ಪೌತಿ ಖಾತೆ ಬದಲಾವಣೆಗೆ ಇದ್ದ ನಿಯಮ ಸಡಿಲಗೊಳಿಸಿ ಆಂದೋಲನ ರೂಪದಲ್ಲಿ ಖಾತೆ ಬದಲಾವಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಖಾತೆ ಬದಲಾವಣೆಗಾಗಿ 2.71 ಲಕ್ಷಕ್ಕೂ ಅಧಿಕ ಪ್ರಕರಣಗಳು ಕಾಯುತ್ತಿವೆ. ಭೂಮಿ ತಂತ್ರಾಂಶ, ಪರಿಹಾರ ತಂತ್ರಾಂಶದಲ್ಲಿ ತಂತ್ರಾಂಶದಲ್ಲಿ ದಾಖಲಾಗದೇ ಇರುವ ಪ್ರಕರಣಗಳೂ ಬಹಳಷ್ಟಿದ್ದು, ಈ ಸಮಸ್ಯೆಗೆ ಒಂದೇ ಹಂತದಲ್ಲಿ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ. ಮರಣ ಹೊಂದಿದ ಖಾತೆದಾರರ ವಿವರ ಪತ್ತೆ ಹಚ್ಚಿ ದಾಖಲಿಸಲು ಗ್ರಾಮ ಲೆಕ್ಕಿಗರಿಗೆ ಹೊಣೆ ನೀಡಲಾಗಿದೆ.
| ರವಿ ಬಿದನೂರು ಹೊಸನಗರ
ಮರಣ ಹೊಂದಿದ ನಂತರ ಜಮೀನಿನ ಖಾತೆ ಬದಲಾವಣೆಗೆ ಸಾಕಷ್ಟು ಸಮಯದಿಂದ ಕಾಯುತ್ತಿರುವ ಕುಟುಂಬಗಳಿಗೆ ಇದು ಶುಭ ಸುದ್ದಿ. ರಾಜ್ಯ ಸರ್ಕಾರ ಪೌತಿ ಖಾತೆ ಬದಲಾವಣೆಗೆ ಇದ್ದ ನಿಯಮ ಸಡಿಲಗೊಳಿಸಿ ಆಂದೋಲನ ರೂಪದಲ್ಲಿ ಖಾತೆ ಬದಲಾವಣೆಗೆ ನಿರ್ಧರಿಸಿದೆ.
ಭೂಮಿ ತಂತ್ರಾಂಶ, ಪರಿಹಾರ ತಂತ್ರಾಂಶದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಖಾತೆ ಬದಲಾವಣೆ ಆಗಬೇಕಾದ 2.71 ಲಕ್ಷಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. ತಂತ್ರಾಂಶದಲ್ಲಿ ದಾಖಲಾಗದ ಪ್ರಕರಣಗಳು ಸಾಕಷ್ಟಿದ್ದು ಒಂದೇ ಹಂತದಲ್ಲಿ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ.
ಅಭಿವೃದ್ಧಿಗೆ ಹಿನ್ನಡೆ: ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸಾ ರೀತ್ಯಾ ಮಾಲೀಕತ್ವ ಮೃತರ ಉತ್ತರಾಧಿಕಾರಿ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ ಅಂಥ ಜಮೀನುಗಳ ಸ್ವಾಧೀನ ಹೊಂದಿದ್ದರೂ ಉಪಯೋಗವಿಲ್ಲದಂತಾಗಿದೆ. ಜಮೀನು ಅಭಿವೃದ್ಧಿ, ಬ್ಯಾಂಕ್ಗಳಿಂದ ಸಾಲ ಪಡೆಯಲು, ಪ್ರಕೃತಿ ವಿಕೋಪದಂಥ ಅವಘಡ ಸಂಭವಿಸಿದಾಗ ವಿಮೆ, ಪರಿಹಾರ ಪಡೆಯಲು ಕೂಡ ಸಾಧ್ಯವಿಲ್ಲ. ಅಲ್ಲದೆ ಖಾತೆ ಬದಲಾವಣೆಗೆ ರೈತರು ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದು, ಇದು ಕೃಷಿ ಅಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರಿದೆ
ಬದಲಾವಣೆ ಹೇಗೆ?: ಸರ್ಕಾರ ಸೂಚಿಸಿರುವ ಮೂಲಗಳಿಂದ ಮರಣ ಹೊಂದಿದ ವಿವರ ಪಡೆಯುವುದು. ಮರಣ ಪ್ರಮಾಣಪತ್ರ ಮತ್ತು ವಂಶವೃಕ್ಷ ಪಡೆದು ಭೂಮಿ ತಂತ್ರಾಂಶ ಪೌತಿ ಖಾತೆಗಾಗಿ ನಮೊನೆ-1ರಲ್ಲಿ ದಾಖಲಿಸುವುದು. ಒಂದು ವೇಳೆ ವಂಶವೃಕ್ಷ ಲಭ್ಯವಿರದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿ ಮಾಡಿ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ದಾಖಲಿಸುವುದು.
