ಕಾವ್ಯ ಎಂದರೇನು ಎಂಬ ಪ್ರಶ್ನೆಗೆ ನಿರ್ದಿಷ್ಟವಾದ ಉತ್ತರ ಕಷ್ಟ. ಅದು ಒಂದು ರೀತಿಯಲ್ಲಿ ಧ್ಯಾನ. ಮತ್ತೊಂದು ರೀತಿಯಲ್ಲಿ ಭಾಷೆಯ ಜತೆ ಸಜೀವ ಹುಡುಕಾಟದ ಅನುಸಂಧಾನ. ಕಾಣುವುದರ ಹಿಂದಿರುವ ಕಾಣದ್ದನ್ನೂ ಕಾಣುವ ಸ್ಪಂದನ. ಕಾಲದ ಪ್ರತಿಸೃಷ್ಟಿ, ಎಲ್ಲರೆದೆಯಲ್ಲೂ ಅರಳಬಹುದಾದ ಅಮೂರ್ತ ಭಾವಗಳ ಅಭಿವ್ಯಕ್ತಿ. ಇಷ್ಟಾಗಿಯೂ ಇದಷ್ಟೇ ಕಾವ್ಯದ ವ್ಯಾಖ್ಯಾನಕ್ಕೆ ಸಾಲದು. ಅದು ಬರೆದವನ ಭಾವ ಓದುಗನ ಭಾವಕೋಶಕ್ಕೆ ಸ್ಪಂದಿಸುವ ಗಳಿಗೆಯಲ್ಲೂ ಹೊಸ ಅರ್ಥ ಸ್ಪುರಿಸಿಬಿಡಬಲ್ಲದು. ಓದುವವರ ಜತೆಯಲ್ಲೇ ಬೆಳೆಯುತ್ತ ಬರೆದವನ ಹಂಗಿಲ್ಲದಂತೆ ಅರಳಬಲ್ಲದು. ವರ್ತಮಾನದ ತಲ್ಲಣಕ್ಕೆ, ನೋವಿಗೆ ಮದ್ದಾಗಬಲ್ಲ ಕಾವ್ಯ ಒಂದು ವ್ಯಾಖ್ಯೆಗೆ ದಕ್ಕಲಾರದು. ವಿಶ್ವ ಕಾವ್ಯ ದಿನದ (ಮಾ. 21) ಈ ಹೊತ್ತಿನಲ್ಲಿ ಇಲ್ಲೊಂದಿಷ್ಟು ಕವಿತೆಗಳು ಕಾವ್ಯಾಸಕ್ತರ ಸಂವಹನಕ್ಕಾಗಿ ಅರಳಿನಿಂತಿವೆ.
ಈ ದಿನಾಚರಣೆ ಶುರು ಆಗಿದ್ದು ಏಕೆ?: ಕಾವ್ಯಾಭಿವ್ಯಕ್ತಿಯ ಮೂಲಕ ಭಾಷಾ ವೈವಿಧ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯುನೆಸ್ಕೋ ಪ್ರತಿ ವರ್ಷ ಮಾರ್ಚ್ 21ನ್ನು ವಿಶ್ವ ಕಾವ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. 1999ರಿಂದಲೇ ಇದು ಜಾರಿಗೆ ಬಂದಿದೆ. ಅಳಿವಿನಂಚಿನಲ್ಲಿರುವ, ಜಗತ್ತಿನ ಹಲವು ಭಾಷೆಗಳನ್ನು ಉಳಿಸುವುದು; ರಾಷ್ಟ್ರ-ರಾಜ್ಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾವ್ಯ ಚಳವಳಿಗಳನ್ನು ಬೆಳೆಸುವ ಸದುದ್ದೇಶವನ್ನೂ ಈ ದಿನಾಚರಣೆ ಹೊಂದಿದೆ.
ಕವಿಅವನಿಗೆತನ್ನ ಬ್ರಹಜ್ಞಾನದತುಡಿತ.ಅವಳಿಗೆತನ್ನ ಸ್ವರ್ಗಲೋಕದಸೆಳೆತ.ಆ ಇಬ್ಬರಿಗೂ ಬೇಡವಾದತಬ್ಬಲಿಈ ಬುವಿಯಪಾಪದ ಕೂಸನ್ನುನನಗಿರಲಿಎಂದು ಪ್ರೀತಿಯಿಂದಸಾಕಿಕೊಂಡಕವಿ.
