ಅಂಕಣ

ಹುಟ್ಟಿದಹಬ್ಬಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯ ಉಡುಗೊರೆ!

Webdesk - Ravikanth
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ರಾಷ್ಟ್ರ ಇದಕ್ಕಿಂತಲೂ ಒಳ್ಳೆಯ ಕೊಡುಗೆ ಕೊಡುವುದು ಸಾಧ್ಯವೇ ಇರಲಿಲ್ಲ. ಎರಡೂವರೆ ಕೋಟಿ ವ್ಯಾಕ್ಸಿನ್ ಡೋಸ್​ಗಳನ್ನು ಜನರಿಗೆ ನೀಡಿ ದೇಶದ ಆರೋಗ್ಯವನ್ನು ಹೆಚ್ಚು ಗಟ್ಟಿ ಮಾಡಲಾಯ್ತು. ಮೂರನೇ ಅಲೆಯನ್ನು ತಡೆಯುವ ಸೈನಿಕರನ್ನಾಗಿ ನಮ್ಮನ್ನೇ ರೂಪಿಸಲಾಯ್ತು. ಹುಟ್ಟಿದ ದಿನವೊಂದು ಸಾರ್ವಜನಿಕ ಹಬ್ಬವಾಗುವುದು ಹೀಗೆಯೇ. ಅವರು ನೂರ್ಕಾಲ ಹಿತವಾಗಿ ಬಾಳಲಿ.

ಎರಡನೇ ಅಲೆಯ ವೇಳೆಗೆ ವ್ಯಾಕ್ಸಿನ್​ಗಳ ವಿಚಾರವಾಗಿ ಅರಚಾಡುತ್ತಿದ್ದ ಕಾಂಗ್ರೆಸ್ಸು ನ್ಯೂಜಿಲೆಂಡಿನ ಪ್ರಧಾನಿಯಿಂದ ಭಾರತ ಕಲಿಯಬೇಕಿದೆ ಎಂದೆಲ್ಲ ಹೇಳಿತ್ತು. ಆದರೆ, ಮೋದಿಯವರ ಹುಟ್ಟುಹಬ್ಬದ ದಿನವೇ ಭಾರತ ಐದು ನ್ಯೂಜಿಲೆಂಡ್​ಗಳಿಗೆ ವ್ಯಾಕ್ಸಿನೇಷನ್ ಮಾಡಿಸಿದಂತಾಗಿದೆ. ಬಹುಶಃ ನೆಲ್ಸನ್ ಮಂಡೇಲಾ ಮತ್ತು ಗಾಂಧೀಜಿಯವರ ನಂತರ ಜಗತ್ತಿನ ಅತಿಹೆಚ್ಚು ಜನರಿಂದ ಅಚ್ಚರಿ ಮಿಶ್ರಿತ ಗೌರವಕ್ಕೆ ಪಾತ್ರವಾಗುತ್ತಿರುವ ವ್ಯಕ್ತಿ ನರೇಂದ್ರ ಮೋದಿಯೇ ಇರಬೇಕು. ತನ್ನ ಉದ್ದೇಶ, ಗುರಿಗಳತ್ತ ದೃಢವಾದ ಹೆಜ್ಜೆಯನ್ನಿಡುತ್ತ, ನಂಬಿಕೊಂಡ ಸಿದ್ಧಾಂತದ ಬುಡದಮೇಲೆ ರಾಷ್ಟ್ರದ ಹಿತ ನಿರ್ವಿುಸುತ್ತ ಸಾಗುವ ವ್ಯಕ್ತಿಯೊಬ್ಬ ಏನಾಗಬಹುದೆನ್ನುವುದಕ್ಕೆ ನರೇಂದ್ರ ಮೋದಿ ಅನೇಕ ಶತಮಾನಗಳ ಕಾಲ ಉದಾಹರಣೆಯಾಗಿ ನಿಲ್ಲಬಲ್ಲರು. ಈ ದೇಶವಂತೂ ಬದಲಾದ ತನ್ನ ವರ್ತಮಾನದ ಕುರಿತಂತೆ ಮತ್ತು ಭವ್ಯವಾಗಲಿರುವ ಭವಿಷ್ಯದ ಕುರಿತಂತೆ ನೆನಪಿಸಿಕೊಂಡಾಗಲೆಲ್ಲ ಮೋದಿಗೊಂದು ನಮನವನ್ನು ಖಂಡಿತ ಸಲ್ಲಿಸುತ್ತದೆ.