ವ್ಯಕ್ತಿ ಮರಣ ಹೊಂದಿ ವರ್ಷ ಮೀರಿದ್ದು ಮರಣ ನೋಂದಣಿಯಾಗದಿದ್ದಲ್ಲಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಮರಣದ ಕುರಿತ ಆದೇಶ ಪಡೆದು ತಹಸೀಲ್ದಾರ್ ಕಚೇರಿಯಲ್ಲಿ ಮರಣ ಪತ್ರವನ್ನು ಪಡೆಯುವುದು. ಅಥವಾ ಆಧಾರ್, ಪಡಿತರ ಚೀಟಿ ದಾಖಲೆ ಪರಿಶೀಲಿಸಿಕೊಂಡು ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಸ್ಥಳ ಪರಿಶೀಲನೆ ಮಹಜರ್ ಮಾಡಿ ಮರಣ ಹೊಂದಿದ ಬಗ್ಗೆ ಸಂಬಂಧಪಟ್ಟ ವಾರಾಸುದಾರರಿಂದ ಅಫಿಡವಿಟ್ ಪಡೆದು ಅವರ ಆಧಾರ್, ಪಡಿತರ ಚೀಟಿ ಲಿಂಕ್ವೆುೕಲೆ ಅರ್ಜಿ ದಾಖಲಿಸಬಹುದು.
ಮ್ಯುಟೇಶನ್ ಶುಲ್ಕದಲ್ಲಿ ರಿಯಾಯಿತಿ
ಪೌತಿ ಖಾತೆ ಬದಲಾವಣೆ ಸಂಬಂಧಪಟ್ಟಂತೆ ಮನವಿಗಳ ಮ್ಯುಟೇಶನ್ ಶುಲ್ಕದಲ್ಲಿ ರಾಜ್ಯ ಸರ್ಕಾರ ರಿಯಾಯಿತಿ ನೀಡಿದೆ. ಸ್ವೀಕರಿಸಿದ ಮನವಿಗಳ ಕುರಿತು ಹಕ್ಕು ಬದಲಾವಣೆ ಪ್ರಕರಣದಲ್ಲಿ ನಮೊನೆ-12 ಮತ್ತು ನಮೊನೆ-21ನ್ನು ಹೊರಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಮ್ಯುಟೇಶನ್ ವಿಲೇವಾರಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದ್ದು, ಆಸಕ್ತರು ತಕರಾರನ್ನು ಸಲ್ಲಿಸಬಹುದು.
ತಕರಾರು ವಿಲೇವಾರಿಗೆ ತಿಂಗಳ ಗಡುವು
ಸ್ವೀಕಾರವಾಗುವ ಅರ್ಜಿಗಳಿಗೆ ತಕರಾರು ಇದ್ದಲ್ಲಿ ಕಸಬಾ ಹೋಬಳಿಗಳಿಗೆ ಗ್ರೇಡ್ 1 ತಹಶೀಲ್ದಾರ್, ಇತರ ಹೋಬಳಿಗಳಿಗೆ ಗ್ರೇಡ್ 2 ತಹಶೀಲ್ದಾರ್ಗಳಿಗೆ ಹೊಣೆ ನೀಡಲಾಗಿದ್ದು, ಆಯಾಯ ಹೋಬಳಿಯಲ್ಲಿ ಒಂದು ತಿಂಗಳೊಳಗೆ ಕ್ಯಾಂಪ್ ಮಾಡಿ ವಿಲೇವಾರಿ ಮಾಡಲು ಸೂಚಿಸಲಾಗಿದೆ.
