ಕೃಷಿಯಿಂದಲೇ ಚೆಂದದ ಬದುಕು ಸಿಗಲು ಸಾಧ್ಯ ಎಂದು ನಂಬಿದ ವ್ಯಕ್ತಿಯೊಬ್ಬರು, ಅಂಚೆ ಇಲಾಖೆಯ ನೌಕರಿಗೆ ಗುಡ್ಬೈ ಹೇಳಿ ವ್ಯವಸಾಯ ಆರಂಭಿಸಿದ ಕಥೆ ಇದು. ಸೊಪ್ಪು ತರಕಾರಿ ಬೆಳೆಯುತ್ತಲೇ ಲಕ್ಷಗಟ್ಟಲೆ ಗಳಿಸುತ್ತಿರುವ ಇವರು, ಇದರಿಂದಲೇ ಒಂದು ವರ್ಷದಲ್ಲಿ 3 ಕೋಟಿ ರೂ. ಗಳಿಸುವ ಗುರಿ ಇಟ್ಟುಕೊಂಡಿರುವುದು ಸೋಜಿಗವಾದರೂ ಸತ್ಯ.
ಸರ್ಕಾರಿ ನೌಕರಿಗೆ ಹೋಗಬೇಕೆಂಬ ಛಲ. ಇಚ್ಛೆಯಂತೆ ಸಿಕ್ಕ ನೌಕರಿ. ಕಡೆಗೆ ಕೃಷಿಯತ್ತ ಒಲವು. ನೌಕರಿಗೆ ಗುಡ್ಬೈ. ಕೃಷಿ ಮಾಡಲು ಸಂಬಂಧಿಕರಿಂದ ಅಡ್ಡಿ. ಊರು ಬಿಟ್ಟು ಬೇರೆ ಬೇರೆ ಕಡೆ ಜಮೀನುಗಳಲ್ಲಿ ಪ್ರಯೋಗ. ಲಕ್ಷಗಟ್ಟಲೆ ಸಂಪಾದಿಸುವಲ್ಲಿ ಯಶಸ್ವಿ. ಅಲೆದಾಟ ಮುಗಿಸಿ ಸ್ವಂತ ಗ್ರಾಮದಲ್ಲಿ ಕೃಷಿ ಆರಂಭಿಸಿ ಖುಷಿ ಕಾಣುತ್ತಿರುವ ರೈತ!
ಇದು ಸೊಪ್ಪು ತರಕಾರಿ ಬೆಳೆದು ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡಬಹುದು ಎಂಬುದನ್ನು ಸಾಬೀತು ಮಾಡಿರುವ ನಾಗಮಂಗಲ ತಾಲೂಕಿನ ಸಾತೇನಹಳ್ಳಿಯ ನೈಸರ್ಗಿಕ ಕೃಷಿಕ ಕುಮಾರಸ್ವಾಮಿ ಅವರ ಸಾಧನೆಯ ಹಾದಿ. ನಿಜ, ಸೊಪ್ಪು ತರಕಾರಿಯಲ್ಲಿ ತಿಂಗಳಿಗೆ ಲಕ್ಷ ಸಂಪಾದನೆ ಮಾಡಬಹುದು ಎಂದರೆ ನಂಬುವುದು ಕಷ್ಟ. ‘ಆತನಿಗೆ ತಲೆ ಕೆಟ್ಟಿದೆ’ ಎಂದು ಜರಿದವರೇ ಹೆಚ್ಚು. ಕುಮಾರಸ್ವಾಮಿ ಅವರ ಜಮೀನಿಗೆ ಒಮ್ಮೆ ಭೇಟಿ ನೀಡಿದರೆ ಅವರ ಸಾಧನೆಯನ್ನು ಸಾಕ್ಷಿ ಸಮೇತ ಕಣ್ಣಾರೆ ಕಾಣಬಹುದು.
ವಿಭಿನ್ನ ಕೃಷಿ ಮಾಡಬೇಕೆಂಬ ಉದ್ದೇಶದಿಂದ ಫುಕುವೋಕಾ, ಸುಭಾಷ್ಚಂದ್ರ ಪಾಳೇಕರ್, ನಾರಾಯಣರೆಡ್ಡಿ, ದಾಬೋಲ್ಕರ್, ಸುಭಾಷ್ ಶರ್ಮ ಸೇರಿ ಹಲವು ಕೃಷಿ ತಜ್ಞರ 500ಕ್ಕೂ ಹೆಚ್ಚು ಪುಸ್ತಕ ಖರೀದಿಸಿ ಅಧ್ಯಯನ ಮಾಡಿದ್ದಾರೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಸಾಧಕ ಕೃಷಿಕರ ವರದಿಗಳನ್ನು ಸಂಗ್ರಹಿಸಿ ಮನನ ಮಾಡಿಕೊಂಡಿದ್ದಾರೆ. ಸ್ವತಃ ಸಂಶೋಧನೆಗಿಳಿದು ಯಶಸ್ವಿಯಾಗಿದ್ದಾರೆ. ಪ್ರಸ್ತುತ ತಮ್ಮ 5 ಎಕರೆ ಜಮೀನಿನಲ್ಲಿ ಸೊಪ್ಪು ತರಕಾರಿಯಿಂದ ವರ್ಷಕ್ಕೆ 3 ಕೋಟಿ ರೂ. ಸಂಪಾದಿಸುವ ಗುರಿ ಇಟ್ಟುಕೊಂಡಿದ್ದಾರೆ.
ಪೋಸ್ಟ್ಮಾಸ್ಟರ್ ಆಗಿದ್ದು: ಕುಮಾರಸ್ವಾಮಿಯವರ ಇಬ್ಬರು ಅಣ್ಣಂದಿರು ಸರ್ಕಾರಿ ನೌಕರಿ ಸೇರಿದರು. ಇವರು ಕೂಡ ಬಿಎಸ್ಸಿ ಮುಗಿಸಿ, ಎಂಎಸ್ಸಿ ಮಾಡಬೇಕೆಂದಿದ್ದರು. ಆದರೆ, ತಂದೆ ಜಮೀನಿನಲ್ಲಿ ವ್ಯವಸಾಯ ಮಾಡುವಂತೆ ಒತ್ತಾಯಿಸಿದರು. ಅದಕ್ಕೆ ಮಣಿಯದೆ ಮೈಸೂರಿಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಹಣದ ಸಮಸ್ಯೆಯಿಂದ 500 ರೂ. ಕಳಿಸುವಂತೆ ತಂದೆಗೆ ಪತ್ರ ಬರೆದರು. ಆದರೆ, ಹಣ ಬರಲಿಲ್ಲ. ಊರಿಗೆ ಬಂದು ತಂದೆಯನ್ನು ವಿಚಾರಿಸಿದಾಗ ಹಣ ಕಳಿಸಿದ್ದೇನೆ. ಅಂಚೆ ಕಚೇರಿಯಲ್ಲಿ ವಿಚಾರಿಸು ಎಂದರು. ಅಂಚೆ ಕಚೇರಿಗೆ ಹೋದಾಗ ಅಲ್ಲಿ ಜನರ ಗುಂಪು ನಿಂತಿತ್ತು. ಅಲ್ಲಿನ ಕೆಲವು ನೌಕರರು ಹಣ ದುರ್ಬಳಕೆ ಮಾಡಿಕೊಂಡಿದ್ದರು. ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ತಾಲೂಕು ಅಂಚೆ ಕಚೇರಿಯಿಂದ ಬಂದಿದ್ದ ಅಧಿಕಾರಿ ‘ನಿಮ್ಮೂರಿನಲ್ಲಿ ವಿದ್ಯಾವಂತರು ಇದ್ದರೆ ತಿಳಿಸಿ, ಅವರಿಗೆ ಕೆಲಸ ಕೊಡುತ್ತೇವೆ’ ಎನ್ನುತ್ತಿದ್ದರು. ಆಗ ಗ್ರಾಮಸ್ಥರು ‘ಕುಮಾರಸ್ವಾಮಿಗೆ ಕೆಲಸ ಕೊಡಿ’ ಎಂದರು. ಮನೆಗೆ ಹೋಗಿ ತಂದೆಗೆ ವಿಷಯ ತಿಳಿಸಿದ ಕುಮಾರಸ್ವಾಮಿ, ಕೆಲ ದಿನಗಳ ನಂತರ ಪೋಸ್ಟ್ ಮಾಸ್ಟರ್ ಹುದ್ದೆ ವಹಿಸಿಕೊಂಡರು. ಕೆಲ ವರ್ಷಗಳಲ್ಲಿ ಪರೀಕ್ಷೆ ಬರೆದು ಬಡ್ತಿ ಹೊಂದಿ, ಜಿಲ್ಲಾ ಕೇಂದ್ರ ಕಚೇರಿಗೆ ನಿಯುಕ್ತಿಗೊಂಡರು.
ಸಾಲದ ಸುಳಿಗಿಳಿಸಿದ ರಾಸಾಯನಿಕ ಕೃಷಿ: ತಂದೆ, ಚಿಕ್ಕಪ್ಪನ ಅಕಾಲಿಕ ಮರಣದಿಂದಾಗಿ ಜಮೀನಿನ ಜವಾಬ್ದಾರಿ ಕುಮಾರಸ್ವಾಮಿ ಮೇಲೆ ಬಿತ್ತು. ರಾಸಾಯನಿಕ ಕೃಷಿ ಮಾಡಲಾರಂಭಿಸಿದ ಒಂದೆರಡು ವರ್ಷಗಳಲ್ಲಿ 3 ಲಕ್ಷ ರೂ. ಸಾಲ ಮೈಮೇಲೆ ಬಂತು. ಸಾಲ ಕರಗುವ ಬದಲಿಗೆ ದುಪ್ಪಟ್ಟಾಗಿ 13 ಲಕ್ಷವಾಯಿತು. ಸಾಲಗಾರರ ಕಾಟ ಹೆಚ್ಚಾಯಿತು.
ಸಿಗುತ್ತಿದ್ದ ಸಂಬಳದಲ್ಲಿ ಬಡ್ಡಿ ಕಟ್ಟಲಾಗದ ಸ್ಥಿತಿ ನಿರ್ವಣವಾಯಿತು. ಹತಾಶೆಯಿಂದ ರೈತನಾಯಕ ಪುಟ್ಟಣ್ಣಯ್ಯನವರ ಮನೆಗೆ ಹೋಗಿ, ಬ್ಯಾಂಕಿನಲ್ಲಿ 10 ಲಕ್ಷ ಸಾಲ ಕೊಡಿಸುವಂತೆ ಕೋರಿದರು. ಆದರೆ ಪುಟ್ಟಣ್ಣಯ್ಯ 60 ರೂ. ಪಡೆದು ಸುಭಾಷ್ ಪಾಳೇಕರ್ ಪುಸ್ತಕ ಕೊಟ್ಟು, ‘ಕೆಲಸಕ್ಕೆ ರಾಜೀನಾಮೆ ನೀಡಿ ಬೇಸಾಯ ಮಾಡಿ’ ಎಂದರು.
