ಅಂಕಣ

ಹೆರಿಗೆ ನಂತರದ ಮಾನಸಿಕ ಒತ್ತಡ, ಖಿನ್ನತೆಗೆ ಇಲ್ಲಿದೆ ಪರಿಹಾರ...

ಮಕ್ಕಳ ಮದುವೆ, ನಂತರ ಮೊಮ್ಮಕ್ಕಳು. ಮಗನಿಗೆ ಒಳ್ಳೆಯ ಉದ್ಯೋಗ, ಕೈತುಂಬಾ ಸಂಬಳ, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಮಗ ಸೊಸೆ. ಇವು ನಮ್ಮ ಸಮಾಜದಲ್ಲಿ ಪ್ರಚಲಿತದಲ್ಲಿರುವ ಸುಖೀ ಸಂಸಾರದ ಸಿದ್ಧ ಸೂತ್ರಗಳ ಪಟ್ಟಿ. ಆದರೆ ಈ ಸುಖದ ಪರಿಮಿತಿ ಇಷ್ಟಕ್ಕೆ ಮುಗಿಯಲಿಲ್ಲ. ಮಗನ ಮದುವೆ, ನಂತರ ಸಂಸಾರ ಆರಂಭಗೊಂಡು ಮೊಮ್ಮಗನೋ ಮೊಮ್ಮಗಳೋ ಮನೆಗೆ ಬಂದಾಗ ಕೆಲವೊಮ್ಮೆ ಅನಿರೀಕ್ಷಿತ ಆತಂಕ ಸೊಸೆ ಅಥವಾ ಮಗಳಿಂದ ಎದುರಾಗುತ್ತದೆ. ಇದು ಹೆರಿಗೆ ನಂತರ ಬಾಣಂತಿ ಎದುರಿಸುವ ಸಹಜ ಸಮಸ್ಯೆ.

ಹೌದು, ಹೆರಿಗೆ ನಂತರದ ಖಿನ್ನತೆ ಸಮಸ್ಯೆಯಾಗಬಹುದು. ಇದಕ್ಕೆ ಉದಾ ಹರಣೆಯೊಂದು ಇಲ್ಲಿದೆ. ವಿಜಯಪುರ ಜಿಲ್ಲೆಯಿಂದ ಹಿರಿಯರೊಬ್ಬರು ಸೊಸೆಯನ್ನು ಮಗುವಿನೊಂದಿಗೆ ಕರೆದುಕೊಂಡು ಬಂದಿದ್ದರು. ಮೂಢನಂಬಿಕೆಗಳಾದ ಗಾಳಿ ಶಕ, ಭೂತ, ದೆವ್ವ ಇಂತಹ ಎಲ್ಲಾ ಇತರ ಚಿಕಿತ್ಸಾ ಪದ್ದತಿಯನ್ನು ಮುಗಿಸಿ ಬಂದಿದ್ದರು. ಆಕೆ 3 ತಿಂಗಳ ಬಾಣಂತಿ. ಆಕೆಗೆ ಮಗುವಿನ ಮೇಲೆ ಅದೇನೋ ಸಿಟ್ಟು, ನೋಡಿದಾಕ್ಷಣ ಕಿರುಚುತ್ತಾಳೆ, ಮಗುವಿಗೆ ಹಾಲುಣಿಸಬೇಕು ಎನ್ನುವ ಕಾಳಜಿಯೇ ಇಲ್ಲ. ಇದ್ದಕ್ಕಿದ್ದಂತೆ ಅಳುತ್ತಾಳೆ. ದಿನವಿಡೀ ಕಿರಿಕಿರಿ ಅನುಭವಿಸುತ್ತಾಳೆ ಎಂದು ಆ ಹಿರಿಯರು ವಿವರಿಸಿದರು. ‘ಆತಂಕ ಬೇಡ. ಇದು ಸಹಜ. ಸಾಮಾನ್ಯವಾಗಿ ಮಹಿಳೆಯರಿಗೆ ಹೆರಿಗೆಯಾದ ನಂತರ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಹಾಮೋನುಗಳ ಬದಲಾವಣೆಯಿಂದ ನರವಾಹಿನಿಗಳ ಏರುಪೇರಿನಿಂದ ಭಾವನೆಗಳು ಬದಲಾಗುತ್ತವೆ. ಇದಕ್ಕೆ ಸರಿಯಾದ ಚಿಕಿತ್ಸೆ ಕೊಡಿಸಿದರೆ ಗುಣಮುಖರಾಗುತ್ತಾರೆ’ ಎಂದಾಗ ಅವರಿಗೆ ಸಮಾಧಾನವಾಯಿತು.

ಹೆರಿಗೆ ನಂತರ ಸಾಮಾನ್ಯವಾಗಿ ಅನೇಕ ಮಹಿಳೆಯರಲ್ಲಿ ಅಲ್ಪ ಸ್ವಲ್ಪ ಒತ್ತಡ, ಭಾವನೆಗಳ ಏರುಪೇರು ಸ್ವಾಭಾವಿಕ. ಇದಕ್ಕೆ ನಾವು ಬಾಣಂತಿ ಬ್ಲೂಸ್ ಎನ್ನುತ್ತೇವೆ. ಇದು ಸಾಮಾನ್ಯವಾಗಿ 2 ವಾರಗಳಲ್ಲಿ ಕಡಿಮೆ ಆಗುತ್ತದೆ. 15 ರಿಂದ 20 ದಿನಗಳ ನಂತರವೂ ಮುಂದುವರಿದರೆ ಅದು ಖಿನ್ನತೆಯ ಲಕ್ಷಣ. ಇದಕ್ಕೆ ಲೋಕಾರೂಢಿಯಲ್ಲಿ ಬಾಣಂತಿ ಸನ್ನಿ ಅಥವಾ ಹೆರಿಗೆ ನಂತರದ ಖಿನ್ನತೆ ಎಂದು ಕರೆಯುತ್ತಾರೆ. ಇದಕ್ಕೆಲ್ಲ ಭಾವನೆಗಳ ಏರುಪೇರೇ ಕಾರಣ. ಮಗುವಿನ ಆರೈಕೆ ಜವಾಬ್ದಾರಿ, ನಿದ್ರೆಯ ಏರುಪೇರಿನಿಂದ ಆ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಈ ವೇಳೆ ಮಗುವಿನ ಹಟ ಆಕೆಗೆ ಕಿರಿಕಿರಿ ಎನಿಸುತ್ತದೆ. ಮಗುವಿನ ಪಾಲನೆ ನನ್ನದಲ್ಲ ಎಂಬ ಭಾವನೆಯೂ ಬರುತ್ತದೆ. ದಾಂಪತ್ಯದಲ್ಲಿ ಸುಮಧುರ ಬಾಂಧವ್ಯದ ಕೊರತೆ ಹಾಗೂ ಹೆರಿಗೆ ನೋವಿನಿಂದಲೂ ಈ ತರಹ ಉದ್ವೇಗ ಮತ್ತು ಅಸಹಜದ ನಡವಳಿಕೆಗಳು ಆಗಬಹುದು. ಗರ್ಭಾವಸ್ಥೆ ಮತ್ತು ಪ್ರಸವ ನಂತರ ಮಹಿಳೆಯರಲ್ಲಿ ಉಂಟಾಗುವ ಹಾಮೋನುಗಳ ಬದಲಾವಣೆ ಇದಕ್ಕೆಲ್ಲ ಮೂಲ.