ಮರಣ ಹೊಂದಿದ ನಂತರ ನನೆಗುದಿಗೆ ಬಿದ್ದಿರುವ ಪೌತಿ/ವಾರಸಾ ಖಾತೆ ಮಾಡಿಕೊಳ್ಳಲು ಸರ್ಕಾರ ಆಂದೋಲನದ ರೀತಿ ಮುಂದಾಗಿರುವುದು ಸ್ವಾಗತಾರ್ಹ. ಕಂದಾಯ ಸಿಬ್ಬಂದಿಗಳ ಜವಾಬ್ದಾರಿ ಇದರಲ್ಲಿ ಹೆಚ್ಚಿದೆ. ಯಶಸ್ವಿಯಾಗಿ ಅನುಷ್ಠಾನಗೊಂಡಲ್ಲಿ ಖಾತೆ ಬದಲಾವಣೆಗೆ ಕಚೇರಿ ಅಲೆದಾಟ ಕೈತಪ್ಪಲಿದೆ. | ವಾಟಗೋಡು ಸುರೇಶ್ ಸಾಮಾಜಿಕ ಹೋರಾಟಗಾರ ಈಗಾಗಲೆ ಪೌತಿ/ವಾರಸಾ ಖಾತೆ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ಗಳಿಗೆ ಮತ್ತು ಕಂದಾಯ ಸಿಬ್ಬಂದಿಗೆ ತ್ವರಿತವಾಗಿ ಕಾರ್ಯಕ್ರಮ ರೂಪಿಸಲು ಸೂಚಿಸಲಾಗಿದೆ. | ಕೆ.ಬಿ. ಶಿವಕುಮಾರ್ ಶಿವಮೊಗ್ಗ ಜಿಲ್ಲಾಧಿಕಾರಿ
ಗ್ರಾಮ ಲೆಕ್ಕಿಗರಿಗೆ ಹೊಣೆ
ಮರಣ ಹೊಂದಿದ ಖಾತೆದಾರರ ವಿವರ ಪತ್ತೆ ಹಚ್ಚಿ ದಾಖಲಿಸಲು ಗ್ರಾಮ ಲೆಕ್ಕಿಗರಿಗೆ ಹೊಣೆ ನೀಡಲಾಗಿದೆ. ಮರಣ ಹೊಂದಿದ ರಿಜಿಸ್ಟರ್, ಪರಿಹಾರ ತಂತ್ರಾಂಶದ ದಾಖಲೆ, ಮನೆ ಮನೆ ಸಂದರ್ಶನ ಹೀಗೆ ಮೂರು ಹಂತದಲ್ಲಿ ಮರಣ ಹೊಂದಿದ ಖಾತೆದಾರರನ್ನು ವಿವರ ಸಂಗ್ರಹಿಸಲು ಸೂಚಿಸಲಾಗಿದೆ.
ನಾಡಕಚೇರಿಯಲ್ಲಿ ಅರ್ಜಿ ಲಭ್ಯ
ಪೌತಿ/ವಾರಸಾ ಖಾತೆ ಮಾಡಿಕೊಳ್ಳಲು ನಮೊನೆ-1 ಅರ್ಜಿ ರಾಜ್ಯದ ಎಲ್ಲಾ ನಾಡಕಚೇರಿಗಳಲ್ಲೂ ಲಭ್ಯವಿದೆ. ಆಂದೋಲನದ ಬಗ್ಗೆ ಅವಲೋಕಿಸಲು ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಕಾಲಕಾಲಕ್ಕೆ ಆಂದೋಲನದ ಯಶಸ್ಸಿನ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ.