| ವಿನಯ್ ಎಂ.ಕೆ. ಬೆಂಗಳೂರು
ದೇವಾಲಯಗಳಲ್ಲಿ ಪೂಜೆ ನಡೆಯುವಾಗ ಭಕ್ತಿಗೀತೆ, ದೇವರ ನಾಮ ಹಾಡಿ ದೇವರನ್ನು ಸ್ತುತಿಸುವ ಪದ್ಧತಿ ಇಂದು ನಿನ್ನೆಯದಲ್ಲ. ಈ ಕೆಲಸಕ್ಕೆ ಪುರುಷರೇ ಬೇಕು ಎಂಬ ನಿಯಮಕ್ಕೆ ಬ್ರೇಕ್ ಹಾಕಿದ್ದು ತಮಿಳುನಾಡಿದ ಒಂದು ದೇವಾಲಯ. ಈ ಪದ್ಧತಿ ಕರ್ನಾಟಕದಲ್ಲಿ ಇಲ್ಲದಿದ್ದರೂ ತಮಿಳುನಾಡು ಇದಕ್ಕೆ ಅಪವಾದ ಎನಿಸಿದೆ. ಸಹುಂಜನಾ ಎಂಬ ಬ್ರಾಹ್ಮಣೇತರ ಮಹಿಳೆ ಮುಜರಾಯಿ ದೇಗುಲದಲ್ಲಿ ದೇವರನಾಮ ಹಾಡುವ (ತಮಿಳಿನಲ್ಲಿ ಓದುವರ್ ಎಂಬ ಹೆಸರು ಹೊಂದಿರುವ ಹುದ್ದೆ) ಕೆಲಸಕ್ಕೆ ನೇಮಕಗೊಂಡಿದ್ದಾರೆ. ಓದುವರ್ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಎಸ್. ಅಂಗ್ಯಾರಕನ್ನಿ ಅವರಿಗೆ ಸಲ್ಲುತ್ತದೆ. ಆದರೆ ಆಗ ಹುದ್ದೆ ಖಾಯಂ ಇಲ್ಲ ಎನ್ನುವ ಕಾರಣಕ್ಕೆ ಕೆಲಸವನ್ನು ತ್ಯಜಿಸಿದ್ದ ಅಂಗ್ಯಾರಕನ್ನಿ ಈಗ ಸಹುಂಜನಾ ಅವರ ನೇಮಕದ ನಂತರ ತನಗೂ ಅದೇ ಹುದ್ದೆ ನೀಡುವಂತೆ ಸರ್ಕಾರದ ಮೊರೆ ಹೋಗಿದ್ದಾರೆ.
ಕಲಿತಿದ್ದನ್ನು ಹಲವರಿಗೆ ಕಲಿಸುತ್ತಿದ್ದಾರೆ: ಕರೂರು ಸ್ವಾಮಿನಾಥನ್ ಎಂಬುವರ ಬಳಿ ತೇವರಂ ಮತ್ತು ತಿರುವಸಗಂ ಅಭ್ಯಾಸ ಮಾಡಿರುವ ಸುಹಂಜನಾ ತಾವು ಕಲಿತ ವಿದ್ಯೆಯನ್ನು ಇತರರಿಗೂ ದಾರೆ ಎರೆಯುತ್ತಿದ್ದಾರೆ. ಕರೂರಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯೆ ದಾನ ಮಾಡಿದ್ದಾರೆ. ಹೊಟ್ಟೆಪಾಡಿಗಾಗಿ ಚೆನ್ನೈಗೆ ವಲಸೆ ಬಂದ ನಂತರ ಓದುವರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಈಗ ದೇವರ ಸೇವೆಗೆ ಅವಕಾಶ ದೊರೆತಂತಾಗಿದೆ.
ಬಾಲ್ಯದಲ್ಲೇ ಬಂದ ಕಲೆ: ಹತ್ತು ವರ್ಷವಿರುವಾಗಲೇ ಮನೆಯಲ್ಲೇ ಪಠಣ, ದೇವರನಾಮ, ಭಕ್ತಿಗೀತೆ ಹಾಡುತ್ತಾ ಬಂದಿರುವ ಸುಹಂಜನಾ ಈಗ ಅದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಹಲವು ದೇವಾಲಯಗಳಲ್ಲಿ ಹಾಡಿ ಅಭ್ಯಾಸವಿದ್ದ ಇವರಿಗೆ ಈಗ ಓದುವರ್ ಆಗಿ ದೇವರ ಸೇವೆ ಸಲ್ಲಿಸುವ ಅವಕಾಶ ಒದಗಿಬಂದಿದೆ. ಬಾಲ್ಯದಲ್ಲಿ ತಂದೆ-ತಾಯಿಯ ಆಶೀರ್ವಾದದಿಂದ ಮುಂದೆ ಬಂದಿರುವ ಇವರಿಗೆ ಈಗ ಪತಿ, ಅತ್ತೆ-ಮಾವ ಸಾಥ್ ನೀಡುತ್ತಿದ್ದಾರೆ. ಸುಹಂಜನಾ ಅವರ ಕಲೆಯನ್ನು ಪ್ರೋತ್ಸಾಹಿಸಿ ಮುನ್ನಡೆಸುತ್ತಿದ್ದಾರೆ.
ಹಾಡುವುದೇ ಕಾಯಕ: ರಾಷ್ಟ್ರಾದ್ಯಂತ ಸ್ವಾತಂತ್ರ್ಯ ಅಮೃತಮಹೋತ್ಸವ ಸಂಭ್ರಮ ಮನೆ ಮಾಡಿದ್ದ ಸಂದರ್ಭ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಎಂ.ಕೆ. ಸ್ಟಾಲಿನ್ ಸುಹಂಜಾನಾ ಅವರನ್ನು ಚೆನ್ನೈನ ಹೊರವಲಯದ ಮಾದಂಬಕ್ಕಂನಲ್ಲಿರುವ ಧೇನುಪೂರೀಶ್ವರರ್ ದೇಗುಲದ ಓದುವರ್ ಆಗಿ ನೇಮಿಸಿದ್ದರು. ಒಂದೂವರೆ ವರ್ಷದ ಮಗುವಿನ ತಾಯಿ ಆಗಿರುವ ಸುಹಂಜನಾ (28) ತಮಗೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ. ಪೂಜೆಯ ವೇಳೆ ಸ್ತೋತ್ರ, ಭಕ್ತಿಗೀತೆ, ದೇವರನಾಮಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.