| ಬಿ.ಆರ್. ಲಕ್ಷ್ಮಣರಾವ್
ಕೃಷಿ ತತ್ತ್ವ ಮೂಲಬುದ್ಧಿವಂತನೊಬ್ಬ ಮಾತು ಬಿತ್ತಿ ಬೆಳೆದಬಂಗಾರ ಫಸಲು ಪಡೆದ!ಅತ್ತ ದಡ್ಡ ತಾನು ಮೇಲೆಳೆದುಕೊಂಡ-ದಿನ ಅಳಲ ಹೊಳೆಯ ತೆರೆದ.ಯಾವ ಪದವು ಎಲ್ಲಿ ಬಿತ್ತಾಗಬಹುದೋಜಾಣನಿಗೆ ಗೊತ್ತು ತಂತ್ರಮಾತು ಮಂತ್ರ ಮಾಡದೆ ಮಂಕುತಿಮ್ಮನಾದಬುದ್ಧಿಭಾವಕೆ ಇಹುದು ಸೂತ್ರ!ಬಿತ್ತನೆಯ ಭತ್ತ ಬಟ್ಟಿಯಲಿ ಕಟ್ಟಿಗೂಡೆಯಲಿ ಇಟ್ಟು ನೀರೆರೆದ,ದಿನ ಉರುಳಿದಂತೆ ಮೊಳಕೆ ಬೀಜ ಕಂಡುಕೆಸರು ಗದ್ದೆಯಲ್ಲಿ ಚೆಲ್ಲಿದ!ಬೆಳಗಾಗಿ ಎದ್ದು ಹೊಲದಲ್ಲಿ ಕಂಡಹಸಿ ಹಸಿರ ಪೈರು ಒಟ್ಟಿಲುಮಾತು ಬಲ್ಲವ ಬಲ್ಲ ಕೃಷಿ ತತ್ವ ಮೂಲಸಾಧನೆಗೆ ಶ್ರಮವೇ ಮೆಟ್ಟಿಲು!ದೊಡ್ಡರಂಗೇಗೌಡಅಜ್ಜಿಯ ಕಥೆಬೆಳದಿಂಗಳ ರಾತ್ರಿಯಾಗೆನನ್ನಜ್ಜಿ ನನ್ನ ತೊಡೆ ಮ್ಯಾಲ ಮಲಗಿಸ್ಕೆಂಡು‘ಕೃಷ್ಣನ್ ಬಾಯಾಗ್ ಪ್ರಪಂಚಾನೆ ಕಾಣ್ತಂತೆ ಕಣ್ ಮಗ’ಅಂತ ಕಥೆ ಹೇಳ್ತಾ ಇದ್ದರೆಅವಳ ಬೊಚ್ ಬಾಯಿ ನೋಡಿ‘ಇದ್ಯಾಕವ್ವ ನಿನ್ ಬಾಯಾಗ್ ಒಂದು ಹಲ್ಲೆ ಇಲ್ವಲ್ಲಾ?’ಅಂತ ಪ್ರಶ್ನೆ ಕೇಳಿದ್ದೆ.ನನ್ನಜ್ಜಿ‘ಮುದ್ದೆ ಉಣ್ ಬೇಕಾದ್ರೆ ಕಾಳಲ್ ಕಲ್ ಸಿಕ್ಕಿನಿನ್ನಜ್ಜ ಸಿಟ್ಟಲ್ಲಿ ತಲೆ ಮ್ಯಾಲ್ ಗುದ್ದಿದ್ದ ಕಣ್ ಮಗ,ಹಲ್ಲೆಲ್ಲ ಉದುರಿ ಹೋದು’, ಅಂದಿದ್ಲು.ನಾನು ನನ್ನ ಹಲ್ನೆಲ್ಲ ತೋರ್ಸಿ ಕಿಸ ಕಿಸ ಅಂತ ನಕ್ಕಿದ್ದೆ.ಬೆಳಗ್ಗೆ ನನ್ನವ್ವ ನನ್ನ ಬಚ್ಚಲಲ್ಲಿ ನಿಲ್ಲುಸ್ಕೊಂಡುನೀರು ಉಯ್ ಬೇಕಾದ್ರೆ, ನನ್ನವ್ವನ್ ಕತ್ತಲ್ಲಿ ಆಗಿದ್ ಕಲೆ ನೋಡಿ,‘ಇದ್ಯಾಕವ್ವ? ಇದೇನಾತು?’ ಅಂತ ಕೇಳಣ ಅಂದ್ಕಂಡೆ.ರಾತ್ರಿ ಮುದ್ದೆ ಉಣ್ ಬೇಕಾದ್ರೆ ಕಾಳಲ್ ಕಲ್ ಸಿಕ್ಕಿಸಿಟ್ಟಲ್ಲಿ ನನ್ನಪ್ಪ ಕಚ್ಚಿರ್ಬೆಕು ಅಂದ್ಕಂಡ್ ಸುಮ್ನಾದೆ.ನನ್ನಜ್ಜಿ ಮಗ್ಗಲು ನನ್ನ ಚಿಂತೆಗಚ್ಚಿತ್ತು.