ಕರೊನಾ ಎರಡನೇ ಅಲೆ ವೇಳೆಗೆ ಅವರ ಮುಖ ಬಾಡಿದಂತೆ ಕಾಣುತ್ತಿತ್ತು. ಸಾಧ್ಯವಾದರೆ ಅರವಿಂದ ಕೇಜ್ರಿವಾಲ್​ರಾದಿಯಾಗಿ ಇತರ ಎಲ್ಲ ಮುಖ್ಯಮಂತ್ರಿಗಳೊಂದಿಗೆ ಮೋದಿಯವರು ಆಪ್ತ ಮಾತುಕತೆ ನಡೆಸುವಾಗಿನ ವಿಡಿಯೋ ಮತ್ತೊಮ್ಮೆ ನೋಡಿ. ಅಂದೂ ಕೇಜ್ರಿವಾಲ್ ತಮ್ಮ ಎಂದಿನ ನಾಟಕದ ಮೂಲಕ ನರೇಂದ್ರ ಮೋದಿಯವರನ್ನು ಜನರ ಮುಂದೆ ಸಿಕ್ಕುಹಾಕಿಸುವ ಪ್ರಯತ್ನ ಮಾಡಿದ್ದರು. ಮೋದಿ ಕ್ಷಣದಲ್ಲೇ ಅವರ ಬಣ್ಣ ಬಯಲಿಗೆಳೆದರು. ಅಂದಿನ ಆ ವಿಡಿಯೋದಲ್ಲಿ ಊದಿಕೊಂಡಿರುವ ಮುಖ, ಬತ್ತಿ ಹೋಗಿರುವ ಕಂಗಳು, ನಿದ್ದೆ ಕಳೆದುಕೊಂಡು ಕೆಲಸ ಮಾಡುತ್ತಿರುವ ಅವರ ಪರಿಸ್ಥಿತಿಯನ್ನು ತೋರಿಸುತ್ತಿತ್ತು. ಹಗಲು-ರಾತ್ರಿ ವ್ಯಾಕ್ಸಿನ್, ಆಮ್ಲಜನಕ ಮತ್ತು ಆಸ್ಪತ್ರೆಗಳ ವ್ಯವಸ್ಥೆಯ ಕುರಿತಂತೆ ಭಾರತದ ಮತ್ತು ಜಗತ್ತಿನ ಅನೇಕರ ನಡುವೆ ಸಂಪರ್ಕ ಸಾಧಿಸುತ್ತ ಎರಡನೇ ಅಲೆಯನ್ನು ಹಿಡಿತಕ್ಕೆ ತಂದುಕೊಳ್ಳುವ ಪ್ರಯತ್ನ ಅವರು ಮಾಡುತ್ತಿದ್ದರಲ್ಲ, ಇಂದು ನಿಂತು ಹಿಂದಿರುಗಿ ನೋಡಿದರೆ ಕೈ ಎತ್ತಿ ನಮಿಸಬೇಕೆನಿಸುವಷ್ಟು. ಆ ವೇಳೆಗೆ ಅಮೆರಿಕದಲ್ಲಿದ್ದ ವಿದೇಶಾಂಗ ಸಚಿವ ಜೈಶಂಕರ್ ಅಲ್ಲಿನ ವಿಶ್ವವಿದ್ಯಾಲಯದೊಂದಿಗೆ ಆನ್​ಲೈನ್ ಸಂವಾದದಲ್ಲಿ ಭಾಗವಹಿಸಿ ಜನರಲ್ ಮ್ಯಾಕ್​ವಾಸ್ಟರ್ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಸಹಜವಾದ ಅಮೆರಿಕನ್ನರ ಧಿಮಾಕು ಪ್ರಶ್ನೆ ಕೇಳುವವರಲ್ಲಿತ್ತು. ಎಂದಿನಂತೆ ಭಾರತದ ದಾರಿದ್ರ್ಯ, ಅನೈಕ್ಯತೆ, ಇವುಗಳನ್ನೇ ಮುಂದಿಟ್ಟುಕೊಂಡು ಅವರು ಕೇಳಿದ ಕೊನೆಯ ಪ್ರಶ್ನೆಗೆ ವಿದೇಶಾಂಗ ಸಚಿವರು ಕೊಟ್ಟ ತಪರಾಕಿ ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆ ಪಡುವಂತೆ ಮಾಡಿಬಿಟ್ಟಿತು. ‘ಭಾರತ ಸಾಂಸ್ಕೃತಿಕವಾಗಿ, ಭಾಷಾ ವಿಚಾರದಲ್ಲಿ, ಒಂದೇ ಮಾತಿನಲ್ಲಿ ಹೇಳುವುದಾದರೆ ಜಗತ್ತಿನಲ್ಲಿರಬಹುದಾದ ಎಲ್ಲ ವಿಚಾರಗಳಲ್ಲೂ ವಿಭಿನ್ನತೆಯನ್ನು ಹೊಂದಿರುವಂತಹ ಅಪರೂಪದ ರಾಷ್ಟ್ರ. ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತವನ್ನು ತೋರಿಸುವಾಗ ಅಲ್ಲಿನ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕದ ಕೊರತೆ ಇರುವುದನ್ನು ವೈಭವೀಕರಿಸಿ ತೋರಿಸುತ್ತಿದ್ದವು. ಆದರೆ ಅದಾಗಲೇ ಅಮೆರಿಕ ಅಂಥದ್ದೇ ಸಮಸ್ಯೆ ಎದುರಿಸಿತ್ತಲ್ಲದೆ ಮತ್ತೊಮ್ಮೆ ಎದುರಿಸಲೂ ಸಜ್ಜಾಗಿತ್ತು. ಇಷ್ಟಾದರೂ ಭಾರತದ ಸಾಮರ್ಥ್ಯವೆಂಥದ್ದೆಂದರೆ ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರ ನೀಡಲಾಯ್ತು (ಅಮೆರಿಕ ಜನಸಂಖ್ಯೆಗಿಂತ ಅಂದಾಜು ಎರಡೂವರೆ ಪಟ್ಟು ಹೆಚ್ಚು). ಅಮೆರಿಕದ ಒಟ್ಟಾರೆ ಜನಸಂಖ್ಯೆಗಿಂತ ಹೆಚ್ಚು ಜನರಿಗೆ ಭಾರತ ನೇರಹಣ ಅಕೌಂಟಿಗೆ ಹಾಕಿತು. ಹೀಗೆ ಸಾಮಾಜಿಕ ಉಪಲದ್ಭಿಯ ಕೆಲಸಗಳನ್ನು ಮಾಡುವಾಗ ಎಂದಿಗೂ ಜನರ ನಡುವೆ ಇರುವ ಈ ವೈರುಧ್ಯವನ್ನು ಭಾರತ ಗಮನಿಸಲಿಲ್ಲ’ ಎಂದರು. ಇದು ಭಾರತದ ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡುವ ಪ್ರತಿಯೊಬ್ಬರಿಗೂ ಸಮರ್ಥವಾದ ಉತ್ತರವೇ. ‘ನಾವು ಆಡಳಿತವನ್ನು ನಡೆಸುವಾಗ ಜಾತಿ-ಮತಗಳ ಭೇದ ಮಾಡುವುದಿಲ್ಲ’ ಎನ್ನುವುದು ಉತ್ತರದ ನೇರ ಅಭಿಪ್ರಾಯವಾದರೂ ಇಷ್ಟು ಜನರಿಗೆ ಉಚಿತ ಆಹಾರ, ನೇರ ಅಕೌಂಟಿಗೆ ಹಣ ಕಳಿಸುವ ತಾಕತ್ತು ಜಗತ್ತಿನ ಮತ್ಯಾವ ರಾಷ್ಟ್ರಕ್ಕಿದೆ? ಎಂಬ ಧಾಷ್ಟರ್್ಯದ ಪ್ರಶ್ನೆ ಈ ಉತ್ತರದೊಳಗೆ ಶಾಂತವಾಗಿ ಅಡಗಿ ಕುಳಿತಿತ್ತು.

