ನವದೆಹಲಿ: ದೇಶದ ಜಿಡಿಪಿ ಅಂಕಿಅಂಶ ಶುಕ್ರವಾರ ಬಿಡುಗಡೆಯಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರಮೋದಿ ಪ್ರತಿಕ್ರಿಯಿಸಿದ್ದಾರೆ.
2023-24 ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇಕಡಾ 8.2 ಕ್ಕೆ ತಲುಪಿದೆ. ಇದು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯ ಸೂಚನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ.7ರ ಬೆಳವಣಿಗೆಗೆ ಹೋಲಿಸಿದರೆ ಉತ್ತಮ ಫಲಿತಾಂಶಗಳನ್ನು ಸಾಧಿಸಲಾಗಿದೆ. '2023-24 ಕ್ಯೂ4 ಜಿಡಿಪಿ ಬೆಳವಣಿಗೆಯ ಮಾಹಿತಿಯು ದೇಶದ ಆರ್ಥಿಕತೆಯ ಪ್ರಗತಿಯನ್ನು ಸೂಚಿಸುತ್ತದೆ. ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜನರಿಗೆ ಧನ್ಯವಾದಗಳು. ಈ ಮಟ್ಟದಲ್ಲಿ ಜಿಡಿಪಿ ಬೆಳವಣಿಗೆ ಕೇವಲ ಟ್ರೇಲರ್ ಆಗಿದೆ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ತ್ರೈಮಾಸಿಕ ಮತ್ತು ವಾರ್ಷಿಕ ಬೆಳವಣಿಗೆ: 2023–24 ರ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ನೈಜ ಜಿಡಿಪಿ 47.24 ಲಕ್ಷ ಕೋಟಿ ರೂ.ಆಗಿದ್ದು, ಜನವರಿ-ಮಾರ್ಚ್ ಅವಧಿಯಲ್ಲಿ ಶೇ.7.8 ರಷ್ಟು ಸ್ವಲ್ಪಮಟ್ಟಿನ ನಿಧಾನಗತಿಯ ಹೊರತಾಗಿಯೂ, ಆರ್ಥಿಕತೆಯು ವಿವಿಧ ಕ್ಷೇತ್ರಗಳಲ್ಲಿ ಬಲವಾದ ಬೆಳವಣಿಗೆಯೊಂದಿಗೆ ಸ್ಥಿರ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಮಹತ್ವದ ಬೆಳವಣಿಗೆಯು ಭಾರತದ ಆರ್ಥಿಕತೆಯನ್ನು 3.5 ಟ್ರಿಲಿಯನ್‌ಗೆ ಹೆಚ್ಚಿಸಿದೆ. ಮುಂಬರುವ ವರ್ಷಗಳಲ್ಲಿ 5-ಟ್ರಿಲಿಯನ್ ಯುಎಸ್ಡಿ ಗುರಿಯನ್ನು ಸಾಧಿಸಲು ಇದು ವೇದಿಕೆಯನ್ನು ಒದಗಿಸುತ್ತದೆ.
ಉತ್ಪಾದನಾ ವಲಯದಲ್ಲಿ ಬೆಳವಣಿಗೆ: ಉತ್ಪಾದನಾ ವಲಯವು ಉತ್ತೇಜಕ ಬೆಳವಣಿಗೆಯನ್ನು ದಾಖಲಿಸಿದ್ದರಿಂದ ಉತ್ತಮ ಜಿಡಿಪಿ ಅಂಕಿಅಂಶಗಳು ಸಾಧ್ಯವಾಯಿತು. 2023-24ರಲ್ಲಿ ಉತ್ಪಾದನಾ ವಲಯವು ಶೇ.8.9ರಷ್ಟು ಬೆಳವಣಿಗೆ ಹೊಂದಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ತ್ರೈಮಾಸಿಕದಲ್ಲಿಯೂ ಭಾರತದ ಜಿಡಿಪಿ ಶೇ.7.8ಕ್ಕೆ ಏರಿಕೆಯಾಗಿದೆ. ಆದರೆ, ಕೃಷಿ ಕ್ಷೇತ್ರದ ಬೆಳವಣಿಗೆ ಶೇ.0.6ಕ್ಕೆ ಕುಸಿದಿದೆ. ಇನ್ನು ಸೇವಾ ವಲಯದ ಬೆಳವಣಿಗೆ ಮಿಶ್ರವಾಗಿದೆ. ಹಣಕಾಸು ಮತ್ತು ರಿಯಲ್ ಎಸ್ಟೇಟ್ ವಲಯಗಳು ಶೇ.7.6ರಷ್ಟು ಪ್ರಗತಿ ಸಾಧಿಸಿವೆ. ವ್ಯಾಪಾರ ಮತ್ತು ಆತಿಥ್ಯ ವಲಯವು ಶೇ.5.1 ರಷ್ಟು ಬೆಳವಣಿಗೆ ಕಂಡಿದೆ.