ಸಾಯೋತಂಕ ಸಾವಿರ ಕಥೆತನ್ನ ಒಡಲೊಳಗಿನ್ ಒಂದಿಷ್ಟು ಪ್ರೀತಿಬಗ್ಗಲಲ್ಲಿ ಇದ್ದ ತನ್ ಕಾಲದ್ ಕಾಸಿನ್ ಗಂಟುಇವು ನನ್ನಜ್ಜಿ ನನಗೇಂತ ಬಿಟ್ಟು ಹೋಗಿದ್ದು.ಕಾಲದ ಜೋಳಿಗೆಯೊಳಗೆ ಅವಳು ಮರೆಯಾದಳುನಾ ಒಂಟಿಯಾದೆ,ತಿನ್ನೋಕೊಂದಿಷ್ಟು ಅಕ್ಕಿ ತರೋಣಂತನನ್ನಜ್ಜಿ ಕಾಸ್ ತಗಂಡ್ ಅಂಗಡಿಗ್ ಹೋದೆನನ್ನಜ್ಜಿ ಕಾಸಿಗ್ ಬೆಲೆ ಇಲ್ಲನನ್ನ ಹಸಿವು ಹಿಂಗಂಗಿಲ್ಲ!!ಅಜ್ಜಿ ಕಥೆ ಮನ್ಸಾಗ್ ಬಂತುಕಾಸಿನ್ ಗಂಟು ತಾಳ ಆತುಹಸಿವಿನ್ ರಾಗದಲ್ಲಿ ಪದ ಕಟ್ಟಿಅಜ್ಜಿ ಕಥೆನ ಹಾಡ್ಕೋತ ಹೊಂಟೆಹೊಟ್ಟೆ ತುಂಬೈತೆಬಾಳ್ ಬೆಳಗೈತೆ ನನ್ನಜ್ಜಿ ಕಥೆ.| ಧನಂಜಯ್ ನಟ
ಮುಕ್ತಕಗಳು
ನೀಲ ಮೇಘ. ಮಿಂಚಿನಂಚು.
ಮಣ್ಣಿಗೆ ನಾಕು ಹನಿ.
ಕರಗಿ ಹೋದ ಕಾಮನಬಿಲ್ಲಷ್ಟೆ
ದುಶ್ಶಾಸನನ ಪ್ರಾಪ್ತಿ.
+++
ಗಾಳಿ ಬೀಸು; ತಂತಿ ನಡುಕ,
ವಿದ್ಯುದೆಳೆಯಲಿ!
ಕಿವಿಯನೊತ್ತಿ ಕೇಳಿ, ಎಂಥ
ಗೋಳು ಬಯಲಲಿ!
+++
ಹೊಟ್ಟೆಯ ಹಸಿವಿಗೆ
ಒಪ್ಪಿಡಿ ಅನ್ನ.
ಹೃದಯಕೆ ಸಾಹಿ
ತ್ಯದ ಚಿತ್ರಾನ್ನ.
+++
ಹಿಂದೆ ಮೋಹನ್ ದಾಸ್ ಗಾಂಧಿ.
ಮುಂದೆ ಕಂದ
ನಡುವೆ ಊರುಗೋಲಿನ ತಲೆ
ಮಾರ ಸಂಬಂಧ.
| ಎಚ್.ಎಸ್. ವೆಂಕಟೇಶಮೂರ್ತಿ
ಕವಿತೆಗಳು
-1-
ಕೆಲವು ಕವಿತೆಗಳು
ಮಡಿ ಮಡಿ ಅನ್ನುತ್ತ
ಎಲ್ಲರನ್ನೂ ದೂರ
ಅಟ್ಟುತ್ತವೆ
ಗರ್ಭಗುಡಿಯ
ಕತ್ತಲೊಳಗೆ ಉಳಿದು
ಅಲ್ಲೇ ಮಡಿಯುತ್ತವೆ
ಇನ್ನು ಕೆಲವು
ಗುಡಿ ಬಿಟ್ಟು ಮಡಿ ಬಿಟ್ಟು
ನುಡಿ ನುಡಿ ಅನ್ನುತ್ತ
ಎಲ್ಲರೊಂದಿಗೆ ಬೆರೆತು
ಕೂಡಿ ಆಡಿ ಹಾಡಿ
ಎಲ್ಲರನ್ನೂ
ಮುಟ್ಟುತ್ತವೆ
-2-
ಕೆಲವು ಕವಿತೆಗಳು
ಎಷ್ಟು ಕಾದರೂ
ಬರುವುದಿಲ್ಲ ಹೊರಗೆ
ಮೇಕಪ್ ಮಾಡುತ್ತ
ಕನ್ನಡಿ ನೋಡುತ್ತ
ಕೋಣೆಯೊಳಗೆ ಇರುತ್ತವೆ
ಗಂಟೆಗಟ್ಟಲೆ.
