ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡುವ 18 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಈ ಬಾರಿ ದೇಶದ 49 ಮಂದಿ ಆಯ್ಕೆಯಾಗಿದ್ದು, ಈ ಪೈಕಿ ಮೂವರು ಕರ್ನಾಟಕದ ಪ್ರತಿಭೆಗಳು. ಇವರು ಹೇಗೆ ಸಾಧನೆ ಮಾಡಿದರು? ರಾಷ್ಟ್ರಪತಿ, ಪ್ರಧಾನಿಯನ್ನು ಭೇಟಿಯಾದ ಅವರ ಅನುಭವ ಹೇಗಿದೆ? ಮಕ್ಕಳ ಮಾತಲ್ಲೇ ಕೇಳಿ...
ನನ್ನಮ್ಮ ಹೇಳುತ್ತಿದ್ದರು. ನಾನಾಗ ಮಾಂಟೆಸ್ಸರಿಯಲ್ಲಿ ಇದ್ದೆ. ನನಗೆ ಆನೆಯ ಬಗ್ಗೆ ಬರೆಯಲು ಕೊಟ್ಟ ಟೀಚರ್ ಏನೂ ಹೇಳಿಕೊಡಬಾರದು ಎಂದು ನನ್ನಮ್ಮನಿಗೆ ಹೇಳಿದ್ದರಂತೆ. ಆಗ ನಾನು ಬರೆಯುವಾಗ Elephant is having pair of tusks (ಆನೆಗೆ ಒಂದು ಜೊತೆ ದಂತಗಳು ಇವೆ) ಎಂದು ಬರೆದಿದ್ದೆನಂತೆ. ಆಗ ನನ್ನ ಅಮ್ಮನಿಗೆ ನಾನು ‘ಪೇರ್’ ಎಂದು ಬರೆದದ್ದು ನೋಡಿ ಆಶ್ಚರ್ಯವಾಯಿತಂತೆ, ತಾನಾಗಿದ್ದರೆ ಬಹುಶಃ ‘ಟೂ ಟಕ್ಸ್’ ಎಂದು ಹೇಳುತ್ತಿದ್ದೆ ಎಂದುಕೊಂಡರಂತೆ. ನನ್ನಲ್ಲಿ ಏನೋ ವಿಶೇಷ ಗುಣವಿದೆ ಎಂದು ಅವರು ಗಮನಿಸಿದರಂತೆ. ಆಗಲೇ ನನ್ನನ್ನು ಲೈಬ್ರರಿಯೊಂದಕ್ಕೆ ಮೆಂಬರ್ ಮಾಡಿದ್ದರು. ಅಲ್ಲಿಂದ ಓದುವ ಹವ್ಯಾಸ ಶುರುವಾಯಿತು. ದಿನಗಳೆದಂತೆ ಪುಸ್ತಕದ ಮೇಲಿನ ಪ್ರೀತಿ ಹೆಚ್ಚಿತು. ವಿಭಿನ್ನ ವಿಷಯಗಳ ಪರಿಚಯವೂ ಆಗಿ, ಬರೆಯುವ ಆಸಕ್ತಿಯೂ ಉಂಟಾಯಿತು. ಅದೇ ಕಾರಣಕ್ಕೆ ಪ್ರೖೆಮರಿಯಲ್ಲಿ ಇರುವಾಗಲೇ ಬೇರೆ ಬೇರೆ ಪತ್ರಿಕೆ ಮತ್ತು ಮ್ಯಾಗಝೀನ್ಗಳಿಗೆ ಬರೆಯಲು ಶುರು ಮಾಡಿದೆ. ವಿಜ್ಞಾನ ಹಾಗೂ ಪರಿಸರ ವಿಷಯಗಳ ಕಡೆಗೆ ನನ್ನ ಮನಸ್ಸು ಕೇಂದ್ರೀಕೃತವಾಗಿತ್ತು. ಈ ವಿಷಯಗಳಲ್ಲಿ ಇಲ್ಲಿಯವರೆಗೆ 40ಕ್ಕೂ ಅಧಿಕ ಲೇಖನಗಳು ಬೇರೆ ಬೇರೆ ಪತ್ರಿಕೆ ಮತ್ತು ಮ್ಯಾಗಜೀನ್ಗಳಲ್ಲಿ ಪ್ರಕಟಗೊಂಡಿವೆ. ಕಳೆದ ವರ್ಷ ರಾಜ್ಕೋಟ್ನಲ್ಲಿ ನಡೆದ ಐಎನ್ಎಸ್ಇಎಫ್ ರಾಷ್ಟ್ರೀಯ ಟೆಕ್ ಮೇಳದಲ್ಲಿ ಭಾಗವಹಿಸಿದ್ದೆ. ಅಲ್ಲಿ ಪ್ರಶಸ್ತಿ ಗಳಿಸಿದೆ. ಪ್ರಧಾನಮಂತ್ರಿ ಪುರಸ್ಕಾರದ ಬಗ್ಗೆ ಪರಿಚಯದವರೊಬ್ಬರು ತಿಳಿಸಿದರು. ಆನ್ಲೈನ್ ಮೂಲಕ ಅಪ್ಲಿಕೇಷನ್ ಹಾಕುವುದನ್ನು ಸರ್ಕಾರ ತುಂಬಾ ಈಜಿ ಮಾಡಿರುವ ಕಾರಣ, ನಾನೂ ಅಪ್ಲೈ ಮಾಡಿದೆ. ಆದರೆ ಸಾವಿರಾರು ಮಕ್ಕಳು ಅದರಲ್ಲಿ ಭಾಗವಹಿಸಿದ ಕಾರಣ, ನನಗೆ ಪ್ರಶಸ್ತಿ ಬರುತ್ತದೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ನಾನು ಈ ಮಟ್ಟದಲ್ಲಿ ಬೆಳೆಯಲು ಶಾಲೆಯ ಶಿಕ್ಷಕರ ಪರಿಶ್ರಮವೂ ಸಾಕಷ್ಟಿದೆ.
ಪ್ರಗುನ್ ಪುದುಕೋಳಿ (ಕಲೆ ಮತ್ತು ಸಾಹಿತ್ಯ) 9ನೇ ತರಗತಿ, ಶಿಶುಗೃಹ ಮಾಂಟೆಸ್ಸರಿ ಮತ್ತು ಹೈಸ್ಕೂಲ್, ಬೆಂಗಳೂರು
ಎಷ್ಟು ಸಿಂಪಲ್ ಸ್ಮೃತಿ ಮೇಡಂ: ‘ಪ್ರತಿಭಾ ಪುರಸ್ಕಾರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಚಿವೆ ಸ್ಮೃತಿ ಇರಾನಿ ಮೇಡಂ ಪ್ರತಿ ಮಕ್ಕಳನ್ನೂ ಮನೆ ಮಕ್ಕಳಂತೆಯೇ ನೋಡಿಕೊಂಡರು. ನಾವೆಲ್ಲಾ ಸೆಲ್ಪಿಗೆ ಬರುವಂತೆ, ಆಟೋಗ್ರಾಫ್ ಕೊಡುವಂತೆ ಅವರನ್ನು ತುಂಬಾ ಪೀಡಿಸಿದೆವು. ಅವರು ಸ್ವಲ್ಪವೂ ಬೇಸರ ಮಾಡಿಕೊಳ್ಳದೇ ನಗುಮುಖದಿಂದ ನಮ್ಮ ಮಾತನ್ನು ಕೇಳಿದರು’ ಎಂದು ಸುನೀತಾ ಪ್ರಭು ಕೊಂಡಾಡಿದರೆ, ‘ಸ್ಮೃತಿ ಮೇಡಂ ನಡೆದುಕೊಂಡ ರೀತಿ ನೋಡಿ ನಮ್ಮಂಥ ಸಾಮಾನ್ಯ ಜನರನ್ನೂ ಕೇಂದ್ರ ಸಚಿವರೊಬ್ಬರು ಇಷ್ಟೊಂದು ಫ್ರೆಂಡ್ಲಿ ಆಗಿ ನೋಡಿಕೊಳ್ಳುತ್ತಾರೆಯೇ ಎಂದು ಅಚ್ಚರಿಯಾಯಿತು’ ಎನ್ನುತ್ತಾರೆ ಪ್ರಗುನ್ ತಂದೆ. ‘ಮಕ್ಕಳು ಪ್ರಶಸ್ತಿ ಸ್ವೀಕರಿಸುವಾಗ ಆತ್ಮೀಯತೆಯಿಂದ ಅವರನ್ನು ಹುರಿದುಂಬಿಸಿದರು, ಪ್ರತಿಯೊಬ್ಬರನ್ನು ಕರೆದು ಪ್ರೋತ್ಸಾಹಿಸಿದ್ದು ಕಂಡು ತುಂಬಾ ಅಚ್ಚರಿ ಹಾಗೂ ಖುಷಿಯಾಯಿತು’ ಎಂದರು.