ಅಂಕಣ

ಜನಮತ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಮರು ಯೋಚಿಸಿ

vinaymk1969

ಎಸ್ಸೆಸ್ಸೆಲ್ಸಿ ಪ್ರತಿಷ್ಠೆಗೆ ಅಪಸ್ವರ (ವಿಜಯವಾಣಿ ವರದಿ ಜೂನ್ 29) ಅತ್ಯಂತ ನಿರೀಕ್ಷಿತ, ಸಕಾಲಿಕ. ಪ್ರಸ್ತುತ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾರ ಹಿತದೃಷ್ಟಿಯಿಂದ ನಡೆಯುತ್ತಿದೆ ಎನ್ನುವುದು ಬಹುಶಃ ಯಾರಿಗೂ ಸ್ಪಷ್ಟವಿದ್ದಂತಿಲ್ಲ. ಸಾಕಷ್ಟು ಪ್ರತಿರೋಧ ಮತ್ತು ಕೆಲವು ಕೊವಿಡ್ ಪಾಸಿಟಿವ್ ಅನುಮಾನಗಳ ನಡುವೆಯೂ ಪರೀಕ್ಷೆ ಮುಂದುವರಿದಿದೆ. ವಿದ್ಯಾರ್ಥಿಗಳನ್ನು ಕಲೆ ಹಾಕಿ ಉತ್ತರ ಬರೆಯಿಸುವುದು ಪರೀಕ್ಷಾ ಪ್ರಕ್ರಿಯೆಯ ಒಂದು ಸಣ್ಣಭಾಗ ಅಷ್ಟೆ. ಮೌಲ್ಯಮಾಪನ, ಅಂಕಪಟ್ಟಿ ತಯಾರಿ, ಅಗತ್ಯ ಎನಿಸಿದಲ್ಲಿ ಕೃಪಾಂಕ ನೀಡಿಕೆ, ಫಲಿತಾಂಶ ಪ್ರಕಟಣೆ, ಕೋರಿಕೆಯ ಮರು ಮೌಲ್ಯಾಂಕನ ಇತ್ಯಾದಿ ಇನ್ನೂ ಹಲವಾರು ಚರಣಗಳನ್ನು ಕ್ರಮಿಸಬೇಕಾಗಿದೆ. ಇಷ್ಟೆಲ್ಲ ಆದಮೇಲೆ ಸರಾಸರಿ 50ರಿಂದ 60 ಪ್ರತಿಶತ ಮಕ್ಕಳು ಪಾಸಾಗುತ್ತಾರೆ. ಅಲ್ಲಿ ನೋಡಿ; ಕೇಂದ್ರದ ಸಿಬಿಎಸ್​ಇ ಮತ್ತು ಐಸಿಎಸ್​ಇ ಅಲ್ಲದೆ ನೆರೆಯ ಇತರ ರಾಜ್ಯಗಳು ಹತ್ತನೇ ತರಗತಿಯ ಪರೀಕ್ಷೆಗಳನ್ನು ಈಗಾಗಲೇ ರದ್ದು ಮಾಡಿವೆ. ನಮ್ಮಲ್ಲಾದರೋ, ಕರೊನಾ ಹೆಮ್ಮಾರಿಯ ಭಯಭೀತಿಯ ನಡುವೆಯೂ ಪರೀಕ್ಷೆ ಎದುರಿಸಿ ಗೆದ್ದ ಧೀರ ಮಕ್ಕಳು ಆ ಎಲ್ಲ ಐಷಾರಾಮಿ ಮಕ್ಕಳ ಸರಿಸಮಾನರಾಗುತ್ತಾರೆ. ಹಾಗಾದರೆ ಪರೀಕ್ಷೆ ಎದುರಿಸಿಯೂ ಫೇಲಾದ ಮಕ್ಕಳ ಪಾಡೇನು? ಇದು ಬೇಡದ ಅಸಮಾನತೆಯನ್ನು ನಾವಾಗೇ ಸೃಷ್ಟಿಸಿಕೊಳ್ಳುವ ಅನಗತ್ಯ ಪ್ರಕ್ರಿಯೆ ಅಲ್ಲವೇ?

| ಆರ್.ಕೆ. ದಿವಾಕರ ಎಲೇನಹಳ್ಳಿ