ಇಂತಹ ಸಮಸ್ಯೆಗಳಿಗೆ ತಜ್ಞಮನೋವೈದ್ಯರ ಚಿಕಿತ್ಸೆ ಹಾಗೂ ಆಪ್ತ ಸಲಹೆ ಬಹುಮುಖ್ಯ. ಖಿನ್ನತೆಯ ನಿವಾರಣಾ ಮಾತ್ರೆಗಳು ಖಂಡಿತವಾಗಿಯೂ ಸಹಾಯಕವಾಗುತ್ತವೆ. ಈ ತರಹದ ವ್ಯಕ್ತಿಗಳ ಆರೈಕೆಯಲ್ಲಿ ಕುಟುಂಬ ಸದಸ್ಯರು ಅದರಲ್ಲೂ ವಿಶೇಷವಾಗಿ ಸದಾ ಅವರ ಹತ್ತಿರ ಇರುವವರ ಪಾತ್ರ ಬಹುಮುಖ್ಯವಾದುದು. ಆಕೆಯ ಅತಿರೇಕಗಳನ್ನು, ಅಸಹಜ ನಡವಳಿಕೆಗಳನ್ನು ಅರ್ಥೈಸಿಕೊಂಡು ಪ್ರೀತಿ, ವಿಶ್ವಾಸದಿಂದ ಮಾತನಾಡಿ ಸ್ಪಂದಿಸುವ ಗುಣವುಳ್ಳವರು ಆಕೆಯ ಜೊತೆಗೆ ಇದ್ದರೆ ಅತ್ಯುತ್ತಮ. ಹಂತಹಂತವಾಗಿ ಬಾಣಂತಿ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಮಗುವಿನ ಜತೆಗೆ ಬಾಂಧವ್ಯ ಬೆಳೆಯಲು ಸಂಪರ್ಕಸೇತುವೆಯಂತೆ ಕೆಲಸ ಮಾಡಬೇಕು. ಬಾಣಂತಿಗೆ ಮಗುವಿನ ಮೇಲೆ ವಿಶ್ವಾಸ, ಪ್ರೀತಿ ಮೂಡುವಂತೆ ಮಾಡಬೇಕು. ಸಾಧ್ಯವಾದರೆ ಒಡನಾಡಿಗಳೊಡನೆ ಮಗುವಿನೊಂದಿಗೆ ಒಂದು ಸಣ್ಣ ತಿರುಗಾಟ ಮಾಡಬಹುದು. ವ್ಯಾಯಾಮ ಮಾಡುವ ಮೂಲಕ ನೈಸರ್ಗಿಕ ಚಿಕಿತ್ಸೆಯನ್ನೂ ಕೊಡಬಹುದು. ಯೋಗದ ಮೂಲಕ ಚಿತ್ತಶಾಂತಿಗೂ ಯತ್ನಿಸಬಹುದು. ಆಹಾರದಲ್ಲೂ ಕೊಂಚ ಬದಲಾವಣೆ ಇರಲಿ. ಸಿಕ್ಕಾಪಟ್ಟೆ ಪೌಷ್ಟಿಕಾಂಶ ಬದಲು ಕೊಬ್ಬಿನಾಮ್ಲವುಳ್ಳ ಆಹಾರ ಬಳಸಿ. ಮನರಂಜನೆಗಾಗಿ ಹಾಸ್ಯಪ್ರಧಾನ ಕಾರ್ಯಕ್ರಮ ವೀಕ್ಷಿಸಿ. ಆ ಮೂಲಕ ನಿಮ್ಮಲ್ಲಿನ ಸುಪ್ತ ಚೈತನ್ಯ ಜಾಗೃತವಾಗುತ್ತದೆ. ಇವಿಷ್ಟು ಅನುಸರಿಸಿದಲ್ಲಿ ಪ್ರಸವೋತ್ತರ ಖಿನ್ನತೆಗೆ ಗುಡ್ ಬೈ ಹೇಳಬಹುದು. ತಾಯಿತನದ ಸಾರ್ಥಕ ಕ್ಷಣಗಳನ್ನು ಅನುಭವಿಸುವ ಸದವಕಾಶ ನಿಮ್ಮದಾಗುತ್ತದೆ.

ಗಮನಿಸಬೇಕಾದ ಮುಖ್ಯ ವಿಷಯ: ಖಿನ್ನತೆ ಸಾಮಾನ್ಯವಾಗಿ ಪುನರಾವರ್ತನೆಯಾಗುವ ಸಮಸ್ಯೆಯಾಗಿರುವದರಿಂದ ವೈದ್ಯರ ಸಂಪರ್ಕದಲ್ಲಿರುವುದು ಸೂಕ್ತ. ಸಂಪೂರ್ಣವಾಗಿ ಚಿಕಿತ್ಸೆ ಬಿಟ್ಟ ನಂತರ ಈ ಪ್ರಮಾಣ ಹೆಚ್ಚಾಗಿ ಪ್ರತಿಶತ 50 ರಿಂದ 80 ಜನರಲ್ಲಿ ಮರುಕಳಿಸಬಹುದು. ಇದನ್ನು ರೋಗಿ ಹಾಗೂ ಸಂಬಂಧಪಟ್ಟವರು ಗಮನಿಸಬೇಕು.