ಊರೂರು ಅಲೆದರು: 2005ರಲ್ಲಿ ಅಂಚೆ ಇಲಾಖೆಗೆ ರಾಜೀನಾಮೆ ನೀಡಿದ ಕುಮಾರಸ್ವಾಮಿಗೆ ವ್ಯವಸಾಯ ಮಾಡಲು ಅವರ ಸಂಬಂಧಿಕರು ಬಿಡಲಿಲ್ಲ. ಗಲಾಟೆಗಳಾದವು. ಹೇಗಾದರೂ ಮಾಡಿ ಕೆಲಸಕ್ಕೆ ಕಳಿಸಬೇಕೆಂದು ನಿರ್ಧರಿಸಿದರು. ಜಮೀನು ಮಾರಲು ಮುಂದಾದರು. ಕುಮಾರಸ್ವಾಮಿ ಕೆಲಸ ಬಿಟ್ಟಿದ್ದರಿಂದ ಸಾಲಗಾರರು ಮನೆ ಬಳಿ ಬರಲು ಆರಂಭಿಸಿದರು. ಚೆಕ್ ಪಡೆದಿದ್ದವರು ಕೇಸು ಹಾಕಿದ ಪರಿಣಾಮ ಪೊಲೀಸರು ಮನೆ ಬಳಿ ಬಂದರು. ಅನ್ಯ ದಾರಿ ಕಾಣದೆ ಕುಮಾರಸ್ವಾಮಿ ಊರು ಬಿಟ್ಟರು. ಪತ್ನಿ ಮಾತ್ರ ಊರಿನಲ್ಲೇ ಉಳಿದರು. ಜಮೀನಿನಲ್ಲಿ ಬೀಳುವ ತೆಂಗಿನಕಾಯಿಗಳನ್ನು ಮಾರಿ ಪತಿಗೆ ಹಣ ತಲುಪಿಸುತ್ತಿದ್ದರು. ಉಚಿತವಾಗಿ ಊಟ ಸಿಗುವ ಧರ್ಮಸ್ಥಳ ಮೊದಲಾದ ದೇವಾಲಯಗಳಲ್ಲಿ ತಂಗುತ್ತಿದ್ದ ಕುಮಾರಸ್ವಾಮಿ, ಪತ್ನಿ ಕೊಟ್ಟ ಹಣದಲ್ಲಿ ಕೃಷಿ ತಜ್ಞರ ಪುಸ್ತಕ ಖರೀದಿಸಿ ಓದಿದರು. 2 ವರ್ಷ ಅಲೆದಾಡಿದ ನಂತರ ಕನಕಪುರ ತಾಲೂಕಿನ ನಲ್ಲಹಳ್ಳಿಗೆ ತೆರಳಿ ಅಲ್ಲಿ ಪುಟ್ಟ ಮನೆ ಮಾಡಿ ಪತ್ನಿ-ಮಕ್ಕಳನ್ನು ಕರೆಸಿಕೊಂಡರು. 2 ಎಕರೆ ಜಮೀನು ಗುತ್ತಿಗೆಗೆ ಪಡೆದು ಕೃಷಿ ಆರಂಭಿಸಿದರು. ಬಾಳೆ, ಜೋಳ ಬೆಳೆದು ಯಶಸ್ವಿಯಾದರು. ಜಮೀನಿನ ಮಾಲೀಕ 2 ವರ್ಷದಲ್ಲಿ ಜಮೀನು ಬಿಡಿಸಿಕೊಂಡರು. ನಂತರ ತಿಪಟೂರು ಶಾಸಕ ನಾಗೇಶ್ ಅವರ 14 ಎಕರೆಯಲ್ಲಿ ವ್ಯವಸಾಯ ಮಾಡಿದರು. ಆದರೆ, ಅಲ್ಲಿ ಲಾಭ ಸಿಗಲಿಲ್ಲ.
ದಿನಕ್ಕೆ ಸಾವಿರ ರೂ. ಸಂಪಾದನೆ: ಅಲ್ಲಿಂದ ಮತ್ತೆ ಕನಕಪುರ ತಾಲೂಕಿನ ಸಿದ್ಧೇಶ್ವರದೊಡ್ಡಿಗೆ ಆಗಮಿಸಿ ಒಬ್ಬರ 8 ಎಕರೆ ಜಮೀನಿನಲ್ಲಿ ಬಾಳೆ, ರೇಷ್ಮೆ ಜತೆಗೆ ಸೊಪ್ಪು ಬೆಳೆಯಲು ಆರಂಭಿಸಿದರು. ಪ್ರತಿದಿನ ನೂರು