ಮ್ಯಾಕ್​ವಾಸ್ಟರ್ ಮುಂದಿನ ಪ್ರಶ್ನೆ ಅಮೆರಿಕ ಮತ್ತು ಭಾರತದ ಸಂಬಂಧಗಳ ಕುರಿತಾಗಿತ್ತು. ಮುಲಾಜಿಲ್ಲದೇ ಉತ್ತರಿಸಿದ ಜೈಶಂಕರ್, ‘ಜಗತ್ತು ಈಗ ಬದಲಾಗಿದೆ. ಒಂದೆರಡು ರಾಷ್ಟ್ರಗಳು ಜಗತ್ತಿನ ಆಗು-ಹೋಗುಗಳನ್ನು ನಿರ್ಣಯಿಸುವ ಕಾಲ ಕಳೆದುಹೋಗಿ, ಬಹುಕೇಂದ್ರೀಯ ವ್ಯವಸ್ಥೆ ಜಾರಿಗೆ ಬಂದಿದೆ. ಅಮೆರಿಕ ಇದನ್ನು ಅರಿತುಕೊಳ್ಳುತ್ತಿದೆ’ ಎಂದು ಹೇಳಿ ಭಾರತ ಈಗ ಅಂಥದ್ದೇ ಒಂದು ಕೇಂದ್ರ ಎಂಬುದನ್ನು ಸೂಕ್ಷ್ಮವಾಗಿ ಹೇಳಿದರು. ‘ಅಮೆರಿಕ ತನ್ನನ್ನು ತಾನು ಅವಶ್ಯಕತೆಗಳಿಗೆ ತಕ್ಕಂತೆ ಪುನರ್ ರೂಪಿಸಿಕೊಳ್ಳುವ ತಾಕತ್ತನ್ನು ಹೊಂದಿದೆ’ ಎಂದು ಹೇಳುವುದನ್ನೂ ಮರೆಯಲಿಲ್ಲ. ಇದು ಅಮೆರಿಕದ ಭಾರತವಿರೋಧಿ ಧೋರಣೆಗೆ ಕೊಟ್ಟ ಎಚ್ಚರಿಕೆಯೇ ಆಗಿತ್ತು. ಆಗಿನ್ನೂ ಅಮೆರಿಕ ತಾಲಿಬಾನನ್ನು ಬಿಟ್ಟು ಬಂದಿರಲಿಲ್ಲ. ಟ್ರಂಪ್-ಬೈಡೆನ್​ರ ಕದನ ಜಗತ್ತಿನಲ್ಲಿ ಅಮೆರಿಕ ಕುರಿತಂತೆ ಅಸಹ್ಯ ಹುಟ್ಟಿಸಿತ್ತು. ತಾಲಿಬಾನಿನ ಪ್ರಕರಣದ ನಂತರವಂತೂ ಅಮೆರಿಕ ಸದ್ಯಕ್ಕಂತೂ ತನ್ನ ಸಾರ್ವಭೌಮತೆಯ ಕುರ್ಚಿಯಿಂದ ಕೆಳಕ್ಕಿಳಿದಾಗಿದೆ. ಆ ಜಾಗವನ್ನು ಆಕ್ರಮಿಸಿಕೊಳ್ಳಲು ಚೀನಾ ಹವಣಿಸುತ್ತಿದೆ. ಭಾರತ ಸೂಕ್ತ ಎಚ್ಚರಿಕೆಯನ್ನು ಕೊಟ್ಟ ರೀತಿ ಇದು.

ಸ್ವಾತಂತ್ರ್ಯ ಬಂದ ಲಾಗಾಯ್ತು ನಮ್ಮ ಮಾನಸಿಕ ವ್ಯವಸ್ಥೆ ತೊಳಲಾಟದಲ್ಲೇ ಇತ್ತು. ನಮ್ಮನ್ನು ನಾವು ಪಶ್ಚಿಮದ ಬಾಲವೆಂದು ನಂಬಿಕೊಂಡುಬಿಟ್ಟಿದ್ದೆವು. ಸಿದ್ಧಾಂತ, ಆಚರಣೆಯ ಕಲ್ಪನೆ ಮತ್ತು ಅದಕ್ಕೆ ಬೇಕಾದ ಆದೇಶವೂ ನಮಗೆ ಪಶ್ಚಿಮದಿಂದಲೇ ಬರಬೇಕಿತ್ತು. ಬ್ರಿಟಿಷರು ನಮ್ಮನ್ನು ಬಿಟ್ಟು ಹೋದಾಗಿನ ಹ್ಯಾಂಗ್​ಓವರ್ ಕಳೆದುಕೊಳ್ಳಲು ಸಮರ್ಥವಾಗಿಯೇ ಝಾಡಿಸುವವರು ಬೇಕಿತ್ತು. ಮೋದಿ ಆ ಜಾಡ್ಯವನ್ನು ಕಳೆದರು. ಇದಕ್ಕೆ ಒಂದೇ ಪುರಾವೆ ಏನೆಂದರೆ ಇಂದು ಮೋದಿ ವಿರೋಧಿಗಳು ಅವರು ಜಾರಿಗೆ ತಂದ ಯೋಜನೆಗಳಲ್ಲಿನ ದೋಷಗಳನ್ನು ವಿರೋಧಿಸುವ ಭರದಲ್ಲಿ ಮೋದಿಯನ್ನು ವಿರೋಧಿಸುತ್ತಾರೆ, ಕೊನೆಗೆ ದೇಶವನ್ನೇ ದೂರುತ್ತ ಕುಳಿತುಬಿಡುತ್ತಾರೆ. ಆದರೆ ಮೋದಿ ಮಾತ್ರ ಬಲವಾಗಿ ಹೆಜ್ಜೆಯನ್ನೂರುತ್ತ ಉಳಿದಿರುವ ಅವಧಿಯೊಳಗೆ ಭಾರತವನ್ನು ಜಗತ್ತಿನ ಈ ರೀತಿಯ ಅವಧಾರಣೆಗಳಿಂದ ಮುಕ್ತಗೊಳಿಸುವ ಹಠಕ್ಕೆ ಬಿದ್ದಿದ್ದಾರೆ.

ಜೈಶಂಕರ್ ವಿದೇಶಾಂಗ ಚಟುವಟಿಕೆಗಳಿಂದ ಭಾರತದ ಕೀರ್ತಿಪತಾಕೆಯನ್ನು ಹೆಚ್ಚಿಸುತ್ತಿದ್ದರೆ ಅದಕ್ಕೆ ಕಾರಣ ನರೇಂದ್ರ ಮೋದಿಯೇ. ಇಂಡಿಯನ್ ಫಾರಿನ್ ಸರ್ವೀಸ್​ನಲ್ಲಿ 40 ವರ್ಷಗಳ ಕಾಲ ಅಧಿಕಾರಿಯಾಗಿ ದುಡಿದ ಜೈಶಂಕರ್ ಅಮೆರಿಕ, ಚೀನಾದಂತಹ ರಾಷ್ಟ್ರಗಳ ಭಾರತ ರಾಯಭಾರಿಯೂ ಆಗಿದ್ದರು. ಅವರ ಅನುಭವವನ್ನು ಮೊದಲ ಅವಧಿಯಲ್ಲಿ ಚೆನ್ನಾಗಿಯೇ ಬಳಸಿಕೊಂಡ ಮೋದಿ ಎರಡನೇ ಅವಧಿಗೆ ಅವರನ್ನೇ ವಿದೇಶಾಂಗ ಸಚಿವರಾಗಿಸಿಬಿಟ್ಟರು. ಮೊದಲೆಲ್ಲ ಅಧಿಕಾರಿಯೊಬ್ಬ ಹೀಗೆ ಸಚಿವನಾಗಬೇಕೆಂದರೆ ಆತ ಗಾಂಧಿ ಪರಿವಾರಕ್ಕೆ ನಿಷ್ಠನಾಗಿರಬೇಕಿತ್ತು. ಆತನ ಪ್ರತಿಭೆ, ಸಾಮರ್ಥ್ಯ ಯಾವುದೂ ಲೆಕ್ಕಕ್ಕೆ ಬರುತ್ತಿರಲಿಲ್ಲ. ಜೈಶಂಕರ್​ರಂಥವರನ್ನು ಮೋದಿ ತಮ್ಮ ತೆಕ್ಕೆಗೆ ಹಾಕಿಕೊಂಡು, ಅಧಿಕಾರವನ್ನೂ ಅವರ ಕೈಗಿತ್ತು ಸಂಭಾಳಿಸುತ್ತಿರುವ ರೀತಿ ನಿಜಕ್ಕೂ ಅಭಿನಂದನೀಯ.

ಅವರ ನಡೆಗಳೆಲ್ಲವೂ ಹಾಗೆಯೇ. ಆರಂಭದಲ್ಲಿ ಅರ್ಥವಾಗುವುದು ಸ್ವಲ್ಪ ಕಷ್ಟ. ಕಾಲಕ್ರಮದಲ್ಲಿ ಫಲಿತಾಂಶಗಳು ಕಣ್ಣಿಗೆ ರಾಚಲಾರಂಭಿಸುತ್ತವೆ. ರೈಲ್ವೆ ಸಚಿವರಾಗಿ ಸಮರ್ಥವಾಗಿಯೇ ದುಡಿಯುತ್ತಿದ್ದ ಪಿಯುಷ್ ಗೋಯಲ್ ಅಲ್ಲಿ ಮಾಡಬಹುದಾಗಿರುವ ಅನೇಕ ಕೆಲಸಗಳನ್ನು ಮುಗಿಸಿಬಿಟ್ಟಿದ್ದಾರೆನಿಸಿದೊಡನೆ ಅವರನ್ನು ಮತ್ತೊಂದು ಖಾತೆಗೆ ವರ್ಗಾಯಿಸಿದರು. ಈಗವರು ವಿಶೇಷವಾಗಿ ಭಾರತದ ರಫ್ತು ಉದ್ಯಮ ಬಲಗೊಳಿಸುವಲ್ಲಿ ನಿರತರಾಗಿದ್ದಾರೆ. ಅವರ ಟ್ವೀಟ್​ಗಳನ್ನು ಅನುಸರಿಸುವ ಪ್ರತಿಯೊಬ್ಬರೂ ಅವರು ಮಾಡುತ್ತಿರುವ ಕೆಲಸ ನೋಡಿ ಅಚ್ಚರಿಗೊಳ್ಳುವಂತಿದೆ. ನರೇಂದ್ರ ಮೋದಿಯವರ ಇಂತಹ ಪ್ರಯತ್ನದಿಂದಾಗಿ ಭಾರತ ಇಂದು ಜಗತ್ತಿನ ಅತಿದೊಡ್ಡ ಅಕ್ಕಿ ರಫ್ತುದಾರನಾಗಿ ಹೆಸರು ಮಾಡುತ್ತಿದೆ. 2021ರ ಅಕ್ಕಿ ರಫ್ತು ಮಾರುಕಟ್ಟೆಯಲ್ಲಿ ಭಾರತದ ಪಾಲು ಹೆಚ್ಚುಕಡಿಮೆ ಶೇಕಡ 45ರಷ್ಟು. ಅಂದರೆ ಜಗತ್ತಿನಲ್ಲಿ ರಫ್ತಾಗುವ ಒಟ್ಟೂ ಅಕ್ಕಿಯ ಅರ್ಧದಷ್ಟು ಭಾಗ ನಮ್ಮದೇ! ಈ ವರ್ಷ ಹೆಚ್ಚು-ಕಡಿಮೆ 22 ದಶಲಕ್ಷ ಟನ್​ಗಳಷ್ಟು ಅಕ್ಕಿಯನ್ನು ನಾವು ರಫ್ತು ಮಾಡಲಿದ್ದೇವೆ. ನಮ್ಮ ನಂತರದ ಅತಿದೊಡ್ಡ ರಫ್ತುದಾರರಾದ ಥಾಯ್ಲ್ಯಾಂಡ್, ವಿಯೆಟ್ನಾಂ ಮತ್ತು ಪಾಕಿಸ್ತಾನಗಳನ್ನು ಒಟ್ಟೂ ಸೇರಿಸಿದರೂ ಅದಕ್ಕಿಂತ ಹೆಚ್ಚು ರಫ್ತು ನಮ್ಮದೇ. ಈ ವರ್ಷವಂತೂ ಕೋವಿಡ್ ಕಾರಣದಿಂದಾಗಿ ಚೀನಾ, ವಿಯೆಟ್ನಾಂ, ಬಾಂಗ್ಲಾದೇಶಗಳೂ ನಮ್ಮ ಬಳಿಯೇ ಅಕ್ಕಿ ಒಯ್ಯುತ್ತಿವೆ. ಇಷ್ಟಕ್ಕೂ ತೊಂದರೆಯಾಗುತ್ತಿದ್ದುದೇನು ಗೊತ್ತೇ? ರಫ್ತು ಮಾಡುವ ಬಂದರಿನಲ್ಲಿ ಸಾಕಷ್ಟು ವ್ಯವಸ್ಥೆ ಇಲ್ಲದೇ ಅನ್ಯದೇಶದ ಹಡಗುಗಳು ಕಾದು ನಿಂತುಕೊಂಡಿರಬೇಕಿತ್ತಲ್ಲ, ಮತ್ತು ಅದಕ್ಕಾಗಿ ಹೆಚ್ಚು ಬಾಡಿಗೆ ಕಟ್ಟಬೇಕಾಗುತ್ತಿತ್ತಲ್ಲ, ಅದು ನಮ್ಮ ಅಕ್ಕಿಯನ್ನು ದುಬಾರಿಯಾಗಿಸಿಬಿಡುತ್ತಿತ್ತು. ಈಗ ಕಾಕಿನಾಡದ ಪಕ್ಕದಲ್ಲೇ ಇನ್ನೊಂದು ಬಂದರು ಅಭಿವೃದ್ಧಿಪಡಿಸಿಕೊಂಡು ಅಕ್ಕಿ ರಫ್ತು ಮಾಡಲಾರಂಭಿಸಿದ್ದೇವೆ. ಇದು ನಮ್ಮನ್ನು ಜಗತ್ತಿನ ರಫ್ತುಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಿಸುತ್ತಿದೆ.

2026ರ ವೇಳೆಗೆ ಭಾರತ ಡ್ರೋನ್ ವ್ಯವಹಾರದಲ್ಲಿ ಹೆಚ್ಚು-ಕಡಿಮೆ 15 ಸಾವಿರಕೋಟಿಯಷ್ಟು ವಹಿವಾಟು ನಡೆಸಲಿದೆ. ಸದ್ಯದಮಟ್ಟಿಗೆ ಭಾರತೀಯ ಕಂಪನಿಗಳು ಇಲ್ಲಿ ಹೊಂದಿರುವ ವಹಿವಾಟು ಬರಿ 80 ಕೋಟಿಯಷ್ಟು ಮಾತ್ರ. ಡ್ರೋನ್​ಗಳಿಗೆ ಸಂಬಂಧಪಟ್ಟ ನೀತಿಯನ್ನು ಬದಲಾಯಿಸಿ ಭಾರತ ತಂದಿರುವ ಹೊಸ ಯೋಜನೆಗಳು ಉತ್ಪಾದಕರಿಗೆ ಹೆಚ್ಚು ಶಕ್ತಿಯನ್ನು ತುಂಬಲಿವೆ. ಆ ಮೂಲಕ ಸಾಕಷ್ಟು ಉದ್ಯೋಗವನ್ನು ಬರಲಿರುವ ದಿನಗಳಲ್ಲಿ ನಿಸ್ಸಂಶಯವಾಗಿ ಸೃಷ್ಟಿಸಲಿದೆ.

ನರೇಗಾ ಕಷ್ಟಕಾಲದಲ್ಲಿ ಉದ್ಯೋಗ ಕೊಡುವ ಯೋಜನೆ ಇರಬಹುದು ನಿಜ. ಆದರೆ ಈ ಯೋಜನೆ ಇತರ ಉದ್ಯೋಗಗಳಂತೆ ಸ್ವಾಭಿಮಾನದ್ದಲ್ಲ, ಬದಲಿಗೆ ಸರ್ಕಾರ ಕರುಣೆಯಿಂದ ಕೊಡುತ್ತಿರುವುದು ಎನಿಸಿಬಿಡುತ್ತದೆ. ಹೆಚ್ಚು-ಹೆಚ್ಚು ಅಧಿಕೃತವಾದ ಉದ್ಯೋಗಗಳು ಸೃಷ್ಟಿಯಾಗಬೇಕು. ಉತ್ಪಾದನೆಗೆ ಜನ ಸಜ್ಜಾಗಬೇಕು. ಅದಕ್ಕಾಗಿಯೇ ಮೋದಿಯವರ ಈ ಎರಡನೇ ಅವಧಿ ತನ್ನನ್ನು ತಾನು ಜೋಡಿಸಿಕೊಂಡಿದೆ. ಇತ್ತೀಚೆಗೆ ಮುಖ್ಯ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಮಾತನಾಡುತ್ತ, ‘ಪ್ರತಿ ಕರೊನಾ ಅಲೆ ಬಂದು ಹೋದ ನಂತರವೂ ಭಾರತ ಆರ್ಥಿಕ ಚೇತರಿಕೆಯನ್ನು ಅಚ್ಚರಿ ಎಂಬಂತೆ ತೋರಿಸುತ್ತಿದೆ. ಈಗ ಮೂರನೇ ಅಲೆ ಬರದೇ ಹೋದರೆ ನಮ್ಮ ಜಿಡಿಪಿ ಅಭಿವೃದ್ಧಿ ದರ ಎರಡಂಕಿ ಮುಟ್ಟಲಿದೆ’ ಎಂಬ ಅವರ ವಿಶ್ವಾಸ ನೆಮ್ಮದಿ ತರುವಂಥದ್ದು.

