿ | ಎನ್ನುತ್ತಾರೆ. ಅಪಮೃತ್ಯು ಪರಿಹರಿಸೊ ಅನಿಲ ದೇವ | ಕೃಪಣ ವತ್ಸಲನೆ | ಕಾಯ್ವರ ಕಾಣೆ ನಿನ್ನುಳಿದು || ಎಂದು ಜಗನ್ನಾಥ ದಾಸರು ಕೊಂಡಾಡುತ್ತಾರೆ.
ಹನುಮಂತ ಅಪಾರ ಜ್ಞಾನಿ, ಬುದ್ಧಿವಂತ, ಸಾಹಸಿ ಅಷ್ಟೇ ನಿಗರ್ವಿ. ಸೀತೆಯನ್ನು ಹುಡುಕಿಕೊಂಡು ಲಂಕೆಯ ದಿಕ್ಕಿನಲ್ಲಿ ಹೊರಟ ವಾನರರು ಸಮುದ್ರ ತೀರಕ್ಕೆ ಆಗಮಿಸುತ್ತಾರೆ. ಆಗ ವಾನರರ ನಡುವೆಯೇ ಯಾರ ಯಾರ ಸಾಮರ್ಥ್ಯ ಎಷ್ಟು? ಯಾರು ಎಷ್ಟು ದೂರ ಹಾರಬಲ್ಲರು ಎಂಬ ಸ್ವಾರಸ್ಯಕರ ಚರ್ಚೆ ನಡೆಯುತ್ತದೆ. ಪ್ರತಿಯೊಬ್ಬರೂ ತಾವು ಎಷ್ಟು ಯೋಜನ ದೂರ ಹಾರಬಲ್ಲೆವು ಎಂದು ಸಾಮರ್ಥ್ಯ ಹೇಳಿಕೊಳ್ಳುತ್ತಾರೆ. ಆದರೆ, ಹನುಮಂತ ಮಾತ್ರ ಮೌನವಾಗಿರುತ್ತಾನೆ. ನಮ್ಮೆಲ್ಲರಿಗಿಂತ ಬಲವಂತ ಹನುಮಂತನೇ. ಶತಯೋಜನ ಶರಧಿಯನ್ನು ಹಾರಿ ಹಿಂದಿರುಗುವ ಸಾಮರ್ಥ್ಯ ಅವನಿಗೆ ಮಾತ್ರವೇ ಇರುವುದು. ಹಾಗಾಗಿ ಸಮುದ್ರ ಲಂಘಿಸುವುದಕ್ಕೆ ಹನುಮನೇ ಸೂಕ್ತ ಎಂದು ಜಾಂಬವಂತ ಹುರಿದುಂಬಿಸುತ್ತಾನೆ.
ಹನುಮನಿಗೆ ಅಣಿಮಾ (ಪರಮಾಣುವಿನ ಗಾತ್ರಕ್ಕೆ ಕುಗ್ಗುವ ಸಾಮರ್ಥ್ಯ), ಮಹಿಮಾ (ಗಾತ್ರವನ್ನು ಅನಂತವಾಗಿ ಹೆಚ್ಚಿಸಿಕೊಳ್ಳುವುದು), ಗರಿಮಾ (ಅನಂತವಾಗಿ ತೂಕ ಹೆಚ್ಚಿಸಿಕೊಳ್ಳುವುದು), ಲಘಿಮಾ (ಹಗುರಕ್ಕಿಂತ ಹಗುರಾಗುವುದು), ಪ್ರಾಪ್ತಿ (ಏನನ್ನಾದರೂ ಪಡೆಯುವ ಸಾಮರ್ಥ್ಯ), ಪ್ರಾಕಾಮ್ಯ (ಬಯಸ್ಸಿದ್ದನ್ನು ಪಡೆಯುವ ಸಾಮರ್ಥ್ಯ), ಇಸಿತ್ವ (ಸೃಷ್ಟಿಯ ಮೇಲಿನ ಪ್ರಭುತ್ವ), ವಸಿತ್ವ (ವಸ್ತುಗಳ ಮೇಲೆ ನಿಯಂತ್ರಣ) ಮೊದಲಾದ ಅಷ್ಟ ಸಿದ್ಧಿಗಳು ಒಲಿದಿದ್ದವು. ರಾಮಾಯಣ ಸಂದರ್ಭದಲ್ಲಿ ಹನುಮನ ಈ ವಿವಿಧ ಸಿದ್ಧಿಗಳ ಉಪಯೋಗವೂ ತಿಳಿಯುತ್ತದೆ. ಸಮುದ್ರ ಲಂಘಿಸುವಾಗ ರಕ್ಕಸಿ ನುಂಗಲು ಅಡ್ಡಬಂದಾಗ ಅಣುರೂಪಕ್ಕೆ ದೇಹ ಕುಗ್ಗಿಸಿಕೊಂಡು ಆಕೆಯನ್ನು ಸೋಲಿಸುವ ಪವಮಾನ, ರಾವಣನ ಒಡ್ಡೋಲಗದಲ್ಲಿ ಪೀಠಗೌರವ ನೀಡದೇ ಹೋದಾಗ ರಾವಣನ ಸಿಂಹಾಸನಕ್ಕಿಂತ ಎತ್ತರಕ್ಕೆ ತನ್ನ ಬಾಲದಿಂದ ಸಹಜ ಸಿಂಹಾಸನ ಸೃಷ್ಟಿಸಿಕೊಂಡು ಆಸೀನನಾಗುವ ಉದಾಹರಣೆ ಸಿಗುತ್ತದೆ.
ಬಾಲಕ್ಕೆ ಬೆಂಕಿ ಹಚ್ಚುವಂತೆ ರಾವಣ ಆದೇಶಿಸಿದಾಗ ಜಗದ್ವಾ್ಯಪಿಯಾಗಿ ಬೆಳೆಯುವ ಹನುಮನ ಬಾಲಕ್ಕೆ ಸುತ್ತಲು ಲಂಕೆಯಲ್ಲಿರುವ ಬಟ್ಟೆಗಳು ಸಾಲುವುದಿಲ್ಲ. ಅದೇ ಬೆಂಕಿಯಿಂದ ಲಂಕೆಯನ್ನೂ ಹನುಮ ದಹಿಸುತ್ತಾನೆ. ಹನುಮ ಸ್ವತಃ ರಾವಣ, ಕುಂಭಕರ್ಣರನ್ನು ಸಾಯಿಸುವಷ್ಟು ಸಮರ್ಥನಾಗಿದ್ದ. ಆದರೆ, ರಾಮಕಾರ್ಯ, ರಾಮನ ಆದೇಶವನ್ನು ಪಾಲಿಸುವುದಷ್ಟೇ ತನ್ನ ಕಾಯಕ ಎಂದು ನಂಬಿದ್ದ ಹನುಮ ರಾಮನ ಭಂಟನಾಗಿ, ಸೇವಕತನದಲ್ಲಿ ಖುಷಿಯನ್ನು ಕಂಡನೇ ಹೊರತು, ತಾನೇ ಮಹಾವೀರನೆಂದು ಮೆರೆಯಲಿಲ್ಲ, ಅಹಂಕಾರ ಪ್ರದರ್ಶಿಸಲಿಲ್ಲ. ಹನುಮನ ಇಂಥ ಗುಣ, ಜೀವನವೇ ಮನುಷ್ಯ ಜನ್ಮದಲ್ಲಿ ಎಲ್ಲರಿಗೂ ಮಾದರಿ.
ಭೂಮಂಡಲದಲ್ಲಿ ಹನುಮಂತನ ಆರಾಧನೆಯ ಅಸಂಖ್ಯಾತ ಗುಡಿಗಳಿವೆ. ಜನ್ಮಸ್ಥಾನ ಅಂಜನಾದ್ರಿಯಿಂದ ರಾಮಜನ್ಮಭೂಮಿ ಅಯೋಧ್ಯೆಯವರೆಗೆ ಎಲ್ಲೆಲ್ಲೂ ರಾಮಭಕ್ತ ಹನುಮನ ಮಂದಿರಗಳಿವೆ. ಹನುಮೋತ್ಸವ ನಡೆಯದೆ ರಾಮೋತ್ಸವ ಪೂರ್ಣಗೊಳ್ಳುವುದಿಲ್ಲ. ರಾಮಕಥೆ ನಡೆಯುವಲ್ಲಿ ಹನುಮ ಇದ್ದೇ ಇರುತ್ತಾನೆ. ರಾಮ ಸಂಸ್ಕೃತಿ- ಹನುಮನ ಉಪಸ್ಥಿತಿ ಈ ನೆಲದ ಸೌಭಾಗ್ಯ.
ಶನಿವಾರ ಹನುಮ ಜಯಂತಿ. ಚೈತ್ರ ಶುಕ್ಲ ಪೌರ್ಣಮಿಯ ದಿನ ನಾಡಿನಲ್ಲಿ ಹನುಮೋತ್ಸವದ ಸಂಭ್ರಮ. ಕೆಲವೆಡೆ ಕಾರ್ತೀಕ ಮಾಸ ಚತುರ್ದಶಿಯಂದು, ಇನ್ನೂ ಕೆಲವೆಡೆ ಮಾರ್ಗಶೀರ್ಷ ಮಾಸ ಅಮಾವಾಸ್ಯೆಯಂದೂ ಹನುಮನ ಜಯಂತಿ ಆಚರಿಸಲಾಗುತ್ತದೆ. ಈ ಆಚರಣೆ ಯಾವಾಗ ನಡೆದರೂ, ಪ್ರತೀ ಮನೆಮನೆಯಲ್ಲಿ ಹನುಮನ ಉಪಾಸನೆ, ಆರಾಧನೆ ನಿತ್ಯನಿರಂತರ. ಏಕೆಂದರೆ, ಹನುಮನ ಹೆಸರು ಲೋಕಪ್ರಿಯ. ಹನುಮನನ್ನು ನೆನೆದರೆ ಇಲ್ಲ ಭಯ.
ಯತ್ರ ಯತ್ರ ರಘುನಾಥ ಕೀರ್ತನಂ | ತತ್ರ ತತ್ರ ಕೃತಮಸ್ತಕಾಂಜಲೀಂ ||
ಭಾಷ್ಪವಾರಿ ಪರಿಪೂರ್ಣಲೋಚನಂ | ಮಾರುತಿಂ ನಮತ ರಾಕ್ಷಸಾಂತಕಂ || (ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)