ಕಟ್ಟು ಸೊಪ್ಪು ಬರಲಾರಂಭಿಸಿತು. ಸಾವಿರ ರೂ. ಸಂಪಾದನೆಯಾಗುತ್ತಿತ್ತು. ಬಾಳೆ ಗೊನೆ ಬಿಡುವುದು ಆರಂಭವಾಗುತ್ತಿದ್ದಂತೆ ಜಮೀನಿನ ಮಾಲೀಕ ಖಾಲಿ ಮಾಡಿಸಿದ. ಅಲ್ಲಿಂದ ದೊಡ್ಡಾಲಹಳ್ಳಿಯಲ್ಲಿ ಮನೆ ಮಾಡಿ, ನಲ್ಲಹಳ್ಳಿಯಲ್ಲಿ 2 ಎಕರೆ ಜಮೀನು ಗುತ್ತಿಗೆಗೆ ತೆಗೆದುಕೊಂಡರು. 1 ಎಕರೆಯಲ್ಲಿ ಬಾಳೆ, ಮತ್ತೊಂದು ಎಕರೆ ಯಲ್ಲಿ ಸೊಪ್ಪು ತರಕಾರಿ ಹಾಕಿದರು. ಮತ್ತೆರಡು ಎಕರೆಗೆ ವಿಸ್ತರಿಸುವ ವೇಳೆಗೆ ಆತ ಕೂಡ ಖಾಲಿ ಮಾಡಿಸಿದ. ಅಲ್ಲಿಂದ ಡಿವೈಎಸ್ಪಿಯೊಬ್ಬರು ಮೈಸೂರಿನಲ್ಲಿ ತಮ್ಮ 3 ಎಕರೆ ಜಮೀನಿಗೆ ಆಹ್ವಾನಿಸಿದರು. ಅದರಲ್ಲಿ 100 ಕ್ವಿಂಟಾಲ್ ಮುಸುಕಿನ ಜೋಳ ಬೆಳೆದರು. ಆಗ ಡಿವೈಎಸ್ಪಿ ಕಬ್ಬು ಮುಗಿದ ಮೇಲೆ 5 ಎಕರೆಯಲ್ಲಿ ಪಾಲಿಗೆ ವ್ಯವಸಾಯ ಮಾಡಲು ಕೊಟ್ಟರು. ಅಲ್ಲಿಗೆ ಬಾಳೆ, ಕಲ್ಲಂಗಡಿ ಹಾಕಿದ ಬೆನ್ನಲ್ಲೇ ಡಿವೈಎಸ್ಪಿ ತಮ್ಮ ಪತ್ನಿಯೇ ವ್ಯವಸಾಯ ಮಾಡುತ್ತಾರೆ ಎಂದು ಹೇಳಿ ಖಾಲಿ ಮಾಡಿಸಿದರು. ಅಲ್ಲಿಂದ ಮತ್ತೆ ದೊಡ್ಡಾಲಹಳ್ಳಿಗೆ ತೆರಳಿ 10 ಎಕರೆ ಜಮೀನಿನಲ್ಲಿ ಬಾಳೆ ಹಾಕಿದರು. ಕೆಜಿ 15 ರೂ. ಇದ್ದ ಬಾಳೆ, ಇವರ ಬೆಳೆ ಬರುವಷ್ಟರಲ್ಲಿ 4 ರೂ. ಆಗಿತ್ತು. ಇದರಿಂದ ಬೇಸತ್ತು ನೆಲಮಂಗಲದಲ್ಲಿ 1 ಎಕರೆ ಪಾಲಿಗೆ ಮಾಡಿಕೊಂಡರು. ಸೊಪ್ಪು ತರಕಾರಿ ಬೆಳೆದು ಲಕ್ಷ ಲಕ್ಷ ರೂ. ಸಂಪಾದನೆ ಮಾಡಿದರು. 2 ವರ್ಷ ಮುಗಿಯುತ್ತಿದ್ದಂತೆ (2018ರಲ್ಲಿ) ಜಮೀನಿನ ಮಾಲೀಕ ಆಗ ತಾನೆ ಚೆನ್ನಾಗಿ ಚಿಗುರಿದ್ದ ಸೊಪ್ಪಿಗೆ ಕಳೆನಾಶಕ ಸಿಂಪಡಿಸಿಬಿಟ್ಟರು. ಇದರಿಂದ ಮನನೊಂದು ಸ್ನೇಹಿತರ ಜತೆಗೂಡಿ ಸ್ಪಾರ್ಕ್ ನೈಸರ್ಗಿಕ ಕಂಪನಿ ಸ್ಥಾಪಿಸಿದರು. 