ಒಂದು ದಟ್ಟವಾದ ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ವಾಸಿಸುತ್ತಿದ್ದವು. ಒಂದು ದಿನ ನರಿಯ ಜತೆ ಎಲ್ಲಾ ಪ್ರಾಣಿಗಳು ಸೇರಿಕೊಂಡು ಹುಲಿಯ ಕೊಳದಲ್ಲಿ ನೀರು ಕುಡಿಯಲು ಬಂದವು. ಅದನ್ನು ಕೇಳಿಸಿಕೊಂಡ ಹುಲಿ, ‘ಯಾರದು ನನ್ನ ಕೊಳದಲ್ಲಿ ನೀರು ಕುಡಿಯುತ್ತಿರುವುದು? ನಿಮ್ಮನ್ನೆಲ್ಲ ತಿಂದು ಬಿಡುವೆ’ ಎಂದು ತನ್ನ ಗುಹೆಯಿಂದ ಹೊರ ಬಂದು ಹೇಳಿತು. ಆಗ ನರಿ, ‘ಅಯ್ಯೋ! ಬೇಡ ಬೇಡ’ ಎಂದು ಹೇಳಿತು. ಆಗ ಹುಲಿ, ‘ಹಾಗಾದರೆ ದಿನಕ್ಕೆ ಒಬ್ಬೊಬ್ಬರಂತೆ ಆಹಾರವಾಗಿ ನನ್ನ ಗುಹೆಗೆ ಕಳುಹಿಸು’ ಎಂದಿತು. ನರಿ,‘ಆಯಿತು, ಕಳುಹಿಸುವೆ’ ಎಂದು ಹೇಳಿ ಹೊರಟಿತು.
ಸ್ವಲ್ಪ ದೂರ ಬಂದ ನಂತರ, ನರಿ ಎಲ್ಲಾ ಪ್ರಾಣಿಗಳಿಗೂ ಹುಲಿ ಹೇಳಿದ್ದನ್ನು ಹೇಳಿ, ‘ಈಗ ಯಾರು ಹುಲಿ ಗುಹೆಗೆ ಹೋಗುವಿರಿ ಹೇಳಿ’ ಎಂದಿತು. ಆಗ ಎಲ್ಲ ಪ್ರಾಣಿಗಳು, ನಾನು ಹೋಗುವೆ, ನಾನು ಹೋಗುವೆ ಎಂದವು. ಇದನ್ನು ಕಂಡ ನರಿ, ಹುಲಿ ಗುಹೆಗೆ ಎಲ್ಲರೂ ಹೋಗೋಣ ಎಂದು ಎಲ್ಲರನ್ನೂ ಕರೆದುಕೊಂಡು ಬಂದಿತು. ಹುಲಿ ಗುಹೆಯಿಂದ ಹೊರಬರುತ್ತಿದ್ದಂತೆ, ‘ನಾವ್ಯಾರೂ ಒಬ್ಬರನ್ನು ಬಿಟ್ಟು ಒಬ್ಬರು ಬಾಳಲಾರೆವು. ಹಾಗಾಗಿ ನನ್ನನ್ನೇ ಮೊದಲು ತಿನ್ನು, ನನ್ನನ್ನೇ ಮೊದಲು ತಿನ್ನು’ ಎಂದು ಎಲ್ಲ ಪ್ರಾಣಿಗಳು ಒಟ್ಟಿಗೆ ಹೇಳಿದವು. ಆಗ ಈ ಪ್ರಾಣಿಗಳ ಒಗ್ಗಟ್ಟು, ಗೆಳೆತನ ನೋಡಿದ ಹುಲಿ, ‘ನಿಮ್ಮಲ್ಲಿ ಯಾರನ್ನೂ ನಾನು ತಿನ್ನುವುದಿಲ್ಲ’ ಎಂದು ಹೇಳಿ ಗುಹೆಯೊಳಗೆ ಹೊರಟು ಹೋಯಿತು.
| ನಯನ ಎ. ಗೌಡ 7ನೇ ತರಗತಿ, ಎಂಟಿಬಿ ಜೆಜೆವಿ ಶಾಲೆ, ಬೆಂಗಳೂರು