ಕಾಂಗ್ರೆಸ್ಸು ಮಾತ್ರ ಹಳೆಯ ಸಂಗತಿಗಳನ್ನೇ ಪ್ರಲಾಪಿಸುತ್ತಿದೆ. ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ಟ್ರೖೆನಿಗೆ ಮುಂಬೈನಲ್ಲಿ ಕಡಿಯಬೇಕಾಗಿರುವ 11 ಮರಗಳು ಮತ್ತು ಬೇರೆಡೆ ನೆಡಬೇಕಾಗಿರುವ 141 ಮರಗಳ ಕುರಿತಂತೆ ಪ್ರತಿಭಟನಾಕಾರರು ಗೌಜುಗದ್ದಲ ಆರಂಭಿಸಿಬಿಟ್ಟಿದ್ದಾರೆ. ಹೇಗಾದರೂ ಮಾಡಿ ಈ ವೇಗದ ರೈಲನ್ನು ತಡೆದರೆ 2024ರಲ್ಲಿ ಮೋದಿಯನ್ನು ಪ್ರಶ್ನಿಸಬಹುದು ಎಂಬುದು ಅವರ ಧಾವಂತ. ಆದರೆ 2024ರ ವೇಳೆಗೆ ಮೋದಿ ಜನರ ಕೈಗಳಿಗೆ ದುಡಿಯುವಷ್ಟು ಕೆಲಸ, ಜೇಬಿನ ತುಂಬ ಸಂಬಳ ಬರುವಂತೆ ಮಾಡುವ ಯೋಜನೆ ಕಟ್ಟಿಕೊಂಡಿದ್ದಾರೆ. ಆಗ ಇವರ ಆಟವೆಲ್ಲವೂ ನಿಂತುಹೋಗಿಬಿಡುತ್ತದೆ.

ದೇಶದ ಕುರಿತಂತೆ ಕನಸು ಕಾಣುವ, ಅದನ್ನು ನನಸು ಮಾಡಿಕೊಳ್ಳಲು ಗಂಧದ ಕೊರಡಿನಂತೆ ತನ್ನ ತಾನು ತೇಯ್ದುಕೊಳ್ಳುತ್ತಿರುವ ಮೋದಿ ಜನರ ಹೃದಯದಲ್ಲಿ ಬಲವಾಗಿ ನೆಲೆಯೂರಿಬಿಟ್ಟಿದ್ದಾರೆ. ಹೀಗಾಗಿಯೇ ಪೆಟ್ರೋಲ್ ಬೆಲೆ ಹೆಚ್ಚಾದಾಗಲೂ ಅವರು ನಮ್ಮ ಒಳಿತಿಗೇ ಅದನ್ನು ಬಳಸುತ್ತಿದ್ದಾರೆ ಎಂಬ ವಿಶ್ವಾಸದಿಂದ ಸಾಮಾನ್ಯ ಜನತೆ ಕಾಯುತ್ತಿರೋದು. ಮೋದಿ ಬಡವರ ಒಳಿತಿಗಾಗಿ, ರಾಷ್ಟ್ರದ ಏಕತೆ, ಬಲಿಷ್ಠಭಾರತ ನಿರ್ವಣಕ್ಕಾಗಿ ಹಗಲು-ರಾತ್ರಿ ಪಡುತ್ತಿರುವ ಪ್ರಯತ್ನ ಸಾಮಾನ್ಯ ಜನರಿಗೂ ಗೊತ್ತಿರುವುದರಿಂದಲೇ ಇವರ ಎಲ್ಲ ಹೋರಾಟಗಳೂ ನೀರುಪಾಲಾಗುತ್ತಿವೆ. ಒಂದೆರಡಲ್ಲ, ಏಳು ದಶಕಗಳ ತಪಸ್ಸಿನ ನಂತರ ಸಿಕ್ಕಿರುವ ಪ್ರಧಾನಿ ಇವರು. ಅವರ ಹುಟ್ಟು ಈ ನಾಡಿನ ಗೌರವಕ್ಕೆ ಕಾರಣವಾಗಿದೆ. ನೂರ್ಕಾಲ ಆರೋಗ್ಯವಂತರಾಗಿ ಬಾಳಲೆಂದು ಭಗವಂತನಲ್ಲಿ ಮತ್ತೊಮ್ಮೆ ಶ್ರದ್ಧೆಯಿಂದ ಪ್ರಾರ್ಥಿಸುವೆ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)