2019ರ ನವೆಂಬರ್ನಲ್ಲಿ 20 ಲಕ್ಷ ರೂ. ಖರ್ಚು ಮಾಡಿ ಪುತ್ರಿಯ ವಿವಾಹ ಮಾಡಿದರು. ಮದುವೆ ಮುಗಿದ ಬಳಿಕ ಸ್ವಗ್ರಾಮಕ್ಕೆ ಬಂದು ಡಿಸೆಂಬರ್ 1ರಿಂದ ಅಲ್ಲಿ ಸೊಪ್ಪು, ತರಕಾರಿ ಬೆಳೆಯಲು ಆರಂಭಿಸಿದ್ದಾರೆ. ಊರು ಬಿಟ್ಟ ನಾಲ್ಕು ವರ್ಷಗಳ ನಂತರ ತೀರಿಸಲು ಆರಂಭಿಸಿದರೂ ಸಂಪೂರ್ಣ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಆಗ ಇವರು ಕಷ್ಟದಲ್ಲಿದ್ದಾರೆ ಎಂದುಕೊಂಡು ಕೆಲವರು ಸಾಲ ವಾಪಸ್ ಕೇಳೀರಲಿಲ್ಲ. ಅವರ ಋಣವನ್ನು ಬೇರೆ ರೀತಿಯಲ್ಲಿ ತೀರಿಸಲು ನಿರ್ಧರಿಸಿದ್ದಾರೆ.
ಅರಣ್ಯ ಮಾದರಿಯ ಕೃಷಿ
ಕಾಡಿನಲ್ಲಿ ಮರಗಳು ಬೆಳೆಯುತ್ತವೆ. ಅದರ ಕೆಳಗೆ ಸಣ್ಣಗಿಡಗಳು, ಗೆಡ್ಡೆಗೆಣಸು, ಹುಲ್ಲು ಬೆಳೆಯುತ್ತವೆ. ಮರದ ಸುತ್ತ ಬಳ್ಳಿಗಳು ಹಬ್ಬುತ್ತವೆ. ಅದೇ ಮಾದರಿಯಲ್ಲಿ ನುಗ್ಗೆ, ಕರಿಬೇವು, ಗಿಡದ ತರಕಾರಿ, ಗೆಡ್ಡೆ ತರಕಾರಿ, ಬಳ್ಳಿ ತರಕಾರಿ ಹಾಗೂ ಸೊಪ್ಪನ್ನು ಬೆಳೆಯುತ್ತಿದ್ದಾರೆ. 3 ಅಡಿ ಅಗಲದ ಬೆಡ್ ನಡುವೆ ಒಂದೂವರೆ ಅಡಿ ಕಾಲುವೆ ನಿರ್ವಿುಸಿ, ಒಂದು ದಿನ ಒಂದು ಬೆಡ್ನಲ್ಲಿ ಮಾತ್ರ ಕೃಷಿ ಮಾಡುತ್ತಾರೆ. ಒಂದು ಅಡಿಗೊಂದು ಸಾಲಿನಲ್ಲಿ ಸೊಪ್ಪು, ಖಾಲಿ ಜಾಗದಲ್ಲಿ 2 ಕಡೆ ಒಂದು ಗೆಡ್ಡೆ ತರಕಾರಿ, ಮಧ್ಯದಲ್ಲಿ 2 ಅಡಿಗೊಂದು ಗಿಡದ ತರಕಾರಿ, 25 ಅಡಿಗೆ ಬಳ್ಳಿ ತರಕಾರಿ ಜತೆಗೆ ನುಗ್ಗೆ/ಕರಿಬೇವು ಹಾಕುತ್ತಾರೆ. ಸೊಪ್ಪಿನಲ್ಲಿ ಮೆಂತ್ಯ, ಕಿಲ್ಕೀರೆ, 3 ವಿಧದ ದಂಟು, ಪಾಲಕ್, ಚಕ್ಕೋತ, ಸಬ್ಬಸಿಗೆ, ಕೊತ್ತಂಬರಿ, ಹೊನಗೊನೆ, ಒಂದೆಲಗ, 3 ಬಗೆಯ ಬಸಳೆ, ಬದುಗಳಲ್ಲಿ ಅರಿಶಿಣ, ಶುಂಠಿ, ಪುದೀನ, ಗೆಡ್ಡೆ ತರಕಾರಿಗಳಲ್ಲಿ ಮೂಲಂಗಿ, ಗೆಡ್ಡೆಕೋಸು, ಕ್ಯಾರಟ್, ಬೀಟ್ರೂಟ್, ಹೂಕೋಸು, ಎಲೆಕೋಸು, ಆಲೂಗಡ್ಡೆ ಜತೆಗೆ ಈರುಳ್ಳಿ, ಬೆಳ್ಳುಳ್ಳಿ, ಗಿಡದ ತರಕಾರಿಗಳಲ್ಲಿ ಟೊಮೆಟೊ, ಬೆಂಡೆಕಾಯಿ, ಮೆಣಸಿನಕಾಯಿ, ಗೋರಿಕಾಯಿ, ಬಳ್ಳಿ ತರಕಾರಿಗಳಲ್ಲಿ ಹೀರೆಕಾಯಿ, ಹಾಗಲ, ಪಡುವಲ, ಸೋರೆ, ಬೀನ್ಸ್ ಮೊದಲಾದವುಗಳನ್ನು ಬೆಳೆಯುತ್ತಿದ್ದಾರೆ. ಒಂದು ಕಂತೆ ಸೊಪ್ಪು 10 ರೂ., ಒಂದು ಕೆಜಿ ತರಕಾರಿ 20 ರೂ.ನಂತೆ ಮಾರಾಟವಾದರೆ, 3100 ಅಡಿ ಬೆಡ್ನಲ್ಲಿ 4 ತಿಂಗಳಿಗೆ 4000 ರೂ. ಸಿಗುತ್ತದೆ. 100 ಬೆಡ್ಗೆ 4 ಲಕ್ಷ, ವರ್ಷಕ್ಕೆ 3 ಬೆಳೆ ಆಗಲಿದ್ದು, 12 ಲಕ್ಷ ರೂ. ಸಿಗುತ್ತದೆ. ದರ ಅರ್ಧ ಸಿಕ್ಕರೂ 100 ಬೆಡ್ಗೆ 2 ಲಕ್ಷ, ವರ್ಷಕ್ಕೆ 6 ಲಕ್ಷ ಸಿಗುತ್ತದೆ. 2ನೇ ವರ್ಷಕ್ಕೆ ಭೂಮಿ ಫಲವತ್ತತೆ ಹೆಚ್ಚಾಗಿ ಇಳುವರಿ ದ್ವಿಗುಣವಾಗುತ್ತದೆ. 100 ವರ್ಷ ಆ ಬೆಡ್ನಲ್ಲಿ ಯಾವುದೇ ಗೊಬ್ಬರ ಹಾಕದೆ ಕೃಷಿ ಮಾಡಬಹುದು ಎನ್ನುತ್ತಾರೆ. ಇವರ ತೋಟಗಳಿಗೆ 13 ದೇಶಗಳ ರೈತರು/ಜನ ಬಂದು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತರಬೇತಿ ಪಡೆಯುತ್ತಿರುವ ನವದಂಪತಿ
ಕೆ.ಆರ್. ನಗರದ ಬಿಇ ಪದವೀಧರ ರಾಜೇಶ್, ಎಂ.ಎಸ್ಸಿ. ಪದವೀಧರೆ ಸೌಮ್ಯಾ ನವದಂಪತಿ ಕುಮಾರಸ್ವಾಮಿ ಅವರ ಬಳಿ ಸೊಪ್ಪು ತರಕಾರಿ ಬೆಳೆಯುವ ತರಬೇತಿ ಪಡೆಯುತ್ತಿದ್ದಾರೆ. ಇವರಿಬ್ಬರೂ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದು, ‘ಯಾರ ಹಂಗಿನಲ್ಲೂ ಇರದೇ ಸ್ವತಂತ್ರವಾಗಿ ಬದುಕಲು ಅವಕಾಶವಾಗುವುದು ಕೃಷಿಯಿಂದ ಮಾತ್ರ ಸಾಧ್ಯ. ಆದ್ದರಿಂದ ತರಬೇತಿ ಪಡೆಯುತ್ತಿದ್ದೇವೆ. ಸಾಧಿಸಿ ತೋರಿಸುತ್ತೇವೆ’ ಎನ್ನುತ್ತಾರೆ.
ಮಕ್ಕಳಿಗೂ ಕೃಷಿ ಸಂಬಂಧಿ ಶಿಕ್ಷಣ
ಕುಮಾರಸ್ವಾಮಿ ತಮ್ಮ ಇಬ್ಬರು ಮಕ್ಕಳಿಗೂ ಕೃಷಿ ಸಂಬಂಧಿ ಕ್ಷೇತ್ರದಲ್ಲಿ ಅಧ್ಯಯನ ಮಾಡಿಸಿದ್ದಾರೆ. ಪುತ್ರ ಎಂಎಸ್ಸಿ ಅಗ್ರಿಕಲ್ಚರ್, ಪುತ್ರಿ ಎಂಎಸ್ಸಿ ಹಾರ್ಟಿಕಲ್ಚರ್, ಇಬ್ಬರೂ ಪಿಎಚ್ಡಿ ಮಾಡಿದ್ದಾರೆ. ಅಳಿಯನನ್ನು ಕೂಡ ಅದೇ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ಹುಡುಕಿರುವುದು ವಿಶೇಷ
ಕೃಷಿಯಿಂದ ಮಾತ್ರ ರೈತರು ನೆಮ್ಮದಿಯ ಜೀವನ ಕಂಡುಕೊಳ್ಳಲು ಸಾಧ್ಯ. ಯಾವುದೇ ರಾಸಾಯನಿಕ ಬಳಸದೆ ಸೊಪ್ಪು-ತರಕಾರಿ ಬೆಳೆದರೆ ಅದಕ್ಕೆ ಬಹು ಬೇಡಿಕೆಯಿದೆ. ಈ ಕೃಷಿ ಬಗ್ಗೆ ಜನರಿಗೆ ತಿಳಿಸಲು ವಸತಿ ಶಾಲೆ ಮಾಡುವ ಉದ್ದೇಶವಿದೆ. ಇದಕ್ಕೆ ಚುಕ್ಕಿ ನಂಜುಂಡಸ್ವಾಮಿ ಮೊದಲಾದವರ ಸಹಕಾರ ಇದೆ. | ಕುಮಾರಸ್ವಾಮಿ ನೈಸರ್ಗಿಕ ಕೃಷಿ ತಜ್ಞ, ಸಾತೇನಹಳ್ಳಿ, ನಾಗಮಂಗಲ ತಾಲೂಕ ನನ್ನ ಪತಿ ಕೆಲಸ ಬಿಟ್ಟು ಬಂದಾಗ ನನ್ನ ಸಹೋದರರು ‘ಅವನನ್ನು ಬಿಟ್ಟು ಮನೆಗೆ ಬಾ’ ಎಂದು ಹಿಂಸೆ ಕೊಟ್ಟರು. ಆದರೆ, ಪತಿಯ ಮೇಲೆ ನನಗೆ ವಿಶ್ವಾಸವಿತ್ತು. ಆ ವಿಶ್ವಾಸಕ್ಕೆ ಈಗ ಫಲ ಸಿಕ್ಕಿದೆ. ತರಬೇತಿಗಾಗಿ ಹಲವರು ಬರುತ್ತಾರೆ. ಪ್ರತಿ ನಿತ್ಯ ನೂರಾರು ಜನ ಫೋನ್ ಮಾಡಿ ಕೇಳುತ್ತಾರೆ. ಇವರ ಕೃಷಿ ಪದ್ಧತಿಯನ್ನು ಹೆಚ್ಚು ರೈತರು ಅಳವಡಿಸಿಕೊಳ್ಳಬೇಕು. | ಭಾಗ್ಯ ,ಕುಮಾರಸ್ವಾಮಿ ಅವರ ಪತ್ನಿ
ಮಾದರಹಳ್ಳಿ ರಾಜು ಮಂಡ್ಯ