ಇನ್ನು ಕೆಲವಕ್ಕೆ
ಅದೇನೋ ಅವಸರ
ಅಥವಾ
ಅಲಂಕಾರ
ಮಾಡಿಕೊಳ್ಳಲು ಬೇಸರ
ಬರುತ್ತವೆ ಬೀದಿಗೆ
ನೈಟಿಯಲ್ಲೆ!
| ಎಚ್. ಡುಂಡಿರಾಜ್
ಅಮ್ಮನೆಂಬ ಶಕ್ತಿ
ಅವಳು ಮುಟ್ಟಿದ್ದೇ
ಎಲ್ಲ ಬದಲಾಗಿಬಿಡುತ್ತಿದ್ದವು!
ಬಿಡಿ ಮಲ್ಲಿಗೆಯ ಮೊಗ್ಗು ಮಾಲೆಯಾಗುತ್ತಿತ್ತು!
ಅವಳು ಮುಟ್ಟಿದ್ದೇ
ಇದ್ದಿಲು ಕೆಂಡವಾಗುತ್ತಿತ್ತು
ಅಕ್ಕಿ ಅನ್ನವಾಗುತ್ತಿತ್ತು
ನೀರು ಚಹವಾಗುತ್ತಿತ್ತು
ಹಿಟ್ಟು ಮುದ್ದೆಯಾಗುತ್ತಿತ್ತು
ಹಾಲು ಮೊಸರಾಗುತ್ತಿತ್ತು
ಬೆಣ್ಣೆ ತುಪ್ಪವಾಗುತ್ತಿತ್ತು
ಕೂದಲು ಹೆರಳಾಗುತ್ತಿತ್ತು
ತೆಳುನೂಲು ಪತ್ತಲದ ಹುವ್ವಾಗುತಿತ್ತು
ಅವಳು ಮುಟ್ಟಿದ್ದೇ
ಲಿಂಬೆ ಉಪ್ಪಿನಕಾಯಾಗುತ್ತಿತ್ತು
ಸಿಪ್ಪೆ ಸಂಡಿಗೆಯಾಗುತಿತ್ತು
ಮೊಟ್ಟೆ ಮರಿಯಾಗುತ್ತಿತ್ತು
ಕರಿನೆಲ ಅಬ್ಬಲಿಗೆ ತೋಟವಾಗುತ್ತಿತ್ತು
ಮುಟ್ಟಿ ಮುಟ್ಟಿ ಅದೆಂಥ ನೋವುಂಡಿದ್ದಳೋ,
‘ಹಿಜ್ಜಮಲ್ಲಿ, ನಗು ಸ್ವಲ್ಪ ಕಮ್ಮಿ ಮಾಡ್ಕ,
ಯಾರ್ಗೂ ತಿಳಿಯಲ್ಲ ಹಸನ್ಮುಖಿಗಳ ಕಷ್ಟ’
ಎಂದು ಎಚ್ಚರಿಸಿದ್ದಳು!
ಮುಟ್ಟಿಮುಟ್ಟಿ ಅದೆಷ್ಟು ಶಕ್ತಿ ಪಡೆದಿದ್ದಳೋ,
ಅವಳ ಮುಟ್ಟು ನಿಲಿಸಿದ್ದೇ ಆಗಿಬಿಟ್ಟೆ ನಾನು!
ಮುಟ್ಟಿ ಎಲ್ಲವ ಬದಲಿಸುವವಳೇ ಅಮ್ಮ,
ಅರಿವಿನುಂಗುರ ತೊಡಿಸಿದವಳು ನೀನು, ಹೌದು!
ಮುಟ್ಟಿ ಹುಟ್ಟಿಸುವ ಮಾಯಕಾರ ಶಕ್ತಿಗಳೇ,
ಲೋಕ ಪೊರೆವ ಜಗದ ಹೆಣ್ಣು, ಗಂಡು ಅಮ್ಮಗಳೇ,
ನಿಮ್ಮ ಕರುಣದ ಅಮ್ಮತನಕೆ ಶರಣು,
ನಿಮ್ಮ ಪ್ರೇಮ ನಗೆ ಲಾಸ್ಯಕೆ ಶರಣು..
| ಡಾ. ಎಚ್. ಎಸ್. ಅನುಪಮಾ